Advertisement
ಸಮರ್ಥ ಕೆಲಸದ ಗುಟ್ಟು… ಎಂದಾದರೂ ಆದೀತೇ ರಟ್ಟು?: ಎಲ್.ಜಿ.ಮೀರಾ ಅಂಕಣ

ಸಮರ್ಥ ಕೆಲಸದ ಗುಟ್ಟು… ಎಂದಾದರೂ ಆದೀತೇ ರಟ್ಟು?: ಎಲ್.ಜಿ.ಮೀರಾ ಅಂಕಣ

ಆ ಇಬ್ಬರು ಹಿರಿಯ ಅಧ್ಯಾಪಕಿಯರ ಮುಖ ನೋಡಿದೆ. ಅವರಲ್ಲೊಬ್ಬರು `ಹೇ… ಸುಲಭ ಇದು. ನೋಡಿ, ಒಬ್ರು ಈ ಕಡೆ, ಇನ್ನೊಬ್ರು ಆ ಪಕ್ಕದ ಕುರ್ಚೀಲಿ ಕೂತ್ಕೊಳಿ. ನಾನು ಇಲ್ಲಿ ಕೂತ್ಕೋತೀನಿ. ನೂರರಿಂದ ಶುರುವಾಗೋ ಅರ್ಜಿ ಎಲ್ಲಾ ನೀವು ತಗೊಳ್ಳಿ, ಇನ್ನೂರರಿಂದ ಶುರುವಾಗೋದು ನೀವು, ಮುನ್ನೂರರಿಂದ ಶುರುವಾಗೋದು ನಾನು ತಗೋತೀನಿ.. ಬೇಗ ಬೇಗ ಇವುಗಳನ್ನ ನಾವು ಪ್ರತ್ಯೇಕ ಮಾಡ್ಬಹುದು’ ಅಂದರು. ಅದೇ ರೀತಿಯಲ್ಲಿ ಕೆಲಸ ಶುರುವಾಗಿಯೇ ಹೋಯಿತು, ಮತ್ತು ಹತ್ತು-ಹದಿನೈದು ನಿಮಿಷಗಳಲ್ಲಿ ಮುಗಿದೇ ಹೋಯಿತು!!
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತಾರನೆಯ ಬರಹ

ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಒಂದು ಉತ್ತಮ ಅಭ್ಯಾಸ ಇಟ್ಟುಕೊಂಡಿದ್ದರಂತೆ. ಅದೇನೆಂದರೆ ತಾವು ಪ್ರತಿದಿನ ಬೆಳಿಗ್ಗೆ ಎದ್ದಾಗ `ನಾನು ಇಂದು ಇಷ್ಟು ಕೆಲಸಗಳನ್ನು ಮಾಡಬೇಕು’ ಎಂಬ ಪಟ್ಟಿ ಹಾಕಿಕೊಳ್ಳುತ್ತಿದ್ದರಂತೆ. ಅಂದು ರಾತ್ರಿ ಮಲಗುವುದರೊಳಗೆ ಏನಾದರೂ ಸರಿಯೇ ಆ ಪಟ್ಟಿಯಲ್ಲಿರುವ ಕೆಲಸಗಳನ್ನು ಮಾಡಿ ಮುಗಿಸಿಬಿಡುತ್ತಿದ್ದರಂತೆ. `ತನ್ನ ಈ ಅಭ್ಯಾಸದಿಂದಾಗಿ ತಾನು ತುಂಬ ಶಾಂತಿ ನೆಮ್ಮದಿಗಳನ್ನು ಅನುಭವಿಸುತ್ತೇನೆ, ಯಾವತ್ತೇ ಯಮರಾಯ ಬಂದು “ಬಾ ಹೋಗೋಣ” ಎಂದು ಕರೆದರೂ ನಾನು “ಇದೋ ಬಂದೆ” ಎಂದು ಕಣ್ಣು ಮಿಟುಕಿಸದೆ ಹೊರಟುಬಿಡುತ್ತೇನೆ, ಏಕೆಂದರೆ ಬಾಕಿ ಕೆಲಸ ಎಂಬುದು ಯಾವುದೂ ತನಗೆ ಇರುವುದಿಲ್ಲ’ ಎಂದು ಬರೆದಿದ್ದರು ಆ ಶಿಸ್ತಿನ ಸಿಪಾಯಿಯಂತಹ ಉಕ್ಕಿನ ಮಹಿಳೆ! ಹೀಗೆ ಮಾಡಲು ತುಂಬ ಶಿಸ್ತು, ಸಂಯಮ ಬೇಕು. ಬಹುಶಃ ಇಂತಹ ಶಿಸ್ತು ಇರುವುದು ನಮ್ಮಲ್ಲಿ ತುಂಬ ಅಪರೂಪದ ಮಂದಿಗೆ ಅನ್ನಿಸುತ್ತದೆ.

ಸಾಮಾನ್ಯ ಜ್ಞಾನದ ಪ್ರಕಾರ ಹೇಳುವುದಾದರೆ, ಕೆಲವು ಕೆಲಸಗಳನ್ನು ಮಾಡಲು ತುಂಬ ಏಕಾಗ್ರತೆ ಬೇಕು. ಉದಾಹರಣೆಗೆ ಕಠಿಣವಾದ ಗಣಿತದ ಸಮೀಕರಣಗಳನ್ನು ಬಿಡಿಸುವುದು, ಆದಾಯ ತೆರಿಗೆಯ ಲೆಕ್ಕ, ಮೆದುಳಿನ ಶಸ್ತ್ರಚಿಕಿತ್ಸೆ, ಸೃಜನಶೀಲವಾಗಿ ಬರೆಯುವುದು, ಕಷ್ಟಕರ ವಿಷಯದ ಪರೀಕ್ಷೆಗೆ ಓದುವುದು ….. ಇವೆಲ್ಲವೂ ತುಂಬ ಏಕಾಗ್ರತೆಯನ್ನು ಬೇಡುತ್ತವೆ. ಅದೇ ಹುರುಳಿಕಾಯಿ ಬಿಡಿಸುವುದು, ಕಸ ಗುಡಿಸುವುದು, ಬಟ್ಟೆಗಳನ್ನು ಮಡಿಸುವುದು, ಯಾವುದಾದರೂ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದು… ಇಂತಹ ಕೆಲಸಗಳು ಹೆಚ್ಚು ಏಕಾಗ್ರತೆಯನ್ನು ಬೇಡುವುದಿಲ್ಲ.

ಏಕಾಗ್ರತೆ ಬೇಡುವ ಕೆಲಸಗಳಲ್ಲಿ ಒಂದಾದ ಬರಹದ ಬಗ್ಗೆ ಹೇಳುವುದಾದರೆ, ಈ ಕೆಲಸ ಮಾಡಲು ಗಮನಭಂಗಗಳನ್ನು ದೂರ ಇಡುವ ಮನಸ್ಸು ಮತ್ತು ವಾತಾವರಣ ಬೇಕು. ಇದು ಬಹುತೇಕ ಬರಹಗಾರರ ಅನುಭವ. ಬರೆಯುತ್ತಾ ಇರುವವರನ್ನು ಗಳಿಗೆಗಳಿಗೆಗೂ ಯಾರಾದರೂ ಮಾತಾಡಿಸುತ್ತಿದ್ದರೆ, ಮನೆಯ ಕರೆಗಂಟೆಯೋ, ದೂರವಾಣಿಯ ಗಂಟೆಯೋ ಅಗಾಗ ಹೊಡೆದುಕೊಳ್ಳುತ್ತಲೇ ಇದ್ದರೆ ಕೆಲಸ ಮುಂದೆ ಸಾಗುವುದೇ ಇಲ್ಲ.

ಇನ್ನು, ಕೆಲಸ ಮತ್ತು ಸಮಯದ ಸಂಬಂಧ ಬಹು ಆಸಕ್ತಿದಾಯಕವಾದುದು. ಭೌತಶಾಸ್ತ್ರದಂತಹ ನಿಷ್ಠುರ, ಗಣಿತಭಾಷೆಯ ವಿಜ್ಞಾನ ಕೂಡ ಈ ಬಗ್ಗೆ ತನ್ನ ಒಂದು ಮುಖ್ಯ ಗಮನಿಕೆಯನ್ನು ದಾಖಲಿಸಿದೆ. ಅದೇನೆಂದರೆ `ಕೆಲಸವು ಲಭ್ಯ ಸಮಯದುದ್ದಕ್ಕೂ ತನ್ನನ್ನು ತಾನು ವಿಸ್ತರಿಸಿಕೊಳ್ಳುತ್ತದೆ’! ಅಂದರೆ ನಾವು ಕಾಫಿ ಕುಡಿದ ಲೋಟವನ್ನು ಎತ್ತಿಡಲು ಒಂದು ನಿಮಿಷದಿಂದ ಹಿಡಿದು ಒಂದು ಗಂಟೆ, ಒಂದು ದಿನ, ಒಂದು ವಾರ ಏಕೆ ನಮ್ಮ ಇಡೀ ಜೀವಿತಾವಧಿಯೂ ತಗುಲಬಹುದು! ಆದರೆ ಕಾಫಿ ಕುಡಿದ ಲೋಟವನ್ನು ತೊಳೆದಿಡಲು/ಬತ್ತುಗುಂಡಿ(ಸಿಂಕ್)ಗೆ ಹಾಕಲು ಬೇಕಾಗಿರುವುದು ಒಂದರಿಂದ ಎರಡು ನಿಮಿಷ ಅಷ್ಟೆ.

ಕೆಲಸವನ್ನು ಮುಂದಕ್ಕೆ ದೂಡುವುದನ್ನು ನಾವು ಮನುಷ್ಯರು ಸಾಮಾನ್ಯವಾಗಿ ಮಾಡುತ್ತಲೇ ಇರುತ್ತೇವಲ್ಲ. ಅದು ಪ್ರೊಕ್ರ್ಯಾಸ್ಟಿನೇಷನ್ ಎಂಬ ಶ್ರುತಿಕಷ್ಟ ಪದದಿಂದ ಇಂಗ್ಲಿಷಿನಲ್ಲಿ ಗುರುತಿಸಲ್ಪಟ್ಟಿದೆ. `ನಾಳೆ ಎಂದವನ ಮನೆ ಹಾಳು’, `ನಾಳೆ ಮಾಡುವ ಕೆಲಸವನ್ನು ಇಂದು ಮಾಡು, ಇಂದು ಮಾಡುವ ಕೆಲಸವನ್ನು ಈಗಲೇ ಮಾಡು’ ಎಂಬ ಗಾದೆಮಾತುಗಳನ್ನು ನಾವು ಕೇಳಿದ್ದು ಹೌದಾದರೂ ನಮ್ಮಲ್ಲಿ ಅನೇಕರು ಕೆಲಸಗಳನ್ನು ಮುಂದಕ್ಕೆ ಹಾಕುತ್ತಲೇ ಇರುತ್ತೇವೆ.

ಕೆಲಸದ ಬಗ್ಗೆ ಇನ್ನೊಂದು ಅಂಶವನ್ನು ಹೇಳಬಹುದು ಅನ್ನಿಸುತ್ತೆ. `ಅಬ್ಬ, ಈ ಕೆಲಸ ಮುಗಿಯಿತು’ ಎಂಬ ಖುಷಿಗಿಂತ ದೊಡ್ಡ ಖುಷಿಗಳು ನಮ್ಮ ಮನಸ್ಸಿಗೆ ಬಹಳ ಇಲ್ಲವೇನೊ. ಕೆಲಸ ಆಗಿಲ್ಲ, ಆಗಿಲ್ಲ ಎಂಬ ಭಾವನೆ ಮನಸ್ಸನ್ನು ಕುಟುಕುತ್ತಿದ್ದರೆ ನೆಮ್ಮದಿಯೇ ಇರುವುದಿಲ್ಲ.

ಕೆಲಸಗಳನ್ನು ಸಂಚಿತವಾಗುವ ಹಾಗೂ ಸಂಚಿತವಾಗದ (ಕ್ಯುಮುಲೇಟಿವ್ ಮತ್ತು ನಾನ್ ಕ್ಯುಮ್ಯುಲೇಟಿವ್) ಕೆಲಸಗಳು ಎಂದು ವಿಂಗಡಿಸುತ್ತಾರೆ. ಉದಾಹರಣೆಗೆ ಅಡಿಗೆ ಮಾಡುವುದು, ರೋಗಿಗಳಿಗೆ ಸೇವೆ ಮಾಡುವುದು, ಯಾರಿಗಾದರೂ ದಿನಸಿ ಸಾಮಾನು ತಂದುಕೊಡುವುದು ಇಂತಹ ಕೆಲಸಗಳು ಸಂಚಿತವಾಗುವುದಿಲ್ಲ, ಆದರೆ ದಿನಾ ಒಂದು ಪದ/ಹಾಡು ಕಲಿಯುವುದು, ದಿನಾ ಒಂದು ಪುಟ ಬರೆಯುವುದು, ವಾರಕ್ಕೊಂದರಂತೆ ಒಂದು ಕಲಾಕೃತಿ ತಯಾರಿಸುವುದು, ತಿಂಗಳಿಗೊಂದು ಪ್ರಯೋಗ ಮಾಡಿ ಅದರ ದಾಖಲೆ ಇಡುವುದು – ಇಂಥವು `ಹನಿಗೂಡಿದರೆ ಹಳ್ಳ’ ಎಂಬಂತೆ ಸಂಚಿತವಾಗುತ್ತವೆ.

ಇದನ್ನೆಲ್ಲ ಗಮನಿಸಿ ಈ ಬಗ್ಗೆ ಆಲೋಚನೆ ಮಾಡಿದ ಪರಿಣತರು ಕೆಲಸವನ್ನು ದಕ್ಷತೆಯಿಂದ, ಸಮಯಬದ್ಧವಾಗಿ ಮಾಡುವುದರ ಬಗ್ಗೆ ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ.

  1. ಕೆಲಸದ ಬಗ್ಗೆ `ಯಾವಾಗ ಮಾಡುವುದು, ಹೇಗೆ ಮಾಡುವುದು’ ಎಂದು ಚಿಂತಿಸುತ್ತಾ ಕೂರದೆ ಅದರ ಮೇಲೆ ಒಮ್ಮಿಂದೊಮ್ಮೆಗೇ ಆಕ್ರಮಣ ಮಾಡುವುದು! ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಮುಂತಾದ ಹೊರೆಗೆಲಸ ಮಾಡುವ ಗೃಹಿಣಿಯರು, ಗೃಹವಾಳ್ತೆ ಸಹಾಯಕಿಯರು ಹೀಗೆ ಮಾಡುವುದನ್ನು ನಾನು ಗಮನಿಸಿದ್ದೇನೆ.
  2. ಕೆಲವು ಅನುಭವಿಗಳು `ಹತ್ತು ಸಾವಿರ ಗಂಟೆಗಳ ಅಭ್ಯಾಸದಿಂದ ಯಾವುದಾದರೂ ಒಂದು ವಿಷಯದಲ್ಲಿ ಪರಿಣತಿ ಬರುತ್ತದೆ’ ಎನ್ನುತ್ತಾರೆ. ಸಂಗೀತ, ನಾಟ್ಯ, ಕರಾಟೆ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಈ ವಿಧಾನ ಹೊಂದುತ್ತದೆ ಅನ್ನಿಸುತ್ತದೆ.
  3. ನಿರ್ವಹಣಾ ಶಾಸ್ತ್ರವು ಕೆಲಸಗಳನ್ನು

ಅ. ಅತಿ ಜರೂರು ಮತ್ತು ಮುಖ್ಯ

ಆ. ಅತಿ ಜರೂರು ಮತ್ತು ಅಮುಖ್ಯ

ಇ. ಜರೂರು ಇಲ್ಲದ್ದು ಮತ್ತು ಮುಖ್ಯ

ಈ. ಜರೂರು ಇಲ್ಲದ್ದು ಮತ್ತು ಅಮುಖ್ಯ –

ಹೀಗೆ ನಾಲ್ಕು ಪೆಟ್ಟಿಗೆಗಳಾಗಿ ವಿಂಗಡಿಸಿ, `ನಮ್ಮ ಆಯ್ಕೆಯು `ಇ’ ಪೆಟ್ಟಿಗೆ ಅಂದರೆ `ಜರೂರು ಇಲ್ಲದ್ದು ಮತ್ತು ಮುಖ್ಯ’ ಕೆಲಸ ಆಗಿರಬೇಕು, ಆಗ ನಮಗೆ ಒತ್ತಡ ಇರುವುದಿಲ್ಲ, ಉಳಿದ ಪೆಟ್ಟಿಗೆಗಳವು ಒತ್ತಡಕಾರಕ ಅಥವಾ ಕಾಲಹರಣ ಮಾಡಿಸುತ್ತವೆ’ ಎನ್ನುತ್ತದೆ.

  1. ಕಪ್ಪೆಗಳನ್ನು ತಿನ್ನುವುದು ನಿನ್ನ ಕೆಲಸವಾದರೆ ಬೆಳಿಗ್ಗೆ ಎದ್ದ ತಕ್ಷಣ ತಿಂದುಬಿಡು. ಅರ್ಥಾತ್, ಆದಾಯ ತೆರಿಗೆ ಲೆಕ್ಕ ಹಾಕುವುದೇ ಮುಂತಾದ ಅಷ್ಟೊಂದು ಖುಷಿ ಕೊಡದ ಕೆಲಸಗಳಿದ್ದರೆ ಅದನ್ನು ಎದ್ದ ತಕ್ಷಣವೇ ಆದಷ್ಟು ಬೇಗ ಮಾಡಿ ಮುಗಿಸಿಬಿಡಿ ಎನ್ನಲಾಗುತ್ತದೆ.
  2. `ಆನೆಯನ್ನು ತಿನ್ನುವುದು ಹೇಗೆ? ಲಕ್ಷ ಭಾಗವಾಗಿ ಅದನ್ನು ತುಂಡರಿಸಿ ದಿನಾಲೂ ಒಂದು ಭಾಗ ತಿನ್ನುವುದು’. ಈ ಸಲಹೆಯು ಯಾವಾಗ ಅನ್ವಯ ಆಗುತ್ತದೆ ಅಂದರೆ ಸಾವಿರಾರು ಪುಟ ಬರೆಯುವ ಕೆಲಸ ಇದ್ದಾಗ ಅಥವಾ ತುಂಬ ದೊಡ್ಡ ದತ್ತಾಂಶದ ಜೊತೆ ಕೆಲಸ ಮಾಡಬೇಕಾದಾಗ. ದಿನಾ ಇಷ್ಟಿಷ್ಟೇ ಕೆಲಸವನ್ನು ಶಿಸ್ತಿನಿಂದ ಮಾಡಿದೆವೆಂದರೆ ನಿಗದಿತ ಸಮಯ ಕಳೆಯುವಷ್ಟರಲ್ಲಿ ದೊಡ್ಡದೊಂದು ಕೆಲಸ ಆಗಿಯೇ ಹೋಗಿರುತ್ತದೆ.


ನಿರ್ವಹಣಾ ಶಾಸ್ತ್ರದವರು ಕೊಡುವ ಇನ್ನೂ ಕೆಲವು ಸೂತ್ರಗಳೆಂದರೆ

  1. ಡು, ಡೆಲಿಗೇಟ್, ಡ್ರಾಪ್ ಆರ್ ಡೆಫರ್ – ಮಾಡು, ಮಾಡಿಸು, ಮಾಡದೆ ಬಿಟ್ಟುಬಿಡು ಅಥವಾ ಮುಂದಕ್ಕೆ ಹಾಕು.
  2. ವರ್ಕ್ ಹಾರ್ಡ್ ಪಾರ್ಟಿ ಹಾರ್ಡ್ – ಕಷ್ಟ ಪಟ್ಟು ಕೆಲಸ ಮಾಡು, ತುಂಬ ಖುಷಿಯಾಗಿ ಸಂಭ್ರಮಾಚರಿಸು
  3. ವರ್ಕ್ ವ್ಹೈಲ್ ಯು ವರ್ಕ್ ಪ್ಲೇ ವ್ಹೈಲ್ ಯು ಪ್ಲೇ – ಕೆಲಸ ಮಾಡುವಾಗ ಕೆಲಸ, ಆಟ ಆಡುವಾಗ ಆಟ.
  4. ಲಾರ್ಕ್ಸ್‌ ಅಂಡ್ ಔಲ್ಸ್: ಬಾನಡಿಯಂತೆ ಬೆಳಿಗ್ಗೆ ಕೆಲಸ ಮಾಡುವವರು ಅಥವಾ ಗೂಬೆಯಂತೆ ರಾತ್ರಿ ಕೆಲಸ ಮಾಡುವವರು. ಏಕಾಗ್ರತೆ ಬೇಡುವ ಕೆಲಸಗಳಿಗೆ ನಮ್ಮ ನಮ್ಮ ಅತ್ಯುತ್ತಮ ಸಮಯವನ್ನು ಆಯ್ಕೆ ಮಾಡಬೇಕು ಎಂಬ ಸಲಹೆ ಇದು.
  5. ನಮ್ಮ ವಚನಕಾರರು ಹೇಳಿರುವ ಕಾಯಕವೇ ಕೈಲಾಸ ಮತ್ತು ಜಪಾನೀಯರ ಕೆಲಸದ ರೀತಿ – ಕೈಝೆನ್ (ನಿನ್ನೆಗಿಂತ ಇಂದು ತುಸು ಉತ್ತಮವಾಗಿ ಕೆಲಸ ಮಾಡುವುದು)

ಇವುಗಳಲ್ಲಿ ನಮಗೆ ಯಾವುದು ಹೊಂದುತ್ತದೋ ಅದನ್ನು ನಾವು ಆಯ್ಕೆ ಮಾಡಿಕೊಳ್ಳಬಹುದು.

ಕೆಲಸದ ಬಗೆಗೆ ಈ ಕೆಳಗಿನ ಚಿಂತನೆಗಳನ್ನು ಸಹ ನಾವು ಗಮನಿಸಬಹುದು.

ವರ್ಕೋಹಾಲಿಕ್: ಕೆಲಸವ್ಯಸನಿ! ಈ ಪದವನ್ನು ಕೆಲವರು ತಮ್ಮನ್ನು ಗರುತಿಸಲು ಅಥವಾ ಕೆಲಸವಿಲ್ಲದಿದ್ದರೂ ಹುಡುಕಿಕೊಂಡು ಕೆಲಸ ಮಾಡುವ ತಮ್ಮ ಪರಿಚಿತರಿಗೋ, ಕುಟುಂಬ ಸದಸ್ಯರಿಗೋ, ಸಹೋದ್ಯೋಗಿಗಳನ್ನು ಗುರುತಿಸಲು ಬಳಸುತ್ತಾರೆ. ಜೇನುದುಂಬಿಯಂತೆ ಸದಾ ಕೆಲಸ ಮಾಡುವ ಜನರ ರೀತಿ ಇದು. ಕೆಲಸವೇ ಒಂದು ಚಟವಾಗಿಬಿಟ್ಟು, ಕೆಲಸವಿಲ್ಲದಿದ್ದರೆ ನೆಮ್ಮದಿಯಿಂದ ಇರಲಾರೆ ಎನ್ನುವ ಸ್ವಭಾವದವರಂತೆ ಇವರು.

ಕೆಲಸ ಒಂದು ಔಷಧಿಯಾಗಿ:– ಕೆಲವೊಮ್ಮೆ ಮನಃಶಾಸ್ತ್ರಜ್ಞರು ಖಿನ್ನತೆ, ಆತಂಕ ಮುಂತಾದ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಕೆಲಸವನ್ನು ಒಂದು ಔಷಧದಂತೆ ನಿರ್ದೇಶಿಸುವುದುಂಟು. ಕೆಲಸ ಮಾಡುತ್ತಾ ನಮ್ಮ ನೋವನ್ನು ಮರೆಯಲಿ, ಗೋಳಾಡುವ ಅಭ್ಯಾಸವನ್ನು ಬಿಡಲಿ ಎಂಬುದು ಇಲ್ಲಿನ ಉದ್ದೇಶ.

ಕಲಿಯುವ ಮನಸ್ಸಿದ್ದರೆ ನಾವು ನಮ್ಮ ವೃತ್ತಿ/ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ಕೆಲಸ ಮಾಡುವ ಉತ್ತಮ ವಿಧಾನಗಳನ್ನು, ಸಮಯ ಉಳಿಸುವ ಮಾರ್ಗದರ್ಶನ ಸೂತ್ರಗಳನ್ನು ಕಲಿಯಬಹುದು. ಕಾಲೇಜು ಅಧ್ಯಾಪಕ ವೃತ್ತಿಯಲ್ಲಿರುವ ನನಗೆ ಇಂತಹ ಕೆಲವು ಘಟನೆಗಳು ನೆನಪಾಗುತ್ತವೆ.

ಇಪ್ಪತ್ತೈದು-ಇಪ್ಪತ್ತಾರು ವರ್ಷಗಳ ಹಿಂದಿನ ಮಾತು. ಇನ್ನೂ ಆಗ ಗಣಕ ಯಂತ್ರಗಳು ಈಗಿನಂತೆ ಸರ್ವವ್ಯಾಪಿಯಾಗಿರಲಿಲ್ಲ, ಖಾಸಗಿ ಕಛೇರಿಗಳಲ್ಲಿ ಕೆಲವು ಕಡೆ ಇದ್ದರೂ ಇನ್ನೂ ಸರ್ಕಾರಿ ಕಾಲೇಜುಗಳಲ್ಲಿ ಅವುಗಳ ಬಳಕೆ ಅಷ್ಟಾಗಿ ಆಗುತ್ತಿರಲಿಲ್ಲ. ಒಮ್ಮೆ ನಾನು ವೇಳಾಪಟ್ಟಿ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದೆ. `ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ, ವಾರದಲ್ಲಿ ಯಾವ ಯಾವ ದಿನ, ಯಾವ ಯಾವ ಗಂಟೆಯಲ್ಲಿ ಯಾವ ಯಾವ ತರಗತಿ ನಡೆಯಬೇಕು ಎಂದು ಗೊತ್ತುಪಡಿಸುವ ಹಾಗೂ ಎಲ್ಲ ಅಧ್ಯಯನ ವಿಭಾಗಗಳಿಗೂ ಅವುಗಳಿಗೆ ಸೂಚಿತವಾಗಿರುವಷ್ಟು ಅಧ್ಯಯನ ಗಂಟೆಗಳು ಸಿಕ್ಕಿವೆಯೇ’ ಎಂದು ಖಾತ್ರಿ ಪಡಿಸಿಕೊಳ್ಳುವ ಸಮಿತಿ ಅದು. ಈ ಸಮಿತಿಯಲ್ಲಿನ ಒಬ್ಬ ಅಧ್ಯಾಪಕರು(ಭೌತಶಾಸ್ತ್ರ ವಿಭಾಗದವರು), ಅತಿ ಸುಂದರ ಕೈಬರಹವನ್ನು ಹೊಂದಿದ್ದರು. ಇಂಗ್ಲಿಷ್‌ನಲ್ಲಾಗಲೀ, ಕನ್ನಡದಲ್ಲಾಗಲೀ ಎಷ್ಟು ಮುದ್ದಾಗಿ ಅವರು ಬರೆಯುತ್ತಿದ್ದರೆಂದರೆ `ಇದನ್ನು ಬೆರಳಚ್ಚು ಮಾಡಿರಬಹುದೇನೋ’ ಎಂದು ಭಾಸವಾಗುತ್ತಿತ್ತು! ಎಷ್ಟೋ ಸಲ ಅಧಿಕೃತ ಬರಹ, ಸಭಾ ಸೂಚನೆ, ಆಮಂತ್ರಣ ಪತ್ರಿಕೆ ಮುಂತಾದವನ್ನು ನಮ್ಮ ಪ್ರಾಂಶುಪಾಲರು ಅವರ ಬಳಿ ಬರೆಯಿಸಿ ಬರವಣಿಗೆಯ ಅಂದ ನೋಡಿ ಸಂತೋಷ ಪಡುತ್ತಿದ್ದರು. ಈ ಅಧ್ಯಾಪಕರು ನಮ್ಮ ಸಮಿತಿಯಲ್ಲಿ ತುಂಬ ದೊಡ್ಡ ದೊಡ್ಡ ಗಾತ್ರದ (ಎ-2 ಅಳತೆಯ) ವೇಳಾಪಟ್ಟಿ ಹಾಳೆಗಳಿಗೆ ಗೆರೆ ಹಾಕುವ ಕೆಲಸ ಮಾಡುತ್ತಿದ್ದರು. ಆ ಗೆರೆಗಳನ್ನು ಎಷ್ಟು ಚೆನ್ನಾಗಿ ಹಾಕುತ್ತಿದ್ದರೆಂದರೆ, ಅವು ಸಮವಾಗಿ, ಮಟ್ಟಸವಾಗಿ ಒಂದೂ ಸಹ ಆಚೀಚೆಯಾಗದಂತೆ ಬರುತ್ತಿದ್ದವು. ನಾನು ಅದನ್ನು ನೋಡಿ “ಎಷ್ಟು ಚೆನ್ನಾಗಿ ಗೆರೆ ಹಾಕಿದ್ದೀರಿ ಸರ್!” ಎಂದು ಮೆಚ್ಚುಗೆ ವ್ಯಕ್ತ ಪಡಿಸಿದಾಗ “ಸಂಗೀತಗಾರರು ತಾಳ ಹಾಕ್ತಾರಲ್ಲ ಮೇಡಂ? ಒಂದು ಪೆಟ್ಟು, ಒಂದು ಕೈಬೀಸುವುದು, ಒಂದು ಪೆಟ್ಟು ಒಂದು ಕೈಬೀಸುವುದು ….. ಹಾಗೆಯೇ ಇದು. ನೋಡಿ ಒಂದು ಗೆರೆ, ಒಂದು ಖಾಲಿಜಾಗ, ಒಂದು ಗೆರೆ, ಒಂದು ಖಾಲಿಜಾಗ” ಎಂದು ಆ ಗೆರೆಗಳ ಹಾಗೂ ನಡುವಿನ ಜಾಗಗಳ ಕಡೆಗೆ ಕೈತೋರಿದರು. ಅವರ ಕೊಟ್ಟ ಹೋಲಿಕೆ ನೋಡಿ ನನಗೆ ಬಹಳ ಆಶ್ಚರ್ಯವಾಯಿತು. “ಎಲ್ಲ ಕಲೆಗಳೂ ಸಂಗೀತದ ಮಟ್ಟಕ್ಕೆ ಏರಬೇಕೆಂದು ತುಡಿಯುತ್ತವೆ” ಎಂಬ ಮಾತು ನನಗೆ ನೆನಪಾಯಿತು. ಬಹುಶಃ ಎಲ್ಲ ಕೆಲಸಗಳೂ ಸಹ ಸಂಗೀತದ ಮಟ್ಟಕ್ಕೇ ಏರಲು ತುಡಿಯುತ್ತವೇನೊ!

ಇನ್ನೊಬ್ಬ ಹಿರಿಯ ಮಹಿಳಾ ಸಹೋದ್ಯೋಗಿ ಅವರ ಕೆಲಸದ ಶಿಸ್ತಿನಿಂದಾಗಿ ನನಗೆ ಆಗಾಗ ನೆನಪಾಗುತ್ತಾರೆ. ಸರ್ಕಾರಿ ಕೆಲಸದಲ್ಲಿ ಒಮ್ಮೊಮ್ಮೆ ನಮಗೆ ದೂರದೂರದ ಊರುಗಳಿಗೆ ವರ್ಗಾವಣೆ ಆಗುತ್ತದೆ. ಕುಟುಂಬದ ಸನ್ನಿವೇಶ, ಮಕ್ಕಳ ಶಾಲೆ-ಕಾಲೇಜುಗಳಿಂದಾಗಿ ವರ್ಗ ಆದ ಕಡೆಯಲ್ಲೆಲ್ಲಾ ಮನೆ ಮಾಡಲು ಆಗುವುದಿಲ್ಲ. ಆಗ ದಿನವೊಂದಕ್ಕೆ ಬೆಳಿಗ್ಗೆ ಮತ್ತು ಸಂಜೆ 40 ಕಿಲೊಮೀಟರ್‌ನಿಂದ 150-200 ಕಿಲೊಮೀಟರ್ ಓಡಾಡುವ ಅನಿವಾರ್ಯ ಪರಿಸ್ಥಿತಿ ಬರುತ್ತದೆ. ಹೀಗೆಯೇ ನನಗೆ ಕೆಲವು ವರ್ಷಗಳ ಮಟ್ಟಿಗೆ ಬೆಂಗಳೂರಿಂದ ಕೋಲಾರಕ್ಕೆ ಕೆಲಸಕ್ಕಾಗಿ ದಿನಾಲೂ ಓಡಾಡುವ ಸಂದರ್ಭ ಬಂದಿತ್ತು. ಹಾಗೆ ಬಸ್ಸಿನಲ್ಲಿ ಓಡಾಡುವಾಗ ಇಬ್ಬರು ಹಿರಿಯ ಅಧ್ಯಾಪಕಿಯರು ನನಗೆ ಒಡನಾಡಿಗಳಾಗಿ ಸಿಗುತ್ತಿದ್ದರು. ಅವರ ಜೀವನಾನುಭವ, ಕೆಲಸದ ಬಗೆಗಿನ ನೋಟ ನಿಲುವುಗಳಿಂದ ನನಗೆ ಕಲಿಯಲು ಸಾಕಷ್ಟು ಹೊಸ ವಿಷಯಗಳು ದೊರೆಯುತ್ತಿದ್ದವು.

ಇಂತಹ ಕಲಿಕೆಯ ಒಂದು ದಿನವನ್ನು ಮರೆಯಲಾಗದು. ಅಂದು ಬೆಳಿಗ್ಗೆ ಹೆಚ್ಚುಕಮ್ಮಿ 7.30 ಗಂಟೆಗೆ ಮನೆ(ಬೆಂಗಳೂರು) ಬಿಟ್ಟಿದ್ದ ನಾವು 10.00 ಗಂಟೆಯ ಸುಮಾರಿಗೆ ಕಾಲೇಜು ತಲುಪಿದೆವು. ರೂಢಿಗತವಾಗಿ, ಹೋದ ತಕ್ಷಣ ಹಾಜರಿ ವಹಿಯಲ್ಲಿ ಸಹಿ ಮಾಡಲು ಪ್ರಾಂಶುಪಾಲರ ಕೊಠಡಿಗೆ ಹೋದ ನಮಗೆ ಅನಿರೀಕ್ಷಿತ ಕೆಲಸವೊಂದು ಕಾಯುತ್ತಿತ್ತು. ಅಲ್ಲಿ ಮೇಜಿನ ಮೇಲೆ ಹೊಸದಾಗಿ ದಾಖಲಾದ ವಿದ್ಯಾರ್ಥಿನಿಯರ ಅರ್ಜಿಗಳು ಬೆಟ್ಟದಂತೆ ಎತ್ತರವಾಗಿ ಕುಳಿತಿದ್ದವು. ನಮ್ಮ ಪ್ರಾಂಶುಪಾಲರು “ನೋಡಿ, ಈ ಅರ್ಜಿಗಳನ್ನು ನೀವು ವಿಂಗಡಿಸಿ ಬೇರೆ ಬೇರೆ ಮಾಡಿಕೊಡ್ಬೇಕು. ಆದಷ್ಟು ಬೇಗ ಈ ಕೆಲ್ಸ ಮುಗಿಸೀಪ್ಪಾ” ಅಂದರು. ಕೆಲಸಕ್ಕೆ ಸೇರಿ ಹೆಚ್ಚೇನೂ ವರ್ಷಗಳು ಆಗದ ನನಗೆ ಈ ಕೆಲಸ ತುಂಬ ಕಷ್ಟಕರವೇನೋ ಅನ್ನಿಸಿತು. `ಹೇಗೆ ಮಾಡುವದಪ್ಪಾ ಇದನ್ನು?’ ಎಂಬ ಚಿಂತೆ ಕಾಡಲಾರಂಭಿಸಿತು. ಆ ಇಬ್ಬರು ಹಿರಿಯ ಅಧ್ಯಾಪಕಿಯರ ಮುಖ ನೋಡಿದೆ. ಅವರಲ್ಲೊಬ್ಬರು `ಹೇ… ಸುಲಭ ಇದು. ನೋಡಿ, ಒಬ್ರು ಈ ಕಡೆ, ಇನ್ನೊಬ್ರು ಆ ಪಕ್ಕದ ಕುರ್ಚೀಲಿ ಕೂತ್ಕೊಳಿ. ನಾನು ಇಲ್ಲಿ ಕೂತ್ಕೋತೀನಿ. ನೂರರಿಂದ ಶುರುವಾಗೋ ಅರ್ಜಿ ಎಲ್ಲಾ ನೀವು ತಗೊಳ್ಳಿ, ಇನ್ನೂರರಿಂದ ಶುರುವಾಗೋದು ನೀವು, ಮುನ್ನೂರರಿಂದ ಶುರುವಾಗೋದು ನಾನು ತಗೋತೀನಿ.. ಬೇಗ ಬೇಗ ಇವುಗಳನ್ನ ನಾವು ಪ್ರತ್ಯೇಕ ಮಾಡ್ಬಹುದು’ ಅಂದರು. ಅದೇ ರೀತಿಯಲ್ಲಿ ಕೆಲಸ ಶುರುವಾಗಿಯೇ ಹೋಯಿತು, ಮತ್ತು ಹತ್ತು-ಹದಿನೈದು ನಿಮಿಷಗಳಲ್ಲಿ ಮುಗಿದೇ ಹೋಯಿತು!! ಸ್ವಲ್ಪವೂ ಗಾಬರಿ ಮಾಡಿಕೊಳ್ಳದೆ ಶಾಂತವಾಗಿ, ದಕ್ಷವಾಗಿ ಆ ಕೆಲಸವನ್ನು ಕೈಗೆತ್ತಿಕೊಂಡು, ತಕ್ಷಣ ಒಂದು ತಂಡವಾಗಿ ಅಧ್ಯಾಪಕರನ್ನು ವ್ಯವಸ್ಥೆಗೊಳಿಸಿ, ಬಹಳ ಕಡಿಮೆ ಸಮಯದಲ್ಲಿ ಹೂವೆತ್ತಿದಂತೆ ಸರಾಗವಾಗಿ ಕೆಲಸ ಮುಗಿಸಿದ ಆ ಹಿರಿಯರ ಸಮಚಿತ್ತ, ಕೆಲಸದ ಬಗೆಗಿನ ಗೌರವ ಹಾಗೂ ಸಕರಾತ್ಮಕ ಮನಃಸ್ಥಿತಿ ನನ್ನ ಮನಸ್ಸನ್ನು ಗೆದ್ದವು.

ನಮ್ಮ ನಾಡು ಕಂಡ ಒಬ್ಬ ಶ್ರೇಷ್ಠ ಸರಳಜೀವಿ ಹಾಗೂ ಸಂತರಾದ ಸಿದ್ಧೇಶ್ವರ ಸ್ವಾಮಿಗಳು ಒಂದು ಒಳ್ಳೆಯ ಮಾತು ಹೇಳಿದ್ದರು – “ನಾವು ಉಳಿಯಲ್ಲ, ನಾವು ಮಾಡಿದ ಒಳ್ಳೆಯ ಕೆಲಸ ಉಳಿಯುತ್ತೆ”. ಎಷ್ಟು ನಿಜ ಅಲ್ಲವೆ? ನಾಲ್ಕು ಕಾಲ ಉಳಿಯುವ ಒಳ್ಳೆಯ ಕೆಲಸ ಮಾಡುವ ಪ್ರಯತ್ನ ಮಾಡಬೇಕಲ್ಲವೆ ನಾವು?

ಉತ್ತಮ ಕೆಲಸದ ವಿಧಾನ ನಮ್ಮದಾಗಲಿ ಎಂದು ಹಾರೈಸೋಣ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ