ಅಸಂಖ್ಯಾತ ಸಂಪ್ರದಾಯ ಪರಂಪರೆಗಳ ಮಣತೂಕವನ್ನು ಈಗಾಗಲೇ ಹೊತ್ತಿರುವ ಈ ಬ್ರಿಟನ್ ಗೆ ಈಗ ಈ ಪದ್ಧತಿಯ ಭಾರ ಹೆಚ್ಚೆನಿಸಲಿಕ್ಕಿಲ್ಲ. ಇಂತಹ ನೆನೆಕೆಯ ದಿನಕ್ಕೆ ಅಥವಾ ಸ್ಮರಣೆಯ ಹೊತ್ತಿಗೆ ಪ್ರತಿಮನೆಯ ಪ್ರತಿಯೊಬ್ಬರೂ ಪ್ರತೀ ಗುರುವಾರವೂ ಹೊರಬಂದು ಚಪ್ಪಾಳೆ ಸದ್ದು ಮಾಡುವುದು ಖಾತ್ರಿ ಇಲ್ಲ. ಆದರೂ ಬೀದಿಯೊಂದು ತುಂಬುವಷ್ಟು ಕೈಗಳು ಸಪ್ಪಳಗಳು ಕಂಡುಕೇಳುತ್ತವೆ. ಇಂದು ಸಂಜೆಯ ಎಂಟಕ್ಕೆ ಹೊರಬಾರದ ನೆರೆಮನೆಯ ಒಂಟಿ ತಾಯಿ ಮುಂದಿನ ವಾರ ಬರಬಹುದು. ಕಳೆದ ಗುರುವಾರ ವಂದನಾರ್ಪಣೆಯಲ್ಲಿ ಭಾಗಿಯಾಗದ ಎದುರು ಮನೆಯ ಮುದುಕಿ ಇವತ್ತು ಹೊರಬೀಳಲೂಬಹುದು.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್

 

ಮೊನ್ನಿನಂತೆ ನಿನ್ನೆ, ನಿನ್ನೆಯಂತೆ ಇವತ್ತು ಎಂದು ತಿಳಿಯಲು ವಾದಿಸಲು ಅನೇಕರಿಗೆ ಅನೇಕ ಕಾರಣಗಳಿರಬಹುದು. ಈಗಂತೂ ತುಸು ಹೆಚ್ಚೇ ಕಾರಣಗಳು ಸಿಗಬಹುದು. ಬೆಳಗಿನಿಂದ ಸಂಜೆಯತನಕ ಮನೆಯೊಳಗಿದ್ದೇ ಕಳೆದುಹೋಗುವ ಯಾವುದೇ ದಿನದಲ್ಲಿ ಅಪ್ಪಿತಪ್ಪಿ ಬಿಬಿಸಿ, ಸ್ಕೈ ವಾಹಿನಿಗಳನ್ನು ಅಥವಾ ಇಲ್ಲಿನ ಇನ್ಯಾವುದೋ ಪತ್ರಿಕೆಯ ಮುಖಪುಟವನ್ನು ಮುಖದೆದುರು ತೆರೆದರೆ ಅಲ್ಲಿ ಕಾಣಿಸುವುದು ಆರೋಗ್ಯ ವ್ಯವಸ್ಥೆಯಲ್ಲಿ ಸುರಕ್ಷಾ ಪರಿಕರಗಳ ಕೊರತೆ, ಸಾಕಷ್ಟು ಬೇಕಷ್ಟು ನಡೆಯದ ಕೋವಿಡ್ ತಪಾಸಣೆಗಳು… ಇಂದು ಕೂಡ ಕೆಲವು ನೂರು ಜನರು ಮೃತರಾದದ್ದು.. ಒಟ್ಟು ಸಾವಿನ ಸಂಖ್ಯೆ ಇಪ್ಪತ್ತು ಸಾವಿರವನ್ನು ಮಿಕ್ಕಿದ್ದು… ಸರಕಾರವನ್ನು ಮುತ್ತಿರುವ ಹಲವು ಪ್ರಶ್ನೆಗಳು ಮತ್ತವಕ್ಕೆ ದೊರೆಯುವ ಮಾಮೂಲಿ ಕೆಲವು ಸಮಜಾಯಿಷಿಗಳು…

ಮನೆಯೊಳಗೆ ನಿತ್ಯ ಸರಬರಾಜಾಗುವ ಅವೇ ಅವೇ ಸುದ್ದಿಗಳ ಸಹವಾಸವೇ ಬೇಡ ಎಂದು ಕಿಟಕಿಯ ಹೊರಗೆ ಹುಡುಕಿದರೆ ಈ ಕಾಲಕ್ಕೆ ಒಪ್ಪುವಂತಹ ಅರಿಶಿನ ಬಣ್ಣದ ಮಿರಮಿರ ಬಿಸಿಲು ಮತ್ತೆ ಆ ಬಿಸಿಲಲ್ಲಿ ವ್ಯಾಯಾಮಕ್ಕೋ ಕೆಲಸಕ್ಕೋ ಆಹ್ಲಾದಕ್ಕೋ ನಡೆಯುವವರು ಓಡುವವರು. ಅಂತಹ ಕೆಲವರ ಜೊತೆ ಸಹಭಾಗಿಯಾಗಿ ಹೆಜ್ಜೆಯಿಡುತ್ತಿರುವ ವಿನಮ್ರ ಸಾಕುನಾಯಿಗಳು. ಎಲ್ಲವೂ ಮೊನ್ನೆ ನಿನ್ನೆಯಂತೆಯೇ, ಅಥವಾ ಈ ವಾರದ ಯಾವುದೇ ದಿನದಂತೆಯೇ. ಇನ್ನು ಇದು ಗುರುವಾರವೇ ಅಂತ ಖಡಾಖಂಡಿತ ಗೊತ್ತಾಗುವುದು ಇಂದು ಸಂಜೆ ನಡೆಯುವ ಒಂದು ವಿಶಿಷ್ಟ ದಿನಚರಿಯಿಂದಾಗಿ ಇರಬಹುದು.

ಮಾಮೂಲಿಯಾಗಿರುವ ತರತರಹದ ಭಯ, ಅನಿಶ್ಚಿತತೆ ನಿರ್ಬಂಧಗಳ ಈ ಕಾಲದಲ್ಲಿ ಸಂಜೆ ಎಂಟು ಘಂಟೆಗೆ ಮನೆಯಿಂದ ಹೊರಬರುವುದು ಪ್ರತಿ ಗುರುವಾರದ ವೇಳಾಪಟ್ಟಿಯಲ್ಲಿ ಖಾಯಂ ಆಗಿಬಿಟ್ಟಿದೆ. ಹೀಗೆ ಮನೆಯೊಳಗೇ ಇರಬೇಕಾದಾಗ ಘಂಟೆಗಳು ದಿನಗಳು ವಾರಗಳು ಉರುಳುತ್ತ ತೆವಳುತ್ತ ಸವೆಯುತ್ತ ಕಳೆಯುವಾಗ ಕೆಲವು ಕ್ಷಣಗಳ ಮಟ್ಟಿಗೆ ಮನೆಯಿಂದ ಹೊರಬಂದರೂ ಅದು ಹೊರಗೆ ಕಳೆದ ಅಪೂರ್ವ ಸಂದರ್ಭ ಎನಿಸಿಬಿಡುತ್ತದೆ. ಈ ದೇಶದ ಊರು ಕೇರಿಗಳಲ್ಲಿರುವವರು ಪ್ರತಿ ಗುರುವಾರ ಸಂಜೆ ಎಂಟಕ್ಕೆ ಮನೆಯಿಂದ ಹೊರಬಂದು ಒಂದೆರಡು ನಿಮಿಷ ತಣ್ಣಗೆ ಚಪ್ಪಾಳೆ ತಟ್ಟುವುದು, ವೈದ್ಯರು ಆರೋಗ್ಯ ವ್ಯವಸ್ಥೆಯ ಸಿಬ್ಬಂದಿಗಳು ಪೌರಕಾರ್ಮಿಕರು ವೃದ್ಧರನ್ನು ಆರೈಕೆ ಮಾಡುವವರು ಪೊಲೀಸರು ಅಗತ್ಯದ ಸಾಮಾನುಗಳನ್ನು ಬೇಕಾದಲ್ಲಿಗೆ ಮುಟ್ಟಿಸುವವರು ಹೀಗೆ ಸದ್ಯದ ಆಯಕಟ್ಟಿನ ಪರಿಸ್ಥಿತಿಯಲ್ಲಿ ಅತ್ಯಾವಶ್ಯಕ ವೃತ್ತಿ ಕರ್ತವ್ಯ ಸೇವೆಗಳಲ್ಲಿ ನಿರತರಾದವರನ್ನು ಮೌನವಾಗಿ ನೆನೆಪು ಮಾಡಿಕೊಳ್ಳುವುದು ಈ ಕಾಲದ ಒಂದು ಸಂಪ್ರದಾಯ ಆಗಿದೆ.

ಅಸಂಖ್ಯಾತ ಸಂಪ್ರದಾಯ ಪರಂಪರೆಗಳ ಮಣತೂಕವನ್ನು ಈಗಾಗಲೇ ಹೊತ್ತಿರುವ ಈ ಬ್ರಿಟನ್ ಗೆ ಈಗ ಈ ಪದ್ಧತಿಯ ಭಾರ ಹೆಚ್ಚೆನಿಸಲಿಕ್ಕಿಲ್ಲ. ಇಂತಹ ನೆನೆಕೆಯ ದಿನಕ್ಕೆ ಅಥವಾ ಸ್ಮರಣೆಯ ಹೊತ್ತಿಗೆ ಪ್ರತಿಮನೆಯ ಪ್ರತಿಯೊಬ್ಬರೂ ಪ್ರತೀ ಗುರುವಾರವೂ ಹೊರಬಂದು ಚಪ್ಪಾಳೆ ಸದ್ದು ಮಾಡುವುದು ಖಾತ್ರಿ ಇಲ್ಲ. ಆದರೂ ಬೀದಿಯೊಂದು ತುಂಬುವಷ್ಟು ಕೈಗಳು ಸಪ್ಪಳಗಳು ಕಂಡುಕೇಳುತ್ತವೆ. ಇಂದು ಸಂಜೆಯ ಎಂಟಕ್ಕೆ ಹೊರಬಾರದ ನೆರೆಮನೆಯ ಒಂಟಿ ತಾಯಿ ಮುಂದಿನ ವಾರ ಬರಬಹುದು. ಕಳೆದ ಗುರುವಾರ ವಂದನಾರ್ಪಣೆಯಲ್ಲಿ ಭಾಗಿಯಾಗದ ಎದುರು ಮನೆಯ ಮುದುಕಿ ಇವತ್ತು ಹೊರಬೀಳಲೂಬಹುದು. ಕೆಲವರು ಒಂಟಿಯಾಗಿ ಮತ್ತೆ ಕೆಲವರು ದಂಪತಿಗಳಾಗಿ ಮತ್ತಿಷ್ಟು ಮಕ್ಕಳು ಮರಿಮಕ್ಕಳು ಕೂಡಿ ತುಂಬು ಸಂಸಾರವಾಗಿಯೂ ನೆರೆಯಬಹುದು.

ಈ ದೇಶದ ಒಂದಾನೊಂದು ಊರಿನಲ್ಲಿ ಒಬ್ಬಾಕೆ ಕಳೆದ ಗುರುವಾರ ಮನೆಯಿಂದ ಹೊರಬಂದು ಚಪಾಳೆ ತಟ್ಟಲಿಲ್ಲ ಎನ್ನುವ ಕಾರಣಕ್ಕೆ ಆ ಬೀದಿಯ ಸಮುದಾಯದ ಫೇಸ್ಬುಕ್ ಪುಟದಲ್ಲಿ ಅವಳನ್ನು ಹೆಸರಿಸಿ ತಮಾಷೆ ಮಾಡಿದ ಘಟನೆಯೂ ನಡೆದಿತ್ತಂತೆ. ಹೀಗೆ ಒಂದು ಸಾಮೂಹಿಕ ಅಭಿಯಾನದಲ್ಲಿ ಭಾಗಿಯಾಗದವರ ಮೂದಲಿಕೆ ವ್ಯಂಗ್ಯ ಇಲ್ಲಿ ಎದುರೆದುರೇ ಸಾರ್ವಜನಿಕವಾಗಿ ನಡೆಯುವುದು ಸಾಮಾನ್ಯ ಅಲ್ಲವಾದರೂ ಇಂತಹದೊಂದು ಘಟನೆ ಘಟಿಸಿ ಈಗ ಸುದ್ದಿಯಾಗಿದೆ. ಈ ಹಿಂದಿನ ಗುರುವಾರಗಳ ಚಪ್ಪಾಳೆ ತಟ್ಟುವಿಕೆಯಲ್ಲಿ ಭಾಗಿಯಾಗುತ್ತಿದ್ದ ಆಕೆ ಕಾರಣಾಂತರದಿಂದ ಕಳೆದ ಗುರುವಾರ ಸಂಜೆ “ಸುಸ್ತಾಗಿ ನಿದ್ದೆ ಹೋಗಿದ್ದೆ” ಎಂದು ಸ್ಪಷ್ಟೀಕರಣವನ್ನೂ ನೀಡಿದ್ದಾಳೆ.

ಇವಳ ಬಗ್ಗೆ ಇಲ್ಲಿನ ಕೆಲವು ಆರೋಗ್ಯ ವ್ಯವಸ್ಥೆಯ ಉದ್ಯೋಗಿಗಳು ಈ ವಂದನಾರ್ಪಣೆಯನ್ನು ಸ್ವೀಕರಿಸುವ ಸ್ಥಾನದಲ್ಲಿರುವವರು ಸಾಂತ್ವನವನ್ನೂ ಹೇಳಿದ್ದಾರೆ. “ಸಾಂಕೇತಿಕವಾದ ಈ ರಿವಾಜಿನಲ್ಲಿ ಎಲ್ಲರೂ ಭಾಗಿಆಗಲೇಬೇಕೆಂದು ಆಗ್ರಹಿಸುವುದು, ಪ್ರತಿ ವಾರವೂ ಇದು ನಡೆಯಲೇಬೇಕೆಂದು ಬಯಸುವುದು ಅನಗತ್ಯ, ತಮ್ಮ ಆತ್ಮೀಯ ಬಂಧುಗಳೇ ಹಲವರು ಈ ಸ್ಮರಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ” ಎಂದೂ ಸಮಾಧಾನ ಮಾಡಿದ್ದಾರೆ. ಇರಲಿ, ಇಂದು ಕೂಡ ರಾತ್ರಿ ಎಂಟಕ್ಕೆ ಇಲ್ಲಿನ ಮನೆಗಳಿಂದ ಬಹಳಷ್ಟು ಜನರು ಹೊರಬರುವವರಿದ್ದಾರೆ. ಬಂದವರು ಒಂದೆರಡು ನಿಮಿಷ ಚಪ್ಪಾಳೆ ಹೊಡೆದು ತಮ್ಮತಮ್ಮ ಆಚೀಚೆ ಮನೆಯವರ ಕಡೆ ತಿರುಗಿ ದೂರದೂರವೇ ನಿಂತು ಕುಶಲೋಪರಿಯಲ್ಲಿ ಮತ್ತೊಂದು ಘಳಿಗೆ ಕಳೆಯುವುವರೂ ಇದ್ದಾರೆ.

ಆ ಘಳಿಗೆಗಳಲ್ಲಿ, ಸುತ್ತಲಿನ ಬೇಸಿಗೆ, ನೆತ್ತಿ ಕಾಯಿಸುವ ಬಿಸಿಲು, ಮನೆಯ ಹಿಂದೋಟ, ಸಾಕುಪ್ರಾಣಿ, ಮಕ್ಕಳುಮರಿ, ಆನ್ಲೈನ್ ಶಾಲೆ, ಕೆಲಸ ಹೀಗೆ ದೈನಿಕದ ಒಂದು ಎಳೆ ಹಿಡಿದು ಅದನ್ನೇ ಹಿಸಿದು ಬಗೆದು ಹರಟೆಗೆ ತೊಡಗಬಹುದು. ವಿಷಯವೇ ಇಲ್ಲದಿದ್ದರೂ ಅಥವಾ ತಮ್ಮ ಊರಿನ ಮೇಲೆ ಯಾವುದೊ ಆತಂಕ ಆವರಿಸಿದ್ದರೂ ಚೂರೂ ವಿಚಲಿತರಾಗದೇ ಅಥವಾ ಆಗಿದ್ದರೂ ತೋರಗೊಡದೇ ಲೋಕಾಭಿರಾಮ ಮಾತುಕತೆಯಲ್ಲೇ ಕಳೆಯಬಹುದು. ದೇಶವಿಡೀ ಅಲ್ಲೋಲಕಲ್ಲೋಲವಾಗುತ್ತಿದೆ ಎನಿಸಿದರೂ ವಾರಕ್ಕೊಮ್ಮೆ ಮನೆಯ ಹೊರಗೆ ಹೀಗೆ ಭೇಟಿ ಆದ ನೆರೆಹೊರೆಯವರು ಸೋಂಕು ವೈರಾಣು ಸಾವುಗಳ ಸುದ್ದಿ ಮಾತಾಡದೇ ಎಲ್ಲವೂ ಎಂದಿನಂತೆ ತಣ್ಣಗೆ ಸಾಗುತ್ತಿರುವಂತೆ ಅವರಿವರನ್ನು ವಿಚಾರಿಸಿ ವಿನೋದ ವ್ಯಂಗ್ಯ ಮಾಡಿ ಒಳಹೋಗಬಹುದು.

ಹೀಗೊಂದು ಸಮುದಾಯ ಪಾಲ್ಗೊಳ್ಳುವಿಕೆಗೆ ಕಾರಣವಾಗಿರುವ ಗುರುವಾರದ “ಚಪ್ಪಾಳೆಯ ಕೃತಜ್ಞತೆ”ಗೆ ಮೊದಲು ಕರೆ ಕೊಟ್ಟಾಕೆ ಲಂಡನ್ ವಾಸಿ ಡಚ್ ಮೂಲದ ಮಹಿಳೆ. ತಾನು ಹುಟ್ಟಿದ ನೆದರ್ಲ್ಯಾಂಡ್ಸ್ ಹಾಗು ನೆರೆಯ ಇಟಲಿಗಳಲ್ಲಿ ಆರಂಭವಾದ ಇಂತಹ ಧನ್ಯವಾದ ಅರ್ಪಣೆಯಿಂದ ಪ್ರೇರಣೆ ಪಡೆದ ಆಕೆ ಯು.ಕೆ.ಯಲ್ಲಿ ಇಂತಹ ಸಂಪ್ರದಾಯಕ್ಕೆ ಚಾಲನೆ ಕೊಟ್ಟಳು. ಆರೋಗ್ಯ ಕಂಟಕದ ಸಂಕಟದ ಈ ಕಾಲದಲ್ಲಿ ಇಲ್ಲಿನ ಸಕಲ ಆರೈಕೆದಾರರಿಗೆ ಆರೋಗ್ಯ ವ್ಯವಸ್ಥೆಗೆ (Carers) ನೈತಿಕ ಉತ್ಸಾಹ ತುಂಬಲು ಮಾರ್ಚ್ 26ರ ಗುರುವಾರದಂದು ಶುರುವಾದ ವಂದನಾರ್ಪಣೆ ಆಡಂಬರ ಪ್ರಚಾರವಿಲ್ಲದೇ ಇಂದು ಆರನೆಯ ವಾರದಲ್ಲೂ ನಡೆಯಲಿದೆ.

ಪ್ರತಿವಾರವೂ ಮನೆಯಿಂದ ಹೊರಬಂದೋ ಕಿಟಕಿಯಲ್ಲಿ ನಿಂತೋ ಸ್ಮರಣೆಯಲ್ಲಿ ಭಾಗಿಯಾಗುವವರಲ್ಲಿ ಜನಸಾಮಾನ್ಯರು, ಅಧಿಕಾರಿಗಳು, ಮಂತ್ರಿಗಳು, ಹೀಗೆ ಎಲ್ಲ ವರ್ಗದ ಜನರ ಭಾಗವಹಿಸುವಿಕೆಯೂ ಕಾಣುತ್ತದೆ ಕೇಳಿಬರುತ್ತದೆ. ಆದರೆ ಕೋವಿಡ್ ವಿಷಮ ಬಿಕ್ಕಟ್ಟಿನಿಂದ ಇಲ್ಲಿನ ಮನೆಗಳಲ್ಲಿ ಆಸ್ಪತ್ರೆಗಳಲ್ಲಿ ವ್ರದ್ಧಾಶ್ರಮಗಳಲ್ಲಿ ಈಗಾಗಲೇ ಇಪ್ಪತ್ತೈದು ಸಾವಿರಕ್ಕಿಂತ ಹೆಚ್ಚು ಜನರು ಮೃತರಾದದ್ದು ಮತ್ತೆ ಅವರಲ್ಲಿ ಆರೋಗ್ಯ ವ್ಯವಸ್ಥೆಯ ಉದ್ಯೋಗಿಗಳು ಆರೈಕೆದಾರರೂ ಸೇರಿರುವುದು ಕೆಲವು ತೀಕ್ಷ್ಣ ಪ್ರಶ್ನೆಗಳನ್ನೂ ಹುಟ್ಟುಹಾಕುತ್ತದೆ.

ಆರೋಗ್ಯ ವ್ಯವಸ್ಥೆಯಲ್ಲಿಯೇ ದುಡಿಯುವವರಿಗೆ ಕೊರೊನವನ್ನು ನೇರಾನೇರ ಎದುರಿಸುವವರಿಗೆ ಸುರಕ್ಷತಾ ಪರಿಕರಗಳನ್ನು ಸರಿಯಾದ ಸಮಯಕ್ಕೆ ವ್ಯವಸ್ಥೆ ಮಾಡದೇ ಇಲ್ಲಿಯ ತನಕ ನೂರಕ್ಕೂ ಹೆಚ್ಚು ವೈದ್ಯರು ಸಿಬ್ಬಂದಿಗಳು ಆರೈಕೆದಾರರು ಬಲಿಯಾಗುವಂತಾಗಿರುವಾಗ ಇಂತಹ ಸಾಂಕೇತಿಕತೆಗಾದರೂ ಏನು ಅರ್ಥ ಎಂದು ಕೆಲವರು ಕೇಳುತ್ತಿದ್ದಾರೆ. ದೇಶದ ಆರೋಗ್ಯ ಆರ್ಥಿಕತೆಯ ಹೊಣೆ ಹೊತ್ತ ಮಂತ್ರಿಗಳು ಕಳೆದ ಐದಾರು ವಾರಗಳಿಂದ ಸುರಕ್ಷಾ ಪರಿಕರಗಳು ‘ಈ ವಾರ ಬರುತ್ತವೆ, ಮುಂದಿನ ವಾರ ಬರುತ್ತವೆ, ಮುನ್ನೆಲೆಯಲ್ಲಿ ಕೆಲಸ ಮಾಡುವ ನೌಕರರಿಗೆ ಕೋವಿಡ್ ತಪಾಸಣೆ ಕಿಟ್ ಸದ್ಯದಲ್ಲೇ ಲಭ್ಯ ಆಗುತ್ತದೆ’ ಎಂದು ನಿತ್ಯ ಭರವಸೆ ನೀಡುತ್ತಲೇ ತಮ್ಮ ನಿವಾಸದ ಹೊರಗೆ ನಿಂತು ಗುರುವಾರ ಸಂಜೆಗೆ ಕರತಾಡನದಲ್ಲಿ ಭಾಗಿಯಾಗುವುದು ಈ ಕಾಲದ ದೊಡ್ಡ ಸೋಗು ಮತ್ತು ಇಡೀ ಆರೋಗ್ಯ ವ್ಯವಸ್ಥೆಗೆ ಮಾಡುತ್ತಿರುವ ಅವಮಾನ ಎಂದೂ ಪತ್ರಿಕೆಗಳು ಬರೆಯುತ್ತಿವೆ.

ದೇಶವಿಡೀ ಅಲ್ಲೋಲಕಲ್ಲೋಲವಾಗುತ್ತಿದೆ ಎನಿಸಿದರೂ ವಾರಕ್ಕೊಮ್ಮೆ ಮನೆಯ ಹೊರಗೆ ಹೀಗೆ ಭೇಟಿ ಆದ ನೆರೆಹೊರೆಯವರು ಸೋಂಕು ವೈರಾಣು ಸಾವುಗಳ ಸುದ್ದಿ ಮಾತಾಡದೇ ಎಲ್ಲವೂ ಎಂದಿನಂತೆ ತಣ್ಣಗೆ ಸಾಗುತ್ತಿರುವಂತೆ ಅವರಿವರನ್ನು ವಿಚಾರಿಸಿ ವಿನೋದ ವ್ಯಂಗ್ಯ ಮಾಡಿ ಒಳಹೋಗಬಹುದು.

ಈ ಸಮಯದಲ್ಲಿ ಕೆಲವು ತುರ್ತು ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಅಗ್ನಿಶಾಮಕದಳದ ಉದ್ಯೋಗಿಯೊಬ್ಬ, ಧನ್ಯವಾದ ಸಮರ್ಪಣೆ ಬರೇ ಗುರುವಾರದ ಚಪ್ಪಾಳೆಗಷ್ಟೇ ಸೀಮಿತವಾಗದೆ ಕಡಿಮೆ ವೇತನದಲ್ಲಿ ದುಡಿಯುವ ತಮ್ಮ ಉದ್ಯೋಗಗಳ ಆಂತರಿಕ ಆರ್ಥಿಕ ಪರಿಸ್ಥಿತಿಗಳ ವಿಮರ್ಶೆಯೂ ಆಗಿದ್ದರೆ ಚೆನ್ನಾಗಿತ್ತು ಎಂದಿದ್ದಾನೆ. ಪ್ರಧಾನಿ ಜಾನ್ಸನ್ ರಿಗೆ ಫೇಸ್ಬುಕ್ ಮುಖಾಂತರ ಪಿ.ಪಿ.ಇ. ಗಳ ಕೊರತೆಯ ಬಗ್ಗೆ ಬಹಿರಂಗ ಪತ್ರ ಬರೆದು ಎಚ್ಚರಿಸಿ ಮತ್ತೆರಡು ವಾರಗಳಲ್ಲಿ ತಾನು ಕಳವಳ ಪಟ್ಟ ಕಾರಣದಿಂದಲೇ ಮೃತರಾದ ವೈದ್ಯ ಡಾ. ಚೌಧರಿಯವರ ಮಗನೂ ಈಗ ಸರಕಾರವನ್ನು ಕಟುವಾಗಿ ಪ್ರಶ್ನಿಸುತ್ತಿದ್ದಾನೆ. “ನನ್ನ ತಂದೆಯ ಪತ್ರವನ್ನು ತಾವು ಗಂಭೀರವಾಗಿ ಪರಿಗಣಿಸಲೇ ಇಲ್ಲ ಅಲ್ಲವೇ?” ಎಂದು ಕೇಳುತ್ತಿದ್ದಾನೆ. ಮೃತರಾದ ಆರೋಗ್ಯ ವ್ಯವಸ್ಥೆಯ ಸಿಬ್ಬಂದಿಗಳಿಗೆ ಸಿಗುವ ಅರವತ್ತು ಸಾವಿರ ಪೌಂಡ್ ಧನಪರಿಹಾರ ತನ್ನ ಬದುಕಿನಲ್ಲಿ ಖಾಲಿಯಾದ ತಂದೆಯ ಜಾಗವನ್ನೋ ಅಥವಾ ಕ್ಲಪ್ತ ಕಾಲದಲ್ಲಿ ದೊರಕದ ಸುರಕ್ಷಾ ಪರಿಕರಗಳ ಕೊರತೆಯನ್ನೋ ನೀಗಿಸುವುದೂ ಇಲ್ಲ ಎಂದೂ ಹೇಳುತ್ತಿದ್ದಾನೆ.

ಇಂತಹ ಟೀಕೆ ಪ್ರಶ್ನೆಗಳು ಒಂದಕ್ಕೊಂದು ಸುತ್ತಿ ಬೆಳೆದು ಅಪಾರ ಸಂಖ್ಯೆಯ ಜನಸಾಮಾನ್ಯರ ಸಾವುಗಳನ್ನು ವೈದ್ಯರ ಆರೈಕೆ ಮಾಡುವವರ ಅಸಹಾಯಕ ಬಲಿಗಳನ್ನು ತಪ್ಪಿಸಲು ನಿಜವಾಗಿಯೂ ಎಷ್ಟು ಪ್ರಯತ್ನ ನಡೆದಿದೆ ನಡೆದಿಲ್ಲವಾದರೆ ಯಾಕೆ ಎನ್ನುವ ಬಗೆಗೆ ಚರ್ಚೆ ವಿಮರ್ಶೆಗಳು ಮನೆಯ ಗೋಡೆಗಳೊಳಗಿನ ಏಕಾಂತದಿಂದ, ಹಿಡಿದು ಪತ್ರಿಕೆಗಳ ಲೋಕಾಂತದಲ್ಲಿ ಧ್ವನಿ ಪ್ರತಿಧ್ವನಿಗಳಾಗಿ ಮಾತಾಡಿಕೊಳ್ಳುತ್ತಿವೆ.

ಕೊರೊನ, ಚೈನಾದಿಂದ ಹೊರಗೆ ಪ್ರಯಾಣಿಸಿ ಯುರೋಪನ್ನು ತಲುಪಿ ಹರಡಲು ಶುರು ಮಾಡಿದ ಜನವರಿ ತಿಂಗಳಿನಲ್ಲಿ ಬ್ರಿಟನ್ ಬೇರೊಂದು ಲೋಕದಲ್ಲಿ ವ್ಯಸ್ತವಾಗಿತ್ತು. ಕಳೆದ ಮೂರುವರೆ ವರ್ಷಗಳಿಂದ ಇಲ್ಲಿನ ದಿನನಿತ್ಯದ ರಾಜಕೀಯ ವಲಯವನ್ನು ಆವರಿಸಿದ್ದ ಬ್ರೆಕ್ಸಿಟ್ ಒಂದು ನಿರ್ಣಾಯಕ ಹಂತಕ್ಕೆ ಬಂದು ಬ್ರಿಟನ್ ಖಂಡಿತ ಯೂರೋಪಿನ ಒಕ್ಕೂಟವನ್ನು ಬಿಡುವುದಕ್ಕೆ ಆಗಷ್ಟೇ ಸಹಿ ಬಿದ್ದಿತ್ತು. ಹಿಂದಿನ ವರ್ಷದ ಡಿಸೆಂಬರಿನಲ್ಲಿ ದೊಡ್ಡ ಬಹುಮತದೊಂದಿಗೆ ಆರಿಸಿ ಬಂದ ಬೋರಿಸ್ ಜಾನ್ಸನ್ ರ ಸರಕಾರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆ ಈ ವರ್ಷದ ಜನವರಿ 31ರಂದು ಯುರೋಪಿನಿಂದ ಹೊರಬೀಳುವ ನಿರ್ಣಯಕ್ಕೆ ಅಂಗೀಕಾರ ಪಡೆದ ಗೆಲುವಲ್ಲಿತ್ತು. ಈ ದಿನದ ನೆನಪಿಗೆ ಸಂಭ್ರಮಾಚರಣೆ, ಪಟಾಕಿ ಪ್ರದರ್ಶನ, ನೆನಪಿನ ನಾಣ್ಯದ ಬಿಡುಗಡೆಗಳ ತಯಾರಿ ನಡೆಯುತ್ತಿತ್ತು.

ತನ್ನ ಪೂರ್ಣಪ್ರಮಾಣದ ನಾಯಕತ್ವದ ಮೊದಲ ಚುನಾವಣೆಯಲ್ಲಿ ಗೆದ್ದು ಆಗತಾನೆ ಅಧಿಕಾರಕ್ಕೆ ಬಂದು ಹೊಸ ಸಂಪುಟ ರಚನೆಯಲ್ಲಿ, ಹಿಂದಿನ ಅವಧಿಯಲ್ಲಿ ತಮ್ಮದೇ ಪಕ್ಷದ ಸರಕಾರದಲ್ಲಿದ್ದ ಕೆಲವು ಮಂತ್ರಿಸ್ಥಾನಗಳ ಬದಲಾಯಿಸುವಿಕೆಯಲ್ಲಿ ಲಂಡನ್ ಸಂಸತ್ತಿನಲ್ಲಿ ತಮ್ಮ ಹತೋಟಿಯನ್ನು ಬಿಗಿಗೊಳಿಸುವುದರಲ್ಲಿ ಪ್ರಧಾನಿ ಜಾನ್ಸನ್ ನಿರತರಾಗಿದ್ದರು. ಬ್ರೆಕ್ಸಿಟ್ ಯಶಸ್ಸಿನ ಆಚರಣೆ ನಡೆಯುತ್ತಿದ್ದ ದಿನವೇ ಬ್ರಿಟನ್ನಿನ ಮೊದಲ ಕೋವಿಡ್ ಸೋಂಕು ಕಂಡುಬಂದದ್ದು, ಆ ಸಮಯಕ್ಕೆ ಗಮನಾರ್ಹವಲ್ಲದ ಕಾಕತಾಳೀಯ ಸಂಗತಿಯಾಗಿದ್ದರೂ ನಂತರ ಸೃಷ್ಟಿಸಿರುವ ತೀವ್ರ ಜೀವಹಾನಿ ಆರ್ಥಿಕ ಸಂಧಿಗ್ಧತೆಯ ಹಿನ್ನೆಲೆಯಲ್ಲಿ ಬ್ರಿಟನ್ನಿನ ಕೋವಿಡ್ ಇತಿಹಾಸದ ಚಾರಿತ್ರಿಕ ಘಟನೆಯಾಗಿಯೂ ಮುಂದೆ ದಾಖಲಾಗಬಹುದು.

ಕೋವಿಡ್ ಕಂಡುಬಂದ ಮೊದಮೊದಲ ವಾರಗಳಲ್ಲಿ ಇತರ ಫ್ಲೂ ಗಳಂತೆಯೇ ಎಲ್ಲರಿಗೂ ಬಂದು ಹೋಗುವ ಕಾಯಿಲೆ ಇದು ಎಂದೂ ಹೆಚ್ಚಿನವರು ಸೋಂಕು ಪಡೆದು ಗುಣಮುಖರಾಗಿ “ಸಮುದಾಯ ರೋಗನಿರೋಧಕತೆ” ಬೆಳೆಯಲು ಅನುಕೂಲವಾಗುತ್ತದೆ ಎಂದೂ ಸರಕಾರ ಮತ್ತದರ ಸಲಹೆಗಾರರು ಹೇಳುತ್ತಿದ್ದರು. ಈ “ಹರ್ಡ್ ಇಮ್ಮ್ಯೂನಿಟಿ” ಸಿದ್ಧಾಂತ ಕೋವಿಡ್ -19 ನಂತಹ ಮಾರಕ ಸೋಂಕಿನ ಮಟ್ಟಿಗೆ ಬೇರೆ ಯಾವ ದೇಶಗಳ ವಿಜ್ಞಾನಿಗಳು ಆರೋಗ್ಯ ಸಲಹೆಗಾರರು ಪ್ರತಿಪಾದಿಸದಿದ್ದರೂ ಯು.ಕೆ ತನ್ನ ನಿಲುವಿನ ಬಗೆಗೆ ವಿಶ್ವಾಸದಿಂದಿತ್ತು. ಸೋಂಕಿನ ಹರಡುವಿಕೆಯ ಟೈಮ್ ಲೈನ್ ಹಾಗು ವೇಗದಲ್ಲಿ ಯು.ಕೆ.ಗಿಂತ ಮುಂದಿದ್ದ ಇಟಲಿ, ಫ್ರಾನ್ಸ್, ಸ್ಪೇನ್ ಗಳಲ್ಲಿ ಗಂಭೀರ ಪರಿಣಾಮಗಳು ಕಾಣಿಸಲಾರಂಭಿಸಿದಾಗ ಅಲ್ಲಿನ ಸರಕಾರಗಳು ತುರ್ತು ಕಟ್ಟುನಿಟ್ಟಿನ ಕ್ರಮ ನಿರ್ಬಂಧಗಳನ್ನು ಹೇರುತ್ತಿರುವಾಗ ತನ್ನ ಯೋಚನಾಕ್ರಮಗಳನ್ನು ಬದಲಿಸಲಾರಂಭಿಸಿ, ಸೂಕ್ತ ಪ್ರತಿತಂತ್ರದ ಹುಡುಕಾಟ ಆರಂಭಿಸಿತು.

ಮಾರ್ಚ್ ಎರಡನೆಯ ವಾರದವರೆಗೂ ಸರಕಾರದಿಂದ ಸ್ಪಷ್ಟ ಆದೇಶ ನಿಖರ ಮಾರ್ಗದರ್ಶನ ಇಲ್ಲದ ಜನರು ಎಂದಿನಂತೆ ಹಬ್ಬ, ಕ್ರೀಡೆಗಳಂತಹ ದೊಡ್ಡ ಮಟ್ಟದ ಭಾಗವಹಿಸುವಿಕೆ ಪ್ರವಾಸ ನಿತ್ಯದ ಕಚೇರಿ ಶಾಲೆ ಹೋಟೆಲು ಪಬ್ ಭೇಟಿಗಳನ್ನು ಮುಂದುವರೆಸುತ್ತಲೇ ಇದ್ದರು. ಸ್ವತಃ ಪ್ರಧಾನಿ ಜಾನ್ಸನ್ ಮತ್ತು ಅವರ ಆಪ್ತರು ಮಾರ್ಚ್ ಏಳರಂದು ಇಂಗ್ಲೆಂಡ್ ವೇಲ್ಸ್ ನಡುವಿನ ರಗ್ಬಿ ಮ್ಯಾಚ್ ನೋಡಲು ಹೋಗಿರುವುದು ಮುಂದೆ ಪ್ರಧಾನಿ ಹಾಗು ಇತರ ಮಂತ್ರಿಗಳು ಕೊರೊನ ಸೋಂಕಿಗೆ ಒಳಗಾಗಿರುವುದು ಇಡೀ ದೇಶವೇ ಗಂಭೀರ ಕಾಯಿಲೆಯ ಬಗೆಗಿನ ಉಗ್ರ ನಿರ್ಲಕ್ಷ್ಯದ ಹಾಗು ತಪ್ಪು ತಿಳುವಳಿಕೆಯ ಹಾದಿಯಲ್ಲಿ ಸಾಗಿದ್ದನ್ನು ಸೂಚಿಸುತ್ತದೆ. ಪರಿಸ್ಥಿತಿ ಕೈಮೀರಿದ್ದನ್ನು ಗಮನಿಸಿ ತಡವಾಗಿ ಎಚ್ಚೆತ್ತ ಸರಕಾರ ಮಾರ್ಚ್ ಕೊನೆಯ ವಾರದಲ್ಲಿ ಕಟ್ಟುನಿಟ್ಟಿನ ಸಾಮಾಜಿಕ ನಿರ್ಬಂಧಗಳನ್ನು ಜಾರಿಗೊಳಿಸಿತು. ಆರೋಗ್ಯ ವ್ಯವಸ್ಥೆ ಈ ಮಟ್ಟದ ಸಾಂಕ್ರಾಮಿಕ ಕಾಯಿಲೆಯನ್ನು ಎದುರಿಸಲು ಬೇಕಾಗುವ ಕೌಶಲ ಯೋಜನೆಗಳ ಕಡೆ ಗಮನಹರಿಸಲಾರಂಭಿಸಿತು. ನಿಧಾನಗತಿಯಲ್ಲಿ ದಿಕ್ಕು ತಪ್ಪಿ ಸಾಗುತ್ತಿದ್ದ ತಯಾರಿಗಳನ್ನು ಕ್ಷಿಪ್ರಗತಿಯಲ್ಲಿ ಮುನ್ನಡೆಸುವ ಯತ್ನ ಮಾಡಲಾಯಿತು.

ದೀರ್ಘಾಯುಷಿಗಳು ವೃದ್ಧರು ಹೆಚ್ಚಿರುವ ದೇಶಗಳಲ್ಲೊಂದಾದ ಬ್ರಿಟನ್ನಿನಲ್ಲಿ ಕೊರೊನದಂತಹ ಸಾಂಕ್ರಾಮಿಕ ಕಾಯಿಲೆ ಬಂದರೆ ಸಾವಿನ ಸಂಖ್ಯೆ ಕಡಿಮೆ ಇರುವುದಂತೂ ಸಾಧ್ಯವಿಲ್ಲ ಎನ್ನುವುದು ಅರೋಗ್ಯ ಸಲಹೆಗಾರರಿಗೂ ಸರಕಾರಕ್ಕೂ ತಿಳಿಯದ ವಿಚಾರ ಇರಲಿಕ್ಕಿಲ್ಲ. ಇಪ್ಪತ್ತು ಸಾವಿರಕ್ಕಿಂತ ಕಡಿಮೆ ಜನರು ಮೃತರಾದರೆ ತಾವು ಪರಿಸ್ಥಿತಿಯನ್ನು ಸಮತೋಲನದಲ್ಲಿ ನಿಭಾಯಿಸಿದಂತೆಯೇ ಎಂದು ಹೇಳುತ್ತಿದ್ದ ಆರೋಗ್ಯ ಸಲಹೆಗಾರರ ಹಾಗು ಸರಕಾರದ ಮಾತಿನ ಗೂಡಾರ್ಥ, ಈ ಕಾಯಿಲೆಯ ಸೋಕಿನಿಂದ ಸಾಯುವ ಸಾಧ್ಯತೆ ಹೆಚ್ಚಿರುವ ವೃದ್ಧರನ್ನು ಬದುಕಿಸುವ ಪ್ರಯಾಸ ಪ್ರಯತ್ನ ಬೇಡ ಎಂದೇ ಇದ್ದಿತ್ತೇನೋ.

ಜೀವ ಮತ್ತು ಜೀವನಗಳನ್ನು ಮೂಲಭೂತವಾದ ಹಕ್ಕು ಎಂದು ತಿಳಿಯುವ ದೇಶದಲ್ಲಿ ಅಸಾಧಾರಣವಾದ ಅಸಾಮಾನ್ಯವಾದ ಆರೋಗ್ಯ ಹಾಗು ಆರ್ಥಿಕ ಬಿಕ್ಕಟ್ಟುಗಳು ಒಟ್ಟೊಟ್ಟಿಗೆ ಎದುರಾದಾಗ ದೇಶದ ಆರ್ಥಿಕ ಪುನರ್ಚೈತನ್ಯಕ್ಕೆ ತೆಗೆದುಕೊಂಡ ಹೆಜ್ಜೆಗಳು ಮಾಡಿದ ಸಕಾಲಿಕ ಪೂರ್ವತಯಾರಿಗಳು ಆರೋಗ್ಯದ ಹೋರಾಟದಲ್ಲಿ ಮಾಡದಿದ್ದುದು ದೊಡ್ಡ ಪ್ರಮಾಣದ ಜೀವಹಾನಿಗೆ ಕಾರಣ ಎಂದು ಊಹಿಸಲಾಗುತ್ತದೆ. ಹೇಗೋ ಮಾಡಿ ಇಪ್ಪತ್ತು ಸಾವಿರಕ್ಕಿಂತ ಕಡಿಮೆ ಜನರು ಮೃತರಾದರೆ ತಾವು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಿದೆವು ಎನ್ನುವ ಸಡಿಲ ದುರ್ಬಲ ನಿಲುವಿನಲ್ಲೇ ಈ ಯುದ್ಧಾರಂಭ ಮಾಡಿದವರು ಇದೀಗ ಒಟ್ಟು ಸಾವಿನ ಸಂಖ್ಯೆ ನಲವತ್ತು ಐವತ್ತು ಸಾವಿರಗಳನ್ನು ತಲುಪಬಹುದು ದಾಟಬಹುದು ಎನ್ನುವ ಹೊಸ ಲೆಕ್ಕಾಚಾರ ಹುಟ್ಟಿ ಹರಿದಾಡುವಾಗ ನಂಬಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ದುರ್ಗಮ ಹಾದಿಯ ವಾಹನ ಪ್ರಯಾಣದಲ್ಲಿ ಚಾಲಕನ ಅರೆಕ್ಷಣದ ನಿದ್ದೆಯ ಮಂಪರಿನಿಂದಲೋ ಮೈಮರೆಯುವಿಕೆಯಿಂದಲೋ ಸಂಭವಿಸಬಹುದಾದ ಅಪಘಾತದ ಕೊನೆಯ ಕ್ಷಣಗಳಲ್ಲಿ ಅನಾಹುತ ತಪ್ಪಿಸಲು ನಡೆಸುವ ಹವಣಿಕೆ ಪ್ರಯತ್ನ ಪ್ರಯೋಗಗಳಂತೆಯೇ ಇಲ್ಲಿನ ಈಗಿನ ಸ್ಥಿತಿ. ಹಾಗಾಗಿಯೇ ಜೀವಹಾನಿ, ಹೊಸ ಆಸ್ಪತ್ರೆಗಳು, ಆರೋಗ್ಯ ಸಿಬ್ಬಂದಿಗಳು, ಸುರಕ್ಷಾ ಪರಿಕರಗಳು, ಕೋವಿಡ್ ತಪಾಸಣೆಗಳು ಲಭ್ಯತೆ ಅಲಭ್ಯತೆಗಳು ನಿತ್ಯದ ಚರ್ಚೆಯ ವಿನಿಮಯದ ವಸ್ತುಗಳಾಗಿವೆ.

ಆರೋಗ್ಯದ ಬಿಕ್ಕಟ್ಟಿನ ವೇಗ ಆಳ ಪರಿಣಾಮಗಳನ್ನು ಅಂದಾಜಿಸುವಲ್ಲಿ ಎಡವಿದ್ದು, ಸರಿಯಾದ ಸಮಯಕ್ಕೆ ಸಮರ್ಪಕವಾದ ಪೂರ್ವತಯಾರಿ ಮಾಡುವಲ್ಲಿನ ವೈಫಲ್ಯಗಳು ತೀವ್ರ ಟೀಕೆಯನ್ನು ಎದುರಿಸುತ್ತಿವೆ. ಮತ್ತೆ ಹೀಗೆ ಸಂಕಟ ಟೀಕೆ ವೈಫಲ್ಯ ಸವಾಲುಗಳ ಸದ್ದುಗಳೇ ಹೆಚ್ಚುಹೆಚ್ಚು ಕೇಳಿಸುವ ದಿನಗಳ ನಡುವೆಯೇ ಎಂದಿನಂತಹ ಇನ್ನೊಂದು ದಿನ ಎದುರು ನಿಂತಿದೆ. ಮತ್ತೆ ಈ ದಿನ ಎಂದಿನಂತಾಗಬಾರದೆಂಬ ಇರಾದೆಯಲ್ಲಿ ಸಂಜೆ ಎಂಟಕ್ಕೆ ಕೃತಜ್ಞತಾ ಕಾರ್ಯಕ್ರಮ ಮತ್ತೆ ನಡೆಯಲಿದೆ.

ಕಳೆದ ಗುರುವಾರದಂತೆ ಇಂದೂ ಒಂದೆರಡು ನಿಮಿಷಗಳ ಚಪ್ಪಾಳೆ ನೆನಕೆಗಳು, ನಂತರ ಒಂದಿಷ್ಟು ಗುಲ್ಲು ಮಾತು ಗೌಜು ನಗೆಗಳು ಇಲ್ಲೀಗ ತುಂಬಿಕೊಳ್ಳಬಹುದು. ನಮ್ಮ ಖಾಲಿ ಬೀದಿಯೂ ಒಂದಷ್ಟು ಹೊತ್ತು ಉತ್ಸಾಹ ಉಲ್ಲಾಸದಲ್ಲಿ ಮೈಮರೆಯುಬಹುದು. ಮತ್ತೆ ಕೆಲ ಕ್ಷಣಗಳ ಸಂಪ್ರದಾಯ ಮುಗಿದು ಭಾಗವಹಿಸಿದವರೆಲ್ಲರೂ ಒಳಬಂದು ಬಾಗಿಲು ಹಾಕಿಕೊಂಡು ತಮ್ಮತಮ್ಮ ಲೌಕಿಕ ಅಲೌಕಿಕಗಳಲ್ಲಿ ಲೀನರಾದ ಮೇಲೆ ಆಗಷ್ಟೇ, ಗುರುವಾರ ಸಂಜೆಯ ಎಂಟುಗಂಟೆಯ ಆಸುಪಾಸಿಗೆ ಹುಟ್ಟಿದ ಸಾಂಕೇತಿಕ ಕೃತಜ್ಞತೆ ಸ್ಮರಣೆಗಳು ಹಾಗು ನಮ್ಮಿಂದ ಚಪ್ಪಾಳೆಯಂತಹ ಅತಿಸಣ್ಣ ಧನ್ಯವಾದಕ್ಕೆ ಪಾತ್ರರಾದವರ ವಾಸ್ತವದ ಹೋರಾಟ ಸವಾಲುಗಳು ಎದುರುಬದುರಾಗಿ ನಿಲ್ಲಬಹುದು. ಕೈಯ ಸಪ್ಪಳ ವಸ್ತುಸ್ಥಿತಿಯ ಸದ್ದುಗಳು ಮುಖಾಮುಖಿಯಾಗಿ ಚರ್ಚೆ ತರ್ಕಗಳಲ್ಲಿ ತೊಡಗಬಹುದು.