೧. ಕವಿತೆ

ಅದೊಂದು ದಿನ
ಕವಿತೆ ನನ್ನ ಹುಡುಕಿ ಬಂತು
ಇಂದಿಗೂ ತಿಳಿದಿಲ್ಲ
ಎಲ್ಲಿಂದ ಬಂತು?

ಶಿಶಿರದ ತಂಪಿನಿಂದಲೋ
ನದಿಯ ಹರಿವಿನಿಂದಲೋ
ಎಲ್ಲಿ, ಹೇಗೆ, ಯಾಕೆ ಬಂತು?

ಶಬ್ದವಿರಲಿಲ್ಲ, ಪದಗಳಿರಲಿಲ್ಲ
ಮೌನವೂ ಅಲ್ಲ!
ನಡುಬೀದಿಯಲಿ ಏಕಾಂಗಿ ನಿಂತು
ನನ್ನ ಕರೆಯಿತು!

ನೀರವ ರಾತ್ರಿಯ ಪ್ರಹರದಂತೆ
ಉರಿವ ಜ್ವಾಲೆಯ ಕುರುಹಿನಂತೆ
ಥಟ್ಟನೆ ನನ್ನೆದುರು ಹರಿದುಬಂತು

ನನ್ನಾತ್ಮದ ಬಾಗಿಲನು ತಟ್ಟಿತು

ಮಾತು ಬಾರದಾಯ್ತು
ಹೆಸರು ಮರೆತುಹೋಯ್ತು
ಮೈಯ್ಯ ತಾಪವೇರಿ ನಡುಗಿದೆ
ಉರಿವ ಕುರುಹ ಅರಿಯತೊಡಗಿದೆ
ನನ್ನ ಮೊದಲ ಸಾಲು ಬರೆದೆ

ಅಸ್ಪಷ್ಟ ಸಾಲು,
ಅರ್ಥಗಳ ಹಂಗಿಲ್ಲದ, ಶುದ್ಧ ಮೂರ್ಖತನದ
ಏನೂ ತಿಳಿಯೆನೆಂಬ ಮುಗ್ಧ ಅರಿವಿನ ಸಾಲು

ಅರೆ! ಏನಾಶ್ಚರ್ಯ!

ಸ್ವರ್ಗ ನನ್ನೆದುರು ತೆರೆದುಕೊಂಡಿತು!
ಗ್ರಹ, ತಾರೆಗಳು ಉರುಳತೊಡಗಿದವು
ಕತ್ತಲೆಯು ಕರಗತೊಡಗಿತು
ನಿಗೂಢ ಶರಗಳು, ಬೆಳಕು, ಹೂಗಳು
ಭೂಮಿಗೆ ಸುರಿಯತೊಡಗಿದವು

ತಾರೆಗಳ ತೋಟದಲಿ ತೇಲಿದೆ ನಾನು
ಹೃದಯ ಹಗುರಾಗಿ ಗಾಳಿಗೂಡಿತು
ಹೀಗೆ, ಹೀಗೆ……
ಅದೊಂದು ದಿನ ಕವಿತೆ ಬಂತು

೨. ನಿನ್ನ ನಗು

ನನ್ನ ಅನ್ನವನ್ನು ಕಸಿದುಕೋ
ಬೇಕಾದರೆ ಗಾಳಿಯನ್ನೂ
ಆದರೆ
ನನ್ನೊಂದಿಗಿರುವ
ನಿನ್ನ ನಗುವನ್ನು ಮಾತ್ರ ಕಸಿಯದಿರು

ಗುಲಾಬಿಯನ್ನು ನನ್ನಿಂದ ದೂರಾಗಿಸಬೇಡ
ನೀನದನ್ನು ಚಕ್ಕೆಂದು ಚಿವುಟಿದಾಗ
ಖುಶಿಯ ಚಿಲುಮೆ ಚಿಮ್ಮುವುದು
ನಿನ್ನೊಳಗೊಂದು ಬೆಳ್ಳಿಯ ಅಲೆ ಹೊಮ್ಮುವುದು

ಹೋರಾಟವೇ ನನ್ನ ಜೀವನವಾಗಿದೆ
ದಿನವೂ ಸಂಜೆ ದಣಿದು ಮರಳುತ್ತೇನೆ
ಮತ್ತದೇ ಜಾಗ, ಬದಲಾಗದು ಏನೂ
ಆದರೆ,
ನಿನ್ನ ನಗೆ ನನ್ನನ್ನು ಆಗಸದಲ್ಲಿ ತೇಲಿಸುವುದು
ಜೀವನದ ಎಲ್ಲ ಬಾಗಿಲುಗಳನ್ನೂ ತೆರೆದು

ನನ್ನ ಜೀವವೇ,
ಕಪ್ಪುಗತ್ತಲೆಯ ಕ್ಷಣಗಳಲ್ಲಿ ನಿನ್ನ ನಗುವೇ ಬೆಳಕು
ನನ್ನ ರಕ್ತದ ಕಲೆಗಳು ಬೀದಿಯ ಕಲ್ಲುಗಳಿಗಂಟಿವೆ
ನೀನದನು ಕಂಡು ನಕ್ಕುಬಿಡು ಒಮ್ಮೆ
ನಿನ್ನ ನಗು ನನ್ನ ಕೈಯ್ಯ ಹೊಸ ಖಡ್ಗ!
ಶರತ್ಕಾಲದಲಿ ನಿನ್ನ ನಗು
ಸಾಗರದ ಅಲೆಗಳ ಬೆಳ್ನೊರೆಯಂತೆ ಹೆಚ್ಚುವುದು
ಓ ನನ್ನ ಜೀವವೇ,
ವಸಂತದ ನಿನ್ನ ನಗು ನಾ ಬಯಸುವ ಹೂವಿನಂತಿರುವುದು
ನೀಲಿ ಹೂ, ಕೆಂಪು ಗುಲಾಬಿ
ನನ್ನ ದೇಶವನು ಮತ್ತೆ ಅನುರಣಿಸುವುದು

ನಕ್ಕುಬಿಡು ನೀನು, ಹಗಲು, ರಾತ್ರಿ
ಚಂದ್ರನವರೆಗೂ….
ದ್ವೀಪದ ಬೀದಿಯ ತಿರುವುಗಳಲ್ಲಿ
ಕಣ್ತೆರೆದರೂ, ಕಣ್ಮುಚ್ಚಿದರೂ…..
ಹೋದಲ್ಲಿ, ಬಂದಲ್ಲಿ…
ನಕ್ಕುಬಿಡು ನೀನು
ತೆಗೆದುಕೋ ನನ್ನ ಅನ್ನವನ್ನು, ನೀರನ್ನು,
ಗಾಳಿಯನ್ನು, ಬೆಳಕನ್ನು, ಎಲ್ಲವನ್ನೂ….
ಆದರೆ, ನಿನ್ನ ನಗುವನ್ನಲ್ಲ
ಆ ನಗುವಿಲ್ಲದೇ ನನಗೆ ಜೀವವಿಲ್ಲ