Advertisement
ಸುಧಾ ಆಡುಕಳ ಬರೆದ ಈ ಭಾನುವಾರದ ಕತೆ “ಆರೂವರೆ ಅಡಿಯ ಮನುಷ್ಯ”

ಸುಧಾ ಆಡುಕಳ ಬರೆದ ಈ ಭಾನುವಾರದ ಕತೆ “ಆರೂವರೆ ಅಡಿಯ ಮನುಷ್ಯ”

ನಾನು ಗುರುವೆಂದು ಭಾವಿಸಿದ ಫುಲೆ ದಂಪತಿಗಳು ಹೇಳಿದ್ದೂ ಇದೇ ಮಾತುಗಳನ್ನು. ಪುಟ್ಟ ಬಾಲಕಿಯರಿಂದ ಹಿಡಿದು, ಮದುವೆಯಾಗಿ ವಿಧವೆಯರಾದ ಹೆಣ್ಣುಗಳವರೆಗೆ ಎಲ್ಲರ ಕೈಯ್ಯಲ್ಲಿಯೂ ಅಕ್ಷರದ ದೀವಿಗೆಯನ್ನು ಹಿಡಿಸಬೇಕೆಂದು ಅವರು ಶ್ರಮಿಸಿದ ಮಾರ್ಗ ನನ್ನೆದುರು ತೆರೆದುಕೊಂಡಿತ್ತು. ಅವರು ಹುಟ್ಟುಹಾಕಿದ ಅರಿವಿನ ಸಸಿಯಿಂದು ಆರೈಕೆಯಿಲ್ಲದೇ ಸೊರಗಿ ಸಾಯುವ ಸ್ಥಿತಿಯಲ್ಲಿತ್ತು. ವಾಸ್ತವ ಸತ್ಯವನ್ನರಿಯಲು ನಾನು ರಾಜ್ಯದ ತುಂಬೆಲ್ಲ ಸಂಚರಿಸತೊಡಗಿದೆ. ಶಾಲೆಗೆ ಕಾಲಿಡುವ ಮೊದಲೇ ಹೆಣ್ಣುಮಕ್ಕಳ ಕೊರಳಲ್ಲಿ ತಾಳಿಯ ಭಾರ ನೇತಾಡುತ್ತಿತ್ತು. ಪುಟ್ಟ ವಿಧವೆಯರ ನಿಟ್ಟುಸಿರು ಪ್ರತಿ ಊರನ್ನೂ ಇನ್ನಿಲ್ಲದಂತೆ ಆವರಿಸಿಬಿಟ್ಟಿತ್ತು.
ಸುಧಾ ಆಡುಕಳ ಬರೆದ ಕತೆ “ಆರೂವರೆ ಅಡಿಯ ಮನುಷ್ಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಹಬ್ಬಿರುವ ಹಸಿರಿನ ರಾಶಿ, ಕಾಡಿನ ಹೂಗಳನ್ನು ಹಾದು ಬರುವ ಹಿತವಾದ ತಂಗಾಳಿ, ಆಗಸವನ್ನು ಚುಂಬಿಸುವಂತೆ ಎತ್ತರಕ್ಕೆ ಚಾಚಿರುವ ಗಿರಿಶಿಖರಗಳು, ಜನದಟ್ಟಣೆಯಿಲ್ಲದ ಪ್ರಶಾಂತವಾದ ವಾತಾವರಣ. ರಾಣಿ ಲಕ್ಷ್ಮಿಬಾಯಿಯ  ಒತ್ತಾಯವಿಲ್ಲದಿದ್ದರೆ ನಾನಿಲ್ಲಿಗೆ ಬರುತ್ತಲೇ ಇರಲಿಲ್ಲ. “ಸುತ್ತಲಿನ ಎಲ್ಲ ರಾಜ್ಯಗಳ ಕುಸ್ತಿಪಟುಗಳನ್ನು ಕುಶಲ ಪಟ್ಟುಗಳಿಂದ ಸೋಲಿಸಿದ ಅಸಮ ಸಾಹಸಿಗಳು ನೀವು. ರಾಜಕಾರಣದ ಮೂಸೆಯಲ್ಲಿ ಸಿಕ್ಕು ಗೆದ್ದಲು ಹಿಡಿದ ಮರದಂತೆ ಒಳಗೊಳಗೆ ನಿತ್ರಾಣಗೊಂಡಿರುವಿರಿ. ಅರಮನೆಯಲ್ಲಿ ಹೊತ್ತು ಹೊತ್ತಿಗೆ ತಯಾರಾಗುವ ಪಕ್ವಾನ್ನಗಳಿಂದ ದೇಹಕ್ಕೇನೋ ಪೋಷಣೆ ದೊರೆಯುವುದು. ಸದಾ ರಾಜಕಾರಣದಲ್ಲಿ ವ್ಯಸ್ತವಾಗಿರುವ ನಿಮ್ಮ ಮನಸ್ಸಿಗೂ ಚೂರು ಬಿಡುವು ಬೇಕು. ಕೆಲವು ದಿನಗಳ ವಿಶ್ರಾಂತಿಗಾಗಿ ನಮ್ಮ ಪನ್ಹಾಲದ ಅರಮನೆಗೆ ಹೋಗಿಬನ್ನಿ” ಎಂದು ಒತ್ತಾಯವಾಗಿ ನನ್ನನ್ನಿಲ್ಲಿಗೆ ಕಳಿಸಿದ್ದಳು. ಮಗಳು ರಾಧಾಬಾಯಿಯ ಮದುವೆಯ ತಯಾರಿಯಲ್ಲದಿದ್ದರೆ ಅವಳೂ ನನ್ನೊಂದಿಗೆ ಬರುತ್ತಿದ್ದಳು. ಕುಸ್ತಿಯ ಕಣವನ್ನು ಹೊರತುಪಡಿಸಿದರೆ ನಾನು ಅತಿಯಾಗಿ ಇಷ್ಟಪಡುವ ತಾಣವೆಂದರೆ  ಪ್ರಕೃತಿಯ ನಡುವಿನ ಮೌನ. ಇದನ್ನು ಅರಿತ ನನ್ನ ಜತೆಗಾರರು ಬೆಟ್ಟದ ಮೌನವನ್ನು ಕಲಕದೇ ನನ್ನನ್ನು ಪೊರೆಯುತ್ತಿದ್ದಾರೆ.

ಎಲ್ಲೆಯಿಲ್ಲದೇ ಚಾಚಿಕೊಂಡಿರುವ ನೀಲಿ ಬಾನಿನಡಿಯಲ್ಲಿ ಕುಳಿತು ಕಣ್ಮುಚ್ಚಿದರೆ ಆ ನೀಲಿ ಕಣ್ಣಿನ ಹುಡುಗನೇ ನೆನಪಾಗುತ್ತಿದ್ದಾನೆ. ಹೆಸರಿಗೆ ತಕ್ಕಂತೆ ಭೀಮನೇ ಅವನು. ಗುಂಡಾದ ಮುಖ, ಎತ್ತರವಾದ ನಿಲುವು, ತಿದ್ದಿ ತೀಡಿದ ಗುಂಗುರುಗೂದಲು, ಶಿಸ್ತಾಗಿ ಧರಿಸಿದ ಸೂಟು- ಬೂಟು, ಖಚಿತವಾದ ಮಾತು, ಇಷ್ಟೆಲ್ಲ ವರ್ಷಗಳಿಂದ ನಾನು ನೋಡಿದ ಕನಸೊಂದು ಮೂರ್ತರೂಪಗೊಂಡು ಎದುರು ಬಂದಂತಹ ವ್ಯಕ್ತಿತ್ವ. ನನ್ನ ಆಸ್ಥಾನದಲ್ಲಿರುವ ದತ್ತೋಬಾ ಪವಾರ್ ಮತ್ತು ದಿತ್ತೋಬಾ ದಳವಿಯವರು ಮೊದಲ ಬಾರಿಗೆ ಅವನನ್ನು ನನ್ನೆದುರು ಕರೆತಂದಾಗ ನಮ್ಮದೇ ಸೀಮೆಯ ಮಹಾರರ ಹುಡುಗನೊಬ್ಬ ವಿದೇಶದಲ್ಲಿ ಓದಿ ಬಂದ ಕತೆಯನ್ನು ಕೇಳಿ ನಾನು ದಂಗಾಗಿದ್ದೆ. ಇಲ್ಲಿಯವರೆಗೆ ಕೊಲ್ಲಾಪುರ ಸಾಮ್ರಾಜ್ಯದಲ್ಲಿ ಜಾರಿಗೆ ತಂದ ಎಲ್ಲ ಸುಧಾರಣಾ ಕಾರ್ಯಗಳ ಬಗ್ಗೆ ನಾವಿಬ್ಬರೂ ದಿನಗಟ್ಟಲೆ ಚರ್ಚಿಸಿದೆವು. ಕೊನೆಗೂ ನನ್ನ ವಿಚಾರಗಳನ್ನೆಲ್ಲ ಅರ್ಥಮಾಡಿಕೊಳ್ಳಬಲ್ಲ, ಅವುಗಳ ದೂರಗಾಮಿ ಪರಿಣಾಮಗಳನ್ನು ಊಹಿಸಬಲ್ಲ ಮತ್ತು ಮುಂದಿನ ಯೋಜನೆಗಳಿಗೆ ಹೆಗಲು ನೀಡಬಲ್ಲ ಮುಂದಾಳುವೊಬ್ಬ ದೊರೆತ ಸಮಾಧಾನವೊಂದು ನನಗೆ ದಕ್ಕಿತು. ನಾನು ಪೋಷಿಸಿಕೊಂಡು ಬಂದ ಫುಲೆ ಮಹಾತ್ಮರ ಸತ್ಯಶೋಧಕ ಸಮಾಜವನ್ನು ಮುನ್ನಡೆಸಬಲ್ಲ ನೇತಾರನೊಬ್ಬನ ಹೆಗಲು ನನಗೆ ದೊರಕಿದಂತಾಯಿತು. ನಾವಿಬ್ಬರೂ ಒಟ್ಟಿಗೆ ಮಾಡಬಹುದಾದ ಅನೇಕ ಯೋಜನೆಗಳ ಬಗ್ಗೆ ದಿನಗಟ್ಟಲೆ ಚರ್ಚಿಸಿದೆವು. ಶತಮಾನಗಳಿಂದ ದನಿಯಿಲ್ಲದವರ ಮಾತುಗಳಿಗೆ ಅಕ್ಷರರೂಪ ನೀಡುವ ಪತ್ರಿಕೆಯೊಂದನ್ನು ಸ್ಥಾಪಿಸುವ ಅವನ ಯೋಜನೆಗೆ ಹಣಕಾಸಿನ ನೆರವು ನೀಡುವುದರೊಂದಿಗೆ ನಮ್ಮ ಮಾತುಕತೆ ಮುಗಿಯಿತು. ಮುಂದಿನ ತಿಂಗಳಿನಿಂದ ‘ಮೂಕನಾಯಕ’ ಎಂಬ ದಿನಪತ್ರಿಕೆಯೊಂದು ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಮರಾಠಿ ಭಾಷೆಯಲ್ಲಿ ಪ್ರಕಟವಾಗುತ್ತದೆ. ಇನ್ನೂ ಎಷ್ಟೊಂದು ಯೋಜನೆಗಳ ಬಗ್ಗೆ ಅವನೊಂದಿಗೆ ಮಾತನಾಡಬೇಕಿದೆ. ಅಂದು ನನ್ನೊಂದಿಗಿನ ಮಾತುಕತೆಯನ್ನು ಮುಗಿಸಿ,  ಅಷ್ಟು ದೂರ ಹೋದವನು ಮರಳಿ ಬಂದು ಮೆಲುದನಿಯಲ್ಲಿ ಪಿಸುಗುಟ್ಟಿದನಲ್ಲ, “ನೀವು ನಿಜಕ್ಕೂ ಎತ್ತರದ ಮನುಷ್ಯ. ಭೌತಿಕವಾಗಿ ಮಾತ್ರವಲ್ಲ, ಭವಿಷ್ಯದ ಯೋಜನೆಯಲ್ಲಿಯೂ!”  ಆ ಯುವಕನ ಪ್ರಾಮಾಣಿಕ ಮಾತುಗಳಿಗೆ ನಾನು ಮುಗುಳ್ನಕ್ಕಿದ್ದೆ. ದತ್ತೋಬಾ ಅವನ ಹಿನ್ನೆಲೆಗಳನ್ನೆಲ್ಲ ವಿವರವಾಗಿ ನನಗೆ ತಿಳಿಸಿದ. ಕಡುಬಡತನದಲ್ಲಿಯೂ ಅಕ್ಷರಗಳ ನಾವೆಯನ್ನೇರಿ ವಿದೇಶಗಳವರೆಗೂ ಹೋಗಿ ಬ್ಯಾರಿಸ್ಟರ್ ಪದವಿಯನ್ನು ಪಡೆದು ಬಂದಿದ್ದಾನೆ. ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಎಷ್ಟೊಂದು ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾನೆ. ಅವನ ಓದಿನ ವೇಗವನ್ನು, ಆಳವನ್ನು ನೋಡಿದರೆ ಮುಂದೊಂದು ದಿನ ಇಡಿಯ ಪ್ರಪಂಚವೇ ನಿಬ್ಬೆರಗಾಗುವ ಸಾಧನೆಯನ್ನು ಮಾಡುತ್ತಾನೆ ಅನಿಸುತ್ತದೆ. ನಾಳೆ ಮತ್ತೆ ನನ್ನನ್ನು ಭೇಟಿಯಾಗಲು ಇಲ್ಲಿಗೇ ಬರಲು ಹೇಳಿಕಳಿಸುತ್ತೇನೆ. ನನ್ನ ಇನ್ನೊಂದಿಷ್ಟು ಕನಸುಗಳನ್ನು ಅವನಿಗೆ ವರ್ಗಾಯಿಸಬೇಕಿದೆ.

ಈ ನೀಲಿ ಬಾನು, ನೀಲಿ ಸಮುದ್ರವನ್ನು ಕಂಡಾಗಲೆಲ್ಲ ನಾನು ಭಾವಪರವಶನಾಗುತ್ತೇನೆ.  ಅಂದು  ರಾಜ ಎಡ್‌ವರ್ಡ ಮತ್ತು ರಾಣಿ ಅಲೆಕ್ಸಾಂಡ್ರಿಯಾ ಅವರ ವಿವಾಹ ಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗಲು ಇಂಗ್ಲೆಂಡಿಗೆ ಹೋಗುವ ಹಡಗನ್ನೇರಿ ಕುಳಿತಾಗ  ನನ್ನನ್ನು ಆವರಿಸಿದ್ದು ಇದೇ ನೀಲಿ ಬಾನು ಮತ್ತು ಬಾನಿನ ಬಣ್ಣವನ್ನು ತನ್ನಲ್ಲಿ ಲೀನವಾಗಿಸಿಕೊಂಡ ಅಗಾಧ ಕಡಲು. ನೀರಿನಲ್ಲಿ ತೇಲುವ ಆ ದಿನಗಳನ್ನು ರಾಜ್ಯದ ಅಭಿವೃದ್ಧಿಗಾಗಿ ಮಾಡಬಹುದಾದ ನೀಲಿ ನಕಾಶೆಯ ತಯಾರಿಗೆಂದು ಉಪಯೋಗಿಸಿದ್ದೆ. ಕರಿಕಾಲ ಚೋಳನ ಕಾಲದಲ್ಲಿ ಕಟ್ಟಿಸಿದ್ದ ನೀರಿನ ಒಡ್ಡೊಂದರ ಕುರಿತು ಅಧ್ಯಯನ ಮಾಡಿದೆ. ಪಾಂಡುರಂಗರಾವ್ ಶಿಂಧೆಯವರು  ಅಂಥದೊಂದು ನೀರಿನ ಕಟ್ಟೆಯನ್ನು ಭೋಗಾವತಿ ನದಿಗೆ ಕಟ್ಟುವ ಯೋಜನೆಯನ್ನು ನನ್ನ ಮುಂದಿಟ್ಟಿದ್ದರಾದರೂ ಅದರ ಬಗ್ಗೆ ಯೋಚಿಸುವಷ್ಟು ವಿರಾಮವನ್ನು ರಾಜಕಾರಣ ನನಗೆ ನೀಡಿರಲಿಲ್ಲ. ಈ ಯೋಜನೆಯಿಂದ ಇಡಿಯ ನಮ್ಮ ಕೊಲ್ಲಾಪುರ ಸಾಮ್ರಾಜ್ಯ ನೀರಿನ ವಿಷಯದಲ್ಲಿ ಸ್ವಾವಲಂಭಿಯಾಗುತ್ತಿತ್ತು.  ಕಬ್ಬಿನ ಬೆಳೆಯನ್ನೇ  ನಂಬಿರುವ ನಮ್ಮೂರ ರೈತರು ಮಳೆಗಾಗಿ ಪ್ರಾರ್ಥಿಸುತ್ತ ಪರದಾಡುವ ದೃಶ್ಯ ನನ್ನ ನೆನಪಿಗೆ ಬಂತು. ಕೋಸಾಂಬಿಯಲ್ಲಿ ನಡೆದ ನೀರಿನ ವ್ಯಾಜ್ಯವೊಂದು ಲಿಚ್ಛವಿಯ ರಾಜಕುಮಾರ ಸಿದ್ಧಾರ್ಥನನ್ನು ಬುದ್ಧನನ್ನಾಗಿ  ಮಾಡಿದ ಐತಿಹಾಸಿಕ ಸತ್ಯವೊಂದು ನನ್ನೆದುರು ನಿಂತಿತ್ತು. ನೀರಿನ ಸ್ವಾವಲಂಬಿತನ ಸುತ್ತಲಿನ ರಾಜ್ಯಗಳೊಂದಿಗಿನ  ಅನೇಕ ವ್ಯಾಜ್ಯಗಳನ್ನು ಇಲ್ಲವಾಗಿಸುವುದೆಂಬ ವಾಸ್ತವದ ಅರಿವು ನನಗಿತ್ತು. ಪಟ್ಟಾಭಿಷೇಕದ ಸವಿನೆನಪಿಗಾಗಿ ಲಂಡನ್ನಿನ ಅರಮನೆಯು ಕೊಡಮಾಡಿದ ಸ್ವರ್ಣ ಪದಕ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು ನೀಡಿದ ನಾಗರಿಕ ಕಾನೂನು ಗೌರವ ಪದವಿಯನ್ನು ಸ್ವೀಕರಿಸುವಾಗಲೂ ನೀರಿನ ಒಡ್ಡನ್ನು ನಿರ್ಮಿಸುವ ಕನಸೇ ನನ್ನೊಳಹೊರಗನ್ನೆಲ್ಲ ತುಂಬಿತ್ತು. ಇದೇ ಗುಂಗಿನಲ್ಲಿ ಭವ್ಯವಾದ ಅರಮನೆಯಲ್ಲಿ ಓಡಾಡುತ್ತಿದ್ದ ನನ್ನನ್ನು ಮತ್ತದೇ ಪಿಸುಮಾತುಗಳು ಎಚ್ಚರಗೊಳಿಸಿದ್ದವು, “ಅದೆಷ್ಟು ಎತ್ತರದ ಮನುಷ್ಯ ಇವನು!”

ಹೌದು, ನಾನು ಆರೂವರೆ ಅಡಿ ಎತ್ತರವಿರುವ ಅಪರೂಪದ ಮನುಷ್ಯ. ಬಾಲ್ಯದಿಂದಲೂ ಎಲ್ಲಿಗೆ ಹೋದರೂ ಎತ್ತರದ ಬಗೆಗಿನ ಅಚ್ಚರಿಯ ನೋಟ ನನ್ನ ಸುತ್ತಲೂ ಸುಳಿದಾಡುತ್ತಲೇ ಇರುವುದು. ಜನಸಾಮಾನ್ಯರಿಗಿಲ್ಲದ ಈ ಎತ್ತರ ನನ್ನನ್ನು ಸಾಮಾನ್ಯತನದಿಂದ  ಎತ್ತರಕ್ಕೆ ಏರಿಸಿರುವುದಂತೂ ಸತ್ಯ. ಇಲ್ಲವಾದರೆ ಇಂದಿಗೂ ನಾನು ಯಶವಂತರಾವ್ ಘಾಟ್ಗೆಯಾಗಿಯೇ ಇರುತ್ತಿದ್ದೆನೇನೊ? ‘ಛತ್ರಪತಿ ಶಾಹೂ ಮಹಾರಾಜ’  ಎಂದು ಜಗತ್ತು ನನ್ನನ್ನು ಗುರುತಿಸುತ್ತಿರಲಿಲ್ಲ. ಮುಧೋಳದ ರಾಜಮನೆತನದಲ್ಲಿ ಜನಿಸಿದ ನನ್ನಮ್ಮ ರಾಧಾಬಾಯಿ ಆ ಕಾಲದ ಎತ್ತರದ ಹೆಣ್ಣಾಗಿದ್ದಳಂತೆ. ನೋಡಿದವರ ಕಣ್ಮನವನ್ನು ಸೆಳೆಯುವಂತಿದ್ದ ಅವಳನ್ನು ಘಾಟ್ಗೆ ಮನೆತನದ ನನ್ನಪ್ಪ ಜೈಸಿಂಗರಾವ್ ವರಿಸಿದ್ದರು. ನನ್ನಮ್ಮನ ಎತ್ತರವನ್ನು ಕಣ್ತುಂಬಿಕೊಳ್ಳುವ ಭಾಗ್ಯ ನನಗಿರಲಿಲ್ಲ. ಬುದ್ದಿ ತಿಳಿದು ಅಮ್ಮನ ನೆನಪಿನ ಚಿತ್ರವನ್ನು ಮನಸ್ಸಿನ ಪರದೆಯಲ್ಲಿ ಹಿಡಿದಿಟ್ಟುಕೊಳ್ಳುವ ಮೊದಲೇ, ನನ್ನ ಮೂರನೇ ವರ್ಷದಲ್ಲಿಯೇ ಅವಳು ಇಹದ ಯಾತ್ರೆಯನ್ನು ಮುಗಿಸಿದ್ದಳು. ಅಮ್ಮನಿಲ್ಲದ ಖಾಲಿತನದಿಂದಲೋ, ಮೈಯಲ್ಲಿ ಹರಿಯುತ್ತಿದ್ದ ರಾಜಮನೆತನದ ರಕ್ತದಿಂದಲೋ ನಾನು ಬಾಲ್ಯದಿಂದಲೂ ಜಗಳಗಂಟನಾಗಿ ಬೆಳೆದೆ. ಬೀದಿ ನಾಯಿಗಳ ಮೇಲೆ ಕಾರಣವಿಲ್ಲದೇ ಕಲ್ಲು ಬೀರುವವರನ್ನು ಕಂಡರೆ, ಕಣ್ಣು ಕಾಣದ ಕುರುಡರ ದಾರಿ ತಪ್ಪಿಸಿ ಸುಖಿಸುವ ಪುಂಡ ಹುಡುಗರನ್ನು ನೋಡಿದರೆ, ಹಾರುವ ಹಕ್ಕಿಗಳ ಮೇಲೆ ಕಲ್ಲುಬೀರಿ ನೆಲಕ್ಕುರುಳಿಸುವ ಪೋಕರಿಗಳು ಎದುರಿಗೆ ಸಿಕ್ಕರೆ ಒಂದೆರಡು ತದಕದೇ ಮನಸ್ಸು ತಡೆಯುತ್ತಿರಲಿಲ್ಲ. ಪುಂಡು ಹುಡುಗರನ್ನೆಲ್ಲ ಕುಸ್ತಿಗೆ ಕರೆದು ಚಿತ್ತಾಗಿಸುವುದು ನನ್ನ ಕಸುಬಾಗಿಹೋಗಿತ್ತು. ಊರ ಗರಡಿಮನೆ ನನ್ನ ಆಟದ ತಾಣವಾಗಿತ್ತು. ನನಗಿಂತ ದುಪ್ಪಟ್ಟು ವಯಸ್ಸಿನವರನ್ನೂ ಸೋಲಿಸುವ ನನ್ನ ಕುಸ್ತಿಯ ಪಟ್ಟುಗಳನ್ನು ಊರ ಹಿರಿಯರು ಹೆಮ್ಮೆಯಿಂದ ನೋಡುತ್ತಿದ್ದರು. ಅವರ ಮೆಚ್ಚುಗೆಯ ನೋಟವೇ ನನ್ನನ್ನು ಎತ್ತರವಾಗಿಸುತ್ತಿದೆಯೆಂಬಂತೆ ಹತ್ತನೆಯ ವಯಸ್ಸಿಗೆ ನನ್ನ ಎತ್ತರ ಆರು ಅಡಿಯನ್ನು ಮುಟ್ಟುತ್ತಿತ್ತು. ಯಾವ ಗುಂಪಿನಲ್ಲಿದ್ದರೂ ಎಲ್ಲರ ಕಣ್ಣು ಸೆಳೆಯುವಂತೆ ಬೆಳೆದಿದ್ದೆ ನಾನು.

ರಾಜ್ಯಾಡಳಿತದಲ್ಲಿ ಅತಂತ್ರ ತುಂಬಿದ್ದ ದುಗುಡದ ದಿನಗಳವು. ಕೊಲ್ಲಾಪುರವನ್ನು ಆಳುತ್ತಿದ್ದ ಶಿವಾಜಿ VI ಮಹಾರಾಜರು ಗತಿಸಿ ವರ್ಷಗಳಾಗುತ್ತ ಬಂದಿತ್ತು. ರಾಜನಿಲ್ಲದ ರಾಜ್ಯವೆಲ್ಲ ತನ್ನದೇ ಎನ್ನುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ರಾಜ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರದಲ್ಲಿದ್ದರು. ಮಕ್ಕಳಿಲ್ಲದ ಮಹಾರಾಣಿ ಆನಂದಿಬಾಯಿಯವರು ತೀವ್ರ ಚಿಂತೆಯಲ್ಲಿ ಮುಳುಗಿದ್ದರು. ಮಂತ್ರಿಗಳ ಸಲಹೆಯಂತೆ ಮಗುವೊಂದನ್ನು ದತ್ತು ಪಡೆಯಲು ಕಾತರರಾಗಿದ್ದರು. ರಾಜ್ಯದ ಭಾವೀ ರಾಜನನ್ನು ಆರಿಸುವ ಆ ದಿನ ರಾಜಧಾನಿಯಲ್ಲಿರುವ ಎಲ್ಲ ಆರೋಗ್ಯವಂತ ಮಕ್ಕಳನ್ನು ರಾಜಸಭೆಗೆ ಕರೆತರುವಂತೆ ಡಂಗೂರ ಹೊಡೆಸಲಾಗಿತ್ತು.  ರಾಜನ ಸಂಬಂಧಿಕರ ದಂಡೇ ಮಕ್ಕಳೊಂದಿಗೆ ಅಲ್ಲಿ ನೆರೆದಿತ್ತು. ಅರಮನೆಯ ಊಳಿಗದಲ್ಲಿರುವ ಜಗರಾಮ ಕಾಂಬ್ಳೆ ತಮ್ಮ ರಾಜ್ಯದ ಮುಂದಿನ ಪ್ರಭುವನ್ನು ನೋಡುವ ಹಂಬಲದಿಂದ ರಾಜಾಂಗಣದ ಹೊರಭಾಗದಲ್ಲಿ ಅರಮನೆಯ ಎಲ್ಲ ಕೆಲಸಗಾರರ ಗುಂಪಿನಲ್ಲಿ ನಿಂತಿದ್ದ. ಅವನ ಮಗ ಗಂಗಾರಾಮ ಕಾಂಬ್ಳೆ ನನ್ನ ಬಾಲ್ಯದ ಸ್ನೇಹಿತ. ಅಪ್ಪನೊಂದಿಗೆ ಅರಮನೆಯ ಉದ್ಯಾನಕ್ಕೆ ಹೋದಾಗಲೆಲ್ಲ ತರತರದ ಹಣ್ಣುಗಳನ್ನು ತಂದು ನನ್ನ  ಸುರಿಯುತ್ತಿದ್ದ ಗೆಳೆಯ. ಅರಮನೆಯ ಒಡ್ಡೋಲಗದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅವನೂ ತಂದೆಯ ಕೈ ಹಿಡಿದು ಅಲ್ಲಿಯವರೆಗೆ ಹೋಗಿದ್ದ. ಅವನನ್ನು ಹುಡುಕುತ್ತಾ ಅಚಾನಕ್ಕಾಗಿ ನಾನೂ ಅಲ್ಲಿಗೆ ಹೋದೆ. ನನ್ನ ತುಂಟ ಸ್ವಭಾವಕ್ಕೆ ಹೆದರಿಯೋ ಏನೋ? ಅರಮನೆಯ ಸೈನ್ಯಾಧಿಕಾರಿಯಾದ ನನ್ನಪ್ಪ ಒಂದು ದಿನವೂ ನನ್ನನ್ನಲ್ಲಿಗೆ ಕರೆದುಕೊಂಡು ಹೋಗಿರಲಿಲ್ಲ.

ಅರಮನೆಯ ವೈಭವೋಪೇತ ಅಲಂಕಾರವನ್ನು ಮೊದಲಬಾರಿಗೆ ಕಂಡು ನಾನು ಮೂಕವಿಸ್ಮಿತನಾಗಿದ್ದೆ. ಸಿಂಹಾಸನದ ಪಕ್ಕದಲ್ಲಿ ಆಸೀನರಾದ ಮಹಾರಾಣಿ ಆನಂದಿಬಾಯಿಯವರತ್ತಲೇ ಎಲ್ಲರ ಚಿತ್ತ ನೆಟ್ಟಿತ್ತು. ಅವರ ದೃಷ್ಟಿಗೆ ಬೀಳುವಂತೆ ಎಲ್ಲರೂ ತಮ್ಮ ಮಕ್ಕಳನ್ನು ಮುನ್ನೆಲೆಗೆ ತರುವ ಯತ್ನದಲ್ಲಿದ್ದರು. ಇದ್ದಕ್ಕಿದ್ದಂತೆ ತಮ್ಮ ಆಸನದಿಂದ ಎದ್ದ ಮಹಾರಾಣಿಯರು ನೇರವಾಗಿ ನನ್ನೆಡೆಗೇ ನಡೆದು ಬರುತ್ತಿರುವಂತೆ ಕಂಡಿತು ನನಗೆ.  ಹತ್ತಿರವಾಗುತ್ತಿದ್ದಂತೆಯೇ ಅವರ ಮುಖ ನನಗೆ ತೀರ ಪರಿಚಿತವೆನಿಸತೊಡಗಿತು. ಎತ್ತರದ ನಿಲುವು, ಗಂಭೀರವಾದ ಮುಖಮುದ್ರೆ, ಭಾರವಾದ ಹೆಜ್ಜೆಗಳು……. ಮಸುಕಾಗಿ ನೆನಪಿದ್ದ ಅಮ್ಮ ನನ್ನೆದುರು ನಡೆದು ಬರುತ್ತಿರುವಂತೆ ಭಾಸವಾಯಿತು. ಸುತ್ತಲಿನ ಪರಿವೆಯಿಲ್ಲದೇ ಅಮ್ಮಾ ಎಂದು ಕರೆಯುತ್ತಾ ಓಡಿಹೋಗಿ ಅವರನ್ನು ತಬ್ಬಿಕೊಂಡುಬಿಟ್ಟೆ. ಅವರೂ ಅಷ್ಟೇ ಪ್ರೀತಿಯಿಂದ, “ಮಗೂ….” ಎಂದು ನನ್ನನ್ನು ತಬ್ಬಿಕೊಂಡರು. ಇಡಿಯ ಸಭೆಯು ನಮ್ಮಿಬ್ಬರನ್ನು ಸಂಭ್ರಮದಿಂದ ದಿಟ್ಟಿಸಿತು. “ಶಾಹೂ ಮಹಾರಾಜ್ ಕೀ ಜೈ” ಎಂಬ ಘೋಷಣೆ ಸಭಾಂಗಣದ ತುಂಬೆಲ್ಲ ಮೊಳಗಿತು. ಸೈನಿಕರ ನಡುವೆ ನಿಂತಿದ್ದ ನನ್ನಪ್ಪ ಘಾಟ್ಗೆ ಸರಕ್ಕನೆ ಎದ್ದುನಿಂತು, “ಮನ್ನಿಸಬೇಕು ಮಹಾರಾಣಿ. ಈ ಮಗು ನನ್ನ ಮಗ ಯಶವಂತ. ಕ್ಷತ್ರಿಯ ರಾಜಮನೆತನಕ್ಕೆ ಸೇರಿದವನಲ್ಲ.” ಎಂದು ನನ್ನ ಗುರುತನ್ನು ಹೇಳಿದ. ಇದ್ದಕ್ಕಿದ್ದಂತೆ ಇಡಿಯ ಸಭೆಯು ಮೌನವಾಯಿತು. ಸಭಾಸದರ ನಡುವೆ ಗುಸುಗುಸು ಚರ್ಚೆಗಳು ನಡೆಯತೊಡಗಿದವು. ಪಿಸುಮಾತುಗಳು ನನ್ನನ್ನು ಅಣಕಿಸಿದಂತೆ ಭಾಸವಾಗಿ ನಾನು ನನ್ನಮ್ಮನನ್ನು ಗಟ್ಟಿಯಾಗಿ ತಬ್ಬಿದೆ. ಮಹಾರಾಣಿಯವರು  ಅವರಿಗಿಂತಲೂ ಎತ್ತರವಿರುವ ನನ್ನ ನೆತ್ತಿಯನ್ನು ಬಗ್ಗಿಸಿ ಮೂಸಿ, ಮುದ್ದಿಸಿ, “ಆದರೇನಾಯಿತು ಘಾಟ್ಗೆಯವರೇ? ಈ ಮಗುವನಿನಲ್ಲಿ ಕ್ಷಾತ್ರ ತೇಜ ಹೊರಸೂಸುತ್ತಿರುವುದನ್ನು ಯಾರು ಅಲ್ಲಗಳೆಯುವರು? ಚರ್ಚೆಗಿಲ್ಲಿ ಅವಕಾಶವಿಲ್ಲ.  ಈ ಮಗು ಇನ್ನು ಮುಂದೆ ನನ್ನ ಮಗ ಶಾಹೂ” ಎಂದು ಘೋಷಿಸಿದರು. ಸಭಾಸದರೆಲ್ಲ ಅಸಮಾಧಾನದ ಮುಖವನ್ನು ಹೊತ್ತು ಅಲ್ಲಿಂದ ನಿರ್ಗಮಿಸಿದರು. ಮಹಾರಾಣಿ ಆನಂದಿಬಾಯಿಯವರು ಶೂದ್ರ ಜಾತಿಗೆ ಸೇರಿದ ಮಗುವೊಂದನ್ನು ತಮ್ಮ ಉತ್ತರಾಧಿಕಾರಿಯಾಗಿ ಆರಿಸಿದ್ದು ಅವರೆಲ್ಲರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಷ್ಟು ದೂರದಿಂದಲೇ ಕಣ್ಮನ ಸೆಳೆಯುವ ನನ್ನ ಎತ್ತರ ಸಿಂಹಾಸನದವರೆಗೂ ನನ್ನನ್ನು ಕರೆದುಕೊಂಡು ಹೋಯಿತು.

ರಾಜಕೋಟದ ರಾಜಕುಮಾರ ಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸವು ಮೊದಲುಗೊಂಡಿತು. ಸರ್ ಸ್ಟುವರ್ಟ್ ಪ್ರೇಸರ್ ಅಲ್ಲಿ ಗುರುವಾಗಿ ನನಗೆ ದಕ್ಕಿದರು. ಕಲಿಕೆಯೆಂದರೆ ಕುಸ್ತಿಯೊಂದೇ ಎಂದು ಭಾವಿಸಿದ್ದ ನನಗೆ ಅಕ್ಷರದ ಅರಿವನ್ನು ಮೂಡಿಸಿದರು. ನನ್ನ ಮನಸ್ಸಿನಲ್ಲಿ ಮೂಡಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದರು. ಇಡಿಯ ಜಗತ್ತಿನಲ್ಲಿರುವುದು ಎರಡೇ ಜಾತಿಗಳು, ಒಂದು ಕುಳಿತು ತಿನ್ನುವ ಜಾತಿ, ಇನ್ನೊಂದು ದುಡಿದು ಉಣ್ಣುವ ಜಾತಿ ಎಂಬುದನ್ನು ತಿಳಿಸಿ ಹೇಳಿದರು. ಕುಳಿತು ತಿನ್ನುವವರಿಗೆ ಬೆವರಿನ ಬೆಲೆಯನ್ನು ತಿಳಿಸಬೇಕು, ದುಡಿದು ಉಣ್ಣುವವರಿಗೆ ಅವಕಾಶಗಳನ್ನು ಒದಗಿಸಿಕೊಡಬೇಕು ಎಂಬ ರಾಜಧರ್ಮವನ್ನು ಬೋಧಿಸಿದರು. ಸಮಾನತೆಯ ಆಧಾರದಲ್ಲಿ ಕಟ್ಟಬಹುದಾದ  ಕಲ್ಯಾಣ ರಾಜ್ಯದ ಕನಸನ್ನು ನನ್ನೊಳಗೆ ಮೂಡಿಸಿದರು. ಹಾಗೆ ಆಳ್ವಿಕೆ ನಡೆಸಿದ ವಿಶ್ವದ ಅನೇಕ ಜನಪರ ರಾಜರನ್ನು ಪರಿಚಯಿಸಿದರು. ಅವರೊಂದಿಗಿನ ದಶಕಗಳ ಒಡನಾಟ ನನಗೆ ಒಳಿತು ಕೆಡುಕುಗಳ ನಡುವಿನ ಅಂತರವನ್ನು ತಿಳಿಸಿಕೊಟ್ಟಿತು. ದತ್ತಕದ ದಿನ ನಡೆದ ಜಾತಿಯಪಮಾನವನ್ನು ಮೀರಲು ಪ್ರೇಸರ್ ಅವರ ಪ್ರಭಾವ ಕಾರಣವಾಯಿತು. ಇಪ್ಪತ್ತರ ಹರೆಯಕ್ಕೆ ಕಾಲಿಡುವ ವೇಳೆಗಾಗಲೇ ನನ್ನನ್ನು ಪಟ್ಟಕ್ಕೆರಿಸುವ ತಯಾರಿಗಳು ನಡೆಯತೊಡಗಿದವು. ತಾಯಿಯ ಸಂಬಂಧಿಕರಾದ ಬರೋಡಾದ ಲಕ್ಷ್ಮಿಬಾಯಿ ಖಾನ್ವಿಲ್ಕರ್ ಅವಳೊಂದಿಗೆ ನನ್ನ ವಿವಾಹ ಸಮಾರಂಭವೂ ನಿಗದಿಯಾಯಿತು.

“ಕ್ಷತ್ರಿಯನಲ್ಲದ ಯಾರನ್ನೂ ವೇದೋಕ್ತವಾಗಿ ಪಟ್ಟಕ್ಕೇರಿಸಲು ನಮ್ಮಿಂದ ಅಸಾಧ್ಯ” ಎಂದು ಅರಮನೆಯ ಪುರೋಹಿತ ವರ್ಗದವರೆಲ್ಲರೂ ಘಂಟಾಘೋಷವಾಗಿ ಹೇಳಿದಾಗ ನನ್ನಮ್ಮ ತತ್ತರಿಸಿಹೋದಳು. ನಾನು ಪ್ರೇಸರ್‌ರ ನೆರವಿನೊಂದಿಗೆ ಇತಿಹಾಸವನ್ನು ತಿರುವಿಹಾಕತೊಡಗಿದೆ. ಇಂಥ ಸಂದಿಗ್ಧಗಳು ನನ್ನೊಬ್ಬನದೇ ಆಗಿರಲು ಸಾಧ್ಯವಿಲ್ಲವೆಂಬ ತಿಳುವಳಿಕೆ ನಮಗಿಬ್ಬರಿಗೂ ಇತ್ತು.  ಬೆಳಕಿನಂತೆ ಕಣ್ಮುಂದೆ ಬಂದದ್ದು ಮಹಾತ್ಮ ಫುಲೆಯವರು ಜಾರಿಗೆ ತಂದ ಸತ್ಯಶೋಧಕ ಸಮಾಜದ ನಿಯಮಾವಳಿಗಳು. ಸಮಾಜದ ಒಪ್ಪಿತ ಸಂಪ್ರದಾಯಗಳನ್ನು ಎದುರುಹಾಕಿಕೊಂಡು ಈಜಿದ ಫುಲೆ ದಂಪತಿಗಳನ್ನೂ ಹೆಜ್ಜೆ ಹೆಜ್ಜೆಗೂ ಕಾಡಿದ್ದು ಇದೇ ವೇದೋಕ್ತ ಸಮಾಜದ ಆಚರಣೆಗಳು. ಅವೆಲ್ಲವುಗಳಿಗೂ ಈ ಗುರುದಂಪತಿಗಳು ಹುಡುಕಿಕೊಂಡದ್ದು ಬದಲಿಮಾರ್ಗಗಳನ್ನು. ಮಗುವಿನ ನಾಮಕರಣದಿಂದ ಮೊದಲುಗೊಂಡು ಮದುವೆ, ಸಾವು ಎಲ್ಲದಕ್ಕೂ ಅವರು ಅವರದೇ ಕ್ರಮಗಳನ್ನು ಕಂಡುಕೊಂಡರು. ನಾನು ಅಮ್ಮನನ್ನು ಸಂತೈಸಿದೆ. ಸತ್ಯಶೋಧಕ ಸಮಾಜವು ಸೂಚಿಸಿದಂತೆ ಪಟ್ಟಾಭಿಷೇಕ ಮಹೋತ್ಸವಕ್ಕೂ ಬದಲಿಮಾರ್ಗವೊಂದನ್ನು ಶೋಧಿಸುವ ಭರವಸೆಯನ್ನು ನೀಡಿದೆ. ಶೂದ್ರ ಸಮಾಜದಿಂದ ಬಂದ ಮೌನಿ ಮಹಾರಾಜರು ಸ್ಥಾಪಿಸಿದ ಪಟ್ಗಾಂವ್ ಸಂಪ್ರದಾಯದ ಪ್ರಕಾರ ನಮ್ಮ ಮದುವೆ ಮತ್ತು ಪಟ್ಟಾಭಿಷೇಕಗಳು ವಿಜ್ರಂಭಣೆಯಿಂದ ನಡೆದವು. ಚತುರ್ವರ್ಣ ವ್ಯವಸ್ಥೆಯನ್ನು ನಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದರೂ ನಿಜವಾಗಿ ಉಳಿದದ್ದು ಬ್ರಾಹ್ಮಣ ಮತ್ತು ಕ್ಷಾತ್ರ ವರ್ಣಗಳು ಮಾತ್ರವೇ ಎಂಬ ವಾಸ್ತವವನ್ನು ಮೌನಿ ಮಹಾರಾಜರು ಅಂದೇ ಜಗತ್ತಿಗೆ ಸಾರಿದ್ದರು. ಬ್ರಾಹ್ಮಣ್ಯದ ಎಲ್ಲ ಹುನ್ನಾರಗಳನ್ನು ಧಿಕ್ಕರಿಸಿ, ವೇದೋಕ್ತಗಳಲ್ಲಿ ಪಾರಂಗತರಾಗಿದ್ದ ನಮ್ಮ ಸಮುದಾಯದ ಸದಾಶಿವರಾವ್ ಲಕ್ಷ್ಮಣರಾವ್ ಸಂಕ್ಪಾಲ್ ಅವರನ್ನು ಪಟ್ಟಾಭಿಷೇಕದ ಶುಭ ಮುಹೂರ್ತದಲ್ಲಿ “ಕ್ಷಾತ್ರ ಜಗದ್ಗುರು” ಎಂದು ಘೋಷಿಸಲಾಯಿತು. ಇದರಿಂದಾಗಿ ರಾಜ್ಯದ ಅನೇಕ ಸಂಪ್ರದಾಯವಾದಿಗಳ ಹುಬ್ಬುಗಳು ಮೇಲೇರಿದವು. ಆದರೆ ಈ ಎಲ್ಲ ಬೆಳವಣಿಗೆಗಳಿಂದ ಹರ್ಷಪಟ್ಟ ಪ್ರಜಾಸಮುದಾಯಗಳ ಸಂಖ್ಯೆ ಇನ್ನೂ ಹೆಚ್ಚಿತ್ತು.

“ಶೂದ್ರರಿಗೆ ಸಲಿಗೆ ಕೊಟ್ಟರೆ ಹೀಗೆಯೇ ಆಗುವುದು. ಯಾರನ್ನು ಎಲ್ಲಿಡಬೇಕೋ ಅಲ್ಲಿಟ್ಟರೆ ರಾಜ್ಯಾಡಳಿತ ಸುಸೂತ್ರವಾಗಿ ಸಾಗುವುದು.” ಈ ಮಾತುಗಳು ನನ್ನ ಕಿವಿಗೆ ಅಪ್ಪಳಿಸಿದ್ದು ಪಟ್ಟಾಭಿಷೇಕ ಮಹೋತ್ಸವದ ವಾರ್ಷಿಕ ಆಚರಣೆಗಾಗಿ ಅರಮನೆಯಲ್ಲಿ ನಡೆದ ಸಂಭ್ರಮಾಚರಣೆಯ ದಿನ. ಊಟದ ಮನೆಯಲ್ಲಿ ಮೇಲ್ವರ್ಗದವರೊಂದಿಗೆ ತಾನೂ ಊಟಕ್ಕೆ ಕುಳಿತನೆಂದು ಅಪರಾಧಿ ಸ್ಥಾನದಲ್ಲಿ ನಿಂತಿದ್ದು ನನ್ನ ಬಾಲ್ಯದ ಗೆಳೆಯ ಗಂಗಾರಾಮ ಕಾಂಬ್ಳೆ. ಚಕ್ರವರ್ತಿಯಾದ ಮೇಲೂ ನಮ್ಮ ಸ್ನೇಹದಲ್ಲಿ ಒಂದಿನಿತೂ ವ್ಯತ್ಯಯವಾಗಿರಲಿಲ್ಲವಾದ್ದರಿಂದ ಸಹಜವಾಗಿಯೇ ಅವನಿಗೆ ಅರಮನೆಯ ಎಲ್ಲ ಜಾಗಗಳಿಗೂ ಮುಕ್ತ ಪ್ರವೇಶವಿತ್ತು. ವಿವಾದ ನನ್ನವರೆಗೂ ತಲುಪಿ, ವಿಚಾರಣೆ ನಿಗದಿಯಾಯಿತು. ಅಪರಾಧಿಯಂತೆ ತಲೆತಗ್ಗಿಸಿ ನಿಂತ ಗಂಗಾರಾಮನಿಗೆ ನಾನು ಹೇಳಿದೆ, “ಗಂಗೂ, ಹೇಗೂ ನಿನಗೆ ರುಚಿರುಚಿಯಾದ ತಿನಿಸುಗಳನ್ನು ಮಾಡುವುದೆಂದರೆ ಇನ್ನಿಲ್ಲದ ಉತ್ಸಾಹ. ಸುಮ್ಮನೆ ಅವರ ಪಂಕ್ತಿಯಲ್ಲಿ ಕುಳಿತು ಉಣ್ಣುವ ಹಂಗೇಕೆ? ನಿನ್ನದೇ ಒಂದು ಹೋಟೇಲನ್ನು ರಾಜಧಾನಿಯೊಳಗೆ ಪ್ರಾರಂಭಿಸಿಬಿಡು. ಆಗ ನೋಡು, ನಿನ್ನ ಹೋಟೇಲಿನ ಪರಿಮಳಕ್ಕೆ ಎಲ್ಲರೂ ಜಾತಿಯನ್ನು ಮರೆತು ತಿನ್ನಲು ಧಾವಿಸುವರು.” ಅನಿರೀಕ್ಷಿತವಾದ ನನ್ನ ಪ್ರತಿಕ್ರಿಯೆಯಿಂದ ವಿಚಲಿತನಾದ ಗಂಗಾರಾಮ, “ನಾನು ಹೋಟೆಲ್ ಮಾಡುವುದೆ? ಅದಕ್ಕೆಲ್ಲ ನಮ್ಮಂತವರಲ್ಲಿ ಹಣವೆಲ್ಲಿದೆ?” ಎಂದು ತಡವರಿಸತೊಡಗಿದ. “ನಿನ್ನಲ್ಲಿಲ್ಲದಿದ್ದರೇನು? ನಮ್ಮ ಭಂಡಾರ ತುಂಬಿದೆ. ನಾಳೆಯೇ ರಾಜಮಾರ್ಗದ ಬದಿಯಲ್ಲಿ ನಿನ್ನದೊಂದು ತಿಂಡಿಯಂಗಡಿ ತಲೆಯೆತ್ತಲಿದೆ.” ನಾನು ಭರವಸೆ ನೀಡಿದ ಮೇಲೆಯೂ ಅವನ ದುಗುಡ ಕಳೆದಂತಿರಲಿಲ್ಲ. ನಾನು ಅವನಿಗೊಂದು ತಿಂಡಿಯಂಗಡಿಯ ವ್ಯವಸ್ಥೆ ಮಾಡುವಂತೆ ನಮ್ಮ ಕೋಶಾಧಿಕಾರಿಗಳಿಗೆ ಸೂಚಿಸಿದೆ. ಬೇರೆಯೇ ತೀರ್ಪನ್ನು ನಿರೀಕ್ಷಿಸಿದ್ದ ಕೆಲವರಿಗೆ ಇದರಿಂದ ತೀವ್ರ ಅಸಮಾಧಾನವಾದುದನ್ನೂ  ಗಮನಿಸಿದೆ.

ರಾಜಕಾರಣದ ವ್ಯಸ್ಥತೆಯಲ್ಲಿ ಅದೆಷ್ಟೋ ಕಾಲ ನಾನು ಈ ವಿಚಾರಣೆಯ ವಿಷಯವನ್ನೇ ಮರೆತಿದ್ದೆ. ಪ್ರೇಸರ್ ಸದಾ ಹೇಳುತ್ತಿದ್ದ ಮಾತೊಂದು ನನ್ನ ಮನಃಪಟಲದಲ್ಲಿ ದಾಖಲಾಗಿತ್ತು. “ನೋಡು ಶಾಹೂ, ಈ ಜಗತ್ತಿನಲ್ಲಿ ನಂಬಿಕೆಗೆ ತೀರ ಅರ್ಹವಾದ ವರ್ಗವೆಂದರೆ ಅದು ಸ್ತ್ರೀ ಸಂಕುಲ. ಯಾವುದೇ ಸುಧಾರಣೆಗಳು ನಡೆಯಬೇಕಾದರೂ ಅದರ ಮೊದಲ ಅಂಕುರವಾಗಬೇಕಾದದ್ದು ಮನೆಯಲ್ಲಿ. ಮನೆಯ ಉಸ್ತುವಾರಿಯನ್ನು ವಹಿಸುವ ಹೆಣ್ಮಕ್ಕಳಿಗೆ ಸುಧಾರಣೆಯ ಉಸ್ತುವಾರಿಯನ್ನು ವಹಿಸಿದಾಗ ಮಾತ್ರವೇ ಸಮಾಜ ಸುಧಾರಣೆ ಸಾಧ್ಯ. ಹುಟ್ಟಿನಿಂದ ಬರುವುದು ತಂದೆ-ತಾಯಿಗಳಿಂದ ಪಡೆದ ಅನುವಂಶೀಯ ಗುಣಗಳು ಮಾತ್ರ. ಇನ್ನುಳಿದ ಎಲ್ಲವನ್ನೂ ಶಿಕ್ಷಣದ ಮುಖಾಂತರ ಪಡೆದುಕೊಳ್ಳಬಹುದು.” ನಾನು ಗುರುವೆಂದು ಭಾವಿಸಿದ ಫುಲೆ ದಂಪತಿಗಳು ಹೇಳಿದ್ದೂ ಇದೇ ಮಾತುಗಳನ್ನು. ಪುಟ್ಟ ಬಾಲಕಿಯರಿಂದ ಹಿಡಿದು, ಮದುವೆಯಾಗಿ ವಿಧವೆಯರಾದ ಹೆಣ್ಣುಗಳವರೆಗೆ ಎಲ್ಲರ ಕೈಯ್ಯಲ್ಲಿಯೂ ಅಕ್ಷರದ ದೀವಿಗೆಯನ್ನು ಹಿಡಿಸಬೇಕೆಂದು ಅವರು ಶ್ರಮಿಸಿದ ಮಾರ್ಗ ನನ್ನೆದುರು ತೆರೆದುಕೊಂಡಿತ್ತು. ಅವರು ಹುಟ್ಟುಹಾಕಿದ ಅರಿವಿನ ಸಸಿಯಿಂದು ಆರೈಕೆಯಿಲ್ಲದೇ ಸೊರಗಿ ಸಾಯುವ ಸ್ಥಿತಿಯಲ್ಲಿತ್ತು. ವಾಸ್ತವ ಸತ್ಯವನ್ನರಿಯಲು ನಾನು ರಾಜ್ಯದ ತುಂಬೆಲ್ಲ ಸಂಚರಿಸತೊಡಗಿದೆ. ಶಾಲೆಗೆ ಕಾಲಿಡುವ ಮೊದಲೇ ಹೆಣ್ಣುಮಕ್ಕಳ ಕೊರಳಲ್ಲಿ ತಾಳಿಯ ಭಾರ ನೇತಾಡುತ್ತಿತ್ತು. ಪುಟ್ಟ ವಿಧವೆಯರ ನಿಟ್ಟುಸಿರು ಪ್ರತಿ ಊರನ್ನೂ ಇನ್ನಿಲ್ಲದಂತೆ ಆವರಿಸಿಬಿಟ್ಟಿತ್ತು. ದುಡಿಯುವ ವರ್ಗ ಅರ್ಧದಷ್ಟಿದ್ದರೆ ಕುಳಿತು ತಿನ್ನುವ ವರ್ಗವೂ ಅಷ್ಟೇ ಪ್ರಮಾಣದಲ್ಲಿತ್ತು. ರಾಜ್ಯಾಡಳಿತದ ಪಟೇಲ, ಕರಣಿಕ, ಮಂತ್ರಿ, ಸೈನ್ಯಾಧಿಕಾರಿ ಹೀಗೆ ಎಲ್ಲ ಪದವಿಗಳೂ ಅನುವಂಶೀಯವಾಗಿ ಅದೇ ಮನೆತನದ ಪಾಲಾಗುತ್ತಿತ್ತು. ಊರ ಹೊರಗಿರುವ ಜನಗಳು ಸತ್ತ ಪ್ರಾಣಿಗಳನ್ನು ಎಳೆಯುವ ಕೆಲಸವನ್ನಲ್ಲದೇ ಇನ್ನೇನನ್ನೂ ಮಾಡದಂತೆ ನಿರ್ಬಂಧವಿತ್ತು. ಜಾತಿ ಪದ್ಧತಿಯ ಬೇರುಗಳು ಕೀಳಲಾಗದಷ್ಟು ಆಳವಾಗಿ ಇಳಿದಿದ್ದವು.

ಕಬ್ಬು, ಬಾಳೆ, ತೆಂಗು, ಕಂಗುಗಳಿಂದ ಸಮೃದ್ಧವಾದ ನಾಡಿನಲ್ಲಿ ಎಲ್ಲರೂ ಸುಖಿಗಳಾಗಿ ಬದುಕಬಹುದಾಗಿದ್ದರೂ ಹಾಗಿಲ್ಲದ ವಾಸ್ತವ ನನ್ನನ್ನು ಇರಿಯತೊಡಗಿತು. ಸತ್ಯಶೋಧಕ ಸಮಾಜದ ಶಾಲೆಗಳಿಗೆ ಮತ್ತೆ ಮರುಜೀವ ಕೊಡುವ ಕೆಲಸಗಳನ್ನು ಆರಂಭಿಸಿದೆ. ವಿಧವೆಯರಿಂದ ಹಿಡಿದು ಸಮಾಜದ ಎಲ್ಲ ಸ್ತರದ ಮಕ್ಕಳು ಅಲ್ಲಿ ಒಟ್ಟಿಗೆ ಓದುವಂತೆ ಆದೇಶಿಸಿದೆ. ಜಾತಿ ಆಧಾರಿತ ವೇದಗ್ರಂಥಗಳ ಅಧ್ಯಯನವನ್ನು ಸಮಾಜದ ಎಲ್ಲ ಜಾತಿಯವರಿಗೆ ಮುಕ್ತವಾಗಿ ತೆರೆದಿಟ್ಟೆ. ಬಾಲಕರು, ಬಾಲಕಿಯರು ಓದಲು ಅನುಕೂಲವಾಗುವಂತೆ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿದೆ. ರಾಜ್ಯದ ಎಲ್ಲ ಹುದ್ದೆಗಳಲ್ಲಿ ಅನುವಂಶೀಯತೆಯನ್ನು ರದ್ದುಗೊಳಿಸಿ, ಅರ್ಹತೆಯನ್ನು ಮಾನದಂಡವನ್ನಾಗಿ ಮಾಡಿದೆ. ದೇವಸ್ಥಾನ, ಧರ್ಮ, ಆಚರಣೆಗಳ ಹೆಸರಿನಲ್ಲಿ ನಡೆಯುತ್ತಿದ್ದ ಎಲ್ಲ ಬಗೆಯ ಸ್ತ್ರೀ ದೌರ್ಜನ್ಯಗಳನ್ನು ತಡೆಗಟ್ಟಲು ಕಾನೂನುಗಳನ್ನು ಮಾಡಿದೆ. ದೇವಸ್ಥಾನಗಳಲ್ಲಿ ಸಂಗ್ರಹವಾಗುತ್ತಿದ್ದ ಅಪಾರ ಪ್ರಮಾಣದ ಆಸ್ತಿಯನ್ನು ಜನಸಮುದಾಯದ ಒಳಿತಿಗಾಗಿ ವ್ಯಯಿಸಲು ತೀರ್ಮಾನಿಸಿದೆ. ಇವೆಲ್ಲವುಗಳಿಂದಾಗಿ ಎಲ್ಲೆಡೆಗಳಿಂದ ತೂರಿಬಂದ ಪ್ರತಿಕಾರದ ಗಾಳಿಯನ್ನು ಎದುರಿಸಲು ಬಂಡೆಯಂತೆ ದೃಢವಾಗಿ ನಿಂತೆ. ಈ ಎಲ್ಲ ಜಂಜಡಗಳು ನನ್ನನ್ನು ತುಸು ಜರ್ಜರಿತನನ್ನಾಗಿ ಮಾಡಿವೆಯೆಂಬುದು ಸುಳ್ಳಲ್ಲ. ಆದರೂ ನಮ್ಮ ರಾಜ್ಯದಲ್ಲಿ ಬೀಸಿದ ಬದಲಾವಣೆಯ ತಂಗಾಳಿ ದೆಹಲಿಯ ದರ್ಬಾರಿನವರೆಗೂ ತನ್ನ ಸುಗಂಧವನ್ನು ಹರಡಿದೆ. ಮೊಗಲ್ ದೊರೆಯ ಕೈಯ್ಯಿಂದ ಕೊಡಮಾಡಿದ ಚಿನ್ನದ ಪದಕ ಇದಕ್ಕೆ ಸಾಕ್ಷಿಯಾಗಿ ಅರಮನೆಯ ಗೋಡೆಯನ್ನು ಅಲಂಕರಿಸಿದೆ. ಮಂಜು ಮುಸುಕಿದ ಈ ತಂಪಾದ ವಾತಾವರಣದಲ್ಲಿ ಗಂಗಾರಾಮನ ಹೋಟೇಲಿನ ಚಹಾ ನೆನಪಾಗಿ ಮತ್ತೆ ಕಾಡುತ್ತದೆ.

ಸೇವಕರು ತಂದಿಟ್ಟ ಬಿಸಿ ಚಹಾವನ್ನು ಹೀರುತ್ತಾ ಮತ್ತೆ ನನ್ನ ಗತಕಾಲಕ್ಕೆ ಜಾರುತ್ತೇನೆ. ಇಂಥದೊಂದು ವ್ಯಸ್ಥತೆಯ ದಿನಗಳಲ್ಲಿ ರಾಜ್ಯ ಸಂಚಾರವನ್ನು ಮುಗಿಸಿ ಮನೆಗೆ ಹಿಂದಿರುಗುವ ಹೊತ್ತು ಬಿಸಿಯಾದ ಚಹಾ ಬೇಕೆನಿಸಿ ಗಂಗಾರಾಮನ ತಿಂಡಿಯಂಗಡಿಯ ಎದುರು ರಥವಿಳಿದೆ. ಅಂಗಡಿಯ ಬಾಗಿಲು ಮುಚ್ಚಿತ್ತು. ಅಕ್ಕಪಕ್ಕದಲ್ಲಿ ವಿಚಾರಿಸಿದೆ, ಹೋಟೇಲ್ ಯಾವತ್ತೋ ಮುಚ್ಚಿಹೋಗಿರುವ ವರ್ತಮಾನ ಕಿವಿಗೆ ಬಿತ್ತು. ತಕ್ಷಣವೇ ಗಂಗಾರಾಮನನ್ನು ಕರೆದು ವಿಚಾರಣೆ ನಡೆಸಿದೆ. ಅಳುಕಿನಿಂದಲೇ ಅವನು ಉತ್ತರಿಸಿದ, “ಸ್ವಾಮೀ, ನೀವೇನೋ ಬಾಲ್ಯದ ಸಲುಗೆಯಿಂದ ನನಗೆ ಹೋಟೇಲು ತೆರೆಯಲು ಸಹಾಯ ಮಾಡಿದಿರಿ. ಆದರೆ ನಮ್ಮ ಜಾತಿಯವರು ನಡೆಸುವ ಹೋಟೇಲಿಗೆ ಮೇಲುವರ್ಗದ ಯಾವ ಗಿರಾಕಿಗಳು ಬರುತ್ತಾರೆ? ಕೈಯ್ಯಲ್ಲಿ ಹಣವಿಲ್ಲದ ನಮ್ಮವರಿಗೆ ಎಷ್ಟು ದಿನ ಅಂತ ಪುಕ್ಕಟೆಯಾಗಿ ಊಟ ನೀಡುವುದು? ಹಾಗಾಗಿ ಹೋಟೇಲಿನ ಬಾಗಿಲು ಮುಚ್ಚಿದೆ.” ಸುಧಾರಣೆಯ ದಾರಿಗಳು ಸುಲಭದಲ್ಲವೆಂಬ ಸತ್ಯ ನನ್ನೆದುರು ಸಾಕ್ಷಾತ್ಕಾರವಾದ ದಿನವದು. ಸಮಾಜದ ಎದುರು ಹೊಸದಾರಿಗಳು ತೆರೆದುಕೊಳ್ಳಬೇಕೆಂದರೆ ಮೊದಲು ಆ ದಾರಿಯಲ್ಲಿ ನಾವೇ ನಡೆಯಬೇಕು ಎಂಬ ನಿಜ ನನ್ನೆದುರು ನಿಂತು ನಗುತ್ತಿತ್ತು. ನಾನವನ ಹೆಗಲ ನೇವರಿಸಿ ಹೇಳಿದೆ, “ಯಾರು ಹೇಳಿದರು ನಿನ್ನ ಹೋಟೇಲಿಗೆ ಯಾರೂ ಬರುವುದಿಲ್ಲವೆಂದು? ನಾಳೆಯಿಂದ ಪ್ರತಿದಿನ ಸಂಜೆಯ ರಾಜನ ಸಭೆ ನಿನ್ನ ಹೋಟೇಲಿನಲ್ಲಿಯೇ ನಡೆಯುವುದು ಮತ್ತು ಇಡಿಯ ರಾಜದರ್ಭಾರಿಗೆ ಚಹಾ, ತಿಂಡಿಯನ್ನು ನೀನೇ ಪೂರೈಸುವೆ.” ಗಂಗಾರಾಮನ ಕಣ್ಣುಗಳಲ್ಲಿ ನೀರಾಡಿತ್ತು. ಅಂದಿನಿಂದಲೂ ಪ್ರತಿಸಂಜೆಯೂ ಗಂಗಾರಾಮನ ಚಹಾದಿಂದಲೇ ಕಳೆಗಟ್ಟುತ್ತಿತ್ತು. ರಾಜ ಹೊಕ್ಕ ಹೋಟೇಲನ್ನು ಧಿಕ್ಕರಿಸುವ ಪ್ರಜೆಗಳು ಯಾರಿದ್ದಾರು?

ಲಕ್ಷ್ಮಿ ಮತ್ತು ನನ್ನ ದಾಂಪತ್ಯದಲ್ಲಿ ನಾಲ್ಕು ಮುದ್ದಾದ ಮಕ್ಕಳೀಗ ಸೇರಿಕೊಂಡಿದ್ದರು. ಅವರ ಶಿಕ್ಷಣದ ವ್ಯವಸ್ಥೆಯಾಗಬೇಕಿತ್ತು. ರಾಜ್ಯದ ಇತರ ಪ್ರಜೆಗಳ ಮಕ್ಕಳೊಂದಿಗೆ ಅವರೂ ವಿದ್ಯೆಯನ್ನು ಕಲಿಯತೊಡಗಿದರು. ದಿನವೂ ಸಂಜೆ ಬಂದು ಶಾಲೆಯ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು.  ಒಂದು ಸಂಜೆ ಗಂಗಾರಾಮನ ಅಂಗಡಿಯಲ್ಲಿ ಚಹಾ ಕುಡಿಯುತ್ತಿರುವಾಗ ಅವನ ಹೆಂಡತಿ ಹೊಸ ವಿಷಯವೊಂದನ್ನು ನನ್ನಲ್ಲಿ ಹಂಚಿಕೊಂಡಳು, “ಮಹಾರಾಜರೇ, ನಿಮ್ಮ ಮಗ ರಾಜಾರಾಮ ಇದ್ದಾನಲ್ಲ, ಅವನು ಎತ್ತರದಲ್ಲಿ ಮಾತ್ರವಲ್ಲ, ಬುದ್ದಿಯಲ್ಲಿಯೂ ಥೇಟ್ ನಿಮ್ಮಂತೆಯೆ.” ಎಂದು. ನಾನು ಕುತೂಹಲದಿಂದ ಅವಳಿಗೆ ಹಾಗೆನಿಸಲು ಕಾರಣವೇನೆಂದು ವಿಚಾರಿಸಿದೆ. ತಂದೆಯಂತೆಯೇ ದೇಹದಲ್ಲಿ ಗಿಡ್ಡವಾಗಿರುವ ಗಂಗಾರಾಮನ ಮಗನಿಗೆ ರಾಜಾರಾಮ ದಿನವೂ ಶಾಲೆಯಿಂದ ಬರುವಾಗ ಮಾವಿನ ಹಣ್ಣುಗಳನ್ನು ತಾನೇ ಕೈಯ್ಯಾರೆ ಹರಿದು ಕೊಡುತ್ತಿದ್ದನಂತೆ. ಇದರಿಂದ ಅವನಿಗೆ ಸಂತೋಷವಾಗುತ್ತಿದ್ದರೂ ಎತ್ತರದ ಕಾರಣದಿಂದ ತನ್ನ ಕೈಗೆಟಕದಿರುವ ಹಣ್ಣುಗಳ ಬಗ್ಗೆ ಚೂರು ಅಸಹನೆ ಇದ್ದೇ ಇರುವುದನ್ನು ಅವನಮ್ಮ ಗಮನಿಸಿದ್ದಳಂತೆ. ನಿನ್ನೆಯಷ್ಟೇ ಮಾವಿನ ಹಣ್ಣುಗಳನ್ನು ಹಿಡಿದು ಜಿಗಿಯುತ್ತ ಬಂದ ಮಗನಲ್ಲಿ ಸಂತೋಷದ ಕಾರಣವನ್ನು ಕೇಳಿದಾಗ, “ಇವತ್ತು ನಾನೇ ಎಲ್ಲರಿಗೂ ಮಾವಿನ ಹಣ್ಣುಗಳನ್ನು ಕಿತ್ತುಕೊಟ್ಟೆ ಗೊತ್ತಾ?” ಎಂದು ಕಣ್ಣರಳಿಸಿದನಂತೆ. ಹೇಗೆಂದು ಪ್ರಶ್ನಿಸಿದ ಅಮ್ಮನಿಗೆ, “ಇಂದು ಮಾವಿನ ಹಣ್ಣುಗಳಿಗೆ ಕೈಚಾಚಿದ ರಾಜಕುಮಾರನ ಕೈಗೆ ಹಣ್ಣುಗಳು ಎಟುಕಲೇ ಇಲ್ಲ. ನನ್ನನ್ನು ತನ್ನ ಹೆಗಲ ಮೇಲೆ ಹೊತ್ತು ಹಣ್ಣುಗಳನ್ನು ಕೊಯ್ಯಲು ಹೇಳಿದ. ಎಲ್ಲರಿಗೂ ನಾನೇ ಹಣ್ಣುಗಳನ್ನು ಕೊಯ್ದು ಕೊಟ್ಟಿದ್ದು. ರಾಜಕುಮಾರರಿಗೆ ಕೂಡಾ.” ಅವನ ಸಂಭ್ರಮವನ್ನು ವಿವರಿಸಿಲು ತನ್ನಲ್ಲಿ ಪದಗಳಿಲ್ಲವೆಂದು ಗಂಗಾರಾಮನ ಹೆಂಡತಿ ಕಣ್ಣೊರೆಸಿಕೊಂಡಳು. ನಾನು ಮಗನ ನಡೆಯನ್ನು ನೆನೆದು ಅಭಿಮಾನದ ನಗೆ ನಕ್ಕೆ.

ರಾಜ್ಯಾಡಳಿತದಲ್ಲಿ ಎಲ್ಲ ಜಾತಿಯವರಿಗೂ ಮುಕ್ತ ಅವಕಾಶಗಳನ್ನು ನೀಡಿದಾಗಲೂ ಒಂದೇ ಜಾತಿಯವರ ಪ್ರಾಬಲ್ಯ ಕಣ್ಣಿಗೆ ರಾಚುತ್ತಿತ್ತು. ಯಾವ ಅರ್ಹತಾ ಮಾನದಂಡವನ್ನಿಟ್ಟರೂ ಸಲೀಸಾಗಿ ದಾಟುವವರು ಅವರೇ ಆಗಿರುತ್ತಿದ್ದರು. ಬೇರೇನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಅವರಿಗೆ ಪ್ರಜಾಹಿತವಾದ ಆಡಳಿತದ ಬಗ್ಗೆ ತರಬೇತಿಯನ್ನು ನೀಡಿಯಾದರೂ ಆಡಳಿತ ಯಂತ್ರವನ್ನು ಜನಪರವಾಗಿಸುವ ಯತ್ನದಲ್ಲಿ ನಾನಿದ್ದೆ. ಹಣ್ಣು ಕೊಯ್ಯುವ ಮಕ್ಕಳಾಟಿಗೆ ಇಂಥದೊಂದು ಸಂದಿಗ್ಧವನ್ನು ಪರಿಹರಿಸುವ ಮಾನದಂಡವಾಗಿ ನನಗೆ ದಕ್ಕಿತು. ಅರಮನೆಗೆ ಬಂದೊಡನೇ ದಂಡಾಧಿಕಾರಿಯ ಬಳಿ ಹೇಳಿ ರಾಜ್ಯಾಡಳಿತದ ಎಲ್ಲ ಹುದ್ದೆಗಳನ್ನು ಸಮುದಾಯದ ಪ್ರಾಬಲ್ಯಕ್ಕನುಗುಣವಾಗಿ ಸಮಾನವಾಗಿ ಹಂಚುವಂತೆ ಹೇಳಿದೆ. “ದೇವಸ್ಥಾನದ ಪೂಜೆಯ ಹುದ್ದೆಗೆ ಹೀಗೆ ಎಲ್ಲರನ್ನೂ…..” ಎಂದು ತಡವರಿಸಿದ ಅವನಿಗೆ, “ಛೇ, ಆ ಹುದ್ದೆಗೆ ಎಲ್ಲರನ್ನೂ ಸಾರಾಸಗಟಾಗಿ ನೇಮಿಸಲಾಗದೆಂದು ನನಗೂ ಗೊತ್ತು. ಆದರೆ ನಮ್ಮ ವೇದೋಕ್ತ ವಿದ್ಯಾಲಯದಲ್ಲಿ ಪದವಿ ಪಡೆದ ಎಲ್ಲ ವರ್ಗದವರಿಗೂ ಪೂಜಾರಿಯಾಗಲು ಅನುಮತಿಯಿದೆ.” ಎಂದಾಗ ಅವನಿಗೆ ತನ್ನ ತಪ್ಪಿನ ಅರಿವಾಯಿತು.  “ಬೆಸ್ಟ್ ಪಾರ್ಟ್ ಆಫ್ ಯುವರ್ ರೂಲಿಂಗ್ ಈಸ ದಿಸ್ ರಿಸರ್ವೇಶನ್. ಇಫ್ ಐ ಹ್ಯಾವ್ ದ ಪವರ್ ಐ ವಿಲ್ ಡೆಫಿನೇಟ್ಲಿ ಸಜೆಸ್ಟ್ ದಿಸ್ ಮೆಥಡ್ ಟು ಥ್ರೂಔಟ್ ಅವರ್ ಕಂಟ್ರಿ” ಎಂಬ ಭೀಮನ ಮಾತುಗಳು ನೆನಪಾಗುತ್ತಿವೆ. ಈ ಮಕ್ಕಳು ಮತ್ತು ಯುವಕರು ದಿನವೂ ಹೊಸಪಾಠಗಳನ್ನು ಕಲಿಸುತ್ತಲೇ ಇರುತ್ತಾರೆ. ನಾಳೆಯ ಅವನ ಭೇಟಿಗಾಗಿ ಇನ್ನಷ್ಟು ಕುತೂಹಲದಿಂದ ಕಾಯುತ್ತೇನೆ.

About The Author

ಸುಧಾ ಆಡುಕಳ

ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ