Advertisement
ಸುನಂದಾ ಕಡಮೆ ಬರೆದ ಈ ಭಾನುವಾರದ ಕತೆ “ನಿವೃತ್ತಿ”

ಸುನಂದಾ ಕಡಮೆ ಬರೆದ ಈ ಭಾನುವಾರದ ಕತೆ “ನಿವೃತ್ತಿ”

ಕೈಯಲ್ಲಿದ್ದ ಲಾಠಿಯಿಂದ ರಬ್ಬನೆ ಅವಳ ಕಾಲಿನ ಮೇಲೆ ಒಂದೇಟು ಬಿತ್ತು, ಇದನ್ನು ಮಾತ್ರ ಶೀಲಕ್ಕ ನಿರೀಕ್ಷಿಸಿರಲಿಲ್ಲ, ‘ಅಯ್ಯ ನಮ್ಮವ್ವ.. ನನಗ ಹೊಡೀತೀರಿ? ಅಯ್ಯ ಅಯ್ಯ..’ ಅಂತ ಮುಳುಮುಳು ಮಾಡಿದಳು. ಆಗಲೇ ಪ್ರತಾಪಣ್ಣ ಬಾಗಿಲು ತೆರೆದು ಗೇಟುದಾಟಿಯಾಗಿತ್ತು. ಅವಮಾನದಿಂದ ದುಃಖ ಉಮ್ಮಳಿಸಿತು, ಯಾಕೋ ಅವನು ಮೊದಲಿನಂತಿಲ್ಲ ಅನ್ನಿಸಿತು. ಬಲಗಾಲ ಮೀನಖಂಡದಲ್ಲಿ ಎದ್ದ ನೋವನ್ನು ನೀವಿಕೊಳ್ಳುತ್ತಿರುವಾಗಲೇ ಮಗ ಕಾಲ್ ಮಾಡಿದ, ವಿಷಯ ತಿಳಿದು ‘ಮೂವತ್ತೈದ ವರ್ಷ ತೊಟ್ಕೊಂಡ ಯೂನಿಫಾರ್ಮ ಐತದ, ಅದ್ನ ನೋಡ್ಕೋತ ಇದ್ರ ಅಪ್ಪಗ ಒಂಥರಾ ಟೆಮ್ಟ್ ಆಗ್ತಿರಬೇಕ, ನಾಳಿಂದ ಅದ್ನ ತಗದ ಎಲ್ಲರ ಹುಗಸಿ ಇಟ್ಬಿಡು’ ಅಂದ.
ಸುನಂದಾ ಕಡಮೆ ಬರೆದ ಕತೆ “ನಿವೃತ್ತಿ” ನಿಮ್ಮ ಈ ಭಾನುವಾರದ ಓದಿಗೆ

ಪೊಲೀಸ್ ಪ್ರತಾಪಣ್ಣನಿಗೆ ನಿವೃತ್ತಿಯ ದಿನ ಒಂದು ರೀತಿಯ ದಿಗಿಲು ಮತ್ತು ಅರ್ಥವೇ ಆಗದ ಅಸಮಾಧಾನ ಆವರಿಸಿಕೊಂಡಿತ್ತು. ಆತ ತನ್ನ ಆರೂವರಡಿ ದೇಹವನ್ನು ಹಾಸಿಗೆಗೆ ಅರ್ಪಿಸುತ್ತ ನಿಟ್ಟುಸಿರೊಂದನ್ನು ಬಿಟ್ಟಾಗ ರಾತ್ರೆ ಹನ್ನೊಂದಾಗಿರಬಹುದು. ಪಕ್ಕದಲ್ಲಿ ಪವಡಿಸಿದ ಅವನ ಪತ್ನಿ ಶೀಲಕ್ಕನಂತೂ ನಾಳೆಯಿಂದ ತಮ್ಮ ದೈನಿಕಗಳು ಬದಲಾಗುತ್ತವೆ ಎಂಬ ತುಡಿತದಿಂದ ಹೆಚ್ಚೇ ಸಂಭ್ರಮದಲ್ಲಿದ್ದಳು.

ಹಾಗೇ ನಿದ್ರಾದೇವಿ ಆಲಂಗಿಸಿಕೊಳ್ಳುತ್ತಿದ್ದ ಕ್ಷಣದಲ್ಲೇ ಪ್ರತಾಪಣ್ಣನಿಗೆ ತನ್ನ ಬಲಾಢ್ಯ ಶರೀರವನ್ನು ಯಾರೋ ಎತ್ತೆತ್ತಿ ಒಗೆದಂತೆ ಭಾಸವಾಯಿತು. ಮಲಗಿದ್ದ ಹಾಸಿಗೆಯೇ ಮುಳ್ಳಿನಿಂದ ಆವೃತವಾದಂತೆ ಅವನ ಸುಪ್ತಪ್ರಜ್ಞೆಯನ್ನು ಕೆಣಕತೊಡಗಿತು. ಪ್ರತಾಪಣ್ಣ ಹಾಸಿಗೆಯಲ್ಲೇ ಒದ್ದಾಡತೊಡಗಿದ.

ಕತ್ತು ಅಲಂಕರಿಸಿದ ಗುಲಾಬಿ ಹೂಕುಚ್ಚಿನ ಸೇವಂತಿಗೆ ಹೂಹಾರ, ಹೆಗಲ ಮುಚ್ಚಿದ ಜರಿಯಂಚಿನ ಶಾಲು, ಸೇಬು ದಾಳಿಂಬೆ ಮೂಸಂಬಿ ಬಾಳೆಹಣ್ಣುಗಳ ಗೋಪುರದ ದೊಡ್ಡ ಸ್ಟೀಲಿನ ತಟ್ಟೆಯೊಂದು ಮಿಂಚುವ ಪ್ಲಾಸ್ಟಿಕ್ಕಿನಲ್ಲಿ ಬಂಧಿಯಾಗಿ ತುದಿಯಲ್ಲೊಂದು ಸಾಟೀನ ಪಟ್ಟಿಯ ನಾಟ್ ಕಟ್ಟಿಸಿಕೊಂಡು ಹೊರಕೋಣೆಯ ಮೇಜಿನ ಮೇಲೆ ಇನ್ನೂ ನಳನಳಿಸುತ್ತಲೇ ಕೂತಿದ್ದವು.

ಕಳಚಿಟ್ಟ ಖಾಕಿ ಸಮವಸ್ತ್ರ ಮತ್ತು ಇಲಾಖೆಯ ಹೆಸರಿನ ಹಿತ್ತಾಳೆಯ ನೀಲಿ ಚೌಕವಿರುವ ಬೆಲ್ಟು, ಗೋಡೆಯ ಹ್ಯಾಂಗರಿಗೆ ತಟಸ್ಥ ಜೋತುಬಿದ್ದಿತ್ತು. ಎಲ್ಲ ಕಲಸುಮೇಲೋಗರವಾದಂಥ ಚಿತ್ರಗಳು ಈಗ ಪ್ರತಾಪಣ್ಣನ ಸ್ಥಿಮಿತ ತಪ್ಪಿಸುತ್ತಿದ್ದವು. ಶಾಕ್ ಟ್ರೀಟ್ಮೆಂಟ್ ಕೊಟ್ಟಂತೆ ಪ್ರತಾಪಣ್ಣ ಧಡಗ್ಗನೆ ಎದ್ದು ಕೂತಿದ್ದ.

‘ಇನ್ನೇನ ಬೆಂಗಳೂರಾಗ ಒಂಟಿಯಾಗಿರೋ ಮಗನ ಮದ್ವಿ ಒಂದ ಮಾಡಿ ಮುಗಸೀದ್ರ ನಮ್ಮ ಜವಾಬ್ದಾರಿ ಕಳೀತು’ ಎಂಬ ಕನಸಿನಲ್ಲೇ ಕಣ್ತೆರೆದು ಒರಗಿದ್ದ ಶೀಲಕ್ಕ, ಗಂಡನ ಈ ವರ್ತನೆಯನ್ನು ಅಚ್ಚರಿಯಿಂದಲೇ ಗಮನಿಸುತ್ತ ‘ಏನಾತ್ರೀ? ನೀರ್ ಗೀರ್ ಕುಡೀತೀರೆನ?’ ಅಂತೆಲ್ಲ ವಿಚಾರಿಸಿದಳು.

ಪ್ರತಾಪಣ್ಣ ಎದ್ದು ಬಾತ್ರೂಮಿಗೆ ನಡೆದ. ತೊಳೆದ ಮುಖವನ್ನು ಉಟ್ಟ ಲುಂಗಿಯಲ್ಲೇ ಒರೆಸಿಕೊಳ್ಳುತ್ತ ಹೊರಬಂದ. ನೇರ ಹಾಸಿಗೆಗೆ ಬರುತ್ತಾನೆ ಅಂತ ಶೀಲಕ್ಕ ಕಾದಳು. ಆದರೆ ಆತ ಯೂನಿಫಾರ್ಮ ಧರಿಸತೊಡಗಿದ್ದ. ಹೊಟ್ಟೆಗೆ ಬೆಲ್ಟು ಬಿಗಿದು ತಲೆಗೂದಲನ್ನು ಕೈಬೆರಳುಗಳಲ್ಲೇ ಸರಿ ಮಾಡಿಕೊಳ್ಳುತ್ತಿರುವುದನ್ನು ಶೀಲಕ್ಕ ಕೊಂಚ ತಮಾಷೆಯಲ್ಲಿಯೇ ಗಮನಿಸಿದಳು. ತನ್ನ ಬೆತ್ತವನ್ನು ಹುಡುಕಿ ಎತ್ತಿಕೊಂಡವ ಅವಸರದಲ್ಲೇ ಹೊರನಡೆದ.

‘ಅರೆ! ನಿದ್ದೀಗಣ್ಣಾಗ ಎಲ್ ಹೊಂಟ್ರಿ? ರಿಟಾಯರ್ ನೀವೀಗ’ ಶೀಲಕ್ಕ ತಮಾಷೆ ಮಾಡುವವಳಂತೆ ಅವನ ಹಿಂದೆಯೇ ಹೊರಬಂದರೆ ಆಗಲೇ ಶೂ ಹಾಕಿಕೊಳ್ಳತೊಡಗಿದ್ದ. ‘ಅಯ್ಯ ಸಿವನ, ಡ್ಯೂಟಿ ಐತೆನ ಇವತ್ತೂನು?’ ಅಚ್ಚರಿಯಿಂದಲೇ ಕೇಳಿದಳು. ಆಗಲೇ ಆತ ಬಾಗಿಲು ತೆರೆದು ಗೇಟು ದಾಟಿ ರಸ್ತೆಗೆ ಇಳಿದಾಗಿತ್ತು.

ಯಾವುದೋ ಬೇರೆ ಲೋಕದಲ್ಲಿರುವಂತೆ ಪ್ರತಾಪಣ್ಣ ನಡೆದುಹೋಗುತ್ತಿದ್ದ. ‘ಅಯ್ಯ ನಮ್ಮವ್ವ ಏನಾತಿವ್ರೀಗ? ಏನ್ಬಿಡ, ಹಿರೀ ಅಧಿಕಾರಿಗಳ ಮುಂದ ಕೈಕಟ್ಕೊಂಡ ಕುಂಯ್-ಕುಂಯ್ ಅನ್ಕೋತ ನಿಲ್ಲೂದೂ ಒಂದ ಕೆಲ್ಸಾನ ನಮ್ದು? ಅನ್ಕೋತ ಸೊಟ್ಮುಖಾ ಮಾಡ್ಕೊಂಡ ಇರಾವ್ರ ಯಾವಾಗ್ಲೂ.. ಈಗ್ಯಾಕ ಹೀಂಗ?’ ಅಂದುಕೊಳ್ಳುತ್ತಲೇ ಗಾಬರಿಯಿಂದ ಒಳಬಂದವಳೇ ಅವನ ನಂಬರಿಗೇ ಫೋನಾಯಿಸಿದಳು, ಅದು ಬೆಡ್‌ರೂಮಿನಲ್ಲೇ ರಿಂಗಾಯಿತು.

ಮಗನ ನಂಬರ್ ಸ್ವಿಚ್ ಆಫ್ ಬಂತು. ‘ಮಾರ್ನಿಂಗ್ ಶಿಫ್ಟ್ ಐತಿ, ಮಲಕೋತೇನಮ್ಮ’ ಅಂತ ಅವ ಹೇಳಿದ್ದು ನೆನಪಾಯಿತು. ಶೀಲಕ್ಕನಿಗೆ ಜಾಗರಣೆ. ಬೆಳಿಗ್ಗೆ ಆರರ ಸುಮಾರು ಮಗ ಫೋನಿನಲ್ಲೇ ‘ಬರ್ತಾರ ಬಿಡಮ್ಮ, ಅವ್ರೇನ್ ಸಾಣ್ ಕೂಸೆನ?’ ಅಂತ ಸಮಾಧಾನಿಸಿದ. ಇದ್ದಕ್ಕಿದ್ದಂತೆ ಮಧ್ಯಾಹ್ನದ ಹೊತ್ತಿಗೆ ಪ್ರತಾಪಣ್ಣ ಪ್ರತ್ಯಕ್ಷನಾದ. ಶೂ ಕಳಚಿಟ್ಟು ಮಲುಗುವ ಕೋಣೆ ಹೊಕ್ಕ, ‘ಅಯ್ಯ, ಒಂದೂ ಮಾತಾಡ್ದ ನಿನ್ನಿ ಯಾಕಂಗ ಹೋದ್ರೀ?’ ಶೀಲಕ್ಕನ ಪ್ರಶ್ನೆ ಅವನ ಕಿವಿಗೇ ಬೀಳಲಿಲ್ಲ.

ಯೂನಿಫಾರ್ಮ ಎಂದಿನಂತೆ ಹ್ಯಾಂಗರಿಗೆ ಜೋತುಬಿತ್ತು. ಅವನ ನಡುವನ್ನು ಅಷ್ಟೇ ಅಸ್ತವ್ಯಸ್ತವಾಗಿ ನೀಲಿ ಚೌಕಡಿ ಲುಂಗಿ ಸುತ್ತಿಕೊಂಡಿತು. ಶರವೇಗದಲ್ಲಿ ಬಾತ್ರೂಮಿಗೆ ಹೋಗಿಬಂದ ಪ್ರತಾಪಣ್ಣನ ಶರೀರ ಹಾಸಿಗೆಗೆ ಬಿದ್ದ ಎರಡೇ ನಿಮಿಷದಲ್ಲಿ ಗೊರಕೆಗೆ ಜಾರಿತ್ತು. ಶೀಲಕ್ಕನಿಗೆ ನಿನ್ನೆ ರಾತ್ರೆ ನಡೆದದ್ದು ಭ್ರಮೆಯೋ ಕನಸೋ ಎಂಬ ಅನುಮಾನ.

ಅಷ್ಟರಲ್ಲಿ ಅವನ ಫೋನ್ ರಿಂಗಾಗಿ ಶೀಲಕ್ಕನೇ ರಿಸೀವ್ ಮಾಡಿದಳು. ಸ್ಟೇಷನ್ನಿನಿಂದ ಪೊಲೀಸರೊಬ್ಬರು ಮಾತಾಡಿದರು. ‘ನಿನ್ನೆ ರಾತ್ರಿ ಯೂನಿಫಾರ್ಮನಾಗ ಪ್ರತಾಪಣ್ಣ ಉಣಕಲ್ ಕೆರಿ ದಂಡೀಗ ಗಸ್ತು ಹೋಗಿದ್ರಂತ ಖರೇವೇನ್ರೀ ಅಕ್ಕಾರ?’ ಅಂತ ಕೇಳಿದರು. ಗಾಬರಿಯಾದ ಶೀಲಕ್ಕ ನಡೆದ ಸಂಗತಿ ವಿವರಿಸಿದಳು. ‘ನಿನ್ನೆ ಪಿಯೂಸಿ ರಿಸಲ್ಟ್ ಇತ್ತಲ್ರೀ, ಅಲ್ಲಿ ನಂ ಬ್ಯಾರೇ ಪೊಲೀಸ್ರನ್ನೂ ಹಾಕಿದ್ವಿ ಗಸ್ತೀಗೆ, ಅವ್ರು ಕಂಪ್ಲೆಂಟ್ ಮಾಡ್ಯಾರ, ರಿಟೈರ್ ಆದಮ್ಯಾಗ ಯೂನಿಫಾರ್ಮ ಹಾಕೀದ್ರ ರೂಲ್ಸ್ ಬ್ರೇಕ್ ಆಕ್ಕೇತ್ರಿ, ಅದ್ಕ ಸಾಹೇಬ್ರು ತಿಳಸ ಅಂದರ‍್ರೀ’ ಅಂತ ಫೋನಿಟ್ಟರು.

ರೊಟ್ಟಿ ಬಡಿದು ಕೈತೊಳಕೊಂಡ ಶೀಲಕ್ಕ ಈಗ ಸ್ವಲ್ಪ ರೊಚ್ಚಿಗೆದ್ದಿದ್ದಳು. ‘ಆಗಿದ್ದರ ಏನ್ ನಿಮ್ಗ? ಎದ್ದಬಂದ ಊಟಾಗೀಟಾ ಮಾಡ್ತಿರ ಇಲ್ಲ?’ ದೊಡ್ಡಬಾಯಿ ಕೇಳಿ ಪ್ರತಾಪಣ್ಣ ಎದ್ದ. ಸಾಕು-ಬೇಕು ಚಕಾರವೆತ್ತದೇ ರೊಟ್ಟಿ-ಮಡಕೀಕಾಳಿನ ಪಲ್ಯ ತಿಂದ. ಅವನ ಮೊಬೈಲ್ ಆಗೀಗ ರಿಂಗಾಗುತ್ತಲೇ ಇತ್ತು. ‘ಯಾರ ಫೋನ್ ಅಂತರ ನೋಡ್ಬೇಕ ಬ್ಯಾಡ? ರಿಟೈರ್ ಆಗಿದ್ದ ನೆಪೈತೋ ಇಲ್ಲೋ ನಿಮ್ಗ?’ ಪತ್ನಿ ಗದರಿದ್ದು ಅವನ ಕಿವಿಗೇ ಮುಟ್ಟಲಿಲ್ಲ. ಮತ್ತೆ ಹೋಗಿ ಹಾಸಿಗೆಯಲ್ಲುರುಳಿದ. ರಾತ್ರಿ ಡ್ಯೂಟಿಯಿದ್ದಾಗ ಇದೇ ಅವನ ದಿನಚರಿಯಾಗಿದ್ದುದರಿಂದ ಅವಳಿಗೆ ಅಂಥ ವ್ಯತ್ಯಾಸವೇನೂ ಕಾಣಲಿಲ್ಲ.

ಶೀಲಕ್ಕ ಆ ರಾತ್ರಿ ಮಲಗಿದ ಸ್ವಲ್ಪ ಹೊತ್ತಿನ ಬಳಿಕ ಏನೋ ಸದ್ದಾದಂತೆ ಆಚೆ ತಿರುಗಿದರೆ, ಪ್ರತಾಪಣ್ಣ ಮತ್ತೆ ಯೂನಿಫಾರ್ಮ ಧರಿಸುತ್ತಿದ್ದ, ನಂತರ ಅಲ್ಲೇ ಮೂಲೆಗಿದ್ದ ಬೆತ್ತ ಹಿಡಿದು ಅವಸರದಲ್ಲೇ ಹೊರನಡೆದವನನ್ನು ತಡೆಯುತ್ತ ‘ಏಲ್ ಹೊಂಟ್ರಿ, ಏನಾಗೇತ ನಿಮ್ಗ? ಸ್ಟೇಷನ್ನಿಂದ ಫೋನ್ ಬಂದಿತ್ತು, ಹಂಗ ರಿಟೈರ್ ಆದಮ್ಯಾಗ ಯೂನಿಫಾರ್ಮ ಹಾಕ್ಕೊಂಡ್ರ ತಪ್ಪಾಕ್ಕೇತಂತ’ ಅನ್ನುತ್ತಲೇ ಅವನನ್ನು ಹಿಡಿದು ನಿಲ್ಲಿಸಲು ಹೆಣಗಾಡಿದಳು.

ಕೈಯಲ್ಲಿದ್ದ ಲಾಠಿಯಿಂದ ರಬ್ಬನೆ ಅವಳ ಕಾಲಿನ ಮೇಲೆ ಒಂದೇಟು ಬಿತ್ತು, ಇದನ್ನು ಮಾತ್ರ ಶೀಲಕ್ಕ ನಿರೀಕ್ಷಿಸಿರಲಿಲ್ಲ, ‘ಅಯ್ಯ ನಮ್ಮವ್ವ.. ನನಗ ಹೊಡೀತೀರಿ? ಅಯ್ಯ ಅಯ್ಯ..’ ಅಂತ ಮುಳುಮುಳು ಮಾಡಿದಳು. ಆಗಲೇ ಪ್ರತಾಪಣ್ಣ ಬಾಗಿಲು ತೆರೆದು ಗೇಟುದಾಟಿಯಾಗಿತ್ತು. ಅವಮಾನದಿಂದ ದುಃಖ ಉಮ್ಮಳಿಸಿತು, ಯಾಕೋ ಅವನು ಮೊದಲಿನಂತಿಲ್ಲ ಅನ್ನಿಸಿತು. ಬಲಗಾಲ ಮೀನಖಂಡದಲ್ಲಿ ಎದ್ದ ನೋವನ್ನು ನೀವಿಕೊಳ್ಳುತ್ತಿರುವಾಗಲೇ ಮಗ ಕಾಲ್ ಮಾಡಿದ, ವಿಷಯ ತಿಳಿದು ‘ಮೂವತ್ತೈದ ವರ್ಷ ತೊಟ್ಕೊಂಡ ಯೂನಿಫಾರ್ಮ ಐತದ, ಅದ್ನ ನೋಡ್ಕೋತ ಇದ್ರ ಅಪ್ಪಗ ಒಂಥರಾ ಟೆಮ್ಟ್ ಆಗ್ತಿರಬೇಕ, ನಾಳಿಂದ ಅದ್ನ ತಗದ ಎಲ್ಲರ ಹುಗಸಿ ಇಟ್ಬಿಡು’ ಅಂದ.

ಶೀಲಕ್ಕನಿಗೆ ನಿದ್ದೆ-ಎಚ್ಚರದ ಒಂಥರಾ ಮಂಪರು ಸ್ಥಿತಿ, ಆಗಲೇ ಹೊರಗೆ ಚುಮುಚುಮು ಬೆಳಕು. ಬಾಗಿಲು ಟಕಟಕ ಸದ್ದು, ಎದ್ದು ಕಿಟಕಿಯಲ್ಲಿ ಹಣಕಿದರೆ ಪ್ರತಾಪಣ್ಣ! ಚಿಲಕ ತೆಗೆದದ್ದೇ ಬಾಗಿಲು ದೂಡಿಕೊಂಡು ಒಳಬಂದ. ಶೀಲಕ್ಕ ಒಳಬರುವಷ್ಟರಲ್ಲಿ ಅವನು ಯೂನಿಫಾರ್ಮ ತೆಗೆದು ಲುಂಗಿ ಬನಿಯನ್ನಿನಲ್ಲಿ ಹಾಸಿಗೆಯಲ್ಲಿ ಬಿದ್ದುಕೊಂಡಾಗಿತ್ತು.

ಅಂದು ಗೇಟಿನೆದುರು ನೀರು ಚಿಮುಕಿಸಿದ ಶೀಲಕ್ಕ ಏಳರಿಂದ ನಾಲ್ಕು ರಂಗೋಲಿಗೆ ಚುಕ್ಕೆ ಇಡುತ್ತಿದ್ದಳು. ತನ್ನ ಎರಡು ವರ್ಷದ ಮೊಮ್ಮಗುವನ್ನು ಟೊಂಕಕ್ಕೇರಿಸಿ ಇಡ್ಲಿ ತಿನ್ನಿಸುತ್ತ ಬಂದು ನಿಂತ, ಕೊನೇ ಮನೆಯ ಸರೋಜಕ್ಕ ‘ನಿಮ್ಮ ಮನೀಯೋರು ರಿಟೈರ್ ಆದ್ರೆನ?’ ಅಂತೊಂದು ಪ್ರಶ್ನೆಯೊಗೆದಳು. ‘ಹೂನ್ರೀ..’ ಎನ್ನುತ್ತ ಚುಕ್ಕಿಗಳನ್ನು ಒಂದಕ್ಕೊಂದು ಸೇರಿಸಲು ಅನುವಾದಾಗಲೇ ಸರೋಜಕ್ಕ ‘ಏನೂ ತಿಳ್ಕೋಬ್ಯಾಡ್ರೀ ಶೀಲಕ್ಕ, ಮಸೀದಿ ಹತ್ರದ ಹುಲಿಗೆಮ್ಮನ ಗುಡೀಕಡೆ ಒಂದ ಬಸ್ಟಾಪೈತಲಾ, ಅದರ ಬೆಂಚಿನ ಮ್ಯಾಗ ನಿಮ್ ಮನೀಯವ್ರು ಮಲಗಿದ್ರಂತ, ನನ್ ಮಗಾ ಜಿಮ್ ಮುಗ್ಸಿ ಬರೂಮುಂದ ನೋಡಿದ್ನಂತ’ ರಂಗೋಲಿಯ ಚುಕ್ಕೆಗಳು ಒಂದಕ್ಕೊಂದು ಸೇರದೇ ಸತಾಯಿಸಿದವು. ಎದೆಯಲ್ಲಿ ಎಂಥದೋ ಕಂಪನ.

ಶೀಲಕ್ಕ ಒಳಬಂದು ಮಲಗಿದ್ದ ಗಂಡನನ್ನು ಒಮ್ಮೆ ದೀರ್ಘವಾಗಿ ನೋಡಿದಳು. ನಿಶ್ಚಿಂತೆಯಿಂದ ನಿದ್ದೆಹೋದಂತಿತ್ತು ಅವನ ಭಂಗಿ. ‘ಐದೂವರೀ ನಸಗತ್ಲಾಗ ಜಿಮ್ಮೀಗ ಹೋಗಾಂವ, ಯಾರ‍್ನ ಕಂಡು ಇವ್ರ ಅಂತ ತಿಳದ್ನೋ ಏನೋ ಬಾಡ್ಯಾ’ ಅಂತೆಲ್ಲ ಯೋಚಿಸುತ್ತ ಒಳಗೆಲ್ಲೋ ಸಮಾಧಾನಗೊಳ್ಳಲು ಯತ್ನಿಸಿದಳು.

ಅದೇ ಸಂಜೆ ಎದುರು ಮನೆಯ ನೀಲಕ್ಕನ ಜೊತೆ ಸನಿಹದ ಬನಶಂಕರಿ ದೇವಸ್ಥಾನಕ್ಕೆ ಹೋದಳು ಶೀಲಕ್ಕ. ಅಲ್ಲಿ ಗಾರ್ಡನ್ನಿನ ಬೆಂಚಿನಲ್ಲಿ ಕೂತಾಗ ಅಲ್ಲೇ ಪಕ್ಕದಲ್ಲಿ ನೀಲಕ್ಕನ ಪರಿಚಯದ ಹೆಣ್ಮಗಳು ಸುನಿತಾ ತನ್ನ ಮಗುವಿಗೆ ಪ್ರಸಾದದ ಬಾಳೆಹಣ್ಣು ತಿನ್ನಿಸುತ್ತಿದ್ದಳು. ಅಷ್ಟರಲ್ಲೇ ಅಸ್ತವ್ಯಸ್ತ ಸೀರೆಯ ಕೆದರಿದ ತಲೆಯ ಭ್ರಮಿತಳಂತಿರುವ ನಲವತ್ತರ ಆಸುಪಾಸಿನ ವಯದ ಹೆಂಗಸೊಬ್ಬಳು ಇವರು ಕೂತಿದ್ದಲ್ಲಿಗೆ ಬಂದು ಹಸ್ತ ಚಾಚಿ ‘ತಿನ್ನಾಕೇನರ ಕೊಡಿ’ ಅನ್ನುವಂತೆ ಕೈಸನ್ನೆ ಮಾಡಿದಳು. ಅವಳಿಂದ ತಪ್ಪಿಸಿಕೊಳ್ಳಲೆಂಬಂತೆ ಮೂವರೂ ಅಲ್ಲಿಂದೆದ್ದು ಬೇರೆಡೆಗೆ ನಡೆಯತೊಡಗಿದರು.

ಆಗ ಸುನಿತಾ ‘ಈಕೀದ ಒಂದ ದೊಡ್ ಕಥೀನ ಐತ್ರೀ, ಅಲ್ಲೇ ನಮ್ಮನೀ ಕಡೆ ಹುಲಿಗೆಮ್ಮನ ಗುಡಿ ಐತೆಲಾ, ಅದಕ ತಾಗೇ ಒಂದ ಸಣ್ಣದ ಮಾಡ ಐತ್ರಿ ಹುಲ್ಲಿಂದ, ಅಲ್ಲೇ ಇರತಾಳ ಈಕಿ, ನಿನ್ನೆ ರಾತ್ರಿ ಹನ್ನೆರಡೂವರಿ ಸುಮಾರೀಗ ಯಾರೋ ಮೂರ್ನಾಕ ಕುಡಕ-ಪಡಕ ಮಂದಿ, ಅಕೀನ ಎಲ್ಲೆಲ್ಲೂ ಬಿಡದಂಗ ಜಗ್ಯಾಡಾಕಹತ್ತಿದ್ರೀ, ಭಾಳ ಒದರಕೊಂಡ್ಲರೀ ಪಾಪ, ಇಡೀ ರಾತ್ರಿ ನನಗ ಹಿಂಗಂತ ಕಣ್ಣ ಹತ್ತಲಿಲ್ಲ ನೋಡ್ರಿ’ ಅಂತೆಲ್ಲ ಹೇಳಲುಪಕ್ರಮಿಸಿದ್ದಳು.

ನೀಲಕ್ಕ ಮರುಗುತ್ತ ‘ಅಯ್ಯ ನಮ್ಮವ್ವ ಹುಲಿಗೆಮ್ಮನ ಕಾಯ್ಬೇಕ ಬಿಡ್ರಿ ಈಕೀನ್ನ, ಏನ್ ಬಾಳೇವ್ರೀ ನಮ ಹೆಣಮಕ್ಳದು’ ಅಂದರು. ‘ಆಮ್ಯಾಗ ಅಚಿಕಡೆ ಮಸೀದಿ ಐತಲ್ರೀ, ಅದ್ನ ಕಾಯ್ಕೋತ ಒಬ್ಬ ಪೋಲೀಸ್ ಇರ್ತಾನ್ರೀ, ಅವ್ನ ಬಂದು ಬಿಡಸೀದಾ ಅಂತ ನಂ ಬಾಜೂ ಮನೀಯವ್ರ ಅಂದರ‍್ರಿ, ನಾ ಮುಂಜಾನೆದ್ದ ನೋಡ್ವಾಗ ಆ ಪೊಲೀಸಪ್ಪ ಎದ್ರಗಡೆ ಬಸ್ಟಾಪಿನ ಬೆಂಚಿನ ಮ್ಯಾಗ ಮಕ್ಕೊಂಡಿದ್ದ’ ಅಂದದ್ದಕ್ಕೆ ನೀಲಕ್ಕ ಅಷ್ಟೇ ಸಹಜವಾಗಿ ‘ಹೌದ? ಎಷ್ಟ ಅಂದ್ರೂ ಅವ್ನೂ ಒಬ್ಬ ಗಂಡಸ, ಹ್ಯಾಂಗ ನಂಬೂದ ಹೇಳ್ರೀ..’ ಆಲಿಸುತ್ತಿದ್ದ ಶೀಲಕ್ಕನ ಕಾಲುಗಳು ಕಂಪಿಸುತ್ತ ತಪ್ಪು ಹೆಜ್ಜೆಗಳನ್ನು ಹಾಕತೊಡಗಿದವು.

ರಾತ್ರಿಯಾಗುತ್ತಿದ್ದಂತೆಯೇ ಶೀಲಕ್ಕ ಯೂನಿಫಾರ್ಮನ್ನು ಅಡುಗೆ ಖೋಲಿಯ ಮೂಲೆಯಲ್ಲಿ ಅಡಗಿಸಿಟ್ಟಳು. ಅಂದು ರಾತ್ರಿ ರೂಮನ್ನೆಲ್ಲ ಜಾಲಾಡಿದ ಪ್ರತಾಪಣ್ಣ ಮನೆಯ ಡ್ರೆಸ್ಸಿನಲ್ಲೇ ಹೊರನಡೆದಿದ್ದ. ಆದರೆ ಆ ರಾತ್ರಿ ಹೋದವ ಮರುದಿನ ಹಿಂತಿರುಗದೇ ಇದ್ದಾಗ ಶೀಲಕ್ಕನಿಗೆ ವಿಚಿತ್ರ ತಳಮಳ ಆವರಿಸಿತು. ಅವಳು ಮಾಡಿದ ಮೊದಲ ಕೆಲಸವೆಂದರೆ ಬೆಂಗಳೂರಿನ ಮಗನನ್ನು ಕರೆಸಿಕೊಂಡದ್ದು.

ಅಂದು ಮತ್ತೆ ಸ್ಟೇಷನ್ನಿನಿಂದ ಫೋನ್ ಬಂತು. ಪ್ರತಾಪಣ್ಣ ರಾತ್ರಿ ಡ್ಯೂಟಿ ಮಾಡುತ್ತಿದ್ದ ಪೊಲೀಸರೊಬ್ಬರನ್ನು ಹೊಡೆದು ಯೂನಿಫಾರ್ಮ ಕಿತ್ತುಕೊಂಡು ಓಡಿದ್ದಕ್ಕೆ ಪ್ರತಾಪಣ್ಣನ ಮೇಲೆ ಕಂಪ್ಲೆಂಟ್ ಇಶ್ಯೂ ಆಗಿತ್ತು. ಆತ ರಿಟೈರ್ ನಂತ್ರ ಮಾನಸಿಕ ರೋಗಿಯಾಗಿದ್ದಾನೆ ಅಂತ ಎಲ್ಲೆಡೆ ಸುದ್ದಿಯಾಯಿತು. ಮನೆಗೂ ಕೆಲ ಪೊಲೀಸರು ಬಂದು ವಿಚಾರಿಸಿಕೊಂಡು ಹೋದರು.

ಪ್ರತಾಪಣ್ಣ ಈಗ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ. ಹಾಡು ಹಗಲೇ ಅಂದು ಏರ್ಪೋರ್ಟ್‌ ರಸ್ತೆಯಲ್ಲಿ ನಡೆದ ಆಭರಣ ಕಳುವು ಹಾಗೂ ರವಿನಗರ ಪೆಟ್ರೋಲ್ ಬಂಕಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಕೊಲೆಯೊಂದು ಈತನೇ ಮಾಡಿದ್ದು ಅಂತ ಶಂಕಿಸಲಾಯಿತು. ಈಗ ಪಕ್ಕದ ಇಂಡಸ್ಟ್ರಿಯಲ್ ಎಸ್ಟೇಟಿನಲ್ಲಿ ಅಡಗಿದ್ದಾನೆ ಅಂತ ಯಾರೋ ಹೇಳಿದರು. ಇತ್ತ ತಾಯಿ ಮಗ ಇಬ್ಬರೂ ಅವ್ಯಕ್ತ ಭೀತಿಯಿಂದ ಚಡಪಡಿಸುತ್ತ ಕೂತಿದ್ದರು.

ಇವೆಲ್ಲ ಡಿಪಾರ್ಟಮೆಂಟಿನ ಮರ್ಯಾದೆಯ ಸಂಗತಿಯಾಗಿರುವುದರಿಂದ ಈಗ ಪೊಲೀಸ್ ಅಧಿಕಾರಿಗಳ ತಂಡವೊಂದು ನಿಸೂರಾಗಿ ಅವನ ಹಿಂದೆ ಬಿತ್ತು. ಇಂಡಸ್ಟ್ರಿಯಲ್ ಎಸ್ಟೇಟಿನ ಕೆಲ ಶೆಡ್‌ಗಳನ್ನು ಆಯ್ದುಕೊಂಡ ಪ್ರತಾಪಣ್ಣ ತನ್ನ ಅಡಗುತಾಣವನ್ನು ಕ್ಷಣಕ್ಷಣಕ್ಕೂ ಬದಲಿಸುತ್ತಿದ್ದ. ಕಂಡ ತಕ್ಷಣ ಯಾವುದೋ ಮಾಯದಲ್ಲಿ ಚಕ್ಕನೆ ಮರೆಯಾಗುತ್ತಿದ್ದ.

ಆತನ ಚಾಕಚಕ್ಯತೆಗೆ ಉಳಿದಿರುವುದು ಫೈರಿಂಗ್ ಒಂದೇ ಎಂದು ನಿರ್ಧರಿಸುತ್ತಿರುವಾಗಲೇ, ಸೋಜಿಗವೆಂಬಂತೆ ಶೆಡ್ ಜಗತ್ತಿನಲ್ಲಿ ಸೃಷ್ಟಿಗೊಂಡಿದ್ದ ಬೇರೆಯದೇ ಅಕ್ರಮ ಲೋಕವನ್ನು ಪೊಲೀಸರು ಪತ್ತೆಹಚ್ಚುವಂತಾಯಿತು.

ಬೇರೆ ಬೇರೆ ಉತ್ಪಾದನೆಗಳ ಹೆಸರಿಟ್ಟುಕೊಂಡ ಬೋರ್ಡ್ ಹೊಂದಿರುವ ಎಲ್ಲ ಶೆಡ್ಡುಗಳಲ್ಲಿಯೂ ಕಾಲೇಜುಗಳಿಗೆ ಸಪ್ಲೈ ಆಗುತ್ತಿದ್ದ ಡ್ರಗ್ಸ್ ದಂಧೆಯ ದೊಡ್ಡ ಗ್ಯಾಂಗ್, ಪೊಲೀಸರ ಕೈಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿತ್ತು.

ಇಲಾಖೆಗೆ ಇವೆಲ್ಲ ಒಂದು ಸಖೇದಾಶ್ಚರ್ಯದ ಸಂಗತಿ. ತನಗೆ ಬಹುವರ್ಷಗಳಿಂದ ಸಂಶಯವಿದ್ದ ಎಲ್ಲ ಶೆಡ್‌ಗಳಲ್ಲೂ ಅಡಗಿ ಕುಳಿತು ಪೊಲೀಸರನ್ನು ಅಲ್ಲಿಗೆ ಸೆಳೆದ ನಂತರ, ಕಟ್ಟಕಡೆಯಲ್ಲಿ ಪ್ರತಾಪಣ್ಣ ಶರಣಾಗಿದ್ದ.

ಅತ್ತ ಕೊಲೆ ಮತ್ತು ಆಭರಣದ ಬೇರೆ ಕಳ್ಳರೂ ಸಿಕ್ಕಿಬಿದ್ದ ವಿಷಯ ತಿಳಿಯುತ್ತಿದ್ದಂತೆಯೇ, ಇತ್ತ ಪೊಲೀಸ್ ಅಧಿಕಾರಿಗಳು ಪ್ರತಾಪಣ್ಣನ ಕೈಕುಲುಕಿ ಸೆಲ್ಯೂಟ್ ಹೊಡೆದಿದ್ದರು. ಅವನನ್ನು ಪೊಲೀಸ್ ಜೀಪಿನಲ್ಲೇ ಮನೆಗೆ ಕಳಿಸುವ ಏರ್ಪಾಡೂ ಮಾಡಿದರು.

ತನ್ನ ಮೂವತ್ತೈದು ವರ್ಷಗಳ ಅಸಹಾಯಕ ಭಾವತೀವ್ರತೆಯಿಂದ ಹೊರಬಂದ ಹೆಮ್ಮೆಯಿಂದ, ಮನೆಗೆ ಹಿಂತಿರುಗಿದ ಪ್ರತಾಪಣ್ಣನ ಮುಖದಲ್ಲಿದ್ದ ಪ್ರಸನ್ನತೆಯೊಂದು ಸ್ವತಃ ಅವನ ಪತ್ನಿ ಮತ್ತು ಮಗನ ಗಮನಕ್ಕೂ ಬರಲಿಲ್ಲ.

About The Author

ಸುನಂದಾ ಪ್ರಕಾಶ ಕಡಮೆ

ಕಥೆಗಾರ್ತಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸದ್ಯ ಹುಬ್ಬಳ್ಳಿ ನಿವಾಸಿ. ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವರ ಪ್ರಕಟಿ ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು (ಕಾದಂಬರಿಗಳು). ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳೂ ಪ್ರಕಟವಾಗಿವೆ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ