ಧ್ಯಾನಕ್ಕೆ ಗುಹೆ ಬೇಕಿಲ್ಲ
ನಿಶ್ಯಬ್ದ ಪ್ರಾರ್ಥನೆಯ
ಮಾಯಾ ಬಜಾರಿನ ಮುಂದೆ
ದುಬಾರಿ ಪಾದರಕ್ಷೆಗಳ ಸಣ್ಣ ಸದ್ದು
ಕಾಲದ ದಿವ್ಯ ನಿರ್ಲಕ್ಷ್ಯ
ಪಯಣ ಸುದೀರ್ಘ ಎನಿಸಲು
ಆಟಿಕೆಗಳು ಆಗಂತುಕವಾಗಿ ಮುರಿದು ಬಿಡುತ್ತೇವೆ
ಮಿಣುಕು ಮಿಣುಕು ಮಿಂಚಿನ
ಕಣ್ಣುಗಳಲ್ಲಿ
ಪರಿಚಯ ಆಗಿಬಿಡುವ ಮೊದಲೇ
ಮಾತು ಬಿಕ್ಕಳಿಸಿ ಮೌನ ಉಸಿರಾಡುತ್ತಾ
ಏಕಾಂತಕ್ಕೆ ಜಾರುತ್ತೇನೆ
ಅಳಿವು ಉಳಿವು ಹುಟ್ಟು ಸಾವಿನ ದೌಲತ್ತಿನ ಮುಂದೆ
ಉತ್ತರಿಸುವುದೆ ಅಂತಿಮವಲ್ಲ
ಪ್ರಶ್ನೆಗಳ ಸುರಿಮಳೆ ನಿಲ್ಲಿಸಲಾಗದು
ದುಖಾನಿನಿಂದ ದೂರವಾಗಿ ಉಳಿದರು
ಕೇಳದ ಹೃದಯಗಳ ಕಂಪನ
ಚೆಲ್ಲಾಪಿಲ್ಲಿಯಾಗಿ ಬಿದ್ದ ಕನಸುಗಳು
ಎದೆಯಲ್ಲಿ ಮುರಿದ ಮುಳ್ಳೊಂದು
ತೂಕದ ಕಲ್ಲುಗಳನ್ನು ನಂಬಿದ ತಕ್ಕಡಿ ಪರಡೆ
ಹಸಿದ ಹಸಿವಿಗೆ ಹಸಿವೇ ಉಣಿಸಿದ
ಹಸಿವು ಕೂಡ ಇಲ್ಲಿ ತೀರ ಕ್ಷಣಿಕ
ಬಸವನ ಹುಳುವಿಗೆ ಮೂಡಿದ ರೆಕ್ಕೆಯ
ಅಪೀಲ್ ಅರ್ಜಿ ಗುಜರಾಯಿಸಿ
ಸತ್ಯಕ್ಕೆ ಬಣ್ಣ ಬಳಿದ ದಾಸ್ತಾನಿನ ಗೋದಾಮು
ಆರೋಗ್ಯ ಕರ
ವಾದ ಒಂದು ದಿನ ಸಾಕು
ದೇವರನ್ನು ಇನ್ನೆಷ್ಟು ಸಿಂಗರಿಸುವುದು
ಮೃತ್ಯುವನ್ನು ಚುಂಬಿಸಿದರು
ಕಾಲ ನಮ್ಮ ಪರವಾಗಿರಲು ವಿಷವೂ ಅಮೃತವಾಗುತ್ತದೆ
ಶತಮಾನಗಳಿಂದ ಹರಿಯುವ ನದಿ
ಇಲ್ಲವಾಗುವ ಸೂಚನೆ
ಗ್ರಹಣ ಹಿಡಿದ ಕಣ್ಣುಗಳು
ಮುಕ್ತ ಆಕಾಶದಲ್ಲಿ ಕಳೆಗುಂದಿದ ಸೂರ್ಯ
ಹೃದಯದ ನಾಲ್ಕು ಕೋಣೆಗಳ
ದುರಸ್ತಿ ಕಾಮಗಾರಿ ಪರಿಶೀಲನೆಯಲ್ಲಿದೆ
ಈ ಧ್ಯಾನಸ್ಥ ಸ್ಥಿತಿಯಲ್ಲೂ ಕವಿಯ ಕಣ್ಣಲ್ಲಿ ಆತಂಕ ಆವರಿಸಿದೆ
ಮೈಲಿಗಲ್ಲುಗಳ ಎಣಿಸುತ್ತಾ ಎಣಿಸುತ್ತಾ
ಲೆಕ್ಕ ತಪ್ಪಿದ ಮಳೆಗಾಲದ ಮಳೆ
ಹಾರುವ ಹಕ್ಕಿಗಳ ತಪ್ಪಿದ ದಾರಿ
ನನಗೂ ರೆಕ್ಕೆ ಇರಬಾರದಿತ್ತೇ?
ಸಾಲು ಮರೆತ ಇರುವೆ ಹಿಂಡಿನ
ಕೂಗು ಕೇಳಿ ಬರಲು
ಕಲ್ಲುಗಳಿಗೆ ಈಗ ಮೊದಲಿನಂತೆ ಹಣ್ಣುಗಳು ಉದುರುವುದಿಲ್ಲ
ಇನ್ನೂ ಈ ಋತುವಿನಲ್ಲಿ ಯಾವ ಹೂವು ಬೆಳೆಯಲಿ
ಜಗವ ಕಾಯುವ ಪತ್ತೆದಾರಿ ಮಹಾನೇತ್ರ
ಕನ್ನಡಿಯಿಂದ ಕನ್ನಡಿಗೆ ಪ್ರತಿಬಿಂಬಿತ
ಹೊಂಚು ಹಾಕುವ ಪ್ರತಿಫಲಿತ ಕನ್ನಡಿಗಳು
ನಿರ್ಜೀವ ಪ್ರತಿಮೆಯ ದೇವರೇ
ಸುಮ್ಮನಿದ್ದು ಬಿಡು
ಸದ್ದು ಕೇಳುತ್ತಲೇ ಇದ್ದೇವೆ
ಮಗುವಿನ ಸದ್ದು ಕನ್ಯೆಯ ಸದ್ದು ಹಸಿದ ಹೊಟ್ಟೆಯ ಸದ್ದು
ಏಕೆ ನಾನು ನಿನ್ನನ್ನೇ ಅವಗಾಹನಿಸಿಕೊಂಡು ದಿಟ್ಟಿಸುತ್ತಾ ಕೂಡಬೇಕು
ಪುಣ್ಯ ಪುರುಷನ ಅಗೋಚರ ಉಪಸ್ಥಿತಿ
ಕಣ್ಣು ಮೂಗು ತುಟಿ ಕಿವಿ
ಮೊಲೆ ಶಿಶ್ನ ಯೋನಿ
ಕತ್ತರಿಸುವ ಹೊಲೆಯುವ ಬೀಳಿಸುವ ಕಟ್ಟುವ ಕಾಯಕ
ಬಣ್ಣ ಬಣ್ಣದ ದಾರದಿಂದ
ಹೊಲಿಗೆ ಹಾಕುವ ನಿಯೋಜಿತ ತುಕಡಿ
ಸುಟ್ಟು ಕರಕಲಾದ ಹಕ್ಕಳೆಗಟ್ಟಿದ ಗಾಯದ ಚರ್ಮ
ಪುರಾವೆಗೆ ಗಾಳಿಯ ಮೂಟೆ ಕಟ್ಟಿಸುವ ತೀರ್ಪು
ಕೆಂಪು ಕಟ್ಟಡದಲ್ಲಿ
ಪವಿತ್ರ ಗ್ರಂಥ ಮೇಲೆ ಆಣೆ ಮಾಡಿಸುವಾಗ
ನನ್ನ ಕವಿತೆಯನೊಮ್ಮೆ ಓದಬೇಕು
ಸಾಕ್ಷ್ಯಿ ಎಂದೂ ಅಂಗೀಕರಿಸಲಾರದ
ನಿನ್ನ ನಿಸ್ಸಾಹಾಯಕೆ ಸಹಾನುಭೂತಿ ಇದ್ದೇ ಇದೆ
ಗಾಯಗಳಿಗೆ ಸಾಕ್ಷಿ ಹೇಳುವ
ಪಾದದ ಗುರುತುಗಳು
ಧ್ಯಾನಕ್ಕೆ ಗುಹೆಯೇ ಬೇಕಿಲ್ಲ
ಕಟ್ಟಕಡೆಯ ಪ್ರಜೆಗೆ ತಲುಪದ
ಜನತೆಯ ಕಣ್ಮಣಿಯೇ
ಆಕ್ರಂದನದ ಮೊರೆ ಕೇಳು
ಹಸಿವಾಗದಿರಲೆಂದು ದೇವರಲ್ಲಿ ಮೊರೆಯಿಟ್ಟೆ
ಒಲೆಯ ಧ್ಯಾನಸ್ಥ ಬೆಂಕಿ
ಬದುಕಿನ ಬಿದಾಯಿ ಕೊಡುವ ಘಳಿಗೆ
ಸುಳ್ಳು ಸತ್ಯವಾಗುವ ಸತ್ಯ ಸುಳ್ಳಾಗುವ
ಪ್ರತ್ಯಕ್ಷ ಕಂಡರೂ ಕಣ್ಣಲಿ
ತನ್ನನ್ನೇ ತಾನು ನೋಡುವ ದಾಖಲೆ ಕೇಳುವ ಕಾಲ
ಶಾರೀರಿಕ ಸಾವಿನ ಕಥೆ ಬಿಡಿ
ಮಾನಸಿಕ ಸಾವಿನ ಸಂಖ್ಯೆಯ ಲೆಕ್ಕವಿಡಿ
ಮಿದುಳಿಗೆ ಅಮಲಿನ ಬಾಣ ಬಿಟ್ಟು
ಕುಹಕ ನಗು ಉಕ್ಕಿಸಿ ಕುಲುಮೆ ಕಕ್ಕುವ ಹೊಗೆ
ಇದು ನಿರ್ನಾಮ ಇಲ್ಲವೇ ನಿರ್ಮಾಣ?
ಇಡೀ ಜೀವ ಸಂಕುಲದ ಸಾವಿನ ಸುದ್ದಿ ಕೇಳಲು
ಈ ನಿನ್ನ ಸದ್ದು ಶಾಶ್ವತವೇ ದೊರೆ!
ಸುಮಿತ್ ಮೇತ್ರಿ ವಿಜಯಪುರ ಜಿಲ್ಲೆಯ ಹಲಸಂಗಿಯವರು.
ಕವಿತೆ/ಲಹರಿ/ಕಥೆ/ಪ್ರಬಂಧಗಳು ಬರೆಯುವಲ್ಲಿ ಆಸಕ್ತಿ ಹೊಂದಿದ್ದಾರೆ.
ಫೋಟೋಗ್ರಾಫಿ ಅವರ ಮೆಚ್ಚಿನ ಹವ್ಯಾಸ.
ಸದ್ಯ ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
(ಕಲೆ: ರೂಪಶ್ರೀ ಕಲ್ಲಿಗನೂರ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ