ನಕಲಿ ಬಣ್ಣಗಳ ರಂಗಿನೋಕುಳಿ
…………………………

ಬೆರಗಿನ ಚಿತ್ರ ಬೆಳಕಿನಲಿ ತೊಯ್ದು
ಫಳಫಳ ಎನ್ನುತಿದೆ
ಹಗಲಿನ ಹತ್ರ ಹೊದಿಸಲು ಏನೂ ಇಲ್ಲ
ಮರಮರ ಮರಗುತಿದೆ

ದಾರಿಯುದ್ದಕ್ಕೂ ದಾವಿಸಿಬರುವ ಗಾಳಿ
ಬಿಸಿಯಾಗಿ ಬೀಸುತಿದೆ
ಬದುಕಿನ ದಾರಿಯಲ್ಲೀಗ ತಲ್ಲಣಗಳ ಮಳೆ
ಸದ್ಧಿಲ್ಲದೇ ಸುರಿಯುತಿದೆ

ಆಚೆ ಈಚೆಯದರಾಚೆಗೂ ಒಂದು ಮಾತಿದೆ
ಹೊಗಳಿದರೆ ಹಬ್ಬವಾದೀತು
ಒಳಗಿನ ಒಳಗೆ ಒಳಗಾಗಿರುವ ಒಂದು ವಿಷಯ
ತೆಗಳಿದ್ದಕ್ಕೆ ಮಾತೇ ಹೊರಬರುತ್ತಿಲ್ಲ

ಅಸಲಿ ರಂಗೋಲಿಯ ಎದುರು ನಕಲಿ ಬಣ್ಣ
ರಂಗಾಗಿ ಕುಣಿಯುತಿದೆ
ಯಾರಿಗೂ ವೃತ್ತದ ಒಳಗಿನ ಗೋಲಿಗೆ
ಪೋಲಿತನ ಮಾಡುವ ಮನಸ್ಸಿಲ್ಲ

ಕೊಳೆತು ನಾರುವ ಚರಂಡಿಯ ಬದಿಯಲಿ
ಮೊಳಕೆಯೊಡೆಯುತಿದೆ ಕಲ್ಪವೃಕ್ಷ
ಹಸಿದವನ ಹಸಿವಿಗೆ ಬಹುದೂರದಲ್ಲಿ ನಿಂತು
ಪಟಾಕಿಹೊಡೆದವರ ಸಾಕ್ಷಿ.

ಸುರೇಶ ಎಲ್.ರಾಜಮಾನೆ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿಯವರು.
ಸಧ್ಯ ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಪ್ರಾಥಮಿಕಶಾಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕವಿತೆ ಕಥೆ ಗಜಲ್ ಬರವಣಿಗೆ ಇವರ ಹವ್ಯಾಸ.
‘ಸುಡುವ ಬೆಂಕಿಯ ನಗು’, ‘ಮೌನ ಯುದ್ಧ ಮಾತಿಗೂ ಮನಸಿಗೂ’ ಎಂಬ ಎರಡು ಕವನಸಂಕಲನಗಳು ಪ್ರಕಟವಾಗಿವೆ.