Advertisement
ಸೌದಿ ದೇಶದ ಹಿನ್ನೆಲೆ…: ದರ್ಶನ್‌ ಜಯಣ್ಣ ಸರಣಿ

ಸೌದಿ ದೇಶದ ಹಿನ್ನೆಲೆ…: ದರ್ಶನ್‌ ಜಯಣ್ಣ ಸರಣಿ

ಈ ದೇಶದ ಮೊದಲ ಹೆಸರು ನಜ್ದ್ ಮತ್ತು ಹೇಜಾಜ್ ಎಂದಾಗಿತ್ತು. ಹೆಜಾಜ್‌ನಲ್ಲಿಯೇ ಮೆಕ್ಕಾ- ಮದೀನಾ ಎಲ್ಲ ಇರುವುದು ಮತ್ತು ನಜ್ದ್ ಎಂದರೆ ಇಂದಿನ ಸೌದಿಯ ಮಧ್ಯ ಭಾಗವಾಗಿದೆ. ಅಬ್ದುಲ್ ಅಜೀಜ್(1875 – 1953) ಈ ಎರಡು ಭಾಗಗಳ ಜೊತೆಗೆ ತಂಪಾದ ಬೆಟ್ಟಗುಡ್ಡಗಳಿಂದ ಕೂಡಿರುವ ಯೆಮೆನ್‌ಗೆ ಹೊಂದಿಕೊಂಡಿರುವ ದಕ್ಷಿಣದ ನಜ್ರನ್, ಅಸಿರ್ ಮತ್ತು ಉತ್ತರದ ಅಂದರೆ ಸಿರಿಯಾ ಇರಾಕ್‌ನ ಕಡೆಯ ನಾರ್ದರ್ನ್ ಗಡಿಯನ್ನು ಹಾಗೆಯೇ ಇಂದಿನ ತೈಲದ ತೊಟ್ಟಿಲಾದ ಈಸ್ಟರ್ನ್ ಪ್ರಾವಿನ್ಸ್ ಅನ್ನು ನಂತರದ ವರ್ಷಗಳಲ್ಲಿ ದಂಗೆ ಹೊರಟು ಸೌದಿಗೆ ಸೇರಿಸಿಕೊಳ್ಳುತ್ತಾನೆ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ನಾಲ್ಕನೆಯ ಬರಹ

ಸೌದಿಯಲ್ಲಿ ಎರಡು ರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತದೆ. ಒಂದು ಸೌದಿ ನ್ಯಾಷನಲ್ ಡೇ, (1932) ಸೆಪ್ಟೆಂಬರ್ 23 ರಂದು. ಮತ್ತೊಂದು ಸೌದಿ ಫೌಂಡೇಶನ್ ಡೇ (1727) ಫೆಬ್ರರಿ 22 ರಂದು. ಎರಡಕ್ಕೂ ಅದರದ್ದೇ ಆದ ಮಹತ್ವದ ಪ್ರಾಮುಖ್ಯತೆಗಳಿವೆ.

ಈಗಿನದ್ದು ಥರ್ಡ್ ಸೌದಿ ಕಿಂಗ್ಡಮ್ ಅಂತ ಹೇಳಲಾಗುತ್ತದೆ. ಮೊದಲನೆಯದ್ದು ನಿರ್ಮಾಣವಾದದ್ದು 1727 ರಲ್ಲಿ, ಈಗಿನ ರಾಜಧಾನಿ ರಿಯಾದ್ ಪಟ್ಟಣದ ಹೊರವಲಯದ ಓಯಸಿಸ್ ಇರುವ DIRIYAH ಎಂಬ ಹಳೆಯ UNESCO ಮಾನ್ಯತೆ ಪಡೆದ ಪಟ್ಟಣದಲ್ಲಿ. ಆದರೆ ಅದು ಉಚ್ಛ್ರಾಯ ಸ್ಥಿತಿಯಲ್ಲಿದ್ದದ್ದು 1744 ರಿಂದ 1818 ರ ವರೆಗೆ. Riyadh ಮತ್ತು DIRIYAH ಗಳ ಹೆಸರುಗಳಲ್ಲಿನ ಅಕ್ಷರಗಳು ಒಂದೇ ಆಗಿವೆ ಎಂಬುದು ಕಾಕತಾಳೀಯವಲ್ಲದ ವಿಶೇಷ.

ಎರಡನೆಯ ಸೌದಿ ಸಂಸ್ಥಾನ 1824 ರಲ್ಲಿ ನಜ್ದ್ ಪ್ರಾಂತ್ಯದ ಸುತ್ತಮುತ್ತ ರೂಪುಗೊಳ್ಳುತ್ತದೆ ಮತ್ತು ಅದು 1891 ರ ವರೆಗೆ ಉಳಿಯುತ್ತದೆ. ನಮಗೆಲ್ಲ ತಿಳಿದಿರುವ ಇಂದಿನ ತೈಲ ಮತ್ತು ಅನಿಲಗಳ ನಿಕ್ಷೇಪವಿರುವ ಸೌದಿ ಅರೇಬಿಯಾ ಮೂರನೆಯ ಸಂಸ್ಥಾನವಾಗಿದ್ದು, ಇದರ ಸಂಸ್ಥಾಪಕ ಅದೇ ರಾಜವಂಶಜನಾದ ಅಬ್ದುಲ್ ಅಜೀಜ್ ( 1875-1953) ಮತ್ತದು ರೂಪುಗೊಂಡಿದ್ದು 1932 ರಲ್ಲಿ. ಈತ ಮೊದಲನೇ ಮೊಹಮ್ಮದನ ಮರಿ ಮೊಮ್ಮಗ. ಎರಡನೆಯ ರಾಜನಾದ ಅಬ್ದುಲ್ ಅಜಿಜ್ಜನ ಮೊಮ್ಮಗ ಕೂಡ.

(ಅಬ್ದುಲ್ ಅಜೀಜ್)

ಈ ದೇಶದ ಮೊದಲ ಹೆಸರು ನಜ್ದ್ ಮತ್ತು ಹೇಜಾಜ್ ಎಂದಾಗಿತ್ತು. ಹೆಜಾಜ್‌ನಲ್ಲಿಯೇ ಮೆಕ್ಕಾ- ಮದೀನಾ ಎಲ್ಲ ಇರುವುದು ಮತ್ತು ನಜ್ದ್ ಎಂದರೆ ಇಂದಿನ ಸೌದಿಯ ಮಧ್ಯ ಭಾಗವಾಗಿದೆ. ಅಬ್ದುಲ್ ಅಜೀಜ್(1875 – 1953) ಈ ಎರಡು ಭಾಗಗಳ ಜೊತೆಗೆ ತಂಪಾದ ಬೆಟ್ಟಗುಡ್ಡಗಳಿಂದ ಕೂಡಿರುವ ಯೆಮೆನ್‌ಗೆ ಹೊಂದಿಕೊಂಡಿರುವ ದಕ್ಷಿಣದ ನಜ್ರನ್, ಅಸಿರ್ ಮತ್ತು ಉತ್ತರದ ಅಂದರೆ ಸಿರಿಯಾ ಇರಾಕ್‌ನ ಕಡೆಯ ನಾರ್ದರ್ನ್ ಗಡಿಯನ್ನು ಹಾಗೆಯೇ ಇಂದಿನ ತೈಲದ ತೊಟ್ಟಿಲಾದ ಈಸ್ಟರ್ನ್ ಪ್ರಾವಿನ್ಸ್ ಅನ್ನು ನಂತರದ ವರ್ಷಗಳಲ್ಲಿ ದಂಗೆ ಹೊರಟು ಸೌದಿಗೆ ಸೇರಿಸಿಕೊಳ್ಳುತ್ತಾನೆ. ಇದರಿಂದಾಗಿಯೇ ಅವನನ್ನ “Maker of modern Saudi Arabia” ಅಂತಲೂ ಹೇಳುತ್ತಾರೆ. ಈತ ತಾನು ಒಂದುಗೂಡಿಸಿದ ಬೇರೆ ಬೇರೆ ಪ್ರಾಂತ್ಯಗಳ ಚಿಕ್ಕ ಚಿಕ್ಕ ರಾಜರು ಮತ್ತು ಸಾಮಂತರ (ಪ್ರಮುಖ ಟ್ರೈಬ್ ಗಳು) ನಂಬಿಕೆಗಳಿಸಲಿಕ್ಕಾಗಿ ಮತ್ತು ಶಾಶ್ವತ ಬೆಂಬಲ ಪಡೆಯಲಿಕ್ಕಾಗಿ ಅವರ ಕುಟುಂಬದಿಂದ ಒಬ್ಬೊಬ್ಬರನ್ನು ಮದುವೆಯಾಗುತ್ತಾನೆ. ಈತನಿಗೆ ಒಟ್ಟಾರೆ 100 ಕ್ಕೂ ಹೆಚ್ಚಿನ ಮಕ್ಕಳು (45 ಗಂಡು), 22 ಜನ ಹೆಂಡತಿಯರಿದ್ದರೆಂದು ಅಂತರ್ಜಾಲ ಹೇಳುತ್ತದೆ.
ಈಗಿನ 89 ವರ್ಷದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಇದೇ ಅಬ್ದುಲ್ ಅಜೀಜನ 24 ನೆಯ ಮತ್ತು ಉಳಿದಿರುವ ಏಕಮಾತ್ರ ಮಗ.

ಮೊದಲ ಸೌದಿ ಸಂಸ್ಥಾನದ ಹೆಸರು ಎಮಿರೇಟ್ ಆಫ್ Diriyah ಎಂದೂ ಆಗಲೇ ಹೇಳಿದ್ದೆನಲ್ಲ ಅದರ ನಿರ್ಮಾತೃ ಒಂದನೇ ಮೊಹಮ್ಮದ್ ಎಂಬ ಇವರ ವಂಶಜ. ಈತ ಜನನಾಯಕನಾದರೆ ಅವನ ಹಿಂದಿನ ಧಾರ್ಮಿಕ ಶಕ್ತಿ ಮೊಹಮ್ಮದ್ ಇಬ್ನ ಅಬ್ದ್ ಅಲ್ ವಹಾಬ್! ಪ್ರಾಫೆಟ್ ಮೊಹಮ್ಮದರ ಕಾಲದಿಂದಲೂ ಅರೇಬಿಯಾದ ಈ ಭೂಭಾಗ (ಮೆಕ್ಕಾ ಮದೀನಾ ಜೆದ್ದಾ ಮತ್ತು ಮಧ್ಯ ಅರೇಬಿಯಾ) ಕ್ಯಾಲಿಫ್ ಸಂಸ್ಕೃತಿಯನ್ನು ಅಪ್ಪಿಕೊಂಡು ಬಂದಿದೆ. ಅದೆಂದರೆ ನಾಯಕನಾದವನಿಗೆ ಧಾರ್ಮಿಕ ಹಿಡಿತ ಕೂಡಾ ಇರಬೇಕು. ಅದರ ಹೆಸರಲ್ಲಿಯೇ ಆತ ದೇಶ ಆಳಬೇಕು, ಇಲ್ಲವಾದರೆ ಜನರಮೇಲಿನ ಹಿಡಿತ ಕಷ್ಟ ಎಂಬುದು ಜನಜನಿತ.

ಅಂತಹ ಸಂದರ್ಭದಲ್ಲಿಯೇ ಅಂದರೆ 1727 ರಲ್ಲಿ ಮೊದಲ ಸೌದಿ ಸಂಸ್ಥಾನಕ್ಕೆ ಒಂದನೇ ಮೊಹಮ್ಮದ್ ನಾಂದಿ ಹಾಡಿದ್ದರೂ, ಇಸ್ಲಾಂ ಮತ್ತು ಕುರಾನ್‌ನನ್ನು ತಮಗೆ ಬೇಕಾದ ಹಾಗೆ ಅರ್ಥೈಸುವ ಸೂಫಿಗಳ ಉಪಟಳದಿಂದ (?) ಜನರಮೇಲಿನ ಬಿಗಿ ತಪ್ಪುತ್ತಾ ಬಂದಾಗ ಅವನಿಗೆ ಇಬ್ನ ಅಬ್ದ್ ವಹಾಬನ ಕಠೋರ ವಿಚಾರಗಳು ಹಿಡಿಸುತ್ತವೆ. ಮತ್ತವನು ವಹಾಬನ ಜೊತೆಗೆ 1744 ರಲ್ಲಿ ಸಾಮಾಜಿಕ-ಧಾರ್ಮಿಕ ಒಡಂಬಡಿಕೆ ಮಾಡಿಕೊಳ್ಳುತ್ತಾನೆ. ಅದರ ಪ್ರಕಾರ ಸೌದಿಯ ಆಳ್ವಿಕೆ ಒಂದನೇ ಮೊಹಮ್ಮದನಲ್ಲಿಯೂ (House of Saud) ಮತ್ತು ಧಾರ್ಮಿಕ ನಾಯಕತ್ವ ವಹಾಬನ ಬಳಿ ಇರುವುದು ಎಂಬುದು. ಇದರ ಜೊತೆಗೆ ಒಂದನೇ ಮೊಹಮ್ಮದನ ಮೊದಲ ಮಗ ಮತ್ತು ದಿರಿಯಾದ ಎರಡನೇ ರಾಜನಾದ (1720-1803) ಅಬ್ದುಲ್ ಅಜೀಜ್‌ಗೆ ತನ್ನ ಮಗಳನ್ನು ಕೊಟ್ಟು ಮದುವೆಯನ್ನೂ ಮಾಡುತ್ತಾನೆ.

ಇವತ್ತು ಇಬ್ನ ಅಬ್ದ್ ವಹಾಬನ ವಿಚಾರಗಳ ಮೇಲೆಯೇ ಸೌದಿ ಮತ್ತು ಮುಕ್ಕಾಲು ಮುಸ್ಲಿಂ ರಾಷ್ಟ್ರಗಳು ಆಳ್ವಿಕೆ ಮಾಡುತ್ತವೆ. ಅದನ್ನು ನಾವು ‘ವಹಾಬಿಸಂ’ ಅಥವಾ “ವಹಾಬ್ ಡಾಕ್ಟ್ರಿನ್” ಎನ್ನುತ್ತೇವೆ. ಇತ್ತೇಚಿನ ಅಂದರೆ ಕೇವಲ ಹತ್ತು ವರುಷಗಳ ಹಿಂದಿನವರೆವಿಗೆ ಸೌದಿಯ ಧಾರ್ಮಿಕ ನಾಯಕತ್ವ ಇದೇ ವಹಾಬಿ ಉಲೇಮಾಗಳ ಕೈಲಿತ್ತು. ಆದರದು ಈಗಿನ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (MBS) ಬಂದಮೇಲೆ ಸಂಪೂರ್ಣ house of Saud ನ ವಶವಾಗಿದೆ. ಉಲೇಮಾಗಳು ಧಾರ್ಮಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿದ್ದಾರೆ. ಸೌದಿ ಅಕ್ಷರಶಃ ಬದಲಾಗುತ್ತಿದೆ.

About The Author

ದರ್ಶನ್ ಜಯಣ್ಣ

ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ (ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ನಾನೊಬ್ಬ ನಾವಿಕ “ (ಕವನ ಸಂಕಲನಗಳು), “ಅಪ್ಪನ ರಾಲೀಸ್ ಸೈಕಲ್” (ಪ್ರಬಂಧಗಳು). ಇವರ ಬರಹಗಳು ಹಲವು ವೆಬ್‌ ಹಾಗೂ ಕನ್ನಡ ದೈನಿಕಗಳಲ್ಲಿ ಪ್ರಕಟವಾಗಿವೆ. ದೇಶ ಸುತ್ತುವುದು, ಚರಿತ್ರೆ ಮತ್ತು ಅರ್ಥಶಾಸ್ತ್ರ ಸಂಬಂಧಿ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ