ಗಾಂಧಿ ಗಿಡ

ಗಾಂಧಿ ಗಿಡ ಯಾರಿಗೆ ಬೇಡ
ಅಲಂಕಾರಕ್ಕಾದರೂ ಬೆಳೆಸುತ್ತಾರೆ
ಗಿಡ ಮರವಾಗುವುದು ಮಾತ್ರ ಯಾರಿಗೂ ಬೇಡ
ದಿನವೂ ಹೂ ಎಲೆಯುದಿರಿಸುತ್ತಾ
ತಮ್ಮ ಭವ್ಯ ಬಂಗಲೆಯ ಮರೆಮಾಚುತ್ತದೆ
ಅಡಿಪಾಯಕ್ಕೆ ಬೇರುಬಿಟ್ಟರೆ ಇನ್ನೂ ಕಷ್ಟ
ಸ್ಥಾವರದಂತಿರುವ ವೈಭೋಗದ ಮನೆಯನ್ನೇ
ಉರುಳಿಸಿಬಿಟ್ಟೀತೆಂಬ ಭಯ

ಕೆಲವರು ಮನೆ ಮುಂದೆ
ಮತ್ತೆ ಕೆಲವರು ಹಿಂದೆ ಹಿತ್ತಲಿನಲ್ಲೋ
ಪಿಂಗಾಣಿ ಕುಂಡದಲ್ಲಿ ನೆಟ್ಟು
ಬೇರು ರೆಕ್ಕೆಗಳ ಕತ್ತರಿಸಿ
ಬೋನ್ಸಾಯ್ ಯಾಗಿ ಉಳಿಸಿ
ಬೆಳೆಸುತ್ತಾರೆ
ನುಣುಪು ಕಲ್ಲುಗಳಿಂದ ಅಲಂಕರಿಸಿ
ಬಂದವರಿಗೆ ಕಾಣುವಂತೆ ಪ್ರದರ್ಶನಕ್ಕಿಟ್ಟು
ಪರಿಸರ ಪ್ರಿಯರಂತೆ ಪೋಸುಕೊಡುತ್ತಾರೆ

ಬಂದವರು ಹೋದವರು
ಪುರಾತನ ಬೋಧಿವೃಕ್ಷದಂತಿದೆ
ಎಷ್ಟು ಹಳೆಯದು?
ನಿಮ್ಮ ತಂದೆಯವರ ಕಾಲದ್ದಾ?
ಹೆಚ್ಚು ಬೆಳೆಯದಂತೆ
ಚೆನ್ನಾಗಿ ಸಾಕಿದ್ದೀರಾ
ಈ ಬೋನ್ಸಾಯ್ ಗೆ
ಹಳೆಯದಾದಷ್ಟೂ ಮೌಲ್ಯ
ಗಿಡದ ಚಿಗುರೊಂದ ಚಿವುಟುತ್ತಾ
ಸೆಲ್ಪಿ ತೆಗೆದುದುಕೊಂಡು
ನಿರ್ಗಮಿಸುತ್ತಾರೆ

ಮನೆಯವರು ಬೀಗುತ್ತಾ
ಗಿಡದ ಬೇರಿಗೆ ಮತ್ತೆ ತಂತಿ ಬಿಗಿದು
ಗೊಬ್ಬರ ಹೊದಿಸಿ ನೀರುಣಿಸಿ
ಮಲ್ ಖಾದಿಯಲ್ಲಿ
ಬೆವರೊರೆಸಿಕೊಳ್ಳುತ್ತಾರೆ

ಗಾಂಧಿಗಿಡ
ತನ್ನೆಲ್ಲಾ ಆತ್ಮಬಲ ಒಗ್ಗೂಡಿಸಿ
ಚಿವುಟಿದಷ್ಟೂ
ಚಿಗುರುತ್ತಲೇ ಇರುತ್ತದೆ

ಹಂದಲಗೆರೆ ಗಿರೀಶ್ ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹಂದಲಗೆರೆ ಗ್ರಾಮದವರು.
ರಂಗಭೂಮಿ, ಸಾಹಿತ್ಯ ಮತ್ತು ಸಿನಿಮಾ ಆಸಕ್ತಿಯ ವಿಚಾರಗಳು.
‘ನೇಗಿಲ ಗೆರೆ'(ಕವನ ಸಂಕಲನ), ‘ನೀರಮೇಗಲ ಸಹಿ’ (ಕವನ ಸಂಕಲನ) ಮತ್ತು ‘ಅರಿವೇ ಅಂಬೇಡ್ಕರ್’ (ಸಂಪಾದಿತ ಕೃತಿ) ಇವರ ಪ್ರಕಟಿತ ಪುಸ್ತಕಗಳು