ಮುಚ್ಚಿಟ್ಟ ಕತ್ತಲ ಕೋಣೆಯಲ್ಲಿ ದಿಗ್ಗನೆ ಬೆಳಕು ಹತ್ತಿದಾಗ ಜಿರಲೆಗಳು ದಿಕ್ಕುತಪ್ಪಿದವಂತೆ ಚರಪರ ಒದ್ದಾಡಿ ಮೂಲೆ ಹುಡುಕುತ್ತವೆ. ಕೋಣೆಯಲ್ಲಿ ನಿಂತವರು ಹಟಾತ್ತನೆಯ ಬೆಳಕಲ್ಲಿ ಏನೂ ಕಾಣದೆ ಕಣ್ಣುಜ್ಜಿಕೊಳ್ಳಬೇಕಾಗುತ್ತದೆ. ಆ ಬೆಳಕಲ್ಲಿ ಏನು ಕಂಡಿತು ಎಂಬುದಕ್ಕಿಂತ ಬೆಳಕು ಹತ್ತಿಕೊಂಡ ಪರಿಗೇ ದಿಗ್ಭ್ರಮಿಸುವ ಸ್ಥಿತಿಯಲ್ಲಿ ಈಗ ನಾವಿದ್ದೇವೆ. ಸುಮಾರು ನಾಕು ವರ್ಷಗಳ ಹಿಂದೆಯೇ ಶುರುವಾಗಿದ್ದರೂ ಕೂಡ, ಹಲವಾರು ಬೆಳಕಿಂಡಿಗಳು ತೆರೆದಿದ್ದರೂ ಕೂಡ, ಜಿರಲೆಗಳೂ ತಯಾರಾಗಿಯೇ ಇದ್ದರೂ ಕೂಡ, ಈಗ ಮಾತ್ರ ವಿಕೀಲೀಕ್ಸಿಗೆ ಏಕಿಂತಹ ಸುದ್ದಿ ಮಾನ್ಯತೆ, ಸಿಟ್ಟು ಹಾಗು ಅಸಹನೆಯ ಪ್ರತಿಕ್ರಿಯೆ?
ವಿಕಿಲೀಕ್ಸಿನ “ಕೇಬಲ್‌ಗೇಟಿ”ನಲ್ಲಿ ಮೆಲ್ಲಗೆ ಬಯಲಾಗುತ್ತಿರುವ, ಅನಾವರಣಗೊಳ್ಳುತ್ತಿರುವ ಜನ ಚಡಪಡಿಸುತ್ತಿದ್ದಾರೆ ಎಂಬುದು ನಿಚ್ಚಳ. ಆದರೂ ವಿಕಿಲೀಕ್ಸಿನಲ್ಲಿ ಬಯಲಾಗುತ್ತಿರುವ ಸಂಗತಿಗಳು ಅವರ ಚಡಪಡಿಕೆಗೆ ಕಾರಣವಲ್ಲ ಅನಿಸುತ್ತದೆ. ಏಕೆಂದರೆ ಈ ಹಿಂದೆ, ಇರಾಕ್ ಯುದ್ಧದ ಬಗ್ಗೆ, ಆಫ್ಗಾನಿಸ್ತಾನದ ಯುದ್ಧದ ಬಗ್ಗೆ “ಗುಟ್ಟಿನ ಸಂಗತಿಗಳು” ಇದೇ ವಿಕಿಲೀಕ್ಸಿನಡಿ “ವಾರ್ ಡೈರಿ”ಗಳಾಗಿ ಹೊರಬಿದ್ದಿದವು. ಕೆಲವರಿಗೆ ಇರುಸುಮುರುಸಾದರೂ ಕೂಡ ಯಾರ ತಲೆಯೂ ಉರುಳುವಂತೇನೂ ಆಗಲಿಲ್ಲ. ಯುದ್ಧದಲ್ಲಿ ಯಾರೂ ಉದಾತ್ತರಿರುವುದಿಲ್ಲ, ಎಲ್ಲರೂ ನೀಚರಾಗುತ್ತಾರೆ ಎಂಬ ಒಂದು ಸಾಮಾನ್ಯ ತಿಳವಳಿಕೆಯಡಿ ಅವೆಲ್ಲಾ ಹೇಗೋ ತೇಲಿಹೋದವು. ಜಿನೇವಾ ಕನ್ವೆಂಷನ್ ಅನ್ವಯ ಅವಲ್ಲಿ ಕೆಲವು ಘೋರ ಪಾತಕಗಳು ಎನಿಸಿದ್ದರೂ ಕೂಡ!
ಆದರೆ, ಸುಮಾರು ಎರಡೂವರೆ ಲಕ್ಷ ತಂತಿಪತ್ರಗಳು ತನ್ನ ಬಳಿ ಇದೆಯೆಂದು ಹೇಳಿ, ಈಗಿನ್ನೂ ಸುಮಾರು ಒಂದು ಸಾವಿರ ದಾಖಲೆಗಳಷ್ಟೇ ಹೊರಬಿದ್ದಿರುವಾಗ, ಕರಾಳದೂತನಂತೆ ಪರಿಗಣಿಸಿ ವಿಕಿಲೀಕ್ಸಿನ ಜೂಲಿಯನ್ ಅಸಾಂಜನನ್ನು ಬಂಧಿಸಿದ್ದಾರೆ. ಕಾರಣ ತುಂಬಾ ನಿರ್ಬಲವಾದುದು ಎಂದು ಪ್ರಾಸಿಕ್ಯೂಟರುಗಳಿಗೇ ತಿಳಿದಿರುವಂತಿದೆ. ಈ ಹಿಂದೆ, ಇದೇ ಕೇಸನ್ನು ಸ್ವೀಡನ್ನಿನ ಪೋಲೀಸರು ಕೈಬಿಟ್ಟಿದ್ದರು. ಜೂಲಿಯನ್ ಅಸಾಂಜ್ ಅವರ ಅಪ್ಪಣೆ ಪಡೆದೇ ದೇಶ ಬಿಟ್ಟು ಹೊರಬಿದ್ದಿದ್ದ. ಬೇಕಿದ್ದರೆ ಮಾತಾಡಲು ನಾನು ಸಿದ್ಧ ಎಂದು ಹೇಳಿಯೂ ಇದ್ದ. ಆದರೂ ಕೂಡ ಈಗ ಎಲ್ಲ ವಿದ್ಯಮಾನಗಳೂ ತಾರಕ ಸ್ಥಿತಿಯಲ್ಲಿ ನಡೆಯುತ್ತಿವೆ. ಅವನು ಕೈಗೆ ಸಿಗದೆ, ತಲೆಮರೆಸಿಕೊಂಡು ಓಡುತ್ತಿರುವವನಂತೆ ಬಿಂಬಿಸಲಾಗಿದೆ. ಅವನ ವಿಳಾಸ ಬ್ರಿಟಿಷ್ ಪೋಲೀಸರಿಗೆ ಸದಾ ತಿಳಿದೇ ಇತ್ತು. ಆದರೂ ಕೂಡ ಈಗ ಅವನನ್ನು ಹಿಡಿದು, ಬಂಧಿಸಿ ವಿಚಾರಣೆಗೆ ಒಳಪಡಿಸುವ ದೊಡ್ಡ ನಾಟಕ ನಡೆದಿದೆ. ಇರಲಿ- ಇವೆಲ್ಲವನ್ನೂ ಆ ಗಳಿಗೆಯ ಉನ್ಮತ್ತ ಪ್ರತಿಕ್ರಿಯೆ ಎಂದು ನುಂಗಿಕೊಳ್ಳಬಹುದು. ಆದರೆ ಏಕೆ ಈಗ ಈ ಕಿರುಚಾಟ ಎಂಬುದು ಮಾತ್ರ ಉತ್ತರಿಸಿಕೊಳ್ಳಬೇಕಾದ ಪ್ರಶ್ನೆಯೇ.
“ವಿಕಿ”ಎಂದರೆ ಹವಾಯಿ ನುಡಿಯಲ್ಲಿ “ವೇಗ” ಎಂಬರ್ಥವಂತೆ. ಮೊದಲಿಗೆ “ವಿಕಿಪೀಡಿಯ” ಎಂಬ ಆನ್‌ಲೈನ್ ಎನ್‌ಸೈಕ್ಲೋಪೀಡಿಯ ಬಂದಿತ್ತು.ಜನರೇ ಎಲ್ಲರೂ ಸೇರಿ “ವೇಗ”ದಲ್ಲಿ ಸಂಗತಿಗಳನ್ನು ಒಟ್ಟುಹಾಕಿ ನೆಟ್ಟಿಗರಿಗೆ ಒದಗಿಸುವ ಇಂಟರ್ನೆಟ್ಟಿನ ಒಂದು ಮಹತ್ತರ ಸಾಧನೆ ಅದು. ಹೆಸರಿನಲ್ಲಿರುವ “ವಿಕಿ” ಹೊರತುಪಡಿಸಿದರೆ ವಿಕಿಲೀಕ್ಸಿಗೂ ವಿಕಿಪೀಡಿಯಾಕ್ಕೂ ಯಾವುದೇ ಸಂಬಂಧವಿಲ್ಲ. “ಲೀಕು” ಯಾವಾಗಲೂ ಮೆಲ್ಲಗೆ ಆಗುವುದೆಂಬ ನಮ್ಮ ತಿಳವಳಿಕೆಯನ್ನು ಬುಡಮೇಲು ಮಾಡುವಂತಹ ವಿಕಿಲೀಕ್ಸಿನ ಪರಿಗೆ ಸೋಜಿಗ ಪಡದೆ ಬೇರೆ ದಾರಿಯಿಲ್ಲ. ಅದರ ಕಾರ್ಯ ವಿಧಾನವನ್ನು ನೋಡಿದವರಿಗೆ ಅದು “ವೇಗ”ದಲ್ಲಿ ಬಯಲು ಮಾಡುತ್ತಿದೆ ಅನಿಸುವುದಿಲ್ಲ. ಈಗಂತೂ ಎರಡೂವರೆ ಲಕ್ಷ ತಂತಿಗಳನ್ನು ದಿನಕ್ಕಿಷ್ಟು ಎಂಬಂತೆ ಬಯಲು ಮಾಡುತ್ತಿರುವುದೂ ಆ ಮಾತಿಗೆ ದ್ಯೋತಕವೇ.
ಆದರೆ, ವಿಕಿಲೀಕ್ಸ್ “ವೇಗ”ವಾಗಿ ಬದಲು ಮಾಡುತ್ತಿರುವ ಮತ್ತೊಂದು ಸಂಗತಿಯಿದೆ. ಒಂದು ಬಗೆಯಲ್ಲಿ ಸುದ್ದಿ ಮಾಧ್ಯಮಗಳ ಪರಿಕಲ್ಪನೆಯೇ ವೇಗವಾಗಿ ಬದಲಾಗುವ ಸಂಭವ ಕಾಣುತ್ತಿದೆ. ಆನ್‌ಲೈನ್ ಪ್ರಕಟಣೆಗೆ ಹಿಂದುಮುಂದು ನೋಡುತ್ತಾ, ಇಳಿಮುಖದ ಲಾಭವನ್ನು ಲೆಕ್ಕ ಹಾಕುತ್ತಿರುವ ಪತ್ರಿಕಗಳು ಹಿಂದೆಂದೋ ಮಾಡಬೇಕಾದ ಈ ಕೆಲಸವನ್ನು “ಗೆರಿಲ್ಲಾ” ಮಾದರಿಯಲ್ಲಿ ಈಗ ಮಾಡಬೇಕಾಗಿ ಬಂದಿರುವುದು ಮಾಧ್ಯಮಗಳ ಸೋಲನ್ನು ಎತ್ತಿಹಿಡಿಯುವಂತೆ ಕಾಣುತ್ತದೆ. ಇದಕ್ಕೇ ಇರಬೇಕು ಕೆಲವು ಮಾಧ್ಯಮಗಳು ಹೊಟ್ಟೆಕಿಚ್ಚಿನಿಂದ ಪ್ರತಿಕ್ರಿಯಿಸುತ್ತಿರುವುದು. ಜೂಲಿಯನ್ ಅಸಾಂಜನನ್ನು ಹೇಗೆ ನೋಡುವುದು, ಅವನನ್ನು ಎಲ್ಲಿಡುವುದು ಎಂದು ತಡಕಾಡುತ್ತಿರುವುದು. ತಮ್ಮ ಮೂಲಕ್ಕೆ ಧಕ್ಕೆ ಬರದ ಹಾಗೆ ಅವನ ಕೆಲಸವನ್ನು ವಿಶ್ಲೇಷಿಸುವ ದಾರಿಯನ್ನು ಹುಡುಕುತ್ತಿರುವುದು.
ಮಾಧ್ಯಮಗಳ ಪರವಾಗಿರುವ ಒಂದೇ ಮಾತೆಂದರೆ, ಅವರು ವಿಕಿಲೀಕ್ಸಿನಂತೆ “ಗೆರಿಲ್ಲಾ” ವಿಧಾನ ಅನುಸರಿಸಲಾರವು ಹಾಗು ಕಾನೂನು ಬದ್ಧವಾಗಿ ಇರಬೇಕಾಗುತ್ತವೆ ಎಂಬ ಸಂಗತಿ. RTI (ರೈಟ್ ಟು ಇನ್‌ಫರ್ಮೇಷನ್) ಕಾನೂನಿನ ಅಡಿಯಲ್ಲಿ ಮಾಹಿತಿಗಾಗಿ ಸುದ್ದಿ ಮಾಧ್ಯಮಗಳು ತಲೆ ಚಚ್ಚಿಕೊಳ್ಳುತ್ತಿರುವುದು ಹೊಸ ವಿದ್ಯಮಾನವೇನಲ್ಲ. ಹತ್ತಾರು ತಿಂಗಳು/ವರ್ಷಗಳ “ಹೋರಾಟ”ದ ನಂತರ ಕಡೆಗೆ, ಕೆಲವೇ ಕೆಲವು ಮಾಹಿತಿ ಸಿಕ್ಕುವುದು, ಅದನ್ನೇ ಎತ್ತಿಹಿಡಿದು ಕೂಗಾಡಬೇಕಾದ ಅವರ ಪರಿಸ್ಥಿತಿಯೂ ನಮಗೆ ತಿಳಿದದ್ದೇ. ಈಗಲೂ ಕರ್ನಾಟಕದ ಎಡೆಯೂರಪ್ಪನ ದಂಧೆಯ ಬಗ್ಗೆ ಮಾಹಿತಿಗೆ ಅರ್ಜಿ ಹಾಕಿದವರು ಗೋಡೆಗೆ ತಲೆಚಚ್ಚಿಕೊಳ್ಳುವಂತೆ ತೋರುತ್ತಿದೆ. ವಿಕಿಲೀಕ್ಸಿನ ರೀತಿಯಲ್ಲಿ ಜನಾಸಕ್ತಿಯಿರುವ ಮಾಹಿತಿಯನ್ನು ಕೊಡದಿದ್ದಾಗ, ಕಿತ್ತುಕೊಳ್ಳುವ, ಕದ್ದು ಜಾಹಿರುಪಡಿಸುವ ಕೆಲಸ ಪ್ರಜಾಪ್ರಭುತ್ವಕ್ಕೆ ಒಳ್ಳೆಯದೇ ಅನಿಸುತ್ತದೆ. ಪ್ರಭುತ್ವವನ್ನು ಅಂಕೆಯಲ್ಲಿಡುವ ಕೆಲಸ ಜನರಿಂದ ಹೀಗಾದರೂ ಆಗಬೇಕಾಗಿದೆ ಅನಿಸುತ್ತದೆ.
ಈ ಬದಲಾದ ಮಾಧ್ಯಮ ಪರಿಕಲ್ಪನೆ ಏನೇನು ತರಬಹುದು? ವಿಕಿಲೀಕ್ಸಿನಲ್ಲಿ ಮೊದಲು ಮಾಡುತ್ತಿದ್ದಂತೆ ಅನಾಮಿಕವಾಗಿ ಅಪ್‌ಲೋಡ್ ಮಾಡುವ ವ್ಯವಸ್ಥೆ – ಎಲ್ಲ ಮಾಧ್ಯಮದ ಜಾಲತಾಣದಲ್ಲೂ ಮುಂದೊಂದು ದಿನ ಕಾಣಿಸಿಕೊಂಡರೆ ಅಚ್ಚರಿಪಡಬೇಕಾಗಿಲ್ಲ. ಮೂಲವನ್ನು ಗುಟ್ಟಾಗಿಡುವ ಹಕ್ಕು ಮಾಧ್ಯಮಕ್ಕೆ ಇದ್ದೇ ಇದೆ. ಆದರೆ ಆ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುವ ಕೆಲಸವನ್ನು ಮಾಧ್ಯಮಗಳು ಭ್ರಷ್ಟರಾಗದೆ, ಜಾಗ್ರತೆಯಿಂದ ಹಾಗು ಪ್ರೌಢವಾಗಿ ಮಾಡಬೇಕಷ್ಟೆ. ಮಾಧ್ಯಮಕ್ಕೆ ಹೀಗೆ ಮಾಹಿತಿ ಒದಗಿಸುವುದು, ಅದನ್ನು ಅವು ಜವಾಬ್ದಾರಿಯಿಂದ ನಿಭಾಯಿಸುವುದು ನಮ್ಮ ಸಾಮಾಜಿಕ ಸಂಸ್ಕೃತಿಯ ಒಂದಂಗವೇ ಆದರೂ ಆಗಬಹುದು. ಇಷ್ಟೆಲ್ಲಾ ಹಾರಾಟದ ನಂತರದ ಸಮಾಧಾನದಲ್ಲಿ ಇವೆಲ್ಲದರಿಂದ ಹೊಸ ಪದ್ಧತಿಯೊಂದು ರೂಪುಗೊಳ್ಳಬಹುದು. ಜಗತ್ತು ಬದಲಾಗುವ ಪರಿಯನ್ನು ಗಮನಿಸಿದವರಿಗೆ ಹೆಚ್ಚು ಹೇಳಬೇಕಾಗಿಲ್ಲ.
ಹೀಗೆಲ್ಲಾ ಆಗಬಹುದು ಅಂದುಕೊಂಡಾಗ, ಪ್ರಭುತ್ವದ ಚಡಪಡಿಕೆ ನಿಮಗೆ ಅರ್ಥವಾಗಬಹುದು. ಇವೆಲ್ಲಾ ನಿಜವಾಗಿಯೂ ಜನರಿಗೆ ಸರಿ ಎಂದು ಕಂಡುಬಿಟ್ಟರೆ ಗತಿಯೇನು? ಈಗಾಗಲೇ ವಿಕಿಲೀಕ್ಸನ್ನು ಮುರಿಯುವ ಪ್ರಯತ್ನವೇ ಮುರಿದುಬಿದ್ದಿದೆ. ಸುಮಾರು ಐನೂರಕ್ಕೂ ಹೆಚ್ಚು ಮಿರರ್ ಸೈಟುಗಳು ಹುಟ್ಟಿಕೊಂಡಿವೆ. ಸುಮಾರು ಐದು ಲಕ್ಷಕ್ಕೂ ಮೀರಿದಷ್ಟು ಮಂದಿ ಇಡೀ ತಂತಿಪತ್ರಗಳ ಕಡತವನ್ನು ಇಳಿಸಿಕೊಂಡಿದ್ದಾರೆ. ಅದನ್ನು ಒಡೆದು ಓದುವ ಕೀಯನ್ನು ಮುಂದೆ ಒದಗಿಸುವುದಾಗಿ ಹೇಳಿದ್ದಾರೆ. ಈಗ ಅಸಾಂಜನ ಬೆಂಬಲಕ್ಕೆ ಜಗತ್ತಿನ ಹಲವಾರು ಶಕ್ತಿಗಳು ಒಟ್ಟಾಗುತ್ತಿವೆ. ಅವನನ್ನು ಮುಗಿಸುವುದು ಅತ್ಯಂತ ಕಷ್ಟದ ಕೆಲಸವಾಗಿ ತೋರುತ್ತಿದೆ. ಅವನಿಗೆ ಸಹಾಯ ಮಾಡಲು ಮುಂದೆ ಬಂದಿರುವ ಲಾಯರುಗಳು, ಅವನ ಬೇಯ್ಲಿಗೆ ದುಡ್ಡು ತೆರಲು ಮುಂದಾದ ಜನರು ಇವೆಲ್ಲಾ ಅವನಿಗೆ ಉತ್ತೇಜನಕಾರಿಯಾಗಿಯೇ ಇದೆ.
ಇದು ರಾಜಕೀಯ ಎಡ-ಬಲದ ಸೆಣಸಾಟ ಎಂದು ತಪ್ಪು ಅರ್ಥೈಸುವವರು ಗಮನಿಸಬೇಕು – ಇದು ನಿಜವಾಗಿಯೂ ತಲೆಮಾರುಗಳ ಸೆಣಸಾಟ. ಜೆನರೇಷನಲ್ ಸ್ಟ್ರಗಲ್. ತಮ್ಮ ಅನಿಸಿಕೆಗಳನ್ನು ಕಡತಗಳಲ್ಲಿ ಮುಚ್ಚಿಟ್ಟು ಆಳುವ ಮನಸ್ಸಿನ ತಲೆಮಾರು ಒಂದು ಕಡೆ – ಅಂತರ್ಜಾಲದಲ್ಲೇ ಬದುಕುವ, ಯಾವುದನ್ನೂ ಮುಚ್ಚಿಡಬೇಕೆಂದು ಯೋಚಿಸದ ಹೊಸ ತಲೆಮಾರಿನ ಹೋರಾಟಗಾರರು ಇನ್ನೊಂದು ಕಡೆ. ಎರಡು ಕಡೆಯೂ ಗೆಲ್ಲುವ ಛಲ ಹೊತ್ತವರು, ಗುಮಾನಿ ಹುಟ್ಟಿಸುವಂತೆ ನಡಕೊಳ್ಳುವವರು ಇದ್ದಾರೆ. ಈ ಸೆಣಸಾಟದಲ್ಲಿ ಸೋಲು-ಗೆಲುವು ಮುಖ್ಯವಲ್ಲವೇನೋ… ಸೆಣಸಾಟದ ನಂತರ ಉಳಿಯುವ, ನಾವು ಬದುಕಲು ದಕ್ಕುವ ಜಗತ್ತು ಎಂತಹದಿರುತ್ತದೆ ಎಂಬುದು ಕುತೂಹಲಕರ. ಇವೆಲ್ಲಾ ಭಾರತಕ್ಕೆ ಸಂಬಂಧಪಟ್ಟಿಲ್ಲ, ಯಾವುದೋ ಪಾಶ್ಚಾತ್ಯ ರಾಷ್ಟ್ರಗಳ ಸಲ್ಲದ ತೆವಲು ಎಂದು ಕಿವಿಗೆ ಗೂಟಬಡಿದುಕೊಂಡು ಕೂರುವುದು ಅಪಾಯಕಾರಿ ಅನಿಸುತ್ತದೆ…
ಇನ್ನೂ ಹೀಗೇ ಹಲವಾರು ಸಂಗತಿಗಳನ್ನು ಹೇಳುತ್ತಿರಬಹುದು. ಹೇಳುತ್ತಿರುವಂತೆ ವಿದ್ಯಮಾನಗಳು ಬದಲಾಗುತ್ತಿದೆ. ಹೊಳಹುಗಳು ಬದಲಾಗುತ್ತಿವೆ. ನಾನು ಇದನ್ನು ಸಿಡ್ನಿಯ ರೈಲಿನಲ್ಲಿ ಬರೆಯುತ್ತಿರವಾಗ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ ಇಬ್ಬರು ಅಮೇರಿಕನ್ ಮಹಿಳೆಯರು ಕಡೆಯಲ್ಲಿ ನನ್ನೊಡನೆ ನಡೆಸಿದ ಮಾತುಕತೆ ಅಂತಹ ಒಂದು ಹೊಳಹು ಕೊಡುವಂತಿತ್ತು. ಒಬ್ಬಾಕೆ – “ಏನದು ದಾರಿಯುದ್ದಕ್ಕೂ ಅಷ್ಟು ಗಮನವಿಟ್ಟು ಬರೆಯುತ್ತಿದ್ದೀಯ?” ಅಂದದ್ದಕ್ಕೆ ನಾನು “ನಿಮ್ಮ ದೇಶದ ಬಗ್ಗೆ – ವಿಕಿಲೀಕ್ಸ್ ಬಗ್ಗೆ” ಎಂದು ಛೇಡಿಸುವ ದನಿಯಲ್ಲಿ ಹೇಳಿದೆ. ಆಕೆ “ವಿಕಿಲೀಕ್ಸ್… ಏನದು?” ಅಂದಳು. “ಜೂಲಿಯನ್ ಅಸಾಂಜ್…” ಎಂದು ಮಾತು ಮುಗಿಸುವಷ್ಟರಲ್ಲಿ ಇನ್ನೊಬ್ಬಾಕೆ “ಹಾ… ಅದೇ ತಲೆ ತಪ್ಪಿಸಿಕೊಂಡಿರುವ ಸ್ವೀಡಿಷ್ ರೇಪಿಸ್ಟ್…” ಎಂದಳು. “ಅವನು ಆಸ್ಟ್ರೇಲಿಯಾದವನು…” ಅಂದದ್ದಕ್ಕೆ ಹೌದೇ ಎಂದು ಕಣ್ಣರಳಿಸಿದರು… “ನಿಮಗೆ ಅವನ ಬಗ್ಗೆ ಹಾಗನಿಸುತ್ತದೆಯ?” ಎಂದು ಹೇಳಿದೆನಾದರೂ ಒಳಗೊಳಗೇ ಚಕಿತನಾಗಿದ್ದೆ. ಮಾತು ವ್ಯರ್ಥ ಅನಿಸಿತು. ಬೆಳಕಿಗೆ ಇನ್ನೂ ಕಣ್ಣುಜ್ಜಿಕೊಳ್ಳುತ್ತಿದ್ದೇನೆ ಎಂದು ನಗುಬಂತು.
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.