Advertisement
ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ?: ಬಸವನಗೌಡ ಹೆಬ್ಬಳಗೆರೆ ಸರಣಿ

ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ?: ಬಸವನಗೌಡ ಹೆಬ್ಬಳಗೆರೆ ಸರಣಿ

ಟಿಸಿಹೆಚ್ ಕಾಲೇಜಿನಲ್ಲಿ ಬಹುತೇಕರು ಇಷ್ಟಪಡುತ್ತಿದ್ದುದು ‘ಅಪುನಾ ಸರ್’ ಅವರನ್ನೇ. ಇವರನ್ನು ನಾವು ನಮ್ಮ ಕಾಲೇಜು ಮಿತಿಯಲ್ಲಿ ‘ನಡೆದಾಡುವ ವಿಶ್ವಕೋಶ’ ಎಂದೇ ಕರೆಯುತ್ತಿದ್ದೆವು. ಅವರು ಮೂಲತಃ ‘ಜೀವ ವಿಜ್ಞಾನ ಶಿಕ್ಷಕ’ ರಾಗಿದ್ದಾಗ್ಯೂ ನಮಗೆ ಅವರ ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ, ಸಮಾಜ ವಿಜ್ಞಾನದಲ್ಲಿ ಅವರಲ್ಲಿದ್ದ ಪಾಂಡಿತ್ಯ, ಪ್ರಖರ ದೇಶಪ್ರೇಮ, ಸಮಯಪ್ರಜ್ಞೆ, ನಾಯಕತ್ವ ಗುಣ, ಪಾಠವನ್ನು ಅರ್ಥೈಸುತ್ತಿದ್ದ ರೀತಿ ನಮ್ಮನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿತ್ತು. ಅವರ ಜೊತೆ ನಾನು ಯಾವುದೇ ವಿಷಯದ ಕುರಿತು ಚರ್ಚೆ ಮಾಡುತ್ತಿದ್ದಾಗ, ಅವರ ಜೊತೆ ಎಷ್ಟೇ ವಾದ ಮಾಡಿದರೂ ಅವರೆಂದಿಗೂ ನನ್ನ ಮೇಲೆ ವೈಯಕ್ತಿಕವಾಗಿ ದ್ವೇಷ ತೀರಿಸಿಕೊಂಡವರಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೈದನೆಯ ಕಂತು ನಿಮ್ಮ ಓದಿಗೆ

ನಮಗೆ ಶಿಕ್ಷಣ ನೀಡಿದ ಶಿಕ್ಷಕರುಗಳಲ್ಲಿ ನಾವು ಎಲ್ಲರನ್ನು ನೆನಪಿನಲ್ಲಿಟ್ಟುಕೊಂಡಿದ್ದರೂ ಕೆಲವರಿಗೆ ಮಾತ್ರ ವಿಶೇಷ ಸ್ಥಾನವನ್ನು ಕೊಟ್ಟಿರುತ್ತೇವೆ. ಕಾರಣ ಇವರು ನಮ್ಮ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿರುತ್ತಾರೆ. ಇದು ಎಲ್ಲರ ಜೀವನದಲ್ಲೂ ಸಾಮಾನ್ಯವಾಗಿ ನಡೆದೇ ಇರುತ್ತದೆ. ಇದೇ ರೀತಿ ನನ್ನ ಜೀವನದಲ್ಲೂ ನನ್ನ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳಲ್ಲಿ, ಪ್ರೈಮರಿಯಲ್ಲಿ ನನಗೆ 5 ನೇ ತರಗತಿಯಿಂದಲೇ ಭಾಷಣ ಕಲೆ ಬೆಳೆಸಿದ ಲೋಕಪ್ಪ ಮೇಷ್ಟ್ರು, 7 ನೇತರಗತಿ ಬರೋವರೆಗೂ ‘ಗಣಿತವೆಂದರೆ ಕಬ್ಬಿಣದ ಕಡಲೆ’ ಎಂದುಕೊಂಡಿದ್ದ ನನಗೆ ಗಣಿತವನ್ನು ಇಷ್ಟಪಡುವಂತೆ ಕಲಿಸಿದ ಬುಡೇನ್ ಸಾಬ್ ಸರ್, ಪ್ರೌಢಶಾಲೆಯಲ್ಲಿ ಸಂಸ್ಕೃತದ ಬಗ್ಗೆ ಒಲವು ಬೆಳೆಸಿದ ಗುರುಮೂರ್ತಿ ಸರ್, ಕನ್ನಡದ ಬಗ್ಗೆ ಆಸಕ್ತಿ ಬೆಳೆಸಿದ ಪ್ರಭಾಕರ್ ಸರ್, ವಿಷಯ ಪಾಂಡಿತ್ಯದಿಂದ ಹಾರೋಮಠ್ ಸರ್, ಕಾಲೇಜಿನಲ್ಲಿ ಕೆಮಿಸ್ಟ್ರಿ ಉಪನ್ಯಾಸಕರಾಗಿದ್ದ ಸಿದ್ದರಾಜು ಸರ್, ಅದೇ ರೀತಿ ಟಿಸಿಹೆಚ್ ನಲ್ಲಿ ಅಪುನಾ, ವೈಬಿವಿ, ಬಿಕೆಎಂ ಸರ್… ಹೀಗೆ ಇನ್ನೂ ಅನೇಕರಿದ್ದಾರೆ. ವಿಪರ್ಯಾಸವೆಂದರೆ ಸಾವಿರಾರು ವಿದ್ಯಾರ್ಥಿಗಳ ಹೃದಯಮಂದಿರದಲ್ಲಿ ಸ್ಥಾನ ಗಿಟ್ಟಿಸಿರುವ ಇವರಿಗೆ ನನಗೆ ಗ್ರಹಿಕೆಗೆ ಬಂದಂತೆ ಪ್ರಶಸ್ತಿಗಳು ಬಂದಿಲ್ಲ!! ಈ ಪ್ರಶಸ್ತಿಗಳಿಗೆ ಇವರೂ ಆಸೆ ಪಟ್ಟಿಲ್ಲ ಎಂಬುದು ಬೇರೆ ಮಾತು ಬಿಡಿ!!

ನಮ್ಮ ಟಿಸಿಹೆಚ್ ಕಾಲೇಜಿನಲ್ಲಿ ಬಹುತೇಕರು ಇಷ್ಟಪಡುತ್ತಿದ್ದುದು ‘ಅಪುನಾ ಸರ್’ ಅವರನ್ನೇ. ಇವರನ್ನು ನಾವು ನಮ್ಮ ಕಾಲೇಜು ಮಿತಿಯಲ್ಲಿ ‘ನಡೆದಾಡುವ ವಿಶ್ವಕೋಶ’ ಎಂದೇ ಕರೆಯುತ್ತಿದ್ದೆವು. ಅವರು ಮೂಲತಃ ‘ಜೀವ ವಿಜ್ಞಾನ ಶಿಕ್ಷಕ’ ರಾಗಿದ್ದಾಗ್ಯೂ ನಮಗೆ ಅವರ ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ, ಸಮಾಜ ವಿಜ್ಞಾನದಲ್ಲಿ ಅವರಲ್ಲಿದ್ದ ಪಾಂಡಿತ್ಯ, ಪ್ರಖರ ದೇಶಪ್ರೇಮ, ಸಮಯಪ್ರಜ್ಞೆ, ನಾಯಕತ್ವ ಗುಣ, ಪಾಠವನ್ನು ಅರ್ಥೈಸುತ್ತಿದ್ದ ರೀತಿ ನಮ್ಮನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿತ್ತು. ಅವರ ಜೊತೆ ನಾನು ಯಾವುದೇ ವಿಷಯದ ಕುರಿತು ಚರ್ಚೆ ಮಾಡುತ್ತಿದ್ದಾಗ, ಅವರ ಜೊತೆ ಎಷ್ಟೇ ವಾದ ಮಾಡಿದರೂ ಅವರೆಂದಿಗೂ ನನ್ನ ಮೇಲೆ ವೈಯಕ್ತಿಕವಾಗಿ ದ್ವೇಷ ತೀರಿಸಿಕೊಂಡವರಲ್ಲ. ನಿಜವಾದ ‘ಸ್ಟೇಟ್ಸ್ ಮ್ಯಾನ್’ ಆಗಿದ್ದರು. ಬದಲಾಗಿ ಅವರು ಪ್ರಶ್ನಿಸುವುದನ್ನು ಇಷ್ಟಪಡುತ್ತಿದ್ದರು. ಇವರು ನಿವೃತ್ತಿ ಹೊಂದಿದಾಗ ನಮ್ಮ ಕಾಲೇಜಿನಲ್ಲಿ ಎಲ್ಲರೂ ಅತ್ತಿದ್ದರು. ಅವರನ್ನು ಅವರ ಮನೆಯವರೆಗೂ ವಿದ್ಯಾರ್ಥಿಗಳು ಹೊತ್ತುಕೊಂಡು ಹೋಗಿದ್ದರು. ಇಂದಿಗೂ ನಾವು ನಮ್ಮ ಸಹಪಾಠಿಗಳು ಸಿಕ್ಕಾಗ ಅವರ ಬಗ್ಗೆ ಚರ್ಚೆ ಮಾಡುತ್ತೇವೆ.

ಪ್ರಶಸ್ತಿಗಳು ಸಿಕ್ಕರೆ ಪೂರಿಯಂತೆ ಉಬ್ಬಿಬಿಡುವ, ಇದಕ್ಕಾಗಿ ಹಾತೊರೆಯುವ, ಕಷ್ಟಪಟ್ಟು ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಕೆಲವರ ಮಧ್ಯೆ ‘ಅಪುನಾ’ ರಂಥವರು ನಮಗೆ ಶಿಕ್ಷಕರಾಗಿದ್ದರು ಎಂಬುದೇ ಹೆಮ್ಮೆಯ ಸಂಗತಿಯಾಗಿದೆ. ಕಾರಣ ಬಹುತೇಕ ಮಕ್ಕಳ ನೆಚ್ಚಿನ ಶಿಕ್ಷಕರಾಗಿದ್ದ ಇವರಿಗೆ ಯಾವುದೇ ದೊಡ್ಡ ಪ್ರಶಸ್ತಿಗಳು ಸಿಕ್ಕಿರಲಿಲ್ಲವೆಂಬುದು ಈಗ ತಿಳಿದು ನನಗೆ ಅಚ್ಚರಿಯೆನಿಸುತ್ತದೆ. ಇವರು ‘ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ’ ಎಂದು ತಮ್ಮ ಪಾಡಿಗೆ ತಾವು ಕರ್ತವ್ಯಕ್ಕೆ ಒಂಚೂರು ಚ್ಯುತಿ ಬರದಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಶಿಕ್ಷಕರೊಬ್ಬರು ‘ನಾನು ಸಾಧನೆ ಮಾಡಿದ ಕುರುಹಾಗಿ 7 ಕೆಜಿ ಪ್ರಮಾಣಪತ್ರಗಳು ಇದ್ದಾವೆ’ ಎಂದು ಹೇಳಿಕೊಳ್ಳುತ್ತಿದ್ದರು. ರಾಷ್ಟ್ರ ಪ್ರಶಸ್ತಿಯ ಬಗ್ಗೆ ಪದೇ ಪದೇ ಹೇಳುವುದನ್ನು ಕೇಳಿ ಆಗ ನನಗೆ ರಾಷ್ಟ್ರ ಪ್ರಶಸ್ತಿಯ ಬಗ್ಗೆ ಕ್ರಶ್ ಉಂಟಾಗಿತ್ತು. ಇದರ ಬಗ್ಗೆ ಆಗ ಕೊಂಚವೂ ಜ್ಞಾನವಿರದಿದ್ದ ನಾನು ಕುಳಿತುಕೊಳ್ಳುತ್ತಿದ್ದ ಕಾಲೇಜಿನ ಬೆಂಚ್ ಮೇಲೆ ನನ್ನ ಹೆಸರನ್ನು ಬರೆದು ಅದರ ಕೆಳಗೆ ‘ರಾಷ್ಟ್ರ ಪ್ರಶಸ್ತಿ ಶಿಕ್ಷಕ ವಿಜೇತ’ರು ಎಂದು ಬರೆದುಕೊಂಡಿದ್ದೆ. ನಮ್ಮ ಕಾಲೇಜಿನ ಉಪನ್ಯಾಸಕರೊಬ್ಬರು ನನ್ನನ್ನು ಕರೆಯುವಾಗ ‘ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರೇ ಬನ್ನಿ’ ಎಂದು ಕರೆದಾಗ ನನಗೆ ಅವರಿಗೆ ಹೇಗೆ ಈ ವಿಷಯ ತಿಳಿಯಿತು ಎಂದು ಅಚ್ಚರಿಗೊಂಡಿದ್ದೆ. ಆಮೇಲೆ ನಮ್ಮ ಸೀನಿಯರ್‌ಗಳಿಂದ ತಿಳಿಯಿತು ನಮ್ಮ ಕಾಲೇಜಿನಲ್ಲಿ ಡೆಸ್ಕ್ ಮೇಲೆ ಬರೆದ ಬರಹಗಳನ್ನು ಲೆಕ್ಚರರ್‌ಗಳು ಓದುತ್ತಾರೆಂದು!! ಮಾರನೇ ದಿನವೇ ಅದನ್ನು ಕೆರೆದು ಕಾಣದಂತೆ ಮಾಡಿದ್ದೆ!!

ಕೆಲವರು ಪ್ರಶಸ್ತಿ ಪಡೆದುಕೊಂಡು ಅದರಿಂದಾಗಿ ಅವರು ದೊಡ್ಡವರು ಎನಿಸಿಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಪ್ರಶಸ್ತಿ ಕೊಟ್ಟರೆ ಅವರಿಂದಾಗಿ ಆ ಪ್ರಶಸ್ತಿಯ ಮೌಲ್ಯ ಹೆಚ್ಚಾಗುತ್ತದೆ! ಪ್ರಶಸ್ತಿಯೇ ಅಂತಿಮವಲ್ಲ. ಬದಲಾಗಿ ಕಾಯಕದಲ್ಲಿ ನಿಷ್ಠೆ ಇದ್ದರೆ ಸಾಕು ಎಂದು ಅನೇಕರು ಹೇಳುವುದನ್ನು ಕೇಳಿದ್ದೇನೆ. ಲೇಖಕ ರವಿ ಬೆಳಗೆರೆಯವರು “ಹಣ ಮಾಡ್ತೀನಿ ಅಂತಾ ಹೊರಡು, ಹಣ ಮಾತ್ರ ಮಾಡ್ತೀಯ. ಹೆಸರು ಮಾಡ್ತೀನಿ ಅಂತಾ ಹೊರಡು, ಹೆಸರು ಮಾತ್ರ ಮಾಡ್ತೀಯ. ಆದರೆ ಕೆಲಸ ಮಾಡ್ತೀನಿ ಅಂತಾ ಹೊರಡು, ಹಣ ಹಾಗೂ ಹೆಸರು ಎರಡೂ ಹಿಂದೆ ಬರುತ್ತೆ” ಅಂತಾ ಹೇಳುತ್ತಿದ್ದರು. ಹೆಸರು ಮಾಡಲು ಕೆಲಸ ಮಾಡುವವರು ತುಂಬಾ ಸೂಕ್ಷ್ಮಮತಿಗಳು ಆಗಿರುತ್ತಾರೆ. ‘ಕೈ ಯನ್ನು ಸಾಕಷ್ಟು ಕೆಸರು ಮಾಡಿಕೊಳ್ಳದೇ ಬಾಯನ್ನು ಮಾತ್ರ ಮೊಸರು ಮಾಡಿಕೊಳ್ಳುವ ಚಾಲಾಕಿ’ ಗಳು ಇವರಾಗಿರುತ್ತಾರೆ. ಮಾಡಿದ ಚೂರು ಕೆಲಸವನ್ನು ಹೆಚ್ಚಾಗಿಯೇ ತೋರಿಸಿಕೊಳ್ಳುವ ಹವಣಿಕೆ ಇವರಲ್ಲಿರುತ್ತದೆ. ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ
“ಘಟಂ ಛಿಂದ್ಯಾತ್, ಪಟಂ ಛಿಂದ್ಯಾತ್ ಕುರ್ಯಾತ್ ರಾಸಭ ನಿಃಸ್ವನಮ್
ಯೇನಕೇನ ಪ್ರಕಾರೇಣ ಪ್ರಸಿದ್ಧಃ ಪುರುಷೋ ಭವೇತ್||” ಅಂದರೆ ಮಡಿಕೆಯನ್ನಾದರೂ ಹೊಡಿ ಅಥವಾ ಪಟವನ್ನಾದರೂ ಹರಿ ಏನಾದರೂ ಮಾಡು ಒಟ್ಟಾರೆ ಪ್ರಸಿದ್ಧಿಯಾಗು ಎಂಬ ಅರ್ಥವನ್ನು ಕೊಡುತ್ತದೆ?!! ಆದರೆ ಡಿವಿಜಿಯವರು ಹೆಸರು ಮಾಡಲು ಏನನ್ನಾದರೂ ಮಾಡಲು ಹೇಸದವರನ್ನು ಕುರಿತು ಈ ರೀತಿ ಹೇಳಿದ್ದಾರೆ.

ಹೆಸರು ಹೆಸರೆಂಬುದು ಕಸುರು ಬೀಸುವ ಗಾಳಿ
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ?
ಶಿಶುವಾಗು ನೀಂ ಮನದಿ, ಹಸುವಾಗು ಸಸಿಯಾಗು
ಕಸಬೊರಕೆಯಾಗಿಳೆಗೆ-ಮಂಕುತಿಮ್ಮ||

ಲೋಕೋ ಭಿನ್ನರುಚಿಃ ಅವರವರ ಮನೋಭಾವ ಅವರಿಗೆ ಬಿಡಿ… ಯಾರದ್ದೋ ಕೆಲಸವನ್ನು ‘ಇದು ತಮ್ಮ ಕೆಲಸ’ ಎಂದು ಹೇಳಿಕೊಳ್ಳುವುದನ್ನು ಬಿಟ್ಟು ಅವರೇ ಸ್ವತಃ ಮಾಡಿ ಹೆಸರು ಮಾಡಲಿ.

ಟಿಸಿಹೆಚ್‌ನಲ್ಲಿ ಪ್ರಾಕ್ಟಿಕಲ್ ಎಕ್ಸಾಂನಲ್ಲಿ ನನಗೆ ಮಲ್ಲಾಡಿಹಳ್ಳಿಯಲ್ಲಿದ್ದ ಸರ್ಕಾರಿ ಶಾಲೆಯ ಒಂದು ಸೆಕ್ಷನ್ ಹುಡುಗರನ್ನು ಕೊಟ್ಟಿದ್ದರು. ನನಗೆ ಸಮಾಜ ವಿಜ್ಞಾನ ಪಾಠ ಮಾಡುವ ಅವಕಾಶ ಈ ಬಾರಿ ಇತ್ತು. ಆಗ ನಾನು ವಿಪರೀತ ಭಯಗೊಂಡಿದ್ದೆ. ಕಾರಣ ಸಮಾಜ ವಿಷಯವು ಕಷ್ಟ ಎನಿಸುತ್ತಿತ್ತು. ತಕ್ಷಣ ಪಾಠದ ಅಂಶಗಳನ್ನು ಹೇಳಲು ಕಷ್ಟವಾಗುತ್ತಿತ್ತು. ಇದಕ್ಕಾಗಿ ನಾನು ಮೊದಲೇ ಆ ಕೊಠಡಿಗೆ ಹೋಗಿ ಬೋರ್ಡ್ ಪಕ್ಕ ಅಥವಾ ಡೆಸ್ಕ್ ಮೇಲೆ ಹೇಳಬೇಕಾದ ಮುಖ್ಯಾಂಶಗಳನ್ನು ಬರೆದುಕೊಳ್ಳುತ್ತಿದ್ದೆ. ಒಮ್ಮೆ ನಮ್ಮ ಸೀನಿಯರ್ ಒಬ್ಬರು ಹೀಗೆ ಐಡಿಯಾ ಕೊಟ್ಟರು. ಆ ಹುಡುಗರು ಯಾರು ಎಂದು ತಿಳಿದುಕೊಂಡು ಮೊದಲೇ ಅವರಿಗೆ ಪಾಠ ಮಾಡಿಟ್ಟುಕೊ. ಇದರಿಂದ ಅವರು ನೀನು ಪಾಠ ಮಾಡುವಾಗ ಸರಾಗವಾಗಿ ನೀನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ ಎಂದರು. ನಾನು ಅವರು ಹೇಳಿದಂತೆ ಆ ಹುಡುಗರ ಮನೆಗಳನ್ನು ಪತ್ತೆ ಹಚ್ಚಿದೆ. ರಜಾ ದಿನದಂದು ಅವರ ಬಳಿ ಹೋಗಿ ಪಾಠ ಮಾಡುತ್ತೇನೆ ಬನ್ನಿ ಎಂದರೆ ಬರುವುದಿಲ್ಲವೆಂದು ತಿಳಿದು ಚಾಕೋಲೇಟ್‌ನ ಆಫರ್ ಮುಂದಿಟ್ಟೆ. ಅವರು ತಕ್ಷಣ ಒಪ್ಪಿಕೊಂಡರು. ಆ ಬಾಲಕರನ್ನು ನಮ್ಮ ರೂಮಿಗೆ ಕರೆದುಕೊಂಡು ಹೋಗಿ ನಾನು ತರಗತಿಯಲ್ಲಿ ಮಾಡಬೇಕಿದ್ದ ಪಾಠವನ್ನೆಲ್ಲಾ ಮಾಡಿದೆ. ಪೀಠಿಕೆಯಲ್ಲಿ “ಇದೇ ಪ್ರಶ್ನೆಗಳನ್ನು ಕೇಳುತ್ತೇನೆ. ನೀವ್ಯಾರು ಕೊನೇ ಪ್ರಶ್ನೆಗೆ ಗೊತ್ತಿಲ್ಲ ಎಂದು ಹೇಳಿ. ನನಗೆ ಆಗ ಪಾಠ ಮುಂದುವರೆಸಲು ಸಹಾಯವಾಗುತ್ತದೆ” ಎಂದೆ. ಅದಕ್ಕವರು ‘ಹ್ಞೂ’ ಎಂದರು. ನಾನು ಖುಷಿಯಿಂದಲೇ ಅವರಿಗೆ ಕೊಟ್ಟ ಮಾತಿನಂತೆ ಚಾಕೋಲೇಟ್‌ಗಳನ್ನು ಕೊಟ್ಟು ಕಳಿಸಿದೆ. ಪ್ರಾಕ್ಟಿಕಲ್ ಕ್ಲಾಸ್ ದಿನ ಬಂದೇ ಬಿಟ್ಟಿತು. ಪಾಠದ ಮೊದಲ ಹಂತ ಪೀಠಿಕೆ. ಪ್ರಶ್ನೆಗಳನ್ನು ಕೇಳ್ತಾ ಕೇಳ್ತಾ ಅವರು ಉತ್ತರ ಕೊಡುತ್ತಾ ಹೋದರು. ನಾನು ಹಿಂದೆ ಹೇಳಿದ್ದಂತೆ ಅವರು ಕೊನೆಯ 5ನೇ ಪ್ರಶ್ನೆಗೆ ಗೊತ್ತಿಲ್ಲ ಎಂದು ಹೇಳಬೇಕಿತ್ತು. ಆದರೆ ನನ್ನ ಪ್ಲ್ಯಾನ್ ಉಲ್ಟಾ ಆಗಿ ಬಿಡ್ತು. ಆ ಪ್ರಶ್ನೆ ಕೇಳುತ್ತಿದ್ದಂತೆ ನಾನು ಪಾಠ ಮಾಡಿದ ಹುಡುಗರೆಲ್ಲರೂ ಸರ್ ‘ನಾನು ಉತ್ತರ ಹೇಳ್ತೇನೆ… ನಾನು ಹೇಳ್ತೇನೆ’ ಎಂದು ಉತ್ತರ ಹೇಳಲು ಕಾಂಪಿಟೇಷನ್ ಮಾಡತೊಡಗಿದರು. ‘ನನ್ನ ಕೆಲಸ ಕೆಟ್ಟಿತ್ತಲ್ಲಪ್ಪ’ ಈಗ ಅವರಿಂದ ಉತ್ತರ ಹೇಳಿಸಿದರೆ ನನಗೆ ಮುಂದೆ ಪಾಠ ಮಾಡೋಕೆ ಆಗೋಲ್ಲವೆಂದು ತಕ್ಷಣ ಅವರಿಗೆ, ‘ಮಕ್ಕಳೇ ನಿಮಗೆ ಶಾಲಾ ತರಗತಿಯಲ್ಲಿ ಈಗಾಗಲೇ ಈ ಪಾಠವನ್ನು ಮುಗಿಸಿರಬಹುದು. ನೀವು ಈ ಪ್ರಶ್ನೆಗೆ ಸುದೀರ್ಘವಾಗಿ ಉತ್ತರಿಸುತ್ತೀರಾ’ ಎಂದು ಅವರಿಗೆ ಅರ್ಥವಾಗದಂತೆ ಅದೇ ಪ್ರಶ್ನೆಯನ್ನು ತಿರುಚಿದೆ. ಆಗ ಮಕ್ಕಳು ಸುಮ್ಮನೆ ಕುಳಿತರು. ನಂತರದ ಪಾಠವು ಹಿಂದೆ ರೂಪಿಸಿದ್ದ ಯೋಜನೆಯಂತೆ ಕಲಿಸಿದ್ದ ನಾಟಕಾಭಿನಯದಂತೆ ತುಂಬಾ ಚೆನ್ನಾಗಿ ಮೂಡಿಬಂದಿತು. ಇದರ ಬಗ್ಗೆ ವೀಕ್ಷಕರಾಗಿ ಆಗಮಿಸಿದ್ದವರು ಬೇರೆಯವರ ಬಳಿ ಹೇಳಿದ ಧನಾತ್ಮಕ ಅನಿಸಿಕೆಗಳಿಂದ ತಿಳಿಯಿತು.

ಒಮ್ಮೆ ನಮ್ಮ ಕಾಲೇಜಿನಲ್ಲಿ ‘ಅಣಕು ಸಂಸತ್ ಕಾರ್ಯಕ್ರಮ’ವನ್ನು ಮಾಡಲಾಗಿತ್ತು. ಆಗ ನಾನು ಆ ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರ ಪಾತ್ರ ಮಾಡಿದ್ದೆ. ಇದಕ್ಕಾಗಿ 15 ದಿನ ತುಂಬಾ ಶ್ರಮವಹಿಸಿದ್ದೆವು. ನಮ್ಮ ಪ್ರಾಂಶುಪಾಲರಾಗಿದ್ದ ಅಪುನಾ ರವರು ಪ್ರಧಾನಮಂತ್ರಿಯ ಪಾತ್ರವಹಿಸಿದ್ದರು. ನಾವು ಇಡೀ ದಿನ ಥೇಟ್ ಸಂಸತ್ತಿನಲ್ಲಿ ಮಾಡುವಂತೆ ಮಾಡಿದ್ದೆವು. ಎಲ್ಲರೂ ಇದನ್ನು ಇಷ್ಟಪಟ್ಟಿದ್ದರು. ನನ್ನ ಗೆಳೆಯನಾದ ಸುಣಗಾರ್ ರಾಘವೇಂದ್ರ ಇದರ ಕುರಿತು ವಿಜಯಕರ್ನಾಟಕ ಪತ್ರಿಕೆಗೆ ವರದಿ ಬರೆದು ಕಳಿಸಿದ್ದ. ಲೋಕಸಭೆಯ ಕಲಾಪವು ಯಾವುದೇ ವಿಘ್ನವಿಲ್ಲದೇ ಚೆನ್ನಾಗಿ ನಡೆಯಿತು ಎಂಬುದನ್ನು ಯಾವುದೇ ಸುದ್ದಿಗದ್ದಲವಿಲ್ಲದೇ ಚೆನ್ನಾಗಿ ನಡೆಯಿತು ಎಂದು ಪತ್ರಿಕೆಯಲ್ಲಿ ವರದಿಯಾಗಿತ್ತು. ಮಾರನೇ ದಿನ ಆಗ ಪತ್ರಿಕೆಯಲ್ಲಿ ಬರುತ್ತಿದ್ದ ವ್ಯಂಗೋಕ್ತಿ ಕಾಲಂ ನಲ್ಲಿ ‘ಲೋಕಸಭೆಯ ಕಲಾಪದಲ್ಲಿ ಸುದ್ದಿ ಗದ್ದಲವಿಲ್ಲದಿದ್ದರೆ ಅದನ್ನು ಹೇಗೆ ಕಲಾಪ ಎನ್ನಲಾಗುತ್ತದೆ’ ಎಂದು ಕೇಳಿದ್ದರು.

ಹೀಗೆ ನಮ್ಮ ಕಾಲೇಜಿನಲ್ಲಿ ನಮ್ಮ ಸರ್ವತೋಮುಖ ವಿಕಾಸಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಆದರೆ ನಮಗೆ ಆಗ ಇದರ ಜೊತೆಗೆ ಪರೀಕ್ಷೆಗೆ ನಿಗದಿಪಡಿಸಿದ ವಿಷಯಗಳನ್ನು ಓದುವುದು ಕಷ್ಟವೆನಿಸಿದರೂ ಓದಿದೆವು. ಇಂದು ನಮಗೆ ಅವು ಸಹಾಯ ಎನಿಸುತ್ತವೆ. ಹೀಗೆ ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ತುಂಬಾ ಆಸ್ಥೆಯಿಂದ ಕರ್ತವ್ಯ ನಿರ್ವಹಿಸಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

4 Comments

  1. Pratibha

    ಪ್ರಿಯ ಸಹೋದರ ಬಸನಗೌಡ ನಿಮ್ಮ ಲೇಖನ ಅತ್ಯಂತ ಉತ್ತಮವಾಗಿದ್ದು ನಮಗರಿವಿಲ್ಲದಂತೆ ಓದಿಸಿಕೊಳ್ಳುವ ಗುಣ ಹೊಂದಿದೆ ಹಾಗೆ ಹಿಂದಿನ ದಿನಗಳಿಗೆ ನಮ್ಮನ್ನು ಕೊಂಡೊಯ್ಯುವಂತಿದೆ…ವೃತ್ತಿಯ ಧಾವಂತದಲ್ಲಿ ಬರವಣಿಗೆಯ ಸಾಮರ್ಥವಿದ್ದಾಗ್ಯೂ ಸಮಯದ ಅಭಾವದ ನೆಪವೊಡ್ಡಿ ನಮಗೆ ನಾವೇ ಸಮಾಧಾನ್ಪಟ್ಟುಕೊಳ್ಳುವಂತ ನಮ್ಮಂತ ಎಷ್ಟೋ ಮಂದಿಗೆ ನಿಮ್ಮ ಬರಹ ನಿಜಕ್ಕೂ ಸ್ಪೂರ್ತಿದಾಯಕ..ನಿನ್ನ ಬರಹ ಕಂಡಾಗ ನನಗೆ ಯಾಕೋ ಮೊದಲ ಬಾರಿಗೆ ಈರ್ಷೆಯ ಭಾವ ಬಂದದ್ದು ಅಕ್ಷರಶಃ ಸತ್ಯ… ಶಾಲಾ ದಿನಗಳಿಂದಲೂ ಇಂಗ್ಲೀಷ್ ವ್ಯಾಮೋಹಕ್ಕೆ ಬಿದ್ದ ನನಗೆ ಕನ್ನಡ ಸಾಹಿತ್ಯದಲ್ಲಿಯೂ ಕೃಷಿ ಸಾಧ್ಯ ಎನ್ನುವ ಅಂಶ ಪರಿವೆಗೆ ಬರಲೇ ಇಲ್ಲ..ನಿನ್ನ ಈ ಕಾರ್ಯ ಸಾಹಿತ್ಯ ಲೋಕಕ್ಕೆ ಖಂಡಿತ ಒಂದು ಅಭೂತ ಪೂರ್ವ ಕೊಡುಗೆ…ಹಾಗೆಯೇ ನೀನು ನಮ್ಮ ಎಸ್.ಎಸ್.ಬಿ.ಎಸ್. ಸಂಸ್ಥೆಯ ಅಮೂಲ್ಯ ರತ್ನ..ನಮ್ಮ ಕನ್ನಡ ಗುರುಗಳಾದ ಶ್ರೀಯುತ.ಬಿದರಳ್ಳಿ ಕೃಷ್ಣಮೂರ್ತಿ ಯವರ ಆತ್ಮ ಖಂಡಿತ ತೃಪ್ತವಾಗಿರುತ್ತದೆ…

    Reply
  2. ಸುಣಗಾರ್ ರಾಘವೇಂದ್ರ

    🙏ಅಪುನಾ ಅಂದರೆ ಅದಮ್ಯ ಚೇತನ. ಇಂದಿಗೂ ಸಾವಿರಾರು ಮನಸುಗಳಲ್ಲಿ ಪೂಜನೀಯ ಸ್ಥಾನ ಹೊಂದಿದ ನಮ್ಮ ನಡುವಿನ ಅಪರೂಪದ ವ್ಯಕ್ತಿತ್ವಕ್ಕೆ ಅಪ್ಪಟ ನಿದರ್ಶನವೆಂದರೆ ಅದು ಅಪುನಾ ಸರ್. ನಿನ್ನ ಬರಹವನ್ನು ಲೇಖನ ಅನ್ನೋದಕ್ಕಿಂತ ನಮ್ಮೆಲ್ಲರ ಪರವಾಗಿ ನೀ ಸಲ್ಲಿಸಿದ ನಿಜವಾದ ಗುರುನಮನ ಅಂದರೆ ಅತಿಶಯೋಕ್ತಿ ಏನಲ್ಲ.‌Thank u my friend🙏

    Reply
  3. NAGALAMBIKA G M Ambika

    ಉತ್ತಮವಾಗಿದೆ..ಅ ಪು ನಾ…. ನಡೆದಾಡುವ ವಿಶ್ವಕೋಶ ಎನ್ನುವುದರಲ್ಲಿ ಸಂದೇಹವೇ ಇಲ್ಲ.. ನನ್ನ ಜೀವನದಲ್ಲಿ ಅತ್ಯಂತ ಪ್ರಭಾವ ಬೀರಿದ ವ್ಯಕ್ತಿ…. ಅಂತಹ ಶಿಕ್ಷಣ ಸಂಸ್ಥೆಯಲ್ಲಿ ಪಾಠ ಕಲಿತ ನಾವೇ ಧನ್ಯರು👏

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ