ಮೋಡ ಕಪ್ಪಾದಾಗ ಮಳೆ ಬಂದೇಬರುತ್ತೆ ಅನ್ನೋ ಮುನ್ಸೂಚನೆ ಇರುತ್ತೆ, ಕಾಲೇಜಿನಲ್ಲಿ ಸ್ವಲ್ಪ ಮೈ ಬೆಚ್ಚಗಾದಾಗ ಮನೆಗೆ ಹೋಗುವಷ್ಟರಲ್ಲಿ ಇವತ್ತು ಜ್ವರ ಬಂದೇ ಬರುತ್ತೆ ಅಂತ ಗೊತ್ತಾಗುತ್ತೆ, ಇವತ್ತು ರೆಕಾರ್ಡ್ ಬುಕ್ ಮರೆತುಬಂದಿದ್ದೀನಿ ಲೆಕ್ಚರರ್ ಹತ್ತಿರ ಬೈಗುಳಗಳು ಕಾದಿದೆ ಅಂತ ಗೊತ್ತಾಗುತ್ತೆ, ಆದರೆ ಪ್ರೀತಿ ಹುಟ್ಟುವ ಘಳಿಗೆ ಯಾರಿಗೆ ತಾನೇ ತಿಳಿದೀತು? ಕೆಲವೊಮ್ಮೆ ಮೆಚ್ಚುಗೆಯಲ್ಲಿ ಮುಗುಳ್ನಕ್ಕು ಪ್ರಾರಂಭವೇ ಇಲ್ಲದೆಯೇ ಅಲ್ಲಿಗೇ ಮುಕ್ತಾಯವಾಗಬಹುದು. ಅಥವಾ ಬೇರುಗಳು ಗಟ್ಟಿಯಾಗಿ ಫಲವತ್ತಾದ ಭೂಮಿಯ ಸಾರ ಹೀರಿ ಅಲ್ಲೊಂದು ಹೂವರಳಬಹುದು.
ಪ್ರೇಮಿಗಳ ದಿನಕ್ಕೆ ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ
ಒಂದು ಹಿಡಿ ಪ್ರೇಮವನ್ನ ಹಿಡಿದೇ ನಾವು ಹುಟ್ಟಿರಬಹುದು. ಬದುಕನ್ನ ಬದುಕುವ ಸಲುವಾಗಿ ಅನುರಾಗವರಳಬೇಕು. ಎಲಿಜಬೆತ್ ಬ್ಯಾರೆಟ್ ಬ್ರೌವ್ನಿಂಗ್ ‘ಹೌ ಡು ಐ ಲವ್ ದೀ’ ಕವನದಲ್ಲಿ ಪ್ರೀತಿಸುವ ಬಗೆಯನ್ನ ಎಣಿಸುತ್ತಾರೆ. ‘ವೆನ್ ಯು ಆರ್ ಓಲ್ಡ್’ ನೀ ಮುದುಕಿಯಾದಾಗ ಕವಿತೆಯಲ್ಲಿ ”ಒನ್ ಮ್ಯಾನ್ ಲವ್ಡ್ ದಿ ಪಿಲ್‌ಗ್ರೀಮ್ ಸೌಲ್ ಇನ್ ಯು ಅಂಡ್ ಲವ್ಡ್ ದಿ ಸಾರೋಸ್ ಆಫ್ ಯುವರ್ ಚೇಂಜಿಂಗ್ ಫೇಸ್” ಕೊನೆಗೆ ಹೇಗೆ ಪ್ರೀತಿ ಓಡಿಹೋಯಿತು ಎಂದು ದೂರದಲ್ಲಿರುವ ಗಿರಿಶಿಖರವೇರಿ ಮರೆಸಿಕೊಂಡಿತು ತನ್ನ ಮುಖವ ನಕ್ಷತ್ರಗಳ ಮಧ್ಯೆ ತೂರಿ ಎಂದು ತನ್ನ ಪ್ರಿಯತಮೆಗೆ ಯೀಟ್ಸ್ ಕವಿ ಬರೆಯುತ್ತಾನೆ. ಇನ್ನೂ ಕವಿ ಕಾಳಿದಾಸ ಮೇಘದೂತ ಖಂಡಕಾವ್ಯವನ್ನೇ ರಚಿಸಿ ಮೋಡಗಳ ಮೂಲಕ ಯಕ್ಷ – ಯಕ್ಷಿಣಿಯರು ಸಂದೇಶಗಳನ್ನು ರವಾನಿಸುವುದನ್ನ, ಆಷಾಢದ ಕಪ್ಪು ಮೋಡಕ್ಕೆ ಬೆಟ್ಟಗಳ ದಾಟಿ ಯಕ್ಷಿಣಿಯ ಬಳಿ ತಲುಪುವ ದಾರಿಯನ್ನ ಆಕೆಯ ರೂಪವನ್ನ ಗುರುತಿಸುವುದನ್ನ ಹೇಳಿ ಕಳಿಸುವ ಪ್ರೇಮಿಯನ್ನ ಸೃಷ್ಟಿಸಿದ್ದಾನೆ.
ಪ್ರೀತಿಯೆಂದರೆ ಅದು ತುಡಿತ-ಮಿಡಿತವಾ? ಎದೆಯ ಬಡಿತವಾ…?
ಮನುಷ್ಯನೊಬ್ಬನಲ್ಲಿ ಅಷ್ಟೇ ಅಲ್ಲ ಜೀವವಿರುವ ಪ್ರತೀ ಕಾಯದಲ್ಲೂ ಪ್ರೇಮವಿರುತ್ತದೆ. ತನ್ನ ಯೋಚನೆಗೆ ಸಿಕ್ಕಷ್ಟು, ತನಗೆ ತೋಚಿದಷ್ಟು-ತಿಳಿದಷ್ಟು, ತನ್ನಿಂದಾದಷ್ಟು, ತನ್ನ ಬುದ್ಧಿಯ ಮಿತಿಯಷ್ಟು ಮುಗ್ಧ ಪ್ರೀತಿಯನ್ನು ಪ್ರತಿ ಜೀವಿಗಳೂ ತೋರುತ್ತವೆ.
ಭೂಮಿಯ ಮೇಲಷ್ಟೇ ಪ್ರೇಮವಲ್ಲ, ಗಾಢ ನೀಲ ಕಡಲಿನಾಳದಲ್ಲೂ ಪ್ರೇಮೋದಯವಾಗುತ್ತದೆ.
ಕಡಲಕುದುರೆ ಗೊತ್ತಾ ಜೀವನಪೂರ್ತಿ ಜೊತೆಗಿರುವ ಸಂಗಾತಿಯನ್ನ ಹುಡುಕಿಕೊಳ್ಳುತ್ತೆ. ವಿಸ್ತಾರವಾದ ಪ್ರಣಯನೃತ್ಯವನ್ನ ಮಾಡುತ್ತ್ವೆ. ಭಾವಗಳನ್ನ ವ್ಯಕ್ತಪಡಿಸೋದಕ್ಕಂತ ಆಕರ್ಷಕ ಬಣ್ಣಗಳನ್ನ ಪ್ರದರ್ಶಿಸುತ್ತ್ವೆ. ಗಂಡು ಕಡಲಕುದುರೆಗೆ ಮರಿಗಳನ್ನು ಹೊರುವ ಹೆರುವ ಪ್ರಕೃತಿಯಿದೆ. ಏಂಜೆಲ್ ಮೀನುಗಳಿಗೂ ಏಕಸಂಗಾತಿಯಂತೆ. ಪ್ರೇಮಾನುಬಂಧ ಬೆಸೆದ ನಂತರದಿಂದ ಒಟ್ಟಿಗೇ ಓಡಾಡುತ್ತ್ವೆ, ಒಟ್ಟಿಗೇ ಬೇಟೆಯಾಡುತ್ತ್ವೆ, ಒಟ್ಟಿಗೇ ಬದುಕುತ್ತ್ವೆ. ಒಂದನ್ನೊಂದು ಬಿಟ್ಟಿರುವುದನ್ನ ಕಾಣುವುದು ಬಹಳವೇ ಅಪರೂಪವಂತೆ.
ಪಿಕಾಕ್ ಮ್ಯಾಂಟೀಸ್ ಶ್ರಿಂಪ್‌ಗಳು ಜೀವನದ್ದುದ್ದಕ್ಕೂ ತನ್ನ ಪ್ರಿಯತಮೆಯೊಂದಿಗಿರುತ್ತವಂತೆ. ಒಂದಕ್ಕೊಂದು ಕಾಳಜಿವಹಿಸುತ್ತ್ವೆ, ಆವಾಸಸ್ಥಾನವನ್ನ ಹಂಚಿಕೊಳ್ಳುತ್ತ್ವೆ, ಕೆಲವೊಮ್ಮೆ ಪ್ರೀತಿಯ ಮಿಲನದ ಸಂಕೇತವಾಗಿ ದೇಹದಿಂದ ಬೆಳಕನ್ನ ಹೋರಹಾಕುತ್ತ್ವೆ.
ಇನ್ನೂ ಬಿಳುಪಾದ ಹಂಸಗಳ ಪ್ರೇಮ ಎಷ್ಟರಮಟ್ಟಿಗೆಂದರೆ ತನ್ನ ಜೊತೆಗಾರ ಅಥವಾ ಜೊತೆಗಾತಿ ದೂರವಾದರೆ ಜೀವನದುದ್ದಕ್ಕೂ ಶೋಕಿಸುತ್ತವಂತೆ. ಉಳಿದ ಆಯಸ್ಸನ್ನ ಕೆಲವೊಮ್ಮೆ ಒಂಟಿಯಾಗಿಯೇ ಕಳೆಯುತ್ತವಂತೆ. ನಮ್ಮ ಶುದ್ಧ ಆತ್ಮದ ಸಂಕೇತ ಹಂಸ. ಹುಡುಗ ಕೆಂಗುಲಾಬಿ ಹಿಡಿದು ಹುಡುಗಿಯ ಬಳಿ ಮುಂಡಿಯೂರಿ ಮನಸ್ಸನ್ನ ಬಿಚ್ಚಿ ಪ್ರೀತಿಯ ಹೇಳುವಂತೆ, ಕಡಲಕೋಳಿಗಳು ತನ್ನ ಗೆಳತಿಗೆ ಬಣ್ಣಬಣ್ಣದ ಹರಳು ಕಲ್ಲುಗಳನ್ನು ‘ಡಿಯರ್ ವ್ಯಾಲಂಟೈನ್ ದಿಸ್ ಇಸ್ ಫಾರ್ ಯು’ ಅಂತ ಕೊಟ್ಟು ಪ್ರೇಮ ನಿವೇದನೆಯನ್ನ ಮಾಡುತ್ತವಂತೆ. ಆ ಗೆಳತಿ ಅದನ್ನ ತೆಗೆದುಕೊಂಡರೆ ಒಪ್ಪಿಗೆ ಸಮ್ಮತಿಸಿದ್ದಾಳೆ ಅಂತ ಅರ್ಥವಂತೆ ನಂತರ ಮುಂದಿನ ದಿನಕ್ಕೆ ಇಬ್ಬರೂ ಸೇರಿ ಗೂಡು ಕಟ್ಟಲು ಶುರುಮಾಡುತ್ತವಂತೆ.
ಕಡಲಿನಷ್ಟು ಪ್ರೀತಿ ಕಡಲಿನಲ್ಲಿದೆ
ತಿಮಿಂಗಿಲಗಳು ತಮ್ಮದೇ ಆದ ಭಾಷೆಯಲ್ಲಿ ಹಾಡು ಕಟ್ಟುತ್ತ್ವೆ, ತನ್ನಿಷ್ಟದ ಹುಡುಗಿಗೆ ತನ್ನಲ್ಲಿನ ಅನುರಾಗವನ್ನ ತಿಳಿಸುತ್ತ್ವೆ. ಗ್ರೀಕರ ಪುರಾಣದ ಪ್ರಕಾರ ಡಾಲ್ಫಿನ್‌ಗಳನ್ನ ಸೌಂದರ್ಯ ದೇವತೆ ಅಪ್ರೊಡೈಟ್‌ನ ಜೊತೆಗೆ ಸಂಬಂಧಿಸಿದ್ದಾರೆ. ಬ್ಯಾಟರಿ ಮೀನುಗಳು ಒಂದನ್ನೊಂದು ಆಕರ್ಷಿಸೋದಕ್ಕೆ ಬೆಳಕನ್ನ ಬೀರುತ್ತ್ವೆ. ತನ್ನವಳೊಟ್ಟಿಗೆ ಸಂವಹಿಸಲು ಬಹುತೇಕ ನಕ್ಷತ್ರಮೀನುಗಳೂ ಕೂಡ ಬೆಳಗುತ್ತವಂತೆ. ಇವೆಲ್ಲಾ ಕಡಲು ಜೀವಗಳಲ್ಲಿ ಅದೆಷ್ಟು ಒಲುಮೆ ಕಡಲಿನಲೆಯಂತೆ ಹುಣ್ಣಿಮೆಯ ಚಂದ್ರಿಕೆಯ ಮುಂದೆ ಉಕ್ಕುತ್ತೆ.
ಮಿಂಚುಹುಳುಗಳಲ್ಲಿ ಗ್ಲೊವರ್ಮ್‌ಗಳಲ್ಲಿ ಜೈವಿಕಪ್ರಕಾಶಮಾನವಾದ ಬೆಳಕೇ ಅವುಗಳ ಪ್ರೀತಿಯ ಭಾಷೆ. ಕಪ್ಪೆಗಳು ಮಳೆಗಾಲದಲ್ಲಿ ಕೂಗಿ ಕೂಗಿ ಇನಿಯಳನ್ನ ಕರೆಯುತ್ತ್ವೆ.
ಮೋಡ ಕಪ್ಪಾದಾಗ ಮಳೆ ಬಂದೇಬರುತ್ತೆ ಅನ್ನೋ ಮುನ್ಸೂಚನೆ ಇರುತ್ತೆ, ಕಾಲೇಜಿನಲ್ಲಿ ಸ್ವಲ್ಪ ಮೈ ಬೆಚ್ಚಗಾದಾಗ ಮನೆಗೆ ಹೋಗುವಷ್ಟರಲ್ಲಿ ಇವತ್ತು ಜ್ವರ ಬಂದೇ ಬರುತ್ತೆ ಅಂತ ಗೊತ್ತಾಗುತ್ತೆ, ಇವತ್ತು ರೆಕಾರ್ಡ್ ಬುಕ್ ಮರೆತುಬಂದಿದ್ದೀನಿ ಲೆಕ್ಚರರ್ ಹತ್ತಿರ ಬೈಗುಳಗಳು ಕಾದಿದೆ ಅಂತ ಗೊತ್ತಾಗುತ್ತೆ, ಆದರೆ ಪ್ರೀತಿ ಹುಟ್ಟುವ ಘಳಿಗೆ ಯಾರಿಗೆ ತಾನೇ ತಿಳಿದೀತು? ಕೆಲವೊಮ್ಮೆ ಮೆಚ್ಚುಗೆಯಲ್ಲಿ ಮುಗುಳ್ನಕ್ಕು ಪ್ರಾರಂಭವೇ ಇಲ್ಲದೆಯೇ ಅಲ್ಲಿಗೇ ಮುಕ್ತಾಯವಾಗಬಹುದು. ಅಥವಾ ಬೇರುಗಳು ಗಟ್ಟಿಯಾಗಿ ಫಲವತ್ತಾದ ಭೂಮಿಯ ಸಾರ ಹೀರಿ ಅಲ್ಲೊಂದು ಹೂವರಳಬಹುದು.
ವಸುಧೆ ನಮ್ಮ ಹುಟ್ಟಿನೊಡನೆ ಹಿಡಿಯಷ್ಟು ಪ್ರೀತಿಯನ್ನೂ ತುಂಬಿ ಕಳಿಸಿದ್ದಾಳೆ ಅದು ಮೈಟಾಸಿಸ್-ಮಿಯಾಸಿಸ್ ನಂತೆ ಜೀವಕೋಶಗಳ ವಿಭಜನೆಯಂತೆ ಒಂದಿದ್ದಿದ್ದು ಎರಡಾಗಿ, ಆ ಎರಡುಗಳು ನಾಲಕ್ಕಾಗಿ ಅಥವಾ ಒಂದಿದ್ದಿದ್ದು ನಾಲಕ್ಕಾಗಿ ಆ ನಾಲ್ಕು ಹದಿನಾರಾಗಿ ಹಿಡಿಯಷ್ಟು ಪ್ರೀತಿ ಕಡಲಿನಷ್ಟಾಯ್ತು. ಇಂದಿಗೂ ಅದೇ ಪ್ರೀತಿ ಸೋನೆಯಂತೆ ಸುರಿಯುತ್ತಾ ಎಲ್ಲರ ಮನಸ್ಸಿಗೆ ಕಚಗುಳಿಯಿಡುತ್ತಿದೆ.
ಸಾಲ್ಮರದ ಬೀದಿಯಲಿ ನಡೆಯುವಾಗ ಮಳೆಯೊಂದು ಸಣ್ಣಗೆ ಬಂದು ಭೂಮಿ ತಣ್ಣಗಾಗಿರುತ್ತೆ. ಪೆಂಗ್ವಿನ್‌ನಂತೆ ಪ್ರೇಮದ ಕಾಣಿಕೆ ಹಿಡಿದು ‘ದಿಸ್ ಇಸ್ ಫಾರ್ ಯು ಡಿಯರ್ ವ್ಯಾಲಂಟೈನ್’ ಅಂತ ಯಾರೋ ಯಾರಿಗೋ ಕಾಯ್ತಿರಬಹುದು. ತನ್ನವಳಿಗೆಂದೇ ಅಲ್ಲೊಬ್ಬ ಹಾಡು ಕಟ್ತಿರಬಹುದು, ರಾಗ ಸರಿಮಾಡ್ಕೊಳ್ತಿರಬಹುದು, ಪ್ರಣಯ ನೃತ್ಯಕ್ಕೆ ಹೆಜ್ಜೆಹಾಕಲು ಕಾಯುತ್ತಿರಬಗುದು, “ಓ ನನ್ನ ನಲ್ಲೆ ನಗುತಿರುವೆ ಎಲ್ಲೆ ನನ್ನೆದೆಯ ತುಂಬ ನೀನೆ, ಈ ಹೊತ್ತಿನೊಳಗೆ ಹುಡುಕುವುದು ಬೇಡ ಇಲ್ಲಿಹುದು ನಿನ್ನ ವೀಣೆ” ಎಂದು ಕೆ. ಎಸ್. ನ ಅವರ ಹಾಡು ಧ್ಯಾನಿಸುತ್ತಾ ತಂತಿಯನ್ನು ಮೀಟುತ್ತಿರಬಹುದು. ಅವಳ ಹಾದಿಯನ್ನೇ ಎದುರು ನೋಡುತ್ತಿರಬಹುದು. ಅವಳ ಕಾಲ್ಗೆಜ್ಜೆಯ ದನಿ ಅವನನ್ನ ಕರೆಯುತ್ತಿರಬಹುದು. ಅವಳ ಕಿವಿಯ ಜುಮುಕಿ ನುಣುಪಾದ ಜಡೆಯ ನಡುವೆ ಇಣುಕಿ ಅವನನ್ನೇ ನೋಡುತ್ತಿರಬಹುದು. ಯಾವುದೋ ಧ್ಯಾನದಲ್ಲಿ ಅವಳು ಬಿಡಿಸಿದ ಚಿತ್ರದಲ್ಲಿ ಅವನದೇ ರೂಪವಿರಬಹುದು. ಹೀಗೂ ಇರಬಹುದಲ್ವಾ ಪ್ರೇಮ ನಿವೇದನೆಗಳೇ ಬೇಕೆಂದೇನಿಲ್ಲ ಭೇಟಿಯ ನೋಟದಲ್ಲೇ ಭಾವ ನಿವೇದನೆಯಾಗಬಹುದು, ಇಲ್ಲಿ ಪ್ರೀತಿಯಿದೆಯೆಂಬುದನ್ನು ಆಕೆಯ ಕಣ್ಣಿನಲ್ಲೂ ಓದಬಹುದು.
ಪ್ರಕೃತಿಯಲ್ಲಿ ಅರಳುವ ಪ್ರೀತಿಯ ಬಗೆಗಿನ ಅಂದದ ಬರಹ.
ಥ್ಯಾಂಕ್ಯೂ
ಪ್ರೀತಿಯೆಂದರೆ ಮೋಹವಲ್ಲ,
ನಾನು ನೀನಾಗುವ, ನೀನು ನಾನಾಗುವ
ಸುಂದರ ಕ್ಷಣಗಳು,
ಪ್ರೀತಿಯೆಂದರೆ ಹೊಂದಾಣಿಕೆಯಲ್ಲ,
ನೀನಗಾಗಿ ನನ್ನ ಲೋಕವನ್ನೆ ತೊರೆಯುವ ಘಳಿಗೆ,
ಪ್ರೀತಿಯೆಂದರೆ ಅವಕಾಶವಾದವಲ್ಲ,
ನನ್ನದೇನು ಇಲ್ಲ ನಿನ್ನದೇ ಎಲ್ಲ ಎಂಬ ಭಾವ,
ಪ್ರೀತಿಯೆಂದರೆ ಕೋಪವಲ್ಲ,
ನನ್ನ ಕೋಪವನ್ನೆಲ್ಲ ಸಹಿಸುವ ನಿನ್ನ ತಾಳ್ಮೆ
ಪ್ರೀತಿಯೆಂದರೆ ಏನು,
ನೀನು ಶಿವನಾಗಿ ನಾನು ಶಕ್ತಿಯಾಗಿ
ಪ್ರಕೃತಿಯಲ್ಲಿ ಪರಿಪೂರ್ಣರಾಗುವ
ಮಹೋನ್ನತ ಲೀಲೆ.
ನಿಮ್ಮ ಬರಹಕ್ಕೆ ನನ್ನ ಪ್ರತಿಕ್ರಿಯೆ. ಬರಹ ಉತ್ತಮವಾಗಿದೆ.
ಧನ್ಯವಾದಗಳು