ಪ್ರೇಮವೆಂದರೆ ಹಸಿಬಿಸಿ ಹೃದಯದ ಚಡಪಡಿಕೆಯಲ್ಲ. ಒಂದೇ ಸಲಕ್ಕೆ ಉರಿದು ಮುಗಿಯುವ ಬೆಂಕಿಕಡ್ಡಿಯಲ್ಲ. ಸೋತರೆ ಸಾಯಬೇಕಿಲ್ಲ. ಗೆದ್ದರೆ ಬೀಗಲು ಅವಕಾಶವೇ ಇಲ್ಲ. ಮಾಗಿದಷ್ಟೂ, ಜೊತೆ ಪಳಗಿದಷ್ಟೂ ರುಚಿಯಾಗುವ, ಸವಿಯಾಗುವ ಪ್ರೇಮವನ್ನು ಅನುಭವಿಸಲು ಇಡೀ ಆಯುಷ್ಯವಿದೆ. ಓದಿ, ಬರೆದು, ಕಣ್ತೆರೆದು ಪ್ರಪಂಚ ನೋಡಿ, ತಿಳಿದು, ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ಪ್ರೇಮದ ಹೆಸರಿನಲ್ಲಿ ಹುಚ್ಚಾಟಗಳಿಗೆ ಪಕ್ಕಾಗಿ, ನಮ್ಮನ್ನೇ ನಿಭಾಯಿಸಿಕೊಳ್ಳಲು ಬಾರದ ವಯಸ್ಸಿನಲ್ಲಿ ಇನ್ನೊಂದು ಜೀವವನ್ನು ನಿಭಾಯಿಸುವ, ಸಂಬಂಧ ಬೆಸೆಯುವ ಸಾಹಸ ಬೇಕಿದೆಯೆ? ಎಷ್ಟೊಂದು ಪ್ರಶ್ನೆಗಳು. ಆದರೆ ಕಾಲೇಜು ಬೀದಿಯುದ್ದಕ್ಕೂ ಇಂದು ಗುಲಾಬಿ ಹೂಗಳು, ಚಾಕೊಲೇಟ್, ಕೆಂಪು ಡ್ರಸ್.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣದ ಬರಹ ನಿಮ್ಮ ಓದಿಗೆ

ಆ ಹುಡುಗಿ ಮೆಟ್ರೋದಲ್ಲಿದ್ದೀನಿ ಎಂಬ ಯಾವ ಮುಜುಗರವೂ ಇಲ್ಲದಂತೆ ಬಹುಶಃ ತನ್ನ ಆತ್ಮೀಯ ಗೆಳತಿಯೊಂದಿಗೆ ಮಾತಾಗಿ ಹರಿಯುತ್ತಿದ್ದಳು. ಹರಿಹಾಯ್ದಂತೆ ಇದ್ದರೂ ಅಲ್ಲಿ ಭಾವುಕತೆಯೊಂದಿಗೆ ತಾರ್ಕಿಕತೆಯೂ ಜತೆಗೂಡಿ ಭಲೇ ಎನ್ನಿಸುವಂತಿತ್ತು. ಓಡಾಟದ ಮಧ್ಯೆ ಕಿವಿಗೆ ಬೀಳುವ ಹತ್ತು ಹಲವು ಹರಟೆಗಳಲ್ಲಿ ಇದೂ ಒಂದು ಎಂದು ಮರೆಯಲಾಗದಂತೆ, ಕೇಳಿ ವಾರವಾದರೂ ಎದೆಯ ಹಸಿನೆಲದಲ್ಲಿ ನೆಟ್ಟ ಗಿಡದಂತೆ ಉಳಿದುಬಿಟ್ಟಿತು. ಆಕೆ ತನ್ನ ಪ್ರಿಯಕರನ ವರ್ತನೆಯಿಂದ ರೋಸಿ ಹೋಗಿದ್ದಳು. “ನಂಗ್ಯಾವ ಹಣೆಬರಹನೇ ಇಂತಹವನ ಜೊತೆ ಏಗೋಕೆ? ಖಂಡಿತ ಇವನನ್ನು ಮದುವೆಯಾಗಲ್ಲ. ಒಳ್ಳೆ ಕಡೆ ಸಂಬಂಧಗಳು ಬರ್ತಿವೆ. ಅದರಲ್ಲೇ ಒಬ್ಬ ಜವಾಬ್ದಾರಿ ಇರೋ ಹುಡುಗನಿಗೆ ಹೂಂ ಅಂತೀನಿ. ಅದು ಹೇಗೆ ಮೋಸ ಆಗುತ್ತೆ ಹೇಳು? ಮೂರು ವರ್ಷದಿಂದ ನೋಡ್ತಿದ್ದೀನಿ. ಇವನ ಗಾಡಿ ಪೆಟ್ರೋಲ್ ಕಾಸು ಸಹಿತ ನಾನೇ ಕೊಡಬೇಕು. ದಿನಾ ಹೊರಗೆ ಗೋಬಿ, ಪಾನಿಪುರಿ, ಮಸಾಲೆಪುರಿ ಅಂತ ಕೊಡಿಸಬೇಕು. ತಿಂಡಿಪೋತನಂಗೆ ಮೂರು ಹೊತ್ತೂ ತಿನ್ನೋದು, ರಾತ್ರಿಯೆಲ್ಲ ಮೊಬೈಲ್ ಅಲ್ಲಿ ಕೇಡಿಗಳ ಲೈಫ್ ಸ್ಟೋರಿ ನೋಡೋದು, ಬೆಳಿಗ್ಗೆ ಹನ್ನೊಂದಕ್ಕೆ ಎದ್ದು ಬೀದಿ ಬೀದಿ ಸುತ್ತೋದು. ಜವಾಬ್ದಾರಿ ಕಲಿ ಅಂದ್ರೆ ಗುಟುರು ಹಾಕ್ತಾನೆ. ಕೈ ಎತ್ತೋಕೆ ಬರ್ತಾನೆ. ಮೊನ್ನೆ ನನ್ನ ಫ್ರೆಂಡ್ ಹತ್ತಿರ, ಇವಳಿಗೆ ಗೌರ್ಮೆಂಟ್ ಕೆಲಸ ಐತೆ. ನಾನ್ಯಾಕೆ ದುಡೀಬೇಕು? ಅವಳ ಖರ್ಚು ಅವಳು ನೋಡ್ಕೊಳ್ಳಿ‌ ಅಂದೌನೆ. ಮದುವೆಗೆ ಮುಂಚೇನೇ ನನ್ನ ಮಾತಿಗೆ ಬೆಲೆ ಕೊಡದವನು, ಸಂಸ್ಕಾರ ಇಲ್ಲದವನು, ಅಪ್ಪ ಅಮ್ಮ ತಂಗಿಯರ ಹೊಟ್ಟೆ ಉರಿಸ್ಕೊಂಡು ಓಡಾಡೋನು ಆಮೇಲೆ ಎಷ್ಟು ಟಾರ್ಚರ್ ಕೊಡಬಹುದು ಲೆಕ್ಕ ಹಾಕು. ಗೊತ್ತಿದ್ದೂ ಗೊತ್ತಿದ್ದೂ ಇಂತಹವನ ಕಟ್ಕೊಳ್ಳೋಕೆ ನಂಗೇನು ಗ್ಯಾನ ಕೆಟ್ಟೈತಾ? ಸಾಲದು ಅಂತ ಯಾರ ಜೊತೆ ಮಾತಾಡಿದರೂ ಅನುಮಾನ. ಸಂಬಂಧ ಕಟ್ಟಿ ಹಂಗಿಸ್ತಾನೆ. ಅಪ್ಪ ಅಮ್ಮ ಹೊಟ್ಟೆ ಬಟ್ಟೆ ಕಟ್ಟಿ, ವಿದ್ಯೆ ಬುದ್ಧಿ ಕಲಿಸಿ ಇಷ್ಟೆತ್ತರ ಬೆಳಸಿರೋದು ಇಂತಹವನ ಕೈಲಿ ಏಟು ತಿನ್ಕೊಂಡು, ಗೋಳುಗುಟ್ಕೊಂಡು ಸಾಯಲಿ ಅಂತಲಾ? ಬೇಡಮ್ಮ ತಾಯಿ. ಇಂತಹವನ ಸಹವಾಸ ಸಾಕು. ನಾಳೆ ಫೆಬ್ರವರಿ 14 ಬರತ್ತಲ್ಲ. ಎಲ್ಲ ಹೇಳಿ, ನನ್ನ ಸುದ್ದಿಗೆ ಬರಬೇಡ ಅಂತಂದು ಊರಿಗೆ ಹೊರಟುಬಿಡ್ತೀನಿ.” ಸಣ್ಣ ದನಿಯಲ್ಲೇ ಆದರೂ ನಿರ್ಧಾರಿತವಾಗಿ ತನ್ನ ಅಭಿಪ್ರಾಯ ಹೇಳಿದ್ದಳು.

ಇವತ್ತು ಪ್ರೇಮಿಗಳ ದಿನ. ವರ್ಷಪೂರ್ತಿಯ ಸ್ನೇಹ, ವಿಶ್ವಾಸ, ತುಂಟಾಟ, ಕಾಲೆಳೆತಗಳ ನಡುವೆಯೇ ಹುಟ್ಟಿದ ನೀನಿರದೆ ನಾನಿಲ್ಲ ಎಂಬ ಭಾವಕ್ಕೆ ಮೂರು ಪದಗಳ ಕವಚ ತೊಡಿಸಿ ಹುಡುಗ/ಹುಡುಗಿಯ ಮುಂದೆ ನಿವೇದಿಸುವ ಆಸೆ ಪೂರೈಸುವ ದಿನ. ಪ್ರೀತಿ ಹುಟ್ಟಲು ದಿನ, ವಾರ, ನಕ್ಷತ್ರದ ಹಂಗಿಲ್ಲ. ಕಾಲ, ದೇಶ, ವೇಷ, ಭಾಷೆಯ ಮಿತಿಯಿಲ್ಲ. ಹಾಗಿದ್ದೂ ಹದಿಹರೆಯದ ಪ್ರೇಮಿಗಳ ಪಾಲಿಗೆ ವಿಶೇಷವೆನಿಸುವ ದಿನವಿದು. ಸುತ್ತ ನೂರು ಜನರ ಮಧ್ಯೆ ಇದ್ದರೂ ಒಂಟಿಯೆನಿಸುವ, ಆತ/ಆಕೆ ಜೊತೆಯಿದ್ದರೆ ಜಗತ್ತೇ ನಮ್ಮದೆನ್ನುವ ಉತ್ಸಾಹ ಹುಟ್ಟಿಸುವ ಜಾದೂ ಪ್ರೇಮದ್ದು. ಪ್ರೇಮದ ನಶೆಗೆ ಸಿಕ್ಕ ಮೇಲೆ ಬದುಕು ಹೊಸತೆನಿಸುವುದು. ಅದುವರೆಗಿನ ಕ್ಷಣಗಳು ರಸಹೀನವೆನಿಸುವುದು. ಪ್ರೇಮದ ಬಗ್ಗೆ ಎಷ್ಟು ಬರೆದರೂ ಮತ್ತಷ್ಟು ಉಳಿದೇ ಹೋಗುವ ಸರಕಿದೆ. ಆದರೆ ಪ್ರೇಮವೆಂಬ ನಶೆಗೆ ಸಿಕ್ಕ ನಂತರ, ಪ್ರೇಮಿಗಳ ನಡುವಿನ ಸಮರ, ಸಂಧಾನ, ಹೊಂದಾಣಿಕೆ, ಸೆಣೆಸಾಟ ತಂದೊಡ್ಡುವ ಸವಾಲುಗಳನೇಕ.

ಈ ಮಧ್ಯೆ ಪ್ರೇಮ ಒಂದೇ ಬಾರಿ ಘಟಿಸುತ್ತದೆ. ಪ್ರೇಮಿಗಳ ನಡುವೆ ಲೌಕಿಕದ ಲೆಕ್ಕಾಚಾರಗಳಿರಬಾರದು. ವಾಸ್ತವ ಪ್ರಜ್ಞೆಯನ್ನು ಮೀರಿದರೆ ಮಾತ್ರ ಪ್ರೇಮದ ಅನುಭೂತಿ ದೊರಕುವುದು. ಪ್ರೇಮ ವಿಫಲವಾದರೆ ಬದುಕೇ ಘೋರ, ನಿರರ್ಥಕ. ಬಿಟ್ಟುಹೋದ/ ಸತ್ತುಹೋದ ಪ್ರೇಮಿಯ ನೆನಪಿನಲ್ಲೇ ನಾವು ಬದುಕು ಸವೆಸಿ ಸಾಯುವುದು ಆದರ್ಶ. ಯಾರಿಲ್ಲದಿದ್ದರೂ ಅವನು/ಅವಳು ಜೊತೆಗಿದ್ದರೆ ಎಲ್ಲವನ್ನೂ ಗೆಲ್ಲಬಹುದು… ಹೀಗೆ ಎಷ್ಟೆಲ್ಲ ತಪ್ಪುಕಲ್ಪನೆಗಳೊಂದಿಗೆ ಯುವಪ್ರೇಮಿಗಳು ಹೆಜ್ಜೆ ಹಾಕುತ್ತಾರೆ. ಇವೆಲ್ಲ ಅನಾದಿ ಕಾಲದ ಮಾದರಿಗಳು. ಈಗೇನಿದ್ದರೂ ಡೇಟಿಂಗ್, ಲಿವ್ ಇನ್ ಗಳ ಜಮಾನ ಅಂದರೂ ಅಲ್ಲಿಯೂ ನಂಬಿಕೆ- ಅಪನಂಬಿಕೆ, ಒಪ್ಪಂದ-ಶೋಷಣೆ, ಸುಖ-ದುಃಖ, ನೋವು- ನಿರಾಸೆ ಅಸಮಾಧಾನಗಳಿವೆ. ತಮ್ಮ ಸಂಗಾತಿಗಳನ್ನು, ಸ್ನೇಹಿತರನ್ನು ಉಟ್ಟ ಬಟ್ಟೆಯಂತೆ ಬದಲಿಸುವ ವ್ಯಕ್ತಿಗಳಿಗೂ ದೇಹ, ಮನಸ್ಸು, ಆತ್ಮವಿದೆಯಲ್ಲ. ಹಾಗಾಗಿ ಪ್ರೇಮದ ತೆಕ್ಕೆಗೆ ಬಿದ್ದವರೆಲ್ಲರದ್ದೂ ಬಗೆಬಗೆಯ ಅನುಭವ.

ಈಗಂತೂ ಐದು ಆರನೆಯ ತರಗತಿಯ ಮಕ್ಕಳಿಗೆ ಪ್ರೇಮದ ಗಾಳಿ ಬೀಸುತ್ತಿದೆ. ದೇಹ ಮನಸ್ಸುಗಳು ಬಲಿಯುವ ಮುನ್ನವೇ ಕಾಮವೂ ಕೈಗೆಟಕುತ್ತಿದೆ. ಯೋಚಿಸಿ ನಿರ್ಧರಿಸುವ ವಿವೇಚನೆ ಬೆಳೆಯುವ ಮುನ್ನವೇ ನಾಲ್ಕಾರು ಸಂಬಂಧಗಳು, ಬ್ರೇಕಪ್, ದೌರ್ಜನ್ಯಗಳ ಅನುಭವದ ಹೊರೆ ಹೃದಯಕ್ಕೇರಿ ಬದುಕು ಬೇಸರ. ಬೇಸರವು ಖಿನ್ನತೆ, ಆತಂಕ ಹಾಗೂ ಮತ್ತಿತರ ಮಾನಸಿಕ ಸಮಸ್ಯೆಯ ಹೊಸ್ತಿಲಿಗೆ ಹೋಗಿ ನಿಲ್ಲಲು ಹೆಚ್ಚು ಕಾಲ ತೆಗೆದುಕೊಳ್ಳುತ್ತಿಲ್ಲ. ಆದರೆ ಈ ಎಳೆಯರಿಗೆ ಬುದ್ಧಿ ಹೇಳುವವರಾರು? ಬೆಕ್ಕಿಗೆ ಗಂಟೆ ಕಟ್ಟುವವರಾರು?

ಪ್ರೇಮವೆಂದರೆ ಹಸಿಬಿಸಿ ಹೃದಯದ ಚಡಪಡಿಕೆಯಲ್ಲ. ಒಂದೇ ಸಲಕ್ಕೆ ಉರಿದು ಮುಗಿಯುವ ಬೆಂಕಿಕಡ್ಡಿಯಲ್ಲ. ಸೋತರೆ ಸಾಯಬೇಕಿಲ್ಲ. ಗೆದ್ದರೆ ಬೀಗಲು ಅವಕಾಶವೇ ಇಲ್ಲ. ಮಾಗಿದಷ್ಟೂ, ಜೊತೆ ಪಳಗಿದಷ್ಟೂ ರುಚಿಯಾಗುವ, ಸವಿಯಾಗುವ ಪ್ರೇಮವನ್ನು ಅನುಭವಿಸಲು ಇಡೀ ಆಯುಷ್ಯವಿದೆ. ಓದಿ, ಬರೆದು, ಕಣ್ತೆರೆದು ಪ್ರಪಂಚ ನೋಡಿ, ತಿಳಿದು, ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದ ವಯಸ್ಸಿನಲ್ಲಿ ಪ್ರೇಮದ ಹೆಸರಿನಲ್ಲಿ ಹುಚ್ಚಾಟಗಳಿಗೆ ಪಕ್ಕಾಗಿ, ನಮ್ಮನ್ನೇ ನಿಭಾಯಿಸಿಕೊಳ್ಳಲು ಬಾರದ ವಯಸ್ಸಿನಲ್ಲಿ ಇನ್ನೊಂದು ಜೀವವನ್ನು ನಿಭಾಯಿಸುವ, ಸಂಬಂಧ ಬೆಸೆಯುವ ಸಾಹಸ ಬೇಕಿದೆಯೆ? ಎಷ್ಟೊಂದು ಪ್ರಶ್ನೆಗಳು. ಆದರೆ ಕಾಲೇಜು ಬೀದಿಯುದ್ದಕ್ಕೂ ಇಂದು ಗುಲಾಬಿ ಹೂಗಳು, ಚಾಕೊಲೇಟ್, ಕೆಂಪು ಡ್ರಸ್. ನಾಚುವ, ಮೈಮರೆಯುವ, ಕಿತ್ತಾಡುವ, ಜೋಡಿಗಳು. ಇವರೆಲ್ಲರ ಪ್ರೇಮ ನಿಜವಾಗಲಿ. ಹರಕೆ ಫಲಿಸಲಿ. ಬದುಕು ಬಂಗಾರವಾಗಲಿ ಎಂಬ ಪ್ರಾರ್ಥನೆಯೊಂದಿಗೆ ಬರಹ ಮುಕ್ತಾಯವಾಗುತ್ತದೆ. ಆದರೆ ಬದುಕು ಈಗಷ್ಟೇ ಕಣ್ತೆರೆದಿದೆ.