ಹಿರಿಯ ಪತ್ರಕರ್ತ ಹಾಗೂ ಕವಿ ರಾಮು(69) ಮಂಗಳವಾರ ಮುಂಜಾನೆ ತೀರಿಕೊಂಡರು. ವಿಭಿನ್ನ ನೆಲೆಗಟ್ಟಿನ ಅವರ ಕವಿತೆಗಳ ಕಾರಣಕ್ಕೆ ಮತ್ತು ಅವರ ಆಪ್ತತೆಯ ಕಾರಣಕ್ಕೆ ಮೈಸೂರಿನ ಹಾಗೂ ಮೈಸೂರಿಗೆ ಆಗಮಿಸುತ್ತಿದ್ದ ಸಾಹಿತ್ಯದ ಬಂಧುಗಳೆಲ್ಲ ಅವರನ್ನು ಆಗಾಗ ಭೇಟಿಯಾಗುತ್ತಲೆ ಇರುತ್ತಿದ್ದರು.
ಅಗ್ನಿಸೂಕ್ತ, ರಾಮು ಕವಿತೆಗಳು, ವಿಷ್ಣುಕ್ರಾಂತಿ ಮತ್ತು ಇತರೆ ಕವಿತೆಗಳು ಇವರ ಪ್ರಕಟಿತ ಕವನ ಸಂಕಲನಗಳು.
ರಾಮು ಅವರ ವ್ಯಕ್ತಿತ್ವದ ಕುರಿತು ಕವಯತ್ರಿ ರೂಪಾ ಹಾಸನ ಬರೆದ ಕವಿತೆಯೊಂದು ನಿಮ್ಮ ಓದಿಗೆ
ಪ್ರವಾಸಿಗರ ಮರವೆಂಬೋ ನಿರ್ಮೋಹಿ
ತಾನೊಂದು ಮರವೇ ಆಗಿದ್ದರೂ
ಕೇವಲ ಬಾಳೇಗಿಡದಂತೆ
ತಾನೊಂದು ಗಿಡವಷ್ಟೇ,
ಗಿಡ ತೊಟ್ಟ
ಎಲೆಗಳಲೊಂದು ಎಲೆಯೆಂಬ
ವಿನೀತಭಾವ.
ಹಾದಿಬೀದಿಯವರನ್ನೆಲ್ಲಾ
ತನ್ನ ತೋಳ್ಬೀಸಿ
ಪ್ರೀತಿಯಲಿ ಕರೆದು
ಉದ್ದಾನುಉದ್ದ
ಬೀಸಣಿಗೆಯಂಥಹ ಎಲೆಯಲಿ
ತಣ್ಣನೆ ಗಾಳಿ ಬೀಸಿ…
ಕೀಲಿಕೊಟ್ಟಂತೆ
ನವಿಲ ನರ್ತನ.
ಮತ್ತೆ ಆ ಕ್ಷಣಕ್ಕೇ
ಎಲ್ಲಾ ಮರೆತೂ ನಿರಾಳ!
ಬೀಜವೂ ಇರದ
ಕೊಂಬೆರೆಂಬೆಗಳೂ ಇಲ್ಲದ
ಮಿರಿಮಿರಿ ಸುಂದರ
ಎಲೆಗಳೇ ತಾನಾದ ಮರಕ್ಕೆ
ಪೊಟರೆಗಳ ನಡುವಿನಲಿ
ಮಳೆನೀರ ಕಾಪಿಡುವ ಗುಪ್ತ ಕುಳಿ!
ಆಪತ್ಕಾಲದ ಬರಕ್ಕೆ
ಜೀವಜಲದ ಹನಿ.
ದೀರ್ಘ ಪಯಣಕ್ಕೆ ಹೊರಟ
ಹುಳು ಹುಪ್ಪಡಿ ಹಕ್ಕಿ
ಜೀವಜಂತುಗಳ
ಬಾಯಾರಿಕೆಗೆ ಆಸರಾಗುವ
ಈ ಪ್ರವಾಸಿಗರ ಮರ
ಜೀವಕ್ಕೆ ಜೀವ ತುಂಬುವ
ತಂಪಿನ ನಿಲುದಾಣ!
ಗಾಳಿ ಬೀಸಿದಾಗೊಮ್ಮೆ
ಮೈತುಂಬಿದೆಲೆಯ
ವಯ್ಯಾರದಲಿ ಬೀಸಿ
ಮೋಹಕ ನಗೆ.
ಮತ್ತೆ ಏನೇನೂ
ಆಗಿಯೇ ಇಲ್ಲವೆಂಬಂತೆ
ಪರವಶ ನಿದ್ದೆಗೆ.
ಬೆಳಗಾಗುತ್ತದೆ…
ಮತ್ತೆ ರಾತ್ರಿಯೂ…
ತನಗೂ ಇಹಕ್ಕೂ
ಯಾವುದರೊಂದಿಗೂ
ಸಂಬಂಧವಿರದಂತೆ
ನಿರ್ಮೋಹಿ ಮರ
ಭಾವತೀವ್ರತೆಗೂ ಅಲುಗದೇ
ಮೋಹಕ್ಕೆ ನಲುಗದೇ
ನಿಂತೇ ಧ್ಯಾನದಲಿ ಲೀನ.
ಪ್ರವಾಸಿಗರ ಮರವೆಂಬುದು
ದಾರಿಹೋಕನಿಗೆ ಸಿಕ್ಕ
ಮರೆಯಲಾಗದ
ಜೀವಪರ್ಯಂತ ಬಂಧುತ್ವ!
ಮರಕ್ಕೆ?
ಆ ಕ್ಷಣಕ್ಕೆ ತೀರಿಸಿ
ಮುಗಿಸಲೇ ಬೇಕಾದ
ಯಾವ ಜನ್ಮಾಂತರದ್ದೋ
ಬಾಕಿಯುಳಿಕೆ!
ನಿರ್ಲಿಪ್ತತೆ ಅದಕ್ಕೇ…
(ರೂಪಾ ಹಾಸನ ಅವರ “ಒಂದು ನಿಸ್ತಂತುವಿನೆಳೆ” ಕವನ ಸಂಕಲನದಲ್ಲಿ ಪ್ರಕಟಿತ ಕವಿತೆ)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ