ಎರಡು ಮೂರು ಅಂಗಡಿಗೆ ಹೋಗಿ ವಾಪಾಸು ಬರುವಾಗ ಆ ಸಣ್ಣ ಹುಲಿಯನ್ನು ಹಿಡಿದುಬಿಟ್ಟೆ! ಒಂದು ಕ್ಷಣ ಹುಲಿ ಹಿಡಿದ ವೀರನ ಗತ್ತು ಗಾಂಭೀರ್ಯ ನನ್ನೊಳಗೆ ಹರಿಯಿತು. ಬೆದರಿ ಬೆವೆತು ನನ್ನ ಹಿಡಿತದಿಂದ ಪಾರಾಗಲು ಒದ್ದಾಡುತಿತ್ತು. ನೋಡಿದರೆ ಯಾರಾದರೂ ಹೇಳಬಹುದಿತ್ತು ಇದು ಫ್ರೊಫೆಷನಲ್ ಹುಲಿ ಅಲ್ಲ ಅಂತ. ಮುಖದ ಗೆರೆಗಳಲ್ಲಿ ಮಾತ್ರ ಇದು ಹುಲಿವೇಷ ಅಂತ ಗುರುತಿಸಬಹುದಾದಷ್ಟು ಮಾತ್ರ ಬಣ್ಣವನ್ನು ಹಚ್ಚಿಕೊಂಡು ಮೈಯಲ್ಲಿನ ಪಟ್ಟೆ ಬೇರೆ ಯಾವುದೊ ಪ್ರಾಣಿಯನ್ನು ಹೋಲುತ್ತಿತ್ತು. ಹೇಗೆ ಮಾತಾಡಿಸಿದರೂ ಹುಲಿಯ ಬಾಯಿಂದ ಒಂದು ಶಬ್ದವೂ ಹೊರಬರಲಿಲ್ಲ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಹನ್ನೊಂದನೆಯ ಬರಹ
ನೀವು ಮಂಗಳೂರಿನಲ್ಲಿ ಇರುತ್ತೀರಿ ಅಂತಾದರೆ ಹುಲಿನೃತ್ಯಕ್ಕೆ ಒಂದೆರಡು ಸ್ಟೆಪ್ ಹಾಕ್ಲಿಕ್ಕೆ ಬರಲೇಬೇಕು. ಇಲ್ಲದಿದ್ದರೆ ಒಂದಲ್ಲ ಒಂದು ಫಕ್ಷಂನ್ ನಲ್ಲಿ “ಛೇ ಇದೊಂದು ಸ್ಟೆಪ್ ಕಲಿಬೇಕಿತ್ತು” ಅಂತ ಅನ್ನಿಸದೇ ಇರುವುದಿಲ್ಲ. ದಸರಾ ಮತ್ತು ಕೃಷ್ಣಜನ್ಮಾಷ್ಟಮಿ ದಿನ ಮಂಗಳೂರಿನಲ್ಲಿ ಎಲ್ಲಿ ನೋಡಿದರಲ್ಲಿ ಈ “ಪಿಲಿನಲಿಕೆ” ಯ ಪಟ್ಟೆಪಟ್ಟೆ ಮೈಯ ಹುಲಿಗಳು ಆರ್ಭಟಿಸುವುದನ್ನು ಕಾಣಬಹುದು.
ಅದು ಮಾತ್ರ ಅಲ್ಲದೇ ಮೆಹಂದಿ, ಪಾರ್ಟಿ, ಕ್ಯಾಂಪ್ ಫಯರ್‌ಗಳಲ್ಲಿ ತಾಸೆ ಪೆಟ್ಟಿನ ತಾಳಕ್ಕೆ ಲಯಬದ್ಧವಾಗಿ ವೇಷ ಹಾಕದ ಹುಲಿಗಳು ವರ್ಷವಿಡೀ ಕುಣಿಯುತ್ತವೆ. ಆಗೆಲ್ಲಾ ಈ ಸ್ಟೆಪ್ ಬರದಿದ್ರೆ ಗುಂಪಿನಿಂದ ಹೊರಗಿದ್ದು “ಯಾಕೆ ಸ್ಟೆಪ್ ಬರಲ್ವಾ?” ಅಂತ ಕೇಳೋದನ್ನ ಕೇಳಿಸ್ಕೊಳ್ಳುವ ಪ್ರಸಂಗ ಬಂದೇ ಬರುತ್ತದೆ. ನಾನಂತೂ ಈ ಮುಜುಗರವನ್ನು ಬಹಳಷ್ಟು ಬಾರಿ ಅನುಭವಿಸಿದ್ದೇನೆ. ಅದರಲ್ಲೂ ಉಳಿದವರು ಕಂಡಂತೆ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಈ ಹುಲಿಗಳ ಜೊತೆಯಲ್ಲಿ ಕುಣಿದ ನಂತರವಂತೂ ಈ ಕ್ರೇಜ್ ಇನ್ನೂ ಹೆಚ್ಚಾಗಿದೆ. ಸಂತೋಷಕ್ಕೇ ಹಾಡು ಸಂತೋಷಕ್ಕೆ ಮತ್ತು ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು ಹಾಡುಗಳಂತೂ ಪಿಲಿನಲಿಕೆಯ ಅಫೀಶಿಯಲ್ ಹಾಡುಗಳಾಗಿ ಮಂಗಳೂರಿನ ಹುಲಿಗಳನ್ನು ಕುಣಿಸುತ್ತಿದೆ. ಈ ಸಾರಿಯ ದಸರಾ ಸಂಭ್ರಮ ನಿಧಾನವಾಗಿ ಮಂಗಳೂರನ್ನು ಆವರಿಸುತ್ತಿರುವ ಹೊತ್ತಿನಲ್ಲಿ ಮತ್ತೊಮ್ಮೆ ಎಲ್ಲಾ ಹುಲಿ ತಂಡಗಳು ಸಜ್ಜಾಗುತ್ತಿವೆ.
ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆ ಮತ್ತು ಅದ್ಧೂರಿತನವನ್ನು ಹೆಚ್ಚಿಸಿಕೊಂಡೇ ಹೋಗುತ್ತಿರುವ ಮಂಗಳೂರು ದಸರಾ ಈಗ ಮೈಸೂರು ದಸರಾದ ಸಡಗರಕ್ಕಿಂತ ಕಮ್ಮಿ ಅಂತ ಏನೂ ಅನ್ನಿಸುತ್ತಿಲ್ಲ. ಜಂಭೂ ಸವಾರಿಯ ಗಾಂಭೀರ್ಯವೊಂದು ಇನ್ನೂ ಮಂಗಳೂರು ದಸರಾಕ್ಕೆ ಕಾಲಿಟ್ಟಿಲ್ಲ. ಅದರ ಬದಲಿಗೆ ಇಲ್ಲಿ ಹುಲಿಕುಣಿತದ ವೈಭವವಿದೆ. ಒಂದು ವಾರ ನಡೆಯುವ ಈ ಹಬ್ಬಕ್ಕೆ ಕಳೆಕಟ್ಟುವುದು ಅದರ ಕೊನೆಯ ರಾತ್ರಿಯ ದಸರಾ ಮೆರವಣಿಗೆಯಿಂದಾಗಿ.
ಕಳೆದ ಒಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದರೂ ಈ ಮೆರವಣಿಗೆಯ ತಯಾರಿಯ ಉತ್ಸಾಹಕ್ಕೇನೂ ಭಂಗ ಬಂದಿರಲಿಲ್ಲ. ಮಂಗಳೂರಿನ ಯಾವ ಭಾಗದಲ್ಲಿ ನಡೆದುಕೊಂಡು ಹೋದರೂ ಅಲ್ಲಿ ಒಂದು ಟ್ಯಾಬ್ಲೋ ತಯಾರಿ ನಡೆಯುತ್ತಿರುವ ದೃಶ್ಯ ನಮ್ಮ ಕಣ್ಣಿಗೆ ಬೀಳದೇ ಇರದು. ಈ ಎಲ್ಲಾ ಸಂಭ್ರವವನ್ನೂ ಕಣ್ತುಂಬಿಕೊಳ್ಳಬೇಕೆಂದು ಮಂಗಳೂರಿಗೆ ಹೊರಟ ನನಗೆ ಈ ಎಲ್ಲಾ ಟ್ಯಾಬ್ಲೋ ತಯಾರಿಯ ದೃಶ್ಯಗಳನ್ನು ನೋಡುವ ಅವಕಾಶವೂ ಸಿಕ್ಕಿತು. ಗಣೇಶೋತ್ಸವದ ಮೆರವಣಿಗೆಗೆಂದು ಪರ್ಕಳದಲ್ಲಿ ನಮ್ಮ ಮಂಗಳ ಕಲಾ ಸಾಹಿತ್ಯ ವೇದಿಕೆಯಿಂದ ನಾವು ತಯಾರಿಸುತಿದ್ದ ಟ್ಯಾಬ್ಲೋನ ದಿನಗಳು ಫಕ್ಕನೇ ಕಣ್ಣೆದುರು ಬಂದವು. ಪ್ರತೀ ವರ್ಷ ಏನಾದರೂ ಹೊಸದನ್ನು ಕೊಡಬೇಕೆನ್ನುವ ತುಡಿತ, ರಾತ್ರಿ ಹಗಲೆನ್ನದೇ ಎರಡು ದಿನಗಳ ಕೆಲಸ, ಎಲ್ಲಾ ಮುಗಿದ ನಂತರ ಅದರ ಮೇಲೆ ವೇಷ ಹಾಕಿ ಕುಳಿತುಕೊಳ್ಳುವ ಆತುರ… ಎಲ್ಲವೂ ನನ್ನ ಕಣ್ಣೆದುರು ಬಂದು ಆ ಟ್ಯಾಬ್ಲೋ ತಯಾರಿಯನ್ನು ಕುತೂಹಲದಿಂದ ನೋಡುವಂತೆ ಮಾಡಿತ್ತು.
ಮೆರವಣಿಗೆ ಸಾಗುವ ಮುಖ್ಯ ರಸ್ತೆ ಅಂತೂ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು. ವಿದ್ಯುತ್ ಅಲಂಕಾರಿಕ ದೀಪಗಳಿಂದ ಝಗಮಗಿಸುತಿದ್ದ ರಸ್ತೆಯ ಇಕ್ಕೆಲಗಳಲ್ಲಿ ದೊಡ್ದ ದೊಡ್ಡ ಶುಭಕೋರುವ ಬ್ಯಾನರ್, ಫ್ಲೆಕ್ಸ್‌ಗಳು ರಾರಾಜಿಸುತಿದ್ದವು. ಮಧ್ಯಾಹ್ನ ನಾಲ್ಕು ಗಂಟೆಗೇ ಮುಖ್ಯ ರಸ್ತೆಯ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಹೊರಬರಲು ಅರ್ಧ ಗಂಟೆಯೇ ಬೇಕಾಯ್ತು. ತಮಟೆಯ ಲಯಬದ್ಧ ಬಡಿತದಲ್ಲಿ ಕುಣಿಯುವ ಹುಲಿಗಳ ದೊಡ್ಡ ತಂಡವೇ ಇತ್ತು. ಲಕ್ಷದ ಮೇಲೆ ಬಹುಮಾನವಿದ್ದ ಹುಲಿವೇಷ ಸ್ಪರ್ಧೆಯಲ್ಲಿ ಭಾಗವಹಿಸಲು ಅಲ್ಲಲ್ಲಿ ತಾಲೀಮು ನಡೆಯುತಿತ್ತು.
ದಸರಾದಲ್ಲಿ ಹುಲಿವೇಷ ಪ್ರಧಾನ ಆಕರ್ಷಣೆ. ಆದರೆ ಹುಲಿವೇಷ ಹಾಕುವುದೇ ಒಂದು ದೊಡ್ಡ ಟಾಸ್ಕ್. ಬೇರೆ ವೇ ಹಾಕಿದಂತೆ ಇದು ಅಷ್ಟು ಸುಲಭದ್ದೂ ಅಲ್ಲ. ಮೈಯ ರೋಮವನ್ನೆಲ್ಲಾ ತೆಗೆದ ನಂತರ ಬಳಿಯುವ ಬಣ್ಣ ಒಣಗುವವರೆಗೂ ಹಾಗೆಯೇ ಹಲವು ಗಂಟೆಗಳ ಕಾಲ ನಿಲ್ಲಬೇಕು. ನಂತರ ಮೈಮೇಲಿನ ಪಟ್ಟೆ ಮತ್ತು ಮುಖದ ಮೇಲೆ ಹಾಕುವ ಹುಲಿಯ ಬಣ್ಣಬಣ್ಣದ ಗೆರೆಗಳು. ಏನಿಲ್ಲವಾದರೂ ನಾಲ್ಕರಿಂದ ಐದು ತಾಸು ತಾಳ್ಮೆಯಿಂದ ನಿಂತವರು ಮಾತ್ರ ಇಲ್ಲಿ ನಿಜದ ಹುಲಿಯಾಗುತ್ತಾರೆ.
ಸಣ್ಣಮಕ್ಕಳಿಗೆ ಈ ಹುಲಿವೇಷವನ್ನು ಹಾಕುವುದರ ಹಿಂದೆಯೂ ಒಂದು ಜನಪದ ಹಿನ್ನಲೆ ಇರುವುದನ್ನು ಕೇಳಿದ್ದೇನೆ. ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಮಗು ಹುಷಾರಾದರೆ ಮಗುವಿಗೆ ಹುಲಿವೇಷ ಹಾಕಿಸಿ ನಿನ್ನ ಮುಂದೆ ಕುಣಿಸುತ್ತೇನೆ ಅಂತ ತಾಯಿಯೊಬ್ಬಳು ಹರಕೆ ಕಟ್ಟಿಕೊಂಡಿದ್ದಳಂತೆ. ಅವಳ ಪ್ರಾರ್ಥನೆಯಂತೆ ಆ ಮಗು ಹುಷಾರಾದಾಗ ಅದಕ್ಕೆ ಹುಲಿವೇಷ ಹಾಕಿಸಿ ಕುಣಿಸಿದ್ದಳಂತೆ. ಹಾಗಾಗಿ ಈಗಲೂ ಇಂತಹ ಹರಕೆ ಕಟ್ಟಿಕೊಂಡು ತಮ್ಮ ಮಕ್ಕಳಿಗೆ ಹುಲಿವೇಷ ಹಾಕಿಸುವುದೂ ಉಂಟು.
ಮೈಯಿಡೀ ಬಣ್ಣದ ಕುಸುರಿಯಲ್ಲಿ ಅರಳುವ ಹುಲಿಗಾಗಿ ಹೀಗೆ ಪುಟಾಣಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತೋರಿಸುವ ಆಸಕ್ತಿ ನನಗೆ ಅಚ್ಚರಿಯನ್ನುಂಟು ಮಾಡುತ್ತದೆ. ಎಷ್ಟು ಮಳೆ ಬಂದರೂ ಎಲ್ಲಾ ಋತುಗಳಲ್ಲೂ ಬೆವರಿ ಚಂಡಿ ಮುದ್ದೆಯಾಗುವ ಮಂಗಳೂರಿನಲ್ಲಿ ದಿನವಿಡೀ ಮೈಯೆಲ್ಲಾ ಬಣ್ಣದೊಂದಿಗೆ ಕುಣಿದು ಕುಪ್ಪಳಿಸುವ ಹುಲಿಗಳನ್ನು ಕಂಡರೆ ನನಗೆ ಮೊದಲಿನಿಂದಲೂ ವಿಶೇಷ ಅಕ್ಕರೆ. ಕೊರಳ ಸುತ್ತಾ ನೋಟುಗಳ ಮಾಲೆಗಳನ್ನು ಹಾಕಿಕೊಂಡು ಬರುವ ಹುಲಿಗಳ ಗತ್ತು ಥೇಟು ಮಾಸ್ ಸಿನಿಮಾದ ಹೀರೋನ ಹಾಗೆ.

ದಸರಾದ ಕೊನೆಯ ಮೆರವಣಿಗೆಯಲ್ಲಿ ಕುಣಿದು ವೇಷ ಕಳಚುವ ಮೊದಲು ಮನೆಮನೆಗೂ ಹೋಗಿ ಈ ತಂಡಗಳು ಕುಣಿಯುವುದಿದೆ. ಹಣಸಂಗ್ರಹವೇ ಪ್ರಮುಖ ಗುರಿಯಾದರೂ ದೊಡ್ಡ ಅಂಗಳ ಸಿಕ್ಕರೆ ತಮ್ಮ ಪ್ರತಿಭೆಯನ್ನು ತೋರಿಸುವುದರಲ್ಲಿ ಯಾವತ್ತೂ ಹಿಂದೆ ಬೀಳುವುದಿಲ್ಲ. ಬಾಲ್ಯದಲ್ಲಿ ನಮ್ಮ ಮನೆಯಂಗಳಕ್ಕೆ ಬರುತ್ತಿದ್ದ ಸಾಲು ಸಾಲು ಹುಲಿಗಳು ನನ್ನ ನೆನಪಿನ ಭಾವಕೋಶದಲ್ಲಿ ಇನ್ನೂ ಬೆಚ್ಚಗೆ ಕುಣಿಯುತ್ತಿವೆ. ಎರಡು ಕೈಗಳನ್ನು ನೆಲದ ಮೇಲಿಟ್ಟು ತನ್ನ ಎರಡೂ ಕಾಲುಗಳನ್ನು ತಾಸೆಯ ಪೆಟ್ಟಿಗೆ ಕುಣಿಸುತ್ತಾ ಆಗಷ್ಟೇ ಗುಹೆಯಿಂದ ಹೊರಗೆ ಬರುವ ಹುಲಿಯ ಹಾಗೆ ತರತರಹದ ಭಂಗಿಗಳನ್ನು ಮಾಡುವ ಹುಲಿಗಳೆಂದರೆ ಎಂದೂ ತೀರದ ಹುಚ್ಚು.ಆಗ ಅಮ್ಮನಲ್ಲಿ ಈ ಹುಲಿಗಳ ಕುರಿತು ಕುತೂಹಲದಿಂದ ಹೇಳುತ್ತಿದ್ದ ವಿಷಯಗಳೆಲ್ಲವೂ ಹಾಡುಗಳಾಗಿ ಸದಾ ನನ್ನನ್ನು ಕಾಡುತ್ತಿವೆ.
ಪಟ್ಟೆ ಪಟ್ಟೆ ಬಣ್ಣದ ಮೈಯ
ಹಳದಿ ಕಪ್ಪು ಪಂಜದ ಕೈಯ
ಎಷ್ಟು ದೊಡ್ಡದೇ ಅಮ್ಮ ಎಷ್ಟು ದೊಡ್ಡದು
ಹುಲಿಗೆ ಹಾಕಿದ ದುಡ್ಡಿನ ಮಾಲೆ ಎಷ್ಟು ದೊಡ್ಡದು.
ತಮಟೆ ಬಡಿವ ಸದ್ದು ಚಂದ
ಭುಜವ ಕುಣಿಸೋ ಗತ್ತು ಚಂದ
ಆಟ ನೋಡಮ್ಮ ಅವರ ಆಟ ನೋಡಮ್ಮ
ಬಾಯಲ್ಲಿ ಹೆಕ್ಕುವ ಹಣದ ಆಟ ಒಮ್ಮೆ ನೋಡಮ್ಮ.
ಎಲ್ಲಾ ಕಡೆಯ ಹುಲಿ ತಂಡದ ಕುಣಿತವನ್ನು ಕಣ್ತುಂಬಿಕೊಳ್ಳುತ್ತಾ ಮುಂದೆ ಸಾಗುತಿದ್ದೆ. ಅಚಾನಕ್ ಆಗಿ ಒಂದು ಸಣ್ಣ ಹುಲಿ ನನ್ನ ಕಣ್ಣನ್ನು ಸೆಳೆಯಿತು. ಕಾಡು ಬಿಟ್ಟು ನಾಡಿಗೆ ಹೊಸದಾಗಿ ಬಂದ ಹುಲಿಯಂತೆ ಭಯಭೀತವಾಗಿ ಗುಂಪಿನಿಂದ ಪ್ರತ್ಯೇಕಗೊಂಡು ಏಕಾಂಗಿಯಾಗಿ ಅಲೆಯುತಿತ್ತು. ಪುಟ್ಟ ಪುಟ್ಟ ಹುಲಿಗಳು ಹೆಚ್ಚಾಗಿ ಕಂಡುಬಂದರೂ ಅವುಗಳು ದೊಡ್ಡ ಹುಲಿಗಳ ನೆರಳಲ್ಲಿ ಇರುವುದೇ ಹೆಚ್ಚು. ಇದ್ಯಾವುದಪ್ಪಾ ಒಂಟಿ ಹುಲಿ? ಕುತೂಹಲ ತಡೆಯಲಾರದೇ ಅದನ್ನು ಹಿಂಬಾಲಿಸಿದೆ.
ದೊಡ್ಡ ದೊಡ್ಡ ತಂಡಗಳ ಕುಣಿತದಿಂದ ನೋಟವನ್ನು ಬಲವಂತದಿಂದ ಹೊರಳಿಸಿ ಈ ಸಣ್ಣ ಹುಲಿಯನ್ನು ಬೆನ್ನಟ್ಟಿಕೊಂಡು ಹೋದೆ. ಅದೂ ನಿರಾಯುಧನಾಗಿ! ನನ್ನ ಧೈರ್ಯವನ್ನು ನೀವು ಮೆಚ್ಚಲೇ ಬೇಕು.
ಯಾವುದೇ ತಮಟೆ ಬಡಿತದ ಪಕ್ಕ ವಾದ್ಯಗಳ ಸದ್ದಿಲ್ಲದೇ ಅದು ಅಂಗಡಿಗಳ ಗಲ್ಲಾ ಪೆಟ್ಟಿಗೆಯ ಎದುರು ಕುಣಿಯುತ್ತಿತ್ತು. ನವರಾತ್ರಿಯ ಸಮಯದಲ್ಲಿ ಬೇರೆ ಬೇರೆ ರೀತಿಯ ವೇಷಗಳನ್ನು ಹಾಕಿಕೊಂಡು ಮನೆ ಮನೆ ಮಾತ್ರವಲ್ಲದೇ ಅಂಗಡಿಗಳಲ್ಲಿ ಪ್ರದರ್ಶನವನ್ನು ಕೊಟ್ಟು ಹಣ ಸಂಪಾದಿಸುವುದು ಹೊಸ ವಿಚಾರವೇನಲ್ಲ. ಆದರೆ ಈ ಹುಲಿಯನ್ನು ಬೆನ್ನಟ್ಟಲು ನನಗಿದ್ದ ಮುಖ್ಯ ಕುತೂಹಲ ಅದು ಪ್ರತೀ ಅಂಗಡಿಗೆ ಹೋದ ನಂತರ ಒಂದು ಮೂಲೆಯಲ್ಲಿ ಸಣ್ಣ ಮಗುವನ್ನು ಹಿಡಿದುಕೊಂಡು ಕುಳಿತಿದ್ದ ಒಂದು ಹೆಂಗಸಿನ ಬಳಿ ಓಡಿ ಹೋಗುತಿತ್ತು. ಮತ್ತೆ ಸ್ವಲ್ಪ ಸಮಯದ ನಂತರ ಮತ್ತೊಂದು ಅಂಗಡಿಯ ಮುಂದೆ ನಿಲ್ಲುತಿತ್ತು. ಆ ಹುಲಿಯ ಕಣ್ಣುಗಳು ಬೇರೆ ಹುಲಿಗಳ ಕಣ್ಣುಗಳಂತೆ ಹೆದರಿಕೆಯನ್ನು ಹುಟ್ಟಿಸುತ್ತಿರಲಿಲ್ಲ. ಬದಲಾಗಿ ಅವುಗಳೇ ಹೆದರಿದ್ದವು. ಬೆದರಿದ ಹರಿಣದ ಕಣ್ಣುಗಳಂತೆ ಕಾಣುತ್ತಿದ್ದವು ಈ ಹುಲಿಯ ಕಣ್ಣುಗಳು.
ಎರಡು ಮೂರು ಅಂಗಡಿಗೆ ಹೋಗಿ ವಾಪಾಸು ಬರುವಾಗ ಆ ಸಣ್ಣ ಹುಲಿಯನ್ನು ಹಿಡಿದುಬಿಟ್ಟೆ! ಒಂದು ಕ್ಷಣ ಹುಲಿ ಹಿಡಿದ ವೀರನ ಗತ್ತು ಗಾಂಭೀರ್ಯ ನನ್ನೊಳಗೆ ಹರಿಯಿತು. ಬೆದರಿ ಬೆವೆತು ನನ್ನ ಹಿಡಿತದಿಂದ ಪಾರಾಗಲು ಒದ್ದಾಡುತಿತ್ತು. ನೋಡಿದರೆ ಯಾರಾದರೂ ಹೇಳಬಹುದಿತ್ತು ಇದು ಫ್ರೊಫೆಷನಲ್ ಹುಲಿ ಅಲ್ಲ ಅಂತ. ಮುಖದ ಗೆರೆಗಳಲ್ಲಿ ಮಾತ್ರ ಇದು ಹುಲಿವೇಷ ಅಂತ ಗುರುತಿಸಬಹುದಾದಷ್ಟು ಮಾತ್ರ ಬಣ್ಣವನ್ನು ಹಚ್ಚಿಕೊಂಡು ಮೈಯಲ್ಲಿನ ಪಟ್ಟೆ ಬೇರೆ ಯಾವುದೊ ಪ್ರಾಣಿಯನ್ನು ಹೋಲುತ್ತಿತ್ತು. ಹೇಗೆ ಮಾತಾಡಿಸಿದರೂ ಹುಲಿಯ ಬಾಯಿಂದ ಒಂದು ಶಬ್ದವೂ ಹೊರಬರಲಿಲ್ಲ.
ರಸ್ತೆಯ ಪಕ್ಕದಲ್ಲಿ ನಿಂತಿದ್ದ ಐಸ್ಕ್ರೀಮ್ ಗಾಡಿಯಿಂದ ಎರಡು ಚೋಕೊಬಾರ್ ನ್ನು ತಂದು ಎರಡನ್ನೂ ಅವನ ಕೈಗಿತ್ತೆ. ಎಷ್ಟೋ ದಿನಗಳಿಂದ ಬೇಟೆ ಸಿಗದೇ ಒದ್ದಾಡುತಿದ್ದ ಹುಲಿಯ ಎದುರು ಕೊಬ್ಬಿದ ಜಿಂಕೆ ಕಂಡಾಗ ಹಾರಿ ಹಿಡಿದು ಗಬಗಬನೆ ತಿನ್ನುವಂತೆ ಎರಡೂ ಐಸ್ಕ್ರೀಮ್ ಗಳನ್ನೂ ತಿಂದಿತು ಈ ಪುಟಾಣಿ ಹುಲಿ. ಹೊಟ್ಟೆ ಸ್ವಲ್ಪ ತಣ್ಣಗಾಗಿರಬೇಕು. ಹೆದರಿದ ಕಣ್ಣುಗಳಿಂದ ನಿರಾಳತೆಯ ಭಾವ ಹೊರಹೊಮ್ಮಿತು. ಮತ್ತು ನಾನು ಒತ್ತಾಯ ಮಾಡಿ ಕೇಳಿದ್ದಕ್ಕೆ ತನ್ನ ಕತೆಯನ್ನು ನನ್ನ ಮುಂದೆ ಬಿಚ್ಚಿಟ್ಟಿತು.
ಮೂಲೆಯಲ್ಲಿ ಕೂತ ಎರಡು ಮಕ್ಕಳ ತನ್ನ ತಾಯಿಗೆ ಭಿಕ್ಷಾಟನೆಯೇ ಪ್ರಮುಖ ಉದ್ಯೋಗ. ಈಗ ಆ ಸಣ್ಣ ಮಗುವಿನೊಂದಿಗೆ ಅವಳಿಗೆ ಹೆಚ್ಚು ಕಡೆ ಹೋಗಲಾಗದೇ ಕುಳಿತಲ್ಲೇ ಬಟ್ಟೆ ಹರಡಿ ಭಿಕ್ಷೆ ಕೇಳುತ್ತಾಳೆ. ತನ್ನನ್ನು ಯಾವುದೋ ಹುಲಿ ತಂಡದವರಿಗೆ ದಮ್ಮಯ್ಯ ಹಾಕಿ ಈ ಹುಲಿವೇಷವನ್ನು ಹಾಕಿಸಿದ್ದಾಳೆ. ಮತ್ತು ಅಂಗಡಿ ಅಂಗಡಿಗೆ ಕಳಿಸುತ್ತಾಳೆ. ಬೆಳಿಗ್ಗೆಯಿಂದ ಹೀಗೆ ಹೋಗಿ ಹೋಗಿ ಸಣ್ಣ ಹುಲಿಯ ಪುಟ್ಟ ಪಾದಗಳು ದಣಿದಿವೆ. ನನಗಾಗಲ್ಲಮ್ಮಾ ಇನ್ನು… ಸಾಕು ಅಂತ ಎಷ್ಟು ಗೋಗರೆದರೂ ತಾಯಿ ಕೇಳುತ್ತಿಲ್ಲ. ಮಗುವಿಗೇನು ಗೊತ್ತು? ಇಂದು ವಿಜಯದಶಮಿ! ಕೆಡುಕಿನ ಮೇಲೆ ಒಳಿತಿನ ವಿಜಯದ ದಿನ. ಇವತ್ತು ದುಡಿದರೆ ವಾರವಿಡೀ ಸುಖವಾಗಿರಬಹುದು. ನಾನೂ ಹೊಟ್ಟೆತುಂಬಾ ಉಣ್ಣಬಹುದು. ತನ್ನಲ್ಲಿ ಸ್ವಲ್ಪವಾದರೂ ಹಾಲು ಉಕ್ಕಿದರೆ ಸದಾ ಹಾಲಿಗಾಗಿ ಅಳುವ ಸಣ್ಣ ಮಗುವಿಗೂ ಹಾಲೂಡಿಸಬಹುದು ಅನ್ನುವ ಲೆಕ್ಕಾಚಾರದಲ್ಲಿ ಸಣ್ಣ ಹುಲಿಯನ್ನು ಮತ್ತೆ ಮತ್ತೆ ಬಲವಂತವಾಗಿ ಬೇಟೆಗೆ ತಳ್ಳುತಿದ್ದಾಳೆ. ಮನಸ್ಸಿಲ್ಲದ ಮನಸ್ಸಿನಿಂದ ಭಾರವಾದ ಹೆಜ್ಜೆಗಳನ್ನು ಊರಿಕೊಂಡು ಸಣ್ಣ ಹುಲಿ ಹೊರಡುತ್ತದೆ ಮತ್ತೆ ಮತ್ತೆ ಬೇಟೆಗೆ!
ಸಣ್ಣ ಹುಲಿಯ ಮಾತು ಕೇಳಿ ಮನಸ್ಸು ಭಾರವಾಯ್ತು. ಟ್ರಾಫಿಕ್‌ನಲ್ಲಿ ಬಲೂನ್‌ಗಳನ್ನು ಹಿಡಿದುಕೊಂಡ ಪುಟ್ಟಪುಟ್ಟ ಮಾಸಲು ಅಂಗಿಯ ಎಣ್ಣೆಕಾಣದ ಕೂದಲ ಮಕ್ಕಳು ಒಂದಾದರೂ ತಕೊಳ್ಳಿ ಅಂತ ಗೋಗರೆಯುವುದನ್ನು ಕಂಡಿದ್ದೇನೆ. ಎಲ್ಲಾ ಬಲೂನು ಮಾರಿ ಬಂದರೆ ಮಾತ್ರ ಊಟ ಸಿಕ್ಕುತ್ತೆ ಇಲ್ಲದಿದ್ದರೆ ಇಲ್ಲ ಅನ್ನುವ ಭಯದಿಂದ ಬಿಸಿಲು ಮಳೆಯೆನ್ನದೆ ಕಾರಿನ ಗ್ಲಾಸ್ ಬಡಿಯುವ ಮಕ್ಕಳ ಕಣ್ಣಿನಲ್ಲೂ ಈ ಪುಟಾಣಿ ಹುಲಿಯ ಕಣ್ಣಿನಲ್ಲಿ ಕಂಡಂತಹ ಹತಾಷೆಯಿದೆ. ಬಡತನ ಬಲು ಕಷ್ಟದ್ದು ಅಂದುಕೊಳ್ಳುತ್ತಾ ತಪ್ಪಿ ಅವನ ಅಪ್ಪನ ಬಗ್ಗೆ ಕೇಳಿದೆ. ಆಗ ಹುಲಿಯ ಕಣ್ಣಲ್ಲಿ ಉಕ್ಕಿದ ರೋಷ ನನ್ನನ್ನು ಅಟ್ಟಾಡಿಸಿ ಕೊಂದು ತಿನ್ನುವಷ್ಟಿತ್ತು.

ಈ ಪುಟಾಣಿ ಹುಲಿಯಿಂದ ಎರಡು ಸ್ಟೆಪ್ ಹಾಕಿಸಿ ಹುಲಿ ಕುಣಿತದ ತಂಡಕ್ಕೆ ಅಂತಾನೇ ಇಟ್ಟುಕೊಂಡಿದ್ದ ದುಡ್ಡನ್ನು ಸಣ್ಣ ಹುಲಿಯ ಜೋಳಿಗೆಗೆ ಹಾಕಿ, ಆ ದಿನಕ್ಕಾಗುವಷ್ಟು ತಿಂಡಿಯನ್ನೂ ಕೊಟ್ಟು ಅವನನ್ನು ಕಳಿಸಿದೆ. ಸ್ವಲ್ಪ ಹೊತ್ತು ಹಾಗೆಯೇ ಕುಳಿತಿದ್ದೆ. “ಎಲ್ಲಿದ್ದಿ ಮಾರಾಯಾ, ಸಿಗ್ತೇನಂತ ಹೇಳಿ ಪತ್ತೆನೇ ಇಲ್ಲ…” ಅಂತ ಮಂಜನ ಕಾಲ್ ಬಂತು. ಮನಸ್ಸು ಅರಳಿತು, ಮತ್ತೆ ಸಂಭ್ರಮದ ರಸ್ತೆಯಲ್ಲಿ ಮಂಜನ ಜೊತೆಗೆ ಹೆಜ್ಜೆ ಹಾಕಿದೆ. ದೇವಸ್ಥಾನ ಬೀದಿಯಲ್ಲೆಲ್ಲಾ ತಿರುಗಿ ನಮ್ಮ ಖಾಯಂ ಅಡ್ಡ ಪಬ್ಬಾಸ್ ಐಸ್ಕ್ರೀಮ್ ಪಾರ್ಲರ್‌ಗೆ ಬಂದು ಕುಳಿತಾಗ ಮುಸ್ಸಂಜೆ ಕಳೆದು ರಾತ್ರಿ ಇಣುಕುತಿತ್ತು. ಪಬ್ಬಾಸ್ ಎದುರಿನಲ್ಲೇ ಹಾಕಿದ್ದ ದೊಡ್ಡ ವೇದಿಕೆಯಲ್ಲಿ ಆರ್ಕೆಸ್ಟ್ರಾ ತಂಡದ ಮೈಕ್ ಟೆಸ್ಟಿಂಗ್ ನಡೆಯುತಿತ್ತು. ಹೊರಗೆಲ್ಲಾ ಝಗಮಗಿಸುವ ಲೈಟಿಂಗ್ಸ್‌ನಿಂದಾಗಿ ಮಾಮೂಲಿ ಹೋಗುವ ರಸ್ತೆಗಿಂದು ರಾಜಕಳೆ. ನಿಧಾನವಾಗಿ ರಸ್ತೆ ಸಂಭ್ರಮದ ಮೆರವಣಿಗೆಗೆ ಸಜ್ಜಾಗುತಿತ್ತು. ಇದೆಲ್ಲದರ ನಡುವೆಯೂ ಎದುರಿನ ಅಂಗಡಿಯ ಗಲ್ಲಾ ಪೆಟ್ಟಿಗೆಯೆದುರು ಕುಣಿದು ಮಾಲೀಕನ ಮುಖವನ್ನೇ ನೋಡುತಿದ್ದ ಸಣ್ಣ ಹುಲಿ ಕಾಣದೇ ಇರಲಿಲ್ಲ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
