ನ್ಯಾಯಾಧೀಶರು ತಮ್ಮ ಮಾತನ್ನು ಮುಂದುವರೆಸಿ “ನೀನು ಹೇಗೆ ಕಿತ್ತ ಚೂರುಗಳನ್ನು ವಾಪಸ್ ತರಲು ಸಾಧ್ಯವಿಲ್ಲವೋ ಅದೇ ರೀತಿ ನೀನು ಮತ್ತೊಬ್ಬನ ಬಗ್ಗೆ ಹರಡಿದ ಸುಳ್ಳು ಸುದ್ದಿಯು ಹಲವರ ಕಿವಿ ತಲುಪಿ ಅವರು ಅದನ್ನೇ ಸತ್ಯವೆಂದು ನಂಬಿದ್ದಾರೆ. ಈ ರೀತಿ ನಂಬಿದವರೆಲ್ಲರಿಗೂ ಇದು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ ತಾನೇ?! ಆದ್ದರಿಂದ ನೀನು ಮಾಡಿರುವ ಶಿಕ್ಷೆ ಅನುಭವಿಸು”  ಎಂದು ಅವನಿಗೆ ಶಿಕ್ಷೆ ವಿಧಿಸಿದರಂತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತೆಂಟನೆಯ ಕಂತು ನಿಮ್ಮ ಓದಿಗೆ
ಟಿಸಿಹೆಚ್ ಓದುವಾಗ ಈ ಕೋರ್ಸ್ ಎಷ್ಟು ಬೇಗ ಮುಗಿಯುತ್ತೋ ಅಂದುಕೊಂಡಿದ್ದೆ. ಕೋರ್ಸ್ ಮುಗಿದ್ಮೇಲೆ ಆರಾಮಾಗಿ ಇರಬಹುದು ಬೇರೆ ಬೇರೆ ಪುಸ್ತಕಗಳನ್ನು ಓದಬಹುದು. ಜೀವನದಲ್ಲಿ ಆರಾಮಾಗಿ ಇರಬಹುದು ಅಂದುಕೊಂಡಿದ್ದೆ. ಇದಕ್ಕಾಗಿ ಮೊದಲ ವರ್ಷದಲ್ಲಿ ನಿರೀಕ್ಷಿತ ಅಂಕಗಳು ಬಾರದಿದ್ದುದರಿಂದ ಎರಡನೇ ವರ್ಷದಲ್ಲಿ ಸಿಕ್ಕಾಪಟ್ಟೆ ಓದುತ್ತಿದ್ದೆ. ಆದ್ದರಿಂದ ನಾನು ಓದುವಾಗ ಕಾಲೇಜಿನ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಭಾಗವಹಿಸುವುದನ್ನು ಕಡಿಮೆ ಮಾಡಿದ್ದೆ. ಆದರೆ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸುತ್ತಿದ್ದೆ. ಇತರೆ ವಿಷಯಗಳಿಗಿಂತ ಗಣಿತ ತುಂಬಾ ಇಷ್ಟವಾಗುತ್ತಿತ್ತು. ಇದರ ಜೊತೆ ಚುಟುಕು ಬರೆಯುವ ಹವ್ಯಾಸ ಇತ್ತು. ಮೊದಲ ಬೆಂಚಿನಿಂದ ಶಿಫ್ಟ್ ಆಗಿ ಹಿಂದಿನ ಬೆಂಚಿನಲ್ಲಿ ಕೂರುವುದನ್ನು ಶುರು ಮಾಡಿದ ಮೇಲೆ ಚುಟುಕು ಬರೆಯುವುದನ್ನು ಹೆಚ್ಚು ಮಾಡಿದ್ದೆ. ನನ್ನ ಪಕ್ಕದಲ್ಲಿ ಕೂರುತ್ತಿದ್ದ ನದಾಫ್ ಎಂಬ ನನ್ನ ಸ್ನೇಹಿತ ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಅಭಿರುಚಿ ಉಳ್ಳವನಾಗಿದ್ದ. ಅವನು ಅದಾಗಲೇ ಕವನ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದನು. ನಮ್ಮ ಕನ್ನಡ ಮೇಷ್ಟ್ರಾಗಿದ್ದ ಬಿದರಹಳ್ಳಿ ಕೃಷ್ಣಮೂರ್ತಿ ಸರ್ ಪ್ರಭಾವವೂ ಹೆಚ್ಚೇ ಇತ್ತು. ಅವರು ಪಾಠ ಮಾಡುವಾಗ ಡುಂಡಿರಾಜ್ ರವರ ಚುಟುಕುಗಳನ್ನು ಆಗಾಗ್ಗೆ ಹೇಳುತ್ತಿದ್ದರು. ಪುಸ್ತಕ ವಿಮರ್ಶೆಗೆ ಬೇರೆ ಬೇರೆ ಕವಿಗಳ ಪುಸ್ತಕಗಳನ್ನು ಕೊಡುತ್ತಿದ್ದರು. ಕನ್ನಡ ಮೇಷ್ಟ್ರುಗಳೆಂದರೆ ಹೀಗೆ ಇರಬೇಕು ಎನ್ನುವಷ್ಟರ ಮಟ್ಟಿಗೆ ಅವರ ವ್ಯಕ್ತಿತ್ವ ಇತ್ತು. ಪಾತ್ರಾಭಿನಯ, ಮುದ್ದಾದ ಕನ್ನಡ ಅಕ್ಷರ ಬರೆವಣಿಗೆಗೆ ಅವರು ಒತ್ತು ಕೊಡುತ್ತಿದ್ದ ರೀತಿ ನಮ್ಮೆಲ್ಲರನ್ನೂ ಆಕರ್ಷಿಸಿತ್ತು. ನಮ್ಮ ವ್ಯಕ್ತಿತ್ವದಲ್ಲೂ ಬದಲಾವಣೆಯ ಗಾಳಿ ಬೀಸುವಂತೆ ಮಾಡಿತ್ತು.
ನದಾಫ್ ಇವನು ಗದಗದಿಂದ ಬಂದಿದ್ದ. ಇವನು ಗಿರೀಶನ ಅಜ್ಜಿಯ ಮನೆಯಲ್ಲಿ ಉಳಿದುಕೊಂಡಿದ್ದ. ನಾನು ಓದಿಕೊಳ್ಳಲು ಇವನ ರೂಮಿಗೆ ಓದುತ್ತಿದ್ದೆ. ಗಿರೀಶನ ಅಜ್ಜಿಯೂ ನನ್ನನ್ನೂ ಸಹ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.ಕ್ರಿಕೆಟ್ ನೋಡುವ ಹುಚ್ಚು ನನಗೆ ಹೆಚ್ಚು ಇದ್ದುದರಿಂದ ಕ್ರಿಕೆಟ್ ಮ್ಯಾಚ್ ಇದ್ದಾಗ ಇವರ ಮನೆಗೆ ಕ್ರಿಕೆಟ್ ನೋಡಲು ಹೋಗುತ್ತಿದ್ದೆ. ಒಮ್ಮೆಯಂತೂ ನಮ್ಮ ಕ್ರ್ಯಾಫ್ಟ್ ಟೀಚರ್ ‘ಸ್ನಾನದ ಚೂರ್ಣ’ ಮಾಡಲು ಕೊಟ್ಟಾಗ ಅದಕ್ಕೆ ಬೇಕಾದ ಕಹಿ ಬೇವಿನ ಎಲೆಗಳನ್ನು ಒಣಗಿಸಿ ಅದನ್ನು ಕುಟ್ಟಿ ಪುಡಿ ಮಾಡಿ ಅದರ ಜೊತೆ ಕಡಲೆ ಹಿಟ್ಟು, ಸೀಗೇಕಾಯಿ ಪುಡಿ ಇತ್ಯಾದಿ ಪುಡಿಗಳನ್ನು ಬಟ್ಟೆಯಲ್ಲಿ ಸೋಸುವಷ್ಟರಲ್ಲಿ ನನಗೆ ಸಾಕು ಸಾಕಾಗಿ ಹೋಗಿತ್ತು. ರಾತ್ರಿ ಸರಿಸುಮಾರು 2 ಗಂಟೆಯವರೆಗೂ ಇದೇ ಕೆಲಸವನ್ನು ಮಾಡಿದ್ದೆವು. ಗಿರೀಶನೂ ಸಹ ಇದಕ್ಕೆ ಸಾಥ್ ಕೊಟ್ಟಿದ್ದ. ಗಿರೀಶ ಹಾಗೂ ನದಾಫ್ ಇಬ್ಬರೂ ಯಾವುದೇ ಅಸೈನ್ ಮೆಂಟ್ ಕೊಡುವಾಗ ಒಟ್ಟಿಗೆ ಕೊಡುತ್ತಿದ್ದರು. ಗಿರೀಶನ ಮನೆಯಲ್ಲಿ ಒಂದು ಟೇಪ್ ರೆಕಾರ್ಡರ್ ಇತ್ತು. ಅವನು ನಮ್ಮ ಸಿಲಬಸ್ ಪಾಠವನ್ನು ಗಟ್ಟಿಯಾಗಿ ಓದಿ ಅದರಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಅವನು ಇತರೆ ಕೆಲಸ ಮಾಡುವಾಗ ಕೇಳಿಸಿಕೊಳ್ಳುತ್ತಿದ್ದ ಅವನ ಈ ಕಲಿಕೆಯ ತಂತ್ರವು ನನಗೆ ವಿಶೇಷವೆನಿಸುತ್ತಿತ್ತು. ನನಗೆ ಈ ತಂತ್ರವನ್ನು ಅನುಸರಿಸಲು ಇಷ್ಟವಾಯಿತಾದರೂ ನನ್ನಲ್ಲಿ ಈ ಟೇಪ್ ರೆಕಾರ್ಡರ್ ಇರಲಿಲ್ಲ. ತುಂಬಾ ಸಾಧಿಸಬೇಕು ಎಂಬ ಆಸೆಯಿದ್ದ ಗಿರೀಶನು ಆಗಿನ ಕಾಲಕ್ಕೆ ನೆಟ್ ವರ್ಕ್ ಬ್ಯುಸಿನೆಸ್ ಕಂಪೆನಿಗೆ ಸೇರಿದ್ದ. ನನಗೂ ಸೇರಿಸಲು ಪ್ರಯತ್ನ ಪಟ್ಟ. ಆದರೆ ನಾನು ಸೇರಲಿಲ್ಲ.
ನಾನು ಊರಿಗೆ ಹೋದಾಗ ನಮ್ಮ ಹೊಲದಲ್ಲಿ ಹಾಕಿದ್ದ ಟೊಮ್ಯಾಟೋ ಬೆಳೆಯನ್ನು ಕಾಯಲು ಹೋಗುತ್ತಿದ್ದೆ. ಬೆಳೆದ ಟೊಮ್ಯಾಟೋ ಹಣ್ಣನ್ನು ಒಮ್ಮೆ ನನ್ನ ತಂದೆಯು ಮಾರ್ಕೆಟ್ಟಿಗೆ ತೆಗೆದುಕೊಂಡು ಹೋದಾಗ ಉತ್ತಮ ಬೆಲೆ ಸಿಗುತ್ತದೆಯೇನೋ ಎಂದು ನಾನು ಭಾವಿಸಿದ್ದೆ. ಆದರೆ ಅದಕ್ಕೆ ಸರಿಯಾದ ಬೆಲೆ ಸಿಗದೇ ವಾಪಸ್ಸಾದಾಗ ನನಗೆ ತುಂಬಾ ನಿರಾಸೆಯಾಗಿತ್ತು. ಅಲ್ಲದೇ ವ್ಯವಸಾಯದ ಬಗ್ಗೆ ಬೇಸರವುಂಟಾಗಿ ನಾನು ಓದಿ ಸರ್ಕಾರಿ ಕೆಲಸವನ್ನು ಪಡೆಯಲೇಬೇಕು ಎಂಬ ನಿರ್ಧಾರಕ್ಕೆ ಬಂದುಬಿಟ್ಟೆ. ಅಲ್ಲದೇ ಹಳ್ಳಿಯವರು ಪದೇ ಪದೇ ಹೇಳುತ್ತಿದ್ದ ‘ನಾನು ಸಾಯ ನೀನು ಸಾಯ ಮನೆಮಂದಿಯೆಲ್ಲಾ ಸಾಯ ಬೇಸಾಯ’ ಎಂಬ ಮಾತು ನನಗೆ ಕೃಷಿಯ ಬಗ್ಗೆ ನಿರುತ್ಸಾಹ ಬೆಳೆಯಲು ಕಾರಣವಾಗಿತ್ತು. ಓದಿನ ಬಗ್ಗೆ ತುಂಬಾ ಒತ್ತಡ ಮೂಡಿಸಲೂ ಇದು ಕಾರಣವಾಗಿತ್ತು. ಇದರಿಂದ ನಾನು ತುಂಬಾ ಹೊತ್ತು ನಿದ್ದೆಗೆಟ್ಟು ಓದುತ್ತಿದ್ದೆ. ನಮ್ಮ ಬ್ಯಾಚಿನಲ್ಲಿದ್ದವರು ಅನೇಕರು ಪ್ರತಿಭಾವಂತರಾಗಿದ್ದ ಕಾರಣ ತುಂಬಾ ಕಾಂಪಿಟೇಷನ್ ಇತ್ತು. ಅಲ್ಲದೇ ಅಭಿಪ್ರಾಯ ಬೇಧಗಳು ನಮ್ಮಲ್ಲಿ ಜಾಸ್ತಿ ಇದ್ದವು.
ಒಮ್ಮೆ ಕ್ಲಾಸಿನಲ್ಲಿ ನಮ್ಮ ಗೆಳೆಯರಿಬ್ರು ಜಗಳ ಆಡುತ್ತಿದ್ದರು. ಆಗ ತಕ್ಷಣಕ್ಕೆ ಒಬ್ಬ ಪ್ರಶಿಕ್ಷಕರು ಬಂದುಬಿಟ್ಟರು. ಆಗ ಅವರು “ಯಾಕೆ ಹೆಚ್ಚು ಗಲಾಟೆಯ ಶಬ್ದ ಬರುತ್ತಿತ್ತು?” ಎಂದು ಕೇಳಿದಾಗ ನಾನು ಅವರನ್ನು ಬಚಾವ್ ಮಾಡಲು ‘ಏನೂ ಇಲ್ಲ ಸರ್’ ಅಂದುಬಿಟ್ಟೆ. ಆದರೆ ಅವರು ಮತ್ತೊಮ್ಮೆ ವಿಚಾರಿಸಲು ನಿಜ ಹೇಳಿಬಿಟ್ಟರು. ಆಗ ನಮ್ಮ ಗುರುಗಳ ಮುಂದೆ ಸುಳ್ಳುಗಾರನಾಗಿದ್ದು ನಾನು, ಸುಳ್ಳು ಹೇಳುವುದು ತಪ್ಪಾದರೂ ಗೆಳೆಯರಿಗೆ ತೊಂದರೆ ಆಗಬಾರದೆಂಬ ಏಕೈಕ ಉದ್ದೇಶ ನನ್ನನ್ನು ಸುಳ್ಳು ಹೇಳುವಂತೆ ಮಾಡಿತ್ತು. ಆದರೆ ಅವರು ಮಾತ್ರ ನಿಜ ಹೇಳಿ ಒಳ್ಳೆಯವರಾಗಿಬಿಟ್ಟರು!! ಕೆಲವರು ತಾವು ಒಳ್ಳೆಯವರಾಗಲು ಅಥವಾ ಬೇರೆಯವರ ಸಂಬಂಧಗಳನ್ನು ಮುರಿಯಲು ಚಾಡಿ ಹೇಳುತ್ತಿರುತ್ತಾರೆ. ಇದಕ್ಕೆ ನಾವು ‘ಬತ್ತಿ ಇಡುವುದು’ ಎಂದು ಹೇಳುತ್ತಿದ್ದೆವು. ಮತ್ತೊಬ್ಬರ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಸಂಬಂಧ ಕೆಡಿಸುವುದನ್ನು ‘ಫಿಟ್ಟಿಂಗ್ ಇಡುವುದು’, ‘ಕಿವಿಯೂದುವುದು’ ಎಂದೂ ಹೇಳುತ್ತಾರೆ. ಇಂತಹ ಮಾತುಗಳನ್ನು ನಂಬುವವರಿಗೆ ‘ಹಿತ್ತಾಳೆ ಕಿವಿ ಉಳ್ಳವರು’ ಎಂದು ಹೇಳುತ್ತಾರೆ. ಇಂತವರು ಯಾವುದೇ ವಿಚಾರ ಮಾಡಲು ಹೋಗದೇ ಬೇರೆಯವರು ಹೇಳಿದ್ದನ್ನು ಬೇಗನೇ ನಂಬುತ್ತಾರೆ. ‘ಹೇಳಿದ್ದು ಸುಳ್ಳಾಗಬಹುದು ಕೇಳಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು….’ ಎಂಬಂತೆ ನಾವು ಸಾವಧಾನದಿಂದ ವರ್ತಿಸಬೇಕು. ಮತ್ತೆ ಕೆಲವೊಬ್ಬರು ಮತ್ತೊಬ್ಬರ ಬಗ್ಗೆ ವಿಚಾರ ಹೇಳುವಾಗ ಅವರ ಮಾತಿಗೆ ಒಗ್ಗರಣೆ ಸೇರಿಸಿ ಹೇಳುತ್ತಾರೆ ಎಂಬುದನ್ನು ತಿಳಿದಿರಬೇಕು. ಇದಕ್ಕೆ ಸಂಬಂಧಿಸಿದಂತೆ ಒಂದು ಚಟುವಟಿಕೆ ತಿಳಿಯುವುದಾದರೆ – ಇಪ್ಪತ್ತರಿಂದ ಇಪ್ಪತ್ತೈದು ಜನರನ್ನು ಇಟ್ಟುಕೊಂಡು ಮೊದಲನೇ ವ್ಯಕ್ತಿಯ ಕಿವಿಯಲ್ಲಿ ಏನನ್ನಾದರೂ ಹೇಳಬೇಕು. ಅದನ್ನು ಕೇಳಿಸಿಕೊಂಡ ವ್ಯಕ್ತಿಗೆ ಮತ್ತೊಬ್ಬನ ಕಿವಿಯಲ್ಲಿ ಹೇಳಲು ತಿಳಿಸಬೇಕು. ಇದೇ ರೀತಿ ಪ್ರತಿಯೊಬ್ಬರೂ ಮಾಡುತ್ತಾ ಕೊನೇ ವ್ಯಕ್ತಿಯವರೆಗೂ ಮಾಡುತ್ತಾ ಹೋಗಬೇಕು. ಕೊನೆಗೊಮ್ಮೆ, ಕುಳಿತ ಕೊನೇ ವ್ಯಕ್ತಿಯಿಂದ ಹೇಳಿದ ವಿಷಯವನ್ನು ಕೇಳಬೇಕು. ಆಗ ನಮಗೆ ಅಚ್ಚರಿಯಾಗುತ್ತದೆ. ಏಕೆಂದರೆ ಅದು ಮೊದಲು ನಾವು ಹೇಳಿದ್ದಕ್ಕಿಂತ ಸಂಪೂರ್ಣ ಭಿನ್ನವಾಗಿರುತ್ತದೆ!! ಇದನ್ನು ನಾನು ಹಲವಾರು ತರಬೇತಿಗಳಲ್ಲಿ ಮಾಡಿದ್ದೇನೆ. ಮಾಡಿ ಇದನ್ನು ಪ್ರೂವ್ ಮಾಡಲು ಯಶಸ್ವಿಯೂ ಆಗಿದ್ದೇನೆ. ‘ಇಲಿ ಹೋಯ್ತು ಅಂದ್ರೆ ಹುಲಿ ಹೋಯ್ತು’ ಎಂದು ಹೇಳುವ ಜನರಿದ್ದಾಗ ನಾವು ಪರರ ಮಾತನ್ನು ನಂಬುವಾಗ ತುಸು ಎಚ್ಚರವಹಿಸಬೇಕು.

ಇನ್ನೂ ಕೆಲವರು ಇರುತ್ತಾರೆ. ನಮ್ಮ ಮತ್ತು ಮತ್ತೊಬ್ಬರ ಸಂಬಂಧದ ಮಧ್ಯೆ ಹುಳಿ ಹಿಂಡಿ ತಮ್ಮ ಕಾರ್ಯ ಸಾಧನೆಗೆ ಪ್ರಯತ್ನ ಮಾಡುತ್ತಾರೆ. ಇದಕ್ಕೆಂದೇ ತಮಾಷೆಗೆ ಒಂದು ಮಾತು ಹೇಳ್ತಾರೆ. ಯಾರೆಷ್ಟೇ ಹುಳಿ ಹಿಂಡಲಿ ಹುಳಿಯಾದ ಮೊಸರನ್ನು ಕಡೆದು ತುಪ್ಪ ಮಾಡಿಕೊಳ್ಳುವ ಚಾಕಚಾಕ್ಯತೆ ನಮಗಿರಬೇಕು!! ಅದೇ ರೀತಿ ‘ಯಾರೆಷ್ಟೇ ಕಲ್ಲು ಎಸೆದರೂ ಆ ಕಲ್ಲುಗಳನ್ನೇ ಬಳಸಿಕೊಂಡು ನಮ್ಮ ಮನೆಗೆ ಅಡಿಪಾಯ ಹಾಕಿಕೊಳ್ಳುವ ಬುದ್ಧಿವಂತಿಕೆ ನಮಗಿರಬೇಕೆಂದು ಹೇಳುತ್ತಾರೆ.
ಇನ್ನೂ ಕೆಲವರಿರುತ್ತಾರೆ. ‘ಕೈಲಾಗದವರು ಮೈಯೆಲ್ಲಾ ಪರಚಿಕೊಂಡಂತೆ’ ಆಡುತ್ತಾರೆ. ಸುಖಾಸುಮ್ಮನೆ ಮತ್ತೊಬ್ಬರ ಬಗ್ಗೆ ಗಾಳಿಸುದ್ದಿ ಹರಡುವುದನ್ನು ಮಾಡುತ್ತಾರೆ. ಒಮ್ಮೆ, ಒಬ್ಬ ವ್ಯಕ್ತಿ ಮತ್ತೊಬ್ಬನ ಬಗ್ಗೆ ಇದೇ ರೀತಿ ಮಾಡುತ್ತಾನಂತೆ. ಆಗ ಮತ್ತೊಬ್ಬನು ಗಾಳಿಸುದ್ದಿ ಹರಡಿದವನ ವಿರುದ್ಧ ಕೋರ್ಟಿನಲ್ಲಿ ದಾವೆ ಹೂಡುತ್ತಾನಂತೆ. ಆಗ ಯಾವುದೇ ನಿಜಾಂಶವಿಲ್ಲದೇ ಗಾಳಿ ಸುದ್ದಿ ಹರಡಿದವನ ಕುರಿತು ಕೋರ್ಟಿನ ನ್ಯಾಯಾಧೀಶರು ‘ನೀವು ಮಾಡಿದ್ದು ಸರಿಯೇ?’ ಎಂದು ಹೇಳಿದಾಗ ಅವನು ‘ಸ್ವಾಮಿ ನನ್ನದು ತಪ್ಪಾಯಿತು. ದಯಮಾಡಿ ಕ್ಷಮಿಸಿ’ ಎಂದನಂತೆ. ಆಗ ನ್ಯಾಯಾಧೀಶರು “ನಾನು ನಿನಗೊಂದು ಶಿಕ್ಷೆ ಕೊಡುತ್ತೇನೆ. ನೀನು ಒಂದು ಪೇಪರನ್ನು ತೆಗೆದುಕೊಂಡು ಅದನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿಕೊಂಡು ಅದನ್ನು ಒಂದು ರಸ್ತೆಯಲ್ಲಿ ಎಸೆಯುತ್ತಾ ಹೋಗಬೇಕು” ಎಂದರಂತೆ. ಅವನು ಅದೇ ರೀತಿ ಮಾಡಿ ಮರುದಿನ ಮತ್ತೆ ಕೋರ್ಟಿಗೆ ಹಾಜರಾದನಂತೆ. ಮರುದಿನ ನ್ಯಾಯಾಧೀಶರಿಗೆ ‘ಸ್ವಾಮಿ ನೀವು ಹೇಳಿದ್ದನ್ನು ಮಾಡಿದೆ’ ಎಂದನಂತೆ. ಅದಕ್ಕವರು “ಇವತ್ತು ನೀನು ಕಿತ್ತು ಬಿಸಾಡಿರುವ ಪೇಪರ್ ಚೂರುಗಳನ್ನು ಆರಿಸಿಕೊಂಡು ಬರಬೇಕು” ಎಂದರಂತೆ. ಆಗ ಆ ವ್ಯಕ್ತಿಯು “ಅದ್ಹೇಗೆ ಸಾಧ್ಯ? ನಾನು ಕಿತ್ತು ಬಿಸಾಡಿರುವ ಪೇಪರ್ ತುಂಡುಗಳೆಲ್ಲಾ ಗಾಳಿಯಲ್ಲಿ ಹರಡಿ ಹೋಗಿವೆ” ಎಂದನಂತೆ. ಆ ನ್ಯಾಯಾಧೀಶರು ತಮ್ಮ ಮಾತನ್ನು ಮುಂದುವರೆಸಿ “ನೀನು ಹೇಗೆ ಕಿತ್ತ ಚೂರುಗಳನ್ನು ವಾಪಸ್ ತರಲು ಸಾಧ್ಯವಿಲ್ಲವೋ ಅದೇ ರೀತಿ ನೀನು ಮತ್ತೊಬ್ಬನ ಬಗ್ಗೆ ಹರಡಿದ ಸುಳ್ಳು ಸುದ್ದಿಯು ಹಲವರ ಕಿವಿ ತಲುಪಿ ಅವರು ಅದನ್ನೇ ಸತ್ಯವೆಂದು ನಂಬಿದ್ದಾರೆ. ಈ ರೀತಿ ನಂಬಿದವರೆಲ್ಲರಿಗೂ ಇದು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ ತಾನೇ?! ಆದ್ದರಿಂದ ನೀನು ಮಾಡಿರುವ ಶಿಕ್ಷೆ ಅನುಭವಿಸು” ಎಂದು ಅವನಿಗೆ ಶಿಕ್ಷೆ ವಿಧಿಸಿದರಂತೆ!!

ಒಂದೊಮ್ಮೆ ಯಾರಾದರೂ ನಿಮ್ಮ ಬಗ್ಗೆ ಏನಾದರೂ ಹೇಳುತ್ತಾರೆ ಎಂದುಕೊಳ್ಳಿ. ‘ನಾಯಿ ಬೊಗಳಿದರೆ ನಕ್ಷತ್ರ ಉರುಳೀತೇ?’ ಎಂದು ಅಂತವರ ಬಗ್ಗೆ ತಲೆಕೆಡಿಸಿಕೊಂಡು ಕೂರಬಾರದು. ಅಂಥವರ ಸಂಗವನ್ನೂ ಬಿಡಬೇಕು. ಇದಕ್ಕೆ ಒಂದು ಮಾತು ಹೇಳ್ತಾರೆ. ಯಾರಾದರೂ ನಾಲ್ಕು ಜನ ಕುಳಿತ ಗುಂಪಿನಲ್ಲಿ ಅಲ್ಲಿ ಇರದ ಒಬ್ಬ ವ್ಯಕ್ತಿಯ ಕುರಿತು ಅದೇ ಗುಂಪಿನವರು ಮಾತನಾಡುತ್ತಿದ್ದಾರೆ ಎಂದಿಟ್ಟುಕೊಂಡರೆ. ಮತ್ತೆ ಆ ಗುಂಪಿನಲ್ಲಿ ಒಂದೊಮ್ಮೆ ನೀವು ಗೈರಾದರೆ ನಿಮ್ಮ ಬಗ್ಗೆಯೂ ಅದೇ ಗುಂಪು ಮಾತನಾಡುತ್ತದೆ ಎಂಬ ಎಚ್ಚರ ನಮಗಿರಬೇಕು. ಅಲ್ಲದೇ ಅಲ್ಲೇ ಕುಳಿತ ಒಬ್ಬ ವ್ಯಕ್ತಿ ಆ ಮಾತನ್ನು ಅವನ ಕಿವಿಗೆ ತುಪಿಸುತ್ತಾನೆ ಎಂಬ ಎಚ್ಚರವೂ ಇರಬೇಕು. ಇದಕ್ಕೆಂದೇ ದೊಡ್ಡವರು “ಇಲ್ಲಿ ಗೋಡೆಗಳಿಗೂ ಕಿವಿಗಳಿವೆ”!! ಅದಕ್ಕೆ ನೋಡಿ ಮಾತಾಡಬೇಕು ಎಂದು ಹೇಳಿದ್ದಾರೆ. ನಾವು ಎಲ್ಲೇ ಕೆಲಸ ಮಾಡುತ್ತಿರಲಿ ಅಲ್ಲಿ ಯಾರನ್ನೂ ಪೂರ್ತಿ ನಂಬಬಾರದು, ಹಾಗಂತ ಒಬ್ಬಂಟಿಯಾಗಿರಬಾರದು. ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬಂತೆ ಎಲ್ಲರ ಜೊತೆಯೂ ಇರಬೇಕು. ಆದರೆ ನಮ್ಮತನ ಬಿಡಬಾರದು. ಕೆಸರಲ್ಲದ್ದರೂ ಕಮಲ ಹೇಗೆ ಕೆಸರನ್ನು ಅಂಟಿಸಿಕೊಳ್ಳದೇ ಇರುತ್ತದೆಯೋ ಅದೇ ರೀತಿ ನಾವು ಇರೋಣ.

ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
						