Advertisement
ಹೆಣ್ಣಿನ ಉಡುಪು ಎಂಬ ಯುದ್ಧಭೂಮಿ: ಡಾ.ಎಲ್.ಜಿ.ಮೀರಾ

ಹೆಣ್ಣಿನ ಉಡುಪು ಎಂಬ ಯುದ್ಧಭೂಮಿ: ಡಾ.ಎಲ್.ಜಿ.ಮೀರಾ

ನಾವು ಹೆಂಗಸರು ಹಲವು ಬಗೆಯಲ್ಲಿ ಸೃಷ್ಟಿಯಾಗಿರುತ್ತೇವೆ, ಅಲ್ಲದೆ ವಯಸ್ಸು, ಕಾಲ, ಸಂದರ್ಭ ಬದಲಾದಂತೆ ನಮ್ಮ ಆಯ್ಕೆಗಳು ಬದಲಾಗುತ್ತಿರುತ್ತವೆ. ನಮ್ಮಲ್ಲಿ ಅಲಂಕಾರದ ಗಾಢ ಅಭಿರುಚಿ ಇರುವವರು ಇದ್ದಂತೆ ಅದರ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲದವರೂ ಇರುತ್ತೇವೆ. ನಮಗೆ ಬೇಸರ ತರಿಸುವ ವಿಷಯ ಏನೆಂದರೆ ನಮ್ಮ ಒಳಗಿನ ಗುಣ, ಜೀವನದೃಷ್ಟಿ, ಚಿಂತನೆ ಇವುಗಳಿಗೆ ಪ್ರಾಮುಖ್ಯ ಕೊಡದೆ ಕೇವಲ ಸೀರೆ, ಒಡವೆ, ಮುಖಬಣ್ಣಗಳಿಂದ ನಮ್ಮನ್ನು ಅಳೆದುಬಿಡುವ ಸಮಾಜದ ಧೋರಣೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹದಿನೈದನೆಯ ಬರಹ

ಗಂಡಾಳಿಕೆಯ ಸಮಾಜಗಳಲ್ಲಿ ಕಾಲಾನುಕಾಲದಿಂದ ಹೆಣ್ಣು ಏನನ್ನು ಉಡಬೇಕು, ತೊಡಬೇಕು ಎಂಬುದು ಸಮಾಜನಿರ್ಧರಿತ ಸಂಗತಿ. `ಊಟ ತನ್ನಿಚ್ಛೆ, ನೋಟ ಪರರಿಚ್ಛೆ’ ಎಂಬ ಗಾದೆಮಾತು ಹೆಣ್ಣಿನ ವಿಷಯದಲ್ಲಿ `ಊಟವೂ ಅವನಿಚ್ಛೆ, ನೋಟವೂ ಅವನಿಚ್ಛೆ’ ಎಂದು ಅರ್ಥಾಂತರಗೊಳ್ಳುತ್ತೆ.

ಯೋಚಿಸಿ ನೋಡಿ. ಹೆಣ್ಣು ಏನು ತೊಟ್ಟರೂ ಅದು ತಟಸ್ಥ-ನಿರ್ಲಿಪ್ತ-ಅವಳಿಚ್ಛೆಯ ಸಂಗತಿ ಆಗುವುದಿಲ್ಲ. ಅವಳ ಉಡುಪು ಗಂಡುಸಮಾಜದ ಶ್ರೇಣೀಕರಣ, ಮೌಲ್ಯಮಾಪನಕ್ಕೆ ನಿರಂತರವಾಗಿ ಒಳಗಾಗುತ್ತಲೇ ಇರುತ್ತದೆ. ಹೆಣ್ಣಿನ ಉಡುಗೆತೊಡುಗೆಯ ಬಗ್ಗೆ ನಮ್ಮ ಗಂಡುನೋಟದ ಲೋಕ ಎಷ್ಟೆಲ್ಲ, ಏನೆಲ್ಲ, ಹೇಗೆಲ್ಲ ಚಿಂತಿಸಿದೆ ಎಂದರೆ ಆಶ್ಚರ್ಯ ಆಗುತ್ತದೆ!

ರಾಣಿಯರ ಹದಿನಾರು ಬಗೆಯ ಅಲಂಕಾರವನ್ನು ತೆಗೆದುಕೊಳ್ಳಿ. ದಿನವಿಡೀ ಅಲಂಕಾರದಲ್ಲೇ ಕಳೆಯಬೇಕಿತ್ತೋ ಏನೊ ಅವಳು, ರಾಜನನ್ನು ಮೆಚ್ಚಿಸಲು. ಅನೇಕ ಪತ್ನಿಯರಿದ್ದ ಅವನು ತನ್ನ ಬಳಿ ಉಳಿಯಲು ಅಲಂಕಾರವೇ ಅವಳ ಆಪತ್ಬಂಧು ಆಗಿದ್ದಿರಬೇಕು.

ಕೆಲವು ಧರ್ಮಗಳಲ್ಲಿನ ಘೋಷಾ, ಬುರ್ಖಾ. ಹೆಣ್ಣಿನ ಸಾರ್ವಜನಿಕ ಪ್ರಸ್ತುತಿಯನ್ನು ಕಪ್ಪು ಬಟ್ಟೆಯಿಂದ ಮುಚ್ಚಿಡುವ ಒಂದು ಅತಿರೇಕದ ಹೆಜ್ಜೆ. ನನ್ನ ಒಬ್ಬ ಸಹೋದ್ಯೋಗಿಯು(ಕಾಲೇಜು ಅಧ್ಯಾಪಕಿ) ತಲೆಯಿಂದ ಕಾಲಿನವರೆಗೆ, ಕಣ್ಣೊಂದನ್ನು ಬಿಟ್ಟು ತನ್ನನ್ನು ತಾನು ಕಪ್ಪು ಬಟ್ಟೆಯಿಂದ ಮುಚ್ಚಿಕೊಳ್ಳಬೇಕಿತ್ತು. ಎರಡು ಮೂರು ಮುಖತೆರೆಗಳಿದ್ದ ಬುರ್ಖಾ, ಕಪ್ಪು ಕೈಗವಸು, ಕಪ್ಪು ಕಾಲುಚೀಲ ಒಟ್ಟಿನಲ್ಲಿ ಕಣ್ಣೊಂದನ್ನು ಬಿಟ್ಟರೆ ಆಕೆಯ ದೇಹದ ಒಂದು ಮಿಲಿಮೀಟರ್ ಸಹ ಲೋಕಕ್ಕೆ ಕಾಣಿಸಬಾರದಿತ್ತು. ಇಷ್ಟೇ ಅಲ್ಲದೆ ಆಕೆಯ ಮೇಲೆ ಇನ್ನಷ್ಟು ವರ್ತನಾನಿಷೇಧಗಳಿದ್ದವು. ಆಕೆ ತನ್ನ ಗಂಡು ಸಹೋದ್ಯೋಗಿಗಳೊಂದಿಗೆ ಮಾತಾಡುವಂತಿಲ್ಲ, ತಲೆ ಎತ್ತಿ ಅವರನ್ನು ನೋಡಬಾರದು, ಅಷ್ಟೇ ಏಕೆ, ಗಂಡುಮಕ್ಕಳಿರುವ ಕಾಲೇಜಿಗೆ ಆಕೆಗೇನಾದರೂ ವರ್ಗಾವಣೆ ಆದರೆ ಆಕೆ ತಕ್ಷಣ ಕೆಲಸ ಬಿಡಬೇಕು. ನಾನೊಮ್ಮೆ ಆಕೆಯನ್ನು ಕೇಳಿದೆ “ಉಡುಪಿನ ವಿಷಯದಲ್ಲಿ ಇಷ್ಟೊಂದು ನಿಷೇಧಗಳ ನಡುವೆ ಬದುಕುವುದು ನಿಮಗೆ ಕಷ್ಟ ಅನ್ಸಲ್ವಾ?” ಎಂದು ಕೇಳಿದೆ. ಆಕೆ ಅಂದರು “ಹಾಗೇನಿಲ್ಲ, ನಾನು ಬುರ್ಖಾ ತೊಟ್ಟಾಗ ಯಾರೂ ನನ್ನನ್ನು ನೋಡಲ್ಲ ಅಂತ ಆರಾಮಾಗಿ ಇರ್ತೇನೆ” ಅಂದರು. `ಅಬ್ಬ! ಯಾವ ಮಟ್ಟಿಗೆ ಹೆಂಗಸರ ಮನಸ್ಸನ್ನು ತನಗೆ ಬೇಕಾದಂತೆ ಬಗ್ಗಿಸಿ, ಪಳಗಿಸಿ ತಯಾರು ಮಾಡಿಕೊಂಡಿರುತ್ತದಲ್ಲ ಗಂಡಾಳಿಕೆಯ ಸಮಾಜ’ ಅನ್ನಿಸಿ ಸುಮ್ಮನಾದೆ.

ಹೆಣ್ಣಿನ ಅಲಂಕಾರಕ್ಕೆ ಹಚ್ಚಲಾಗುವ ಹಣೆಪಟ್ಟಿಗಳನ್ನು ಗಮನಿಸೋಣವೆ? ಆ ಬಗ್ಗೆ ತುಸು ಆಲೋಚಿಸೋಣವೆ?

ತಾನು ಓದುವ ಕಾಲೇಜಿನಲ್ಲಿ ದಿನಕ್ಕೊಂದು ಬಗೆಯ ಬಣ್ಣದಲ್ಲಿ ಕಂಗೊಳಿಸಿದರೆ ಆ ಹುಡುಗಿ `ಬಣ್ಣದ ಚಿಟ್ಟೆ’. “ಹೆಚ್ಚು ಅಲಂಕಾರ ಮಾಡಿಕೊಳ್ಳುವ ಹುಡುಗಿಯರಿಗೆ ಕಡಿಮೆ ಬುದ್ಧಿ ಇರುತ್ತೆ”. ಇದು ಹೆಣ್ಣು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಾಗಿನಿಂದ ಪುರುಷ ಸಮಾಜ ಅವಳನ್ನು ಮೌಲ್ಯಮಾಪಿಸಿರುವ ರೀತಿ. ಇದು ಇವತ್ತಿಗೂ ಚಾಲ್ತಿಯಲ್ಲಿದೆ. `ಹೆಂಗಸಿನಲ್ಲಿ ಅಂದ ಮತ್ತು ಬುದ್ಧಿವಂತಿಕೆ ಒಟ್ಟಿಗೆ ಇರಲು ಸಾಧ್ಯ ಇಲ್ಲ’ ಎಂಬುದು ಗಂಡಾಳಿಕೆಯ ಸಮಾಜಗಳ ಬಹು ಪುರಾತನ ನಂಬಿಕೆ! `ಹೆಚ್ಚು ಯೋಚಿಸಿದರೆ ಹೆಣ್ಣು ಮಕ್ಕಳ ಸೌಂದರ್ಯ ಹಾಳಾಗುತ್ತದೆ’ ಅನ್ನುವ ಜನ ಇದ್ದಾರೆ. ಇದಕ್ಕೆ ವೈದೃಶ್ಯವಾಗಿ, ಗಂಡಿನಲ್ಲಿ ಸೌಂದರ್ಯ ಮತ್ತು ಬುದ್ಧಿವಂತಿಕೆ ಒಟ್ಟಿಗೆ ಇರಬಹುದೆಂದು ಈ ಸಮಾಜ ನಂಬುತ್ತದೆ! ಶ್ರೀರಾಮ, ಶ್ರೀಕೃಷ್ಣ, ಶಿವ ಮುಂತಾದ ದೇವರುಗಳ ಪರಂಪರಾನುಗತ ವರ್ಣನೆಯಲ್ಲಿ ಈ ಅಂಶ ಸ್ಪಷ್ಟವಾಗಿದೆ.

ಮುಸ್ಸಂಜೆಯ ನಂತರ ತುಂಬ ಫಳಫಳ ಉಡುಪು ಧರಿಸಿ ಹೂಮುಡಿದು ಅಲಂಕಾರ ಮಾಡಿಕೊಂಡು ಓಡಾಡುತ್ತಾಳೆ ಅಂದರೆ ಅವಳು `ಸೂಳೆ’. ಹೀಗನ್ನುವಾಗ ಹೆಣ್ಣನ್ನು ಮಾರುವ- ಕೊಳ್ಳುವ ವಸ್ತು ಎಂಬ ದೀನ-ದೈನೇಸಿ ಸ್ಥಿತಿಗೆ ಇಳಿಸಿ, ಸೂಳೆ ಎಂಬ ಕೀಳುಗಳೆವ ಬಿರುದು ಕೊಟ್ಟಿದ್ದು ತಾನೇ ಎಂಬ ಸತ್ಯವು ನಮ್ಮ ಜಾಣಮರೆವಿನ ಗಂಡುಸಮಾಜಕ್ಕೆ ಮರೆತೇಹೋಗಿರುತ್ತದೆ.

ಸೀರೆ ಉಟ್ಟಾಗ ಮೈತುಂಬ ಸೆರಗು ಹೊದ್ದರೆ ಅವಳು ಕೈಮುಗಿಯಬೇಕಾದ ಗೌರಮ್ಮ. ಎದೆಸೀಳು, ಸೊಂಟ ಕಾಣಿಸುವಂತೆ ಸೀರೆ ಉಟ್ಟರೆ `ಫಾರ್‌ವರ್ಡ್’, ಗಂಡಸರನ್ನು ಆಕರ್ಷಿಸಲೆಂದೇ `ಮೈ ಕಾಣಿಸುವಂತೆ ಉಡುಪು ತೊಡುವ’ ಕಾಮಿನಿ. ಕಿವಿಗೆ, ಕೈಗೆ ಒಡವೆ ಹಾಕಿಕೊಳ್ಳದೆ, ಚೆನ್ನಾಗಿ ಹಿಂದಕ್ಕೆ ಬಾಚಿದ ತುರುಬು ಕಟ್ಟಿ, ಬಿಳಿ ಅಥವಾ ತಿಳಿ ಬಣ್ಣದ ಸೀರೆ ಉಟ್ಟು ಶಿಲುಬೆ ಸರವನ್ನು ಹಾಕಿಕೊಂಡಿದ್ದರೆ ಅವಳು ಕ್ರೈಸ್ತ ಸನ್ಯಾಸಿನಿ.

ಇನ್ನು, ಏನೂ ಅಲಂಕಾರ ಮಾಡಿಕೊಳ್ಳದೆ ಹೇಗೋ ಒಂದು ಸೀರೆ ಸುತ್ತಿಕೊಂಡು ತಲೆ ಕೆದರಿಕೊಂಡು ಓಡಾಡುತ್ತಿದ್ದರೆ ಅವಳು `ಬಹುಶಃ ಕೋಪಗ್ರಸ್ತ ಸ್ತ್ರೀವಾದಿʼ. ಈ ವಿಷಯದಲ್ಲಿ ಬುದ್ಧಿಜೀವಿ ಅನ್ನಿಸಿಕೊಂಡ ಒಬ್ಬ ಮಹನೀಯರು ಮಾಡಿದ ಒಂದು ಅಸೂಕ್ಷ್ಮ ಟೀಕೆ ನೆನಪಾಗುತ್ತಿದೆ ನನಗೆ. ತತ್ವ, ಸಾಹಿತ್ಯ, ಲೋಕದೃಷ್ಟಿ ಮುಂತಾದವುಗಳ ಬಗೆಗೆ ಬಹಳ ಗಂಭೀರವಾಗಿ ಚಿಂತಿಸುತ್ತಿದ್ದ ಪ್ರಾಧ್ಯಾಪಕ-ವಿಮರ್ಶಕರವರು. ಅವರ ಬಗ್ಗೆ ತುಂಬ ಗೌರವ ಹೊಂದಿದ್ದ ನಾನು ಒಮ್ಮೆ ಅವರಲ್ಲಿ ಒಂದು ಪ್ರಶ್ನೆ ಕೇಳಿದೆ. “ಕೆಲವು ಹೆಂಗಸರು ಅಲಂಕಾರ ಮಾಡ್ಕೊಳಕ್ಕೆ ಇಷ್ಟ ಪಡಲ್ಲ, ಅಲ್ವಾ? ಅದನ್ನು ನೀವು ಸೈದ್ಧಾಂತಿಕವಾಗಿ ಹೇಗೆ ವಿವರಿಸ್ತೀರಾ?” ಎಂಬ ಪ್ರಶ್ನೆ ಅದು. ಅದಕ್ಕೆ ಅವರು ಕೊಟ್ಟ ಉತ್ತರ ಇದು – “ಅಯ್ಯೋ ಬಿಡ್ರಿ, ಅಲಂಕಾರ ಮಾಡ್ಕೊಂಡ್ರೆ ತಾನೆ ಯಾರು ಅವರನ್ನ ನೋಡ್ತಾರೆ?”. ಆ ಚಿಂತಕರು ಅದನ್ನು ಬಹಳ ಲಘು ವಿಷಯ ಎಂಬಂತೆ ತಮಾಷೆಯಾಗಿ ಹೇಳಿ, ತನಗಿರುವ `ಉತ್ತಮ ಹಾಸ್ಯಪ್ರಜ್ಞೆ’ಗಾಗಿ ನನ್ನಿಂದ ಮೆಚ್ಚುಗೆ ನೀರಿಕ್ಷಿಸಿದ್ದರೋ ಏನೊ. ಆದರೆ ಅವರ ಉತ್ತರದಿಂದ ನನ್ನ ಮನಸ್ಸಿಗೆ ಬಹಳ ಕಸಿವಿಸಿ-ಖೇದ ಆಯಿತು. ಹೆಣ್ಣಿನ ಉಡುಪಿನ ಆಯ್ಕೆಗಳನ್ನು `ಅದು ಆಕೆಯ ಇಚ್ಛೆ, ಅದನ್ನು ನಾವು ಪ್ರಶ್ನಿಸಬಾರದು, ಹೀಗಳೆಯಬಾರದು, ಉಡುಗೆ-ತೊಡುಗೆ-ಮುಖಬಣ್ಣ-ಅಲಂಕಾರ’ ಇವೆಲ್ಲ ಆಯಾ ವ್ಯಕ್ತಿಗಳಿಗೆ ಸಂಬಂಧ ಪಟ್ಟ ವಿಷಯ. ನಾವು ಅದರ ಬಗ್ಗೆ ಟೀಕೆ ಮಾಡಬಾರದು’ ಎಂಬ ಪ್ರಜ್ಞೆ ಇದ್ದಂತೆ ತೋರಲಿಲ್ಲ ಅವರ ಮಾತಿನಲ್ಲಿ. ತಾನು ಯಾವ ಹೆಂಗಸಿನ ಬಗೆಗೆ ಏನು ಬೇಕಾದರೂ ಹೇಳಬಹುದು, ಹೆಂಗಸರಿರುವುದೇ ಗಂಡಸರಿಂದ ನೋಡಿಸಿಕೊಳ್ಳುವುದಕ್ಕಾಗಿ, ನಾವು ಯಾರ ಬಗ್ಗೆ ಏನು ಬೇಕಾದರೂ ಟೀಕೆ ಮಾಡಬಹುದು’ ಎಂಬ ಪುರುಷ ದೃಷ್ಟಿಯ ಅಹಂ ನನಗೆ ಕಾಣಿಸಿತು ಅವರ ಮಾತಿನಲ್ಲಿ. ಜೀವನದ ಬಗ್ಗೆ, ಮನುಷ್ಯರ ಬಗ್ಗೆ ಸೂಕ್ಷ್ಮ ಒಳನೋಟವನ್ನು ಹೊಂದಿರುತ್ತಾರೆ ಎಂದು ನಾವು ನಿರೀಕ್ಷಿಸುವ ಬುದ್ಧಿಜೀವಿಗಳದೇ ಈ ಪಾಡಾದರೆ ಇನ್ನು ಸಾಮಾನ್ಯ ಮನುಷ್ಯರ ಬಗ್ಗೆ ಏನು ಹೇಳೋಣ!

ಇನ್ನು `ಗೂಂಘಟ್ ರಖ್ನಾ’ ಎಂಬ ಪದ್ಧತಿ. ರಾಜಸ್ಥಾನದಲ್ಲಿರುವ ಮುಸುಕಿನ ಅಭ್ಯಾಸ. ಇದಂತೂ ಈಗಲೂ ಸಹ ಕೆಲವು ಮಹಾನಗರಗಳ ಮನೆಗಳಲ್ಲೂ ಚಾಲ್ತಿಯಲ್ಲಿದೆ ಎಂದರೆ ನಂಬಲಾಗುವುದೆ? ಕೆಲವು ತಿಂಗಳುಗಳ ಹಿಂದೆ ನಮ್ಮ `ಚಿತ್ರನಾಟ್ಯ ಫೌಂಡೇಷನ್’ ಭರತನಾಟ್ಯ ತರಗತಿಗೆ ಒಬ್ಬ ರಾಜಸ್ಥಾನೀ ಯುವತಿ ಸೇರಿದರು. ಇಂಗ್ಲಿಷ್ ಎಂ.ಎ. ಮಾಡಿ ಪ್ರೌಢಶಾಲೆಯೊಂದರಲ್ಲಿ ಅಧ್ಯಾಪಕಿ ಆಗಿದ್ದವರು ಆಕೆ. ಬಹಳ ಆಸೆಯಿಂದ ಭರತನಾಟ್ಯ ಕಲಿಯಲು ಸೇರಿದ್ದರು. ಆದರೆ ಅವರ ಮುಖದಲ್ಲಿ ಸದಾ ಇರುತ್ತಿದ್ದ ಒಂದು ಆತಂಕವು ಒಬ್ಬ ಭರತನಾಟ್ಯ ಗುರುವಾಗಿ ನನಗೆ ಚಿಂತೆ ಮೂಡಿಸುತ್ತಿತ್ತು. `ಏಕೆ’ ಎಂದು ಆ ಹುಡುಗಿಯನ್ನು ನಾನು ಕೇಳಿದಾಗ ಗೊತ್ತಾದ ಸಂಗತಿ ನನ್ನ ಮನ ಕರಗಿಸಿಬಿಟ್ಟಿತು. ಆಕೆ ಮನೆಯಲ್ಲಿ ಸದಾ ಸೀರೆಯನ್ನೇ ಧರಿಸಿರಬೇಕು, ಚೂಡಿದಾರ್ ಹಾಕಿಕೊಳ್ಳುವಂತಿಲ್ಲ, ಭರತನಾಟ್ಯ ತರಗತಿಗೆ ಬಂದಾಗ ಚೂಡಿದಾರ್ ಹಾಕಿಕೊಂಡು ಮತ್ತೆ ಮನೆಗೆ ಹೋಗುವಾಗ ಸೀರೆ ಉಟ್ಟುಕೊಂಡು ಹೋಗಬೇಕು. ಅಷ್ಟೇ ಅಲ್ಲ, ಅತ್ತೆ ಮಾವ ಸೋಫಾ ಮೇಲೆ ಕುಳಿತಿದ್ದಾಗ ಈಕೆ ನೆಲದಲ್ಲಿ ಕುಳಿತುಕೊಳ್ಳಬೇಕು, ಬೇರೆ ಗಂಡಸರೇನಾದರೂ ಮನೆಗೆ ಬಂದರೆ ಆಕೆ ಅವರ ಎದುರಿಗೆ ಹೆಚ್ಚು ಓಡಾಡುವಂತಿಲ್ಲ, ಮಾತಾಡುವಂತಿಲ್ಲ….. ಅಯ್ಯೋ, ಯಾವ ಶತಮಾನದಲ್ಲಿ ಬದುಕುತ್ತಿದ್ದಾರೆ ಅವರ ಮನೆಯವರು!

ಹೆಂಗಸನ್ನು ಗರಿಷ್ಠಮಟ್ಟದಲ್ಲಿ ಅವಮಾನಿಸುವುದು ಎಂದರೆ ಸಾರ್ವಜನಿಕವಾಗಿ ಅವಳ ವಸ್ತ್ರಾಪಹರಣ ಮಡುವುದು. ಮಹಾಭಾರತದ ಸಭಾಪರ್ವದ ದ್ರೌಪದಿಯನ್ನು ನೆನೆಸಿಕೊಳ್ಳಿ. ಇನ್ನು `ಯಾರಾದರೂ ನನಗೆ ಬಟ್ಟೆ ತೊಡಿಸುವ ಗಂಡಸರಿದ್ದಾರೇನೋ’ ಎಂದು ಕಾಳಿಯಂತೆ ಹೂಂಕರಿಸಿದ ಮಹಾಶ್ವೇತಾದೇವಿಯ ದೋಪ್ದಿಯನ್ನು ನೆನೆಸಿಕೊಂಡರೆ ಜೀವ ಝಲ್ಲೆನ್ನುತ್ತದೆ. ಪೂಲನ್ ದೇವಿಯನ್ನು ವಿವಸ್ತ್ರವಾಗಿ ಮೆರವಣಿಗೆ ಮಾಡಿ ಗರಿಷ್ಠ ಅವಮಾನಕ್ಕೆ ದೂಡಿದ ಠಾಕೂರ್ ಸಮುದಾಯವನ್ನು ನೆನಪಿಸಿಕೊಂಡರೆ ಯಾವ ಹೆಣ್ಣಿಗೆ ತಾನೆ ಮೈ ಉರಿಯುವುದಿಲ್ಲ ಹೇಳಿ.
ಹೆಂಗಸಿನ ತಲೆ ಮುಚ್ಚುವ ಬಟ್ಟೆ `ಹಿಜಾಬ್’ನ ವಿಷಯಕ್ಕಾಗಿ ಕೆಲವು ತಿಂಗಳುಗಳ ಹಿಂದೆ ನಮ್ಮಲ್ಲಿ ಆದ ಗಲಾಟೆ ಸ್ವಲ್ಪವೆ?
ಕೇರಳದ ಬ್ರೆಸ್ಟ್ ಟ್ಯಾಕ್ಸ್. ಹೆಂಗಸರು ರವಿಕೆ ತೊಡಬಾರದೆಂಬ ನಿಯಮ, ಯುರೋಪಿನಲ್ಲಿದ್ದ ಗರ್ಡಲ್ಸ್, ಸೊಂಟಕ್ಕೆ ಬೀಗ ಹಾಕುವ ಕ್ರಮ ಎಲ್ಲ ಸ್ತ್ರೀಶೋಷಣೆಯ ವಿಧಗಳೇ ತಾನೆ.

ಪ್ರತಿ ದಿನ ಹೊರಗೆ ಹೊರಟಾಗಲೂ ನಾನು ಹೇಗೇ ಉಡುಪು ಧರಿಸಿದರೂ ನೋಡುಗರ ಕಣ್ಣಿನ ಮೌಲ್ಯಮಾಪನಕ್ಕೆ ನಿರಂತರವಾಗಿ ಒಳಗಾಗುತ್ತಲೇ ಇರುತ್ತೇನೆ ಎಂಬ ಭಾವನೆಯ ಭಾರ ಇರುತ್ತದೆ ಹೆಣ್ಣಿನಲ್ಲಿ.

ಇನ್ನೊಂದು ವಿಚಿತ್ರ ಸಂಗತಿ ನೋಡಿ. ಉದ್ಯಮ ಪ್ರಪಂಚದಲ್ಲಿ ಹೆಣ್ಣು ಗೌರವ ಗಳಿಸಬೇಕೆಂದರೆ ಪ್ಯಾಂಟು-ಶರಟು-ಕೋಟುಗಳ ಗಂಡುಡುಗೆ ತೊಡಬೇಕು! ನಮ್ಮ ಕಾಲೇಜುಗಳಲ್ಲಿ `ಸ್ಮಾರ್ಟ್ ಯೂನಿಫಾರ್ಮ್’ ಹೆಸರಲ್ಲಿ ಹೆಣ್ಣುಮಕ್ಕಳಿಗೆ ಸೂಟುಬೂಟುಗಳ ಗಂಡುಡುಗೆ ತೊಡಿಸುತ್ತಾರೆ. ಹಳ್ಳಿಯಿಂದ ಹೊಸದಾಗಿ ನಗರಕ್ಕೆ ಬಂದ ಹೆಣ್ಣುಮಕ್ಕಳು ಆ ಪ್ಯಾಂಟಿನ ಸಮವಸ್ತ್ರ ಧರಿಸಿ ಅಮ್ಮನೋ ಅಜ್ಜಿಯೋ ಮುಡಿಸಿದ ಹೂವನ್ನು ಇಟ್ಟುಕೊಂಡು ಬಂದಾಗ ಅಯ್ಯೋ ಅನ್ನಿಸುತ್ತದೆ.

ವ್ಯಾಪಾರದ ಪ್ರಪಂಚವು ಹೆಂಗಸರ ಉಡುಪಿನ ಬಗೆಗೆ ಸಮಾಜಕ್ಕಿರುವ ಗೀಳನ್ನು ಲಾಭಕರವಾಗಿ ಬಳಸಿಕೊಳ್ಳುತ್ತದೆ. ಇಂದು ಬ್ರೈಡಲ್ ಡ್ರೆಸ್ ಎಂಬುದು ಒಂದು ಉದ್ಯಮವಾಗಿರುವ ರೀತಿ ನೋಡಿದರೆ ಗಾಬರಿಯಾಗುತ್ತೆ. ಹೊರಲಾರದ ಲೆಹಂಗಾ, ಮಾರುದ್ದದ ತಲೆಧಾವಣಿ… ಅದಕ್ಕೆ ಲಕ್ಷಾಂತರ ರುಪಾಯಿಗಳ ಖರ್ಚು.

ಇನ್ನು ಸಿನಿಮಾನಟಿಯರ ಉಡುಪಿನ ಮೌಲ್ಯಮಾಪನವೋ… ಅದೇ ಒಂದು ಪ್ರಪಂಚ ಬಿಡಿ. ತುಂಡುಡುಗೆ ಉಟ್ಟು ನಾಲ್ಕು ಬೀದಿ ಸೇರುವ ವೃತ್ತದಲ್ಲಿ ಕುಣಿಯುವ ಪಂಕಜ, ರುಕ್ಕಮ್ಮ, ಶೀಲಾ, ಚಿಕ್ನಿ ಚಮೇಲಿ, ಪದ್ಮಾವತಿ, ಬಸಣ್ಣಿ……. ಇವರೆಲ್ಲ ಅಹಹಾ ನಮ್ಮ ಗಂಡುಲೋಕ ತನ್ನ ಇಚ್ಛೆಗೆ ತಕ್ಕಂತೆ ಹೆಣ್ಣಿಗೆ ಉಡುಪು ತೊಡಿಸಿ ಭೋಗದ ಸರಕಾಗಿಸಿದ `ಕ್ಲಾಸಿಕ್’ ರೀತಿಯ ಪುತ್ಥಳಿಗಳು. ಕ್ಯಾಬರೆ ಡ್ಯಾನ್ಸರ್ ಅನ್ನುವ ಪದವನ್ನು ಬಯ್ಗುಳವಾಗಿ ಬಳಸುತ್ತಲೇ ಕ್ಯಾಬೆರಾನೃತ್ಯ ನೋಡುತ್ತಾ ಜೊಲ್ಲು ಸುರಿಸುವ ನಮ್ಮ ಗಂಡುದಿಕ್ಕುಗಳ ಬಗ್ಗೆ ಏನನ್ನೋಣ!

ಈಗ ಬಳಕೆಗೆ ಬಂದಿರುವ ಕ್ರಾಸ್ ಡ್ರೆಸಿಂಗ್ ಅಂದರೆ ಮೂರನೆ ಲಿಂಗಿಗಳು ಉಡುಪು ಧರಿಸುವ ವಿಶಿಷ್ಟ ರೀತಿ ಇದು. ಗಂಡು ಮೋಟದವರು ಸೀರೆ ಧರಿಸುವುದು, ಲಂಗ ಹಾಕಿಕೊಳ್ಳುವುದು, ಹೆಣ್ಣುದೇಹ ಉಳ್ಳವರು ಪಂಚೆ, ಲುಂಗಿ ಧರಿಸುವುದು ಹೀಗೆ. ಇದು ಗಂಡಾಳಿಕೆಯ ಸಮಾಜಕ್ಕೆ ನುಂಗಲಾರದ ತುತ್ತಾಗಿದೆ.

*****

ನಾವು ಹೆಂಗಸರು ಹಲವು ಬಗೆಯಲ್ಲಿ ಸೃಷ್ಟಿಯಾಗಿರುತ್ತೇವೆ, ಅಲ್ಲದೆ ವಯಸ್ಸು, ಕಾಲ, ಸಂದರ್ಭ ಬದಲಾದಂತೆ ನಮ್ಮ ಆಯ್ಕೆಗಳು ಬದಲಾಗುತ್ತಿರುತ್ತವೆ. ನಮ್ಮಲ್ಲಿ ಅಲಂಕಾರದ ಗಾಢ ಅಭಿರುಚಿ ಇರುವವರು ಇದ್ದಂತೆ ಅದರ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲದವರೂ ಇರುತ್ತೇವೆ. ನಮಗೆ ಬೇಸರ ತರಿಸುವ ವಿಷಯ ಏನೆಂದರೆ ನಮ್ಮ ಒಳಗಿನ ಗುಣ, ಜೀವನದೃಷ್ಟಿ, ಚಿಂತನೆ ಇವುಗಳಿಗೆ ಪ್ರಾಮುಖ್ಯ ಕೊಡದೆ ಕೇವಲ ಸೀರೆ, ಒಡವೆ, ಮುಖಬಣ್ಣಗಳಿಂದ ನಮ್ಮನ್ನು ಅಳೆದುಬಿಡುವ ಸಮಾಜದ ಧೋರಣೆ.

ನಾವು ಹದಿಹರೆಯದಲ್ಲಿದ್ದಂತೆ ಯೌವನದಲ್ಲಿ, ಯೌವನದಲ್ಲಿದ್ದಂತೆ ಮಧ್ಯವಯಸ್ಸಿನಲ್ಲಿದ್ದಂತೆ, ಮಧ್ಯವಯಸ್ಸಿನಲ್ಲಿದ್ದಂತೆ ವೃದ್ಧಾಪ್ಯದಲ್ಲಿ ಇರುವುದಿಲ್ಲ. ನಮ್ಮ ಜೀವನನೋಟದಲ್ಲಿ ಅನೇಕ ಕಾರಣಗಳಿಂದ ಬದಲಾವಣೆಗಳು ಆಗುತ್ತಿರುತ್ತವೆ. ಆ ಸಂದರ್ಭದಲ್ಲಿ ಸಹಜವಾಗಿಯೇ ನಮ್ಮ ಉಡುಪಿನ ರೀತಿ, ಅದರ ಬಗೆಗಿನ ನಮ್ಮ ನಿಲುವು ಬದಲಾಗುತ್ತದೆ. ಅದ್ಯಾವುದನ್ನೂ ಗಮನಿಸದೆ `ಬಟ್ಟೆ ಧರಿಸಿದ ಬೊಂಬೆಗಳಿವರು, ಇವರ ಬಗ್ಗೆ ನಾವು ಬಾಯಿಗೆ ಬಂದ ಹಾಗೆ ಮಾತಾಡಬಹುದು’ ಎಂಬ ಧೋರಣೆಯನ್ನು ಜನರು ತೋರಿದಾಗ ನಮ್ಮ ಮನಸ್ಸಿಗೆ ಬಹು ಇರಿಸುಮುರಿಸಾಗುತ್ತದೆ. ನಾವು ಹೆಣ್ಣುದೇಹದಲ್ಲಿರುವ ಜೀವ ಚೈತನ್ಯಗಳೇ ಹೊರತು ನಮ್ಮ ಅಸ್ತಿತ್ವ ಕೇವಲ ದೇಹ ಅಲ್ಲ. ಹೀಗಾಗಿ ಕೇವಲ ದೇಹಕ್ಕೆ ಸಂಬಂಧ ಪಟ್ಟ ಉಡುಪು, ಅಂದ, ಅಲಂಕಾರಕ್ಕೂ ಕೊಡಬೇಕಾದ್ದಕ್ಕಿಂತ ಹೆಚ್ಚು ಪ್ರಾಮುಖ್ಯ ಕೊಡಬೇಕಿಲ್ಲ ಎಂಬುದು ನಮ್ಮ ಅಭಿಪ್ರಾಯ.

ಇಂದಿಗೂ ಹೆಣ್ಣಿಗೆ ತಾನು ಮನೆಯಿಂದ ಹೊರಗೆ ಕಾಲಿಟ್ಟ ತಕ್ಷಣ ತನ್ನನ್ನು ನೋಡುಗರು ತನ್ನ ಬಟ್ಟೆಗಳಿಂದಾಗಿ ನಿರಂತರವಾಗಿ ಮೌಲ್ಯಮಾಪನ ಮಾಡುತ್ತಿದ್ದಾರೆ ಎಂಬ ಅರಿವು ಬಾಧಿಸುವುದು ಎಷ್ಟು ಹಿತ ಹೇಳಿ. ಆದರೆ ಶತಮಾನಗಳಿಂದ ಹೆಣ್ಣನ್ನು ಕೇವಲ ದೇಹವಾಗಿ, ತನ್ನ ಕಣ್ಣಿಗೆ ಹಿತವಾಗುವಂತೆ ಅಲಂಕಾರ ಮಾಡಿಕೊಳ್ಳುವ ಬೊಂಬೆಯಾಗಿ ನೋಡಿ ಅಭ್ಯಾಸವಾಗಿರುವ ಗಂಡಾಳಿಕೆಯ ಸಮಾಜ ಬೇಗ ಬದಲಾಗಲ್ಲ, ಆದರೆ ಅದು ಬದಲಾಗುವವರೆಗೆ ಬದಲಾಯಿಸುವ ನಮ್ಮ ಪ್ರಯತ್ನವನ್ನಂತೂ ನಾವು ನಿಲ್ಲಿಸುವಂತಿಲ್ಲ. ಈ ಬರಹ ಕೂಡ ಆ ಪ್ರಯತ್ನದ ಭಾಗವೇ ಆಗಿದೆ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ