“ಎಲ್ಲೆಲ್ಲಿಂದಲೋ ಬಂದು ತಳವೂರಿರುವ ಭಂಟರ ಹಂಗರಕಟ್ಟೆ ಬಾಣಸಾಲೆ ಮನೆಗಳು. ಬೈಂದೂರು ನೆಲ್ಲ್ಯಾಡಿ ಮನೆ. ಕುಂಜೂರು ಚೌಕಿ ಮನೆ, ಹರ್ಕೂರು ಒಳಗಿನ ಮನೆ. ಶೃಂಗೇರಿ ಮನೆ, ಮಂಗಳೂರು ಕ್ರಿಶ್ಚಿಯನ್ ಹೌಸ್, ಜಂಗಮ ಮಠ, ಭಟ್ಕಳದ ಮುಸ್ಲಿಮ್ ಮನೆ, ವಿದ್ಯಾ ಮಂದಿರ, ಹೀಗೆ ವೈವಿಧ್ಯ ಮನೆಗಳು ಬೀಡುಬಿಟ್ಟಿವೆ. ಅದರ ಜೊತೆಯಲ್ಲಿ ಅಲ್ಲಿಯ ಜನರ ವಿಧವಿಧವಾದ ಕೈ ಕುಸುರಿಯ ಕಾಣ್ಕೆಗಳು, ಅವರ ವ್ಯವಹಾರಿಕ ಜಗತ್ತು ಕಣ್ತೆರೆದಿವೆ. ಅಂದಿನ ಹಳ್ಳಿ ರಸ್ತೆಗಳು ವ್ಯಾಪಾರ ಸಾಪಾರದ ಬೀದಿಗಳು, ಮಾರುಕಟ್ಟೆ, ಹೀಗೆ.. ರಾಜರ ಕಾಲದ, ಬ್ರಿಟೀಷರ, ಮುಸ್ಲಿಮ್ ನವಾಬರ, ಸ್ಥಳದ ಶ್ರೀಮಂತರ ವೈವಿಧ್ಯತೆಯನ್ನು ಇಲ್ಲಿ ನೋಡಿಯೇ ತಿಳಿಯಬೇಕು”
ಸುಜಾತಾ ಎಚ್.ಆರ್. ಬರೆಯುವ ತಿರುಗಾಟ ಕಥಾನಕದ ಹತ್ತನೆಯ ಕಂತು.
ಕಳೆದುಹೋದ ಬಾಲ್ಯವನ್ನು , ಕಳೆದುಹೋದ ನಮ್ಮ ಒಟ್ಟು ಕುಟುಂಬವನ್ನು, ಇಡಿ ಇಡಿಯಾಗಿ ಸಕಲ ಹೊಣೆಗಾರಿಕೆಯನ್ನು, ಸಂಸಾರಗಳನ್ನು ಸಲುಹುತಿದ್ದ ಅಂದಿನ ವಿಸ್ತಾರವಾದ ಮನೆಗಳು, ಇಂದಿನ ಹಿರಿ ತಲೆಗಳಲ್ಲಿ ನೆನಪಿನ ಭಾವಕೋಶವಾಗಿವೆ. ಆ ಮನೆಗಳು ನೆಲಮೂಲದ ವಸ್ತುಗಳ ಬಳಕೆಯಿಂದ, ಸರಳವಾದ ಕೈ ಕೆಲಸಗಳ ಕಲಾತ್ಮಕತೆಯಿಂದ ಕೂಡಿರುತ್ತಿದ್ದವು. ಸ್ಥಳದಲ್ಲೇ ಸಿಗುವ ಸಲಕರಣೆಗಳಿಂದ ನಿರ್ಮಿಸಿದ ಇಂಥ ಮನೆಗಳು ಬಾಳಿಕೆಯಿಂದಲೂ, ಸ್ಥಳದ ಅನುಕೂಲತೆಯಿಂದಲೂ, ಅಲ್ಲಿನ ಪರಿಸರಕ್ಕೆ ಹೊಂದಿಕೆಯಾಗಿರುತ್ತಿದ್ದವು. ಅದರಲ್ಲೂ ಊರಿನ ಪ್ರಮುಖರ ಮನೆಗಳು ವಿಶೇಷವಾದ, ಅನುಕೂಲಗಳಿಂದ ಅಲಂಕಾರಗಳಿಂದ ಕೂಡಿರುತ್ತಿದ್ದವು.
ಇಂದಿನ ವಾಸ್ತುಶಿಲ್ಪಕ್ಕೆ ಕಡಿಮೆಯಿಲ್ಲದಂತೆ ಅಂದಿನ ಹಸ್ತಶಿಲ್ಪ ಅಲ್ಲಿನ ಹಸಿರು ಪರಿಸರದಲ್ಲಿ ಕಂಗೊಳಿಸುತ್ತಿದ್ದವು. ಕೂಡುಕುಟುಂಬಗಳನ್ನು ಪೊರೆಯುತ್ತಲೇ, ನೆಂಟರಿಷ್ಟರನ್ನು ಆದರಿಸುತ್ತಲೇ, ಆಳುಕಾಳುಗಳನ್ನು ಸಲುಹುತ್ತ, ಅಂಗಳಗಳು ಸಮೂಹದ ವೇದಿಕೆಯಾಗಿಯೂ ಮಾರ್ಪಾಡಾಗುತ್ತಿದ್ದವು. ಊರಿನ ದೊಡ್ಡಮನೆಗಳು ಅಲ್ಲಿನ ಮದುವೆ ಮಂಟಪಗಳಾಗುತ್ತಿದ್ದವು. ಬರುವ ಅಲೆಮಾರಿ ಕಲಾಕಾರರಿಗೆ ತಂಗುದಾಣಗಳಾಗಿ, ಎಳೆ ಕಂಗಳಿಗೆ ಹೊಸ ಲೋಕವನ್ನು ತೆರೆದಿಡುತ್ತಿದ್ದವು. ಯಾವುದೇ ಗಡಿಬಿಡಿಯಿಲ್ಲದ ಅಂದಿನ ದೈನಂದಿನ ಬದುಕು ಹೊಟ್ಟೆ ತುಂಬ ಉಂಡು, ಕಣ್ತುಂಬ ನೆಮ್ಮದಿಯ ನಿದ್ರೆ ಮಾಡಿಸುತ್ತಿದ್ದ, ಚಿಕ್ಕಿಗಳ ಲೋಕವನ್ನು ತೆರೆದಿಡುತ್ತಿದ್ದ ಅಂಗಳ, ನಡುಮನೆ, ಚಾವಡಿ ಮನೆಗಳು ಎಲ್ಲಿ ಕಳೆದುಹೋದವು?
ಒಲೆಯ ಸುಡುಬೆಂಕಿಯಲ್ಲಿ ಬೇಯುತ್ತಿದ್ದ ಮಡಿಕೆ ಕುಡಿಕೆಗಳು, ಪಾತ್ರೆ ಪಗಡೆಗಳು, ಬಾಣಂತಿ ಮನೆಯ ತೊಟ್ಟಿಲು, ಹೆಣೆದ ತೊಟ್ಟಿಲಿನ ಹಗ್ಗ, ಮಗುವಿನ ಗುಬ್ಬಿಗೂಡು, ಅದನು ನೇದ ಕೈಗಳ ಕಡಗಗಳು, ಮಗುವಿನ ಕಾಲ್ಗೆಜ್ಜೆ, ಕಳುಹಲು ಬಂದ ತವರಿನ ಗಾಡಿ. ಎತ್ತಿನ ಹೆಜ್ಜೆಗೆ ಕುಣಿದ ಗಂಟೆಗಳು ದಿನಗಳನ್ನು ದೂಡಿಕೊಂಡು ಸವೆದು ಮಣ್ಣಲ್ಲಿ ಹೂತುಹೋಗಲು ಮನೆಗಳ ಕತ್ತಲೆಯ ಅಟ್ಟ ಸೇರಿದ್ದವು. ಅಂದಿನ ಹಗುರವಾದ ಬದುಕಲ್ಲಿ ದನದ ಬಾಯಾರಿಕೆಗೆಂದೇ ಇಟ್ಟ ನೀರ ಬಾನಿಗಳು ಹಾಳು ಬಿದ್ದ ಮನೆಯ ಕಿಳ್ಳುಗಳಲ್ಲಿ ಇಂದು ಭಾರವಾಗಿ ಹಾರು ಹೊಡೆದಿವೆ. ಬದುಕು ಚಿಕ್ಕದಾಗುತ್ತ, ಬಂದ ಗಿಲೀಟಿನ ಸಾಮಾನುಗಳಿಂದ ಮನೆಗಳು ಬದಲಾಗುತ್ತಾ, ಮನೋಭಾವವೂ ಬದಲಾಗುತ್ತಾ, ಸತ್ತವರೊಂದಿಗೆ ಅವರ ವಸ್ತುಗಳು ಒಂದೊಂದೇ ಕಣ್ಮರೆಯಾಗಿ ಹೋಗುವಂತೆ, ಒಂದೊಂದೆ ಬಿದ್ದ ಮನೆಗಳ ಕೆತ್ತನೆಯ ಕಂಬಗಳು, ದಾರಂದ, ಮಾಡು ಮಣ್ಣಾಗತೊಡಗಿದವು. ಅಮೂಲ್ಯ ಹಸ್ತಶಿಲ್ಪಗಳು, ಕಲೆಗಳು ನಿರ್ಲಕ್ಷ್ಯದಿಂದ ಚದುರತೊಡಗಿದವು.
ನೆಲಕ್ಕೆ ಬಿದ್ದ ಹಿರಿಯರ ಒಂದೊಂದೆ ಆಸೆಗಳನ್ನು ಆರಿಸಿತಂದು ಮೈತಡವಿ, ಅವರ ಕಲಾತ್ಮತೆಗೆ ಬೆರಗಾಗಿ, ಬಾಲ್ಯದ ಕನಸಿನ ಲೋಕವೊಂದು ಹೋಗೆಬಿಡುತ್ತದಲ್ಲಾ! ಎನ್ನುವ ಕಳಕಳಿಯಿಂದ, ಒಂದೊಂದೇ ಅಮೂಲ್ಯ ಕೈಕುಸುರಿಗಳನ್ನು ಆಸ್ಥೆಯಿಂದ ಜೋಡಿಸುತ್ತ, ಮುರಿದ ಮನೆಯನ್ನು ತಿರುಗಿ ಕಟ್ಟುತ್ತಲೇ ಅದರ ಬಾಳಿಕೆಯ ಮೋಹಕ್ಕೆ ಒಳಗಾದವರು ವಿಜಯನಾಥ ಶೆಣೈರವರು. ೪೦ ವರುಷಗಳಿಂದ ಎಲ್ಲೂ ಅಲುಗದೆ, ತಾವಿದ್ದಲ್ಲೇ, ಏಕಾಗ್ರತೆಯಿಂದ ಸಾಂಸ್ಕೃತಿಕ ಸಮೂಹವನ್ನೇ ಕಟ್ಟಿ ನಿಲ್ಲಿಸಿದ ಮಾಂತ್ರಿಕ ಇವರು.
ಸಂಸ್ಥೆ, ಸರ್ಕಾರಗಳ ಹಂಗಿಲ್ಲದೇ ಏಕೈಕ ವ್ಯಕ್ತಿಯೊಬ್ಬ ಶ್ರದ್ಧೆ ಹಾಗೂ ಅದರ ಗೀಳಿನಿಂದ ಎಷ್ಟೆಲ್ಲಾ ಸಮರ್ಥವಾಗಿ ಅದನ್ನು ರೂಪಿಸಿದ್ದಾರೆ ಎಂಬುದನ್ನು ನೋಡಿಯೇ ತಿಳಿಯಬೇಕು. ಪುಂಗಿಯ ನಾದಕ್ಕೆ ಹಾವು ತಲೆಯೆತ್ತಿ ನಿಂತಂತೆ, ಒಂದೊಂದು ವಸ್ತುವೂ, ವಿಶಿಷ್ಟವಾಗಿ ಅವರ ಸಂಗ್ರಹದಲ್ಲಿ ಕಂಗೊಳಿಸಿ, ನಮ್ಮ ಹಳೆಯ ಜನರ ಕಲೆ ಹಾಗು ಜಾಣತನವನ್ನು ತಿಳಿಸುತ್ತವೆ. ಅವರ ತಾಳ್ಮೆಗೆ ಸಾಕ್ಷಿಯಾಗಿ ಅಚ್ಚುಕಟ್ಟಾಗಿ ನಿಂತಿವೆ. ವಿಜಯನಾಥ್ ಶೆಣೈರವರ ದೀರ್ಘ ತಪಸ್ಸಿನ ಫಲವಿದು.
ಮುರಿದ ಮನೆಗಳನ್ನು ಹಾಗೂ ನಿರ್ವಹಿಸಲಾರದ ಕಟ್ಟಡಗಳನ್ನು, ಜಾಗರೂಕತೆಯಿಂದ ವಹಿಸಿಕೊಂಡು, ಪರೀಕ್ಷಿಸಿ ಕಟ್ಟಡದ ನಾಡಿ ಮಿಡಿತ ಹಿಡಿದು, ಮುಂದಿನ ಕೆಲಸಕ್ಕೆ ಕೈ ಹಚ್ಚುತ್ತಿದ್ದರು. ಪರಿಣಿತ ವೈದ್ಯರಂತೆ ಸಹಾಯಕರೊಂದಿಗೆ ಅಳಿದ ಮನೆಗಳನ್ನು ಕರಾರುವಕ್ಕಾಗಿ ಜೋಡಿಸಿ, ಹತ್ತಾರು ಮನೆಗಳ ಗುಚ್ಚ ಇವರ ಕೈಯಲ್ಲಿ ಇನ್ನೂ ಸುಧಾರಣೆಗೊಂಡು, ಒಂದು ಊರಾಗಿ ಮಣಿಪಾಲದಲ್ಲಿ ಈಗ ನೆಲೆ ನಿಂತಿದೆ.
ಭಗೀರಥ ಪ್ರಯತ್ನ
ಆಸಕ್ತಿ ಹಾಗೂ ಪ್ರಯತ್ನಗಳು ಮನುಷ್ಯನ ಸಾಧ್ಯತೆಗಳನ್ನು ವಿಸ್ತರಿಸುತ್ತವೆ. ಕಾಡು ನಾಡಾಗುವುದು, ನಾಡು ಇದ್ದಲ್ಲೆ ನೀರಿನ ಬಾವಿ ಬಾಯಿತೆರೆಯುವುದು ಸಹಜವಾದರೂ, ಅನಿವಾರ್ಯತೆಯೆಂಬುದು ಗಂಗೆಯನ್ನು ಒಲಿಸಿ ಧರೆಗಿಳಿಸಿದ ಭಗೀರಥನ ಹಠಮಾರಿತನದ ಜೊತೆಗೆ ಪ್ರಾಮಾಣಿಕ ಪ್ರೀತಿಯೂ ಆಗಿರುತ್ತದೆ. ಪ್ರೀತಿಯಿಲ್ಲದಿದ್ದರೆ ಹೂ ಅರಳುವುದು ಸಾಧ್ಯವೇ? ಹಳೆಯ ಒಂದೊಂದೇ ಜಂತಿ, ಕಂಬ, ಕಿಟಕಿ, ಬಾಗಿಲು ಕಲಾತ್ಮಕ ವಸ್ತುಗಳು ಸಂಗ್ರಹವಾಗುತ್ತಾ ಹೋದ ಹಾಗೆ, ಈ ಭಗೀರಥನ ಅಂಗೈಯಲ್ಲಿ ಸ್ವಂತಕ್ಕೊಂದು ಕಲಾತ್ಮಕವಾದ ಸೂರು ಅರಳಿತು. ಹಾಗೆಯೆ ಹಣದ ಹೊರೆಯೂ ಅಳತೆ ಮೀರಿ ತಲೆಭಾರವಾಗಿತ್ತು. ಅಮೂಲ್ಯವಾದ ಕೃತಿಗೆ ನೋಡುಗರ ಹಾವಳಿಯು ಸಹಜವಾಯಿತು.
ಬದುಕು ಚಿಕ್ಕದಾಗುತ್ತ, ಬಂದ ಗಿಲೀಟಿನ ಸಾಮಾನುಗಳಿಂದ ಮನೆಗಳು ಬದಲಾಗುತ್ತಾ, ಮನೋಭಾವವೂ ಬದಲಾಗುತ್ತಾ, ಸತ್ತವರೊಂದಿಗೆ ಅವರ ವಸ್ತುಗಳು ಒಂದೊಂದೇ ಕಣ್ಮರೆಯಾಗಿ ಹೋಗುವಂತೆ, ಒಂದೊಂದೆ ಬಿದ್ದ ಮನೆಗಳ ಕೆತ್ತನೆಯ ಕಂಬಗಳು, ದಾರಂದ, ಮಾಡು ಮಣ್ಣಾಗತೊಡಗಿದವು. ಅಮೂಲ್ಯ ಹಸ್ತಶಿಲ್ಪಗಳು, ಕಲೆಗಳು ನಿರ್ಲಕ್ಷ್ಯದಿಂದ ಚದುರತೊಡಗಿದವು.
ಕೊನೆಗೆ ಭರಿಸಲಾರದ ಹೊಣೆಗಾರಿಕೆ, ಆಪ್ತರ ಮೆಚ್ಚುಗೆ, ಇನ್ನೂ ತಲೆಯಲ್ಲಿ ಉಳಿದುಹೋಗಿದ್ದ ಬೆಲೆಬಾಳುವ ವಸ್ತುಗಳು, ವಿಸ್ತಾರವಾದ ಬೇಡಿಕೆಯನ್ನು ಇಡುತ್ತಿದ್ದವು. ಹಳೆಯದೆಲ್ಲ ಬಿರುಗಾಳಿಗೆ ಮುಪ್ಪಿಡಿದು ಎದುರಾಗಿದ್ದವು. ಬಿಟ್ಟರೆ ಇವು ಕಣ್ಮರೆಯಾಗುತ್ತವಲ್ಲ! ಎನ್ನುವ ಸಂಕಟ ವಿಜಯನಾಥರ ಕಾಳಜಿಯಿಂದ ಹಸ್ತಶಿಲ್ಪ ಟ್ರಸ್ಟನ್ನು ಹುಟ್ಟು ಹಾಕಿತು. ಅವರು ಸ್ವಂತಕ್ಕಾಗಿ ಕಟ್ಟಿದ ಮನೆ ಅದರ ಕಾರ್ಯಾಗಾರವಾಯಿತು. ಸ್ನೇಹಿತರ ಒತ್ತಾಯದ ಮೇರೆಗೆ ಅವರೇ ಖರೀದಿಸಿದ
ಇನ್ನೊಂದು ಮನೆಗೆ ಸಂಸಾರ ನೆಲೆಯಾಯಿತು.
ಇಲ್ಲಿಂದ ಅವರು ತಮ್ಮ ಕನಸಿಗೆ ಸಂಪೂರ್ಣ ತೆರೆದುಕೊಂಡರು. ಇವರ ಕೆಲಸದ ಜೊತೆಗೆ ಆಸಕ್ತ ಹಣವಂತರು, ಆಸಕ್ತ ಸರ್ಕಾರಿ ಅಧಿಕಾರಿಗಳು, ಮಾಧ್ಯಮ ಮಿತ್ರರು, ಜೊತೆಯಾದರು. ಸರ್ಕಾರದ ಆರು ಎಕರೆ ಜಮೀನು ಮಂಜೂರಾಯಿತು. ಹೊರ ದೇಶದ ಸಂಸ್ಥೆಗಳ ನೆರವು ಸಿಕ್ಕಿತು. ಜಾಗರೂಕ ಮನಸ್ಸಿನ ಇವರು ಪಕ್ಕಾ ಲೆಕ್ಕಾಚಾರ ಹಾಗೂ ತಾಳ್ಮೆಯಿಂದ ವರುಷಗಟ್ಟಲೆ ಹಳೆಯ ಊರೊಂದನ್ನು ಕಟ್ಟಿದರು.
ದಾರಿ ತಿಳಿಯಬಾರದೆಂಬ ಉದ್ದೇಶದಿಂದ ಕಣ್ಣು ಕಟ್ಟಿ ಕರೆದುಕೊಂಡ ಹೋದ ಮನೆ ಮುರಿಯುವ ದಳ್ಳಾಳಿಗಳೊಂದಿಗೆ ಅಂಜದೇ ವ್ಯವಹರಿಸಿದರು. ನಿಜಾಮರ ಮಹಲ್ ಬಂದಿಳಿಯಿತು. ಹೊಳೆ ದಾಟಿ ಕೋವಿ ಹಿಡಿದೆ ಮಾತನ್ನಾಡುವ ಗೌಡರ ಮನೆ ತಲುಪಿದರು. ಅವರ ಮನೆಯ ಹೆಣ್ಣುಮಗಳ ಸಹಕಾರದಿಂದ ಆ ಮನೆ ಇಲ್ಲಿಗೆ ಗೌಡರ ಕೊಟ್ಟು ಮುರಿಯದಂತೆ ನೆಲೆ ನಿಂತಿತು. ಹೀಗೆ, ಸಾವಿರ ಮನೆಯ ಹಾದಿಗಳು ಸಾವಿರ ಕಥೆಗಳನ್ನು ಅವರೊಳಗೆ ಹರವಿ ಅವರೇ ಕಥಾನುಭವದ ಕಣಜವಾಗಿದ್ದರು. ಇತಿಹಾಸದ ತಿಳುವಳಿಕೆಯಲ್ಲಿ ಅವರೊಳಗೆ ಮುಖ್ಯ ಇಸವಿಗಳು ದಾಖಲಾಗಿದ್ದವು.
ಹೆಣ್ಣು ಮಕ್ಕಳ ಹಾಡು ಹಾಸುಹೊಕ್ಕಾಗಿದ್ದವು. ಶ್ಯಾನುಭೋಗರ ಮನೆಯ ವೀಣೆ ನುಡಿ, ಪಾದ್ರಿಗಳ ಪಿಯಾನೊ. ದಿವಾನರ ಮನೆಯ ನೃತ್ಯರಂಗದಲ್ಲಿ ಬೀಸುವ ಬೀಸಣಿಕೆಗಳು, ಯಂತ್ರ ಯುಗಕ್ಕೆ ಕಾಲಿಡುವ ಮುನ್ನಿನ ದಿನದ ತಂತ್ರಗಾರಿಕೆಯನ್ನು ಪರಿಚಯಿಸುತ್ತವೆ. ಒಂದೇ ಎರಡೆ ಸಾವಿರ ಸಾವಿರ ಸಂಗ್ರಹಗಳು ಇವರ ಮ್ಯೂಸಿಯ್ಂನಲ್ಲಿವೆ. ಸರ್ಕಾರದ ಇಲಾಖೆಗಳು ನಿಭಾಯಿಸಲಾರದ ಹೊಣೆಗಾರಿಕೆ, ಒಬ್ಬರ ನೇತೃತ್ವದಲ್ಲಿ ಹೇಗೆ ಸಂಗ್ರಹದ ಅರ್ಥವನ್ನು ಪಡೆಯುತ್ತವೆ ಅನ್ನುವುದನ್ನು ಅವರು ನಿರ್ಮಿಸಿರುವ ಹೆರಿಟೇಜ್ ವಿಲೇಜನ್ನು ನೋಡಿಯೇ ತಿಳಿಯಬೇಕಾದ ಸಂಗತಿ.
೧೯ನೆ ಶತಮಾನದ ವೈವಿಧ್ಯ ದಾಖಲೆಗಳು
ಆ ಕಾಲದಲ್ಲಿ ನೆಲೆಯಾಗಿದ್ದ ಊರ ಪ್ರಮುಖರಿಗೆ ಸಮೃದ್ಧಿಯಾದ ನೀರಾವರಿ ಭೂಮಿಯ ಒಡೆತನವಿರುತಿತ್ತು. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ ಸಮುದಾಯಗಳಿಗೆ, ಶಾನುಭೋಗರಿಗೆ, ಕೊಡವ ಜನಾಂಗದ ಪ್ರಮುಖರಿಗೆ, ಮಲೆನಾಡ ಗೌಡರಿಗೆ, ಬಯಲು ಸೀಮೆಯ ಸಾಹುಕಾರರಿಗೆ, ಬಲವಾದ ಹಣದ ಒರತೆಯಿರುತಿತ್ತು. ನೀರಿರುವೆಡೆಯಲ್ಲಿ ಜೀವಜಾಲದ ಉಗಮದಂತೆ, ಸಾಮಾಜಿಕ, ಸಾಂಸ್ಕೃತಿಕ ಲೋಕವೊಂದು ಹಣದ ಸುತ್ತ ಕಣ್ತೆರೆದುಕೊಳ್ಳುತಿತ್ತು. ಅವರ ದೈವಗಳಿಗೂ ಬೆಡಗು ತುಂಬಿ ಸಂಪ್ರದಾಯದ ನಡಾವಳಿಗಳು ನಿಯಮಗಳು ಆ ಸಮುದಾಯವನ್ನು ಅಲ್ಲಿನ ಪ್ರದೇಶವನ್ನು ಬೇರ್ಪಡಿಸುತ್ತಿದ್ದವು.
ಮನೆಯೊಳಗಿನ ಸಮೃದ್ಧಿ, ಸರಳವಾದ ರೈತನ ಬದುಕಿನಿಂದಾಚೆಗೆ ಇನ್ನೇನೋ ಬೇಡಿಕೆಗಳು, ಈ ವಿಸ್ತಾರವಾದ ಮನೆಗಳಿಗೆ ಕಾರಣವಾಗಿವೆ. ಹಾಗೆಯೆ ಒಂದೊಂದು ಸೀಮಿತ ಪ್ರದೇಶಕ್ಕೆ ಅವರೇ ರಾಜರಂತೆ ಇರುತ್ತಿದ್ದ ಕಾರಣ ಅವರ ನೆಂಟಸ್ತಿಕೆಗೆ ತೂಗುವ ಇನ್ನೊಂದು ಗಟ್ಟಿ ಕುಳವನ್ನು ಹಿಡಿಯಲು ಕೂಡ ಮನೆಮಾರು ಆಕರ್ಷಣೆಯಾಗಿದ್ದವು. ಸಾಮಾಜಿಕ ಚೌಕಟ್ಟಿನಲ್ಲಿ ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತಿದ್ದವು.ಇಂಥ ಸಾಂಪ್ರದಾಯಿಕ ಮನೆಗಳು ಪುನರ್ರಚನೆಯಾಗಿ ಅಂದಿನ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತವೆ. ವಿಜಯನಾಥರು ಕಣ್ಣಿಗೆ ಕಟ್ಟಿಕೊಡುವ ಕಾವ್ಯವಿದು.
ಎಲ್ಲೆಲ್ಲಿಂದಲೋ ಬಂದು ತಳವೂರಿರುವ ಭಂಟರ ಹಂಗರಕಟ್ಟೆ ಬಾಣಸಾಲೆ ಮನೆಗಳು. ಬೈಂದೂರು ನೆಲ್ಲ್ಯಾಡಿ ಮನೆ. ಕುಂಜೂರು ಚೌಕಿ ಮನೆ, ಹರ್ಕೂರು ಒಳಗಿನ ಮನೆ. ಶೃಂಗೇರಿ ಮನೆ, ಮಂಗಳೂರು ಕ್ರಿಶ್ಚಿಯನ್ ಹೌಸ್, ಜಂಗಮ ಮಠ, ಭಟ್ಕಳದ ಮುಸ್ಲಿಮ್ ಮನೆ, ವಿದ್ಯಾ ಮಂದಿರ, ಹೀಗೆ ವೈವಿಧ್ಯ ಮನೆಗಳು ಬೀಡುಬಿಟ್ಟಿವೆ. ಅದರ ಜೊತೆಯಲ್ಲಿ ಅಲ್ಲಿಯ ಜನರ ವಿಧವಿಧವಾದ ಕೈ ಕುಸುರಿಯ ಕಾಣ್ಕೆಗಳು, ಅವರ ವ್ಯವಹಾರಿಕ ಜಗತ್ತು ಕಣ್ತೆರೆದಿವೆ. ಅಂದಿನ ಹಳ್ಳಿ ರಸ್ತೆಗಳು ವ್ಯಾಪಾರ ಸಾಪಾರದ ಬೀದಿಗಳು, ಮಾರುಕಟ್ಟೆ, ಹೀಗೆ.. ರಾಜರ ಕಾಲದ, ಬ್ರಿಟೀಷರ, ಮುಸ್ಲಿಮ್ ನವಾಬರ, ಸ್ಥಳದ ಶ್ರೀಮಂತರ ವೈವಿಧ್ಯತೆಯನ್ನು ಇಲ್ಲಿ ನೋಡಿಯೇ ತಿಳಿಯಬೇಕು.
ವೈಭವದ ದಾಖಲೆಗಳು
ಕೇವಲ ಜಮೀನ್ದಾರರು, ವ್ಯವಹಾರಸ್ಥರ ವಾಸಸ್ಥಳಗಳ ಮೇಲ್ಮಟ್ಟದಲ್ಲಿರುವಾಗ, ಇನ್ನು ನಾಡೇ ನಡು ಹಿಡಿದು ಬಗ್ಗುವ ರಾಜರ ಮನೆಗಳಲ್ಲಿನ ಮರದ ಕೆತ್ತನೆಯ ಕಾಷ್ಠ ಶಿಲ್ಪದ ವೈಭೋಗ ಹೇಗಿದ್ದೀತು? ಜಗತ್ತಿನ ಸೌಂದರ್ಯ ಕಲಾಕಾರರ ಕೈಯಲ್ಲಿ ಅರಮನೆಗಳೊಳಗೆ ಇಳಿದು ಬಂದು ಎರಕ ಹೊಯ್ದು ಅಚ್ಚೊತ್ತಿವೆ. ಕುಕುನೂರಿನ ಕಮಲ ಮಹಲ್, ದೆಕ್ಕನಿಯ ನವಾಬರ ಮನೆ. ಮುಧೋಳದರಮನೆಯ ದರ್ಬಾರ ಹಾಲ್ ಗಳು ಮರುರೂಪ ಪಡೆದು ಸಮಾಧಾನದ ನಿಟ್ಟುಸಿರಿಟ್ಟಿವೆ.
ತಂಜಾವೂರಿನ ಅಮೂಲ್ಯ ಕಲಾಕೃತಿಗಳಂತೂ ಬೆಲೆ ಮರೆತು ಶಿಸ್ತಾಗಿ ವಸ್ತುಪ್ರದರ್ಶನಕ್ಕೆ ಮುಕ್ತವಾಗಿವೆ. ರಾಜಾ ರವಿ ವರ್ಮರ ಕಲ್ಲಚ್ಚುಗಳು,ಉಳಿದುಹೋದ ಬಣ್ಣದ ಪುಡಿ ಸಮೇತ ಬಂದಿಲ್ಲಿ ನೋಡುಗರ ಜೊತೆ ಮಾತಿಗಿಳಿದಿವೆ. ಕಿನ್ನಾಳದ ಕಲಾಕೃತಿಗಳು, ಮಣ್ಣಿನ ಮರದ ಗೊಂಬೆಗಳು, ಗಂಜೀಫ ಕಲಾಕೃತಿಗಳು, ತೊಗಲು ಗೊಂಬೆಗಳು, ಎಲ್ಲ ನೆಲಮೂಲದ ನಂಬಿಕೆಗಳೊಂದಿಗೆ ಮಿಳಿತಗೊಂಡು ಅದಕ್ಕೆ ಬೇಕಾದ ನೆಲೆಯಲ್ಲಿಯೇ ನೈಜವಾಗಿ ತೋರುತ್ತವೆ. ಇಂಥ ಕಲಾ ಪ್ರದರ್ಶನವೊಂದು ಶೆಣೈರವರ ಮೇಲ್ವಿಚಾರಣೆಯಲ್ಲಿ, ಅವರೇ ರೂಪಿಸಿರುವ ಶಿಸ್ತಿನ ಯುವ ಪಡೆಯ ಜೊತೆಗೆ ಸಾರ್ವಜನಿಕರಿಗೆ ತೆರೆದುಕೊಂಡಿದೆ.
ಬೆಲೆಕಟ್ಟಲಾಗದ ಸಂಗ್ರಹವನ್ನು ಇವರು ಹೊತ್ತು ತರುವಾಗ ಚಾಲ್ತಿಯಲ್ಲಿದ್ದ ಒಂದು ಮಾತು. ಜಾನಪದ ಲೊಕದ ನಾಗೇಗೌಡರು ಸಂಗ್ರಹಕ್ಕೆ ಹೋಗಿದ್ದರಂತೆ. ಆಗ ಅಲ್ಲಿನ ಜನ ಹೇಳಿದರಂತೆ. ವಿಜಯನಾಥರು ಒಂದು ಕತ್ತೆಯಿದ್ದಂತೆ. ಅವರು ಬಂದು ಹೋದ ಮೇಲೆ ನಿಮಗೆ ಏನೂ ಉಳಿದಿರುವುದಿಲ್ಲ ಎಂದು. ಅಂದು ಹೆಕ್ಕಿ ತಂದ ಆಸ್ತಿ ಇಂದು ಬೆಲೆ ಕಟ್ಟಲಾರದ್ದಾಗಿದೆ.
ಇಲ್ಲಿಗೆ ಬಂದು ಹೊರದೇಶದ ವಿಧ್ಯಾರ್ಥಿಗಳು ಸಂಶೋಧನೆ ನಡೆಸಿ ಹೋಗಿದ್ದಾರೆ. ಇದು ಜಾನಪದ ಕಲೆಗಳ ಸಂಗ್ರಹವಾಗಿ ದೇಶದಲ್ಲಿ ಹಾಗೂ ಹೊರದೇಶದಲ್ಲಿ ಕಲೆ ಹಾಗೂ ಗುಣಮಟ್ಟದಲ್ಲಿ ಕಲಾವಿದರನ್ನು ಸೆಳೆದಿದೆ. ಈಗ ಸಾರ್ವಜನಿಕರ ಸರದಿ. ಇದು ಮಣಿಪಾಲದಲ್ಲಿದೆ. ‘ಹೆರಿಟೇಜ್ ವಿಲ್ಲೇಜ್’ ಎಂದು ಹೆಸರಾಗಿದೆ. ಸರ್ಕಾರದಿಂದ ಕೊಟ್ಟ ಭೂಮಿಯಲ್ಲಿ ಇದರ ವಾಸ್ತವ್ಯ. ಇದು ಹೊರದೇಶದ ಸಂಸ್ಥೆಗಳ ನೆರವು ಹಾಗೂ ನಿರಂತರ ಸಂಪರ್ಕದಿಂದ, ಆಸಕ್ತರ ಒಲವಿಂದ ೧೯೭೬ರಿಂದ ರೂಪುಗೊಂಡು ಇಂದಿನವರೆಗೂ ವಿಸ್ತರಣೆಯಾಗುತ್ತಲೇ ಇತ್ತು. ಈಗ ನಾಲ್ಕು ವರುಷಗಳಿಂದ ಪ್ರಾಯೋಗಿಕವಾಗಿ ೫೦೦ ರೂ.ಪ್ರವೇಶ ಶುಲ್ಕದೊಂದಿಗೆ ಇದು ಸಾರ್ವಜನಕರಿಗೆ ತೆರೆದುಕೊಂಡಿದೆ.
ಜಗತ್ತಿನ ಸೌಂದರ್ಯ ಕಲಾಕಾರರ ಕೈಯಲ್ಲಿ ಅರಮನೆಗಳೊಳಗೆ ಇಳಿದು ಬಂದು ಎರಕ ಹೊಯ್ದು ಅಚ್ಚೊತ್ತಿವೆ. ಕುಕುನೂರಿನ ಕಮಲ ಮಹಲ್, ದೆಕ್ಕನಿಯ ನವಾಬರ ಮನೆ. ಮುಧೋಳದರಮನೆಯ ದರ್ಬಾರ ಹಾಲ್ ಗಳು ಮರುರೂಪ ಪಡೆದು ಸಮಾಧಾನದ ನಿಟ್ಟುಸಿರಿಟ್ಟಿವೆ.
ವಿಜಯನಾಥರು ಇದ್ದಾಗ ನಾನು ವಾಸ್ತುಶಿಲ್ಪದ ಆಸಕ್ತಿಯಿಂದ ಆಗಾಗ ಅಲ್ಲಿಗೆ ಹೋಗುತ್ತಿದ್ದೆ. ಅವರೊಂದಿಗೆ ಎರಡು ಮೂರು ದಿನವಿದ್ದು ಬರುವುದಿತ್ತು. ಹೆರಿಟೇಜ್ ವಿಲೇಜ್ ನಲ್ಲಿ ಅವರ ಮನೆಗಳ ಪ್ರಾಂಗಣದಲ್ಲಿ ಆರಾಮ ಖುರ್ಚಿಯಲ್ಲಿ ಕುಳಿತು ಎಲ್ಲಿದ್ದೀರಿ ಎಂದು ಆಗಾಗ ವಿಚಾರಿಸಿಕೊಳ್ಳುತ್ತ ನಮ್ಮ ಬರುವನ್ನು ಮನೆ ಹಿರಿಯರಂತೆ ಕಾಯುತ್ತಾ ಕುಳಿತಿರುತ್ತಿದ್ದ ಆ ನೋಟ ಇಂದೂ ಹಾಗೇ ಉಳಿದಿದೆ. ಅವರು ತಮ್ಮ ಸಣ್ಣ ಸಣ್ಣ ವಾಸ್ತುಶಿಲ್ಪಗಳನ್ನು ತೋರಿಸುತ್ತ ಬೆಳಿಗ್ಗಿನಿಂದ ಸಂಜೆವರೆಗೂ ಹಂಚಿಕೊಳ್ಳುತ್ತಿದ್ದ ಅನೇಕ ವಿವರಗಳು, ಅಂತರಾಳದ ಮಾತುಗಳು ಮನದಲ್ಲುಳಿದಿವೆ. ಇಂಥ ಕನಸುಗಾರರು ಅಕ್ಕರೆಯಿಂದ ಊಟ ತಿಂಡಿ ಕೊಡಿಸುವಾಗ ಅವರು ಮಧ್ಯಾಹ್ನದಲ್ಲಿ ಒಂದು ಕಾಫಿಯನ್ನಷ್ಟೆ ಕುಡಿಯುತ್ತಿದ್ದರು. ನೀವು ಚಿಕ್ಕವರು ಹೊಟ್ಟೆ ತುಂಬ ಊಟ ಮಾಡಬೇಕು, ನಾವು ಲಿಮಿಟ್ ಮೀರಿ ತಿನ್ನಬಾರದು ಎನ್ನುತ್ತಿದ್ದುದು, ಇಂದಿಗೂ ಮನದಲ್ಲಿ ಹಾಗೇ ಉಳಿದಿದೆ. ಹಾಗೇ ಒಂದೆರಡು ಕುತೂಹಲದ ಪ್ರಶ್ನೆಗೆ ಒಮ್ಮೆ ಹೀಗೆ ಉತ್ತರಿಸಿದ್ದರು.
ತಾವು ಹೇಗೆ ಈ ಕನಸಿಗೆ ರೂಪ ಕೊಟ್ಟಿರಿ? ಹಾಗೂ ಇದರ ಹಿನ್ನೆಲೆ?
ನನಗೆ ಮುಖ್ಯವಾಗಿ ಸಣ್ಣ ಪ್ರಾಯದಿಂದಲೆ ಪರಂಪರೆಗೆ ಸೇರಿದ ಕಲಾಪ್ರಕಾರಗಳ ಬಗೆಗೆ ಬಹಳಷ್ಟು ಅಭಿಮಾನ. ನಾನು ೧೯೬೦ ರಲ್ಲಿ ಬ್ಯಾಂಕಿಗೆ ಸೇರಿಕೊಂಡೆ. ಅಲ್ಲಿ ರಜೆಗಳು ಹೆಚ್ಚು. ಬಿಡುವಿನ ವೇಳೆಯಲ್ಲಿ ಈ ಮನೆಗಳನ್ನು ನೋಡಲು ಹೋಗುತ್ತಿದ್ದೆ. ಖಾಲಿಯಿರುತ್ತಿದ್ದ ನನ್ನ ಕಣ್ಣು ಹಾಗೂ ಮನಸ್ಸನ್ನು ತುಂಬಿಕೊಳ್ಳಲು ಹೋಗುತ್ತಿದ್ದೆ. ಆ ಸಮಯದಲ್ಲಿ ಭೂ ಮಸೂದೆ ಕಾನೂನು ಜಾರಿಯಾಗಿತ್ತು. ಉಳುವವರೇ ಭೂಮಿಯ ಒಡೆಯರಾದರು. ಭೂ ಮಾಲಿಕರಿಗೆ ದೊಡ್ಡ ಮನೆಗಳು ಉಳಿದವು. ಗೇಣಿ ವಕ್ಕಲಿಗರಿಗೆ ಭೂಮಿ ಹೋಯಿತು. ಅವಿಭಕ್ತ ಕುಟುಂಬಗಳು ಪಾಲಾದವು. ಊರಿನ ಯುವಕರು ವಿಧ್ಯಾಭ್ಯಾಸದ ಅನುಸಾರ ನಗರಗಳಿಗೆ ಹೋದರು.
ಇದರಿಂದ ದೊಡ್ಡ ಮನೆಗಳನ್ನು ನಿರ್ವಹಿಸಲಾರದೆ ಒಡೆದು ಹಾಕಲು ಶುರು ಮಾಡಿದರು. ಅಮೂಲ್ಯವಾದ ಕೆತ್ತನೆಗಳು ಕೆಲವು ಪೀಠೋಪಕರಣವಾದರೆ ಕೆಲವನ್ನು ಒಲೆಗೆ ಹಾಕುತ್ತಿದ್ದರು. ನಾನು ಅದನ್ನು ಕೊಂಡೊಯ್ದು ಒಂದೊಂದನ್ನು ಜೋಡಿಸಿ ಮನೆ ಮಾಡಿದೆ. ಇದನ್ನು ನೋಡಲು ಬರುವ ಜನಸಾಗರವನ್ನು ನಾನು ನೋಡಿ ದಂಗಾದೆ. ದೇಶಾದ್ಯಂತ ಬಂದ ಜನರು ಯಾರಾದರು ಆಗಬಹುದು, ಆಟೋ ಡ್ರೈವರ್ ಇರಲಿ, ಡಿ.ಸಿ. ಇರಲಿ ಮಾಧ್ಯಮದವರು, ಅವರ ಎದೆಯೊಳಗಿನ ಆಸಕ್ತಿಯನ್ನು ನೋಡಿ ನಮ್ಮ ಹಿಂದಿನ ಕಲೆಯಲ್ಲಿ ಎಂಥ ದ್ರವ ಉಂಟು ಎಂದು ಹೇಳಿ ಸಂಗ್ರಹ ಶುರು ಮಾಡಿದೆ. ಮನೆ ಮಠ, ಮಂದಿರ ಹಾಗು ಯಾವುದೇ ಕಟ್ಟಡ ನೆಲಸಮವಾದರೂ ಅದನ್ನು ಸಂಗ್ರಹಿಸಿದೆ.
೨೬ ಕಟ್ಟಡಗಳು ಬಂದಿಳಿದವು. ಇದನ್ನು ನೋಡಿ ಕರ್ನಾಟಕ ಸರ್ಕಾರದ ಅಂದಿನ ಡಿ.ಸಿ.ಯವರು, ಇವರು ಏನೋ ಮಾಡಬಲ್ಲರೆಂದು ನಮಗೆ ಆರು ಎಕರೆ ಜಮೀನು ಕೊಟ್ಟರು. ಜೊತೆಗೆ ಆಸಕ್ತ ಶ್ರೀಮಂತರೂ ನಮಗೆ ಸಹಾಯ ಮಾಡಿದರು. ನಾನು ನನ್ನದೇ ರೀತಿಯಲ್ಲಿ ಪಾರಂಪರಿಕ ಮನೆಗಳನ್ನು ನಿರ್ಮಾಣ ಮಾಡಿದೆ. ನೂರಾರು ಮನೆಗಳನ್ನು ನೋಡಿದ ಅನುಭವ ನನಗೆ ಇಲ್ಲಿ ಸಹಾಯಕ್ಕೆ ಬಂತು.
ಇದಕ್ಕೂ ಮೊದಲು ಉಡುಪಿಯಲ್ಲಿ ಶಾಸ್ತ್ರಿಯ ಸಂಗೀತ ಸಭಾ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದೆ. ಭಾರತದ ದಿಗ್ಗಜರಾದ ಎಮ್.ಎಸ್.ಸುಬ್ಬುಲಕ್ಶ್ಮಿ, ಬಿಸ್ಮಿಲ್ಲಾ ಖಾನ್, ಪಂಡಿತ್ ರವಿಶಂಕರ್, ವಸಂತ್ ಕುಮಾರಿ, ಅಲಿ ಅಕ್ಬರ್ ಖಾನ್… ಹೀಗೆ ಎಲ್ಲರು ಉಡುಪಿ ಹಾಗೂ ಮಣಿಪಾಲದಲ್ಲಿ ಸಂಗೀತದ ಹೊನಲು ಹರಿಸಿ ಹೋದರು. ಜೊತೆಗೆ ಹಗಲು ಹೊತ್ತಿನಲ್ಲಿ ಯಕ್ಷಗಾನ, ತಾಳಮದ್ದಳೆ ಕಲಾಪ್ರಕಾರಗಳನ್ನು ನಡೆಸಿದೆವು. ಜೊತೆಗೆ ರೈಟರ್ಸ್ ಕ್ಲಬ್ ಮೂಲಕ ಪ್ರತಿವಾರ ಗಹನ ಚಿಂತನೆ ನಡೆಸುತ್ತಿದ್ದೆವು. ಎಲ್ಲದಕ್ಕೂ ಅಡಿಗರು ಅಧ್ಯಕ್ಷರಾಗಿರುತ್ತಿದ್ದರು. ಇದರಿಂದ ದೊಡ್ದ ದೊಡ್ದ ಸಾಹಿತಿಗಳ ಒಡನಾಟವೂ ನಮಗೆ ಆಯಿತು. ಇಂಥ ಅನುಭವ ಕೂಡ ನನಗೆ ಆಗ ಉಪಯುಕ್ತವಾಗಿದ್ದವು.
ಮುಂದಿನ ನಡೆ ಹೇಗಿರಬೇಕು? ಅದರ ಸಾಧ್ಯತೆಗಳೇನು?
ಹಸ್ತಶಿಲ್ಪ ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಸಂಸ್ಥಾಪಕ ನಾನಾಗಿದ್ದೇನೆ. ಇದರ ಕಡು ವ್ಯಾಮೋಹ ಇದ್ದ ಆಸಕ್ತರು ನಮ್ಮ ಟ್ರಸ್ಟಿನಲ್ಲಿ ಇದ್ದಾರೆ. ಇದು ಪಬ್ಲಿಕ್ ಪ್ರಾಪರ್ಟಿ. ಸ್ವಂತದ್ದಲ್ಲ. ಎಂಟು ಹತ್ತು ಮಂದಿಯನ್ನು ಸೇರಿಸಿದ್ದೇನೆ. ಖಾಸಗಿ ಸೊತ್ತಾಗಬಾರದು. ಟ್ರಸ್ಟ್ ಮೂಲಕವೇ ಮುಂದುವರೆಯಬೇಕು. ಭರವಸೆ ಇದೆ. ಆನ್ ಲೈನ್ ನಲ್ಲಿ ಟಿಕೆಟ್ ಗೆ ತುಂಬಾ ಬೇಡಿಕೆ ಇದೆ. ಅದು ಇದರ ನಿರ್ವಹಣೆಗೆ ಬೇಕೇ ಬೇಕು. ಕೆಲವರು ನೋಡಿ ಕೇಳದೆ ಲಕ್ಷಗಟ್ಟಳೆ ಸಹಾಯ ಮಾಡಿದ್ದಾರೆ. ಇಷ್ಟು ವರ್ಷ ಒಂದು ಒಳ್ಳೆ ಸಂಕಲ್ಪದಿಂದ ನಡೆದುಕೊಂಡು ಹೋಗಿದೆ. ಮುಂದೆಯೂ ಹೀಗೆ ನಡೆದುಕೊಂಡು ಹೋಗುತ್ತದೆ.
ವಿಜಯನಾಥ್ ಅವರ ಈ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ, ಸೌಥ್ ಏಶಿಯಾ ಟ್ರಾವೆಲ್ ಟೂರಿಸಂ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು, ಮಾನ್ಯತೆಗಳು ದೊರೆತಿವೆ. ಅಲ್ಲದೇ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪಡೆದುಕೊಂಡ ಇವರ ಉಪನ್ಯಾಸಗಳು ದೇಶ ವಿದೇಶಗಳಲ್ಲಿ ನಡೆದಿವೆ.
ಅವರೀಗ ಈ ಲೋಕದಲ್ಲಿ ಇಲ್ಲದಿದ್ದರೂ ಅವರು ಕಟ್ಟಿ ಹೋದ ನಮ್ಮದೇ ನೆಲದ ವಾಸ್ತುಶಿಲ್ಪದ ಲೋಕದ ಊರೊಂದು ಕನಸಿನಂತೆ ನಮ್ಮೊಂದಿಗೆ ಇಲ್ಲಿ ಉಳಿದು ಹೋಗಿದೆ. ಅದನ್ನು ಕಾಪಾಡುವವರು ಅವರ ಕೈಲಿ ಪಳಗಿದ ಸಮರ್ಥ ಆಸಕ್ತರೇ ಆಗಿದ್ದಾರೆ.
ಲೇಖಕಿ ಮತ್ತು ಅಂಕಣಗಾರ್ತಿ. ಇವರ ಇತ್ತೀಚೆಗಿನ ‘ನೀಲಿ ಮೂಗಿನ ನತ್ತು’ ಕೃತಿ ಅಮ್ಮ ಪ್ರಶಸ್ತಿ ಪಡೆದಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಪಠ್ಯಪುಸ್ತಕದಲ್ಲೂ ಸೇರಿದೆ. ಮಕ್ಕಳ ರಂಗಭೂಮಿ ಮತ್ತು ಪತ್ರಿಕೋದ್ಯಮದ ಅನುಭವವೂ ಇದೆ.