ತಾಯಿ ಎನ್ನುವವಳು ತನ್ನ ಮಕ್ಕಳಿಗಾಗಿ ದೈತ್ಯ ಶಕ್ತಿಯೇ ಆಗಿಬಿಡುತ್ತಾಳೆ. ತನ್ನ ಮಕ್ಕಳ ಸುಖಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಆದರೆ ಅದೇ ಸಮಯ ಅದಕ್ಕೆ ಅಪವಾದ ಎನಿಸುವಂತಹ ತಾಯಂದಿರೂ ಸಿಕ್ಕಿಬಿಡುತ್ತಾರೆ. ಅಂಥಹಾ ಕೆಲವರನ್ನು ಬದಿಗಿಟ್ಟು ನೋಡುವುದಾದರೆ ನಾವೆಲ್ಲ ತಾಯಂದಿರೂ ಒಂದೇ. ನಮ್ಮದು ತಾಯಿಜಾತಿ. ನಮ್ಮೆಲ್ಲರ ಬಾಹ್ಯರೂಪ, ಅಂತಸ್ತು, ಸಾಮಾಜಿಕ ಜಾತಿ, ಧರ್ಮ…. ಇತ್ಯಾದಿ ಭೇದಗಳು ನಮ್ಮನ್ನು ಬೇರ್ಪಡಿಸಲು ಪ್ರಯತ್ನಿಸಬಹುದು. ಆದರೆ ನಮ್ಮ ನೋವು, ಸಂಕಟ, ಕಾಳಜಿ, ಕಕ್ಕುಲಾತಿ, ಮಮತೆ, ಪ್ರೀತಿ, ಖುಷಿ, ತ್ಯಾಗ, ಸಿಟ್ಟು… ಎಲ್ಲವೂ ಒಂದೇ. ಹಾಗಾಗಿ ನಾವೆಲ್ಲ ಒಂದೇ ಎನ್ನುವ ಭಾವ ನಮ್ಮಲ್ಲಿ ಮೂಡಿಯೇ ಬಿಡುತ್ತದೆ.
ಆಶಾ ಜಗದೀಶ್ ಅಂಕಣ
ಆ ತಾಯಿ, ಮಗಳ ಟಿಸಿ ಗಾಗಿ ಬಂದಿದ್ದಳು. ಮಗಳ ಮುಂದಿನ ಓದು ಮತ್ತು ಭವಿಷ್ಯದ ಬಗ್ಗೆ ವಿಪರೀತ ಕಾಳಜಿಯಿಂದ ಮಾತಾಡುತ್ತಿದ್ದಳು. ಶಿಕ್ಷಕರಿಂದಲೂ ಒಳ್ಳೆಯ ಮಾತು ಹೇಳಿಸಿ ಮತ್ತಷ್ಟು ಜವಾಬ್ದಾರಿ ತೆಗೆದುಕೊಳ್ಳುವಂತೆಯೂ ಓದಿನಲ್ಲಿ ಶ್ರದ್ಧೆ ವಹಿಸುವಂತೆಯೂ ಮಗಳಿಗೆ ಬುದ್ಧಿ ಮಾತು ಹೇಳುತ್ತಿದ್ದಳು. “ನೋಡು ನೀನು ಯಾವುದರ ಬಗ್ಗೆಯೂ ತಲೆ ಕೆಡ್ಸ್ಕೋ ಬೇಡ, ಮನೆ ಪರಿಸ್ಥಿತಿನೂ ಯೋಚಿಸ್ಬೇಡ. ನಾನು ಹೇಗಾದ್ರೂ ಸರಿ ಕಷ್ಟ ಪಟ್ಟು ದುಡೀತೀನಿ ನಿನ್ನ ಓದಿಸ್ತೀನಿ” ಅಂತ ಅವಳಲ್ಲಿ ಧೈರ್ಯ ತುಂಬುತ್ತಿದ್ದಳು. ಅವಳ ಗಂಡ ಕುಡುಕ, ಬೇಜವಾಬ್ದಾರಿ, ನಯಾ ಪೈಸಾ ದುಡಿಯದವ. ಸಾಲದ್ದಕ್ಕೆ ಇವಳ ದುಡಿಮೆಯಲ್ಲೇ ಕುಡಿದು ತಿಂದು ಬದುಕುವವ. ಇಂಥ ಗಂಡನನ್ನು ಸಾಕುತ್ತಾ ಮಗಳ ಬಗ್ಗೆ ಅವಳಾಡುತ್ತಿರುವ ಮಾತು ಕೇಳಿ ನಮಗೆಲ್ಲ ಸುಸ್ತಾಗಿತ್ತು.
ಇದೇನು ಮೊದಲ ಬಾರಿಯೇನಲ್ಲ. ನಮ್ಮ ಹಳ್ಳಿಗಳಲ್ಲಿ ಇಂತಹ ಅದೆಷ್ಟೋ ಧೀಮಂತ ತಾಯಂದಿರನ್ನು ಕಾಣುತ್ತಿರುತ್ತೇವೆ. ಮಕ್ಕಳಿಗೆ ಜನ್ಮ ಕೊಟ್ಟರಾಯಿತು ಅವರ ಅಗತ್ಯಗಳಿಗೆ ಕುರುಡಾಗಿ ಬದುಕುವ ಅದೆಷ್ಟೋ ತಂದೆಯಂದಿರನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ. ಆದರೆ ಅವಳು ತನ್ನ ಮಗಳಲ್ಲಿ ಭವಿಷ್ಯದ ಕನಸುಗಳನ್ನು ತುಂಬುತ್ತಿರುವ ರೀತಿಯನ್ನು ಕಂಡು ಖುಷಿಯಾಗುತ್ತಿತ್ತು. ನನಗೂ ಇಂತಹುದೇ ತಾಯಿ ಇದ್ದಾರೆ. ಒಂದು ಕ್ಷಣ ನನ್ನಮ್ಮನೇ ಎದುರು ನಿಂತಿರುವಂತೆ ಭಾಸವಾಯಿತು.
ಇನ್ನೊಂದು ಘಟನೆ. ನಮ್ಮ ಶಾಲೆಯಲ್ಲಿ ಒಂದು ಮಗು ಇದೆ. ಅದೀಗ ಆರನೇ ತರಗತಿ ಓದುತ್ತಿದೆ. ಅವಳಿಗೊಬ್ಬ ಅಕ್ಕ ಮತ್ತು ತಂಗಿಯೂ ಇದ್ದಾರೆ. ಆ ಮಗುವಿನ ತಂದೆ ಬಹಳ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ತೀರಿ ಹೋದರಂತೆ. ತಂದೆ ತೀರಿಹೋದ ಆರು ತಿಂಗಳೊಳಗಾಗಿ ಈ ಮಕ್ಕಳ ತಾಯಿ ಬೇರೊಬ್ಬನೊಂದಿಗೆ ಈ ಮಕ್ಕಳನ್ನು ತವರಿನಲ್ಲಿಯೇ ಬಿಟ್ಟು ಓಡಿಹೋದಳಂತೆ. ಇವಳ ಅಕ್ಕ ಮಾವನ ಮನೆಯಲ್ಲಿದ್ದಾಳಂತೆ. ಇವಳು ಅಜ್ಜಿಯ ಮನೆಯಲ್ಲಿದ್ದಾಳೆ. ತಂಗಿ ಮತ್ಯಾರದೋ ಮನೆಯಲ್ಲಿದ್ದಾಳಂತೆ. ಅವಳ ಬಳಿ ಪೆನ್ನಿದ್ದರೆ ಪುಸ್ತಕ ಇರುವುದಿಲ್ಲ. ಪುಸ್ತಕ ಇದ್ದರೆ ಪೆನ್ನಿರುವುದಿಲ್ಲ. ಕೇಳಿದರೆ ಕೊಡಿಸಿಲ್ಲ, ಕೊಡಿಸಲು ಅವಳ ಅಜ್ಜಿಯ ಬಳಿ ದುಡ್ಡಿಲ್ಲ ಎನ್ನುತ್ತಾಳೆ. ನಮಗೆ ತಿಳಿದಂತೆ ಅವಳ ಅಜ್ಜಿ ಮನೆಯ ಆರ್ಥಿಕ ಪರಿಸ್ಥಿತಿಯೂ ಸರಿ ಇಲ್ಲ. ಇತರೆ ಮಕ್ಕಳು ಅವಳೊಂದಿಗೆ ಆಗಾಗ ಕೆಟ್ಟದಾಗಿ ವರ್ತಿಸುತ್ತಿರುತ್ತಾರೆ (ಬಲಹೀನರನ್ನು ಶೋಶಿಸುವ ಮನಸ್ಥಿತಿ ಅದು ಹೇಗೆ ಅದೂ ಸಣ್ಣ ವಯಸ್ಸಿನಲ್ಲಿಯೇ ಮೈಗೂಡುತ್ತದೋ ಗೊತ್ತಿಲ್ಲ. ಬಹುಶಃ ನಾವು ಕೊಡಮಾಡುತ್ತಿರುವ ವಾತಾವರಣ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿಯೇ ಏನೋ ದೋಷವಿದೆ ಅನ್ನಿಸುತ್ತದೆ…) ಅದನ್ನು ಕಂಡಾಗ ಆ ಮಕ್ಕಳಿಗೆ ತಿಳಿ ಹೇಳುವ ಕೆಲಸವನ್ನು ತಪ್ಪದೇ ಮಾಡುತ್ತೇವೆ. ಆದರೆ ಬಿಟ್ಟು ಹೋದ ಆ ತಾಯಿಗೆ ತನ್ನ ಮಕ್ಕಳು ಇಂತಹ ದುಃಸ್ಥಿತಿಗೆ ತಲುಪಬಹುದೆನ್ನುವ ಆಲೋಚನೆಯೇ ಬರಲಿಲ್ಲವಾ?! ಅವು ಕಷ್ಟ ಪಡುತ್ತಿರುವಾಗ ಅವಳಲ್ಲಿ ಮತ್ತೊಬ್ಬನೊಂದಿಗೆ ಹೇಗೆ ತಾನೇ ಸುಖಿಸಬಲ್ಲಳು?! ಓಹ್ ವಿಚಿತ್ರ ಸಂಕಟವಾಗುತ್ತದೆ.
ಇಂತಹ ಪ್ರಕರಣಗಳನ್ನು ನೋಡುವಾಗ ಮನಸಿಗೆ ಒಂಥರಾ ಜಿಗುಪ್ಸೆ… ತಾಯಿ ಎನ್ನುವವಳು ತನ್ನ ಮಕ್ಕಳಿಗಾಗಿ ದೈತ್ಯ ಶಕ್ತಿಯೇ ಆಗಿಬಿಡುತ್ತಾಳೆ. ತನ್ನ ಮಕ್ಕಳ ಸುಖಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಆದರೆ ಅದೇ ಸಮಯ ಅದಕ್ಕೆ ಅಪವಾದ ಎನಿಸುವಂತಹ ತಾಯಂದಿರೂ ಸಿಕ್ಕಿಬಿಡುತ್ತಾರೆ. ಅಂಥಹಾ ಕೆಲವರನ್ನು ಬದಿಗಿಟ್ಟು ನೋಡುವುದಾದರೆ ನಾವೆಲ್ಲ ತಾಯಂದಿರೂ ಒಂದೇ. ನಮ್ಮದು ತಾಯಿಜಾತಿ. ನಮ್ಮೆಲ್ಲರ ಬಾಹ್ಯರೂಪ, ಅಂತಸ್ತು, ಸಾಮಾಜಿಕ ಜಾತಿ, ಧರ್ಮ…. ಇತ್ಯಾದಿ ಭೇದಗಳು ನಮ್ಮನ್ನು ಬೇರ್ಪಡಿಸಲು ಪ್ರಯತ್ನಿಸಬಹುದು. ಆದರೆ ನಮ್ಮ ನೋವು, ಸಂಕಟ, ಕಾಳಜಿ, ಕಕ್ಕುಲಾತಿ, ಮಮತೆ, ಪ್ರೀತಿ, ಖುಷಿ, ತ್ಯಾಗ, ಸಿಟ್ಟು… ಎಲ್ಲವೂ ಒಂದೇ. ಹಾಗಾಗಿ ನಾವೆಲ್ಲ ಒಂದೇ ಎನ್ನುವ ಭಾವ ನಮ್ಮಲ್ಲಿ ಮೂಡಿಯೇ ಬಿಡುತ್ತದೆ.
ಒಮ್ಮೆ ನನಗೊಂದು ಪ್ರಶಸ್ತಿ ಬಂತು. ಅದರ ಸಮಾರಂಭಕ್ಕೆ ನಾನು ಹೋಗಬೇಕಿತ್ತು. ಆಗ ನನ್ನ ಮಗಳಿಗೆ ಒಂದು ವರ್ಷ ಎರೆಡು ತಿಂಗಳು. ಅವಳಿಗೆ ನಾನಿನ್ನೂ ಫೀಡ್ ಮಾಡುತ್ತಿದ್ದೆ. ಅವಳನ್ನು ಆ ದೂರದೂರಿಗೆ ಕರೆದೊಯ್ಯುವುದು ಸಾಧ್ಯವಿರಲಿಲ್ಲ. ಬಿಟ್ಟು ಹೋಗುವುದಾದರೆ ಹೇಗೆ?! ಫೀಡಿಂಗ್ ನಿಲ್ಲಿಸಬೇಕಿತ್ತು. ಆದರೆ ನಾನು ನನ್ನ ಮಗನಿಗೆ ಒಂದು ವರ್ಷ ಹತ್ತು ತಿಂಗಳು ಫೀಡ್ ಮಾಡಿದ್ದೆ. ಇವಳಿಗೂ ಹಾಗೇ ಮಾಡಬೇಕು ಎನ್ನುವುದು ನನ್ನ ನಿರ್ಧಾರವಾಗಿತ್ತು. ಆದರೆ ಈಗ ಒಂದು ರೀತಿಯ ಸಂದಿಗ್ಧತೆ ಎದುರು ಬಂದು ನಿಂತಿತ್ತು. ನಿಜ, ಯಾವ ಬಹುಮಾನವೂ ನನ್ನ ಮಗುವಿಗೆ ಸಮಾನ ಅಲ್ಲ. ಆದರೆ ಇದು ನನ್ನ ಬರಹದ ಬದುಕಿನ ಮೊಟ್ಟ ಮೊದಲ ಪ್ರಶಸ್ತಿ ಆಗಿತ್ತು. ಅದು ನನ್ನ ಬರಹದ ತುಡಿತದ ಅಗತ್ಯವಾಗಿತ್ತು. ಕೊನೆಗೆ ಮನೆಯವರು ಮತ್ತು ಗೆಳತಿಯರ ಅಭಿಪ್ರಾಯ ಸಲಹೆ ಮತ್ತು ನೀಡಿದ ಧೈರ್ಯದ ಮೇರೆಗೆ ವೈದ್ಯರಲ್ಲಿಗೆ ಹೋಗುವುದೆಂದು ನಿರ್ಧರಿಸಿದೆ. ಸರಿ ಗಂಡನ ಜೊತೆ ಕ್ಲಿನಿಕ್ಕಿಗೆ ಹೋದೆ.
ಅವರು ಮಗುವಿನ ವಯಸ್ಸು ಕೇಳಿದರು. ನಂತರ “ಸರೀನಮ್ಮ ಈ ಇಂಜೆಕ್ಷನ್ ತೆಗೆದುಕೊಂಡ ಮೇಲೆ, ಮುಂದೆ ಗರ್ಭಧರಿಸುವವರೆಗೂ ಮತ್ತೆ ಹಾಲು ಬರುವುದಿಲ್ಲ…” ಎಂದರು. ಅದು ನನಗೆ ಗೊತ್ತಿತ್ತು. ನಾನದನ್ನು ತಿಳಿದೇ ಹೋಗಿದ್ದೆ. ನರ್ಸ್ ಬಂದು “ಹೋಗಿ ಅಲ್ಲಿ ಮಲಗಿ ಇಂಜೆಕ್ಷನ್ ತರುತ್ತೇನೆ..” ಎಂದಳು. ಕಣ್ಣು ತುಂಬಿತು. ಸರಿ ಎನ್ನುತ್ತಾ ಎದ್ದವಳೇ ಸೀದಾ ಹೊರಗೋಡಿ ಬಂದುಬಿಟ್ಟೆ. ಕಟ್ಟೆಯ ಮೇಲೆ ಕೂತವಳೇ ಜೋರಾಗಿ ಸ್ವಲ್ಪ ಹೊತ್ತು ಅತ್ತೆ. ಹಾಲಿನಿಂದ ತುಂಬಿದ ಎದೆ ಬಿಗಿಯುತ್ತಿತ್ತು. ನಿಧಾನವಾಗಿ ಎದೆಯ ಭಾಗದ ಬಟ್ಟೆ ತೋಯತೊಡಗಿತು. ನನ್ನ ಅಳುವೂ ಹೆಚ್ಚಾಗುತ್ತಿತ್ತು. ಗಂಡ ಸಮಾಧಾನಿಸುತ್ತಿದ್ದ. ಕೊನೆಗೆ ಒಂದಷ್ಟು ಹೊತ್ತಿನ ಅಳುವಿನ ನಂತರ ಒಂದು ನಿರ್ಧಾರಕ್ಕೆ ಬಂದೆ. ನಾನವಳ ನ್ಯೂಟ್ರಿಶನ್ ವಿಷಯದಲ್ಲಿ ಖಂಡಿತಾ ಕಾಳಜಿವಹಿಸುತ್ತೇನೆ. ಅವಳನ್ನು ಸದೃಢಳಾಗಿ ಬೆಳೆಸುತ್ತೇನೆ ಎಂದು ನಿರ್ಧರಿಸಿ ಒಳಗೆ ಹೋದೆ. ಮನೆಗೆ ಬಂದಾಗ ಮಗಳ ಮುಖ ಎದುರಿಸಲಾಗದೆ ತಲೆಮರೆಸಿಕೊಂಡೆ. ಮರುದಿನ ಪ್ರಯಾಣ. ಪ್ರಯಾಣದುದ್ದಕ್ಕೂ ಒಂದಿಡೀ ದಿನ ಎದೆ ಕಲ್ಲಿನಂತಾಗಿ ತೀವ್ರ ನೋವಿನಿಂದ ನರಳಿದೆ. ಜ್ವರ ಕಾಣಿಸಿಕೊಂಡಿತ್ತು. ಮರುದಿನ ಮಳೆ ಬಿಟ್ಟ ಮರುದಿನದ ಶುಭ್ರ ನೀಲಾಕಾಶ… ಈಗಲೂ ಆ ದಿನಗಳನ್ನು ನೆನೆದರೆ ಅನ್ನಿಸುತ್ತದೆ… ತಾಯಿಯಾಗುವುದು ಸುಲಭವಲ್ಲ ಎಂದು.
ಅವಳು ತನ್ನ ಮಗಳಲ್ಲಿ ಭವಿಷ್ಯದ ಕನಸುಗಳನ್ನು ತುಂಬುತ್ತಿರುವ ರೀತಿಯನ್ನು ಕಂಡು ಖುಷಿಯಾಗುತ್ತಿತ್ತು. ನನಗೂ ಇಂತಹುದೇ ತಾಯಿ ಇದ್ದಾರೆ. ಒಂದು ಕ್ಷಣ ನನ್ನಮ್ಮನೇ ಎದುರು ನಿಂತಿರುವಂತೆ ಭಾಸವಾಯಿತು.
ಮಾಯಾ ಏಂಜೆಲೋ ಅವರ ಒಂದು ಹೃದಯಸ್ಪರ್ಶಿ ಕವಿತೆಯಿದೆ ನೋಡಿ, ನಾವೆಲ್ಲರೂ ಬಹುಶಃ ಈ ಕವಿತೆಗೆ ಶರಣಾಗಿಬಿಡುತ್ತೇವೆ…
“It is true
I was created in you.
It is also true
That you were created for me.
I owned your voice.
It was shaped and tuned to soothe me.
Your arms were molded
Into a cradle to hold me, to rock me.
The scent of your body was the air
Perfumed for me to breathe.
Mother,
During those early, dearest days
I did not dream that you had
A large life which included me,
For I had a life
Which was only you.
Time passed steadily and drew us apart.
I was unwilling.
I feared if I let you go
You would leave me eternally.
You smiled at my fears, saying
I could not stay in your lap forever.
That one day you would have to stand
And where would I be?
You smiled again.
I did not.
Without warning you left me,
But you returned immediately.
You left again and returned,
I admit, quickly,
But relief did not rest with me easily.
You left again, but again returned.
You left again, but again returned.
Each time you reentered my world
You brought assurance.
Slowly I gained confidence.
You thought you know me,
But I did know you,
You thought you were watching me,
But I did hold you securely in my sight,
Recording every moment,
Memorizing your smiles, tracing your frowns.
In your absence
I rehearsed you,
The way you had of singing
On a breeze,
While a sob lay
At the root of your song.
The way you posed your head
So that the light could caress your face
When you put your fingers on my hand
And your hand on my arm,
I was blessed with a sense of health,
Of strength and very good fortune.
You were always
the heart of happiness to me,
Bringing nougats of glee,
Sweets of open laughter.
I loved you even during the years
When you knew nothing
And I knew everything, I loved you still.
Condescendingly of course,
From my high perch
Of teenage wisdom.
I spoke sharply of you, often
Because you were slow to understand.
I grew older and
Was stunned to find
How much knowledge you had gleaned.
And so quickly.
Mother, I have learned enough now
To know I have learned nearly nothing.
On this day
When mothers are being honored,
Let me thank you
That my selfishness, ignorance, and mockery
Did not bring you to
Discard me like a broken doll
Which had lost its favor.
I thank you that
You still find something in me
To cherish, to admire and to love.
I thank you, Mother.
I love you.”
- Maya Angelou
ತಾಯಿ ಎನ್ನುವವಳು ಇರುವುದೇ ಮಗುವಿಗಾಗಿ. ಅವಳ ಧ್ವನಿ ಮಧುರವಾಗಿರುವುದೇ ಲಾಲಿ ಹಾಡಲು, ಅವಳ ಮೃದು ಕೈಗಳೇ ಮಗುವಿನ ತೊಟ್ಟಿಲು. ಅವಳ ತೊಡೆಗಳೇ ಮಗುವಿಗೆ ಹಾಸಿಗೆ… ಹೆಣ್ಣಿನ ಸೃಷ್ಟಿ ಪ್ರಕೃತಿಯ ಅದ್ಭುತ ರಚನೆ. ಅದೆಷ್ಟು ಜಾಗರೂಕತೆಯಿಂದ ಅವಳ ಒಂದೊಂದೇ ಅವಯವಗಳನ್ನು ಸೃಷ್ಟಿಸುತ್ತಾ ಹೋಗಲಾಗಿದೆ ಎಂದು ಯೋಚಿಸಿದರೆ ಅದೊಂದು ಬಹುದೊಡ್ಡ ಬೆರಗು…
ಮತ್ತೆ ಮಗುವಿಗೆ ಚಡ್ಡಿ ಹಾಕುವುದರಿಂದ, ಸೂ ಸೂ ಟಾಯ್ಲಿಟ್ಟಿಗೆ ಹೋಗುವುದರಿಂದಾ ಹಿಡಿದು ಪ್ರತಿಯೊಂದನ್ನೂ ಕಲಿಸುವವಳು ತಾಯಿ. ಯಾವುದನ್ನು ಮಾಡಬಾರದು ಯಾವುದನ್ನು ಮಾಡಬೇಕು ಎಂದು ಹೇಳಿಕೊಡುವವಳು ತಾಯಿ. ನಮ್ಮಿಡೀ ಜೀವನಕ್ಕೆ ಅಗತ್ಯವಿರುವ ನಮ್ಮ ವ್ಯಕ್ತಿತ್ವದ ಬುನಾದಿಯನ್ನು ನಿರ್ಮಿಸುವವಳು ತಾಯಿ. ಯಾರದ್ದೇ ಜೀವನವನ್ನು ನೋಡುವುದಾದರೆ ಅವರ ಬದುಕಿನ ಮಹತ್ವದ ವ್ಯಕ್ತಿಗಳ ಅವರವರ ತಾಯಿ ಖಂಡಿತಾ ಇದ್ದೇ ಇರುತ್ತಾರೆ. ಎಲ್ಲರೂ ತಮ್ಮ ತಾಯಂದಿರಿಗೆ ಆಪ್ತವಾಗುವಷ್ಟು ತಂದೆಯಂದಿರಿಗೆ ಹತ್ತಿರವಾಗುವುದು ಕಷ್ಟ. ಅಪವಾದಗಳು ಇಲ್ಲವೆಂದೇನೂ ಇಲ್ಲ. ತಾಯಿಯಂತಹ ತಂದೆಯರೂ ಇದ್ದಾರೆ. ನಾನೂ ಸಹ ಒಂದು ವಯಸ್ಸಿನವರೆಗೂ ಅಪ್ಪನ ಮಗಳೇ ಆಗಿದ್ದವಳು.
ಆದರೆ ತಾಯಿ ಎನ್ನುವವಳು ನೀಡುವ ಸಂಸ್ಕಾರದ ಸಾರ್ಥಕತೆ ಮುಂದಿನ ಜೀವನದಲ್ಲಿ ಆ ಮಗು ಹೇಗೆ ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಂಡಿದೆ ಎನ್ನುವದರ ಮೇಲೆ ನಿಂತಿರುತ್ತದೆ. ನಮ್ಮೆಲ್ಲ ಚಿಂತನೆಗಳೂ ಅರಿವಿದ್ದೋ ಇಲ್ಲದೆಯೋ ಅದೇ ದಿಕ್ಕಿನಲ್ಲೇ ಕೆಲಸ ಮಾಡುತ್ತಿರುತ್ತದೆ. ನಾವು ಒಂದೇ ಒಂದು ತಪ್ಪು ಮಾಡುವಾಗಲೂ ಅದೊಂದು ಸಂಸ್ಕಾರ ನಮ್ಮನ್ನು ಎಚ್ಚರಿಸುತ್ತಲೇ ಇರುತ್ತದೆ.
ನಾವು ಜನ್ಮ ನೀಡುತ್ತೇವೆ. ಟೊಂಕ ಕಟ್ಟಿದವರಂತೆ ಆ ಮಗುವನ್ನು ಬೆಳೆಸುತ್ತೇವೆ. ನಾವು ಗಟ್ಟಿಯಾಗಿದ್ದರೆ, ಸರಿದಾರಿಯಲ್ಲಿ ನಡೆಯುತ್ತಿದ್ದರೆ ಮಾತ್ರ ಮಕ್ಕಳನ್ನೂ ಆ ದಾರಿಯಲ್ಲಿ ನಡೆಸಬಲ್ಲೆವು. ಸರಿಯಾದ ಪೋಷಕರು ಮಕ್ಕಳ ವ್ಯಕ್ತಿತ್ವದಲ್ಲಿ ಬದುಕಿರುತ್ತಾರೆ. ಈ ಕವಿತೆಯನ್ನು ಓದುವಾಗ ಮತ್ತೆ ಮತ್ತೆ ಭಾವುಕಳಾಗುತ್ತಾ ಹೋದೆ. ನಮ್ಮೊಳಗೇ ಹುಟ್ಟಿದೊಂದು ಚೂರು ಈ ಮಟ್ಟಿಗೆ ಬೆಳೆದು ನಿಲ್ಲುವುದಾದರೆ ಅದಕ್ಕಿಂತಲೂ ಸಾರ್ಥಕ ಕ್ಷಣ ಯಾವುದಿರಲು ಸಾಧ್ಯ…
ಇದೇ ವೇಳೆ ಖಲೀಲ್ ಜಿಬ್ರಾನರ ಬಹು ಪ್ರಸಿದ್ಧ ಕವಿತೆ “Your children are not your Children” ಕವಿತೆ ನೆನಪಾಗುತ್ತಿದೆ. ಇದರೊಟ್ಟಿಗೆ ಅದನ್ನೂ ಒಮ್ಮೆ ಓದಿದರೆ ನಮ್ಮ ವಿಚಾರ ಒಂದು ಮಟ್ಟಿಗೆ ಪೂರ್ಣವಾಗುತ್ತದೇನೋ….
“And a woman who held a babe against her bosom said, Speak to us of Children.
And he said:
Your children are not your children.
They are the sons and daughters of Life’s longing for itself.
They come through you but not from you,
And though they are with you yet they belong not to you.
You may give them your love but not your thoughts,
For they have their own thoughts.
You may house their bodies but not their souls,
For their souls dwell in the house of tomorrow, which you cannot visit, not even in your dreams.
You may strive to be like them, but seek not to make them like you.
For life goes not backward nor tarries with yesterday.
You are the bows from which your children as living arrows are sent forth.
The archer sees the mark upon the path of the infinite, and He bends you with His might that His arrows may go swift and far.
Let your bending in the archer’s hand be for gladness;
For even as He loves the arrow that flies, so He loves also the bow that is stable.”
- Kahlil Gibran
ನಾವು ಮಗುವನ್ನು ಹೆರುವ ಮುಂಚೆಯೇ ಸಾವಿರ ಕನಸುಗಳನ್ನು ಕಟ್ಟುತ್ತೇವೆ. ಅದು ಹುಟ್ಟಿದಂದಿನಿಂದಲೂ ಆ ಕನಸುಗಳನ್ನು ನೇರವೇರಿಸಲೆಂದೇ ಮಗುವನ್ನು ಸಜ್ಜುಗೊಳಿಸತೊಡಗುತ್ತೇವೆ. ಆದರೆ ಅದು ಹಾಗಲ್ಲ. ಮಗುವನ್ನು ನಾವು ಹೆತ್ತಿದ್ದೇವೆ ನಿಜ. ಆದರೆ ಅದು ನಮ್ಮ ಅಧೀನ ಅಲ್ಲ. ಅದಕ್ಕೆ ತನ್ನದೇ ಆದ ಆಲೋಚನೆ, ವ್ಯಕ್ತಿತ್ವ, ಹೃದಯ, ಮನಸ್ಸು, ಬುದ್ಧಿ… ಎಲ್ಲವೂ ಇದೆ. ಅದರ ಸ್ವಂತ ಆಸೆ ಆಕಾಂಕ್ಷೆಗಳಿವೆ. ನಿಜಕ್ಕೂ ಅದು ತನ್ನ ಆಸೆ ಆಕಾಂಕ್ಷೆಗಳಿಗಾಗಿ ಹುಟ್ಟಿದ ಮಗುವೇ ಹೊರತು ನಮ್ಮ ಆಸೆಗಳನ್ನು ಈಡೇರಿಸಲಿಕ್ಕಾಗಿ ಹುಟ್ಟಿದ ಮಗು ಅಲ್ಲವೇ ಅಲ್ಲ… ಇದನ್ನು ನಾವೆಲ್ಲಾ ಅರಿಯಲೇ ಬೇಕಿದೆ. ಮಕ್ಕಳನ್ನು ಸರಿ ದಾರಿಯಲ್ಲಿ ನಡೆಸುವುದು ಎಂದರೆ ನಮ್ಮ ವಿಚಾರಗಳನ್ನು ಅದರ ಮೇಲೆ ಹೇರುವುದು ಎಂದಲ್ಲ. ಹೇರಿಕೆ-ಒತ್ತಡ ಮತ್ತು ಮಾರ್ಗದರ್ಶನದ ನಡುವಿನ ವ್ಯತ್ಯಾಸವನ್ನು ನಾವು ತಿಳಿಯಬೇಕು. ಹಾಗಿಲ್ಲದ ವೇಳೆ ಖಲೀಲ್ ಜಿಬ್ರಾನರ ಈ ಕವಿತೆಯನ್ನೊಮ್ಮೆ ಓದಿ ಮನನ ಮಾಡಿಕೊಂಡರೂ ಸಾಕು….
ಕೊನೆಯದಾಗಿ ಹೇಳದ ಒಂದು ಮಾತು ಉಳಿದಿದೆ. ಇಂದಿಗೂ ನನ್ನ ಮಗಳ ಒಣಗಿದ ಹೊಕ್ಕಳ ಬಳ್ಳಿ (ಕೂಸಿದ್ದಾಗ ಉದುರಿದ್ದು…) ತಿಜೋರಿಯಲ್ಲಿ ವಡವೆಗಿಂತಲೂ ಜೋಪಾನವಾಗಿ ಕುಳಿತಿದೆ. ಯಾಕೆ ಹಾಗೆ ಜತನವಾಗಿ ಇಟ್ಟುಕೊಂಡಿದ್ದೇನೆ ಗೊತ್ತಿಲ್ಲ… ಅದೇ ನನ್ನೊಳಗಿನ ತಾಯಿ ಇರಬಹುದು. ಅವಳು ನನ್ನೊಳಗೂ ಜೀವಂತವಾಗಿದ್ದಾಳಿರಬಹುದು. ಆದರೆ ಅದನ್ನು ನೋಡಿದಾಗೆಲ್ಲ ಅವಳು ನನ್ನೊಳಗೆ ಉದಯಿಸಿದ್ದು, ಗರ್ಭದೊಳಗೆ ಮಿಸುಗಿದ್ದು, ಅದೇ ಮೊಟ್ಟ ಮೊದಲ ಬಾರಿಗೆ ಭುವಿಗೆ ಬಂದಿದ್ದು, ಅವಳ ಮೊದಲ ಅಳು, ಮೊದಲ ಸ್ಪರ್ಷ, ಮೊದಲ ನಗು… ಎಲ್ಲ ಎಲ್ಲವೂ ನೆನಪಾಗಿ ಕಣ್ಣು ತುಂಬುತ್ತದೆ…..
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”