Advertisement
ಹೊಸ ವರುಷಕೆ… ಹೊಸ ಹರುಷಕೆ..: ಪ್ರಕಾಶ್ ಪೊನ್ನಾಚಿ ಬರಹ

ಹೊಸ ವರುಷಕೆ… ಹೊಸ ಹರುಷಕೆ..: ಪ್ರಕಾಶ್ ಪೊನ್ನಾಚಿ ಬರಹ

ಬದುಕು ನಿಂತ ನೀರಲ್ಲ, ಬದಲಾವಣೆ ಜಗದ ನಿಯಮ ಎಂದುಕೊಂಡೇ ಮನುಷ್ಯ ಬದಲಾವಣೆಗೊಳಪಟ್ಟುಕೊಂಡು ಹೊಸ ರೂಪಾಂತರಗಳನ್ನು ಆವಿಸ್ಕರಿಸಿ ಹೊಸ ಜಗದ ಸೃಷ್ಟಿಗೆ ನಾಂದಿ ಹಾಡುತ್ತಾ ಬಂದ. ಪ್ರತಿ ವರ್ಷವೂ ಹೊಸದೊಂದು ಜನ್ಮವೆಂದುಕೊಂಡೆ ಹೊಸ ಸೃಷ್ಟಿಗಳಿಗೆ ಬುನಾದಿ ಹಾಕಲಾರಂಭಿಸಿದ. ಎಲ್ಲಾ ಎಲ್ಲೆಗಳನ್ನು ಮೀರಿ ಲೋಕದೊಳಿತಿಗೆ ಸ್ಪೃಷ್ಯ ಯಾವುದೋ ಅವುಗಳ ಸೃಷ್ಟಿಯಲ್ಲಿ ತಲ್ಲೀನನಾದ. ಹಾಗಾಗಿಯೇ ಹೊಸದೊಂದು ವರುಷ ಬಂದಾಗಲೂ ಹೊಸದೊಂದು ಜನ್ಮ ಉದಯಿಸಿದಂತೆ ಸಂಭ್ರಮಿಸಲಾರಂಭಿಸಿದ.
ಹಳ್ಳಿಗಳಲ್ಲಿನ ಹೊಸ ವರ್ಷದಾಚರಣೆಯ ಕುರಿತು ಪ್ರಕಾಶ್‌ ಪೊನ್ನಾಚಿ ಬರಹ ನಿಮ್ಮ ಓದಿಗೆ

“ಹೊಸ ವರ್ಷ ಬಂದಂತೆ ಯಾರು ಬಂದಾರು
ಗಿಡ ಮರಕೆ ಹೊಸ ವಸ್ತ್ರ ಯಾರು ತಂದಾರು”

ಲಕ್ಷ್ಮಿ ನಾರಾಯಣ ಭಟ್ಟರ ಈ ಸಾಲುಗಳು ಪ್ರತಿ ಹೊಸ ವರ್ಷ ಬಂದಾಗಲೂ ತಲೆಯಲ್ಲಿ ಒಮ್ಮೆ ಗಿರಾಕಿ ಹಾಕಿ ಹೋಗದೆ ಇರದು. ಮನುಷ್ಯ ತನ್ನ ವಸ್ತ್ರಾಭರಣಗಳನ್ನು ಬದಲಾಯಿಸುವಂತೆ ಪ್ರಕೃತಿಯು ತನ್ನ ಹಳೆ ರೂಪವನ್ನು ಕಳಚಿ ಹೊಸದೊಂದು ಸಂಭ್ರಮಕ್ಕೆ ತೆರೆದುಕೊಳ್ಳುವ ಘಳಿಗೆ ಅಮೋಘವಾದದ್ದು. ಆದ್ದರಿಂದಲೇ ಕವಿ ಗಿಡಮರಕ್ಕೆ ಹೊಸ ವಸ್ತ್ರವನ್ನು ಯಾವ ಮೋಡಿಗಾರ ತಂದಾನು ಎಂದು ಉಲ್ಲೇಖಿಸುವುದು. “ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು…” ಎನ್ನುವ ಬೇಂದ್ರೆಯವರ ಸಾಲುಗಳಂತೂ ಪ್ರತಿ ಹೊಸ ವರ್ಷಗಳು ಉದಯಿಸಿದಾಗಲೂ ಮನುಷ್ಯನಿಗೆ ಹೊಸತೊಂದು ಜನ್ಮ ಹೇಗೆ ಸಿದ್ಧಿಸಿಕೊಳ್ಳುತ್ತದೆ, ಮನುಷ್ಯ ಗುರಿಗಳನ್ನು ಗಟ್ಟಿಯಾಗಿ ಮುಟ್ಟುವ ಸಲುವಾಗಿ ತನ್ನನ್ನು ತಾನು ಈ ಕಟ್ಟುಪಾಡುಗಳಿಗೆ ಹೇಗೆಲ್ಲಾ ಮಾರ್ಪಾಡಿಸಿಕೊಂಡು ಒಂದು ಹೊಸ ಬದಲಾವಣೆಗೆ ನಾಂದಿ ಹಾಡುತ್ತಾನೆ ಎನ್ನುವಲ್ಲಿಗೆ ಹರುಷಕೊಂದು ಹೊಸತುನೆಲೆ ಹೇಗೆ ಸೃಷ್ಟಿಯಾಗುತ್ತದೆ ಅದಕ್ಕೊಂದು ವೇದಿಕೆಯನ್ನು ಮನುಷ್ಯ ಹೇಗೆ ರೂಪಿಸಿ ಬಿಡುತ್ತಾನೆ ಎನ್ನುವ ಕುತೂಹಲ ಅದರ ಸಂಭ್ರಮವನ್ನು ಇಮ್ಮಡಿಗೊಳಿಸಿರುತ್ತದೆ.

ಅಖಿಲ ಜೀವ ಜಾಲಕೆಲ್ಲಾ ಹೊಸತು ನೆಲೆಯನ್ನ ಹೊಸ ವರ್ಷ ಹೇಗೆ ಒದಗಿಸಿಕೊಡುತ್ತದೆ ಎನ್ನುವಲ್ಲಿ ಕವಿ ಹೊಸ ವರ್ಷ ಹೊಸತನ್ನೇ ಅದು ಹೇಗೆ ಕಟ್ಟಿಕೊಡುತ್ತದೆ ಎಂಬುದನ್ನು ವಿವರಿಸಿ ಕೊನೆಗೆ ನಮ್ಮನಷ್ಟೇ ಮರೆತಿದೆ ಎನ್ನುವಲ್ಲಿಗೆ ಒಂದು ಪೂರ್ಣವಿರಾಮವನ್ನು ಇಟ್ಟುಬಿಡುತ್ತಾರೆ. ಹೊಸತೊಂದು ಹುಟ್ಟು, ಹೊಸದೊಂದು ಸೃಷ್ಟಿ, ಹೊಸತೊಂದು ಲೋಕ ತನ್ನನ್ನೇ ತಾನು ಬದಲಾವಣೆಗೆ ಒಡ್ಡಿಕೊಳ್ಳುವ ಪ್ರಕೃತಿ ಎಲ್ಲವೂ ಈಗ ಹೊಸದೊಂದು ಸಂಭ್ರಮವನ್ನು ಸಂಭ್ರಮಿಸುವ ಪರಿ ಅಮೋಘವಾದದ್ದು.

ಬದುಕು ನಿಂತ ನೀರಲ್ಲ, ಬದಲಾವಣೆ ಜಗದ ನಿಯಮ ಎಂದುಕೊಂಡೇ ಮನುಷ್ಯ ಬದಲಾವಣೆಗೊಳಪಟ್ಟುಕೊಂಡು ಹೊಸ ರೂಪಾಂತರಗಳನ್ನು ಆವಿಸ್ಕರಿಸಿ ಹೊಸ ಜಗದ ಸೃಷ್ಟಿಗೆ ನಾಂದಿ ಹಾಡುತ್ತಾ ಬಂದ. ಪ್ರತಿ ವರ್ಷವೂ ಹೊಸದೊಂದು ಜನ್ಮವೆಂದುಕೊಂಡೆ ಹೊಸ ಸೃಷ್ಟಿಗಳಿಗೆ ಬುನಾದಿ ಹಾಕಲಾರಂಭಿಸಿದ. ಎಲ್ಲಾ ಎಲ್ಲೆಗಳನ್ನು ಮೀರಿ ಲೋಕದೊಳಿತಿಗೆ ಸ್ಪೃಷ್ಯ ಯಾವುದೋ ಅವುಗಳ ಸೃಷ್ಟಿಯಲ್ಲಿ ತಲ್ಲೀನನಾದ. ಹಾಗಾಗಿಯೇ ಹೊಸದೊಂದು ವರುಷ ಬಂದಾಗಲೂ ಹೊಸದೊಂದು ಜನ್ಮ ಉದಯಿಸಿದಂತೆ ಸಂಭ್ರಮಿಸಲಾರಂಭಿಸಿದ. ಹಳೆಯ ನೋವುಗಳಿಗೆ ವಿದಾಯ ಹೇಳಿ ಹೊಸ ಹೊಸ ಉತ್ಸಾಹಗಳಿಗೆ ತನ್ನ ಬಾಗಿಲುಗಳನ್ನು ತೆರೆಯಲಾರಂಭಿಸಿಕೊಂಡ, ಪ್ರತಿ ಘಳಿಗೆಯನ್ನು ಕೂಡಿರಿಸಿ ತನ್ನ ಸಂಭ್ರಮಕ್ಕೆ ದಿನಾಂಕಗಳ ಮೀಸಲಿರಿಸಿ ಹೊಸ ವರುಷವೆಂದುಕೊಂಡ, ಅದರೊಳಗೆ ಹೊಸ ಹರುಷಗಳ ಕಂಡುಕೊಂಡ ಅಲ್ಲಿಗೆ ತಾನೇ ತೆರೆದುಕೊಂಡ ಹೊಸದೊಂದು ಜೀವನಕ್ಕೆ ಹೊಸ ವರ್ಷವೆಂದು ಹೆಸರಿಟ್ಟುಕೊಂಡ.

ಮನುಷ್ಯನ ಅಗಾಧ ಬಯಕೆಗಳಲ್ಲಿ ಆಚರಣೆಗಳು ಒಂದು. ಪಾರಂಪರಿಕ ಆಚರಣೆಗಳು ಒಟ್ಟಿಗೆ ಹೊಸ ಹೊಸ ಸಂಭ್ರಮವನ್ನು ಅವನು ತನ್ನ ಸಂಭ್ರಮವೆಂದೇ ಬದುಕಿದ ರೂಢಿಯಾಗಿಸಿಕೊಂಡಿದ್ದು ಈಗ ಇತಿಹಾಸ. ಅನೇಕ ಭಿನ್ನತೆಗಳಂತೆ ಹೊಸ ವರ್ಷದ ಆಚರಣೆ ಪ್ರಾದೇಶಿಕ ಭಿನ್ನತೆಯನ್ನು ಹೊಂದಿತ್ತು. ಪಟ್ಟಣದ ಶ್ರೀಮಂತಿಕೆಯ ಆಚರಣೆಗಳು ಗ್ರಾಮಾಂತರದ ಆಚರಣೆಗಳಿಗಿಂತ ಬಹು ವೈರುಧ್ಯವೇ ಆಗಿದ್ದವು. ಪಬ್ಬು ಕ್ಲಬ್ಬು ಎನ್ನುವ ಸಂಸ್ಕೃತಿ ಹಿಂದಿನಿಂದಲೂ ಇತ್ತಾದರೂ ಅದು ಹಳ್ಳಿಗಳಿಗೆ ಅಷ್ಟೊಂದು ವ್ಯಾಪಕವಾಗಿ ವ್ಯಾಪಿಸಿರಲಿಲ್ಲ. ನಮ್ಮದು ಕಾಡಿನಿಂದಲೇ ಆವರಿಸಿಕೊಂಡ ಗ್ರಾಮವಾದ್ದರಿಂದ ಇಲ್ಲಿನ ಕಾಡುಗಳು ಚಳಿಗಾಲದಲ್ಲಿ ಎಲೆಯುದುರಿಸಿ ಡಿಸೆಂಬರಿನ ಮಾಗಿಗೆ ನಿಧಾನಕ್ಕೆ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡು ಮರಗಳೆಲ್ಲಾ ಸಣ್ಣ ಸಣ್ಣ ಚಿಗುರಿನಿಂದಾಗಿ ರಮಣೀಯವಾಗಿ ಕಾಣಲಾರಂಭಿಸುತ್ತಿತ್ತು. ಡಿಸೆಂಬರ್ ಚಳಿ ಎಂದರೆ ನಮ್ಮೂರಿನಲ್ಲಿ ಭಯಾನಕ ಅನುಭವ. ಅಲ್ಲಿ ರಾತ್ರಿ ಕೇವಲ ರಾತ್ರಿಗಳಲ್ಲ; ಅದು ಹಿಮದ ಉಂಡೆಗಳ ಮೇಲೆ ಮಲಗಿದ ಅನುಭವ ನೀಡುತ್ತಿದ್ದ ಸಮಯ. ಅಂತಹ ಕಾಲಘಟ್ಟದಲ್ಲಿ ಮಾರ್ಗಳ್ಳಿ ಪೂಜೆ ಎಂದು ದೇವಸ್ಥಾನಗಳಲ್ಲಿ ಬೆಳಗಿನ ಜಾವದ ಪೂಜೆಗಳು ನಡೆಯುತ್ತಿದ್ದವು. ನಮ್ಮೂರಿನ ಭಜನೆಯ ತಂಡದ ಸದಸ್ಯರೆಲ್ಲ ಮುಂಜಾನೆಯ ನಾಲ್ಕಕ್ಕೆ ಎದ್ದು ಕೊರೆಯುವ ಚಳಿಯಲ್ಲಿ ತಣ್ಣೀರಿನಲ್ಲಿ ಮಿಂದು ಭಜನೆಗೆ ಹಾಜರಾಗುತ್ತಿದ್ದರು. ಮಾರ್ಗಳ್ಳಿ ತಿಂಗಳೆಂದರೆ ನಮ್ಮೂರಲ್ಲೊಂದು ದೈವಿಕ ಭಾವ ಸೃಷ್ಟಿಯಾಗಿ ಬಿಡುತ್ತಿತ್ತು. ಪೂಜೆ, ಭಜನೆ ಕಾರ್ಯಕ್ರಮಗಳು ಒಂದು ತಿಂಗಳು ಸರಿಯಾಗಿ ನಡೆದು ಸಂಕ್ರಾಂತಿಯಂದು ಮುಕ್ತಾಯ ಕಾಣುತ್ತಿತ್ತು. ಹದಿನೈದು ದಿನಕ್ಕೆ ಸರಿಯಾಗಿ ಹೊಸ ವರ್ಷದ ದಿನಕ್ಕೆ ವಿಶೇಷಗಳೊಂದಷ್ಟು ನಡೆದು ಬಿಡುತ್ತಿತ್ತು.

ಆ ಕಾಲಕ್ಕೆ ನಮ್ಮೂರಿನ ಗೌಡರ ಮನೆ ಜಗಲಿಕಟ್ಟೆ ಒಂದು ಛತ್ರವಾಗಿ ರೂಪುಗೊಳ್ಳುತ್ತಿತ್ತು. ಆಗೆಲ್ಲಾ ವಿಸಿಡಿ ಕ್ಯಾಸೆಟ್‌ಗಳು ಚಾಲ್ತಿಯಲ್ಲಿದ್ದ ಕಾಲ; ಊರಿಗೆ ಟಿವಿ ಅಂತ ಇದ್ದದ್ದು ಗೌಡರ ಮನೆಯಲ್ಲಿ ಮಾತ್ರ. ವರುಷ ವರುಷಕ್ಕೆ ಭಿನ್ನವಾದ ಕಾರ್ಯಕ್ರಮಗಳನ್ನು ಊರಿನ ಹಿರಿಯರು ಅಲ್ಲಿ ಏರ್ಪಡಿಸುತ್ತಿದ್ದರು. ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಊರಿನ ಎಲ್ಲಾ ಜನರು ಅಲ್ಲಿ ಜಮಾಮಣೆಯಾಗಬೇಕಿತ್ತು, ಗೌಡ್ರು ಅಂಕಪ್ಪನವರು ಎಲ್ಲರನ್ನೂ ಉದ್ದೇಶಿಸಿ ಅಲ್ಲಿ ಮಾತನಾಡುತ್ತಿದ್ದರು. ಈಗಿನ ಜನ ಹೊಸ ವರ್ಷಕ್ಕೆ ರಿಸೆಲ್ಯುಸನ್ ಇಟ್ಟುಕೊಳ್ಳುವಂತೆ ನಮ್ಮೂರಿನಲ್ಲೂ ಆಗಲೇ ಮುಂದಿನ ವರ್ಷದ ರೆಸಲ್ಯೂಷನ್‌ಗಳನ್ನು ಗೌಡರು ಪ್ರತಿಯೊಬ್ಬರನ್ನು ಕೇಳುತ್ತಿದ್ದರು. ಎಲ್ಲರೂ ಮುಂದಿನ ವರ್ಷ ತನ್ನ ವ್ಯವಸಾಯದ ಮಾರ್ಪಾಡುಗಳು, ಮನೆ ಕಟ್ಟುವುದು ಹಸು ಕೊಳ್ಳುವುದು, ಬೋರ್ ಕೊರೆಸುವುದು ಇತ್ಯಾದಿಗಳಾಗಿ ತಮ್ಮ ರೆಸಲ್ಯೂಶನ್‌ಗಳನ್ನು ವ್ಯಕ್ತಪಡಿಸುತ್ತಿದ್ದರು. ಹೆಂಗಸರಂತು ಬೀದಿ ಬೀದಿಗಳನ್ನೆಲ್ಲ ತೊಳೆದು ಸಿಂಗರಿಸಿ ರಂಗೋಲಿ ಹಾಕಿ ಊರಿನಲ್ಲಿ ಒಂದು ಹಬ್ಬದ ವಾತಾವರಣವನ್ನ ಸೃಷ್ಟಿಸಿಬಿಡುತ್ತಿದ್ದರು.

ಪ್ರತಿ ಮನೆಯಲ್ಲಿ ಅಂದು ಹೋಳಿಗೆ ಊಟ ಸಿದ್ಧವಾಗುತ್ತಿತ್ತು. ಜನ ಮನೆ ಮನೆಗೆ ಬದಲಾಯಿಸಿಕೊಂಡು ಪ್ರತಿ ಮನೆಯಲ್ಲಿ ಪ್ರತಿಯೊಬ್ಬರೂ ಒಂದು ತುತ್ತಾದರೂ ತಿನ್ನಬೇಕೆಂಬ ನಿಯಮವನ್ನು ಚಾಚು ತಪ್ಪದೇ ಪಾಲಿಸುತ್ತಿದ್ದರು. ಒಂದು ತಂಡದ ಸದಸ್ಯರು ಅಂದಿಗೆ ನಮ್ಮೂರಿನಲ್ಲಿ ಪ್ರಖ್ಯಾತಿಯಾಗಿದ್ದ ಅವರೆಕಾಳಿನ ಗುಗ್ಗರಿ ತಯಾರಿಕೆಯಲ್ಲಿ ನಿರತವಾಗುತ್ತಿದ್ದರು. ಗೌಡರ ಮಾತಿನ ನಂತರ ಎಲ್ಲಾ ಚರ್ಚೆಗಳು ಮುಗಿಯುತ್ತಿದ್ದವು. ನಂತರ ಅವರೇ ಕಾಳಿನ ಗುಗ್ಗರಿ ತಿಂದು ರಾತ್ರಿ ತುಂಬಿಸುವುದು ವಾಡಿಕೆ. ಪ್ರತಿ ವರ್ಷವೂ ಒಂದೊಂದು ಭಿನ್ನ ಕಾರ್ಯಕ್ರಮಗಳು ಅಲ್ಲಿ ಏರ್ಪಡುತ್ತಿದ್ದವು.

ಮನುಷ್ಯ ಗುರಿಗಳನ್ನು ಗಟ್ಟಿಯಾಗಿ ಮುಟ್ಟುವ ಸಲುವಾಗಿ ತನ್ನನ್ನು ತಾನು ಈ ಕಟ್ಟುಪಾಡುಗಳಿಗೆ ಹೇಗೆಲ್ಲಾ ಮಾರ್ಪಾಡಿಸಿಕೊಂಡು ಒಂದು ಹೊಸ ಬದಲಾವಣೆಗೆ ನಾಂದಿ ಹಾಡುತ್ತಾನೆ ಎನ್ನುವಲ್ಲಿಗೆ ಹರುಷಕೊಂದು ಹೊಸತುನೆಲೆ ಹೇಗೆ ಸೃಷ್ಟಿಯಾಗುತ್ತದೆ ಅದಕ್ಕೊಂದು ವೇದಿಕೆಯನ್ನು ಮನುಷ್ಯ ಹೇಗೆ ರೂಪಿಸಿ ಬಿಡುತ್ತಾನೆ ಎನ್ನುವ ಕುತೂಹಲ ಅದರ ಸಂಭ್ರಮವನ್ನು ಇಮ್ಮಡಿಗೊಳಿಸಿರುತ್ತದೆ.

ಭಜನಾ ತಂಡದವರಿಂದ ರಾತ್ರಿ ಪೂರ ಭಜನೆ ಏರ್ಪಡಿಸುವುದು, ಆ ಕಾಲಕ್ಕೆ ನಳ-ದಮಯಂತಿ, ದಕ್ಷಬ್ರಹ್ಮ, ಸಾರಂಗದಾರ, ರಾಜವಿಕ್ರಮನಂತಹ ಕಥೆಗಳನ್ನು ಯಕ್ಷಗಾನ ಶೈಲಿಯಲ್ಲಿ ಲೀಲಾಜಾಲವಾಗಿ ಹಾಡುತ್ತಿದ್ದ ರಾಜಮ್ಮನಿಂದ ಕಥೆಗಳನ್ನು ಹೇಳಿಸಿ ಇಡೀ ರಾತ್ರಿ ತುಂಬಿಸುವುದು, ಸಣ್ಣ ಸಣ್ಣ ಸಾಮಾಜಿಕ ನಾಟಕಗಳನ್ನು ಊರಿನ ಯುವಕರು ಅಭಿನಯಿಸುವುದು, ಗೌಡರ ಮನೆಯ ವಿಸಿಡಿ ಟಿವಿಯಲ್ಲಿ ಭಕ್ತಿ ಪ್ರಧಾನವಾದ ಚಿತ್ರಗಳನ್ನು ನೋಡಿ ಬೆಳಗು ತುಂಬಿಸುವುದು ಹೀಗೆ ಭಿನ್ನವಾದ ಕಾರ್ಯಕ್ರಮಗಳು ಜನರ ಖುಷಿಯನ್ನು ರಾತ್ರಿಯೆಲ್ಲಾ ಕಾಪಿಡುತ್ತಿದ್ದವು. ಊರಿನ ಬಸವೇಶ್ವರನ ಸನ್ನಿಧಿಯಲ್ಲಿ ಬೆಳಗಿನ ಜಾವ ಮಹಾ ಮಂಗಳಾರತಿಯ ವಿಶೇಷ ಪೂಜೆ ಏರ್ಪಡುತ್ತಿತ್ತು.

ಎಲ್ಲರೂ ಪೂಜೆಯಲ್ಲಿ ಪಾಲ್ಗೊಂಡು ದೇವರಿಗೆ ವಂದಿಸಿ ಮನೆಗೆ ತೆರಳುವಷ್ಟರಲ್ಲಾಗಲೇ ಗೌಡರ ಮನೆಯ ಎರಡು ಲಾರಿಗಳನ್ನು ಖಾದರಣ್ಣ ಮದುವಣಗಿತ್ತಿಯಂತೆ ಸಿಂಗರಿಸಿ ನಿಲ್ಲಿಸುತ್ತಿದ್ದ. ಊರಿನ ಎಲ್ಲರೂ ಸಿಂಗಾರ ಮಾಡಿಕೊಂಡು ಹೆಂಗಸರು ಒಂದು ಲಾರಿ ಗಂಡಸರು ಒಂದು ಲಾರಿಯಲ್ಲಿ ಪ್ರತ್ಯೇಕವಾಗಿ ಮಾದಪ್ಪನ ಬೆಟ್ಟಕ್ಕೆ ಉಘೇ ಮಾದೇವ ಎಂದು ಕೂಗುತ್ತಾ ಹೊರಡುವಲ್ಲಿಗೆ ವರ್ಷದ ಆಚರಣೆಗೆ ತೆರೆ ಬೀಳುತ್ತಿತ್ತು.

ನಾನು ಕಾಲೇಜಿನ ಮೆಟ್ಟಿಲು ಹತ್ತುವ ಹೊತ್ತಿಗೆ ವರ್ಷಾಚರಣೆಯ ಸ್ವರೂಪ ಅತೀ ವೇಗವಾಗಿಯೇ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿತು. ಪಟ್ಟಣಗಳಲ್ಲಿ ವಾಸ್ತವ್ಯ ಹೂಡಿದ್ದ ಪಬ್ಬು ಕ್ಲಬ್ಬಿನ ಸಂಸ್ಕೃತಿ ಅತ್ಯಂತ ಬಿರುಸಾಗಿಯೇ ಹಳ್ಳಿಗಳನ್ನ ವ್ಯಾಪಿಸಿಕೊಳ್ಳಲಾರಂಭಿಸಿತು. ಗೌಡರು ತೀರಿಕೊಂಡ ನಂತರವಂತೂ ತುಂಬಿ ತುಳುಕುತ್ತಿದ್ದ ಅವರ ಮನೆ ಜಗುಲಿ ಖಾಲಿ ಹೊಡೆಯಲಾರಂಭಿಸಿತು. ಕಥೆ, ನಾಟಕಗಳಿಂದ ತುಂಬಿ ಹೋಗುತ್ತಿದ್ದ ರಾತ್ರಿಗಳು ಅನಾಥವಾಗಿದ್ದವು. ಮುಂಜಾನೆಯೇ ಮೊಳಗುತ್ತಿದ್ದ ಭಜನಾ ಗೀತೆಗಳು ಸದ್ದಿಲ್ಲದೆ ಮಾಯವಾಗಿಬಿಟ್ಟವು. ಪ್ರತಿ ಮನೆಯಲ್ಲೂ ಟಿವಿ ಬಂದಮೇಲೆ ಜನ ಗುಂಪುಗೂಡುವುದನ್ನೇ ಮರೆತು ಹೋದರು, ಈಗ ಹೊಸ ವರ್ಷವೆಂದು ಸ್ನೇಹಿತರು ಅಲ್ಲಲ್ಲಿ ಸೇರುವ ಪಾರ್ಟಿಗಳು, ಡಿಜೆ ಹಾಡುಗಳು ಊರಿನ ಆಚರಣೆಯನ್ನು ಬೇರೊಂದು ಮಜಲಿಗೆ ಹೊತ್ತು ಸಾಗಿರುವುದು ಬದಲಾವಣೆ ಜಗದ ನಿಯಮವೆಂದುಕೊಂಡರೂ ಕೆಲವು ಬದಲಾಗದೆ ಹೋದರೆ ಚೆನ್ನ ಎಂದು ನಿಜಕ್ಕೂ ಅನಿಸದಿರದು.

ನನಗೆ ಮೈಸೂರಿನ ವಿದ್ಯಾಭ್ಯಾಸದ ದಿನಗಳಲ್ಲಿ ಆಸರೆಯಾಗಿದ್ದು ಟೀಕೆ ಬಡಾವಣೆಯ ಸರ್ಕಾರಿ ಹಾಸ್ಟೆಲ್. ಅಲ್ಲಿನ ಹೊಸ ವರ್ಷದ ಅನುಭವಗಳು ನಿಜಕ್ಕೂ ವಿಶೇಷವಾಗಿತ್ತು. ಪಟ್ಟಣದ ಹೊಸ ವರ್ಷದ ಆಚರಣೆಗಳು ಬೇರೆಯದ್ದೆ ಮಜಲು ಪಡೆದಿರುವುದರಿಂದ ಅಲ್ಲಿನ ಅನುಭವಗಳು ಬೇರೆಯದ್ದೇ ಆಗಿತ್ತು. ಹಾಸ್ಟೆಲಿನಲ್ಲಿ ಇದ್ದ ಸುಮಾರು ಅರವತ್ತು ಜನರು ಈ ಹೊಸ ವರ್ಷಕ್ಕೆ ಬೇರೆಯದೇ ಸಿದ್ಧತೆಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ವಿಶೇಷವೆಂಬಂತೆ ವಾರ್ಡನ್ ಅವರ ಅಪ್ಪಣೆಯ ಮೇರೆಗೆ ಶಿವಣ್ಣ ಅಂದು ಹೋಳಿಗೆ ಅಥವಾ ಪಾಯಸದ ಅಡುಗೆಯನ್ನು ತಯಾರಿಸಿಬಿಡುತ್ತಿದ್ದ. ಯಾರೋ ಸ್ವಲ್ಪ ತಿಳಿದವರು, ಸ್ನೇಹಿತರಿದ್ದರು ಎಂದು ಪಾರ್ಟಿಗಳಿಗೆಂದು ಹೊರಟುಬಿಡುತ್ತಿದ್ದರು. ಉಳಿದವರು ರಾತ್ರಿ ತುಂಬಿಸುವದಕ್ಕಾಗಿ ಪಕ್ಕದಲ್ಲಿದ್ದ ಲಕ್ಷ್ಮಿ ಟಿವಿ ಸೆಂಟರ್‌ನಿಂದ ಟಿವಿಯನ್ನು ಬಾಡಿಗೆ ತಂದು ಬೇಕಾದ ಸಿನಿಮಾ ಬೇಡದ ಸಿನಿಮಾಗಳನ್ನೆಲ್ಲ ನೋಡುತ್ತಾ ಬೆಳಗು ತುಂಬಿಸುತ್ತಿದ್ದರು.

ನಮ್ಮ ಹಾಸ್ಟೆಲ್‌ನಲ್ಲಿದ್ದ ಅತ್ಯಂತ ಸ್ವಾಭಿಮಾನದ ಮತ್ತು ಶ್ರಮಜೀವಿಯಾದ ಲೋಕಣ್ಣ ವಿದ್ಯಾಭ್ಯಾಸದೊಟ್ಟಿಗೆ ಜೋಳಿಗೆ ಎಂಬ ತಂಡ ಕಟ್ಟಿಕೊಂಡು ಆಗಾಗ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಾ ಅದರ ಸಂಪಾದನೆಯಲ್ಲಿ ಜೀವನ ಸಾಗಿಸುತ್ತಿದ್ದ. ಮೈಸೂರಿನಲ್ಲಿದ್ದಷ್ಟು ವರ್ಷ ಲೋಕಣ್ಣ ಟೀಕೆ ಬಡಾವಣೆಯ ಪ್ರತಿಷ್ಠಿತ ಮಾರುತಿ ದೇವಸ್ಥಾನದ ಮುಂಭಾಗ ತನ್ನ ತಂಡ ಕಟ್ಟಿಕೊಂಡು ಜಾನಪದ ಹಾಡುಗಳೊಟ್ಟಿಗೆ ರಂಗಗೀತೆಗಳು, ಲಾವಣಿಗಳನ್ನು ಹಾಡುತ್ತಾ, ಪ್ರತಿ ಹೊಸ ವರ್ಷದ ರಾತ್ರಿ ಕಳೆಯುತ್ತಿದ್ದ. ನಾವು ಲೋಕಣ್ಣನ ತಂಡದೊಟ್ಟಿಗೆ ಮಾರುತಿ ದೇವಸ್ಥಾನದ ಬಳಿ ಜಮಾಯಿಸಿ ಹೊಸ ವರ್ಷವನ್ನು ಹೊಸ ರೀತಿಯಲ್ಲಿ ಆಚರಿಸುತ್ತಿದ್ದೆವು. ಕಾಲ ಬದಲಾದಂತೆ ಪರಿವರ್ತನೆಗೆ ಎಲ್ಲವೂ ಬದಲಾಗಿ ಹೋದವು. ಹೊಸ ವರ್ಷವೆಂದರೆ ಕೇವಲ ಮೋಜು ಮಸ್ತಿ ಎನ್ನುವಲ್ಲಿಗೆ ಎಲ್ಲವೂ ಬದಲಾಗಿ ಹೋಗಿರುವ ಈ ಘಳಿಗೆಯಲ್ಲಿ ಮತ್ತೆ ಒಂದು ಹೊಸ ವರ್ಷ ಬಾಗಿಲು ತಟ್ಟುತ್ತಿದೆ. ಪ್ರತಿ ಹುಟ್ಟುಹಬ್ಬ ಬಂದಾಗಲೂ ಸಾವಿಗೆ ಮತ್ತೊಂದು ದಿನ ಹತ್ತಿರವಾದೆ ಎನ್ನುವ ಕವಿ ಆರಿಫ್ ರಾಜರ ಮಾತಿನಂತೆ ವರುಷಗಳು ಉರುಳಿದಂತೆಲ್ಲ ಸಾವಿಗೆ ನಾವು ಸನಿಹವಾಗುತ್ತಲೇ ಇರುವಾಗಲೂ ಮತ್ತೊಂದು ಹೊಸ ರೂಪಕೆ ಹೊಸ ಭಿನ್ನತೆಗೆ ನಮ್ಮನ್ನು ನಾವು ತೆರೆದುಕೊಳ್ಳಲು ಇದು ಒಂದು ಸುಯೋಗದ ಸಮಯ. ನಮ್ಮಲ್ಲಿನ ತಪ್ಪುಗಳನ್ನು ಒರೆಗೆ ಹಚ್ಚಿ ಸರಿಯಾದ ಆಯ್ಕೆಗಳನ್ನು ನಮ್ಮ ರೆಸಲ್ಯೂಶನ್ ಮಾಡಿಕೊಂಡು ಹೊಸದೊಂದು ಪರ್ವಕ್ಕೆ ಹೊಸಬರಾಗಿ ಅಡಿ ಇಡಲು ಪ್ರಯತ್ನಿಸೋಣ.

“ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಒಂದೇ ಹರಯ ನಮಗದಷ್ಟೇ ಏತಕೆ..” ಎನ್ನುವ ಸಾಲುಗಳಂತೆ ಒಂದು ಜನ್ಮಕ್ಕೆ ಒಂದೇ ಹರಯ ಒಂದೇ ಬಾಲ್ಯ. ಬನ್ನಿ ಇಪ್ಪತ್ನಾಲ್ಕಕ್ಕೆ ಮತ್ತೊಂದು ಹೊಸ ಹರೆಯಕೆ ಮತ್ತೊಂದು ಹೊಸ ಬಾಲ್ಯಕ್ಕೆ ಹೊಸಬರಾಗಿ ಅಡಿ ಇಡುವ…

About The Author

ಪ್ರಕಾಶ್ ಪೊನ್ನಾಚಿ

ಪ್ರಕಾಶ್ ಪೊನ್ನಾಚಿ ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮದವರು. ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹನೂರು ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ಮಣ್ಣಿಗೆ ಬಿದ್ದ ಮಳೆ’ ಮೊದಲ ಕವನ ಸಂಕಲನವು 2014 ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನಸಹಾಯದಲ್ಲಿ ಆಯ್ಕೆಯಾಗಿ ಬಿಡುಗಡೆಯಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ