”ಇಡೀ ಪ್ರಬಂಧವು ಆಧುನಿಕ ಪೂರ್ವಕಾಲದ ಮಲೆನಾಡಿನ ಹಳ್ಳಿಯ ಬದುಕಿನ ಆಪ್ತ ಚಿತ್ರಣವಾಗಿ ಮನಸ್ಸಿನಲ್ಲಿ ಊರಿಕೊಂಡಿತು. ಮಾರಾಟಕ್ಕೆಂದು ಬರುವ ಹೊರಗಿನವರು ಮನೆಯ ಹೆಣ್ಣಿನ ಕಣ್ಣಿಗೆ ಕಂಡ ರೀತಿಯಲ್ಲೇ ಆ ಪುಟ್ಟ ಮನೆ-ಲೋಕಕ್ಕೂ ಹೊರಗಿನ ವಿಸ್ತಾರ ಲೋಕಕ್ಕೂ ಸಂಬಂಧ ಕಟ್ಟಿಕೊಳ್ಳುವ ಪರಿ ಚೆನ್ನಾಗಿದೆ. ನೀಲವು ಪರಿಮಿತವೇ ಆದರೂ ಅದು “ಕಾಂತಿ.”
ಡಾ. ಎಲ್. ಸಿ. ಸುಮಿತ್ರಾ ಅವರ ಪ್ರಬಂಧಗಳ ಸಂಕಲನ ಓದಿ ವಿಮರ್ಶಕ ಓ ಎಲ್ ನಾಗಭೂಷಣ ಸ್ವಾಮಿ ಬರೆದ ಒಂದು ಆಪ್ತ ಪತ್ರ.

 

ಪ್ರಿಯ ಸುಮಿತ್ರ,
ನಿಮ್ಮ ಪ್ರಬಂಧ ಓದುತ್ತ ಪುತಿನ ಹೇಳಿದರೆಂದು ಅನಂತಮೂರ್ತಿ ಮತ್ತೆ ಮತ್ತೆ ಹೇಳುತಿದ್ದ “ವಿಷ್ಣುಕಾಂತಿಯ ಪರಿಮಿತ ನೀಲ” ಎಂಬ ನುಡಿ ನೆನಪಿಗೆ ಬಂದಿತು. ನಿಮಗೆ ಆದ ಅನುಭವಗಳನ್ನೆ ನಂಬಿ, ಅವನ್ನೇ ಅಷ್ಟೇ ನಿಜವೆನ್ನಿಸುವ ಹಾಗೆ ಬರೆಯುವ ನಿಮ್ಮ ಸೋಗಿಲ್ಲದ ಬರವಣಿಗೆಯ ಕ್ರಮ ಇಷ್ಟವಾಯಿತು. ಹೊತ್ತು ಮಾರುವವರು ಅನ್ನುವ ಶೀರ್ಷಿಕೆಯಲ್ಲಿನ “ಹೊತ್ತು” ಹೊತ್ತುಕೊಂಡಿರುವ ಎರಡರ್ಥಗಳೂ ಹೊಳೆದು ವಾಹ್ ಅನ್ನಿಸಿತು. ನೀವು ನಿಮ್ಮ ಅನುಭವವನ್ನಷ್ಟೇ ಹೇಳಿದ್ದರೂ ಇಡೀ ಪ್ರಬಂಧವು ಆಧುನಿಕ ಪೂರ್ವಕಾಲದ ಮಲೆನಾಡಿನ ಹಳ್ಳಿಯ ಬದುಕಿನ ಆಪ್ತ ಚಿತ್ರಣವಾಗಿ ಮನಸ್ಸಿನಲ್ಲಿ ಊರಿಕೊಂಡಿತು. ಮಾರಾಟಕ್ಕೆಂದು ಬರುವ ಹೊರಗಿನವರು ಮನೆಯ ಹೆಣ್ಣಿನ ಕಣ್ಣಿಗೆ ಕಂಡ ರೀತಿಯಲ್ಲೇ ಆ ಪುಟ್ಟ ಮನೆ-ಲೋಕಕ್ಕೂ ಹೊರಗಿನ ವಿಸ್ತಾರ ಲೋಕಕ್ಕೂ ಸಂಬಂಧ ಕಟ್ಟಿಕೊಳ್ಳುವ ಪರಿ ಚೆನ್ನಾಗಿದೆ. ನೀಲವು ಪರಿಮಿತವೇ ಆದರೂ ಅದು “ಕಾಂತಿ.”

(ಡಾ. ಎಲ್.ಸಿ. ಸುಮಿತ್ರಾ)

ವ್ಯಕ್ತಿ ಪರಿಮಿತವೇ ಆದರೂ ವ್ಯಕ್ತಿಯೊಳಗೆ ರೂಪುಗೊಂಡು ಬದುಕಿನುದ್ದಕ್ಕೂ ಇರುವುದು ಅಪ್ರತಿಮ ಲೋಕವೇ ಸರಿ. “ಅಡಿಕೆ ಚಪ್ಪರ” ದಲ್ಲಿ ಬರುವ ಕಣ್ಣಿನ ನೋಟದ, ನಾಲಗೆ ರುಚಿಯ, ಆಲಿಸುವ ಶಬ್ದದ ಲೋಕದ ವಿವರಗಳು ಈಗಿನ ಮಕ್ಕಳಿಗೆ ಆಗಲೇ ಅಪರಿಚಿತವಾಗಿರುವ ಲೋಕದ ಭಾವ ವಿವರಗಳನ್ನು ಅಕ್ಷರಗೊಳಿಸಿವೆ. ಇಂಥದೇ ಇನ್ನೊಂದು ಲೋಕ “ನೆನಪಿನ ಗಂಗೋತ್ರಿ”. ಲೇಡೀಸ್ ಹಾಸ್ಟೆಲಿನ, ನೆನಪಿನ ಗಂಗೋತ್ರಿಯ ಚೆಲುವು, ತೃಪ್ತಿ, ಸಮಾಧಾನ ಇವತ್ತಿನ ವಾಸ್ತವದ ಗಂಗೋತ್ರಿಯ ಭಾವ, ಶಿಕ್ಷಣಗಳ ದಾರಿದ್ರ್ಯ ನಮ್ಮೆಲ್ಲರ ಮನಸ್ಸಿನಲ್ಲೂ ಆಗೀಗ ಸುಳಿದು ಹೋಗುವ ಭಾವಗಳೇ. ಆದರೂ ಈ ಲೇಖನ ಓದುತ್ತ ಒಂದು ಪ್ರಶ್ನೆ ಮೂಡಿದ್ದು ನಿಜ. ನಮ್ಮ ಕಾಲದ ಹಿರಿಯ ತಲೆಗಳು ತಮ್ಮ ಕಾಲ ಹೇಗಿತ್ತು, ಈಗ ಹೇಗೆ ಎಲ್ಲ ಹಾಳಾಗಿದೆ ಅನ್ನುತಿದ್ದರಲ್ಲಾ ನಾವೂ ಹಾಗೆ ಆಗಿಬಿಟ್ಟು ಹಳೆಯದನ್ನು ನೆನೆಯುತ್ತಿದ್ದೇವಾ ಅನ್ನಿಸಿತು. ಈ ವರ್ಷ ಗಂಗೋತ್ರಿಯ ಹಾಸ್ಟೆಲಿನಲ್ಲಿ ಓದುತ್ತಿರುವ ಹುಡುಗಿ ಇನ್ನು ಮೂವತ್ತು ವರ್ಷದ ನಂತರ ತನ್ನ ನೆನಪುಗಳನ್ನು ಬರೆದರೆ ಅದರಲ್ಲೂ ನಿಮ್ಮ ಪ್ರಬಂಧದಲ್ಲಿರುವಂಥದೇ ಹಿತವಾದ ನೆನಪು ಮಾತ್ರವೇ ಇರಬಹುದಲ್ಲವೇ ಅನ್ನಿಸಿತು. ಅಂದರೆ ಒಳ್ಳೆಯ ನೆನಪುಗಳು ಮಾತ್ರ ಉಳಿದುಕೊಂಡು ಅವನ್ನಷ್ಟೇ ಬರಹಗೊಳಿಸಿದರೆ ಆ ಕಾಲದ ದುಷ್ಟತನ, ಮಿತಿ, ದಾರಿದ್ರ್ಯ, ಕೊಳಕುಗಳೆಲ್ಲ ಬೇಕೆಂತಲೇ ಇಲ್ಲವಾಗಿಸುತ್ತೇವೋ ಅನ್ನಿಸಿತು. ನಿಮ್ಮ ಪ್ರಬಂಧ ಮೆಚ್ಚಿಕೂಡ ಹೊಳೆದ ವಿಚಾರವಷ್ಟೇ ಇದು.
“ಹೂವು ದೇವರು” ಚೆನ್ನಾಗಿರಬಹುದು ಆದರೆ ಅಷ್ಟು ಇಷ್ಟವಾಗಲಿಲ್ಲ. ಆಪ್ತತೆಯ ಬದಲು ವಿಚಾರಗಳೇ ಪ್ರಮುಖವಾದವು ಅನ್ನಿಸಿತು.

“ನನ್ನ ಅಜ್ಜಿಗೆ ಮನೆಯೇ ಜಗತ್ತು” ನಿಮ್ಮ ಉತ್ತಮ ಪ್ರಬಂಧಗಳಲ್ಲಿ ಒಂದು. ನಿಮ್ಮಲ್ಲಿ ಈಗಲೂ ಸಮೃದ್ಧವಾಗಿರುವ ಆಪ್ತನೆನಪುಗಳನ್ನು ಧಾರಾಳವಾಗಿ ಬಳಸಿಕೊಂಡು ನಿಮ್ಮ ಹಿಂದಿನ ತಲೆಮಾರಿನ ಸಾತ್ವಿಕ ಹೆಣ್ಣು ಜೀವದ ಜಗತ್ತನ್ನು ಸೃಷ್ಟಿ ಮಾಡಿದ್ದೀರಿ. ಅದು ಹರಳಿನ ಓಲೆಯನ್ನು ಕ್ಲೀನುಮಾಡಿಕೊಳ್ಳುವ, ನೀಲಿ ಚೀಲದ, ಪ್ಲಾಸ್ಟಿಕ್ ಬಿಂದಿಗೆ, ತಾಮ್ರದ ಬಿಂದಿಗೆ ಇಂಥ ನೂರಾರು ನೆನಪುಗಳು ಗತಕಾಲದ ಭಾವ ಚಿತ್ರಗಳಾಗಿವೆ, ಜೀವಕೋಶಗಳಾಗಿವೆ. ಇಡೀ ಬರವಣಿಗೆ ಒಂದು ಗದ್ಯಭಾವಗೀತೆ ಅನ್ನಿಸಿತು. ಲಲಿತಾ ಸಿದ್ಧಬಸವಯ್ಯ ಅವರು ಹಲವು ವರ್ಷಗಳ ಹಿಂದೊಮ್ಮೆ ರಾಮನಗರದಲ್ಲಿ ಓದಿದ್ದ ಅಜ್ಜಿಯನ್ನು ಕುರಿತ ಪದ್ಯವೊಂದು ನೆನಪಿಗೆ ಬಂದಿತ್ತು. ನಿಮ್ಮ ಬರಹ ಮತ್ತು ಆ ಕವಿತೆ ಎಲ್ಲ ಅಜ್ಜಿಯರ ಪ್ರೋಟೋಟೈಪ್! “ತುಂಚನ್ ಕವಿಯ ನೆಲದಲ್ಲಿ” ಬರಹದ ಮೊದಲ ಪುಟ ತುಂಬ ಚೆನ್ನಾಗಿದೆ. ರೈಲಿನೊಳಗಿನ ಜನರ ಲೋಕ, ಕಿಟಕಿಯಾಚೆ ಕಾಣುವ ಕೇರಳದ ಲೋಕಗಳ ಜೋಡಣೆ ಇಷ್ಟವಾಯಿತು. ಉಳಿದಂತೆ ಇದು ಸೆಮಿನಾರೊಂದರ ಡೈರಿಯ ವಿವರ ಅನ್ನಿಸಿತು. ಕವಿಯೊಬ್ಬನ ಲೋಕವನ್ನು ನಿಮ್ಮೊಳಗೆ ತೆಗೆದುಕೊಂಡ ಕ್ರಮವನ್ನು ಚೆನ್ನಾಗಿ ವಿವರಿಸಿದ್ದೀರಿ.

ವ್ಯಕ್ತಿ ಪರಿಮಿತವೇ ಆದರೂ ವ್ಯಕ್ತಿಯೊಳಗೆ ರೂಪುಗೊಂಡು ಬದುಕಿನುದ್ದಕ್ಕೂ ಇರುವುದು ಅಪ್ರತಿಮ ಲೋಕವೇ ಸರಿ. “ಅಡಿಕೆ ಚಪ್ಪರ” ದಲ್ಲಿ ಬರುವ ಕಣ್ಣಿನ ನೋಟದ, ನಾಲಗೆ ರುಚಿಯ, ಆಲಿಸುವ ಶಬ್ದದ ಲೋಕದ ವಿವರಗಳು ಈಗಿನ ಮಕ್ಕಳಿಗೆ ಆಗಲೇ ಅಪರಿಚಿತವಾಗಿರುವ ಲೋಕದ ಭಾವ ವಿವರಗಳನ್ನು ಅಕ್ಷರಗೊಳಿಸಿವೆ. ಇಂಥದೇ ಇನ್ನೊಂದು ಲೋಕ “ನೆನಪಿನ ಗಂಗೋತ್ರಿ”. ಲೇಡೀಸ್ ಹಾಸ್ಟೆಲಿನ, ನೆನಪಿನ ಗಂಗೋತ್ರಿಯ ಚೆಲುವು, ತೃಪ್ತಿ, ಸಮಾಧಾನ ಇವತ್ತಿನ ವಾಸ್ತವದ ಗಂಗೋತ್ರಿಯ ಭಾವ, ಶಿಕ್ಷಣಗಳ ದಾರಿದ್ರ್ಯ ನಮ್ಮೆಲ್ಲರ ಮನಸ್ಸಿನಲ್ಲೂ ಆಗೀಗ ಸುಳಿದು ಹೋಗುವ ಭಾವಗಳೇ.

“ಆಹಾ ಇಸ್ಕೂಲು” ದೋಣಿಗೆ ಒರಗಿಸಿಟ್ಟ ಪುಟ್ಟ ಕನ್ನಡಿಯಲ್ಲಿ ಶೇವ್ ಮಾಡಿಕೊಳ್ಳುತಿದ್ದ ಮೇಷ್ಟರ ಚಿತ್ರ ನೆನಪುಳಿಯಿತು. ಈ ಪ್ರಬಂಧವೂ ನಿಮ್ಮ ಬಹಳಷ್ಟು ಬರಹಗಳ ಹಾಗೆ ನೆನಪಿನ ಆ ಕಾಲ, ಬದುಕಿನ ಈ ಕಾಲಗಳ ವೈದೃಶ್ಯಗಳನ್ನೇ ಆಧರಿಸಿದೆ. ಆದರೆ “ಉಳುವವನೇ ಹೊಲದೊಡೆಯನಾದ ಮೇಲೆ ಆ ವೈಭವ ಕಣ್ಮರೆಯಾಯ್ತು” ಎಂಬ, ಲೇಖನದ ಕೊನೆಯ ಮಾತು ಹಲವು ಪ್ರಶ್ನೆಗಳನ್ನು ಹುಟ್ಟಿಸಿದ್ದು ನಿಜ. ನೆನಪುಗಳ ಜೊತೆಯಲ್ಲಿ ವಿಚಾರವನ್ನೂ ಬೆರಸಲು ಹೊರಟಾಗ ಇಂತ ಪ್ರಶ್ನೆಗಳು ಹುಟ್ಟುವುದು ಸಹಜ. ನನಗೂ ಬಿ.ಎ.ಯಲ್ಲಿ ಮೇಷ್ಟರಾಗಿದ್ದ ಜಿಎಚ್ ನಾಯಕರನ್ನು ಕುರಿತ ಬರಹ ಸಹಜವಾಗಿಯೇ ಇಷ್ಟವಾಯಿತು. ಅವರ ವ್ಯಕ್ತಿತ್ವ ನಿಮ್ಮ ಬರಹದಲ್ಲಿ ಬಹಳ ಚೆನ್ನಾಗಿ ಮೂಡಿದೆ.

“ಮಳೆಯನ್ನು ನೆನೆದು” ಮತ್ತೆ ನಿಮ್ಮ ಬರವಣಿಗೆಯ ಕ್ರಮಕ್ಕೆ ಮರಳಿದೆ. ಕಾಲ ಮತ್ತು ಕಳೆದ ಕಾಲದ ನೆನಪು ಈಗಿನ ಕಾಲದ ಒಂದೆರಡು ಸಂಗತಿಗಳ ವೈದೃಶ್ಯ. ಆದರೂ ನಿಮ್ಮ ನೆನಪಿನೊಡನೆ ಬೆರತು ಬರುವ ಭಾವಲೋಕ ಇಷ್ಟವಾಗುತ್ತದೆ. “ಪದವಿ ಶಿಕ್ಷಣದ ಕಷ್ಟ ಸುಖ” ವಾಗ್ವಾದಕ್ಕೆ ಕಾರಣವಾಗುವ ಅಂಶಗಳನ್ನು ಒಳಗೊಂಡಿದೆ. ಪರೀಕ್ಷೆಗಳು ಅಪಮೌಲ್ಯಗೊಂಡಿರುವುದರಿಂದ ಸನ್ನದ್ಧರಲ್ಲದ ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕೆ ಬರುವಂತಾಗಿದೆ ಅನ್ನುವುದು ಅರ್ಧ ಸತ್ಯವಲ್ಲವೇ? ಶಿಕ್ಷಕರಲ್ಲೂ ಕಾಟಾಚಾರದ ಮೇಷ್ಟರುಗಳ ಸಂಖ್ಯೆಯೇ ಹೆಚ್ಚಿದೆಯಲ್ಲವೇ? ಇಡೀ ದೇಶದ ಮನೋಭಾವವೇ ಪ್ರಯಾಣ ಮಾಡದೆ ಊರು ತಲುಪಬೇಕು ಅನ್ನುವ ಅಪೇಕ್ಷೆಗೆ ಬಲಿಯಾಗಿರುವುದಲ್ಲವೇ ಇತ್ಯಾದಿ ಇತ್ಯಾದಿ.

“ಮರಳಿ ಮಣ್ಣಿಗೆ ಬರಬೇಕಾದ ಕಾಲ”ದ ವಿಚಾರ ಸರಿಯಾಗಿದೆ. ಆದರೆ ನನ್ನಂಥವರು ಸುರಕ್ಷಿತ ಮಧ್ಯಮವರ್ಗದ ಓದುಗರು ವಿಚಾರ ಚೆನ್ನಾಗಿದೆ ಅನ್ನುವುದನ್ನು ಬಿಟ್ಟು ಬೇರೇನೂ ಮಾಡಲಾಗದು ಅನ್ನುವುದು ಅನಿವಾರ್ಯ ದುರಂತ! “ಮನದಲ್ಲಿ ನಿಂತು ಮಾರ್ಗ ತೋರಿದವರು” ಲೇಖನದಲ್ಲಿ ಆಹಾ ಇಸ್ಕೂಲು ಲೇಖನದ ಹಲವು ವಿವರಗಳು ಒಂದಿಷ್ಟು ವ್ಯತ್ಯಾಸದೊಡನೆ, (ಕನ್ನಡಿ ಒರಗಿಸಿಟ್ಟ ದೋಣಿ ಬೋರಲು ಬಿದ್ದ ದೋಣಿಯಾಗಿರುವುದು ಇತ್ಯಾದಿ) ಮತ್ತೆ ಕಾಣಿಸಿಕೊಂಡಿವೆ. ಆದರೆ ಆಹಾ ಇಸ್ಕೂಲು ಲೇಖನಕ್ಕಿಂತ ಹೆಚ್ಚಿನ ವಿವರ ಸಮೃದ್ಧಿ ಇದೆ. ಮೊದಲು ಓದಿದ್ದ ಲೇಖನಕ್ಕಿಂತ ಇದು ಇಷ್ಟವಾಯಿತು. ತೇಜಸ್ವಿ ನೆನಪಿನ ಚಿತ್ರಗಳು ಲೇಖನದ ಮೊದಲ ವಾಕ್ಯ ತುಂಬ ಚೆನ್ನಾಗಿದೆ. ಆಪ್ತ ವಿವರಗಳು ಮನಸ್ಸನ್ನು ತುಂಬಿದವು.

“ಆಹಾ ಇಸ್ಕೂಲು” ದೋಣಿಗೆ ಒರಗಿಸಿಟ್ಟ ಪುಟ್ಟ ಕನ್ನಡಿಯಲ್ಲಿ ಶೇವ್ ಮಾಡಿಕೊಳ್ಳುತಿದ್ದ ಮೇಷ್ಟರ ಚಿತ್ರ ನೆನಪುಳಿಯಿತು. ಈ ಪ್ರಬಂಧವೂ ನಿಮ್ಮ ಬಹಳಷ್ಟು ಬರಹಗಳ ಹಾಗೆ ನೆನಪಿನ ಆ ಕಾಲ, ಬದುಕಿನ ಈ ಕಾಲಗಳ ವೈದೃಶ್ಯಗಳನ್ನೇ ಆಧರಿಸಿದೆ. ಆದರೆ “ಉಳುವವನೇ ಹೊಲದೊಡೆಯನಾದ ಮೇಲೆ ಆ ವೈಭವ ಕಣ್ಮರೆಯಾಯ್ತು” ಎಂಬ, ಲೇಖನದ ಕೊನೆಯ ಮಾತು ಹಲವು ಪ್ರಶ್ನೆಗಳನ್ನು ಹುಟ್ಟಿಸಿದ್ದು ನಿಜ. ನೆನಪುಗಳ ಜೊತೆಯಲ್ಲಿ ವಿಚಾರವನ್ನೂ ಬೆರಸಲು ಹೊರಟಾಗ ಇಂತ ಪ್ರಶ್ನೆಗಳು ಹುಟ್ಟುವುದು ಸಹಜ. ನನಗೂ ಬಿ.ಎ.ಯಲ್ಲಿ ಮೇಷ್ಟರಾಗಿದ್ದ ಜಿಎಚ್ ನಾಯಕರನ್ನು ಕುರಿತ ಬರಹ ಸಹಜವಾಗಿಯೇ ಇಷ್ಟವಾಯಿತು.

“ಮಳೆಗಾಲದ ಶಾಲೆಯ ದಾರಿ” ಚನ್ನಾಗಿದೆ ಅನ್ನಿಸಿದ ಇನ್ನೊಂದು ಬರಹ. ಅದು ಕೇವಲ ಹಳ್ಳಿ ಶಾಲೆಗೆ ಕರೆದೊಯ್ಯುತಿದ್ದ ಮಳೆಗಾಲದ ದಾರಿಯಲ್ಲ, ಇಡೀ ಬದುಕಿನ ಕ್ರಮದ ಚಿತ್ರವೇ ರೂಪುಗೊಂಡಿದೆ.

ಹಾವಿನ ಹೆಜ್ಜೆ ಅತ್ಯುತ್ತಮ ಬರಹ. ಅದು ಕಥೆಯ, ಭಾವಗೀತೆಯ ಲಕ್ಷಣಗಳನ್ನೆಲ್ಲ ಹೊತ್ತು ರೂಪುಗೊಂಡಿದೆ. ಇದರ ಜೊತೆಗೆ, ಮಳೆಗಾಲದ ಶಾಲೆಯ ದಾರಿ, ಹೊತ್ತು ಮಾರುವವರು, ಅಡಕೆ ಚಪ್ಪರ, ಮನಸ್ಸಿನಲ್ಲಿ ನಿಂತು ಮಾರ್ಗ ತೋರಿದವರು ಇವು ಬಹಳ ಇಷ್ಟವಾದ ಬರಹಗಳು. ಕಾಲ, ನೆನಪು, ವರ್ತಮಾನದ ವಾಸ್ತವ, ಇವುಗಳ ಹೆಣಿಗೆ ನಿಮ್ಮ ಬರಹದ ಮುಖ್ಯ ಲಕ್ಷಣವಾಗಿದೆ. ನೆನಪುಗಳ ಸವಿಯ ಜೊತೆಗೆ ಕಹಿಯ ನೆನಪೂ ಬೆರೆತರೆ ನಿಮ್ಮ ಬರಹಕ್ಕೆ ಇನ್ನಷ್ಟು ಗಹನತೆ ಬರುತ್ತದೆ ಅನ್ನಿಸಿತು. ಒಂದೊಂದು ಮುಖದ ಹಿಂದೆಯೂ ಅಪ್ರತಿಮ ಲೋಕ—ಒಂದೊಂದು ಜೀವವೂ ಪ್ರತಿ ಮಾಡಲಾಗದ ಪ್ರತಿಯೇ ಇಲ್ಲದ ಪ್ರತಿಮೆಯಾಗಲೊಲ್ಲದ ಅ-ಪ್ರತಿಮಲೋಕ ಅನ್ನುವುದು ನಿಮ್ಮ ಬರಹಗಳನ್ನು ಓದುತ್ತ ಮನಸ್ಸಿನಲ್ಲಿ ಮೂಡಿದ ಭಾವ.
ಒಳ್ಳೆಯ ಪ್ರಬಂಧ ಓದಿಸಿದ್ದಕ್ಕೆ ಥ್ಯಾಂಕ್ಸ್.
ಇತಿ ನಿಮ್ಮ ಪ್ರೀತಿಯ ,
ಓ ಎಲ್ ಎನ್.