”ಅಷ್ಟೊತ್ತು ಇದ್ದ ಕಾಡು ಕಳೆದು, ವಿಶಾಲವಾದ ಅಡಿಕೆ ತೋಟ, ಭತ್ತದ ಗದ್ದೆಗಳು, ತೆಂಗಿನ ತೋಟಗಳು ಸುತ್ತಲೂ ಎರಡೂ ಬದಿಯನ್ನು ಆವರಿಸಿತ್ತು. ಅದರ ಹಿನ್ನೆಲೆಯಲ್ಲಿ ಕುದುರೆಮುಖ ಬಿಮ್ಮಗೇ ನಿಂತಿತ್ತು. ಅಷ್ಟೊತ್ತು ಬೆಳಕು ಬೆಳಕಾಗಿದ್ದ ಹಾದಿಯ ಮೇಲೆ ಈಗ ಅಡಿಕೆ ತೋಟಗಳ ನೆರಳು, ಬಾಳೆ ತೋಟಗಳ ಗಾಳಿ ಆಡಿದ್ದರಿಂದ ಇದು ಬೇರೆಯೇ ಪ್ರದೇಶವೇನೋ ಅನ್ನಿಸುವಂತಿತ್ತು. ಹಾಗೇ ಸುತ್ತಲೂ ಇರುವ ತೋಟಗಳಿದ ಬರುತ್ತಿರುವ ಹಿತವಾದ ಹವೆಯನ್ನೂ, ನೆರಳನ್ನೂ ಅನುಭವಿಸುತ್ತಾ ನಿಂತಿರುವಾಗ ಅಲ್ಲೇ ದೂರದಿಂದ ನಡು ವಯಸ್ಸಿನ ವ್ಯಕ್ತಿಯೊಬ್ಬರು ಹಗೂರನೇ ಬರುತ್ತಿದ್ದರು”
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಏಳನೆಯ ಕಂತು.

 

ಬಿಸಿಲುಗಾಲದಲ್ಲಿ ಬಿಸಿಲ ತುಣುಕು ತಿಂದು ಹೊಳೆಯುತ್ತಿರುವ ಕಾಡು, ಚಳಿಗಾಲದಲ್ಲಿ ಮಂಜಿನ ರಗ್ಗು ಹೊದ್ದು ಹಿತವಾಗಿ ಕಾಣಿಸುವ ಕಾಡು, ಮಳೆಗಾಲದಲ್ಲಿ ಮೋಡಗಳನ್ನೇ ತಿನ್ನುವಂತೆ ಮಳೆಗೆ ನೆನೆದು ನೆನೆದು ಹರಿದ್ವರ್ಣವಾಗಿ ಶೋಭಿಸುತ್ತಿರುವ ಮಳೆಕಾಡು, ಈ ಮೂರು ಕಾಲಗಳಲ್ಲಿ ಕಾಡು ನಿಜಕ್ಕೂ ಅದ್ಬುತ ಅಂತ ಕಾಣಿಸುವುದು ಯಾವ ಕಾಲದಲ್ಲಿ? ಅಂತ ಪ್ರಶ್ನೆ ಮಾಡಿದರೆ ಅದು ಜಿಟಿ ಜಿಟಿ ಮಳೆ ಬೀಳುತ್ತಿರುವ ಮಳೆಗಾಲದಲ್ಲೇ ಅಂತ ಥಟ್ ಅಂತ ಹೇಳಿಬಿಡಬಹುದು. ಬೇಸಿಗೆ ಮತ್ತು ಚಳಿಗಾಲದಲ್ಲಿಯೂ ಕಾಡು ಬೇರೊಂದು ರೀತಿಯಲ್ಲಿ ಚೆಂದ ಕಾಣಿಸಿದರೂ ಬರಡಾದ ಕಾಡಿಗೆ ಜೀವ ಬರುವುದು ಮಳೆ ಬಿದ್ದಾಗ, ಒಂದೇ ವೇಗದಲ್ಲಿ ಬಿದ್ದ ಮಳೆ ಕಾಡಿನ ಸಕಲ ಜೀವ ಸಂಕುಲಗಳನ್ನೂ ತಣಿಸಿ ಕಾಡಿನ ನೆಲವನ್ನೆಲ್ಲಾ ಒದ್ದೆ ಮಾಡುತ್ತಲೇ ಹಸಿರ ಕಾಡುಗಳು ಖುಷಿಯಿಂದ ಮಾತನಾಡಲು ಶುರುಮಾಡುತ್ತವೆ, ಬೇಸಗೆಯಲ್ಲಿ ನೋಡಿದ ಕಾಡನ್ನು ನೋಡೋಣವೆಂದು ಈಗ ಅದೇ ದಾರಿಯತ್ತ ಸಾಗಿದರೂ ಬಿದ್ದ ಮಳೆಗೆ ಹಸಿರೆಲ್ಲಾ ಬಿರಿದು ಹುಲ್ಲೇ ಇರದ ಕಡೆ ಹುಲ್ಲು ಬೆಳೆದು ಕಾಲುದಾರಿಯಲ್ಲೆಲ್ಲಾ ಪಾಚಿಗಟ್ಟಿರುತ್ತದೆ, ಇಡೀ ಕಾಡಿನ ಕೋಟೆಯಲ್ಲಿ ಕಹಳೆ ಊದುವಂತೆ ಕಪ್ಪೆ, ಮಳೆ ಹುಳಗಳೆಲ್ಲಾ ಒಟ್ಟಾಗಿ ಖುಷಿಯಿಂದ ಮಳೆಗಾಲದ ಸಾಮೂಹಿಕ ಭಜನೆ ಮಾಡಲು ಶುರುಮಾಡುತ್ತವೆ.

ಇನ್ನೂ ಮಳೆಗೆಂದೇ ಬರುವ, ಮಳೆಯನ್ನೇ ಧ್ಯಾನಿಸಿ, ಮಳೆಯಲ್ಲಿಯೇ ಮಹಾಮಜ್ಜನಗೈದು ಮಳೆಬಿಟ್ಟ ಮೇಲೆ ಬರುವ ಹಿತವಾದ ಗಾಳಿಗೆ ಮೈಯೊಡ್ಡಿ ಸುಖಿಸುವ ಹಕ್ಕಿಗಳನ್ನು ಈ ಮಳೆಕಾಡುಗಳಲ್ಲಿ ನೋಡುತ್ತ ಕೂತರೆ ಕಾಡಿನಲ್ಲೇ ಇದ್ದುಬಿಡೋಣ, ಇದೇ ನಿಜ. ಇದೇ ಬಾಳಿನ ರಸ ಖನಿಜ ಅನ್ನಿಸುತ್ತದೆ. ಹೀಗೇ ಮಳೆಗಾಲದಲ್ಲಿ ಕಾಡಿನ ಯಾವ ದಾರಿ ಹೊಕ್ಕರೂ ಮನಸ್ಸಿಗೆ ಖುಷಿಯೇ, ಏಕೆಂದರೆ ಎಲ್ಲಾ ದಾರಿಗಳಲ್ಲೂ ಹಸಿರು ಮುಕ್ಕಳಿಸುತ್ತಿರುತ್ತದೆ. ಎಲ್ಲಾ ಕಾಡಂಚಿನ ಮನೆಗಳು ಹಸಿರಾಗಿ ಕಾಣಿಸುತ್ತದೆ, ಅಲ್ಲಿರುವ ಹಳ್ಳಗಳಲ್ಲೂ ಕಾಡಿನ ಮರಗಳ ಪ್ರತಿಬಿಂಬ, ಒಟ್ಟಾರೆ ಎಲ್ಲೆಲ್ಲೂ ಹಸಿರು, ಜೀವದುಸಿರು.

ಮಲೆಬೆಟ್ಟು ಕೂಡ ಇಂತದ್ದೇ ಹಸಿರಲ್ಲಿ ಮೈತುಂಬಿ ಮಳೆರಾಯನ ಬಿರುಸಿಗೆ ಜಿಗ್ಗೆನ್ನುವ ಮಳೆಕಾಡು. ಹರೆಯದ ಹುಡುಗಿಯೊಬ್ಬಳ ನಿಬಿಡ ಕೇಶ ರಾಶಿಯಂತೆ ಹಸಿರ ಪೊದೆ, ವೃಕ್ಷಗಳನ್ನು ತುಂಬಿಕೊಂಡು ನಿಗೂಢವಾಗಿ ನಿಂತಿರುವ ಮಲೆಬೆಟ್ಟು, ಕಾರ್ಕಳದ ಸುಂದರ ಗ್ರಾಮವಾದ ದುರ್ಗ ದೇವರ ಕಾಡಿನ ಪಕ್ಕದಲ್ಲೇ ಪವಡಿಸಿರುವ ಮಗುವಿನಂತಹ ಕಾಡು. ಮೊನ್ನೆ ಮಳೆ ಬಿಡುವು ಕೊಟ್ಟು ಮಳೆಗಾಲದ ಎಳೆ ಬಿಸಿಲು ಸಣ್ಣಗೇ ಮೂಡುತ್ತಿರುವಾಗ, ಒಂದಷ್ಟು ಹನಿಗಳು ಬಾಳೆ ಎಲೆಯ ಮೇಲೆ ಕರಗುತ್ತಿರುವಾಗ, ಮೋಡಗಳು ನೀಲ ಆಕಾಶಕ್ಕೆ ಚೂರು ಚೂರೇ ಜಾಗ ಮಾಡಿಕೊಟ್ಟು ಬೆಟ್ಟಗಳ ಮರೆಯಲ್ಲಿ ನಿಂತು “ಸ್ವಲ್ಪ ಹೊತ್ತು ಬಿಟ್ಟು ಬರುವ” ಅಂತ ಪಕ್ಕ ಸರಿದಾಗ, ನಂಗೆ ಮಳೆಗಾಲದ ಮಲೆಬೆಟ್ಟು ನೋಡುವ ಆಸೆಯಾಗಿ ಸೀದಾ ದುರ್ಗ ಕಾಡು ದಾಟಿ ಮಲೆಬೆಟ್ಟಿನ ಹಿಂಡು ಅರಣ್ಯದತ್ತ ಸಾಗಿದ್ದೆ. ಮಲೆಬೆಟ್ಟಿನ ಕಾಡಿನ ಸೆರಗಿಗೆ ಬರುತ್ತ ಬರುತ್ತ, ಅಷ್ಟಿಷ್ಟು ಮೊಂಡುಗಟ್ಟಿದ ಮನಸ್ಸೆಲ್ಲಾ ಶಾಂತವಾಗಲು ಶುರುವಾಯಿತು. ಅವಳ ಹಸಿರ ವೇಲೊಂದು ಹಿತವಾದ ಗಾಳಿಗೆ ಹರಿದಾಡಿದಂತಿತ್ತು ಮಲೆಬೆಟ್ಟಿನ ದಾರಿ. ಆ ದಾರಿಯ ತಿರುವು, ಮಳೆ ಬಿದ್ದು ಗಿಳಿಹಸುರಾಗಿದ್ದ ಅರಣ್ಯದ ನೆತ್ತಿ, “ಈ ತಿರುವು ದಾಟಿದರೆ ಆಚೆ ಯಾವ ಸ್ವರ್ಗವಿರಬಹುದು, ಯೋಚನೆ ಮಾಡಿ” ಅನ್ನುತ್ತಾ ಚೂರೂ ಗುಟ್ಟು ಬಿಟ್ಟುಕೊಡದಂತೆ ಸಣ್ಣಗೇ ಪಿಸುನುಡಿದಂತಿದ್ದ ಮಣ್ಣಿನ ರೋಡು, ಇವನ್ನೆಲ್ಲಾ ಮೌನದಿಂದಲೇ ನೋಡುತ್ತಾ ಇರೋಣ ಅನ್ನಿಸಿ, ಅಲ್ಲೇ ತುಂಬಾ ಹೊತ್ತು ನಿಂತು, ಆ ಕಾಡಿನ ನೆತ್ತಿಯನ್ನೂ, ತಿರುವನ್ನೂ ನಿರುಕಿಸುತ್ತಾ ಕೂತೆ.

ಅಲ್ಲೇ ಪಾಚಿಗಟ್ಟಿ ಹಸಿರಾಗಿದ್ದ ಹಳ್ಳವೊಂದು ಉದ್ದಕ್ಕೆ ಕೇರೆ ಹಾವಿನಂತೆ ಸಿಕ್ಕ ಸಿಕ್ಕ ಕಡೆಗೆ ಹರಿಯುತ್ತಾ, ಪೊದೆ ಸಿಕ್ಕ ಕಡೆ ನಿಂತು ಆ ಪೊದೆಯೊಡನೆ ರಾಜಿ ಮಾಡಿಕೊಂಡು ಮತ್ತೆ ಹರಿಯುತ್ತಿದ್ದುದು ಆ ಬೆಟ್ಟದ ಹಿನ್ನಲೆಯಲ್ಲಿ ಮೋಹಕವಾಗಿ ಕಾಣುತ್ತಿತ್ತು. ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ಹಳ್ಳ, ಅಲ್ಲೇ ಪಕ್ಕದಲ್ಲಿ ಹಳ್ಳದ ಹರಿತಕ್ಕೆ ನಾಚಿ ಇನ್ನಷ್ಟು ಮೆದುವಾಗುವ ಮಳೆಗಾಲದ ಕಾಡ ಹಣ್ಣುಗಳು, ಚೂರು ಕಾಣಿಸುತ್ತಿರುವ ಬೆಟ್ಟದ ನೆತ್ತಿ, ಎಲ್ಲಿಗೆ ಕರೆದೊಯ್ಯುತ್ತದೆ ಎಂದು ಹೇಳದ ದಾರಿ, ಕಾಣುವ ಕಾಡಿನ ಆಚೆಯೂ ಕಾಣದೇ ಸತಾಯಿಸುತ್ತಿರುವ ಕಾಣದ ಕಾಡು, ಇವೆಲ್ಲ ಭವ್ಯತೆಗಳ ನಡುವೆ ಗವ್ವೆಂದು ಹೆಗಲಿಗೆ ಕೈ ಹಾಕಿ ಮಾತನಾಡುತ್ತಿರುವ ಕಾಡ ಘೋರ ಮೌನ, ಇವೆಲ್ಲ ಮಳೆಗಾಲಕ್ಕಷ್ಟೇ ಸಿಗುವ, ನಮ್ಮ ಕಣ್ಣ ಕೆಮರಾಕ್ಕೆ ದಕ್ಕುವ, ಕಾಡೇ ಬಿಡಿಸಿರುವ ಸನ್ಮೋಹಕ ಚಿತ್ರಗಳು. ಅದಕ್ಕೆ ಹೇಳೋದು; ಮಳೆಗಾಲದಲ್ಲಿ ಕಾಡು ನೋಡಬೇಕು, ಅಥವಾ ಕಾಡಿನ ಹಿನ್ನಲೆಯಲ್ಲಿ ಕೂತು ಮಳೆ ನೋಡಬೇಕು ಅಂತ.

ನಾನು ಅಷ್ಟೊತ್ತು ಇವನ್ನೆಲ್ಲಾ ನೋಡುತ್ತ ನಿಂತವನು ಸೀದಾ ಹರಿಯುವ ಹಳ್ಳದ ದಾರಿ ಹಿಡಿದು, ತಿರುವು ಮರುವಾಗಿರುವ ಹಸಿರ ಹಾದಿ ಹಿಡಿದು ಸಾಗಿದೆ. ಈಗ ಅಷ್ಟೊತ್ತು ಇದ್ದ ಕಾಡು ಕಳೆದು, ವಿಶಾಲವಾದ ಅಡಿಕೆ ತೋಟ, ಭತ್ತದ ಗದ್ದೆಗಳು, ತೆಂಗಿನ ತೋಟಗಳು ಸುತ್ತಲೂ ಎರಡೂ ಬದಿಯನ್ನು ಆವರಿಸಿತ್ತು. ಅದರ ಹಿನ್ನೆಲೆಯಲ್ಲಿ ಕುದುರೆಮುಖ ಬಿಮ್ಮಗೇ ನಿಂತಿತ್ತು. ಅಷ್ಟೊತ್ತು ಬೆಳಕು ಬೆಳಕಾಗಿದ್ದ ಹಾದಿಯ ಮೇಲೆ ಈಗ ಅಡಿಕೆ ತೋಟಗಳ ನೆರಳು, ಬಾಳೆ ತೋಟಗಳ ಗಾಳಿ ಆಡಿದ್ದರಿಂದ ಇದು ಬೇರೆಯೇ ಪ್ರದೇಶವೇನೋ ಅನ್ನಿಸುವಂತಿತ್ತು. ಹಾಗೇ ಸುತ್ತಲೂ ಇರುವ ತೋಟಗಳಿದ ಬರುತ್ತಿರುವ ಹಿತವಾದ ಹವೆಯನ್ನೂ, ನೆರಳನ್ನೂ ಅನುಭವಿಸುತ್ತಾ ನಿಂತಿರುವಾಗ ಅಲ್ಲೇ ದೂರದಿಂದ ನಡು ವಯಸ್ಸಿನ ವ್ಯಕ್ತಿಯೊಬ್ಬರು ಹಗೂರನೇ ಬರುತ್ತಿದ್ದರು. “ಅವರ ಬಳಿ ಹೇಗಾದರೂ ಮಾತು ಶುರು ಮಾಡಬೇಕಲ್ಲ” ಎಂದುಕೊಂಡು, ಯಾವತ್ತಿನ ಪೀಠಿಕೆಯಂತೆ ”ಈ ದಾರಿ ಎಲ್ಲಿಗೆ ಹೋಗುತ್ತದೆ” ಎಂದೆ, ಉದ್ದಕ್ಕೆ ಹರಿಯುತ್ತಿದ್ದ ಒಂದು ದಾರಿಯನ್ನು ತೋರಿಸಿ.

ಮೊನ್ನೆ ಮಳೆ ಬಿಡುವು ಕೊಟ್ಟು ಮಳೆಗಾಲದ ಎಳೆ ಬಿಸಿಲು ಸಣ್ಣಗೇ ಮೂಡುತ್ತಿರುವಾಗ, ಒಂದಷ್ಟು ಹನಿಗಳು ಬಾಳೆ ಎಲೆಯ ಮೇಲೆ ಕರಗುತ್ತಿರುವಾಗ, ಮೋಡಗಳು ನೀಲ ಆಕಾಶಕ್ಕೆ ಚೂರು ಚೂರೇ ಜಾಗ ಮಾಡಿಕೊಟ್ಟು ಬೆಟ್ಟಗಳ ಮರೆಯಲ್ಲಿ ನಿಂತು “ಸ್ವಲ್ಪ ಹೊತ್ತು ಬಿಟ್ಟು ಬರುವ” ಅಂತ ಪಕ್ಕ ಸರಿದಾಗ, ನಂಗೆ ಮಳೆಗಾಲದ ಮಲೆಬೆಟ್ಟು ನೋಡುವ ಆಸೆಯಾಗಿ ಸೀದಾ ದುರ್ಗ ಕಾಡು ದಾಟಿ ಮಲೆಬೆಟ್ಟಿನ ಹಿಂಡು ಅರಣ್ಯದತ್ತ ಸಾಗಿದ್ದೆ.

ನನ್ನನ್ನು ಸಹಜವಾಗಿ ನೋಡಿದ ಅವರು, “ಆ ದಾರಿ ಕೆಲವು ಮನೆಗಳತ್ತ ಹೋಗುತ್ತದೆ, ಮತ್ತೇನೂ ಇಲ್ಲ ಅಲ್ಲಿ” ಎಂದರು. “ದಾರಿ ತಪ್ಪಿ ಬಂದ್ರಾ, ದಾರಿ ಹುಡುಕಿ ಬಂದ್ರಾ” ಅಂತೆಲ್ಲಾ ಅವರಾಗಿ ಕೇಳುವ ಮೊದಲೇ ನಾನೇ “ಸುಮ್ಮನೇ ಊರು ತಿರುಗಲಿಕ್ಕೆ ಬಂದದ್ದು” ಎಂದು ತುಳುವಿನಲ್ಲಿ ಹೇಳುತ್ತ ಊರಿನ ಬಗ್ಗೆ, ಕಾಡಿನ ಬಗ್ಗೆ ಪೀಠಿಕೆ ಹಾಕಲು ಶುರುಮಾಡಿದೆ. ತನ್ನ ಅನುಭವದ ಕಣ್ಣುಗಳಿಂದ ನನ್ನನ್ನೊಮ್ಮೆ ನಿರುಕಿಸಿದ ಆ ವ್ಯಕ್ತಿ “ನಂದು ಇಲ್ಲೇ ಮನೆ, ವಿಠಲ ಶೆಟ್ಟಿ ಅಂತ ಹೆಸರು, ಇಲ್ಲೇ ಚೂರು ಕೆಳಗೆ ಹೋದರೆ ದೊಡ್ಡ ಮರದ ಗೇಟೊಂದು ಕಾಣುತ್ತದಲ್ಲಾ ಅಲ್ಲಿದೆ ನಮ್ಮನೆ”, ಅಂತ ನಸು ನಗುತ್ತ ಮಾತು ನಿಲ್ಲಿಸಿದರು. ಅವರು ಚಂದದಿಂದ ಮಾತನಾಡುವ ಪರಿ ನೋಡಿ “ಈ ಶೆಟ್ಟರು ಒಂಚೂರು ಕೀಲಿ ಕೊಟ್ಟರೆ ಬಾಯ್ತುಂಬಾ ಮಾತಾಡುವ ಅಸಾಮಿಯೇ” ಅಂತನ್ನಿಸಿ ನಂಗೂ ಎಲ್ಲಿಲ್ಲದ ಮೂಡು ಬಂತು. ಅಷ್ಟೊಷ್ಟಿಗೆ ಸುತ್ತಲಿನ ಬಾಳೆ ಮರಗಳನ್ನು ವಿಚಲಿತಗೊಳಿಸಿ, ಭತ್ತದ ಗದ್ದೆಯಿಂದ ಸುಯ್ ಸುಯ್ ಅನ್ನುವ ತೆನೆಗಾಳಿ ಬೀಸಿ ಮೈ ತಂಪು ಮಾಡಿತು. ಆ ಪಚ್ಚೆ ಗಾಳಿಯ ತಂಪಿಗೆ, ಪ್ರೇಮಿಯೊಬ್ಬಳ ಪಿಸುಮಾತಿನಂತಿದ್ದ ಅದರ ಸ್ವರದ ಇಂಪಿಗೆ ಬೇರೇನೂ ಮಾತಾಡೋದೇ ಬೇಡ, ಸುಮ್ಮನೇ ಇವನ್ನೆಲ್ಲಾ ಆಲಿಸುತ್ತ ಕೂತಿರುವುದು ಬದುಕಿನ ಪರಮ ಸುಖ ಅನ್ನಿಸಲು ಶುರುವಾಯಿತು. ಆದರೂ ಸುತ್ತಲೂ ಅಷ್ಟು ಇಷ್ಟವಾಗುವಂತೆ ಹರಡಿದ್ದ ಬಾಳೆ ತೋಟಗಳನ್ನೂ, ಗದ್ದೆಗಳನ್ನು, ಅಲ್ಲೇ ಬಾಳೆ ಮರಕ್ಕೆ ಉದ್ದಂಡ ನಮಸ್ಕಾರ ಮಾಡುವಂತೆ ಹರಿಯುತ್ತಿದ್ದ ಹಳ್ಳವನ್ನು ನೋಡಿ, “ಈ ಗದ್ದೆ ಯಾರದ್ದು ಮಾರಾರ್ರೆ? ಭಾರೀ ಕೃಷಿ ಭೂಮಿ ಇದ್ದ ಹಾಗಿದೆಯಲ್ವಾ” ಅಂದೆ, ಆ ಗದ್ದೆಯಿಂದ ಬರುತ್ತಿದ್ದ ತಣ್ಣಗಿನ ಗಾಳಿಯನ್ನು ಹೀರುತ್ತಾ.

(ಚಿತ್ರಗಳು :ಪ್ರಸಾದ್ ಶೆಣೈ)

“ನಂದೇ ಮಾರಾರ್ರೆ ಏಳೆಂಟು ಎಕ್ರೆ ಇದೆ ಭೂಮಿ, ಕೃಷಿಯನ್ನು ಖುಷಿಯಿಂದ ಮಾಡುತ್ತಿದ್ದೇನೆ. ಭತ್ತ, ಅಡಿಕೆ, ಅಷ್ಟೇ ಇರೋದು, ಎಷ್ಟಂದ್ರೂ ಇದು ಕಾಡೇ ನೋಡಿ, ಹಾಗಾಗಿ ಇಲ್ಲಿ ಕೃಷಿ ಮಾಡೋದು ಕಷ್ಟಾನೂ ಹೌದು, ಇಷ್ಟಾನೂ ಹೌದು. ಆದ್ರೂ ಇಷ್ಟಾನೇ ಜಾಸ್ತಿ ನೋಡಿ, ಯಾಕಂದ್ರೆ ಖುಷಿಯಿಂದ ಬದುಕ್ತಾ ಇದ್ದೇವಲ್ಲ. ಪೇಟೆ ಬೇಡ್ವೆ ಬೇಡ ಅನ್ನಿಸ್ತದೆ” ಎಂದರು ವಿಠಲ ಶೆಟ್ಟರು. ಮತ್ತೊಮ್ಮೆ ನನ್ನತ್ತಲೂ ಸುತ್ತಲೂ ನೆರೆದಿದ್ದ ಅವರ ಪ್ರೀತಿಯ ತೋಟದತ್ತಲೂ ನೋಡಿ “೧೦ ತಿಂಗಳ ಹಿಂದಷ್ಟೇ ನನ್ನ ಹೆಂಡತಿ ಹೋಗಿಬಿಟ್ಟಳು, ಮಗ ಬೆಂಗಳೂರಿನಲ್ಲಿದ್ದಾನೆ. ಮಗಳು ಇಲ್ಲೇ ಶಾಲೆಗೆ ಹೋಗಿ ಮಕ್ಕಳಿಗೆ ಸುಮ್ಮನೇ ಪಾಠ ಮಾಡಿ ಬರ್ತಾಳೆ ಅಷ್ಟೇ, ಹೆಂಡತಿಗೆ ಅದೇನೋ ಖಾಯಿಲೆ ಬಂತು. ಗುಣವೇ ಆಗಿಲ್ಲ, ಕಡೆಕಡೆಗೆ ಜೋರಾಯಿತು, ಹೋಗೇ ಬಿಟ್ಟಳು” ಎಂದು ವಿಠಲ ಶೆಟ್ಟರು ಹೇಳಿದಾಗ ಅವರ ಕಣ್ಣಂಚಿನಲ್ಲಿ ನೀರಿನ ಪಸೆ ಮೂಡಿ ಅಲ್ಲೇ ಕರಗಿಹೋಗಿತ್ತು. ಅವರ ಮಾತಿನ ರೀತಿಯನ್ನು ನೋಡುತ್ತಾ, ನೋಡುತ್ತಾ ನಾನು ಕಂಡಿರದ ಅವರ ಹೆಂಡತಿಯ ರೂಪ ಸುಮ್ಮನೇ ಕಣ್ಣ ಮುಂದೆ ಸುಳಿದಾಡಿದಂತಾಯಿತು. ಅವರ ಕಣ್ಣೇ ಹೇಳುತ್ತಿತ್ತು ಅವರ ಬಾಳಿಗೆಲ್ಲಾ ಬೆಳಕಾಗಿದ್ದ ಹೆಂಡತಿ ಇವರ ಜೊತೆ ಎಷ್ಟೊಂದು ಅನ್ಯೋನ್ಯವಾಗಿ ಬದುಕುತ್ತಿದ್ದರೆಂದು. ಈ ಕಾಡಿನಲ್ಲೇ ಶೆಟ್ಟರು ಮದುವೆಯಾದ ಹೊಸತರಲ್ಲಿ ಹೆಂಡತಿಗೆ ಅದೆಷ್ಟು ಮುತ್ತು ಕೊಟ್ಟಿರಬಹುದು? ಅದೆಷ್ಟು ಸಲ ಪೇಟೆಯಿಂದ ಅವಳಿಗಿಷ್ಟವಾದ ಬಳೆಯನ್ನೋ, ಸೀರೆಯನ್ನೋ, ಸಕ್ಕರೆ ಮಿಠಾಯಿಯನ್ನೋ ತಂದು ಕೊಟ್ಟಿರಬಹುದು, ಇದೇ ತೋಟದ ನೆರಳಲ್ಲಿ, ಆಷಾಢದ ಮಳೆಯಲ್ಲಿ ಕೂತು ಹನಿಯುತ್ತಿರುವ ಹನಿಗೆ ಮೈಯೊಡ್ಡುತ್ತ ಎಷ್ಟು ಕಷ್ಟ ಪಟ್ಟು ಗದ್ದೆ ಕೆಲಸ ಮಾಡಿರಬಹುದು? ಪ್ರೀತಿಯಿಂದ ಹಬ್ಬಿಕೊಂಡ ಸಿಟ್ಟು ಕೊನೆಗೆ ಜೋರಾಗಿ ಸಿಹಿಮುತ್ತಿನೊಂದಿಗೆ ಈ ಅಡಿಕೆ ಮರದ ಸಾಲಲ್ಲೇ ಎಷ್ಟು ಸಲ ರಾಜಿಯಾಗಿರಬಹುದು? ಅಂತೆಲ್ಲಾ ನಾನು ಏನೇನೋ ಯೋಚಿಸುತ್ತ ಜೀವನ ಪ್ರೀತಿಯಿಂದಲೇ ತುಂಬಿಕೊಂಡ ಶೆಟ್ಟರನ್ನು ನೋಡತೊಡಗಿದೆ. ಹೆಂಡತಿ ಅರ್ಧದಲ್ಲಿಯೇ ಬಿಟ್ಟು ಹೋದ ಬದುಕು ಅವಳ ಆತ್ಮಸಖನನ್ನು ಎಷ್ಟೊಂದು ಹೈರಾಣು ಮಾಡಿರಬಹುದು? ಏನೇನೋ ಅನ್ನಿಸಿತು ನಂಗೆ. ಬದುಕಿನ ಬಿಸಿಯಾದ ಹೊಡೆತಗಳನ್ನು ತಿಂದರೂ ಅವುಗಳ ನಡುವೆಯೂ ತಾವರೆಯಂತೆ ನಗುತ್ತಿದ್ದರು ಶೆಟ್ಟರು, ಕಾಡಿನ ಸುತ್ತಲಿನ ಮೌನವನ್ನು ಭೇದಿಸಿ ಮತ್ತೆ ಹಗುರನೇ ಮಾತು ಶುರುಮಾಡಿದರು.

“ಘಟ್ಟದಾಚೆಯ ಕೆಲಸದವರೊಬ್ಬರ ಮಗ ಈಗ ನನ್ನ ಜೊತೆಯೇ ಇದ್ದಾನೆ. ಅವನಿಗೆ ಶಾಲೆಗೆ ಸೇರಿಸಲು ಮನೆಯವರ ಹತ್ತಿರ ಅನುಕೂಲವಿಲ್ಲ. ಕೂಲಿ ಮಾಡಿ ಶಾಲೆಗೆ ಸೇರಿಸುವಷ್ಟು ಶಕ್ತಿಯೂ ಅವರಲ್ಲಿಲ್ಲ, ಅದಕ್ಕೆ ನಾನೇ ಅವನಿಗೆ ಇಲ್ಲಿನ ಶಾಲೆಗೆ ಸೇರಿಸಿ ಸಣ್ಣ ಪುಟ್ಟ ಕೆಲಸವನ್ನೂ ಕೊಡುತ್ತಿದ್ದೇನೆ. ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಕೊಡಿಸಬೇಕು ಅಂತ ಆಸೆ ನಂಗೆ. ಈಗಿರುವ ಹುಡುಗನೂ ಸಣ್ಣವನು, ಹಾಗೇ ಬದುಕಿನ ದುಃಖವೆಲ್ಲಾ ಅವನೆದುರು ಮರೆಯಾಗುತ್ತದೆ. ನಂಗೆ ಅವನಿಗೆ ಕಲಿಸಲು ಅನುಕೂಲವಿದೆ. ಮಕ್ಕಳು ಕಲಿತ್ರೆ ಮಾತ್ರ ಅಲ್ವಾ ಬದುಕಿನ ದಾರಿ ಕಂಡುಕೊಳ್ಳೋದು, ಅವನೂ ಒಂದು ದಾರಿ ಹಿಡಿಬೇಕು ಅಂತ ನನ್ನಾಸೆ, ಅದನ್ನು ಅವನು ನೆರವೇರಿಸಿ ಕೊಟ್ಟರೆ ಕಲಿತದ್ದಕ್ಕೆ ಅರ್ಥ ಬರುತ್ತದೆ ಅಲ್ವಾ” ಎಂದರು ಶೆಟ್ಟರು. “ಮಕ್ಕಳಿದ್ದರೆ ಮಾತ್ರ ನೋಡಿ ಬದುಕು ಒಂಥರಾ ಖುಷಿಯಾಗಿರೋದು, ಪ್ರತೀ ಭಾನುವಾರ ಇಲ್ಲೇ ಪಕ್ಕದ ಶಾಲೆಯ ಮಕ್ಕಳು ನಮ್ಮ ತೋಟಕ್ಕೆ ಬರುತ್ತಾರೆ. ಅವರಿಗೆ ಕೃಷಿಯಲ್ಲಿ ಆಸಕ್ತಿ ಇದೆ. ಪರಿಸರದ ಬಗ್ಗೆ ಕುತೂಹಲವಿದೆ. ಅದಕ್ಕೋಸ್ಕರ ನನ್ನ ಕೈಲಾದಷ್ಟು ಕೃಷಿಯ ಬಗ್ಗೆ ಹೇಳಿಕೊಡ್ತೇನೆ. ಗೊಬ್ಬರ ಮಾಡೋದು ಕಲಿಸ್ತೇನೆ. ಮುಂದೆ ಇವನ್ನೆಲ್ಲಾ ಮಾಡಬೇಕಾದವರು ಅವರೇ ಅಲ್ವಾ? ಅಲ್ಲಿ ನೋಡಿ ಇವತ್ತು ಅಡಿಕೆ ಸಸಿಯೊಂದನ್ನು ನೆಟ್ಟಿದ್ದಾರೆ ಎಂದರು ಶೆಟ್ಟರು ತೋಟದ ಕಡೆಗೆ ತೋರಿಸುತ್ತ, ನಾನು ಅತ್ತ ನಿರುಕಿಸಿದರೆ ಅಲ್ಲೊಂದು ಅಡಿಕೆ ಸಸಿ ಮೋಡದ ಕತ್ತಲಲ್ಲಿಯೂ ಹೊಳೆಯುತ್ತಿತ್ತು. ಪುಟ್ಟ ಮಗುವನ್ನೇ ನೋಡಿದಂತಾಯ್ತು ನನಗೆ. ಅಷ್ಟೊತ್ತಿಗೆ ಹರಡಿದ್ದ ಮೋಡದ ಕತ್ತಲು ಜಾಸ್ತಿಯಾಗಲು ತೊಡಗಿತು. “ಈ ಕಾಡಲ್ಲಿ ಹುಲಿ ಇದೆಯಾ” ಅಂದೆ. “ಹೌದು ಇರದೇ ಏನು, ಕೆಲ ವರ್ಷಗಳ ಹಿಂದೆ ತೋಟದ ಕೆಲಸ ಮಾಡುವಾಗಲೇ ನಾಯಿಯೊಂದನ್ನು ಅಟ್ಟಿಸಿಕೊಂಡು ಹೋಗಿದ್ದನ್ನು ನಾವೇ ನೋಡಿದ್ದೇವೆ, ಆದರೆ ನಮಗೇನೂ ಮಾಡಿಲ್ಲ ಆ ಹುಲಿರಾಯ. ಪ್ರಾಣಿಗಳು ಏನು ಮಾಡ್ತವೆ ನಮ್ಗೆ, ಅದರ ಆಹಾರಕ್ಕೋಸ್ಕರ ಪಾಪ ಈ ಕಡೆ ಬರ್ತವೆ ಅಷ್ಟೇ” ಎಂದು ತಣ್ಣಗಾದರು ಶೆಟ್ರು. “ಮಳೆ ಬರುವ ಹಾಗುಂಟಲ್ಲಾ ಹೋಗೋಣವಾ ಇನ್ನು” ಎಂದ ಶೆಟ್ಟರು ಆಕಾಶ ನೋಡಿದರು. ದೂರದ ಕುದುರೆಮುಖದ ಗಿರಿಪಂಕ್ತಿಯ ಮೇಲೆ ಬಿಳಿಯ ಮೋಡಗಳು ಕಾಫಿ ಸುರಿಯುತ್ತಿದ್ದಂತೆ ಕಾಣುತ್ತಿತ್ತು. ಕಾಡಿನ ನಿಶ್ಚಲ ಮೌನದಲ್ಲಿ ಹಳ್ಳ ಹರಿಯುತ್ತಿದ್ದುದು, ಗದ್ದೆಯಾಚೆಗೆ ನವಿಲು ಕೂಗುತ್ತಿದ್ದುದು ಕೇಳಿಸಿ ವಾತಾವರಣ ರಮ್ಯವಾಗಿ ಕಂಡಿತು.

ಶೆಟ್ಟರಿಗೆ ಬೀಳ್ಕೊಟ್ಟು ಇಳಿ ಇಳಿಯಾಗಿದ್ದ ಮಲೆಬೆಟ್ಟಿನ ಹಸುರು ದಾರಿಯಲ್ಲಿ ಬೈಕೇರಿಸಿದೆ. ಸ್ವರ್ಣ ನದಿಗೆ ಸೇರುವ ಆಸೆಯಲ್ಲಿದ್ದ ಮತ್ತೊಂದು ಹಳ್ಳವನ್ನು ದಾಟಿ, ಬಯಲು ಕಾಡಿನಂತಿದ್ದ ದಾರಿಯತ್ತ ಬಂದು, ಮಳೆ ಬರಲಿ ಅಂತ ಕಾಯುತ್ತ ಸುಮ್ಮನೇ ನಿಂತೆ, ಮಳೆಯಲ್ಲಿ ಈ ಮಲೆಬೆಟ್ಟಿನ ಕಾಡನ್ನು ನೋಡಬೇಕು ಅನ್ನೋ ಆಸೆಯಾಗುತ್ತಿತ್ತು. ಇನ್ನೂ ಚೂರು ಇರುಳಾದರೆ ಮಿಣುಕು ಹುಳಗಳೂ ಕಾಣಿಸುತ್ತವೆ, ಅದನ್ನೂ ನೋಡಿಕೊಂಡೇ ಹೋಗುವ ಎಂದು ಅಲ್ಲೇ ಫೋಟೋ ಹೊಡೆಯುತ್ತ, ಕಾಡು ಹಣ್ಣೊಂದನ್ನು ತಿನ್ನುತ್ತ ನಿಂತೆ. ಕೆಲವೇ ಕ್ಷಣಗಳಲ್ಲಿ ದೂರದ ಬೆಟ್ಟಗಳಿಂದ ಮಳೆ ಹೋ.. ಹೋ.. ಎಂದು ಬೊಬ್ಬೆ ಹಾಕಿ ಹೊಯ್ಯಲು ಶುರುಮಾಡಿತು. ಸಣ್ಣ ಸಣ್ಣಗೇ ಇರುಳೂ ಆಗಿ ಅಲ್ಲಲ್ಲಿ ಮಿಣುಕು ಹುಳಗಳೂ ಹೊಳೆದವು. ಮಳೆಗಾಲದಲ್ಲಿ ಮೋಡದ ಮುಸುಕಿನಿಂದ ಬಾನಿನಲ್ಲಿ ನಕ್ಷತ್ರಗಳು ಕಾಣದಿದ್ದರೂ ಭೂಮಿಯಲ್ಲೇ ಮಾಲೆಗಳಾಗಿ ಮಿಂಚುವ ಮಿಣುಕು ಹುಳಗಳನ್ನು ನೋಡುತ್ತ ನನ್ನ ದಾರಿ ಬೆಳೆಯಿತು, ಬೆಳಗಿತು.