ಬೋನ್ಸಾಯ್ ಮಕ್ಕಳು!

ಗಾಜಿನ ಪರದೆಯ ಆಚೆ
ಗೇಣುದ್ದುದ ತೆರೆದ
ನಾಜೂಕಿನ ಕಪಾಟುಗಳಲ್ಲಿ
ಕೂತಿದ್ದವು, ಅವು!
ಒಮ್ಮೊಮ್ಮೆ ನಕ್ಕಂತೆ,
ಬಿಕ್ಕಳಿಸಿದಂತೆ
ವ್ಯಂಗ್ಯದ ಕೇಕೆ
ಮತ್ತೆ ಮೂದಲಿಕೆಯು!

ಊರಿನ ಅಗಸಿಯ
ದೊಡ್ಡ ಆಲದ ಮರ,
ತೋಟದ ಪೇರಲ;
ಹೂವಿನ ಕಂಟಿ
ಕೆಲವುದರ ಹೆಸರೆ ಗೊತ್ತಿಲ್ಲ!
ಆಕಾರಗಳು ಅದರವೇ;
ಗಾತ್ರ ಇಷ್ಟಿಷ್ಟೇ
ಕಪಾಟು ಬಯಸಿದಷ್ಟೇ!

ಬೇರಿಗೆ ಕತ್ತರಿಯಂತೆ
ಮತ್ತೆ ಬಿಗಿದ ತಂತಿ,
ನಿತ್ಯ ಕತ್ತಲೆಯ ವಾಸ
ಎಂದಾದರು ಹನಿ ನೀರು;
ಬಿಸಿಲ ಬದಲಿಗೆ
ವಿದ್ಯುತ್ ಬಿಸಿಯ ಜೋರು!
ಇರಲೊಲ್ಲದೆ
ಬೆಳೆಯಲೊಲ್ಲದೆ
ಮುರುಟಿದವು ಕೈ ಕಾಲು;
ಚೋಟು ಗೇಣಿನಷ್ಟೇ ದೇಹ
ಹೊತ್ತುಕೊಂಡ ಬಾಳು!

ಗೇಣು ಕಪಾಟಿನಲ್ಲಿ
ಮುದುರಿಕೊಂಡ ಪ್ರಕೃತಿ;
ಮತ್ತೆ ನೆನಪಾಗಿದ್ದು
ನನ್ನದೇ ಮಕ್ಕಳ ಸ್ಥಿತಿ.
ಬ್ಯಾಗು ಹೊರುತ್ತಾ
ಹೋಂ ವರ್ಕ್ ತಿದ್ದುವ;
ಆಟ ಮರೆಯುತ್ತಾ
ಅಂಕ ನೆಕ್ಕುವ;
ಜಗತ್ತು ಮರೆತು
ಗೂಡು ಸೇರುವ
ಬೋನ್ಸಾಯ್ ಮಕ್ಕಳು.

ನಿಯತ್ತಿನ ಚುಂಗು ಹಿಡಿದು…

ಎಚ್ಚರಗೊಂಡ ರಾತ್ರಿ
ಮೈಮುರಿದು ಆಕಳಿಸಿತು,
ಆಕಳಿಕೆ ಉಸಿರು ತಣ್ಣಗೆ,
ಬೀದಿ ದೀಪದ ಮಿಣುಕು,
ಒದ್ದೆಯ ನೆಲ, ಮಸುಕು!
ಮೋಟು ಬಾಲದ ನಾಯಿ
ಆ ಸೋತ ಹೆಜ್ಜೆಗಳ ಸುತ್ತ
ವೃತ್ತ ಕೊರೆದುಕೊಂಡಂತೆ
ಅತ್ತಿತ್ತ ಅಲೆಯುತ್ತದೆ;
ಮೂಸಿ ಮುಂದೆ ಹೋಗಿ
ಅಲ್ಲೆಲ್ಲೊ ನಿಂತು ಮತ್ತೆ ತಿರುಗಿ
ಆ ಹಜ್ಜೆಗೆ ಜೊತೆಯಾಗುತ್ತದೆ!
ಎಷ್ಟೊ ತುದಿ ಬೆಳಗುಗಳು
ನಿಯತ್ತಿನ ಕಡಾಯಿಗಳು
ಅದರಲ್ಲಿ ಅದ್ದಿ ತೆಗೆದಾಗಲೆಲ್ಲಾ
ಇದೇ ಚಿತ್ರವಿರುತ್ತಿತ್ತು!
ಸೋತ ಹೆಜ್ಜೆಗಳಿಲ್ಲ ಈಗ;
ಬೂಟು ಕಾಲಿನ ಆಸಾಮಿ,
ನಾಯಿಗೆ ಬೆಲ್ಟು ಸರಪಳಿ.
ಕಾಲ್ಬಿಚ್ಚುವಂತಿಲ್ಲ;
ಮೂಸುವಂತೆಯೂ ಇಲ್ಲ!,
ನಿಯತ್ತು ಸರಪಳಿ ಬಂಧಿ
ಸರಪಳಿ ಆಚೆಯ ತುದಿ
ಬೆವರು ನಾರುವ ಅಂಗೈಯ
ಬೆವರಿನಲ್ಲಿ ನಿಗಿ ನಿಗಿ..

ಹೊಸತಲೆಮಾರಿನ ಕವಿ ಸದಾಶಿವ್ ಸೊರಟೂರು ಹುಟ್ಟಿದ್ದು, ಬೆಳೆದಿದ್ದು ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ.
ಈಗ ಚಿಂತಾಮಣಿಯ ದೊಡ್ಡಬೊಮ್ಮನಹಳ್ಳಿ ಪ್ರೌಢಶಾಲೆಯಲ್ಲಿ ಕನ್ನಡ ‌ಕಲಿಸುವ ಮೇಷ್ಟ್ರು.
‘ಹೆಸರಿಲ್ಲದ ಬಯಲು’ ಮತ್ತು ‘ ತೂತು ಬಿದ್ದ ಚಂದಿರ’ ಕವನ ಸಂಕಲನಗಳು ಹಾಗೂ ಮೂರು ಪ್ರಕಟಿತ ಲೇಖನಗಳ ಕೃತಿಗಳು ಪ್ರಕಟವಾಗಿವೆ.
ಸಂಯುಕ್ತ ಕರ್ನಾಟಕ ಪತ್ರಿಕೆಯ ಅಂಕಣಕಾರರೂ ಹೌದು.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)