ಬಿಸಿಲಿನ ದಂಡನೆಯನ್ನು ಲೆಕ್ಕಿಸದೇ ಹಾಗೆ ನಿಂತಿದ್ದ ನನಗೆ ನನ್ನ ಇರವಿನ ಇರವಿರ ಅರಿವು ಬಂದದ್ದು ಪಾದಗಳು ಉರಿಯತೊಡಗಿದಾಗಲೇ. ಆ ಸಮುದ್ರಕ್ಕೆ ನನ್ನ ಮೇಲೆ ಅದೆಷ್ಟು ಒಲವೋ. ಕೆಂಡದಂತಾಗಿದ್ದ ಪಾದಗಳನ್ನು ಕಡಲೇ ಬಂದು ಆಗಾಗ ಮುಟ್ಟಿ, ತಣ್ಣನೆಯ ಮುತ್ತಿಟ್ಟು ಹೋಗುತ್ತಿತ್ತು. “ಅಬ್ಬಾ ಇಂಥದ್ದೊಂದು ಸಮುದ್ರಾನ ನೋಡದೇ ಸತ್ತವನೇ ಪಾಪಿ ಇರಬಹುದೇನೋ” ಅಂದುಕೊಂಡೆವು ನಾವಿಬ್ಬರೂ. ಆಮಟ್ಟಿಗೆ ಅದನ್ನು ಹಚ್ಚಿಕೊಂಡಿದ್ದೆವು. ಬೆಂಗಳೂರಿಗರಾದ ನಮ್ಮಿಬ್ಬರಿಗೆ ಅಲ್ಲಿನ ಬಿಸಿಲನ್ನು ಸಹಿಸಿಕೊಳ್ಳುವಷ್ಟು ಶಕ್ತಿಯಂತೂ ಇರಲಿಲ್ಲ. ಒಂದೊಂದು ನಿಮಿಷವೂ ಅರ್ಧಗಂಟೆಯಂತೆ ಅನ್ನಿಸುತ್ತಿತ್ತು.
ರೂಪಶ್ರೀ ಕಲ್ಲಿಗನೂರ್ ಅಂಕಣ

 

ಕಳೆದ ಒಂದು ವರ್ಷದಿಂದ ನಾನು ಮತ್ತು ನನ್ನ ಸ್ನೇಹಿತೆ ಇಬ್ಬರೂ ಸೇರಿ ಎಲ್ಲಾದ್ರೂ ಟ್ರಿಪ್ ಗೆ ಹೋಗೋಣ ಅಂತ ಅಂದುಕೊಳ್ಳುತ್ತಲೇ ಇದ್ವಿ. ಇಡೀ ವರ್ಷ ಪ್ಲ್ಯಾನ್ ಮಾಡೋದ್ರಲ್ಲೇ ಕಳೆದುಹೋಯ್ತು. ನಾವಂದುಕೊಂಡ “ಗರ್ಲ್ಸ್ ಟ್ರಿಪ್” ಸಾಧ್ಯವಾಗಿರಲೇಇಲ್ಲ. ನಮ್ಮ ಮನೆಯಲ್ಲಿ ನಡೆದ ಮದುವೆಯ ತಯಾರಿಯಿತ್ತಾದ್ದರಿಂದ ಇಬ್ಬರೂ ಕನಸು ಕಾಣುತ್ತಾ ಸುಮ್ಮನಾಗಿದ್ದೆವು. ಆದರೂ ನಮ್ಮನಮ್ಮಲ್ಲೊಂದು ನಾವಿಬ್ಬರೇಸೇರಿ ಎಲ್ಲೆಲ್ಲಿಗೆ ಹೋಗಬಹುದು ಅನ್ನೋ ಸಣ್ಣ ಬಕೆಟ್ ಲಿಸ್ಟ್ ಇದ್ದೇ ಇತ್ತು. ಆದರೆ ಹೋಗಲಾರದೇ ಹತಾಶೆಯಿಂದ ಮನಸ್ಸು ಅದರ ಮೇಲೆ ಸುಳಿದಾಡುತ್ತಲೇ ಇತ್ತು.

ಹೀಗೆ ವರ್ಷವಿಡೀ ಅದರ ಬಗ್ಗೆ ಮಾತನಾಡಿಯೂ ಘಟಿಸದಿದ್ದ “ಗರ್ಲ್ಸ್ ಟ್ರಿಪ್” ಕಳೆದೆರೆಡು ವಾರದ ಹಿಂದೆ ಪಟ್ಟನೇ ಸೆಟ್ಟೇರಿತ್ತು. ಹೆಣ್ಮಕ್ಕಳಿಬ್ಬರೇ ಹೊರಟ ಈ ಪ್ರಯಾಣಕ್ಕೆ “ಮಜಾಮಾಡಿ” ಅಂತ ಮನೆ ಮಂದಿ ಹುರುಪು ತುಂಬಿದ್ದರು. ಒಂದೂವರೆ ವಾರದ ಹಿಂದೆ ಹಮ್ಮಿಕೊಂಡ ಈ ಯೋಜನೆಗೆ, ಕಾರಣಗೀರಣ ಅಂತೆಲ್ಲ ನೋಡದೇ, ತಯಾರಾಗಿ, ಹೊರಟು, ಒಂದು ಬೆಳಗ್ಗೆ ಕುಂದಾಪುರಕ್ಕೆ ಕಾಲಿಟ್ಟಿದ್ದೆವು.

ಎರಡು ದಿನದ ಈ ಟ್ರಿಪ್ ನಲ್ಲಿ ಕುಂದಾಪುರದ ಬಿಸಿಲು ನಮ್ಮನ್ನು ಹೈರಾಣು ಮಾಡಿತ್ತು. ಪ್ರವಾಸ ಪ್ಲಾನ್ ಆದ ಸಂಭ್ರಮದಲ್ಲಿ ಅಲ್ಲಿನ ಹವಾಮಾನದ ಬಗ್ಗೆ ನಾವಿಬ್ಬರೂ ಯೋಚಿಸಿಯೇ ಇರಲಿಲ್ಲ. ಹಾಗಂತ ಮೊದಲೇ ಅಲ್ಲಿನ ಬಿಸಿಲಿನ ಬಗ್ಗೆ ತಿಳಿದುಕೊಂಡಿದ್ದರೂ, ಪ್ರವಾಸ ಕೈಬಿಡುವವರು ನಾವಾಗಿರಲಿಲ್ಲ. ಯಾಕಂದ್ರೆ ಇಬ್ಬರೂ ಎಲ್ಲಿಯಾದರೂ ಆರಾಮವಾಗಿ ಹೊಂದಿಕೊಳ್ಳುವ, ಮತ್ತೆ ಬಂದದ್ದನ್ನು ಅಂತೆಯೇ ಸ್ವೀಕರಿಸುವ ಮನಸ್ಥಿತಿ ಉಳ್ಳವರಾದ್ದರಿಂದ, ಇದೊಂದನ್ನ ನೋಡೇಬಿಡೋಣ ಅನ್ನುವ ಜಾತಿಯವರು. ಹಾಗಾಗಿ ಹಿಂದುಮುಂದು ನೋಡದೇ ಬಸ್ಸೇರಿದ್ದೆವು.

ನಾವಲ್ಲಿಗೆ ಹೋದಾಗ ಕುಂದಾಪುರ ಧಗಧಗಿಸುವ ಬಿಸಿಲನುಟ್ಟು ನಿಂತಿತ್ತು. ನೀರಿನಲ್ಲಿ ಮುಳುಗುವುದನ್ನು ಬಿಟ್ಟರೆ, ಅಲ್ಲಿನ ಬಿಸಿಲನ್ನು ಸಹಿಸಿಕೊಳ್ಳುವ ಬೇರೊಂದು ಮಾರ್ಗ ನಮಗೆ ಕಾಣಿಸುತ್ತಿರಲಿಲ್ಲ. ಹೊಟ್ಟೆಗೆ ಸಪ್ಲೈ ಆಗುತ್ತಿದ್ದ, ನೀರು ಎಳನೀರು ಮಜ್ಜಿಗೆಯೆಲ್ಲ ಅದೆಲ್ಲಿ ಆವಿಯಾಗಿಬಿಡುತ್ತಿತ್ತೋ… ಅರ್ಧತಾಸಿಗೊಮ್ಮೆ ಇಡೀ ದೇಹ ಒಣಗಿಹೋಗಿದಂತಾಗಿಬಿಡುತ್ತಿತ್ತು. ಬೆಂಗಳೂರಲ್ಲಿ ಬೆಳೆದ ನಮ್ಮಿಬ್ಬರನ್ನೂ ಕುಂದಾಪುರದ ಬಿಸಿಲು ತಥೈ ಥಥೈ ಆಡಿಸುತ್ತಿತ್ತು. ಅದರಲ್ಲಿ ನನ್ನಮೇಲಂತೂ ಅದಕ್ಕೆ ಒಂದಿಷ್ಟೂ ಕರುಣೆ ಇರಲಿಲ್ಲವೇನೋ. ಪ್ರಯಾಣದ ಉತ್ಸಾಹವೆಲ್ಲ ಬತ್ತಿಹೋಗುವಂತೆ, ಹೊಟ್ಟೆಯನ್ನು ಹಿಂಡತೊಡಗಿತ್ತು. ಎಷ್ಟು ನೀರು ಕುಡಿದರೂ ಪರಿಸ್ಥಿತಿ ಹತೋಟಿಗೆ ಬರಲೇಯಿಲ್ಲ. ಪ್ಲಾಸ್ಟಿಕ್ ಬಾಟಲಿಯ ಸೋಡ ಕೊಳ್ಳಲು ನಿಜಕ್ಕೂ ನಾನು ಸಿದ್ಧಳಿರಲಿಲ್ಲ. ಹಾಗಾಗಿಯೇ ಸಾಕಷ್ಟು ಹೊತ್ತು ನನ್ನನ್ನು ನಾನು ಸಮಾಧಾನಿಸಿಕೊಳ್ಳುತ್ತಲೇ ಇದ್ದೆ. ಆದರೂ ತಾಪ ತಗ್ಗದೇ, ತೀರ ಕಷ್ಟವೆನಿಸಿದಾಗ ಒಂದು ಬಾಟಲ್ ಸ್ಪ್ರೈಟ್ ಕೊಂಡು ಕುಡಿದಿದ್ದೆ.

ಮರವಂತೆಯ ಬೀಚ್ ಮಾತ್ರ ವಿಪರೀತ ಕರುಣಿ. ಇಷ್ಟೆಲ್ಲವನ್ನು ಸಹಿಸಿಕೊಂಡದ್ದಕ್ಕೋ ಏನೋ.. ಕುಂದಾಪುರಕ್ಕೆ ಯಾಕೆ ಬಂದೆವೋ ಅಂದುಕೊಳುವಂತೆ ಆ ಸುಡುಮೂತಿ ಸೂರ್ಯ ನಮ್ಮನ್ನು ಹುರಿಯುವ ವೇಳೆಯಲ್ಲಿ, ಮರವಂತೆ ಬೀಚ್ ತನ್ನ ಅಪಾರಗಲದ ತೋಳನ್ನು ಮತ್ತಷ್ಟು ಅಗಲಿಸಿ ನಮ್ಮನ್ನು ತನ್ನೆಡೆಗೆ ಸೆಳೆದಿತ್ತು. ಅಲ್ಲಿನ ಬೀಚ್ ಗೆ ಯಾರೂ ಇಳಿಯುವಂತಿಲ್ಲ. ಇಂಥ ಸೂಚ್ಯ ಫಲಕಗಳು ಅಲ್ಲಲ್ಲಿ ಸಾಕಷ್ಟು ಕಂಡವು. ನಾವೂ ಕೂಡ ಅದನ್ನು ಓದಿಯೇ ಮುಂದುವರಿದೆವು. ಆದರೆ ನೀರಿಗಿಳಿಯಲಿಲ್ಲ. ಕಣ್ಣೆದುರಿಗಿದ್ದ ಸ್ವಚ್ಚಾನುಸ್ವಚ್ಚ ಸುಂದರ ಸಮುದ್ರ ಮುಂದೆ ನಿಜಕ್ಕೂ ಮನಸ್ಸು ಪುಟ್ಟಮಗುವಿನಂತಾಗಿಬಿಟ್ಟಿತ್ತು. ಅದರ ಸೊಗಸಿಗೆ ಮನಸೋತು, ಅದರ ಮೇಲೆ ನೆಟ್ಟ ಕಣ್ಣನು ಒಮ್ಮೆಯೂ ಪಿಳಕಿಸದೇ ನೋಡುತ್ತ ದಡದಲ್ಲೇ ನಿಂತುಕೊಂಡೆವು. ಉತ್ಪ್ರೇಕ್ಷೆಯ ಮಾತಲ್ಲ, ನಿಜಕ್ಕೂ ತಾಜ್ ಮಹಲ್ ಕಂಡಾಗಲೂ ನಾನು ಇಷ್ಟು ಖುಷಿಗೊಂಡಿರಲಿಲ್ಲ.

ಬಿಸಿಲಿನ ದಂಡನೆಯನ್ನು ಲೆಕ್ಕಿಸದೇ ಹಾಗೆ ನಿಂತಿದ್ದ ನನಗೆ ನನ್ನ ಇರವಿನ ಇರವಿರ ಅರಿವು ಬಂದದ್ದು ಪಾದಗಳು ಉರಿಯತೊಡಗಿದಾಗಲೇ. ಆ ಸಮುದ್ರಕ್ಕೆ ನನ್ನ ಮೇಲೆ ಅದೆಷ್ಟು ಒಲವೋ. ಕೆಂಡದಂತಾಗಿದ್ದ ಪಾದಗಳನ್ನು ಕಡಲೇ ಬಂದು ಆಗಾಗ ಮುಟ್ಟಿ, ತಣ್ಣನೆಯ ಮುತ್ತಿಟ್ಟು ಹೋಗುತ್ತಿತ್ತು. “ಅಬ್ಬಾ ಇಂಥದ್ದೊಂದು ಸಮುದ್ರಾನ ನೋಡದೇ ಸತ್ತವನೇ ಪಾಪಿ ಇರಬಹುದೇನೋ” ಅಂದುಕೊಂಡೆವು ನಾವಿಬ್ಬರೂ. ಆಮಟ್ಟಿಗೆ ಅದನ್ನು ಹಚ್ಚಿಕೊಂಡಿದ್ದೆವು. ಬೆಂಗಳೂರಿಗರಾದ ನಮ್ಮಿಬ್ಬರಿಗೆ ಅಲ್ಲಿನ ಬಿಸಿಲನ್ನು ಸಹಿಸಿಕೊಳ್ಳುವಷ್ಟು ಶಕ್ತಿಯಂತೂ ಇರಲಿಲ್ಲ. ಒಂದೊಂದು ನಿಮಿಷವೂ ಅರ್ಧಗಂಟೆಯಂತೆ ಅನ್ನಿಸುತ್ತಿತ್ತು. ಹಾಗಾಗಿ ಅಲ್ಲಿ ಕಳೆದ ಅರ್ಧ-ಮುಕ್ಕಾಲು ಗಂಟೆಗೇ ಸಾಕಷ್ಟು ಬಳಲಿದ್ದೆವು. ಬಿಟ್ಟುಹೋಗಲು ಮನಸ್ಸಿಲ್ಲದಿದ್ದರೂ “ಮಳೆಗಾಲದಲ್ಲಿ ಬಂದೇತೀರ್ತೀವಿ” ಅಂದುಕೊಂಡು ಅಲ್ಲಿಂದ, ನಮ್ಮ ರೂಮಿನತ್ತ ಕಾಲ್ಕಿತ್ತೆವು.

**********************************

ಪ್ರವಾಸ ಅನ್ನುವುದೊಂದು ಹಲವು ಅನುಭವಗಳ ಆಗರ. ನಾವು ಯಾವುದೇ ಜಾಗಕ್ಕೇ ಹೋಗಲಿ, ಅಲ್ಲಿ ನಮಗೆ ಗೊತ್ತಿಲ್ಲದ ರಾಶಿರಾಶಿ ಕತೆಗಳು, ಅನುಭವಗಳು ನಮಗಾಗಿ ಕಾದು ಕೂತಿರುತ್ವೆ. ಅವೆಲ್ಲ ಒಂಥರಾ ಶೇಂಗಾದಂತೆ. ಇಷ್ಟಿಷ್ಟುದ್ದದ ನಾವು, ನಮ್ಮ ಮೊಣಕಾಲಷ್ಟೂ ಉದ್ದ ಬೆಳೆಯದ ಶೇಂಗಾ ಗಿಡವನ್ನು ನಿಂತು ನೋಡಿದರೆ ಆಗುವುದಿಲ್ಲ. ಮೈಬಗ್ಗಿಸಿ ಗಿಡ ಕೀಳಬೇಕು. ಆಗಲೇ ಎಷ್ಟೋದಿನದಿಂದ ಮಣ್ಣಿನಲ್ಲಡಗಿದ ಹಸಿಹಸಿ ಶೇಂಗಾದ ರುಚಿಯ ಅನುಭವ ದಕ್ಕೋಕೆ ಸಾಧ್ಯ. ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಗಾದೆ ನೆನಪಿಸಿಕೊಂಡರೆ, ನನ್ನ ಮಾತು ಇನ್ನೂ ಸ್ಪಷ್ಟವಾಗಬಹುದೇನೋ.

ಪ್ರವಾಸಗಳ ನಿಜವಾದ ರಸ ಅಡಗಿರುವುದು ಸರಳತೆಯಲ್ಲಿಯೇ. ಕಂಫರ್ಟ್ ಬಿಟ್ಟಷ್ಟು ಜೀವನದ ನಿಜವಾದ ಖುಷಿಯನ್ನು ಕಾಣುತ್ತಾಹೋಗುತ್ತೇವೆ. ಅಥವಾ ಅದರ ನಿಜಾರ್ಥವನ್ನು ನಮಗೆನಾವೇ ಕಂಡುಕೊಳ್ಳುತ್ತಾ ಹೋಗುತ್ತೇವೆ. ಕಟ್ಟಡಗಳಿಗಿಂತ ಜನರಿರುವತ್ತ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುವುದು ಇದರ ಮೊದಲ ಗುಟ್ಟು. ದೊಡ್ಡದೊಡ್ಡ ಹೋಟೆಲ್ಲುಗಳಲ್ಲಿ ಉಳಿಯುವುದಕ್ಕಿಂತ ಅಲ್ಲಿಯದ್ದೇ ಪರಿಸರದ ಭಾಗದಲ್ಲಿ ಹೊಂದಿಕೊಳ್ಳುವುದರಿಂದ ಬಹಳ ಲಾಭಗಳಿವೆ. ಬಹುತೇಕ ಪ್ರವಾಸಿ ತಾಣಗಳ ಅಕ್ಕ ಪಕ್ಕದ ಊರುಗಳಲ್ಲಿ ಹೋಂ ಸ್ಟೇ ಇರುತ್ತದೆ. ಅಥವಾ ನಾವೇ ಟೆಂಟ್ ಹಾಕಿಕೊಂಡು ಇರುವಂಥಾ ಅನುಕೂಲಗಳಿರುತ್ತವೆ. ಅಂಥ ಸ್ಥಳಗಳಲ್ಲೇ ಸ್ಥಳೀಯ ಜನಜೀವನದ ಬಗ್ಗೆ ಪಕ್ಕಾ ಮಾಹಿತಿ ದೊರೆಯುತ್ತದೆ.

ಮರವಂತೆಯ ಬೀಚ್ ಮಾತ್ರ ವಿಪರೀತ ಕರುಣಿ. ಇಷ್ಟೆಲ್ಲವನ್ನು ಸಹಿಸಿಕೊಂಡದ್ದಕ್ಕೋ ಏನೋ.. ಕುಂದಾಪುರಕ್ಕೆ ಯಾಕೆ ಬಂದೆವೋ ಅಂದುಕೊಳುವಂತೆ ಆ ಸುಡುಮೂತಿ ಸೂರ್ಯ ನಮ್ಮನ್ನು ಹುರಿಯುವ ವೇಳೆಯಲ್ಲಿ, ಮರವಂತೆ ಬೀಚ್ ತನ್ನ ಅಪಾರಗಲದ ತೋಳನ್ನು ಮತ್ತಷ್ಟು ಅಗಲಿಸಿ ನಮ್ಮನ್ನು ತನ್ನೆಡೆಗೆ ಸೆಳೆದಿತ್ತು.

ಹೋಟೆಲ್ ಲಾಡ್ಜ್ ಗಳಲ್ಲಿ ಉಳಿದುಕೊಂಡರೆ, ಅಲ್ಲಿ ಸಿಗುವ ಆತಿಥ್ಯ ಮತ್ತು ಊಟ, ಜಗತ್ತಿನ ಯಾವ ಮೂಲೆಗೆ ಹೋದರೂ ಹಾಗೇ ಇರುತ್ತದೆ. ಸೊಫೆಸ್ಟಿಕೇಟೆಡ್ ಮತ್ತು ಡಿಪ್ಲೊಮ್ಯಾಟಿಕ್. ಕೆಲಸದ ಜಾಗಗಳಲ್ಲಿ ಹಾಗೆ ಇರುವುದು ಅನಿವಾರ್ಯ ನಿಜ, ಹಾಗಂತ ಪ್ರವಾಸಗಳಿಗೆ ಹೋದಾಗಲೂ ಹಾಗೇ ಇರೋದ್ಯಾಕೆ. ಇಂಥ ಕಟ್ಟುಪಾಡುಗಳಿಂದ, ಜಡಗಳಿಂದ ಸಾಕಾಗಿ, ಬೇರೇನನ್ನೋ ನೋಡಲಿಕ್ಕೆ, ಅನುಭವಿಸಲಿಕ್ಕೆ ಅಂತ ಹೊರಡೋ ನಾವು ನಮ್ಮ ಪ್ರತಿಷ್ಠೆ, ಕಿರೀಟಗಳನ್ನೆಲ್ಲ ನಮ್ಮನಮ್ಮ ಮನೆಗಳಲ್ಲಿ ಬಿಟ್ಟುಹೋದಷ್ಟೂ ಪ್ರವಾಸ ಕುತೂಹಲಕಾರಿಯಾಗಿರತ್ತೆ ಅಲ್ಲದೇ ಆರಾಮವಾಗಿರತ್ತೆ. ಹಾಗಾಗಿ ಹೋಂ ಸ್ಟೇ ಅಥವಾ ಸರಳ ವ್ಯವಸ್ಥೆಯಿದ್ದಕಡೆ ಉಳಿದುಕೊಳ್ಳಬೇಕು. ಆಗಲೇ ಆ ಜಾಗದ ನಿಜಗುಣ ನಮ್ಮರಿವಿಗೆ ಬರೋದು.

ಬಹುತೇಕವಾಗಿ ಎಲ್ಲರೂ, ಅವರವರಿಗೆ ಅಪರಿಚಿತವಾಗಿರೊ ಜಾಗಗಳಿಗೇ ಹೆಚ್ಚಾಗಿ ಪ್ರವಾಸಕ್ಕೆ ಹೊರಡೋದು. ಅಲ್ಲಿನ ಜಾಗವಷ್ಟೇ ಅಲ್ಲೇ, ಹಲವಾರು ಬಾರಿ ಭಾಷೆ, ಸಂಸ್ಕೃತಿ ಎಲ್ಲವೂ ನಮಗೆ ಹೊಸತೇ ಆಗಿರುತ್ತೆ. ನಮ್ಮನಮ್ಮ ಮನೆಗಳಲ್ಲಿ, ಕೆಲಸದ ಜಾಗಗಳಲ್ಲಿ ಹೊಂದಾಣಿಕೆಯ ದೃಷ್ಟಿಯಿಂದ ನಮ್ಮತನಗಳನ್ನು ನಾವು ಕಟ್ಟಿಟ್ಟಿರುತ್ತೇವೆ. ಆದರೆ ಪ್ರವಾಸ ನಮ್ಮತನಕ್ಕೆ ಅಂಟಿಕೊಂಡ ಎಲ್ಲಕಟ್ಟಳೆಗಳನ್ನೂ ಪುಡಿಪುಡಿಮಾಡಿ, ನಮ್ಮನ್ನು ನಾವು ನೋಡಿಕೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ.

ಪ್ರವಾಸದ ಸಂದರ್ಭಗಳಲ್ಲಿ ಸ್ಥಳೀಯರೊಟ್ಟಿಗಿನ ನಮ್ಮ ನಡವಳಿಕೆ ಸರಿಯಾಗಿರಬೇಕು. ಅವರನ್ನು ಮತ್ತವರ ಸಂಸ್ಕೃತಿಗಳನ್ನು ಗೌರವಿಸುವುದು ನಮ್ಮ ಕರ್ತವ್ಯವೇ ಅಲ್ಲವೇ? ಸ್ಥಳೀಯರನ್ನ ಮಾತಾಡಿಸಿದರೆ ಸಾಕು, ಊರ ಹವಾಮಾನದಿಂದ ಹಿಡಿದು, ಅಲ್ಲಿನ ಹಿರಿಮೆ, ಗರಿಮೆ, ಕಷ್ಟ ನಷ್ಟದ ಪಟ್ಟಿಯನ್ನೇ ನಮ್ಮಮುಂದೆ ತೆರೆದಿಡುತ್ತಾರೆ. ಹಾಗಾದಾಗಲ್ಲವೇ ನಮಗೆ ಆಯಾ ಊರಿನ ಮಿಡಿತ ಹಿಡಿಯೋಕೆ ಸಾಧ್ಯವಾಗೋದು? ಇನ್ನೊಂದು ಮುಖ್ಯ ವಿಷಯವೆಂದರೆ ಊಟದ್ದು. ಹಲವಾರು ಪ್ರವಾಸಿಗರನ್ನು ನಾನು ನೋಡಿದ್ದೇನೆ. ಸಸ್ಯಾಹಾರಿಗಳು, ತಮ್ಮ ಊಟವನ್ನು ಹುಡುಕಿಕೊಂಡು ಹೋಗುವುದರಲ್ಲಿ ಅರ್ಥವಿದೆ. ಆದರೆ ಕೆಲವರು ಹೇಗೆಂದರೆ ಕರ್ನಾಟಕದವರಾದರೆ ಅಂತಿಟ್ಟುಕೊಳ್ಳಿ, ದೆಹಲಿಗೆ ಹೋದರೂ ಅವರಿಗೆ ಇಡ್ಲಿಯೇ ಬೇಕು! ಇನ್ನೂ ಕೆಲವರು ಹೇಗೆಂದರೆ ಸೌತ್ ಇಂಡಿಯನ್ ಹೋಟಲ್ ಸಿಕ್ಕಿದರೂ ಸರಿಯೇ, ಅಲ್ಲಿ ಗೋಬಿ ಮಂಚೂರಿ, ನೂಡಲ್ಸ್ಏ ಬೇಕು. ಆಯಾ ಜಾಗಗಳ ಇತಿಹಾಸ, ಭಾಷೆಯ ಬಗ್ಗೆ ತಿಳಿದುಕೊಳ್ಳುವುದರಲ್ಲಿನ ಆಸಕ್ತಿ, ಸ್ಥಳೀಯ ಆಹಾರಪದ್ಧತಿಯನ್ನು ತಿಳಿದುಕೊಳ್ಳುವುದರಲ್ಲಿ ಇರುವುದಿಲ್ಲ.

ಪ್ರವಾಸ ಕೇವಲ ನಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣದ ಮೇಲೆ ರೂಪಿತವಾಗುವುದಿಲ್ಲ. ಬದಲು ನಮ್ಮ ಅಭಿರುಚಿಯ ಆಧಾರದ ಮೇಲೆಯೇ ಅದು ಯೋಜನೆಗೊಳ್ಳುವುದು. ಉದಾಹರಣಗೆ: ಕೆಲವೊಂದಿಷ್ಟು ಜನರಿಗೆ ಪ್ರವಾಸ ಎಂದರೆ ಹೋಗುವ ಊರಿನಲ್ಲಿ ಯಾವೆಲ್ಲ ದೇವಸ್ಥಾನಗಳಿವೆ ಅವೆಲ್ಲವನ್ನೂ ನೋಡಬೇಕೆಂದು ಹಂಬಲಿಸುತ್ತಾರೆ, ಮತ್ತೆ ಕೆಲವರಿಗೆ ಐತಿಹಾಸಿಕ ಸ್ಥಳಗಳನ್ನು ನೋಡುವುದರ ಬಗ್ಗೆ ಆಸಕ್ತಿ ಇರುತ್ತದೆ. ಬೇಲೂರು-ಹಳೆಬೀಡುಗಳಲ್ಲಿ ಬೇರೆಲ್ಲರೂ, ಇಡೀ ದೇವಸ್ಥಾನವನ್ನು ಸುತ್ತಿ, ದೇವರ ಮುಂದೆ ಸಮಯ ಕಳೆದರೆ, ಇವರು ಒಂದುಕ್ಷಣ ದೇವರನ್ನು ನೋಡಿ, ದಿನ, ವಾರಗಟ್ಟಲೇ ಅಂಥ ದೇವಸ್ಥಾನಗಳ ಶಿಲ್ಪಗಳನ್ನು ನೋಡುತ್ತ ನಿಂತುಬಿಡುತ್ತಾರೆ. ಅಂಥವರು ಅದದೇ ಜಾಗಗಳಿಗೆ ನೂರುಸಲವಾದರೂ ಬರಬಹುದು.

ಈ ಪ್ಯಾಕೇಜ್ಡ್ ಟ್ರಿಪ್ ಗಳನ್ನೇ ನಂಬಿಕೊಳ್ಳುವ ಜನರಂತೂ ಮೂರ್ನಾಲ್ಕು ದಿನದಲ್ಲಿ ಹತ್ತಾರು ಜಾಗಗಳನ್ನು ನೋಡುತ್ತಾರೆ. ಯಾವಜಾಗವನ್ನೂ ಅವರು ಅರ್ಧತಾಸೂ ನೋಡಿರಲಾರರು. ಪ್ರಕೃತಿ, ಶಿಲ್ಪಕಲೆ, ಮ್ಯೂಸಿಯಂ ಎಲ್ಲವನ್ನೂ ವಿಂಡೋ ಶಾಪಿಂಗ್ ರೀತಿಯಲ್ಲಿ ನೋಡಿ ಮುಗಿಸುತ್ತಾರೆ. ಇಂಥ ಟ್ರಿಪ್ ಗಳು, ಕೇವಲ ನಮ್ಮ ಸ್ಥಳ ಬದಲಾವಣೆಯಾದಂತೆಯೂ ಅನ್ನಿಸಿಬಿಡಬಹುದು. ಹಾಗಾಗಿ ಕುಟುಂಬ, ಅಥವಾ ಸ್ನೇಹಿತರೊಟ್ಟಿಗೆ ಯೋಜಿಸುವ ಪ್ರವಾಸಗಳು ನಮಗೆ ಅನುಭವದ ಬುತ್ತಿಯನ್ನು ಕಟ್ಟಿಕೊಡುತ್ತದೆ.

ಇನ್ನೂ ಕೆಲವರಿಗೆ ಪ್ರವಾಸವೆಂದರೆ ಕುಡಿಯೋದು, ಮೋಜು ಮಾಡೋದು ಮಾತ್ರವೇ. ಇವರು ಯಾವಕಾಲಕ್ಕೂ, ಎಲ್ಲಿಹೋದರೂ ಇವರ ಪ್ರವಾಸದ ಉದ್ದೇಶ ಅಷ್ಟೇ. ಕುಡಿಯೋದು ಮತ್ತೆ ಹಿಂದಿರುಗಿ ಬರುವಾಗ ಆ ಜಾಗವನ್ನು ಹಾಳು ಮಾಡಿ ಬರೋದು… ನಮ್ಮೂರು ನಮಗೆ ಮೇಲಾದರೆ, ನಾವು ಹೋಗುವ ಪ್ರವಾಸಿ ತಾಣಗಳಲ್ಲಿಯೂ ಜನರು ವಾಸಿಸುತ್ತಿರುತ್ತಾರೆ. ನಮ್ಮ ಮನೆಯಂತೆ, ನಮ್ಮ ಊರಂತೆ ಅವರ ಊರನ್ನೂ ಸ್ವಚ್ಚವಾಗಿಡುವ, ಜವಾಬ್ದಾರಿ ಪ್ರವಾಸಿಗರದ್ದಲ್ಲವೇ? ಮತ್ತೆ ಏಕಾಂಗಿಯಾಗಿ ಪ್ರಕೃತಿಯ ಮಡಿಲನ್ನು ಅರಸಿಕೊಂಡು ಹೋಗುವವರ ಬಗ್ಗೆ ಹೇಳಹೋದರೆ ಅದೇ ಒಂದು ಲೇಖನವಾಗತ್ತೆ. ಅಂಥ ಪ್ರವಾಸಿಗರು ಹೆಚ್ಚು ಜವಾಬ್ದಾರಿಯುಳ್ಳವರಾಗಿರುತ್ತಾರೆ. ತಾವಾಯಿತು ತಮ್ಮ ಪಾಡಾಯಿತು. ಕಾಡು-ಮೇಡು, ಸೂರ್ಯ-ಚಂದ್ರ ಎಲ್ಲವೂ ಅವರಿಗೆ ವಿಶೇಷವೇ. ಕಾಡಲ್ಲಿ ಕಂಡ ಒಂದು ಪುಟ್ಟ ಹೂವೂ ಸಾಕು, ಅವರು ಖುಷಿಗೊಳ್ಳಲು.

ಪ್ರವಾಸವೆಂದರೆ ಹಾಗೆಯೇ. ಒಬ್ಬೊಬ್ಬರಿಗೆ ಒಂದೊಂದುಥರ. ನೀರು ಕಂಡಲ್ಲಿ ಓಡುವ ಮಕ್ಕಳು, “ಆಳ ಇದೆ ಪುಟ್ಟ, ಹುಷಾರು” ಅನ್ನುತ್ತ ಅವರ ಹಿಂದಿದೆ ಓಡುವ ಅಮ್ಮಂದಿರು, ಸಮುದ್ರ ನೋಡಿದೊಡನೇ ಜೊತೆಗಿದ್ದವರನ್ನೇ ಮರೆತುಬಿಡುವ ಯುವಕರು, ಮಕ್ಕಳಾಟವನ್ನು ನೋಡುತ್ತ, ದಂಡೆಯ ಮೇಲೆ ಕೂತು ತುಟಿಯ ಕೊನೆಯಲ್ಲಿ ನಗುಸುರಿಸುವ ಹಿರಿಜೀವಗಳು, ಮನೆಯ ಜಂಜಡಗಳನ್ನೆಲ್ಲ ಅಲ್ಲೇಬಿಟ್ಟು, ಸಮುದ್ರ ದಂಡೆಯಮೇಲೆಕೂತು ಹಾಡುಕೇಳೋ ಸ್ನೇಹಿತೆಯರು… ಓಡಾಡಿದಷ್ಟು ಅನುಭವದ ಪಟ್ಟಿ ದೊಡ್ಡದಾಗುತ್ತಲೇ ಹೋಗುತ್ತದೆ.