ಭಾಗವತಣ್ಣನ ಪದ್ಯವೆಂದರೆ ಹಾಗೆ, ಅಷ್ಟು ಸ್ಪಷ್ಟ. ಎಂಥ ರೌದ್ರವತೆ ಇರಲಿ, ಎಂಥ ಕರುಣಾ ರಸ ಇರಲಿ, ಪ್ರತಿ ಶಬ್ದವನ್ನೂ ಸ್ಪಷ್ಟವಾಗಿ ಉಚ್ಛರಿಸುತ್ತ, ಅಷ್ಟೇ ಚೆಂದವಾಗಿ ಅಲ್ಲೊಂದು ವಾತಾವರಣವನ್ನು ಸೃಷ್ಟಿಮಾಡುವ ತಾಕತ್ತು ಅವನಿಗಿತ್ತು. ಎಂಥ ಏರು ಧ್ವನಿಯಲ್ಲೂ, ಎಂಥ ಕೋಪದ, ಉಗ್ರ ಪದ್ಯಗಳನ್ನೂ ಸ್ಪಷ್ಟವಾಗಿ, ಎಲ್ಲರಿಗೂ ತಿಳಿಯುವಂತೆ ಹೇಳುವುದು ಭಾಗವತಣ್ಣನ ಸ್ಟೈಲ್. ‘ಏನನಾಡಿದೆ ಲಕ್ಷ್ಮಣಾ. ರಾಘವನನ್ನು ನಾನೀಗ ನೋಡಬೇಕು’, ಎಂಬ ಉಗ್ರ ಕೋಪಿ ದೂರ್ವಾಸರ ಪದ್ಯವೇ ಇರಬಹುದು, ವಿಶ್ವಾಮಿತ್ರರ ಪದ್ಯವೇ ಇರಬಹುದು, ಕೌರವನ ಪದ್ಯವೇ ಇರಬಹುದು. ಸಲೀಸಾಗಿ ಭಾಗವತಣ್ಣನ ನಾಲಿಗೆಯ ಮೇಲೆ ಹೊರಳಾಡುತ್ತಿದ್ದವು.
ಪತ್ರಕರ್ತೆ ಭಾರತಿ ಹೆಗಡೆ ಬರಹ

 

ನಾನು ಯಕ್ಷಗಾನವನ್ನು ಪ್ರೀತಿಸುವುದಕ್ಕೆ ಮತ್ತು ನೆಬ್ಬೂರು ನಾರಾಯಣ ಭಾಗವತರನ್ನು ಅಭಿಮಾನ ಪಡುವುದಕ್ಕೆ ಕಾರಣ ನನ್ನ ತಂದೆ (ದಿ.ಐನಕೈ ಗಜಾನನ ಶಾಸ್ತ್ರಿಗಳು). ಅಪ್ಪ ಸದಾ ಹೇಳುತ್ತಿದ್ದ, ಸಾಂಪ್ರದಾಯಿಕ ಶೈಲಿಯಲ್ಲಿ ಯಕ್ಷಗಾನದ ಪದ್ಯವನ್ನು ಹಾಡುವವರಲ್ಲಿ ಒಂದು ಉಪ್ಪೂರರು, ಮತ್ತೊಬ್ಬರು ನೆಬ್ಬೂರರು ಎಂದು. ಎಷ್ಟೋ ಯಕ್ಷಗಾನಗಳಿಗೆ ಕೈ ಹಿಡಿದು ಕರೆದುಕೊಂಡು ಹೋದ ಅಪ್ಪ ಈಗಿಲ್ಲ. ತುಂಬ ಅಭಿಮಾನ ಪಡುವ ಭಾಗವತಣ್ಣನೂ ಈಗಿಲ್ಲ. ಆದರೆ ಈ ಇಬ್ಬರು ಬಿಟ್ಟುಹೋದ ಪದ್ಯಗಳ ನೆನಪುಗಳು ಚಿರಸ್ಥಾಯಿಯಾಗಿದೆ.

ಯಕ್ಷಗಾನವೆಂದರೆ ಆಗೆಲ್ಲ ರಾತ್ರಿ ಬೆಳಗಿನ ತನಕ ಆಗುವ ಆಟ. ಇಂಥದ್ದೇ ಒಂದು ಆಟಕ್ಕೆ ಹೀಗೆ ಅಪ್ಪ ಕೈ ಹಿಡಿದು ಕರೆದುಕೊಂಡು ಹೋದಾಗಿನ ನೆನಪಿದು.

ಸಂತೆಯೊಳಗಿನ ಆಟವಿದು

ಸಿದ್ದಾಪುರದ ಸಂತೆಗೂ, ಯಕ್ಷಗಾನಕ್ಕೂ ಬಿಡದ ನಂಟು. ಸಾಧಾರಣವಾಗಿ ಸಂತೆಯ ದಿವಸ ಯಕ್ಷಗಾನ ಮೇಳಗಳು ಬರುವುದುಂಟು. ಅಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯುತ್ತದೆ ಈ ಆಟಗಳು. ಆಟವೆಂದರೆ ನಮಗೆಲ್ಲ ಕೆರೆಮನೆ ಮೇಳವೇ. ಶಂಭುಹೆಗಡೆ, ಮಹಾಬಲ ಹೆಗಡೆ, ಕುಂಜಾಲು ರಾಮಕೃಷ್ಣರಂಥ ಅತಿರಥಮಹಾರಥರು ಇರುವಂಥ ಆಟ. ಅದಕ್ಕೆ ನೆಬ್ಬೂರರ ಹಿಮ್ಮೇಳ. ಆ ಆಟದ ರುಚಿಯೇ ಬೇರೆ.

ಇಂಥದ್ದೇ ಒಂದು ಸಂತೆಯ ದಿವಸ ಅಪ್ಪ, ‘ಕೂಸೆ, ಇವತ್ತು ಆಟಕ್ಕೆ ಹೋಪನ, ಹರಿಶ್ಚಂದ್ರ ಆಟನಡ, ಕೆರೆಮನೆ ಮ್ಯಾಳದ್ದು, ಶಂಭುಹೆಗಡೇರದ್ದು ಹರಿಶ್ಚಂದ್ರ, ಕುಂಜಾಲು ರಾಮಕೃಷ್ಣಂದು ನಕ್ಷತ್ರಿಕ, ಹೋಪನ..’ ಎಂದ. ಆಟವೆಲ್ಲ ಅಷ್ಟಾಗಿ ಅರ್ಥವಾಗದ ಕಾಲವಾದರೂ ಅಪ್ಪನಜೊತೆ ಹೋಗುವ ಸಂಭ್ರಮಕ್ಕೆ ಹೂ ಅಂದಿದ್ದೆ.

ಆದರೆ ನಾವು ಆಟಕ್ಕೆ ಹೋಗುವ ಹೊತ್ತಿಗೆ ಟಿಕೆಟ್ ಎಲ್ಲ ಮಾರಾಟವಾಗಿ ನೆಹರೂ ಮೈದಾನದಲ್ಲಿದ್ದ ಕಟ್ಟೆಯಮೇಲೆ, “ನೆಬ್ಬೂರರ ಪದ್ಯವೇ ಸಾಕು ಬಿಡು, ಕೇಳಕ್ಯಂಡು ಹೋಪನ” ಎಂದು ಚಕ್ಕಳಮಕ್ಕಳ ಹಾಕಿ ಕೂತವನ ಪಕ್ಕ ನಾನೂ ಮುದುರಿ ಕೂತೆ.

ಅಷ್ಟೊತ್ತಿಗಾಗಲೇ ರಾಜಾ ಹರಿಶ್ಚಂದ್ರ ವಿಶ್ವಾಮಿತ್ರನ ಸತ್ಯ ಪರೀಕ್ಷೆಗೊಳಪಟ್ಟು ತನ್ನ ರಾಜ್ಯಪದವಿ ತೊರೆದು, ಮಡದಿ ಮಕ್ಕಳೊಡನೆ ಹೊರಟಿದ್ದ.

ಹಲವು ಗಿರಿಕಾನನವ ಕಳೆಯುತ
ಇಳೆಯ ಸತಿ ಬರುತಿರಲು ಮುಂದಗೆ
ಹೊಳೆವ ಭಾಗೀರಥಿಯು ತೋರಿದಳಾಗ ಭೂಪತಿಗೆ
ತೊಳೆದು ಮನುಜರ ಪಾಪವನು
ನೆಲಗೊಳಿಸಿ ಮುಕ್ತಿಯನೀವ ಜಾನ್ಹವಿ…

ಈ ಪದ್ಯ ಕೇಳುತ್ತಿದ್ದಂತೆ, ಓ…ಕಾಶಿಗೆ ಬಂದ ಹರಿಶ್ಚಂದ್ರ ಎಂದ ಅಪ್ಪ ಹೇಳುತ್ತಿದ್ದರೆ, ಭಾಗೀರಥಿ ಹೊಳೆಹೊಳೆಯುತ್ತಿರುವಂತೆ, ಕಣ್ಣೆದುರಿಗೆ ಗಿರಿ ಕಾನನಗಳೆಲ್ಲ ದಟ್ಟೈಸಿದಂತೆ ಭಾಸವಾಗುತ್ತಿತ್ತು. ನಂತರ ಹರಿಶ್ಚಂದ್ರ ವಿಶ್ವಾಮಿತ್ರನ ಸಾಲ ತೀರಿಸಲು ಮಡದಿ ಮಗನನ್ನೂ ಮಾರಿ, ಕಡೆಗೆ ತನ್ನನ್ನೂ ಸ್ಮಶಾನ ಕಾಯುವ ವೀರಬಾಹುಕನಿಗೆ ಮಾರಿಕೊಳ್ಳುತ್ತಾನೆ.

ಇನವಂಶದೊಳು ಪುಟ್ಟಿ ತನುವನಾಮಿಕನಿಂಗೆ,
ಧನಕೀವ ಕಾಲ ಬಂತೇ..
ಉತ್ತಮರೊಳಗಿಂದು ಕೊಂಡುಕೊಳ್ಳುವರಿಲ್ಲ
ಮತ್ತೆ ನೋಡಲಿಕವಧಿಕ ಹೊತ್ತು ಮೀರುವುದೆನ್ನ ಮಾತು ತಪ್ಪುವದಿವಗಿತ್ತು ಶರೀರವನು
ವರಕೌಶಿಕನ ಸಾಲವೀವೆನೆನ್ನುತ ನೃಪ

– ಚಕ್ರವರ್ತಿಯೊಬ್ಬ ಸ್ಮಶಾನವನ್ನು ಕಾಯಬೇಕಾಗಿ ಬಂದಾಗಿನ ಪದ್ಯವಿದು.

ಹೀಗೆ ಅವತ್ತಿಡೀ ರಾತ್ರಿಯ ಆಟವನ್ನು ಪದ್ಯದ ಮೂಲಕ ಕೇಳಿದ್ದು ಇನ್ನೂ ನೆನಪಿದೆ. ಈ ಘಟನೆ ಹೇಳುವುದಕ್ಕೊಂದು ಕಾರಣವಿದೆ. ಆಗ ನಾನಿನ್ನೂ ಎಂಟನೇ ತರಗತಿ ಓದುತ್ತಿದ್ದೆ. ಆಟದ ಪದ್ಯಗಳನ್ನು, ಪ್ರಸಂಗಗಳನ್ನು ಅಷ್ಟಾಗಿ ಅರ್ಥೈಸಿಕೊಳ್ಳುವ ವಯಸ್ಸಲ್ಲ ಅದು. ಪದ್ಯ ಕೇಳುತ್ತ ಕೇಳುತ್ತ ಅಪ್ಪನ ತೊಡೆಯ ಮೇಲೆ ಮಲಗಿ ನಿದ್ದೆಹೋಗಿದ್ದಷ್ಟೇ ನೆನಪು. ಆದರೆ ಈ ಎರಡು ಪದ್ಯಮಾತ್ರ ಉರು ಹೊಡೆದಂತೆ ನನಗೆ ಅಲ್ಲಿಂದ ಇಲ್ಲಿಯವರೆಗೂ ನೆನಪಿರುವುದಕ್ಕೆ ಕಾರಣ ನೆಬ್ಬೂರು ಭಾಗವತರು ಹೇಳಿದ ರೀತಿಗೆ. ಅಷ್ಟು ಸ್ಪಷ್ಟವಾಗಿ, ಸುಶ್ರಾವ್ಯ, ಸುಮಧುರವಾಗಿ ಎಂಥವರಿಗೂ ಅರ್ಥವಾಗುವ ರೀತಿ ಹೇಳುತ್ತಿದ್ದರು.

ಮೊನ್ನೆ ಮೇ 11 ರಂದು ನೆಬ್ಬೂರು ನಾರಾಯಣ ಭಾಗವತರು, ನಮ್ಮೆಲ್ಲರ ಪ್ರೀತಿಯ ಭಾಗವತಣ್ಣ ಇನ್ನಿಲ್ಲವಾದ ಸುದ್ದಿ ಕೇಳಿದಾಗಿನಿಂದ ಈ ಮೇಲಿನ ಘಟನೆ ನೆನಪಾಗಿ ಮತ್ತೆ ಆ ಎಲ್ಲ ಪದ್ಯಗಳೂ ನೆನಪಾಗತೊಡಗಿದವು.

ನಿಜ, ಭಾಗವತಣ್ಣನ ಪದ್ಯವೆಂದರೆ ಹಾಗೆ, ಅಷ್ಟು ಸ್ಪಷ್ಟ. ಎಂಥ ರೌದ್ರವತೆ ಇರಲಿ, ಎಂಥ ಕರುಣಾ ರಸ ಇರಲಿ, ಪ್ರತಿ ಶಬ್ದವನ್ನೂ ಸ್ಪಷ್ಟವಾಗಿ ಉಚ್ಛರಿಸುತ್ತ, ಅಷ್ಟೇ ಚೆಂದವಾಗಿ ಅಲ್ಲೊಂದು ವಾತಾವರಣವನ್ನು ಸೃಷ್ಟಿಮಾಡುವ ತಾಕತ್ತು ಅವನಿಗಿತ್ತು. ಎಂಥ ಏರು ಧ್ವನಿಯಲ್ಲೂ, ಎಂಥ ಕೋಪದ, ಉಗ್ರ ಪದ್ಯಗಳನ್ನೂ ಸ್ಪಷ್ಟವಾಗಿ, ಎಲ್ಲರಿಗೂ ತಿಳಿಯುವಂತೆ ಹೇಳುವುದು ಭಾಗವತಣ್ಣನ ಸ್ಟೈಲ್. ‘ಏನನಾಡಿದೆ ಲಕ್ಷ್ಮಣಾ. ರಾಘವನನ್ನು ನಾನೀಗ ನೋಡಬೇಕು’, ಎಂಬ ಉಗ್ರ ಕೋಪಿ ದೂರ್ವಾಸರ ಪದ್ಯವೇ ಇರಬಹುದು, ವಿಶ್ವಾಮಿತ್ರರ ಪದ್ಯವೇ ಇರಬಹುದು, ಕೌರವನ ಪದ್ಯವೇ ಇರಬಹುದು. ಸಲೀಸಾಗಿ ಭಾಗವತಣ್ಣನ ನಾಲಿಗೆಯ ಮೇಲೆ ಹೊರಳಾಡುತ್ತಿದ್ದವು.

ಹೀಗೆ ಅಂಥ ಆಟಗಳಲ್ಲಿ ಟಿಕೆಟು ಸಿಗದೆ ಎಷ್ಟೋ ದಿವಸ ನೆಹರೂ ಮೈದಾನದ ಹೊರಗೆ ಕೂತು ನೆಬ್ಬೂರರ ಪದ್ಯಮಾತ್ರ ಕೇಳಿ ಹೊರಬಂದದ್ದೂ ಇದೆ. ಪದ್ಯ ಕೇಳಿದರೂ ಸಾಕಿತ್ತು, ಅಲ್ಲೊಂದು ಲೋಕವನ್ನು ಸೃಷ್ಟಿಸುವ ತಾಕತ್ತು ನೆಬ್ಬೂರು ಭಾಗವತಣ್ಣನಿಗಿತ್ತು. ಆಟದಲ್ಲಿ ಕಲಾವಿದರು ಚೆನ್ನಾಗಿಲ್ಲದಿದ್ದರೆ ಅಥವಾ ಕಲಾವಿದರು ಸರಿಯಾಗಿ ಅಭಿನಯಿಸದಿದ್ದರೂ ಭಾಗವತಿಕೆಯ ಮೇಲೆಯೇ ಆಟ ಸಲೀಸಾಗಿ ಮುಗಿಸಬಹುದಿತ್ತು. ಹಾಗಾಗಿಯೇ ಇಂದಿಗೂ ಯಕ್ಷಗಾನ, ತಾಳಮದ್ದಳೆ ಎಂದ ತಕ್ಷಣ ಮೊದಲು ಕೇಳುವುದು ಭಾಗವತರು ಯಾರು ಎಂದು.

ಕೆಲವು ಪದ್ಯಗಳಂತೂ ನೆಬ್ಬೂರರ ವಿನಾ ಮತ್ತೊಬ್ಬರು ಹೇಳಿದರೆ ರುಚಿಸುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಅವನಿಗಾಗಿಯೇ ಮೀಸಲು ಎಂಬಂತಿದ್ದವು. ಅವರ ಪದ್ಯವೆಂದರೆ ಮಂದಗಮನೆಯಂತೆ ಹರಿಯುವ ಅಘನಾಶಿನಿ ನದಿಯ ಹಾಗೆ. ನಿಧಾನಕ್ಕೆ ಪ್ರವಹಿಸುತ್ತ ಮುಂದಕ್ಕೆ ಹೋಗುತ್ತದೆ.

ನೋಡಿ ನಿರ್ಮಲ ಜಲಸಮೀಪದಿ ಮಾಡಿಕೊಂಡರು ಪರ್ಣ ಶಾಲೆಯ, ಚೆಂದದಿಂದ ಬಂದಳ ಅಬ್ಜಲೋಚನೆ,( ಪಂಚವಟಿ) ನೀತಿ ತಪ್ಪಿ ನಡೆದೆ ಲಕ್ಷ್ಮಣಾ( ರಾಮ ನಿರ್ಯಾಣ), ಪದುಮ ರೇಖೆಗಳಿಲ್ಲ ಪಾದದಲಿ ಮುಂದೇ… ವಿಧವತ್ವ ತೋರುತಿದೆ ಹೆಡತಲೆಯ ಹಿಂದೆ, ಮಚ್ಚಲಾಂಛನ ನೋಡೆ ಬಲತೊಡೆಯೊಳಿಲ್ಲ (ಲಂಕಾ ದಹನ) ಯಾತರಮುನಿಸೇ ಸೀತೆ, ಪ್ರೀತಿಯೊಳ್ ಒಂದು ಮಾತಾಡೇ ನಿನಗೆ ಸೋತೆ…(ಲಂಕಾದಹನ), ಮಾತೆ ಬಲ್ಲಳು ಬಾರಳಿತರ, ತಾತ ಬಲ್ಲನು ಕೇಳರಿದ, ಶ್ರೀನಾಥ ಬಂದನು ಈತನೆಂದು ಯೋಚಿಸಿದಾ…(ಕರ್ಣಪರ್ವ) ಆವಲ್ಲಿಗೆ ಪಯಣವಯ್ಯ ಪ್ರಾಣಕಾಂತ (ಸುಧನ್ವಾರ್ಜುನ) ಮುಂತಾದ ಪದ್ಯಗಳು ಅವನಿಗಾಗಿಯೇ ಮೀಸಲು ಎಂಬಂತಿದ್ದವು.

ಇಂಥ ಎಲ್ಲ ಪದ್ಯಗಳ ಎತ್ತಗಡಿಯೇ ಭಾಗವತಣ್ಣನ ಸ್ಟೈಲ್ ಇರುತ್ತದೆ. ಯಕ್ಷಗಾನದಲ್ಲಿ ಕಲಾವಿದರೊಬ್ಬರ ರಂಗ ಪ್ರವೇಶ ಹೇಗೆ ಅದ್ಭುತವಾಗಿರುತ್ತದೋ ಹಾಗೇ ಪದ್ಯದ ಎತ್ತಗಡಿಯೂ ಅಷ್ಟೇ ಮುಖ್ಯ. ಆ ಎತ್ತಗಡಿಯೇ ಇಡೀ ಪದ್ಯವನ್ನು ಮುಂದಕ್ಕೆ ಕೊಂಡೊಯ್ದು ಬಿಡುತ್ತದೆ. ಅದು ಮಾತೆ ಬಲ್ಲಳು, ಎಲೆ ಕಾಲ ಪುರುಷ ಕೇಳ್, ಪರಮ ಋಷಿಮಂಡಲದ ಮಧ್ಯದಿ… ಹೀಗೆ ನೆಬ್ಬೂರರು ಜೀವಕೊಟ್ಟ ಅದೆಷ್ಟು ಪದ್ಯಗಳಿವೆಯೋ ಲೆಕ್ಕಕ್ಕಿಲ್ಲ.

ನೋವು ನಲಿವುಗಳಿಂದ ಕೂಡಿದ ಬದುಕದು

ಬಡತನದ ಕಾರಣಕ್ಕಾಗಿ ಓದಿದ್ದು 4ನೇ ತರಗತಿಯವರೆಗೆ ಮಾತ್ರ. ನಂತರ ಕೈ ಹಿಡಿದದ್ದು ಭಾಗವತಿಕೆ. ತುಂಬ ಚಿಕ್ಕ ವಯಸ್ಸಿನಲ್ಲಿಯೇ ಕೆರೆಮನೆ ಮೇಳವನ್ನು ಸೇರಿದ ಭಾಗವತಣ್ಣ ನಂತರ ಬಿಟ್ಟವನಲ್ಲ. ಬದುಕಿನುದ್ದಕ್ಕೂ ನೋವನ್ನೇ ಉಂಡವ. ನಗುತ್ತ ಬಾಳಿದವ.

(ಚಿಟ್ಟಾಣಿಯವರೊಂದಿಗೆ ನೆಬ್ಬೂರರು)

“ರಾಮನಿರ್ಯಾಣದ ನೋವು ನಲಿವುಗಳಿಂದ ಕೂಡಿದ ಜೀವನವ ಕಂಡಾಯ್ತು, ಮತ್ತಿನ್ಯಾವ ಫಲವಿದೆ ನೀತಿ ಒಂದೇ ದೇವನೆನಿಸಿತು ಎನ್ನನೂ..” ಎಂಬ ಪದ್ಯ ಅವನ ಬದುಕಿಗೇ ಸಂವಾದಿಯಾದಂತೆನಿಸುತ್ತದೆ. ಅಂತೆಯೇ ಅವರಿವರ ಮನೆಯ ಕೊಟ್ಟೆಕೊನೆ ಮಾಡಿದವ. ರಾತ್ರಿಹೊತ್ತು ಝಗಮಘಿಸುವ ರಂಗಸ್ಥಳದಲ್ಲಿ ಪೇಟ ಸುತ್ತಿ, ತಾಳಹಿಡಿದು ಯಕ್ಷಲೋಕದ ಕಿಂಕರನಂತೆ, ಕೋಗಿಲೆಯಂತೆ ಸುಶ್ರಾವ್ಯವಾಗಿ ಹಾಡಿದ ಭಾಗವತಣ್ಣ ನಿಜಜೀವನದಲ್ಲಿ ಆರ್ಥಿಕವಾಗಿ ಅಷ್ಟೇ ಬಡವ. ಆ ಬಡತನವನ್ನು ಹಾಡಿನ ಮೂಲಕ, ನಗುವಿನ ಮೂಲಕ, ಹಾಸ್ಯದ ಮೂಲಕ ನೀಗಿಸಿಕೊಂಡವನು. ಎಂದಿಗೂ ಯಾರೊಂದಿಗೂ ತನ್ನ ಬಡತನದ ಕಷ್ಟವನ್ನು ಹೇಳಿಕೊಂಡವನಲ್ಲ. ಬೇಸರಿಸಿಕೊಂಡವನೂ ಅಲ್ಲ.

ಇಂಥದ್ದೇ ಒಂದು ಸಂತೆಯ ದಿವಸ ಅಪ್ಪ, ‘ಕೂಸೆ, ಇವತ್ತು ಆಟಕ್ಕೆ ಹೋಪನ, ಹರಿಶ್ಚಂದ್ರ ಆಟನಡ, ಕೆರೆಮನೆ ಮ್ಯಾಳದ್ದು, ಶಂಭುಹೆಗಡೇರದ್ದು ಹರಿಶ್ಚಂದ್ರ, ಕುಂಜಾಲು ರಾಮಕೃಷ್ಣಂದು ನಕ್ಷತ್ರಿಕ, ಹೋಪನ..’ ಎಂದ. ಆಟವೆಲ್ಲ ಅಷ್ಟಾಗಿ ಅರ್ಥವಾಗದ ಕಾಲವಾದರೂ ಅಪ್ಪನಜೊತೆ ಹೋಗುವ ಸಂಭ್ರಮಕ್ಕೆ ಹೂ ಅಂದಿದ್ದೆ.

ಕಷ್ಟವನ್ನೇ ಹೊದ್ದು ಬದುಕಿದ ಭಾಗವತಣ್ಣ ದುಡ್ಡಿನ ಕುರಿತು ಎಂದೂ ತಲೆ ಕೆಡಿಸಿಕೊಂಡವನೂ ಅಲ್ಲ. ಸಾಕಷ್ಟು ಸಲ ಶಂಭು ಹೆಗಡೆ ಮತ್ತು ಭಾಗವತಣ್ಣ ಇಬ್ಬರೂ ಅಂಗಳದಲ್ಲಿ ನಿಂತು ಹಾಡು ಹೇಳುತ್ತ ಕುಣಿದದ್ದೂ ಇದೆ. ಯಾವ್ಯಾವುದೋ ಪಾತ್ರ ಮಾಡಿದ್ದೂ ಇದೆ. ಇನ್ನು ರಂಗದ ಮೇಲಂತೂ ಹಾಸ್ಯ ಚಕ್ರವರ್ತಿ ಎಂದೆನಿಸಿಕೊಂಡ ಕುಂಜಾಲುರಾಮಕೃಷ್ಣ ಮತ್ತು ಭಾಗವತಣ್ಣ ಸೇರಿದರಂತೂ ಮುಗಿದೇ ಹೋಯಿತು. ನಮ್ಮ ಮೇಳದಲ್ಲಿ ಇಬ್ಬಿಬ್ಬರು ಹಾಸ್ಯಗಾರರಿದ್ದಾರೆಂದು ಸ್ವತಃ ಶಂಭುಹೆಗಡೆಯವರೇ ಹೇಳಿದ್ದುಂಟು.

ನೆಬ್ಬೂರರಿಲ್ಲದ ಕೆರೆಮನೆ ಮೇಳವನ್ನು ಕಲ್ಪಿಸಿಕೊಳ್ಳುವುದಕ್ಕೂ ಕಷ್ಟ ಎಂಬಂತೆ ಭಾಗವತಣ್ಣ ಆ ಮೇಳಕ್ಕೆ ಒಗ್ಗಿಕೊಂಡಿದ್ದ. ಸುಧೀರ್ಘ ಐವತ್ತು ವರ್ಷಗಳ ಕಾಲ ಒಂದೇ ಮೇಳದಲ್ಲಿದ್ದು, ಆ ಮೇಳದ ನಾಲ್ಕು ತಲೆಮಾರಿನವರ ಮಹಾನ್ ಕಲಾವಿದರನ್ನು ಕುಣಿಸಿದವ. ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆ, ಶಂಭು ಹೆಗಡೆ, ಶಿವಾನಂದ ಹೆಗಡೆ ಇವರೆಲ್ಲರಿಗೂ ಪದ್ಯ ಹೇಳಿದವ.

ಶಂಭುಹೆಗಡೆಯವರ ಪಾತ್ರಗಳೆಲ್ಲ ಅರಳಿ ನಿಲ್ಲಲು ಅವರ ಪರಿಶ್ರಮ, ಪ್ರತಿಭೆ ಎಷ್ಟು ಕಾರಣವಿತ್ತೋ ನೆಬ್ಬೂರರ ಪದ್ಯವೂ ಅಷ್ಟೇ ಕಾರಣ ಎನ್ನುವಷ್ಟರ ಮಟ್ಟಿಗೆ ಈ ಇಬ್ಬರ ಜೋಡಿ ಪ್ರಸಿದ್ಧಿ ಪಡೆದಿತ್ತು. ಇದು ಎಷ್ಟೆಂದರೆ ರಾಜ್ ಕುಮಾರ್, ಉದಯಶಂಕರ ಜೋಡಿಯ ಹಾಗೆ. ಕಲಾವಿದರಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು, ರಂಗದ ಮೇಲೆ ಕಲಾವಿದರಿಗೆ ಬೆಂಬಲವಾಗಿ ಪದ್ಯಹೇಳುತ್ತಿದ್ದರು ಎಂಬ ಮಾತಿದೆ. ಒಟ್ಟಿನಲ್ಲಿ ರಂಗದ ಮೇಲೆ ಕಲಾವಿದರಿಗೆ ಸ್ಫೂರ್ತಿದಾಯಕವಾಗಿ ಇವರ ಪದ್ಯಗಳಿರುತ್ತಿದ್ದವು ಎನ್ನುತ್ತಾರೆ ಕಲಾವಿದರು.

ಅನುಕರಿಸಲಾಗದ ನೆಬ್ಬೂರು ಶೈಲಿ

(ನೆಬ್ಬೂರರು ಕೆರೆಮನೆ ಶಂಭು ಹೆಗಡೆಯವರೊಂದಿಗೆ…)

ಬಡಗುತಿಟ್ಟಿನ ಖ್ಯಾತ ಭಾಗವತರೆನಿಸಿಕೊಂಡ ನೆಬ್ಬೂರು ಶೈಲಿಯಾಗಿ ಬೆಳೆದು ಬಂದದ್ದು ಈಗ ಇತಿಹಾಸ. ಉತ್ತರಕನ್ನಡದ ಬಡಗುತಿಟ್ಟಿನ ಶೈಲಿಗೆ ಒಗ್ಗಿದವರು. ಉಪ್ಪೂರರ ಶಿಷ್ಯ ಎಂದು ಪ್ರಾರಂಭದಲ್ಲಿ ಅನಿಸಿಕೊಂಡರೂ ನಂತರದ ದಿನಗಳಲ್ಲಿ ನೆಬ್ಬೂರರೇ ಸ್ವತಂತ್ರವಾಗಿ ಬೆಳೆದು ಬಂದವರು ಎಂದು ಬಣ್ಣಿಸಲಾಗುತ್ತದೆ ಭಾಗವತಣ್ಣನ ಪದ್ಯದ ಶೈಲಿಗೆ.

ಯಕ್ಷಗಾನ ಸಾಕಷ್ಟು ಪ್ರಯೋಗಗಳಿಗೆ ಒಡ್ಡಿಕೊಂಡಿದೆ. ರಾತ್ರಿ ಬೆಳಗಿನ ಆಟವನ್ನು ನೋಡಲು ಸಮಯವಿಲ್ಲವೆಂದು ಮೂರುತಾಸಿನ ಯಕ್ಷಗಾನವಾಯಿತು. ಇಷ್ಟಾದರೂ ಭಾಗವತಿಕೆಯಲ್ಲಿ ಸಾಂಪ್ರದಾಯಿಕ ಶೈಲಿಯನ್ನು ಬಿಟ್ಟವನಲ್ಲ.

ಯಕ್ಷಗಾನದಲ್ಲಿ ಹೊಸ ಪ್ರಯೋಗಗಳನ್ನು ಮಾಡಿದ ಕಾಳಿಂಗ ನಾವುಡರ ಶೈಲಿಯನ್ನು ಅನುಕರಿಸುವವರಿದ್ದಾರೆ. ಆದರೆ ನೆಬ್ಬೂರರ ಶೈಲಿಯನ್ನು ಅನುಕರಿಸಲು ಇದುವರೆಗೆ ಒಬ್ಬರೇ ಒಬ್ಬರಿಗೂ ಸಾಧ್ಯವಾಗದಿರುವುದಕ್ಕೆ ನೆಬ್ಬೂರರ ಅನನ್ಯತೆಗೆ ಸಾಕ್ಷಿ. ಅವರಿಗೆ ಅವರೇ ಸಾಟಿ ಎಂಬಂತೆ ಹಾಡಿದರು, ಬದುಕಿದವರು ಎಂಬ ಅಭಿಪ್ರಾಯ ತಜ್ಞರಲ್ಲಿದೆ.

ಹಾಡು ಪದ್ಯ ಒಂದಾದ ಘಳಿಗೆ…

ಭಾಗವತಣ್ಣ ಆ ಕಾಲಕ್ಕೇ ಲವ್ ಮಾಡಿ ಮದುವೆಯಾಗಿದ್ದು ದೊಡ್ಡ ಕ್ರಾಂತಿಕಾರಕ ವಿಷಯವಾಗಿತ್ತು. ತಡುಗುಣಿಯ ಶರಾವತಕ್ಕ ತುಂಬ ಚೆನ್ನಾಗಿ ಹಾಡುತ್ತಾಳೆ. ಒಂದು ಮದುವೆ ಸಮಾರಂಭದಲ್ಲಿ ಅವಳು ಹಾಡಿದ ಹಾಡಿನ ಮೋಡಿಗೆ ಸಿಲುಕಿದವ ಈ ಭಾಗವತ. ಬೆನ್ನುಬಿದ್ದು ಪ್ರೀತಿಸಿದ. ಶ್ರೀಮಂತರ ಮನೆಯ ಶರಾವತಕ್ಕನೂ ಭಾಗವತಣ್ಣನ ಪದ್ಯದ ಮೋಡಿಗೆ ಒಳಗಾದಳು. ಹೀಗೆ ಪ್ರೀತಿಸಿ ಮದುವೆಯಾದ. ಹಾಡು ಪದ್ಯ ಒಂದಾಗಿದ್ದು, ಕಡೆಯವರೆಗೂ ಒಟ್ಟಾಗಿಯೇ ಇದ್ದವರು, ಈಗ ಭಾಗವತಣ್ಣನನ್ನು ಕಳೆದುಕೊಂಡ ಶರಾವತಕ್ಕ ಹೇಗಿರುತ್ತಾಳೋ…

ಎಷ್ಟೇ ಬೆಳೆದರೂ ಸರಳತೆಯನ್ನು ಮೀರದ ವ್ಯಕ್ತಿತ್ವ, ನೆಂಟರಿಷ್ಟರ ಮನೆಯ ಯಾವುದೇ ಸಮಾರಂಭವಿರಲಿ ಅಲ್ಲಿ ಪತ್ನಿಸಮೇತ ಹಾಜರಿರುತ್ತಿದ್ದ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬಾಳಿದವರು. ಇದು ನೆಬ್ಬೂರು ಭಾಗವತರು, ನಂತರ ಹಣಗಾರಿನಲ್ಲಿ ವಾಸ್ತವ್ಯ ಹೂಡಿ, ಕೆಲವರ ಪಾಲಿಗೆ ಹಣಗಾರ ಭಾವ ಎಂದೇ ಹೆಸರು..

ನನಗೆ ಹತ್ತಿರದ ಸಂಬಂಧಿಯಾಗಿದ್ದ ಭಾಗವತಣ್ಣ ಹೋದಂದಿನಿಂದ ಎಲ್ಲ ಪದ್ಯಗಳು ಕಣ್ಣಮುಂದೆ ಹಾದುಹೋಗುತ್ತಿವೆ, ಚಿತ್ರಸಮೇತವಾಗಿ. ಶಂಭು ಹೆಗಡೆಯವರೇ ಎದ್ದು ಕುಣಿಯುತ್ತಿದ್ದಾರೇನೋ ಎಂಬಂತೆ.

ಎಲೆ ಕಾಲ ಪುರುಷ ಕೇಳ್, ಈ ವಸುಂಧರೆಯು
ನಲನಿಲಯ ಇದ ಆಶ್ರಯಿಸಿ ದುರಳರನು ಸದೆಗೈದೇ…
ನೆಲಗೊಂಡ ಪರಿಸರದ ಸಂಸ್ಕಾರ ಎನ್ನನೇ ಸೆರೆಹಿಡಿದು
ಏನೆಂಬೆನೋ…
ಕಳುಹನೈತಂದು ನೀ ಸೂಚಿಸಿದೆ ಮೂಲವನು..
ಕಳವಳವು ಬೇಡೆಂದು ನಿರ್ಜರಾದಿಪಗೆ ಪೇಳ್
ತಿಳಿದು ಲೋಕಾಂತರಂಗೈವೆ ಈ ವಿಷಯಕಿನ್ ಅನುಮಾನ ಬೇಡೆಂದನೋ…

ನಿರ್ಯಾಣದ ರಾಮ ಕಾಲಪುರಷನಿಗೆ, ದೇವತೆಗಳಿಗೆ ಹೇಳು, ಹೇಗೆ ಬಂದೆನೋ ಹಾಗೆಯೇ ಬರುವೆನು…. ಎಂದು ಹೇಳಿದಂತೆ ಭಾಗವತಣ್ಣ ಎದ್ದು ಹೋದನಾ… ಪುರದ ಪುಣ್ಯ ಪುರಷನೇ ಹೋದಂತೆ…