ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ನಕ್ಷತ್ರ ಬರೆದ ದಿನದ ಕವಿತೆ.
ನೀನು ಒಳಗೆ ಸೀಳಿಕೊಂಡು
ನನ್ನ ಗಂಟಲಿನವರೆಗೂ
ಬಂದಿರಬೇಕು
ನನ್ನ ಹಣೆಯ ಮೇಲೆ
ನಿನಗೆ ಕಾಣಿಸುವ ನನ್ನ
ಒಂದೇ ಕಣ್ಣು, ಮತ್ತು
ನೀನು ಯಾರಿರಬಹುದೆಂದು
ನನಗೆ ಹೊಸದಾಗಿ ಅನಿಸುವುದು
ಅದೇ ಹೊತ್ತಲ್ಲಿ
ಈಗ ನಿನ್ನ ಮೆದು ಮೈಯ್ಯ ಏಕಾಂತ
ನಿನ್ನ ಅಂದರೆ ನನ್ನ…
ಏನೋ ಒಂದು
ಮುಗಿಸಿದ ಹಾಗಿದೆ, ಮುಗಿಸಿಯೂ
ಇಲ್ಲೇ ಇರುವೆ ನೀನು
ನನ್ನೆದೆಯಲ್ಲಿ, ತೊಟ್ಟಿಕ್ಕುತ್ತಿರುವ ನೋವಿನಲ್ಲಿ
ಹಾಗೂ ನನ್ನ ಕೇಳದೆಯೇ
ದೂಡಿ ಬರುವ ನಿಟ್ಟುಸಿರಿನಲ್ಲಿ
ಏನಾದರೂ ಮಾತಾಡು..
ಕಾಲ ಉಗುರಿಂದ ನೆತ್ತಿಯ
ತನಕ ನಾನು ನಿನ್ನ ಹಾಗೆಯೇ
ನೀನು ಏನೋ ಒಳಗಿಟ್ಟುಕೊಂಡು ಚೂಪಾಗಿ
ನಗುವುದು ನನ್ನ ಹಾಗೆಯೇ
ಮಾತಾಡು ಏನಾದರೂ
ಬಂದಿಲ್ಲಿ ಮಡಿಲಲ್ಲಿ ಮಲಗು
ನಿನ್ನ ಕೂದಲು ಸವರಿಕೊಂಡು
ಬೇಕೆಂದಾಗ ಚುಂಬಿಸಿಕೊಂಡು
ನೀನು ಏನೇನೋ ನೆನೆಸಿಕೊಂಡು
ಹೇಳುವುದನ್ನು ಅಷ್ಟೊಂದು
ಸುಖವಿಲ್ಲದೆಯೇ ಕೇಳುವೆ
ಅಷ್ಟು ಹೊತ್ತಿನಿಂದ ಹೀಗೆಯೇ ಇರುವೆವು
ಇನ್ನು ತಬ್ಬಿಕೊಳ್ಳದೆ ಇರುವುದಾದರೂ ಹೇಗೆ
ಮಾತಾಡು ನೀನು,
ಆಗಾಗ ನಿನ್ನ ಮುಖ ನೋಡಿಕೊಂಡು
ನಿನ್ನ ಎದೆಯಲ್ಲಿ ಮೂಗು ಉಜ್ಜಿಕೊಂಡು
ಸುಖವಾಗಿಯೇ ಕೇಳುವೆ
ನಾವು ಮತ್ತೆ ಮಾತಾಡುವುದೇ ಹಾಗೆ
ಉದ್ದದ ಮೆರವಣಿಗೆಯ ಹಾಗೆ
ಎಲ್ಲಾ ಮರೆತು ಮಾತಾಡುವುದು
ಏನೋ ಸಿಗುವುದು ಇನ್ನೇನೋ
ಕಳೆದುಹೋಗುವುದು
ನಡುವೆ ನಿನ್ನ ಕಚಕುಳಿಗಳಿಗೆ
ಮರಳಿನ ರಾಶಿಯ ಮೇಲೆ
ನಿನ್ನನ್ನು ದರದರ ಎಳೆದುಕೊಂಡು
ನಿನ್ನ ಹೊಟ್ಟೆಯ ಮೇಲೆ ಕೂತು ಮರಳು ಸುರಿದು
ಹೊರಳಾಡಿಸುವೆ
ಇಷ್ಟಾದ ಮೇಲೆ ಉಳಿಯುವುದಾದರೂ ಏನು
ಕಳೆಯುವ ಒಂದು ರಾತ್ರಿಯಷ್ಟೇ
ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.
ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.
ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ!