ಈ ಎಲ್ಲಾ ಕರಾಳ ಅಧ್ಯಾಯಗಳನ್ನು ತಿಳಿದಿದ್ದರಿಂದ ಸಾಕಾನೆಗಳ ಬಗ್ಗೆಯಾಗಲಿ, ಮಾವುತರ ಬಗ್ಗೆಯಾಗಲಿ ನಮಗೆ ಹೆಚ್ಚು ಆಸಕ್ತಿ ಮೂಡಿರಲಿಲ್ಲ. ಆದರೆ, ಮಾವುತ ಮಾರ ಮತ್ತು ಮುದುಮಲೈ ಆನೆಯನ್ನು ಹತ್ತಿರದಿಂದ ಗಮನಿಸುತ್ತಿದ್ದಾಗ ನಮ್ಮ ನಿಲುವು ಸ್ವಲ್ಪ ಬದಲಾಯಿತು. ಮುದುಮಲೈ ಆನೆ ತಮಿಳುನಾಡಿನ ಮುದುಮಲೈ ಕಾಡಿನ ಸಾಕಾನೆ ಶಿಬಿರದಲ್ಲಿದ್ದ ಒಂದು ಅಪರೂಪದ ಆನೆ. ಜೇನುಕುರುಬ ಮಾರ ಅದರ ಮಾವುತನಾಗಿದ್ದ. ಮಾರನ ಆಜ್ಞೆಗಳನ್ನು ಅದು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಿತ್ತು ಮತ್ತು ಪಾಲಿಸುತ್ತಿತ್ತು. ಮಾರನಿಗೂ ಆ ಆನೆಯ ಜಾಣತನ ಮತ್ತು ಸಾಮರ್ಥ್ಯದ ಅರಿವಿತ್ತು.
ಇತ್ತೀಚೆಗೆ ಬಿಡುಗಡೆಯಾದ ನಾಗರಾಜ್ ನವೀಮನೆಯವರ “ಆನೆ ಕಥೆ” ಪುಸ್ತಕಕ್ಕೆ ಕೃಪಾಕರ ಸೇನಾನಿ ಬರೆದ ಮುನ್ನುಡಿ
ದೀರ್ಘ ಕಾಲ ಕಾಡಿನಲ್ಲೇ ಇದ್ದ ನಮಗೆ ಸಾಕಾನೆಗಳಾಗಲಿ, ಮಾವುತರಾಗಲಿ ನಮ್ಮ ಆಸಕ್ತಿಯನ್ನು ಕೆರಳಿಸಿರಲಿಲ್ಲ. ಕಾಡಿನಲ್ಲಿ ಆನೆಗಳ ಸಂಕೀರ್ಣ ಬದುಕನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡಿದ್ದರ ಹಿನ್ನೆಲೆ ಇದಕ್ಕೆ ಕಾರಣವಿರಬಹುದು.
ಚರಿತ್ರೆಯುದ್ದಕ್ಕೂ ಮಾನವ ಈ ಸಂಕುಲವನ್ನು ನಿರಂತರವಾಗಿ ಶೋಷಿಸಿದ. ಕ್ರಿ. ಪೂ. 300ರಿಂದಲೂ ಇದಕ್ಕೆ ದಾಖಲೆಗಳಿವೆ. ಬಹುಶಃ ಅವು ಕೆಲಸ ನಿರ್ವಹಿಸುವ ಸಾಮರ್ಥ್ಯಕ್ಕೋ ಅಥವಾ ಬುದ್ಧಿವಂತಿಕೆಗೋ ಅವುಗಳನ್ನು ಬಂಧಿಯಾಗಿಸಿದ. ಯುದ್ಧಗಳೆಂಬ ಕ್ರೌರ್ಯ ಚಟುವಟಿಕೆಗಳಲ್ಲಿ ಆನೆಗಳನ್ನು ಬಳಸಿದ. ಮರಮುಟ್ಟುಗಳನ್ನು ದೋಚುವ ಪ್ರಯತ್ನದಲ್ಲಿ ಆನೆಗಳು ಬದುಕುವ ನೆಲೆಯನ್ನು ಆನೆಗಳಿಂದಲೇ ಧ್ವಂಸ ಮಾಡಿದ.
ಈ ಎಲ್ಲಾ ಕರಾಳ ಅಧ್ಯಾಯಗಳನ್ನು ತಿಳಿದಿದ್ದರಿಂದ ಸಾಕಾನೆಗಳ ಬಗ್ಗೆಯಾಗಲಿ, ಮಾವುತರ ಬಗ್ಗೆಯಾಗಲಿ ನಮಗೆ ಹೆಚ್ಚು ಆಸಕ್ತಿ ಮೂಡಿರಲಿಲ್ಲ. ಆದರೆ, ಮಾವುತ ಮಾರ ಮತ್ತು ಮುದುಮಲೈ ಆನೆಯನ್ನು ಹತ್ತಿರದಿಂದ ಗಮನಿಸುತ್ತಿದ್ದಾಗ ನಮ್ಮ ನಿಲುವು ಸ್ವಲ್ಪ ಬದಲಾಯಿತು. ಮುದುಮಲೈ ಆನೆ ತಮಿಳುನಾಡಿನ ಮುದುಮಲೈ ಕಾಡಿನ ಸಾಕಾನೆ ಶಿಬಿರದಲ್ಲಿದ್ದ ಒಂದು ಅಪರೂಪದ ಆನೆ. ಜೇನುಕುರುಬ ಮಾರ ಅದರ ಮಾವುತನಾಗಿದ್ದ. ಮಾರನ ಆಜ್ಞೆಗಳನ್ನು ಅದು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಿತ್ತು ಮತ್ತು ಪಾಲಿಸುತ್ತಿತ್ತು. ಮಾರನಿಗೂ ಆ ಆನೆಯ ಜಾಣತನ ಮತ್ತು ಸಾಮರ್ಥ್ಯದ ಅರಿವಿತ್ತು.
ತನ್ನ ಆನೆಯನ್ನು ನಿಯಂತ್ರಿಸಲು ಆತ ಎಂದೂ ಅಂಕುಶವನ್ನು ಬಳಸುತ್ತಿರಲಿಲ್ಲ. ತನ್ನ ಸಂಜ್ಞೆಯನ್ನು ಆನೆಗೆ ತಿಳಿಸಲು ಸಣ್ಣನೆಯ ಬೆತ್ತದ ಕಡ್ಡಿಯನ್ನು ಮಾತ್ರ ಬಳಸುತ್ತಿದ್ದ. ಅವರಿಬ್ಬರ ವಿಚಿತ್ರ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿತ್ತು.
ಒಮ್ಮೆ ಮಾರ ವಲಯ ಅರಣ್ಯಾಧಿಕಾರಿ ಕಚೇರಿಯ ಬಳಿ ತನ್ನ ಆನೆಯೊಂದಿಗೆ ನಿಂತಿದ್ದ. ಅಲ್ಲಿ ಇನ್ನು ಹಲವು ಮಾವುತರು ತಮ್ಮ ಆನೆಗಳೊಂದಿಗೆ ಬಂದಿದ್ದರು. ಶಾಲೆಗೆ ರಜೆ ಇದ್ದುದರಿಂದ ಅಧಿಕಾರಿಯ ಮಗನು ಊರಿನಿಂದ ಬಂದಿದ್ದ. ಹುಲ್ಲಿನ ಮೈದಾನದಂತಿದ್ದ ಸ್ಥಳದಲ್ಲಿ ಆತ ಫುಟ್ಬಾಲ್ ಒದೆಯುತ್ತಾ ಆಟವಾಡುತ್ತಿದ್ದ. ಒದ್ದ ಚೆಂಡು ಆನೆಗಳ ಬಳಿ ಹೋದಾಗ ಬೆಚ್ಚುತ್ತಿದ್ದ. ಅವುಗಳನ್ನು ಕಂಡು ಆನಂದಿಸುತ್ತಿದ್ದ. ಆದರೆ, ಆನೆಗಳು ಮಾತ್ರ ತಾಳ್ಮೆಯಿಂದ ನಿಂತಿದ್ದವು.
ಮಾರ ಸಂಬಳ ಹಿಡಿದು ಅಧಿಕಾರಿಯ ಕಚೇರಿಯಿಂದ ಹೊರಬಂದ. ಅಧಿಕಾರಿಯೊಂದಿಗೆ ಏನು ಕಿರಿಕಿರಿಯಾಗಿತ್ತೋ ಗೊತ್ತಿಲ್ಲ. ಮಾರ ಸಿಟ್ಟಿನಲ್ಲಿದ್ದ. ಅಷ್ಟರಲ್ಲಿ ಹುಡುಗ ಒದ್ದ ಚೆಂಡು ಮುದುಮಲೈ ಆನೆಯ ಬಳಿಗೆ ಉರುಳಿ ಬಂತು. ಮಾರ ಮುದುಮಲೈನತ್ತ ನೋಡಿದ. ಮರುಕ್ಷಣದಲ್ಲಿ ಮುದುಮಲೈ ಆನೆ ತನ್ನ ಬೃಹದಾಕಾರದ ಪಾದವನ್ನು ಉರುಳುತ್ತಿದ್ದ ಚೆಂಡಿನ ಮೇಲೆ ಮೃದವಾಗಿ ಊರಿತು. ಅನಂತರ ಮಾರನತ್ತ ನೋಡಿದಂತಾಯಿತು. ಚೆಂಡು ಸಿಡಿದು ಹಾಳೆಯಂತೆ ಅಪ್ಪಚ್ಚಿಯಾಗಿ ಮಲಗಿತ್ತು. ಬಾಲಕ ಅಳಲು ಪ್ರಾರಂಭಿಸಿದ.
ಆನೆ ಮತ್ತು ಮಾವುತನ ನಿಗೂಢ ಸಂಬಂಧಗಳನ್ನು ತಿಳಿಸಲು ಈ ಘಟನೆಯನ್ನು ಹೇಳಬೇಕಾಯಿತು. ಪತ್ರಕರ್ತ ಮಿತ್ರ ನಾಗರಾಜ್ ನವೀಮನೆ ಈ ಪುಸ್ತಕದಲ್ಲಿ ಸಾಕಾನೆ ಮತ್ತು ಮಾವುತರ ಬದುಕು ಹಾಗೂ ಒಡನಾಟವನ್ನು ಚಿತ್ರಿಸಿದ್ದಾರೆ. ಅಷ್ಟೆ ಅಲ್ಲದೆ; ಆನೆ ಡಾಕ್ಟರ್, ಆನೆ ಡಾಕ್ಯುಮೆಂಟರಿ ಮತ್ತು ಇನ್ನಿತರ ವಿವರಗಳನ್ನು ದಾಖಲಿಸುತ್ತಾ ಹೋಗುತ್ತಾರೆ. ಅವರ ಬರವಣಿಗೆಯಲ್ಲಿ ಕಳಕಳಿ ಇದೆ. ವ್ಯವಹಾರಿಕ ಸಮಾಜದ ಅರಿವಿಗೆ ಬಾರದ ಇಲ್ಲಿನ ಅನೇಕ ಸಂಗತಿಗಳು ಓದುಗರನ್ನು ವಿಸ್ಮಯಗೊಳಿಸಬಹುದು. ನೀರಸವಾಗಬಹುದಾದ ಸಂಗತಿಯನ್ನು ಸ್ವಾರಸ್ಯಕರವಾಗಿ ಬರೆದಿದ್ದು, ವನ್ಯಜೀವಿಯೆಡೆಗಿನ ಅವರ ಪ್ರೀತಿ, ಕಾಳಜಿ ಹೀಗೆ ಮುಂದುವರಿಯಲಿ.
**********************
ಆನೆ ಮತ್ತು ಮೈಸೂರು
`ಯಾಕೋ ಕೊಂಚ ಸೊರಗಿದ್ದಾನಲ್ಲ ಅರ್ಜುನ’
`ಮೊನ್ನೆ ಬಂದಾಗ ಇದ್ದುದಕ್ಕಿಂತ ಈಗ ಚೆನ್ನಾಗಿ ಆಗಿದ್ದಾನೆ ಬಿಡು’
`ಯಾಕೋ ಈಶ್ವರನ ಮುಖ ಅಷ್ಟು ಶಾಂತವಾಗಿಲ್ಲ. ಈ ಸದ್ದುಗದ್ದಲಕ್ಕೆ ಅವನಿನ್ನೂ ಹೊಂದಿಕೊಂಡಿಲ್ಲ ಅನ್ನಿಸುತ್ತೆ.’
– ದಸರಾ ಆನೆಗಳ ಬಗೆಗೆ ಮೈಸೂರಿನ ಮನೆಗಳಲ್ಲಿ ಕೇಳಿಬರುವ ಮಾತುಗಳಿವು. ಮೈಸೂರಿಗರಿಗೆ ಆನೆಗಳೆಂದರೆ ಹೀಗೆ, ಮನೆ ಮಕ್ಕಳ ಹಾಗೆ. ಮನೆಗೆ ಬಂದ ಕರುಳುಬಳ್ಳಿಯ ಹಾಗೆ. ನಮ್ಮದೇ ಮನೆಯ ಹುಡುಗರೇನೋ ಎಂಬಂತೆ ಆನೆಗಳ ನಡೆ, ಮನಃಸ್ಥಿತಿ ಎಲ್ಲವನ್ನೂ ಗಮನಿಸಬೇಕು, ಕಾಳಜಿಯ ಮಾತುಗಳನ್ನು ಆಡಬೇಕು. ಇದು ಇಂದು ನಿನ್ನೆಯ ಮಾತಲ್ಲ, ಹಲವು ವರ್ಷಗಳಿಂದ ನಡೆದುಬಂದಿರುವ ರೂಢಿ. ಪ್ರತಿ ವರ್ಷವೂ ದಸರಾ ನೆಪದಲ್ಲಿ ಮೈಸೂರಿಗೆ ಬರುತ್ತಾರೆ ಈ ಮುದ್ದಾದ ನೆಂಟರು. ಹೂವಾಡಗಿತ್ತಿಯಿಂದ ಹಿಡಿದು ಟೀ ಅಂಗಡಿ ವ್ಯಾಪಾರಿ, ರಿಕ್ಷಾ ಚಾಲಕ, ದಾರಿಯಲ್ಲಿ ವಾಕಿಂಗ್ ಹೋಗುತ್ತಿರುವ ನಾಗರಿಕರು… ಎಲ್ಲರನ್ನೂ ಮೋಡಿ ಮಾಡುತ್ತಾರೆ.
ಈ ನೆಂಟರನ್ನು ನೋಡಲೆಂದೇ ಎದುರು ಮನೆಯ ಆ ತಾತ ತಿಂಗಳಿಂದ ದಿನವೂ ಅದೇ ಸಮಯಕ್ಕೆ ಮನೆಯಿಂದ ಹೊರಬಂದು ನಿಲ್ಲುತ್ತಾರೆ. ಅವರಷ್ಟೇ ಅಲ್ಲ; ಪಕ್ಕದ ಬೀದಿಯ ಅಜ್ಜಿ, ಹಿಂದಿನ ರಸ್ತೆಯ ಅಕ್ಕ, ಎಲ್ಲಾ ರಸ್ತೆಗಳ ಮಕ್ಕಳು ಮನೆ ಮುಂದೆ ಬಂದು ನಿಲ್ಲುತ್ತಿದ್ದಾರೆ. ಕಾರಣವಿಷ್ಟೆ, ಆನೆಗಳ ಸಾಲು ಬರುತ್ತಿದೆ. ನೋಡಬೇಕು, ಕಣ್ತುಂಬಿಕೊಳ್ಳಬೇಕು. ಮೈಸೂರಿಗರಿಗೆ ದಸರಾ ಎಂದರೆ ಎಷ್ಟು ಪ್ರೀತಿಯೋ ಆನೆಗಳ ಮೇಲೂ ಅಷ್ಟೇ ಮೆಚ್ಚು. ಆನೆಗಳು ಸಾಲುಸಾಲಾಗಿ ನಗರದ ಬೀದಿಗಳಲ್ಲಿ ತಾಲೀಮು ಮಾಡುವಾಗ ಕಣ್ತುಂಬಿಕೊಳ್ಳದವರೇ ಇಲ್ಲವೇನೋ. ಒಂದರ್ಥದಲ್ಲಿ ದಸರಾದ ಸಂಭ್ರಮ ಪಸರಿಸುವ ಸಾಂಸ್ಕೃತಿಕ ರಾಯಭಾರಿಗಳು ಇವರು.
ಆನೆಗಳು ಮತ್ತು ಮೈಸೂರಿಗೆ ಇರುವ ಸಂಬಂಧವೇ ಅಂತಹದ್ದು. ಇಲ್ಲಿನ ನಿವಾಸಿಗಳಿಗಷ್ಟೆ ಅಲ್ಲ, ಪ್ರವಾಸಿಗರಿಗೂ ಆನೆಗಳಿಗೂ ಅನುಪಮ ನಂಟು. ರಾಜ್ಯದ ಮೂಲೆಮೂಲೆಯಲ್ಲಿ ಕುಳಿತು ಟಿವಿ, ಪತ್ರಿಕೆ ನೋಡುವವರಿಗೆಲ್ಲರಿಗೂ ಈ ಆನೆಗಳ ಚಿತ್ರ ಕಂಡರೆ ಏನೋ ಖುಷಿ. ಮೈಸೂರು ಅಂದ್ರೆ ರಾಜರು. ರಾಜರು ಅಂದರೆ ಅರಮನೆ. ಅರಮನೆ ಅಂದರೆ ದಸರಾ. ದಸರಾ ಅಂದ್ರೆ ಜಂಬೂಸವಾರಿ. ಜಂಬೂಸವಾರಿ ಅಂದ್ರೆ ಆನೆಗಳು. ಹೀಗೆ ಯಾವ ಬಿಂದುವಿನಿಂದ ಮೈಸೂರನ್ನು ನೋಡಿದರೂ ಅದು ಸುತ್ತುವ ಪಥದಲ್ಲಿ ಆನೆಗಳು ಎದುರುಗೊಳ್ಳುತ್ತವೆ! ಎಲ್ಲಾ ಕಾಲಕ್ಕೂ ನಮ್ಮನ್ನು ಕಾಡುತ್ತವೆ!
ಕನ್ನಡಿಗರ ಪಾಲಿಗೆ ಇವುಗಳು ಕೇವಲ ಪ್ರಾಣಿಗಳಲ್ಲ, ನಮ್ಮ ಸಂಸ್ಕೃತಿ, ಐಕ್ಯತೆ ಸಾರುವ ಪ್ರತಿರೂಪಗಳು. ಮನುಷ್ಯರಂತೆ ಹೆಸರುಳ್ಳ ಪಾತ್ರಗಳು. ನಮಗೆ ಈ ಆನೆಗಳ ಸಾಲಿನಲ್ಲಿ ಮಹಾಭಾರತದ ಪಾತ್ರಗಳ ಹೆಸರಿರುವ ಆನೆಗಳು ಕಾಣಸಿಗುತ್ತವೆ. ಬಲರಾಮ, ಅರ್ಜುನ, ಅಭಿಮನ್ಯು, ಭೀಮ ಇತ್ಯಾದಿ. ಮೇರಿ, ಸರಳ ಎಂಬ ಹೆಸರಿನ ಆನೆಗಳೂ ಇವೆ. ಮಾವುತರು, ಕಾವಾಡಿಗರು ಬಹುಪಾಲು ಗಿರಿಜನರು ಮತ್ತು ಮುಸ್ಲಿಮರು. ಹಾಗಾಗಿ ಜಾತ್ಯತೀತ ಭಾವನೆಗಳನ್ನು ಆನೆಗಳು ಸಾರುತ್ತವೆ. ಅದಕ್ಕೆ ಹಿರಿಯರು ಹೇಳುವುದು- ಆನೆಗಳಿಲ್ಲದೆ ಮೈಸೂರನ್ನು ಊಹಿಸಿಕೊಳ್ಳುವುದು ಕಷ್ಟ ಎಂದು!
`ಇದು 60 ವರ್ಷದ ಹಿಂದಿನ ನೆನಪು. ಅರಮನೆ ಆನೆಗಳು ರಸ್ತೆಯ ಮೇಲೆ ಬರುತ್ತಿದ್ದರೆ ನಮಗೆ ಮಹಾರಾಜರೇ ಬರುತ್ತಿರುವಂತೆ ಭಾಸವಾಗುತ್ತಿತ್ತು. ರಾಜಗಾಂಭೀರ್ಯದಿಂದ ಆನೆಗಳು ಬರುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಗಸು. ಆನೆಗಳಿಗೆ ಏನಾದರೂ ಪೆಟ್ಟಾಯಿತು ಎಂಬ ವಾರ್ತೆ ಅರಮನೆ ಅಂಗಳದಿಂದ ಬಂದರೆ ನಮಗೆ, ನಮ್ಮ ಮನೆ ಮಕ್ಕಳಿಗೆ ನೋವಾಯಿತೇನೋ ಎಂಬಂತೆ ಬೇಸರವಾಗುತ್ತಿತ್ತು. ಆನೆ ನಮ್ಮ ಪಾಲಿಗೆ ಕೇವಲ ಪ್ರಾಣಿಯಲ್ಲ. ಅದು ನಮ್ಮೊಳಗಿನ ಒಂದು ಜೀವ. ಅದಕ್ಕೆ ಏನಾದರೂ ಆದರೆ ನೋವಾಗದೆ ಇರುತ್ತದೆಯೇ,’ ಎಂದು ಇವತ್ತಿಗೂ ಮೈಸೂರಿನ ಹಿರಿಯ ಜೀವಗಳು ಗದ್ಗದಿತರಾಗುತ್ತಾರೆ.
ವರ್ಷದಲ್ಲಿ ಎರಡು ತಿಂಗಳಾದರೂ ಹತ್ತಾರು ಆನೆಗಳು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕುತ್ತವೆ. ದಸರಾಗೆ ಮುಂಚೆಯೇ ಇಲ್ಲಿ ಬಂದು ಬಿಡಾರ ಹೂಡುತ್ತವೆ. ದಸರಾ ಮಹೋತ್ಸವಕ್ಕಾಗಿ ಅರಮನೆ ಅಂಗಳಕ್ಕೆ ಎರಡು ಗುಂಪುಗಳಾಗಿ ಆನೆಗಳು ಬಂದಿಳಿಯುತ್ತವೆ. ಬಂಡೀಪುರದಲ್ಲಿರುವ ರಾಂಪುರ, ಬಿ. ಆರ್. ಹಿಲ್ಸ್ ನ ಕೆ. ಗುಡಿ, ನಾಗರಹೊಳೆಯ ಬಳ್ಳಿಮತ್ತಿಗೋಡು ಕೊಡಗಿನ ದುಬಾರೆ ಸೇರಿದಂತೆ ನಾನಾ ಕ್ಯಾಂಪ್ ಗಳಿಂದ ಸುಮಾರು 12 ಅಥವಾ 14 ಆನೆಗಳು ಬಂದಿಳಿಯುತ್ತವೆ. ದಸರಾ ಮುಗಿಸಿ ಸ್ವಸ್ಥಾನಕ್ಕೆ ಮರಳುತ್ತವೆ.
(ಲೇಖಕರು: ನಾಗರಾಜ್ ನವೀಮನೆ, ಪುಸ್ತಕ: ಆನೆ ಕಥೆ, ಪ್ರಕಾಶನ: ಅಭಿನವ ಪುಟಗಳು: 76, ಬೆಲೆ: 50/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ