ನೋಡು ಕೃಷ್ಣ
ನವಿಲುಗರಿಯ ಕೇಳು ಕೃಷ್ಣ,
ಇರುಳ ನರಳಿಕೆಗೆ
ಗೆಜ್ಜೆಯು ಸದ್ದು ಮರೆತು
ಮರಟುಗಟ್ಟಿದೆ,
ಕೊಳಲಲೂ ಬಿಂಜಲು
ಕಟ್ಟಿದೆ,
ಜಡ ರಾಜ್ಯಭಾರದ ಮೋಹ
ಹೊದಿಕೆ ಸರಿಸಿ
ನೋಡೊಮ್ಮೆ ಸಾಕು
ಗೆಜ್ಜೆ-ಕೊಳಲು
ರಾಧೆ-ಶ್ಯಾಮನಾದೀತು
ಸಂಜೆ ಮೋಹಗೊಂಡೀತು…
ನಿತ್ಯ ನೀರೆರೆವೆ…
ಹೂ ಬನ ಬೃಂದಾವನಕೆ,
ನಾನೇ ನೀನಾಗಿ ಕುಣಿದು
ಕುಪ್ಪಳಿಸಿದರೂ
ವಸಂತದಲೂ ಬತ್ತಿವೆ
ನಿನ್ನ ವಿರಹದ ಕಾವಿಗೆ,
ಒಮ್ಮೆ ನೆನದು ಮರಳಿ ನೋಡು,
ಲತೆಗಳಲಿ ಹೂವ ಗೊಂಚಲೇ
ಅರಳಿ ನಿಂತೀತು
ಘಮಲಿಗೆ ಸಾವಿರ ದುಂಬಿಯ
ಮೇಳ ಸೇರೀತು
ಉನ್ಮಾದದ ಹರಿವಿಲ್ಲ
ಯಮುನೆಯಲಿ
ಕಪಿಲೆಯ ಕೆಚ್ಚಲೆಂದೋ ಬತ್ತಿದೆ
ರಾಜ್ಯಭಾರ ನಿನ್ನದು ಕೃಷ್ಣ,
ಇಲ್ಲಿ ಅಣುಅಣುವೂ ಭಾರ
ನೆನೆದಾಗಲೆಲ್ಲ ನೆರಳಾಗಿ
ನನ್ನಲೇ ನೀ, ನಿನ್ನಲ್ಲೆ ನಾನಾಗಿ
ನೆರಳು, ಪ್ರತಿಬಿಂಬವಾದಾಗಲೂ…
ಗೆಜ್ಜೆ, ಕೊಳಲು, ಕಪಿಲೆ, ಯಮುನೆ,
ಬಸವಳಿದ್ದದು ಮತ್ತೇಕೆ ಕೃಷ್ಣ?
ನನ್ನಾಳದಲ್ಲೇಲ್ಲೋ ವಿರಹ
ಪ್ರವಹಿಸಿ ಸುಟ್ಟಾಗಲೆಲ್ಲ
ಕಾವ ಹಬೆ ಸೋಕಿರಬಹುದೇ?
ನಲ್ಲನಾಗಿ ನೋಡೊಮ್ಮೆ,ಸಾಕು
ಪ್ರೇಮ ಮತ್ತೆ ಝಲ್ಲರಿಯಾದೀತು
ಆಷಾಢದಲ್ಲೂ ವಸಂತದ
ಸೊಬಗು ಮೂಡೀತು
ಸುಧಾರಾಣಿ ನಾಯ್ಕ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಸುಧಾರಾಣಿ ಅವರಿಗೆ ಕವನ, ಕಥೆ ಬರವಣಿಗೆ ಆಸಕ್ತಿಯ ಕ್ಷೇತ್ರಗಳು
ಕಾರ್ಯಕ್ರಮಗಳ ನಿರೂಪಣೆ ಮಾಡುವುದು ಇವರ ಹವ್ಯಾಸ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಉತ್ತಮ ಕವನ.