ಅವಳಾದರೂ ಯಾಕೆ ಅಷ್ಟೊಂದು ಪ್ರೀತಿಸಬೇಕಿತ್ತು… ಅದೂ ತನ್ನನ್ನೇ ಕಳೆದುಕೊಳ್ಳುವಷ್ಟು, ಮರಳಿ ಪಡೆಯಲಾರದಷ್ಟು, ಅಳಿದು ಉಳಿಯುವಷ್ಟು, ಅಳಿಯದೆ ಇರಲಾರದಷ್ಟು… ಸ್ವಾರ್ಥವನ್ನು ತುಂಬಿಕೊಂಡು ಪ್ರೇಮದ ಲೇಪ ಹಚ್ಚಿ ಜಗತ್ತನ್ನು ಮೋಡಿಗೊಳಿಸಲು ಹೊರಡುವ ಮಹತ್ವಾಕಾಂಕ್ಷಿ ಸಮರ ಸಿಂಹರ ನಡುವೆ ಒಂದೇ ಒಂದು ಕೆಂಪು ಗುಲಾಬಿಯ ಸಸಿಯನ್ನು ಆ ಕಪ್ಪು ನೆಲದ ಮೇಲೆ ನೆಟ್ಟು ಹಿಂತಿರುಗುವ ಒಂದೇ ಒಂದು ಚಿಕ್ಕಾಸೆ ಹೊತ್ತು ನಡೆದವಳ ಹೆಜ್ಜೆ ಗುರುತುಗಳು ಇಂದಿಗೂ ಕುಸಿಯುತ್ತಿರುವ ಗೋರಿ ಮಹಲುಗಳ ನಡುವೆ ಉಸಿರಾಡುತ್ತಿವೆ. ಅವುಗಳ ಉಸಿರು ಇಂದಿಗೂ ಪ್ರೇಮವನ್ನೇ ಉಸಿರಾಡುತ್ತಿವೆ. ಪ್ರೇಮದ ವಿನಃ ಬೇರೇನಿಲ್ಲ ಎನ್ನುವಷ್ಟು ಮೊಗೆಮೊಗೆದು ಪ್ರೇಮವನ್ನಷ್ಟೇ ಆಯ್ದು ಉಸಿರಾಡುತ್ತಿವೆ.
ಆಶಾ ಜಗದೀಶ್ ಅಂಕಣ
ಎಲ್ಲೋ ಮರೆತು ಬಿಟ್ಟ ಮುರಳಿ… ತವರ ಮರೆತು ಹೊರಟು ಇನ್ನೂ ಗಾಳಿಯಲ್ಲೆಲ್ಲೋ ತೇಲುತ್ತಾ ಹರಡುತ್ತಲೇ ಇರುವ ಮುರಳಿ ಗಾನದ ಕಣ್ಮುಚ್ಚಿ ಮೈಮರೆತ ಉನ್ಮತ್ತ ರಾಗ… ಮಾವಿನ ಚಿಗುರು, ಹೊಂಗೆಯ ನೆರಳು, ಎಳೆ ಗರಿಕೆಯ ಸಿಹಿ… ಪ್ರೀತಿಗೆ ಇದಕ್ಕಿಂತಲೂ ಬೇಕಾದದ್ದು ಇನ್ನೇನಿದೆ…
ಬಲಿತ ಎರೆಡು ಆಕಾಶ ಮಲ್ಲಿಗೆ ಮರಗಳ ನಡುವೆ ತೊನೆಯುವಂತೆ ಬಳ್ಳಿಗೆ ಮಾವಿನೆಲೆಗಳ ಹೆಣೆದು ತೋರಣ ಕಟ್ಟಿ, ನಡುಬಳಸಿ ಎದೆಯುಬ್ಬಿಸಿ ನಿಂತ ನೀನು, ನಿನ್ನ ಎದೆಗೊರಗಿ ಹಬ್ಬಿನಿಂತ ನಾನು ನಮ್ಮ ಮೊದಲ ಬಲಗಾಲ ಹೆಜ್ಜೆಯನ್ನು ಇನ್ನಿಲ್ಲದ ಒಲವಿನಿಂದ ಇರಿಸುತ್ತಾ ಪ್ರೀತಿಯನ್ನು ಹಬ್ಬವಾಗಿಸುವಾಗ ನಮ್ಮಿಬ್ಬರ ಮನಸ್ಸುಗಳು ಪ್ರಫುಲ್ಲವಾಗಿ ಅರಳಿದ ಸದ್ದು ಈ ಜನ್ಮಕ್ಕೆ ಸಾಕಿನೆಸುತ್ತದೆ…
“ಅಂಗಾಲ ಚಿತ್ತಾರಕ್ಕೆ
ಲೋಕದ ಹಂಗಿರುವುದಿಲ್ಲ
ನೇವರಿಸುವ ಬೆರಳ ತುದಿಗೆ
ಇದು ನನ್ನದು ಮಾತ್ರ
ಎನ್ನುವ ಸತ್ಯ
ಬರಿದೆ ಮಾತಲ್ಲ”
ರಾಧೇ ಎನ್ನುವ ಇವಳ ಹೃದಯದ ಕವಾಟಗಳಿಗೆ ಬಾಗಿಲುಗಳೆಷ್ಟೋ… ಮೊಗೆದಷ್ಟೂ ಊರುವ ಅಪರಿಮಿತ ಪ್ರೀತಿ ಬುಗ್ಗೆಯ ಚಿಲುಮೆಯಲ್ಲಿ ತಣ್ಣಗೆ ನೆಂದು ತಂಪಾದವರೆಷ್ಟೋ… ಅವಳ ನವಿರು ಹೆಜ್ಜೆಗಳಲ್ಲಿ ತುಳಿವ ನೆಲದ ಬಗೆಗೂ ಒಂದು ಮಮತೆಯಿದೆ… ನೋಯಿಸುವ ಮುಳ್ಳಿನೆಡೆಗೂ ನೇವರಿಸುವ ಕರುಣೆಯಿದೆ. ಅವಳು ಹೆಣ್ಣಲ್ಲ… ನವಿರು ಭಾವಗಳ ಕಣಕಣಗಳಿಂದಾದ ಜೀವಂತ ಪುತ್ಥಳಿ.
“ಬೆರಳ ತುದಿಯ
ಸಣ್ಣ ಸ್ಪರ್ಷದ ತಿಳುವಳಿಕೆ
ತಪಸ್ಸಿನ ನಂತರದ ಜ್ಞಾನ
ಎನ್ನುವುದು
ರಾಧೆಗೆ ಗೊತ್ತಿರುವ ಸತ್ಯ
ಮತ್ತೆ ರಾಧೆಯಾಗುವುದೆಂದರೆ
ಆ ಸತ್ಯವೇ
ನಾವಾಗುವುದು…”
ರಾಧೆಯ ಪ್ರೇಮದ ಪಂಥಕ್ಕೆ ಸದ್ಗುರುವಾದವಳು. ಪ್ರೇಮಕ್ಕೆ ಹಂಬಲಿಸುವವರ ಮೊರೆಗೆ ಕಿವಿಯಾದವಳು. ಅವಳ ಆಂತರ್ಯಕ್ಕೆ ಜನ್ಮಾಂತರಗಳ ಕ್ಷಣಾರ್ಧದಲ್ಲಿ ಹಾಯುವ ಶಕ್ತಿಯಿದೆ. ಮುಳ್ಳಿನ ಹಾಸಿಗೆಯಲ್ಲಿ ಹೂಗಳ ಕಾಣುವ ದೃಷ್ಟಿಯಿದೆ. ಮುಳ್ಳೂ ಅರಳಿ ಹೂವಾಗುತ್ತದೆ. ಪ್ರೇಮಕ್ಕೆ ಮರುಳಾಗದೆ ಉಳಿಯಲೂ ಸಾಧ್ಯವಾ…
ದೈಹಿಕವಾಗಿ ದೂರವಾಗುತ್ತಿರುವ ಅವರ ಸ್ಥಿತಿಗೆ ಹುಸಿ ಕನಿಕರ ತೋರುತ್ತಿರುವ ಮಂದಿಯ ಕಂಡು ನಗುತ್ತಾನೆ ಕೃಷ್ಣ… ಮತ್ತು ಪ್ರೀತಿಸುವುದಷ್ಟನ್ನೇ ಜಪತಪವಾಗಿಸಿಕೊಂಡವಳನ್ನು ಅನುಕಂಪದ ಕಲ್ಲುಗಳು ಮುಟ್ಟಲಾರವು… ಜಗತ್ತು ನಡೆಯುತ್ತಿರುವುದು ಪ್ರೇಮದಿಂದ, ಅನುಕೂಲಕ್ಕೆ ಮಾಡಿಕೊಂಡ ವ್ಯವಸ್ಥೆಯನ್ನು ಜಟಿಲ ಜಾಲವಾಗಿಸಿಕೊಂಡು ಸೆರೆಹಿಡಿದು ಬಂಧಿಸಿಡಲು ಬಳಸುತ್ತಿರುವುದು ನಿಸರ್ಗದ ವಿರುದ್ಧವಲ್ಲದೆ ಮತ್ತೇನು…. ಯಾವ ವ್ಯವಸ್ಥೆಯ ಕ್ರೂರತನಕ್ಕೂ ಪ್ರೇಮವನ್ನು ನಿರ್ನಾಮಗೊಳಿಸಲು ಸಾಧ್ಯವಿಲ್ಲ. ಅದಕ್ಕೇ ಅದು ಇತ್ತು, ಅದು ಇದೆ ಮತ್ತೆ ಅದು ಇರುತ್ತದೆ…
“ಅಳತೆ ಮೀರಿದ ಪ್ರೀತಿ ನನ್ನದೂ
ಯಾವ ಭೀತಿ ಅದಕೆ
ಕೃಷ್ಣಾ ಎನುವ ಸಂಜೀವಿನಿ
ಎದೆಯ ತುಂಬಿರಲು
ಸಾವೂ ಹೆದರಿಸಲಾರದು”
ರಾಧೇ ಎನ್ನುವ ಇವಳ ಹೃದಯದ ಕವಾಟಗಳಿಗೆ ಬಾಗಿಲುಗಳೆಷ್ಟೋ… ಮೊಗೆದಷ್ಟೂ ಊರುವ ಅಪರಿಮಿತ ಪ್ರೀತಿ ಬುಗ್ಗೆಯ ಚಿಲುಮೆಯಲ್ಲಿ ತಣ್ಣಗೆ ನೆಂದು ತಂಪಾದವರೆಷ್ಟೋ… ಅವಳ ನವಿರು ಹೆಜ್ಜೆಗಳಲ್ಲಿ ತುಳಿವ ನೆಲದ ಬಗೆಗೂ ಒಂದು ಮಮತೆಯಿದೆ… ನೋಯಿಸುವ ಮುಳ್ಳಿನೆಡೆಗೂ ನೇವರಿಸುವ ಕರುಣೆಯಿದೆ.
ಅವಳಾದರೂ ಯಾಕೆ ಅಷ್ಟೊಂದು ಪ್ರೀತಿಸಬೇಕಿತ್ತು… ಅದೂ ತನ್ನನ್ನೇ ಕಳೆದುಕೊಳ್ಳುವಷ್ಟು, ಮರಳಿ ಪಡೆಯಲಾರದಷ್ಟು, ಅಳಿದು ಉಳಿಯುವಷ್ಟು, ಅಳಿಯದೆ ಇರಲಾರದಷ್ಟು… ಸ್ವಾರ್ಥವನ್ನು ತುಂಬಿಕೊಂಡು ಪ್ರೇಮದ ಲೇಪ ಹಚ್ಚಿ ಜಗತ್ತನ್ನು ಮೋಡಿಗೊಳಿಸಲು ಹೊರಡುವ ಮಹತ್ವಾಕಾಂಕ್ಷಿ ಸಮರ ಸಿಂಹರ ನಡುವೆ ಒಂದೇ ಒಂದು ಕೆಂಪು ಗುಲಾಬಿಯ ಸಸಿಯನ್ನು ಆ ಕಪ್ಪು ನೆಲದ ಮೇಲೆ ನೆಟ್ಟು ಹಿಂತಿರುಗುವ ಒಂದೇ ಒಂದು ಚಿಕ್ಕಾಸೆ ಹೊತ್ತು ನಡೆದವಳ ಹೆಜ್ಜೆ ಗುರುತುಗಳು ಇಂದಿಗೂ ಕುಸಿಯುತ್ತಿರುವ ಗೋರಿ ಮಹಲುಗಳ ನಡುವೆ ಉಸಿರಾಡುತ್ತಿವೆ. ಅವುಗಳ ಉಸಿರು ಇಂದಿಗೂ ಪ್ರೇಮವನ್ನೇ ಉಸಿರಾಡುತ್ತಿವೆ. ಪ್ರೇಮದ ವಿನಃ ಬೇರೇನಿಲ್ಲ ಎನ್ನುವಷ್ಟು ಮೊಗೆಮೊಗೆದು ಪ್ರೇಮವನ್ನಷ್ಟೇ ಆಯ್ದು ಉಸಿರಾಡುತ್ತಿವೆ.
ಅವಳ ಲೌಕಿಕ ವ್ಯವಹಾರ ಮತ್ತೂ ಬೇರೆ, ಅಲೌಕಿಕದ ಅವಳೇ ಬೇರೆ. ಅದು ದೇಹ ಮತ್ತು ಆತ್ಮಗಳ ನಡುವಿರುವ ವ್ಯತ್ಯಾಸ. ಮತ್ತೆ ಕ್ಷಣಕ್ಕೊಮ್ಮೆ ಅತ್ತಿಂದಿತ್ತ ರೂಪಾಂತರಗೊಳ್ಳುವುದೂ ಅವಳಿಗೆ ಅನೈಚ್ಛಿಕ. ಗೋಣು ಬಗ್ಗಿಸಿ ಮಾಡುವ ದೈನಂದಿನ ಕೆಲಸಗಳಲ್ಲಿ ಅವಳದೊಂದು ತಪಸ್ಸಿದೆ. ಆತ್ಮಸಖನಿಗೆ ಮೀಸಲಾದ ಕಠೋರ ನಿಷ್ಠೆಯಿದೆ.
“ಯಾರೆಲ್ಲ ರಾಧೆಯರಾಗಬೇಕಿದೆ ಇಲ್ಲಿ
ಅವಳ ಹೆಜ್ಜೆಗಳ ತೊಟ್ಟು ನಡೆಯಲಿಕ್ಕಿದ್ದಾರೆ
ದಾರಿ ಮರೆತವರ, ಗುರಿ ಇರದವರ
ಕೈಹಿಡಿದು ನಡೆಸುತ್ತಾಳವಳು
ಅವಳಾಗಲು
ರುಚಿಯಾದ ಕೊಬ್ಬರಿಯ ಜೊತೆಗೆ
ಕಠಿಣ ಚಿಪ್ಪೂ ಇರುವುದು ಅಗತ್ಯ”
ಮನ್ವಂತರಗಳ ದಾಟಿ ಬಂದಿರುವ ರಾಧೆ ಕಾಲದ ಸಿಕ್ಕಿನ ನಡುವೆಯೂ ಹೆಪ್ಪಿಗೆ ಉಳಿಸಿಟ್ಟ ಮೊಸರಿನಂತೆ ತನ್ನನ್ನು ಉಳಿಸಿಟ್ಟುಕೊಂಡು ಬಂದವಳು. ಬೆಳಗೆದ್ದು ಗಂಡ ಮಕ್ಕಳ ಕರೆಗೆ ಓ ಎಂದು, ಹಸಿದ ಹೊಟ್ಟೆಗಳ ತುಂಬಿಸಿ, ಬುತ್ತಿ ಕಟ್ಟಿ ತನ್ನ ಆಫೀಸಿಗೆ ತಯಾರಾಗುವವಳು, ಹನ್ನೆರೆಡು ಮುಟ್ಟುವ ಮುಂಚೆ ಹೊಟ್ಟೆ ಚುರುಗುಟ್ಟಿದಾಗ ತಿನ್ನದೇ ಬಂದದ್ದು ನೆನಪಾಗುತ್ತದವಳಿಗೆ, ವ್ಯಾನಿಟಿ ಬ್ಯಾಗ್ ತೆಗೆದು ನೋಡಿದವಳಿಗೆ ಬುತ್ತಿ ತರದೆ ಬಂದದ್ದೂ ನೆನಪಾಗಿ ಕಣ್ಣಂಚಿಗೆ ಬಂದು ನಿಂತ ಹನಿಯನ್ನು ಫ್ಯಾನಿಗೆ ಒಡ್ಡಿ ಇಂಗಿಸಿ, ಪೇಲವ ನಗೆಯೊಂದರ ತೇಪೆ ಹಾಕಿಕೊಂಡು ಕೆಳಗಿಳಿದು ಹೋಗಿ ಕಾಫಿಯೊಂದನ್ನು ಆರ್ಡರ್ ಮಾಡುತ್ತಾಳೆ. ಒಂದೊಂದೇ ಗುಟುಕು ಹೀರುವಾಗ ಧ್ಯಾನಿಸುತ್ತಾಳೆ, ಒಮ್ಮೆಯಾದರೂ ಈ ಕೃಷ್ಣನೆನ್ನುವ ಕೃಷ್ಣ ತನ್ನ ಮುಂದೆ ಬಂದು ನಿಲ್ಲಲಾರನೇಕೆ ಎಂದು ಹಲುಬುತ್ತಾಳೆ…
ಸಖನಲ್ಲದ ಸಖ, ಸ್ವರೂಪವಿಲ್ಲದ ರೂಪ, ಕೃಷ್ಣನಾಗದ ಜೊತೆಗಾರ…. ಎಂದಾದರೊಮ್ಮೆ ಅವನೊಳಗೆ ಪ್ರಾಣ ಪ್ರತಿಷ್ಠಾಪನೆಯಾದೀತು ಎಂದು ಕಾಯುವ ಅವಳ ನಿತ್ಯ ನೈಮಿತ್ಯ ಪೂಜೆ ಕೊನೆಗೊಳ್ಳುವುದಿಲ್ಲ… ಯಾವುದರ ಬಗ್ಗೆಯೂ, ಯಾರ ಬಗ್ಗೆಯೂ ಅವಳಿಗೆ ಕೋಪವಿಲ್ಲ ಬೇಸರವಿಲ್ಲ… ತನ್ನದಲ್ಲದ್ದು ತನಗೆ ಸಿಗದು ಹೇಗೋ ತನ್ನದು ತನ್ನನ್ನು ಹುಡುಕಿ ಬಂದೇ ಬರುತ್ತದೆ ಎನ್ನುವ ನಂಬಿಕೆ ಅವಳದ್ದು…
“ನೀ ನನ್ನ ಕೃಷ್ಣ
ಎನ್ನುವ ಭಾವ ನನ್ನದು
ನೀ ಕೃಷ್ಣನಾಗಬೇಕೆಂಬ
ಹಠ ನನ್ನದಲ್ಲ
ಒಲಿದಿರು ಒಲಿಯದಿರು
ನಾ ನಿನ್ನ ರಾಧೆಯೇ…”
ಇಂಥಾ ನಿಸ್ವಾರ್ಥ ಪ್ರೇಮ ರಾಧೆಯದು… ಅವಳು ವಾಂಛೆ ಮೀರಿದ, ಚರ್ಮ ಸುಖಕ್ಕೆ ನಿಲುಕದ ರತಿ ಶಿಖರ ಮುಟ್ಟಲಿಕ್ಕಾಗಿ ಹಪಹಪಿಸುವವಳು… ಧಾವಂತಕ್ಕೆ ಬದಲಾದ ಬದುಕಿನಲ್ಲೂ ಜೀವಂತಿಕೆ ಕಾಪಿಟ್ಟುಕೊಂಡವಳು..
ಆದರೆ ಒಂದು ವಿಷಯ… ಇವಳು ಆ ರಾಧೆಯಲ್ಲ…
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.”