ಅಕ್ಕ

ತಾಯೆ
ಮಾತು ಕಡೆದು
ಮಾತು ಹಡೆದು
ಹುಟ್ಟಿದ ಕೂಸು
ಮಾತಿಲ್ಲದ ಲಜ್ಜೆ

ಈ ಲಜ್ಜೆ ಹೊತ್ತವರ
ಎಲ್ಲೂ ಕಾಣದೆ
ಕಾಡು ಕಣಿವೆಯ
ದಾರಿ ಹಿಡಿದು ನಡೆದ

ಅಕ್ಕ, ದಣಿವಾರಿಸಿಕೊಳ್ಳಲು
ಉಳಿದದ್ದು ಕಲ್ಯಾಣದಲ್ಲಿ
ಅಲ್ಲಿಯೂ ಮಾತಿನ ಸಡಗರ

ಮಾತಿಗೆ ಮಾತು, ಮಾತು-
ಪೂರ್ಣ ಎಂದರು, ಶೂನ್ಯ-
ಎಂದರು,
ಮಾತಿಗೆ ಬೇಸತ್ತು ಅಕ್ಕ
ಹೊರಡುವುದರಲ್ಲಿದ್ದಳು
ಆಗ ಬಂದ ಬಸವಣ್ಣ

ಮಾತಿರಲಿಲ್ಲ ಅಲ್ಲಿ, ಬೆಳಕಿತ್ತು
ಬೆಳಕಿನ ದಾರಿ ಇತ್ತು, ನಿಶ್ಶಬ್ದದ
ಲಜ್ಜೆಯಿತ್ತು ಕಣ್ಣೋಟದಲ್ಲಿ

ತಡೆತಡೆದು ‘ತಾಯೆ’ ಎಂದ
ತಾಯ್ತನ ತುಂಬಿ ಬಂತು,
ಭಕ್ತಿ ಭಾವದಲ್ಲಿ ಕೈಮುಗಿದ
ಕಂಡಿತಲ್ಲಿ ಎತ್ತರದ ಶಿಖರ

ಮುಂದೆ ಮಾತಿರಲಿಲ್ಲ
ಅಕ್ಕ ನಡೆದದ್ದು ನೇರ
ಶ್ರೀಶೈಲ ಶಿಖರದ ಕಡೆಗೆ

 

ಜಿಪಿ ಬಸವರಾಜು ಹೆಸರಾಂತ ಕತೆಗಾರರು, ಬರಹಗಾರರು
ಮೈಸೂರಿನಲ್ಲಿ ನೆಲೆಸಿದ್ದಾರೆ.
ಫ್ರೀಲಾನ್ಸ್ ಪತ್ರಕರ್ತರೂ ಆಗಿದ್ದಾರೆ