ವಿಜಯನಗರದ ಕಾಲದಲ್ಲೇ ನಿರ್ಮಾಣವಾದುದೆಂದಿಟ್ಟುಕೊಂಡರೂ ಐದುನೂರು ವರುಷಗಳಿಗೂ ಹಳೆಯದು. ತಿರುಪತಿಯ ವೆಂಕಟೇಶನಂತೆ ಕೊಳಗದ ಕಿರೀಟ ಧರಿಸಿದ ಕೇಶವ ಬಲಗೈಯಲ್ಲಿ ಪದ್ಮ, ಬಲಮೇಲುಗೈಯಲ್ಲಿ ಶಂಖ, ಎಡಮೇಲುಗೈಯಲ್ಲಿ ಚಕ್ರ ಹಾಗೂ ಎಡಗೈಯಲ್ಲಿ ಗದೆಗಳನ್ನು ಧರಿಸಿದ್ದಾನೆ. ಬಲಗೈಯಲ್ಲಿ ಪದ್ಮದ ದೇಟನ್ನು ಹಿಡಿದಿರುವಂತೆಯೇ ವರದಹಸ್ತನೂ ಆಗಿರುವ ಕೇಶವನ ಶಿಲ್ಪವು ವಸ್ತ್ರದ ನಿರಿಗೆಗಳಿಂದ ಮೊದಲುಗೊಂಡು ಕೈಯ ಉಗುರುಗಳವರೆಗೆ ಎಲ್ಲ ಸೂಕ್ಷ್ಮಾಂಶಗಳನ್ನೂ ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಸೊಂಟಕ್ಕೆ ಕಟ್ಟಿದ ಪಟ್ಟಿಯ ನಡುವೆ ಕೀರ್ತಿಮುಖದಂತಹ ಪದಕವೂ ಬಲಕ್ಕೆ ಕಟ್ಟಿದ ವಸ್ತ್ರದ ಗಂಟೂ ಮುಂದೆ ಇಳಿಬಿದ್ದ ಕೊಂಡೆಯೂ ವಿಶೇಷವಾಗಿವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಮೂವತ್ನಾಲ್ಕನೆಯ ಕಂತು

 

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮುತ್ತುರತ್ನಗಳನ್ನು ಮಾರುತ್ತಿದ್ದ ಪೇಟೆಯೊಂದರ ಅವಶೇಷವು ಮುತ್ತುಕೂರು, ಮುತುಕೂರು ಎಂಬ ಹೆಸರಿನ ಗ್ರಾಮದ ರೂಪದಲ್ಲಿ ಇನ್ನೂ ಅಸ್ತಿತ್ವದಲ್ಲಿದೆ ಎಂದು ಮಿತ್ರ ಚಂದ್ರಬಾಬು ಹೇಳಿದಾಗ ಕುತೂಹಲ ಮೂಡಿತು. ತುಮಕೂರು ಜಿಲ್ಲೆಯ ಶಿರಾದ ಸಮೀಪದಲ್ಲೇ ಇರುವ ಈ ಹಳ್ಳಿ ಈಗ ಆಂಧ್ರಪ್ರದೇಶದ ಭೂಭಾಗದಲ್ಲಿದೆ. ಶಿರಾವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಅಲ್ಲಿಂದ ಬಲಕ್ಕೆ ಬರಗೂರಿನತ್ತ ಸಾಗುವ ರಸ್ತೆಯಲ್ಲಿ ಹೊರಳಿ ಮೂವತ್ತು ಕಿ.ಮೀ. ಕ್ರಮಿಸಿ ಮುತುಕೂರು ತಲುಪಬಹುದು.

ಅನಂತಪುರ ಜಿಲ್ಲೆಗೆ ಸೇರಿದ ಈ ಬಯಲುಸೀಮೆಯ ಗ್ರಾಮದವರೆಲ್ಲ ಕನ್ನಡಿಗರೇ. ಹಳ್ಳಿಯೊಳಗೆ ತಕ್ಕಮಟ್ಟಿಗೆ ದೊಡ್ಡದಾದ ರಸ್ತೆಯೊಂದಿದೆ. ಅದೇ ಪೇಟೆಬೀದಿ ಎಂದೂ ವಿಜಯನಗರ ಕಾಲದ ರತ್ನಪಡಿ ವರ್ತಕರ ಚಟುವಟಿಕೆಯ ಕೇಂದ್ರವೆಂದೂ ಹೇಳಲಾಗಿದೆ. ಊರಿನ ಇತಿಹಾಸ ಸಾರುವ ಯಾವ ಶಾಸನಗಳೂ ದಾಖಲೆಗಳೂ ಲಭ್ಯವಿಲ್ಲವಾಗಿ ಹಳೆಯ ಗುಡಿಗಳನ್ನೇ ನೋಡಿ ಕುರುಹುಗಳನ್ನು ಅರಸಬೇಕಾಗಿದೆ.


ನೀರಿಲ್ಲದ ದೊಡ್ಡದೊಂದು ಕೆರೆಯ ಬದಿಯಲ್ಲಿ ಸುಣ್ಣಬಣ್ಣ ತಳೆದು ಲಕ್ಷಣವಾಗಿರುವ ಗುಡಿ. ಕುಸಿದುಬೀಳುವ ಸ್ಥಿತಿಗೆ ತಲುಪಿದ್ದ ಪುರಾತನ ದೇವಾಲಯವನ್ನು ಊರಿನ ಹಲವರು ಶ್ರದ್ಧಾಪೂರ್ವಕ ಜೀರ್ಣೋದ್ಧಾರ ಮಾಡಿದ್ದಾರೆ. ಮೂರು ಅಂಕಣಗಳ ಗರ್ಭಗುಡಿ, ಅಂತರಾಳ, ನವರಂಗ ಮಂಟಪ ಎಲ್ಲವನ್ನೂ ಒಳಗೊಂಡಿರುವ ಗುಡಿಯನ್ನು ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನ ಎಂದು ಕರೆಯಲಾಗಿದ್ದರೂ ಇಲ್ಲಿರುವ ಶಿಲ್ಪ ಕೇಶವನದೇ. ಅಂದಾಜು ಏಳಡಿ ಎತ್ತರದ ಪ್ರಾಚೀನ ವಿಗ್ರಹ.

ವಿಜಯನಗರದ ಕಾಲದಲ್ಲೇ ನಿರ್ಮಾಣವಾದುದೆಂದಿಟ್ಟುಕೊಂಡರೂ ಐದುನೂರು ವರುಷಗಳಿಗೂ ಹಳೆಯದು. ತಿರುಪತಿಯ ವೆಂಕಟೇಶನಂತೆ ಕೊಳಗದ ಕಿರೀಟ ಧರಿಸಿದ ಕೇಶವ ಬಲಗೈಯಲ್ಲಿ ಪದ್ಮ, ಬಲಮೇಲುಗೈಯಲ್ಲಿ ಶಂಖ, ಎಡಮೇಲುಗೈಯಲ್ಲಿ ಚಕ್ರ ಹಾಗೂ ಎಡಗೈಯಲ್ಲಿ ಗದೆಗಳನ್ನು ಧರಿಸಿದ್ದಾನೆ. ಬಲಗೈಯಲ್ಲಿ ಪದ್ಮದ ದೇಟನ್ನು ಹಿಡಿದಿರುವಂತೆಯೇ ವರದಹಸ್ತನೂ ಆಗಿರುವ ಕೇಶವನ ಶಿಲ್ಪವು ವಸ್ತ್ರದ ನಿರಿಗೆಗಳಿಂದ ಮೊದಲುಗೊಂಡು ಕೈಯ ಉಗುರುಗಳವರೆಗೆ ಎಲ್ಲ ಸೂಕ್ಷ್ಮಾಂಶಗಳನ್ನೂ ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಸೊಂಟಕ್ಕೆ ಕಟ್ಟಿದ ಪಟ್ಟಿಯ ನಡುವೆ ಕೀರ್ತಿಮುಖದಂತಹ ಪದಕವೂ ಬಲಕ್ಕೆ ಕಟ್ಟಿದ ವಸ್ತ್ರದ ಗಂಟೂ ಮುಂದೆ ಇಳಿಬಿದ್ದ ಕೊಂಡೆಯೂ ವಿಶೇಷವಾಗಿವೆ.

ಅಂತರಾಳದ ಆಚೀಚೆಗೆ ಎರಡು ಗರ್ಭಗುಡಿಗಳಿದ್ದು ಒಂದರಲ್ಲಿ ಲಕ್ಷ್ಮೀದೇವಿಯ ವಿಗ್ರಹವಿದೆ. ಇನ್ನೊಂದರಲ್ಲಿ ಯಾವುದೇ ವಿಗ್ರಹವಿಲ್ಲ. ಮೇಲುಗೈಗಳಲ್ಲಿ ಶಂಖಚಕ್ರಗಳನ್ನೂ ಬಲಗೈಯಲ್ಲಿ ಪದ್ಮವನ್ನೂ ಧರಿಸಿರುವ ದೇವಿಯ ಎಡಅಂಗೈ ಕೆಳಮುಖವಾಗಿದ್ದು ಧನಲಕ್ಷ್ಮಿಯ ರೂಪವನ್ನು ತೋರ್ಪಡಿಸುತ್ತದೆ. ಬಲಗಾಲನ್ನು ಪೀಠದಿಂದ ಕೆಳಗೆ ಚಾಚಿ ಎಡಗಾಲನ್ನು ಮಡಿಸಿಕೊಂಡು ಕುಳಿತಿರುವ ರೀತಿ ಈ ವಿಗ್ರಹದ ವಿಶೇಷ.

ದೇವಾಲಯದ ಹೊರಗೆ ಮರದ ಕೆಳಗೆ ಆಸೀನ ವೀರಭದ್ರನ ಪ್ರಾಚೀನ ಶಿಲ್ಪವೊಂದಿದೆ. ಗುಡಿಯ ಹೊರಗೆ ಕೆಲವು ವೀರಗಲ್ಲುಗಳೂ ಕಂಡುಬರುತ್ತವೆ. ಚಿಕ್ಕಗುಡಿಯಲ್ಲಿ ಇರಿಸಿರುವ ಎರಡು ಗುಂಡನೆಯ ಕಲ್ಲುಗಳನ್ನು ರಾಮದೇವರ ಕಲ್ಲು ಎಂದು ಸ್ಥಳೀಯರು ಪೂಜಿಸುವ ರೂಢಿಯಿದೆ. ಈ ಗುಂಡನೆಯ ಕಲ್ಲಿನಲ್ಲಿ ಮುಖರೂಪವೊಂದನ್ನು ಗುರುತಿಸಬಹುದು. ದೇವಾಲಯದಿಂದ ಅನತಿದೂರದ ಬಯಲಿನಲ್ಲಿ ಆಂಜನೇಯನ ಶಿಲ್ಪವೊಂದಿದೆ. ಸುಮಾರು ಎಂಟು ಅಡಿ ಎತ್ತರದ ಶಿಲಾಫಲಕದಲ್ಲಿ ಆಂಜನೇಯನ ರೂಪವನ್ನು ಸೊಗಸಾಗಿ ಬಿಂಬಿಸಲಾಗಿದೆ.

ವ್ಯಾಸರಾಯರು ಸ್ಥಾಪಿಸಿದ ಹನುಮಂತಶಿಲ್ಪಗಳನ್ನು ಯಥಾವತ್ತಾಗಿ ಹೋಲುವ ಈ ಶಿಲ್ಪದ ವೈಶಿಷ್ಟ್ಯವೇನೆಂದರೆ, ಉಳಿದೆಲ್ಲ ಹನುಮಶಿಲ್ಪಗಳು ಎಡಭಾಗಕ್ಕೆ ಮುಖತಿರುಹಿ ನಿಂತಿದ್ದರೆ ಮುತುಕೂರಿನ ಆಂಜನೇಯನ ಮುಖ ಬಲಕ್ಕೆ ತಿರುಗಿದೆ. ಅದಕ್ಕನುಗುಣವಾಗಿ ಎಡಗೈ ಮೇಲೆದ್ದು ವಿಜಯವನ್ನು ಸಾರುವ ವೀರಹಸ್ತವಾಗಿದೆ. ಸೊಂಟದ ಮೇಲಿರಿಸಿದ ಬಲಗೈಯಲ್ಲಿ ಹಣ್ಣುಗಳ ಗೊಂಚಲು ಕಂಡುಬರುತ್ತದೆ. ಹನುಮನ ದೃಷ್ಟಿ ಕೇಶವನ ಗುಡಿಯತ್ತ ನೆಟ್ಟಿದೆ. ಹನುಮನನ್ನು ಎಡದಿಂದ ಬಳಸಿ ಮೇಲೆದ್ದ ಬಾಲವು ಬಲತೋಳಿನತ್ತ ಇಳಿಯುವಂತಿದೆ.

(ಚಿತ್ರಗಳು: ಟಿ.ಎಸ್. ಗೋಪಾಲ್)

ಬಾಲಕ್ಕೆ ಕಟ್ಟಿದ ಗಂಟೆ, ಹನುಮನ ಶಿಖೆ, ಕಾಲಬುಡದಲ್ಲಿ ಬಿದ್ದ ರಕ್ಕಸ ಅಕ್ಷಕುಮಾರ – ಎಲ್ಲವೂ ಈ ಶಿಲ್ಪವು ವಿಜಯನಗರದ ಪಾರಂಪರಿಕ ಹನುಮಶಿಲ್ಪವೆಂಬುದನ್ನು ತೋರ್ಪಡಿಸುತ್ತವೆ. ಇಲ್ಲೇ ಪಕ್ಕದಲ್ಲಿ ಸೂರ್ಯನ ವಿಗ್ರಹವೂ ಯಕ್ಷನ ಶಿಲ್ಪವೂ ಇದ್ದು ಬೇರೆಲ್ಲಿಂದಲೋ ತಂದು ಇರಿಸಿರಬಹುದು.
ಗ್ರಾಮದೊಳಗೆ ಇರುವ ಇನ್ನೊಂದು ಗುಡಿ ಶಿವನ ದೇಗುಲ. ಈ ಗುಡಿಯ ಅಂಗಳದಲ್ಲಿ ಸುತ್ತು ಪ್ರಾಕಾರದ ಮೇಲೆ ಗರ್ಭಗುಡಿಗೆ ಅಭಿಮುಖವಾಗಿ ಗಾರೆಯಿಂದ ಅನೇಕ ದೇವಕೋಷ್ಠಗಳನ್ನು ಮಾಡಿದ್ದು ಅವುಗಳಲ್ಲಿ ಹಲವಾರು ಪ್ರಾಚೀನ ವಿಗ್ರಹಗಳ ಅವಶೇಷಗಳಿವೆ. ವಿಜಯನಗರ ಪಾಳೇಗಾರರು ನಿರ್ಮಿಸಿದ ಹಲವು ಗುಡಿಗಳಲ್ಲಿ ಇಂತಹ ಮಾದರಿಗಳನ್ನು ಕಾಣಬಹುದು. ಗುಡಿಯೊಳಗೆ ಶಿವಲಿಂಗವೂ ಅದಕ್ಕೆ ಅಭಿಮುಖವಾಗಿ ನಂದಿಯೂ ಇವೆ. ಅಕ್ಕಪಕ್ಕದ ಕೋಷ್ಠಗಳಲ್ಲಿ ಗಣಪತಿ ಹಾಗೂ ವೀರಭದ್ರರ ಶಿಲ್ಪಗಳಿವೆ.

ಮುತುಕೂರಿಗೆ ನೀವು ಬರುವಾಗ ಸಮೀಪದಲ್ಲೇ ಇರುವ ಹೇಮಾವತಿಗೂ ಭೇಟಿಕೊಟ್ಟು ಅಲ್ಲಿನ ಪುರಾತನ ಸಿದ್ಧೇಶ್ವರ ದೇಗುಲವನ್ನು ಸಂದರ್ಶಿಸಬಹುದು.