ಬಸದಿಯ ಎದುರಿಗೆ ಇರುವ ಭವ್ಯವಾದ ಮಾನಸ್ತಂಭ ಈ ಬಸದಿಯ ವಿಶೇಷ ಆಕರ್ಷಣೆ. ನಲವತ್ತು ಅಡಿಗಳಷ್ಟು ಎತ್ತರವಾದ ಈ ಸ್ತಂಭವನ್ನು ವಿಶಾಲವಾದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ಈ ಮಾದರಿಯ ಮಾನಸ್ತಂಭ ಇಡಿಯ ದೇಶದಲ್ಲೇ ಅಪೂರ್ವವೆಂದು ಅಭಿಪ್ರಾಯಪಡಲಾಗಿದೆ. ವೇದಿಕೆಯ ಸುತ್ತಲಿನ ಕೆತ್ತನೆ ಆಕರ್ಷಕವಾಗಿದೆ. ಅರವತ್ನಾಲ್ಕು ವಿದ್ಯೆಗಳ ಸಂಕೇತವಾಗಿ ಅರವತ್ನಾಲ್ಕು ಉಬ್ಬುಚಿತ್ರಗಳನ್ನು ಕೆತ್ತಲಾಗಿದೆ. ಮಾನಸ್ತಂಭದ ತುದಿಯಲ್ಲಿ ಕಿರುಮಂಟಪವಿದ್ದು ಅದರೊಳಗೆ ಜಿನಬಿಂಬವನ್ನು ಇರಿಸಲಾಗಿದೆ. ನಾಲ್ಕು ದಿಕ್ಕುಗಳಿಗೆ ಮುಖಮಾಡಿಕೊಂಡಂತೆ ನಾಲ್ಕು ಜಿನಬಿಂಬಗಳಿವೆ. ಬಸದಿಯ ಪ್ರವೇಶದ್ವಾರದೆಡೆಯಲ್ಲಿ ಇರಿಸಲಾಗಿರುವ ದ್ವಾರಪಾಲಕರ ಶಿಲ್ಪಗಳೂ ಭವ್ಯವಾಗಿವೆ. ಸೋಪಾನವೇರುವ ಎಡೆಯಲ್ಲಿ ಗಜಲಕ್ಷ್ಮಿಯ ಮಕರತೋರಣವೂ ಮನಸೆಳೆಯುವಂತಿದೆ.
ಟಿ. ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತ್ತನೆಯ ಕಂತು
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿಗೆ ಸೇರಿದ ಹುಂಚ ನಮ್ಮ ನಾಡಿನ ಪ್ರಸಿದ್ಧ ಜೈನ ಕ್ಷೇತ್ರಗಳಲ್ಲೊಂದು. ಈ ಕ್ಷೇತ್ರಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ಪ್ರಾಚೀನಕಾಲದಲ್ಲಿ ಕನಕಪುರ ಎಂದು ಕರೆಸಿಕೊಳ್ಳುತ್ತಿದ್ದ ಈ ಕ್ಷೇತ್ರವು ಕಾಲಕ್ರಮದಲ್ಲಿ ಪೋಂಬುಳ್ಚ, ಪಟ್ಟಿ ಪೋಂಬುಚ್ಚ, ಹೊಂಬುಜಪುರ ಎಂಬಿವೇ ಮೊದಲಾದ ಹೆಸರುಗಳಿಂದ ಪ್ರಸಿದ್ಧಿ ಪಡೆದಿತ್ತು. ಈ ಊರು ಇದೀಗ ಹುಂಚ ಎಂಬ ಸ್ಥಳನಾಮದಿಂದ ಪರಿಚಿತವಾಗಿದೆ.
ಜೈನಪುರಾಣಗಳಲ್ಲಿ ಇಪ್ಪತ್ತಮೂರನೆಯ ತೀರ್ಥಂಕರನೆಂದು ಪ್ರಸಿದ್ಧನಾದ ಪಾರ್ಶ್ವನಾಥಸ್ವಾಮಿಯ ಪೂಜಾಸ್ಥಾನವಾಗಿ ಹುಂಚ ಹೆಸರು ಪಡೆದಿದೆ. ಮಾತ್ರವಲ್ಲ, ಪಾರ್ಶ್ವನಾಥನಿಗೆ ತಪೋಭಂಗವಾಗದಂತೆ ಆತನ ರಕ್ಷಣೆಗೆ ಧರಣೇಂದ್ರ ಯಕ್ಷನೊಡನೆ ಕಾವಲುನಿಂತ ಪದ್ಮಾವತಿ ಯಕ್ಷಿಯ ನೆಲೆಯಾಗಿಯೂ ಈ ಕ್ಷೇತ್ರ ಪ್ರಸಿದ್ಧವಾಗಿದೆ. ಜಿನದತ್ತರಾಯನೆಂಬ ಅರಸನಿಂದ ಮೊದಲುಗೊಂಡ ಸಾಂತರ ಮನೆತನದ ಅರಸರು ಸುಮಾರು ಎಂಟನೆಯ ಶತಮಾನದಿಂದ ಹನ್ನೆರಡನೆಯ ಶತಮಾನದವರೆಗೆ ಈ ಪ್ರಾಂತ್ಯವನ್ನು ಆಳಿದರೆಂದು ಇತಿಹಾಸ ಹೇಳುತ್ತದೆ.
ಹುಂಚದಲ್ಲಿರುವ ಅನೇಕ ಧಾರ್ಮಿಕ ಮತ್ತು ಐತಿಹಾಸಿಕ ಸ್ಮಾರಕಗಳಲ್ಲಿ ಪಂಚಬಸದಿ ಪ್ರಮುಖವಾದುದು. ಶಕವರ್ಷ 999 ಎಂದರೆ ಕ್ರಿ.ಶ.1077 ರಲ್ಲಿ ಕಾಡುವೆಟ್ಟಿ ಎಂಬುವವನ ಪತ್ನಿ ಚಟ್ಟಲದೇವಿಯು ಈ ಬಸದಿಯನ್ನು ಕಟ್ಟಿಸಿದಳೆಂದು ಶಾಸನ ಹೇಳುತ್ತದೆ. ಇದೊಂದು ವಿಶಿಷ್ಟವಾದ ಬಸದಿ. ಐದು ಗರ್ಭಗುಡಿಗಳನ್ನು ಹೊಂದಿದೆ. ಮೊದಲ ತೀರ್ಥಂಕರನಾದ ಆದಿನಾಥ ಅಥವಾ ವೃಷಭನಾಥ, ಎರಡನೆಯ ತೀರ್ಥಂಕರ ಅಜಿತನಾಥ, ಶಾಂತಿನಾಥ, ಪಾರ್ಶ್ವನಾಥ ಹಾಗೂ ಕೊನೆಯ ತೀರ್ಥಂಕರನಾದ ಮಹಾವೀರ- ಈ ಐವರ ವಿಗ್ರಹಗಳು ಈ ಗರ್ಭಗುಡಿಗಳಲ್ಲಿ ಕಂಡುಬರುತ್ತವೆ. ಒಂದೇ ಛಾವಣಿಯಲ್ಲಿರುವ ಈ ಗರ್ಭಗುಡಿಗಳ ಪ್ರವೇಶದ್ವಾರಗಳು ಒಂದೇ ನಡುಮಂಟಪಕ್ಕೆ ತೆರೆದುಕೊಳ್ಳುತ್ತವೆ. ನಡುಮಂಟಪದಲ್ಲಿ ಯಕ್ಷಯಕ್ಷಿಯರ ಪ್ರತಿಮೆಗಳನ್ನು ಇರಿಸಲಾಗಿದೆ.
ಬಸದಿಯ ಎದುರಿಗೆ ಇರುವ ಭವ್ಯವಾದ ಮಾನಸ್ತಂಭ ಈ ಬಸದಿಯ ವಿಶೇಷ ಆಕರ್ಷಣೆ. ನಲವತ್ತು ಅಡಿಗಳಷ್ಟು ಎತ್ತರವಾದ ಈ ಸ್ತಂಭವನ್ನು ವಿಶಾಲವಾದ ವೇದಿಕೆಯ ಮೇಲೆ ನಿರ್ಮಿಸಲಾಗಿದೆ. ಈ ಮಾದರಿಯ ಮಾನಸ್ತಂಭ ಇಡಿಯ ದೇಶದಲ್ಲೇ ಅಪೂರ್ವವೆಂದು ಅಭಿಪ್ರಾಯಪಡಲಾಗಿದೆ. ವೇದಿಕೆಯ ಸುತ್ತಲಿನ ಕೆತ್ತನೆ ಆಕರ್ಷಕವಾಗಿದೆ. ಅರವತ್ನಾಲ್ಕು ವಿದ್ಯೆಗಳ ಸಂಕೇತವಾಗಿ ಅರವತ್ನಾಲ್ಕು ಉಬ್ಬುಚಿತ್ರಗಳನ್ನು ಕೆತ್ತಲಾಗಿದೆ. ಮಾನಸ್ತಂಭದ ತುದಿಯಲ್ಲಿ ಕಿರುಮಂಟಪವಿದ್ದು ಅದರೊಳಗೆ ಜಿನಬಿಂಬವನ್ನು ಇರಿಸಲಾಗಿದೆ.
ನಾಲ್ಕು ದಿಕ್ಕುಗಳಿಗೆ ಮುಖಮಾಡಿಕೊಂಡಂತೆ ನಾಲ್ಕು ಜಿನಬಿಂಬಗಳಿವೆ. ಬಸದಿಯ ಪ್ರವೇಶದ್ವಾರದೆಡೆಯಲ್ಲಿ ಇರಿಸಲಾಗಿರುವ ದ್ವಾರಪಾಲಕರ ಶಿಲ್ಪಗಳೂ ಭವ್ಯವಾಗಿವೆ. ಸೋಪಾನವೇರುವ ಎಡೆಯಲ್ಲಿ ಗಜಲಕ್ಷ್ಮಿಯ ಮಕರತೋರಣವೂ ಮನಸೆಳೆಯುವಂತಿದೆ. ಬಸದಿಯ ಎಡಭಾಗದಲ್ಲಿ ಪಾರ್ಶ್ವನಾಥ ಬಸದಿಯೂ ಬಲಭಾಗದಲ್ಲಿ ಚಂದ್ರಪ್ರಭ ತೀರ್ಥಂಕರನ ಬಸದಿಯೂ ಇವೆ. ಈ ಬಸದಿಯನ್ನು 1064ರಲ್ಲಿ ತೈಲಪದೇವನೆಂಬ ಸಾಂತರ ಅರಸನು ಕಟ್ಟಿಸಿದನೆಂದು ಶಾಸನದ ಉಲ್ಲೇಖವಿದೆ.
ಬಸದಿಯನ್ನೂ ಸುತ್ತಲಿನ ವಿಶಾಲವಾದ ಆವರಣವನ್ನೂ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿ ಸುಸ್ಥಿತಿಯಲ್ಲಿ ಕಾಪಾಡಿಕೊಂಡು ಬರಲಾಗಿದೆ. ಕಟ್ಟಡದ ಜೀರ್ಣೋದ್ಧಾರದ ಸಮಯದಲ್ಲಿ ಪ್ರತ್ಯೇಕಿಸಲಾದ ಇಲ್ಲವೇ ಇತರೆಡೆಗಳಿಂದ ಸಂಗ್ರಹಿಸಲಾದ ಹಲವು ಶಿಲ್ಪಗಳನ್ನು ಆವರಣದಲ್ಲಿ ಸಂರಕ್ಷಿಸಿಡಲಾಗಿದೆ. ಇವುಗಳಲ್ಲಿ ಅಷ್ಟದಿಕ್ಪಾಲಕರ ಶಿಲ್ಪಗಳು ವಿಶೇಷವಾಗಿ ಗಮನಸೆಳೆಯುತ್ತವೆ.
ಹುಂಚಕ್ಕೆ ಬರುವವರು ಜೈನಮಠವನ್ನೂ ಅದರ ಆವರಣದಲ್ಲಿರುವ ಪಾರ್ಶ್ವನಾಥ ಹಾಗೂ ಪದ್ಮಾವತಿದೇವಿಯರ ಮಂದಿರಗಳನ್ನೂ ವೀಕ್ಷಿಸಬಹುದು. ಪಂಚಬಸದಿಯ ಮುಂದೆ ಅನತಿ ದೂರದಲ್ಲಿರುವ ವಿಶಾಲವಾದ ಕೆರೆಯೂ ಮನಮೋಹಕವಾಗಿದೆ. ಸಮೀಪದಲ್ಲಿರುವ ಬಿಲ್ಲೇಶ್ವರ ಗುಡಿ, ಅದರ ಆವರಣದಲ್ಲಿರುವ ವೀರಗಲ್ಲುಗಳು, ಕುಮುದ್ವತೀನದಿಯ ಮೂಲಸ್ಥಾನ ಎಲ್ಲವೂ ಪ್ರೇಕ್ಷಣೀಯವಾಗಿವೆ.
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ ‘ಕಾಡು ಕಲಿಸುವ ಪಾಠ’ ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.