ಕುರಿಯು ಸಿಂಹ ಎನಿಸಿಕೊಳ್ಳುವ ಏಕೈಕ ಜಾಗ ಕಾಟ್ಸ್ ವೋಲ್ಡ್ಸ್, ಹದಿನಾರು, ಹದಿನೇಳನೆಯ ಶತಮಾನದಿಂದಲೋ ಕುರಿ ಸಂತೆಗೆ ಪ್ರಖ್ಯಾತವಾಗಿರುವ ಜಾಗ. ಈ ರಾಜ್ಯದಂತಹಾ ಸಂಸ್ಥಾನದಲ್ಲಿ ಮೊನ್ನೆಮೊನ್ನೆಯವರೆಗೂ ಒಂದೇ ದಿನದಲ್ಲಿ ಇಪ್ಪತ್ತು ಸಾವಿರ ಕುರಿಗಳು ಮಾರಾಟವಾದ ಹೆಗ್ಗಳಿಕೆ. ಇಲ್ಲಿನ ಕುರಿಗಳು ಸಹಜವಾಗಿಯೇ ಒಮ್ಮೆಲೆ ಇನ್ನೂರು ಕಿಲೋಗ್ರಾಮ್ಗಳಷ್ಟು ಬೆಳೆಯಬಲ್ಲವು. ನಾವು ಕುರಿಗಳಾಗಿಯೇ ಏಕಿರಬೇಕು ಎಂದು ಪ್ರಶ್ನಿಸಿಕೊಳ್ಳುವ ಹಾಗೆ ತಮ್ಮ ಮೈಮೇಲೆಲ್ಲಾ ಹೊನ್ನ ಬಣ್ಣದ ಕೂದಲನ್ನು ಬೆಳೆಸಿಕೊಂಡು ವಿಶ್ವದ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡವು ಇಲ್ಲಿನ ಕುರಿಗಳು. ‘ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಇಂಗ್ಲೆಂಡ್ ನ ಕುರಿ ಸಂಸ್ಥಾನದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ

ಇಂದು ಬಂದೆ, ಈಗ ಬಂದೆ ಎನ್ನುತ್ತಿರುವವನನ್ನು ಕಾಯುತ್ತಾ ನಾನೂ ಬಿಸಿಯಾಗುತ್ತಿದ್ದೇನೆ. ತಣಿವಿನಲ್ಲಿ ಬೆಚ್ಚಾಗಾಗಲು ಎಂದು ಇರಿಸಿಕೊಂಡದ್ದು ಇನ್ನೂ ಕಪಾಟಿನಲ್ಲಿಯೇ ಭದ್ರವಾಗಿದೆ. ಛೇ, ಬೆಂಗಳೂರಿನ ಮಳೆಗೆ ಏನಾಗಿ ಹೋಯಿತು, ದಾರಿ ತಪ್ಪದಂತೆ ಕಾಪಾಡಲು ಗೂಗಲ್ ಮ್ಯಾಪ್ ಮರೆತು ಹೋಯಿತೇ?! ಹೀಗೆ ಅಂದುಕೊಳ್ಳುತ್ತಲೇ ಕಿಟಕಿಯೊಳಗಿನ ಕಣ್ಣಷ್ಟೇ ಅಗಲದ ಆಕಾಶ ನೋಡುತ್ತೇನೆ. ವಿಧ ವಿಧ ಆಕಾರದಲ್ಲಿ ಹನಿಯಾಗಲು ಮೀನ-ಮೇಷ ಎಣಿಸುತ್ತಿರುವ ಮೋಡಗಳನ್ನೂ ಕಾಣುತ್ತೇನೆ. ಅಹ್, ಅಲ್ಲಿ ಅಲ್ಲಿ ಆ ಮೋಡ ಕೊಬ್ಬಿದ ಕುರಿಯಂತೆ ಕಾಣುತ್ತಿದೆಯಲ್ಲ ಎಂದೆನಿಸಿದ ತಕ್ಷಣ ಮನಸ್ಸು ಹಾರಿ ತಳ ಊರಿದ್ದು ಸಣ್ಣಸಣ್ಣ ಬೆಟ್ಟಗಳಿಂದಾದ ಕಾಟ್ಸ್ ವೋಲ್ಡ್ಸ್ (Cotswolds) ಎನ್ನುವ ಇಂಗ್ಲೇಂಡಿನಲ್ಲಿ ಇರುವ ಅರೆಪಟ್ಟಣವೊಂದರಲ್ಲಿ.

ಕುರಿಯು ಸಿಂಹ ಎನಿಸಿಕೊಳ್ಳುವ ಏಕೈಕ ಜಾಗ ಕಾಟ್ಸ್ ವೋಲ್ಡ್ಸ್, ಹದಿನಾರು, ಹದಿನೇಳನೆಯ ಶತಮಾನದಿಂದಲೋ ಕುರಿ ಸಂತೆಗೆ ಪ್ರಖ್ಯಾತವಾಗಿರುವ ಜಾಗ. ಈ ರಾಜ್ಯದಂತಹಾ ಸಂಸ್ಥಾನದಲ್ಲಿ ಮೊನ್ನೆಮೊನ್ನೆಯವರೆಗೂ ಒಂದೇ ದಿನದಲ್ಲಿ ಇಪ್ಪತ್ತು ಸಾವಿರ ಕುರಿಗಳು ಮಾರಾಟವಾದ ಹೆಗ್ಗಳಿಕೆ. ಇಲ್ಲಿನ ಕುರಿಗಳು ಸಹಜವಾಗಿಯೇ ಒಮ್ಮೆಲೆ ಇನ್ನೂರು ಕಿಲೋಗ್ರಾಮ್ಗಳಷ್ಟು ಬೆಳೆಯಬಲ್ಲವು. ಜಗತ್ತಿನ ಇತರೆ ಪ್ರದೇಶಗಳಲ್ಲಿ ಕುರಿಗಳು ಬಿಳಿ ಬಣ್ಣದ ಮತ್ತು ಕಪ್ಪು ವರ್ಣದ ತುಪ್ಪಳಗಳನ್ನು ಬೆಳೆಸಿಕೊಳ್ಳುವುದೇ ಕುರಿಧರ್ಮ ಎಂದು ಕಣ್ಣು ಮುಚ್ಚಿಕೊಂಡು ನಮ್ಮ ಹಾಗೆ ಅರೆಗಣ್ಣಿನಲ್ಲಿ ಮೆಲುಕು ಹಾಕುತ್ತಿರುವಾಗ, ನಾವು ಕುರಿಗಳಾಗಿಯೇ ಏಕಿರಬೇಕು ಎಂದು ಪ್ರಶ್ನಿಸಿಕೊಳ್ಳುವ ಹಾಗೆ ತಮ್ಮ ಮೈಮೇಲೆಲ್ಲಾ ಹೊನ್ನ ಬಣ್ಣದ ಕೂದಲನ್ನು ಬೆಳೆಸಿಕೊಂಡು ವಿಶ್ವದ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡವು ಇಲ್ಲಿನ ಕುರಿಗಳು. ಅಂದಹಾಗೆ ಹೀಗೆ ಮಿರಮಿರ ಮಿಂಚುವಂತಹಾ ತುಪ್ಪಳವನ್ನು ಬೇರೆ ಯಾವ ಕುರಿಗಳಲ್ಲೂ’ನಾ ಕಾಣೆ ನಾ ಕಾಣೆ ನನ್ನ ದೇವರಾಣೆ’ ಎಂದು ಹೇಳುತ್ತಾರೆ ವುಲ್ಲನ್ ವ್ಯಾಪಾರಿಗಳು.

ಕಣ್ಣು ಕಂಡರಿಯದಷ್ಟು ಬಣ್ಣಗಳಲ್ಲಿ ಆಕಾರಗಳಲ್ಲಿ ಶಾಲುಗಳು, ಸ್ವೆಟರ‍್ಗಳು, ಕಾಲು-ಕೈ ಚೀಲಗಳು, ವ್ಯಾನಿಟಿ ಬ್ಯಾಗುಗಳು, ಕಾಲೊರೆಸಿಗಳು, ಮಫಲರ್ಗಳು, ಸ್ಕಾರ್ಫುಗಳೂ ಲಭ್ಯ. ಹೂಂ, ಒಂಥರಾ ಚಂದದ ಕುರಿಪುರಾಣವಿದೆ ಇಲ್ಲಿ. ಹೊಸದೇನು ಎಂದು ನೀವು ಪ್ರಶ್ನಿಸುವ ಮೊದಲೇ ಈ ಕುರಿಗಳ ಬಗ್ಗೆ ಹೇಳಲೇ ಬೇಕಾದ ನನಗೆ ಆಸಕ್ತಿ ಹುಟ್ಟಿಸಿದ ಒಂದು ಅಂಶವಿದೆ. ಅದೆಂದರೆ ಇವುಗಳ ತುಪ್ಪಳ ಪ್ರಪಂಚದಲ್ಲಿಯೇ ಅತ್ಯಂತ ಬೇಡಿಕೆ ಇರುವುದಕ್ಕೆ ಕಾರಣ ಪ್ರತೀ ಎಳೆಯ ಎರಡು ದಿಕ್ಕುಗಳು ಪರಸ್ಪರ ವಿರುದ್ಧ ದಿಕ್ಕಿಗೆ ಮುಖ ಮಾಡಿಕೊಂಡಿರುತ್ತವೆ. ಅರ್ಥಾತ್, ಸುರಳಿ ಸುತ್ತಿಕೊಳ್ಳದೆ ಉಲ್ಲನ್ನ್ ಬಟ್ಟೆಗಳನ್ನು ಸುಲಭವಾಗಿ ಬೇಕಾದ ಬಣ್ಣವನ್ನು ಹಾಕಿ ತಯಾರಿಸಲು ಸಹಕಾರಿಯಾಗುವಂತೆ ನೇರನೇರವಾಗಿ ಇರುತ್ತವೆ.

ಅವರಿವರ ದಾಳಕ್ಕೆ ಕುರಿಗಳು ಸಾರ್ ಕುರಿಗಳು ಎಂದು ಹಾಡಾಗುತ್ತಾ ಕುರಿಗಳಂತೆ ಸುರುಳಿಗೊಳ್ಳುವ ನಮಗಿಂತ ಕಾಟ್ಸ್ ವೋಲ್ಡ್ಸ್ ನ ನಿಜದ ಕುರಿಗಳು ಉನ್ನತವಾಗಿ ಕಾಣುತ್ತವೆ. ಅದಕ್ಕೇ ಇರಬೇಕು ಇಲ್ಲಿ ಕುರಿಗಳಿಗೂ ಸಿಂಹದ ಒನಪು. ಆಹಾ ದೂರದ ನೆಲದಲ್ಲಿ, ಹಗಲು ರಾತ್ರಿಗಳ ಪರಿವೆಗೆ ಅವಕಾಶವಾಗದ ದೇಶದಲ್ಲಿ, ಕೊರೆಯುವ ಚಳಿಯಲ್ಲಿ, ಹಿಮ ಸಿಂಚನದ ಹವೆಯಲ್ಲಿ ಕುರಿ ರೋಮದ ಹಾಗೆಯೇ ಹಿತವಾದ ಒರಟೊರಟು ಸಂಭ್ರಮ.

ನಮ್ಮಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗಲು ಮಾಲೆ ಹಾಕಿಕೊಂಡಾಗಲಾದರೂ ಧೂಮಪಾನದಿಂದ ದೂರ ಇರಬೇಕು ಎಂದುಕೊಳ್ಳುವ ಕಟ್ಟಳೆಯ ಹಾಗೆ ಇಲ್ಲಿ ಕ್ರಿಸ್ಮಸ್ ಸಮಯದಲ್ಲಿ ದಾನ ಮಾಡಲೇ ಬೇಕು ಎನ್ನುವ ನಿಯಮ. ಅದಕ್ಕಾಗಿಯೇ ಜನ ಖರೀದಾರಿಗೆ ಕುರಿಗಳಂತೆಯೇ ನೂಕು ನುಗ್ಗಲಾಗುತ್ತಾರೆ. ಎಲ್ಲಾ ಮನೆಗಳ ಬಾಗಿಲಿಗೂ ಹಸಿರು ಕೆಂಪಿನ ಒಣ ಎಲೆ, ದೀಪಗಳ ಅಲಂಕಾರ. ಬೀದಿ ತಿರುವುಗಳಿಗೆ ಗುಂಪುಗುಂಪಾಗಿ ಕ್ಯಾರಲ್ ಹಾಡುವ ಸಡಗರ. ನಾನಾ ನಮೂನೆಯ ಕೇಕ್ ಮತ್ತು ಬ್ರೆಡ್ ಮಾಡಲು ಹೊಸಹೊಸ ವಿಧಾನಗಳನ್ನು ಕಲಿಸಿಕೊಡುವ ತರಬೇತುದಾರರು ಜಾಹೀರಾತಾಗುತ್ತಾರೆ.

ಫುಟ್ಪಾತಿನ ಮೇಲಿನ ಗೂಡಂಗಡಿಯವನೂ ಡಿಸ್ಕೌಂಟಿನ ಆಕರ್ಷಣೆ ತೋರಿಸುತ್ತಾನೆ. ವೃತ್ತ ಪತ್ರಿಕೆಗಳ ತುಂಬಾ ರಾಣಿ, ರಾಜ ಮನೆತನದವರು ಹಾಗೂ ಇತರೆ ದೊಡ್ಡ ಮನುಷ್ಯರು ಎನಿಸಿಕೊಂಡವರು ಯಾರುಯಾರಿಗೆ ಔತಣ ಕೊಟ್ಟರು ಎನ್ನುವ ಸುದ್ದಿಯನ್ನೇ ಎರಡ್ಮೂರು ಪುಟಗಳಲ್ಲಿ ಪ್ರಕಟಿಸುತ್ತದೆ. ವಯಸ್ಸಾದ ಒಂಟಿ ಜೇವಗಳಿಗಾಗಿ, ನಿರ್ಗತಿಕರಿಗಾಗಿ, ವಲಸೆ ಬಂದು ಬೀದಿ ಪಾಲಾದವರಿಗಾಗಿ ಚಂದ ಎತ್ತುವ ಸಮಯವೂ ಹೌದು.

ಮಕ್ಕಳು, ಅವರಮ್ಮಂದಿರು ಪಕ್ಕದಲ್ಲಿಯೇ ಅವರ ಮಕ್ಕಳ ಅಪ್ಪಂದಿರು ಸ್ಯಾಂಟಾ ಕ್ಲಾಸ್ ಹಾಕಿಕೊಳ್ಳುವ ಟೊಪ್ಪಿಗೆ ಧರಿಸಿ ನಗುತ್ತಿದ್ದರೆ, ಅವರ ಭುಜದ ಅನತಿ ದೂರದಲ್ಲಿ ಪ್ರೇಮಿಗೆ ಪ್ರಿಯನು ಕೂಗಿ ಚುಂಬಿಸೊ ಧ್ಯಾನವೂ ನೋಡುವವರಿಗೆ ಹೊಸವರ್ಷ ಬಂದಂತೆ. ಈ ಸಂದರ್ಭಕ್ಕಾಗಿಯೇ ತಾಲೀಮು ನಡೆಸಿ ಆಡುವ ಲೆಕ್ಕವಿಲ್ಲದಷ್ಟು ನಾಟಕಗಳು, ಸಿನೆಮಾಗಳು, ಹಾಡು-ಕುಣಿತದ ಕಾರ್ಯಕ್ರಮಗಳು. ಹಬ್ಬದ ಅಮಲಿನಲ್ಲಿ ಮುಳುಗಿರುವ ಜನರನ್ನು ಕುರಿ ಮಾಡದ ಸರ್ಕಾರ ನಿಜಾರ್ಥದ ಕುರಿಗಾಹಿ.

ಕ್ರಿಸ್ಮಸ್ ಸಮಯದಲ್ಲಿ ಹೆಚ್ಚುವ ಜನಸಂದಣಿಯಿಂದ ಏರುಪೇರಾಗುವ ಬಸ್ಸು ಮತ್ತು ರೈಲಿನ ಸಮಯಗಳನ್ನು, ದಾರಿ ನಕಾಶೆಯನ್ನು, ರಜೆಯ ದಿನಗಳನ್ನು, ವ್ಯವಹಾರಕ್ಕೆ ಇರುವ ಬದಲಿ ಮಾರ್ಗಗಳನ್ನು ಆರು ತಿಂಗಳ ಮೊದಲಿನಿಂದಲೇ ತಿಳಿಯಪಡಿಸಿಯೂ, ಕೊನೆಯ ಸಮಯದಲ್ಲಿ ಅನಿವಾರ್ಯವಾಗಿ ಅಳವಡಿಸಿಕೊಳ್ಳಬೇಕಾದ ಬದಲಾವಣೆಗಾಗಿ ಮಾಧ್ಯಮಗಳಲ್ಲಿ ಕ್ಷಮೆಕೇಳುವ ಸರ್ಕಾರದ ಪರಿಯೇ ನಾಡನ್ನು ಹಬ್ಬವನ್ನಾಗಿಸುವುದು.


ಕಾಟ್ಸ್‍ವೋಲ್ಡ್ ಎಲ್ಲಾ ಜನರ ಮೈ ಮೇಲೆ ಯಾವುದೇ ಅಂತಸ್ತಿನ ಬೇಧವಿಲ್ಲದೆ ಕಾಣುವುದು ಎಂದರೆ ಕುರಿಯ ಉಣ್ಣೆಯಿಂದ ತಯಾರು ಮಾಡಲಾಗಿರುವ ಬೆಚ್ಚನೆಯ ಹೊಸ ಬಟ್ಟೆಗಳ ರಾಶಿ ರಾಶಿ. ಈ ದಿನದಲ್ಲಿ ಇಲ್ಲಿನ ಜನರು ಬಯಸುವ ಒಂದೇ ಒಂದು ಹಳೆಯ ಮತ್ತು ಅತೀ ಹಳೆಯ ಪದಾರ್ಥ ಎಂದರೆ ವೈನ್ ಮಾತ್ರ. ಕಡುನೀಲಿ ಬಣ್ಣದ ಮುಂಗೈ ತಗಲುವಷ್ಟು ಉದ್ದ ತೋಳಿನ ಸ್ವೆಟರ್ ಕೊಂಡುಕೊಂಡಿದ್ದೇನೆ. ಮಳೆಗಾಗಿ ಅದು ತಗುಲಿಸುವ ಚಳಿಗಾಗಿ ಕಾಯುತ್ತಿದ್ದೇನೆ. ಕಾಟ್ಸ್‍ವೋಲ್ಡ್ಸ್‍ನ ನೆನಪಿನಲ್ಲಿ ತಣ್ಣಗಾಗಲು ಬಯಸುತ್ತಿದ್ದೇನೆ. ನನ್ನ ದಾಹಕ್ಕೆ ನೀರಾಗದ ಪ್ರಕೃತಿ ಆಣತಿಗೆ ಕುರಿಯಾಗುತ್ತಿದ್ದೇನೆ ಅರಿವಿದ್ದೂ .