ಇಷ್ಟೆಲ್ಲಾ ಕಷ್ಟ ನಷ್ಟಗಳಿಗೆ ಕಾರಣರಾರು? ಸ್ವತಹ ನಾನೋ? ಅಥವಾ ನನ್ನಾಕೆಯೋ? ಯಾರೂ ಅಲ್ಲ; ಈ ಒಂದು ಬಾಟ್ಲಿ! ಈ ಹಾಳು ಬಾಟ್ಲಿ!! ರೌದ್ರಾವೇಶದಿಂದ ಬಾಟ್ಲಿಯ ಕತ್ತನ್ನು ಬಿಗಿಯಾಗಿ ಅಮುಕಿ ಹಿಡಿದು ಮುಂದಕ್ಕೂ ಹಿಂದಕ್ಕೂ ಬೀಸುತ್ತ ನಡೆದು ಬರುತ್ತಿದ್ದೆ. ಎದುರಿಗೊಂದು ಮೈಲುಕಲ್ಲು ಕಾಣಿಸಿತು. ಸರಿ. ಇದೇ ಕಲ್ಲಿಗೆ! ಒಂದೇ ಹೊಡೆತ! ಹೋಗಲತ್ತ – ರಗಳೆ! ‘ಎಲೈ ಮೂರ್ಖ ಬಾಟ್ಲಿಯೇ ಅನುವಾಗು’ ಕಲ್ಲನ್ನು ಸಮೀಪಿಸಿ ಅದರ ನೆತ್ತಿಗೆ ನೇರವಾಗಿ ಶಿಸ್ತು ನೋಡಿ ಬಾಟ್ಲಿ ಎತ್ತಿ ಹಿಡಿದೆ.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುವ ಓಬಿರಾಯನ ಕಾಲದ ಕಥಾಸರಣಿಯಲ್ಲಿ ಸಿಕಂದರ್ ಕಾಪು ಬರೆದ ಕಥೆ “ಬಾಟ್ಲಿವಾಲಾ”

 

‘ಇಡೀ ದಿನ ಬೂಕು ಹಿಡಿದು ಇಣುಕುವುದೊಂದೇ ಕೆಲಸ ನಿಮಗೆ! ಅದೇನು ಪುಸ್ತಕ ಪಿಶಾಚಿ ಹಿಡಿದಿದೆಯೋ ನಾಕಾಣೆ!’ ಇದು ಅಶರೀರವಾಣಿಯೇನೂ ಅಲ್ಲ. ನಮ್ಮ ಮನೆಯ ಅಡುಗೆಕೋಣೆಯಿಂದ ಹೊರಟ ಮಾತು.

ನಾನೋದುತ್ತಿದ್ದ ಪುಸ್ತಕದ ಹೆಸರು ‘ಸರ್ವಾರ್ಥ ಸಾಧನ’ವೆಂದು. ನಮ್ಮ ಪೇಟೆಯ ‘ಜೆಂಟ್ಸ್ ಲೈಬ್ರೆರಿ’ಗೆ ಹೊಸದಾಗಿ ಬಂದುದು. ಅದರಲ್ಲೇನೇ ಇರಲಿ; ಕೈಗೆ ಸಿಕ್ಕ ಹೊಸ ಪುಸ್ತಕವನ್ನೊಮ್ಮೆ ಅಮೂಲಾಗ್ರವಾಗಿ ಓದುವ ಒಂದು ಹುಚ್ಚು ನನಗೆ. ಪುಸ್ತಕ ತೆರೆಯುತ್ತಲೇ ನನ್ನ ದೃಷ್ಟಿಗೆ ಬಿದ್ದ ಅಧ್ಯಾಯವೆಂದರೆ – ‘ಹಣ ಗಳಿಸುವ ಹಂಚಿಕೆ’ ಅಹ, ಎಂತಹ ನಾಜೂಕು ವಿಷಯ! ಬಹುಕಾಲದಿಂದ ನಾನು ಯೋಚಿಸುತ್ತಿದ್ದುದು ಇದನ್ನೇ! ನನ್ನ ವಾಚನಾ ಪ್ರವಾಹವು ಭರದಿಂದ ಮುಂದೆ ಸಾಗಿತ್ತು.

‘ನೋಡೀಂದ್ರೆ, ನಾನು ಮೊನ್ನೆ ನಿಮ್ಮೊಡನೆ ಅಂದದ್ದೂ’- ನನ್ನಾಕೆ ಹೊರಗೆ ಬಂದು ಬಳಿಯಲ್ಲಿ ನಿಂತಳು. ಅವಳ ನುಡಿಗಟ್ಟು ನನ್ನ ಕಿವಿಗೆ ಬಿದ್ದರೂ, ಕೇಳದವನಂತೆ ನಟಿಸಿದೆ. ಮತ್ತೊಮ್ಮೆ ಅದೇ ವಾಕ್ಯದ ಪುನರುಚ್ಚಾರವಾಯಿತು.

ನಾನು ತಲೆಯೆತ್ತಿ ಬಿರುನೋಟದಿಂದ ಅವಳಿಗೆ – ‘ಸರಿ, ಬಂತಿಲ್ಲಿ; ರಾಮಾಯಣದ ಮಧ್ಯೆ ಪಿಟಿಕಾಯಣ ಎಂಬ ಹಾಗೆ’ – ಎಂದು ಅಸಡ್ಡೆಯಿಂದ ಮೊಗದಿರುಹಿ ಓದಲುಪಕ್ರಮಿಸಿದೆ.

‘ಹೌದು, ನಿಮಗೆ ಯಾವಾಗಲೂ ನನ್ನ ಮಾತು ಹೀಗೆಯೇ, ಅದಿರಲಿ. ನೋಡಿ, ಆಚೇ ಮನೆ ಲಲಿತ ಇದ್ದಾಳಲ್ಲ….?’

‘ಹೌದು ಇದ್ದಾಳೆ. ಏನಾಯ್ತವಳಿಗೆ?’

‘ಅವಳಿಗೆ ಎರಡು ಜೋಡು ಬಳೆ ಮಾಡಿಸಿದ್ದಾರೆ. ನಾಲ್ಕು ಪವನಿರುವುದಂತೆ. ನಿನ್ನೆ ಸಂಜೆ ಬಾವಿಕಟ್ಟೆಯಲ್ಲಿ ನಾನು ನೋಡಿದೆ. ನನಗೂ ಅಂತಹ ಬಳೆಯೇ ಆಗಬೇಕು. ಏನು? ಆದೀತೋ ಇಲ್ಲವೋ ಹೇಳಬೇಕೀಗ.’ ಅವಳ ಕೈ ಬಾಯಿ, ಕಣ್ಣು, ಮೂಗು, ಹುಬ್ಬು ಇವೆಲ್ಲವೂ ಮಾತಾಡುತ್ತಿರುವಂತೆ ನನಗೆ ಕಂಡಿತು.

‘ಹ್ಹ, ಹ ನಿನಗೆ ಇದೊಂದೇ ರಾಗ. ಪ್ರಪಂಚ ಹೇಗಿರುವುದೆಂಬ ವಿಷಯ ಇನ್ನೂ ಗೊತ್ತಿಲ್ಲ. ಲಲಿತೆಯ ಗಂಡ ದೊಡ್ಡ ಹುದ್ದೇದಾರ, ತಂದೆ ತಾಯಿಗಳು ಧನಿಕರು. ಅವರ ಹಾಗೆ ನಾನೆಂದು ಭಾವಿಸಿರುವೆಯಾ? ನನಗೆ ಸಿಗುವುದು ತಿಂಗಳಿಗೆ ಮೂವತೈದು ರೂಪಾಯಿ. ಅದರಿಂದ ಈಗಿನ ಪರಿಸ್ಥಿತಿಯಲ್ಲಿ ಮನೆ ಬಾಡಿಗೆ ಕೊಟ್ಟು ನಮ್ಮ ಖರ್ಚು ಸಾಗುವುದೇ ಪ್ರಯಾಸವಾಗಿದೆ. ಅದರ ಮಧ್ಯೆ ನೀನು ಒಂದೊಂದೇ ರಗಳೆ ಹಿಡಿದುಕೊಂಡು ಕೂತರೆ ಹೇಗೆ? ತುಸು ತಡೆ; ಯುದ್ಧ ಮುಗಿಯಲಿ. ಆಗ ಪವನಿಗೆ ಹದಿನಾಲ್ಕು ರೂಪಾಯಿ ಆಗುವುದು. ನಂತರ ಮಾಡಿಸುವ ಬಳೆ, ಸರ, ವಗೈರೆ ಎಲ್ಲಾ ಒಡವೆಗಳನ್ನು. ಸದ್ಯಕ್ಕೆ ನಿನ್ನ ಮೇಲಿರುವ ಈ ಆಭರಣಗಳೇ ಯಥೇಷ್ಟ ಸಾಕು. ಈಗ ಪವನೊಂದರ ಕ್ರಯವೆಷ್ಟೆಂದು ಗೊತ್ತೇ? ನಲ್ವತ್ತೆರಡು! ನಲ್ವತ್ತೆರಡು!’

‘ಸರಿ ನಿಮಗೆ ಇದೊಂದು ದೊಡ್ಡ ಅಡ್ಡಿ ಈಗ. ಇಲ್ಲವಾದರೆ ನಿನ್ನೆ ಹೊರಟಿದ್ದೀರಿ – ಅವನ್ನೆಲ್ಲಾ ತಂದುಕೊಡಲಿಕ್ಕೆ!’ ಲೀಲೆಯ ಮುಖಗಂಟಿಕ್ಕಿತು. ಬುಸುಗುಟ್ಟಲಾರಂಭಿಸಿತು.

‘ಬೇಡ, ನೀನಷ್ಟು ಸಿಟ್ಟಾಗುವುದೇಕೆ? ಅದಕ್ಕೊಂದು ಉಪಾಯ ಮಾಡುವಾ.’

‘ಯಾವ ಉಪಾಯವದು?’ ಕುತೂಹಲದಿಂದ ನನ್ನತ್ತ ತಿರುಗಿ ಕುಳಿತಳು.

‘ನೋಡು, ಬಾರ್ಕೂರಿನಲ್ಲಿ ಸಿದ್ಧರಸದ ಒಂದು ಬಾವಿಯಿದೆಯಂತೆ. ಅದು ಮುಟ್ಟಿದ ವಸ್ತುವೆಲ್ಲಾ ಚಿನ್ನವಾಗುವುದಂತೆ. ನಾನು ಅಲ್ಲಿಗೆ ಹೋಗಿ ಆ ಸಿದ್ಧರಸವನ್ನು ತಂದು, ನಿನ್ನ ಕಣ್ಣು, ಕಿವಿ, ಬಾಯಿ, ಮೂಗು ಮುಂತಾದ ಅವಯವಗಳಿಗೆ ಒಂದೊಂದೇ ಬೊಟ್ಟು ಬಿಡುವೆನು. ಮತ್ತೊಂದು ತಟಕು ನಿನ್ನ ನೆತ್ತಿಗೂ ಇಟ್ಟು ತಿಕ್ಕುವೆ. ಆಗ ನೀನು ‘ಲೀಲಾದೇವಿ’ ಹೋಗಿ ‘ಚಿನ್ನಾದೇವಿ’ಯಾಗುವೆ. ತದನಂತರ ತಮಗೆ ಚಿನ್ನದೊಡವೆಯ ಯೋಚನೆಯೇ ಇಲ್ಲದಂತಾಗುವುದು.’

ನನ್ನ ಮಾತುಗಳನ್ನು ಕೇಳುತ್ತಿದ್ದಂತೆ ಅವಳ ಮುಖವು ಇಪ್ಪತ್ತೈದು ದಿಕ್ಕಿಗೆ ಸರಿಯಿತು. ಕಣ್ಣುಗಳು ಬಟಾಟೆಯಷ್ಟು ಗಾತ್ರವಾದುವು. ನನ್ನ ಪಕ್ಕದಿಂದ ದಿಗ್ಗನೆ ಸೆಟೆದು ಹೋಗಿ ದೂರ ಕುಳಿತುಬಿಟ್ಟಳು. ವಿಪರೀತ ಕೋಪ. ನಾನವಳ ಕ್ರೋಧಾಗ್ನಿಗೆ ಗಾಳಿ ಬೀಸುವಂತೆ ಸಮೀಪ ಹೋಗಿ ‘ಹೇಗೆ ಉಪಾಯ? ಸಮ್ಮತವಾಯಿತೆ? ಇನ್ನು ಅದನ್ನು ತರಲಿಕ್ಕೆ ಒಂದು ಬಾಟ್ಲಿ ಕೊಡು’ ಎಂದೆ ನಸುನಗುತ್ತ.

‘ಹ್ಞಾ, ಬಾಟ್ಲೀ…. ಬಾಟ್ಲೀ….! ಈಗ ನೆನಪಾಯಿತು ನನಗೆ. ಸ್ಟೋರಿನಲ್ಲಿ ಮನೆ ನಂಬ್ರ ನೋಡಿ ಚಿಮಿಣಿ ಎಣ್ಣೆ ಕೊಡುತ್ತಾರಂತೆ. ಬೇಕಾದರೆ ಹೋಗಿ ತನ್ನಿ. ನನಗೇನು? ಮತ್ತೆ ಕತ್ತಲಲ್ಲಿ ಕೂತು ಕಸಕಡ್ಡಿ, ಹುಳ ಹುಪ್ಪಟೆ ಎಲ್ಲಾ ನುಂಗಬೇಕಾದೀತು’! ಎಂದಾಜ್ಞೆ ಬಂತು.

(ವಾಚಕ ಬಂಧುಗಳೇ, ನಾನು ವಿವರಿಸುವ ಈ ವಿಷಯವು ನಿನ್ನೆ ಮೊನ್ನೆಯದಲ್ಲ. ಕಳೆದ ಎರಡು ವರ್ಷಗಳ ಹಿಂದೆ ಅದೊಂದು ಬೇಸಗೆಯ ಮಧ್ಯಾಹ್ನದ ನಡೆದ ಕತೆಯಿದು.)

ಡಾ. ಅಮೆಂಡಸೇನನು ಉತ್ತರ ಧ್ರುವವನ್ನು ಕಂಡು ಹಿಡಿದಷ್ಟು ಸಾಹಸದಿಂದ ಎಲ್ಲೋ ಒಂದು ಮೂಲೆಯಲ್ಲಿ ಸುಣ್ಣ ಮುಕ್ಕಿದ್ದ ನಮ್ಮ ‘ಮನೆ ನಂಬರನ್ನೂ’ ನಾನು ಲೀಲೆಯು ಕೂಡಿ ಗುರ್ತಿಸಿದ್ದಾಯಿತು. ಅದರ ತಾಜಾ ನಕಲನ್ನು ಒಂದು ಕಾಗದದ ಚೀಟಿಯಲ್ಲಿ ಇಳಿಸಿಕೊಂಡು ಬಾಟ್ಲಿಯೊಂದಿಗೆ ಪೇಟೆಯ ದಾರಿ ಹಿಡಿದೆ.

******

‘ಇದೇನು ರಾಯರೇ, ಇಲ್ಲಿಷ್ಟು ಗದ್ದಲ? ಭಾರಿ ಜನ! ಉತ್ಸವವೇನಾದರೂ ಇದೆಯೇ?’

‘ಹ್ಞೆ, ಇದು ಕೆರ್ಸಾನೆಣ್ಣೆ ಗಲಾಟೆ. ಬಾಟ್ಲಿ ಹಿಡ್ಕೊಂಡಿದ್ದೂ ನೀವು ನನ್ನ ಹತ್ತಿರ ಕೇಳುತ್ತೀರಲ್ಲ!’

ನನ್ನ ಪ್ರಶ್ನೆಗೆ ಉತ್ತರವಿತ್ತ ಆ ರಾಯರ ಕೈಯಲ್ಲೂ ಒಂದು ಬಾಟ್ಲಿ ಶೋಭಿಸುತ್ತಿತ್ತು. ‘ನೋಡುವುದೇನು? ಅಲ್ಲಿದ್ದ ಪ್ರತಿಯೊಬ್ಬನೂ ಬಾಟ್ಲಿವಾಲ! ಗಂಡಸರು, ಹೆಂಗಸರು, ಮುದುಕರು, ಮಕ್ಕಳು ಎಲ್ಲರೂ ಜಾತಿಮತ ಪಕ್ಷ ಪಂಗಡವೆಂಬ ತಾರತಮ್ಯವಿಲ್ಲದೆ ನೆರೆದಿದ್ದರು. ತಾನು ಮುಂದು ತಾನು ಮುಂದೆಂಬ ನೂಕುನುಗ್ಗಲಲ್ಲಿ ಆ ಪ್ರಚಂಡ ಜನಸಂದಣಿಯು ಒಂದೇ ಸವನೆ ಧಿಮಿಗುಟ್ಟುತ್ತಿತ್ತು.

‘ಬರೇ ಚಿಮಿಣಿಯೆಣ್ಣೆಗಾಗಿ ಇಷ್ಟೊಂದು ಹೋರಾಟವೆಂದರೆ ಇದರ ಅರ್ಥವೇನಯ್ಯಾ?’ ನಾನೆಂದೆ.

‘ಮೂರು ತಿಂಗಳಾಯ್ತರೀ ಎಣ್ಣೆ ಮುಗಿದು ನಮ್ಮೂರಲ್ಲಿ! ಅಂದಿನಿಂದ ಇದುವರೆಗೆ ಕತ್ತಲಲ್ಲಿದ್ದ ಜನ – ಈ ದಿವಸ ಬೆಳಕಿಗೆ ಬಂದಿದೆ. ನಿಮಗಿನ್ನೂ ಇದರ ಅರ್ಥವಾಗದೆ ಇದ್ದುದು ಸೋಜಿಗವೇ ಸರಿ.’ ರಾಯರು ನನ್ನನ್ನೇ ದೃಷ್ಟಿಯೂರಿ ನೋಡುವುದರಲ್ಲಿ ಮಗ್ನರಾಗಿದ್ದರು. ಮಧ್ಯಾಹ್ನವು ಸಮೀಪಿಸಿತ್ತು. ಮೇಲಿಂದ ಉರಿಬಿಸಿಲು. ಧಾರೆಗಟ್ಟಿ ಬೆವರಿಳಿಯುತ್ತಿತ್ತು. ಒಬ್ಬರ ಕಾಲ ಮೇಲೊಬ್ಬರು ನಿಂತಿದ್ದೆವು. ಇನ್ನು ಈ ಗುಂಪಿನೊಳಕ್ಕೆ ನುಗ್ಗಿ ಎಣ್ಣೆ ಪಡೆಯಲು ಸಾಧ್ಯವೇ! ಕ್ರಮವಾಗಿ ಇಷ್ಟೇ ಮಂದಿಗೆ ಹಂಚಿ ಮುಗಿಸಲು ಕಡಿಮೆಯೆಂದರೆ ಮೂರು ದಿನ ತಗಲಬಹುದು. ಕಾದು ನಿಂತರೆ ಸೋತು ಹೋಗುವುದಂತೂ ಖಂಡಿತ. ಅಸಾಧ್ಯವೆಂದು ಹಿಂತಿರುಗುವುದು ನಮ್ಮ ಗೌರವಕ್ಕೆ ಸ್ವಲ್ಪ ಕಡಿಮೆ. ಹಾಗೆಂದು ಸಿನೆಮಾ ಟಿಕೇಟು ಪಡೆಯುವುದಕ್ಕಾಗಿ ನುಗ್ಗಿ ಬಂದೂ ಪರಾಜಿತನಾದವನು ನಾನಲ್ಲ; ಅಂದ ಮೇಲೆ ಈ ಬಿಸಿಲಲ್ಲೇಕೆ ಒಣಗಬೇಕು? ಅತ್ತಿತ್ತ ನೋಡಲು ನನ್ನ ಎಡ ಬಲಗಳಲ್ಲಿ ಕೆಲವು ಮಂದಿ ನೌಜವಾನರು ಸ್ವಸಾರ್ಥ್ಯದಿಂದ ಜನ ಸಂದಣಿಯನ್ನು ಭೇದಿಸಿ ನುಗ್ಗಿ ಹೋಗಿ ಬಾಟ್ಲಿಗಳಲ್ಲಿ ಎಣ್ಣೆ ತುಂಬಿಕೊಂಡು ಜಯಶೀಲರಾಗಿ ಬರುವುದು ಕಂಡಿತು. ಮತ್ತೆ ನಾನು ಸಾಮರ್ಥ್ಯದಲ್ಲಿ ಕಡಿಮೆಯೆ? ಒಂದು ಕೈ ನೋಡಿಯೇ ಬಿಡುವಾ ಎಂದು ವೀರ ಕಚ್ಚೆ ಬಿಗಿದು ಬಳಿಯಲ್ಲಿದ್ದ ಆ ರಾಯನೊಡನೆ ‘ಬರುತ್ತೀರಾ ನಮ್ಮೊಟ್ಟಿಗೆ?’ ಎಂದೆ. ಅವರು ಪುಕ್ಕರು. ತನ್ನ ಕೈಲಾಗದೆಂದು ಅಲ್ಲೇ ಉಳಿದರು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ನಾನು ಅಲ್ಲಿಗೆ ಹೋಗಿ ಆ ಸಿದ್ಧರಸವನ್ನು ತಂದು, ನಿನ್ನ ಕಣ್ಣು, ಕಿವಿ, ಬಾಯಿ, ಮೂಗು ಮುಂತಾದ ಅವಯವಗಳಿಗೆ ಒಂದೊಂದೇ ಬೊಟ್ಟು ಬಿಡುವೆನು. ಮತ್ತೊಂದು ತಟಕು ನಿನ್ನ ನೆತ್ತಿಗೂ ಇಟ್ಟು ತಿಕ್ಕುವೆ. ಆಗ ನೀನು ‘ಲೀಲಾದೇವಿ’ ಹೋಗಿ ‘ಚಿನ್ನಾದೇವಿ’ಯಾಗುವೆ.

‘ಅಡಿಯ ಮಂದಿಡೆ ಸ್ವರ್ಗ….’ ಹ್ಞ ಹಾಗಲ್ಲ; ‘ಅಡಿಯ ಮುಂದಿಡೆ ಎಣ್ಣೆ! ಅಡಿಯ ಹಿಂದಿಡೆ ಸೊನ್ನೆ! ಬಿಡದೆ ಮುಂದೊತ್ತು ನೀ ಬಾಟ್ಲಿ ಭರಿತವಕ್ಕು ಸರ್ವಜ್ಞ|| ಇದೀಗ ಸರಿ! (ಅಃ ಈಗ ಸರ್ವಜ್ಞ ಕವಿ ಬದುಕಿರಬೇಕಿತ್ತು). ಸ್ಫೂರ್ತಿಯಿಂದ ಮೇಲಿನ ಪದ್ಯವು ಕಲ್ಪನಾ ಸೃಷ್ಟಿಯಲ್ಲಿ ಮೂಡಲು, ಅದನ್ನೇ ಗುಣ ಗುಣಿಸುತ್ತ ಮುನ್ನುಗ್ಗಲಾರಂಭ. ಟಾರ್ಪೆಡೋವಿನ ವೇಗದಿಂದ ಆ ಜನದಟ್ಟಣೆಯನ್ನು ಭೇದಿಸಿಕೊಂಡು ಕೆಲವೇ ನಿಮಿಷಗಳಲ್ಲಿ ಸ್ಟೋರಿನ ದ್ವಾರವನ್ನು ಸಮೀಪಿಸಿದುದಾಯಿತು. ಅಲ್ಲಿ ಅನೇಕ ಬಾಟ್ಲಿಗಳು ಮೇಲಾಟವಾಡುತ್ತಿದ್ದರೇನು ಫಲ? ಅದೊಂದು ಕಿರುಕಂಡಿಯ ಮೂಲಕ ಒಳಹೊಕ್ಕು ‘ಕೆರೋಸಿನ್ ತೀರ್ಥ’ ಕುಡಿದು ಪಾವನವಾಗಿ ಇನ್ನೊಂದು ಬಿರುಕಿನಿಂದ ನುಸುಳಿ ಬರುತಿದ್ದುದು ಮಿನಿಟಿಗೊಂದೇ ಬಾಟ್ಲಿ! ಜನರ ಗಲಭೆಗೇನೂ ಕೊನೆ ಮೊದಲಿಲ್ಲ; ನೂಕು ನುಗ್ಗಲಿಗೆ ದಿಗ್ದೆಸೆಯಿಲ್ಲ. ಚಿತ್ತೂರು ದುರ್ಗಕ್ಕೆ ಮುತ್ತಿಗೆ ಹಾಕಿದ್ದ ಅಲ್ಲಾವುದ್ದೀನನ ಸೈನ್ಯದುಬ್ಬರದಂತೆ ಭಾಸವಾಯಿತು.

ಈ ಮಹಾಸೇನೆಯಲ್ಲಿ ನಾನೂ ಒಬ್ಬ ಗಂಡಾಳು. ಮಿತಿಮೀರಿ ಹೆಣಗಾಡಿ ಗಿಡುಗನಂತೆ ಮುಂದಕ್ಕೆ ಹಾರಿ ಸ್ಟೋರು ಕ್ಲಾರ್ಕರನ್ನು ಗುರುತಿಸಿಕೊಂಡೆ. ನೂಕಾಟದ ನಡುವಿನಲ್ಲೂ ಆ ಮುದ್ದು ಮುಖದೆಡೆಗೆ ವಾರಾಂಗನೆಯ ಒಂದು ವಿಲೋಲ ಕಟಾಕ್ಷವನ್ನೆಸೆದು ‘ಮಿಸ್ಟರ್, ನಮಗೊಂದು ಬಾಟ್ಲಿ!’ ಎಂದವನೇ ಕೈ ನೀಡಿ ಹಣವನ್ನು ಅವರ ಅಂಗೈಯಲ್ಲಿಟ್ಟೆ (ಮುಂಗಡವಾಗಿ ದುಡ್ಡು ಕೊಟ್ಟು ಬಿಟ್ಟರೆ ಮ್ಹಾಲು ಸಿಗುವುದು ಖಂಡಿತವೆಂದು ನನ್ನದೊಂದು ನಂಬಿಕೆ). ಈ ಬಾಟ್ಲಿಯನ್ನೂ ಒಳಗೆ ಕೊಟ್ಟು ಬಿಡೋಣವೆಂದು ಅದನ್ನೆತ್ತಿದ್ದೇ ತಡ; ಎತ್ತಣಿಂದಲೋ ಒಂದು ಜನ ಪ್ರವಾಹವು ಬಂದು ನನ್ನನ್ನು ಬಾಟ್ಲಿ ಸಮೇತ ಮೂರು ಮಾರು ಹಿಂದೆಸೆದು ಬಿಟ್ಟಿತು; ಹ್ಹು, ನನ್ನ ಕೈಯಲ್ಲಿ! ಛೆ, ಸುಮ್ಮನೆ ಬಿಟ್ಟು ಬಿಡುವುದೇ ದುಡ್ಡುನ್ನು?’ – ಎಂದು ಮುಂದೊತ್ತಿದೆ. ಆದರೆ ಅಸಾಧ್ಯ; ತೀರಾ ಅಸಾಧ್ಯ! ಜನ ಸಂಖ್ಯೆಯು ಮುಂಚಿಗಿಂತಲೂ ಇಮ್ಮಡಿಸಿತ್ತು. ನುಗ್ಗಾಟವು ಪ್ರಬಲವಾಗಿತ್ತು. ಮುಂದೆ ಹೋಗುವುದಂತಿರಲಿ; ಅಲ್ಲಿ ನಿಲ್ಲುವುದೇ ದುಸ್ಸಾಧ್ಯವಾಯಿತು. ಹೋದರೆ ಅಷ್ಟೇ ಸೈ! ‘ಹಣ ಹಣ’ವೆಂದು ಪ್ರಾಣ ಬಿಡುವುದೇ? ಒಮ್ಮೆಗೆ ಈ ಚಕ್ರವ್ಯೂಹದಿಂದ ಪಾರಾಗಿ ಹೋದರೆ ಜನ್ಮಕ್ಕೂ ಬೇಡ – ಈ ಪೀಕಲಾಟವೆಂದು ಹಿಂದಿರುಗುವ ಯೋಚನೆ ತಲೆದೋರಿತು.

******

ಅಂತೂ ನಮ್ಮ ಮುನ್ನಡೆಯನ್ನು ಯಶಸ್ವಿಯಾಗಿ ಹಿಂದೆಗೆದ ಬಳಿಕ, ಹೆಗಲು, ಪಕ್ಕೆಲುಬು, ಶ್ವಾಸಕೋಶ, ನರನಾಡಿ ಮೊದಲಾದವುಗಳನ್ನು ಮುಟ್ಟಿ ತಟ್ಟಿನೋಡಿ ಸರಿಯಾಗಿವೆಯೋ ಎಂದು ತಿಳಿದುಕೊಳ್ಳಲು ಕಾಲು ಗಂಟೆ ಹಿಡಿಯಿತು. ಅಂತಹದೇನೂ ಸಂಭವಿಸಿರಲಿಲ್ಲ. ಅಂದಿನ ಹೋರಾಟದಲ್ಲಿ ಒದಗಿದ (casualties) ನಷ್ಟವೆಂದರೆ – ನನಗಾಗಿ ಕೈ ಬಿಟ್ಟುಹೋದ ನಾಲ್ಕಾಣೆ ಪಾವಲಿ ಒಂದು; ಬೆನ್ನಲ್ಲಿ ಪನಾಮಾ ಕಾಲುವೆಯಾದರೆ ಎದೆಯಲ್ಲಿ ಸುವೇಜ್ ಕಾಲುವೆಯನ್ನು ತೋರಿಸಿಕೊಟ್ಟ ಪಪ್ಲಿನ್ ಶರ್ಟು ಒಂದು; ಉಟ್ಟಿದ್ದ ಧೋತರದಲ್ಲಿ ಅರ್ಧ – ಇವಿಷ್ಟೇ.

‘ಛೆಕ್, ಕುರಿಜನಗಳು; ಭಾಷೆಯಿಲ್ಲದವರು!’ ಎಂದವನೇ ಹಿಂತಿರುಗಿ ಕೂಡಾ ನೋಡದೆ ಆ ಪ್ರದೇಶವನ್ನು ತ್ಯಜಿಸಿದೆ.

******

ಇಷ್ಟೆಲ್ಲಾ ಕಷ್ಟ ನಷ್ಟಗಳಿಗೆ ಕಾರಣರಾರು? ಸ್ವತಹ ನಾನೋ? ಅಥವಾ ನನ್ನಾಕೆಯೋ? ಯಾರೂ ಅಲ್ಲ; ಈ ಒಂದು ಬಾಟ್ಲಿ! ಈ ಹಾಳು ಬಾಟ್ಲಿ!! ರೌದ್ರಾವೇಶದಿಂದ ಬಾಟ್ಲಿಯ ಕತ್ತನ್ನು ಬಿಗಿಯಾಗಿ ಅಮುಕಿ ಹಿಡಿದು ಮುಂದಕ್ಕೂ ಹಿಂದಕ್ಕೂ ಬೀಸುತ್ತ ನಡೆದು ಬರುತ್ತಿದ್ದೆ. ಎದುರಿಗೊಂದು ಮೈಲುಕಲ್ಲು ಕಾಣಿಸಿತು. ಸರಿ. ಇದೇ ಕಲ್ಲಿಗೆ! ಒಂದೇ ಹೊಡೆತ! ಹೋಗಲತ್ತ – ರಗಳೆ! ‘ಎಲೈ ಮೂರ್ಖ ಬಾಟ್ಲಿಯೇ ಅನುವಾಗು’ ಕಲ್ಲನ್ನು ಸಮೀಪಿಸಿ ಅದರ ನೆತ್ತಿಗೆ ನೇರವಾಗಿ ಶಿಸ್ತು ನೋಡಿ ಬಾಟ್ಲಿ ಎತ್ತಿ ಹಿಡಿದೆ. ಇನ್ನೇನು – ನಿಮಿಷಾರ್ಧದಲ್ಲಿ ನನ್ನ ಅಂದಿನ ವೈರಿಯು ಮೈಲುಕಲ್ಲಿನ ಮಂಡೆಯ ಮೇಲಿಂದ ಸಿಡಿದು ಸೀಳಾಗಿ, ಹೋಳು ಹೋಳಾಗಿ ಹುಡಿ ಧೂಳಾಗಿ, ಬೀಳುವುದೊಂದೇ ಬಾಕಿ. ಆಗ ಹಟಾತ್ತಾಗಿ – ‘ಮಿತ್ರಾ ರಮೇಶ್, ನಿಲ್ಲು ನಿಲ್ಲು – ಅನರ್ಥವೆಸಗದಿರು ನಿಲ್ಲು’ ಎಂಬ ಧ್ವನಿ ನನ್ನ ಕಿವಿಗೆ ಕೇಳಿಸಿತು. ಇದೆಲ್ಲಿಂದ ವಿಶ್ವಾಮಿತ್ರ ಪ್ರತ್ಯಕ್ಷವಾಯಿತೆಂದು ಹಾಗೆಯೇ ಹಿಂತಿರುಗಿ ನೋಡಿದೆ. ನನ್ನ ಗೆಳೆಯ ರಾಜು ಉಸಿರುಗಟ್ಟಿ ಓಡಿ ಬರುತ್ತಿದ್ದ. ಬಂದವನೇ ಮೈಲುಕಲ್ಲಿನ ಸಮೀಪ ಹೋಗಿ ಅದರಲ್ಲಿ ಬರೆದ ಅಂಕಗಳನ್ನು ತನ್ನ ನೋಟು ಬುಕ್ಕಿನಲ್ಲಿ ಬರೆದುಕೊಂಡ. ನಾನು ಬೆಕ್ಕಸ ಬೆರಗಾಗಿ ಆತನೊಡನೆ – ‘ಇದೇನು ರಾಜು? ಮೈಲುಕಲ್ಲುಗಳ ಖಾನೇಶುಮಾರಿ ಆರಂಭವಾಗಿದೆಯೋ?’ ಎಂದು ಕೇಳಿದೆ.

ರಾಜು ಮುಗುಳ್ನಕ್ಕು – ‘ಹಾಗಲ್ಲ, ನಿನಗೆ ತಿಳಿಯದು ಆ ವಿಷಯ. ಅದು ನನ್ನ ಇವತ್ತಿನ ‘ಓಸಿ’. ನಿನ್ನೆ ರಾತ್ರಿ ಕನಸಿನಲ್ಲಿ ನನಗೊಬ್ಬ ಸಾಧುವು ಕಾಣಿಸಿಕೊಂಡು – ‘ಹೋಗು ನಿನ್ನ ನಾಳಿನ ‘ಓಸಿ’ಯು ಕೊಪ್ಪಲಂಗಡಿಯ ಮೈಲುಕಲ್ಲಿನಲ್ಲಿ (28) ದೆ ಎಂದಿರುವನು. ಅದಕ್ಕಾಗಿ ಇತ್ತ ಬಂದೆ – ನಾನು ಬರುವುದಕ್ಕೆ ಒಂದರ್ಧ ನಿಮಿಷ ವಿಳಂಬವಾಗುತ್ತಿದ್ದರೆ, ನೀನೀ ಕಲ್ಲನ್ನು ನಂಬರ್ ಸಮೇತ ಹುಡಿ ಹಾರಿಸುವುದೇ ಸೈ. ಏನಿದು? ಸಮಾ….’

‘ಸರಿ ಸರಿ, ಈಗ ನಿಮ್ಮಂಥವರ ತಲೆ ಬುರುಡೆಯನ್ನು ‘ಎಕ್ಸರೇ’ಯ ಮುಖಾಂತರ ಪರೀಕ್ಷಿಸಿ ನೋಡಿದರೆ ಒಳಗೆ ಆ ಮೆದುಳಿನ ನರ ಮಂಡಲದಲ್ಲಿ ಒಂದರಿಂದ ಒಂಭತ್ತರವರೆಗಿನ ಅಂಕೆಗಳು ವಿನಹ ಮತ್ತೇನೂ ಕಾಣಸಿಗಲಿಕ್ಕಿಲ್ಲ.’

ರಾಜುವು ನನ್ನ ಮಾತಿಗೆ ಉತ್ತರವಾಗಿ ಒಂದು ವಿಚಿತ್ರ ನಗುವನ್ನು ಹೊರಡಿಸಿ – ‘ಅದಿರಲಿ, ನಿನ್ನದೇ ಈ ಅವತಾರ? ವೇಷಭೂಷಣಗಳನ್ನು ನೋಡುವಾಗ ಈಗ ತಾನೇ ಕುಸ್ತಿಯ ಕಣದಿಂದ ಬಂದವನಂತೆ ಕಾಣುತ್ತೀ. ಅದಲ್ಲದೆ ಈ ಬಾಟ್ಲಿ ಏಕೆ ಕೈಯಲ್ಲಿ? ಮೈಲುಕಲ್ಲಿನ ಮೇಲೆ ಇಷ್ಟೊಂದು ಸಿಟ್ಟೇನು? ದಯವಿಟ್ಟು ನನ್ನೊಡನೆ ಉಸುರಬಾರದೇ?’ – ಎಂದು ಅಂಗಲಾಚಿ ಬೇಡುವಂತೆ ದೈನ್ಯತೆಯ ನಟನೆಯಿಂದ ಕೇಳಿದ. ಆ ನಟನೆಯು ನನ್ನ ಅಂತರ್ಯವನ್ನು ಹಿಚುಕುವಂತಿತ್ತು.

ನಾನು – ಕ್ರೋಧ, ವಿಷಾದ (ಒಮ್ಮೊಮ್ಮೆ) ವಿನೋದ ಮಿಶ್ರಿತ ಭಾವದಿಂದ ಅಂದಿನ ಘಟನಾವಳಿಗಳ ವರದಿಯನ್ನು ಅವನ ಮುಂದಿಟ್ಟು – ‘ನೋಡು ರಾಜ, ಕಾಲ ಕಷ್ಟವಾಗಿ ನಿಂತಿತು. ಹತ್ತು ವರ್ಷಗಳ ಹಿಂದೆ ನಮ್ಮ ನಾಡಿನ ಕವಿವರ್ಯರೊಬ್ಬರು – ತೊಟ್ಟಿಲ ಬಳಿ, ಸುಡುಗಾಡಿನಲ್ಲಿ! ಕಟ್ಟೆಯ ಬಳಿ ಮೇಲ್ಗಟ್ಟಿನಲ್ಲಿ ! ಬೆಟ್ಟದ ದೇವೀ – ಮಂದಿರದೀ!’ ಎಲ್ಲೆಲ್ಲೂ ದೀಪಗಳೆಂದು ಹಾಡಿದ್ದರು. ಅದು ಈ ಕೆರ್ಸಾನು ಎಣ್ಣೆಯು ಡಬ್ಬೆ ಡಬ್ಬೆಗಳಲ್ಲಿ ಮುಳುಗೇಳುತಿದ್ದ ಕಾಲ. ಈಗಲಾದರೂ – ‘ಬಟ್ಟಲ ಬಳಿ, ಉಂಡೇಳುವ ತನಕವೆ! ಪುಟ್ಟ ದೀಪವೊಂದಿಟ್ಟಿರಲಿ!’ ಎಂದು ಅದೆಷ್ಟು ಪೇಚಾಡಿದರೂ ವ್ಯರ್ಥ. ನಿರಾಶೆಯಿಂದ ಸಂತಪ್ತನಾಗಿ ಈ ಬಾಟ್ಲಿಗೆ ಕೂಡಲೇ ಮೋಕ್ಷ ಕಾಣಿಸಿ ಬಿಡೋಣವೆಂದು ಇತ್ತ ಬಂದೆ.’

‘ಹ, ಹ! ಬಲು ಜಾಣ ಕಣಯ್ಯ ನೀನು, ಎಣ್ಣೆ ದೊರೆಯದ್ದಕ್ಕೆ ಬಾಟ್ಲಿ ಹೊಣೆಯೇ? ನಿನಗೆಷ್ಟು ಬಾಟ್ಲಿ ಎಣ್ಣೆ ಬೇಕೀಗ?’

‘ಎಲ್ಲಾದರೆ ನಿನಗೇನು? ಸುಮ್ಮನೆ ಬಾ ನನ್ನೊಟ್ಟಿಗೆ’ ಎಂದು ಮುನ್ನಡೆದ. ನಾನು ಅವನನ್ನು ಅನುಸರಿಸಿದೆ. ಒಂದೆರಡು ಹೆಜ್ಜೆ ಹೋಗುತ್ತಲೆ, ರಾಜು ಹಿಂತಿರುಗಿ ನನ್ನೊಡನೆ – ‘ರಮೇಶ, ಎಣ್ಣೆ ಎಷ್ಟು ಸಿಗಲಿಕ್ಕೂ ಅಡ್ಡಿಯಿಲ್ಲ. ಕ್ರಯ ಮಾತ್ರ…. ಕೊಡಬೇಕು’ ಎಂದು ನನ್ನ ಕಿವಿಯಲ್ಲಿ ದರ ಹೇಳಿದ. ನಾನು ಮೆಟ್ಟಿ ಬಿದ್ದು – ‘ಏನು?’ ಎಂದು ನಿಂತುಬಿಟ್ಟೆ. ಅವನೆಂದ ಕ್ರಯ ಕೇಳಿ ತಲೆ ಗಿರ್ರೆಂದಿತು. ನೆಟ್ಟಗೆ ನಿಲ್ಲಲು ಅಸಾಧ್ಯವಾಯಿತು. ಆಧಾರಕ್ಕಾಗಿ ಬಾಟ್ಲಿಯನ್ನೇ ಭದ್ರವಾಗಿ ಹಿಡಿದುಕೊಂಡು ‘ಏನು? ಒಂದಕ್ಕೆ ಹತ್ತು ಪಾಲು ಕ್ರಯವೇ? ರಾಜಾ, ಎಲ್ಲಿ ಅದು? ನನಗೆ ಹೇಳು?’

‘ನೋಡು, ರಥಬೀದಿಯಲ್ಲಿ. ಆ….. ಜಿ ಆಂಡ್ ಕಂಪೆನಿ ಇದೆಯಲ್ಲ; ಅಲ್ಲಿ ಗುಪ್ತವಾಗಿ ವಿಕ್ರಿತವಾಗುತ್ತಿದೆ.’

‘ಓಹೋ, ಬಹುದೊಡ್ಡ ದೇಶ ಭಕ್ತರು! ಅಖಂಡ ಖದ್ದರ್ ಧಾರಿಗಳು!’

‘ಅಹುದು, ಗೋಮುಖ ವ್ಯಾಘ್ರರು! ಓದುವುದು ಶಾಸ್ತ್ರ, ಇಕ್ಕುವುದು ಗಾಳ. ಅಂದು ರಾಷ್ಟ್ರದ ಮುಖಂಡರ ಬಂಧನವಾದಾಗ ಮೈದಾನಿನಲ್ಲಿ ನೆರೆದ ಪ್ರಚಂಡ ಸಭೆಯ ಮುಂದೆ ಅಧ್ಯಕ್ಷ ವೇದಿಕೆಯ ಮೇಜನ್ನು ಗುದ್ದಿ ಗುದ್ದಿ, ಆವೇಶಯುಕ್ತವಾಗಿ ಭಾಷಣವಿತ್ತವರಾರೆಂದು ಬಲ್ಲೆಯಾ? ಈ ಕಂಪೆನಿಯ ಮೆನೇಜರರಾದ ಗಂಗಾಧರರಾಯರು’!

‘ಇಲ್ಲ – ಇಲ್ಲ, ನಾ ಬರಲಾರೆ. ಆ ಕಳ್ಳ ಸಂತೆಗೆ ಕಾಲಿಡಲಾರೆ. ಆ ನೀಚ ಸ್ವಾರ್ಥಿಗಳ ಮುಖ ನೋಡಲಾರೆ. ಅನ್ಯಾಯಕ್ಕೆ ಪ್ರೋತ್ಸಾಹವೀಯಲಾರೆ. ಕತ್ತಲಲ್ಲಿ ಕುಳಿತು ಹುಳ-ಹುಪ್ಪಟೆ ತಿನ್ನುವೆ. ಕಸಕಡ್ಡಿ ನುಂಗುವೆ. ಆದರೂ ಅತ್ತ ಸುಳಿಯಲಾರೆ. ‘ಬ್ಲೇಕ್ ಮಾರ್ಕೆಟ್ ಬಾಯ್ಕೊಟ್!’ ಎಂದೆ ಬಾಟ್ಲಿ ಎತ್ತಿ.
ರಾಜುವು ಅಂಗಿಯ ತೋಳನ್ನು ಮೇಲಕ್ಕೆತ್ತಿ ಬಲಗೈಯನ್ನು ಮುಷ್ಟಿ ಹಿಡಿದು ‘ಇಂಕ್ವಿಲಾಲ್ ಜಿಂದಾಬಾದ್’ ಎಂದ.

(ಅಂತರಂಗ : 1945)
******
ಟಿಪ್ಪಣಿ:
ಸಿಕಂದರ್ ಕಾಪು
ಇವರ ಪೂರ್ಣ ಹೆಸರು ಹುಸೇನ್ ಸಾಹೇಬ್ ಕೆ. ಕಾಪು. ಇವರು ವೃತ್ತಿಯಲ್ಲಿ ದಫೇದಾರ್ ಆಗಿದ್ದರು. ಬೇರೆ ವಿವರಗಳು ಲಭ್ಯವಿಲ್ಲ. ಸರಕಾರಿ ಉದ್ಯೋಗಸ್ಥರಾಗಿದ್ದ ಇವರು ಗುಪ್ತನಾಮದಿಂದ ಬ್ರಿಟಿಷ್ ಸರಕಾರಕ್ಕೆ ವಿರೋಧಿಯಾದ, ದೇಶಪ್ರೇಮವನ್ನು ಪ್ರೇರೇಪಿಸುವ ಕತೆಗಳನ್ನು ಬರೆದಿರುವುದು ವಿಶೇಷವಾಗಿದೆ.
ಕತೆಯ ಹಿನ್ನೆಲೆ: ಕ್ವಿಟ್ ಇಂಡಿಯಾ ಮತ್ತು ವಿಶ್ವಯುದ್ಧಗಳು ಮೊದಲನೆಯ ಮತ್ತು ಎರಡನೆಯ ಮಹಾಯುದ್ಧಗಳ ಕಾಲದಲ್ಲಿ ನಮ್ಮ ದೇಶದಲ್ಲಿ ಕಂಡುಬಂದ ಆಹಾರ ಧಾನ್ಯಗಳ ಕೊರತೆ, ಪಡಿತರ ವ್ಯವಸ್ಥೆ, ಸೀಮೆ ಎಣ್ಣೆ ಮತ್ತು ಪೆಟ್ರೋಲುಗಳು ಸಿಗದೆ ಜನ ಅನುಭವಿಸಿದ ಬವಣೆಗಳು, ಇದರ ನಡುವೆ ಕೆಲವು ವರ್ತಕರು ಲಾಭ ಮಾಡಿಕೊಂಡದ್ದು ಇವುಗಳನ್ನು ಸಾಹಿತಿಗಳು ದಾಖಲಿಸಿದ್ದಾರೆ. ಅಂತಹ ಹಲವಾರು ಕಥನಗಳು ಈ ಮಾಲೆಯಲ್ಲಿ ಪ್ರಕಟವಾಗಿವೆ. ಉದಾಹರಣೆಗೆ, ‘ಫುಡ್ ಕಮೀಷನರ ಆಗಮನ’ (ಬೆಳ್ಳೆ ರಾಮಚಂದ್ರ ರಾಯರ ಕಾದಂಬರಿ ‘ಚಿರವಿರಹಿ’ಯ ಭಾಗ), ‘ಪುಂಡಗೋಳಿಯ ಕ್ರಾಂತಿ’ (ಬಿ. ಜನಾರ್ದನ ಭಟ್), ‘ಬಾಟ್ಲಿವಾಲ’ (ಸಿಕಂದರ್ ಕಾಪು), ‘ರಾಯರ ಬಾವಿ’ (ಫ್ರಾನ್ಸಿಸ್ ದಾಂತಿ) – ಇವುಗಳು. ಈ ವಿಷಯದ ಕತೆಗಳಲ್ಲಿ ಇದು ಕೊನೆಯದು.