ರಂಗಭೂಮಿಯ ಮೂಲಕ ಕೇರಳದ ವೈವಿದ್ಯದ ಪರಿಚಯ ಆಗುವ ಜೊತೆಗೆ ಉತ್ತರಕನ್ನಡ ಇಲ್ಲಿನ ಹಲಸಿನ ಬೇಳೆ, ಮಳೆ, ದೇವರುಗಳೆಲ್ಲ ಇಲ್ಲಿ ಹಾಸುಹೊಕ್ಕುವ ಪರಿ ಅಚ್ಚರಿ ಹುಟ್ಟಿಸುವದು. ಮಕ್ಕಳೊಂದಿಗೆ ಮಕ್ಕಳಾಗಿ ಮಕ್ಕಳ ರಂಗಭೂಮಿಯಲ್ಲಿ ಮೌನವಾಗಿ ತೊಡಗಿಕೊಂಡ ಸಂಕೋಚದ ಮುದ್ದೆಯಾಗಿ ಕಾಣುವ ಕಿರಣ ಇಲ್ಲಿ ಕೇರಳದ ರಂಗಭೂಮಿಯ ಭಾಗವಾಗಿ ಮತ್ತು ಸಾಂಸ್ಕೃತಿಕ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಾರೆ. ನಾಟಕವೆನ್ನುವದು ಜನಪದದ ಭಾಗವೆನ್ನುವ ನಂಬಿಕೆ ಮತ್ತು ಆ ರಂಗಸ್ಥಳದ ಮೂಲಕವೇ ಸಮಗ್ರ ಕೇರಳದ ರಂಗಚಳವಳಿಯ ದೋಣಿ ವಿಹಾರ ನಮಗಾಗುತ್ತದೆ.
ಕಿರಣ ಭಟ್ ಬರೆದ “ರಂಗ ಕೈರಳಿ” ಪುಸ್ತಕದ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರೆದ ಲೇಖನ
ಕಿರಣ ಭಟ್ ಯಾವತ್ತಿಗೂ ನೆನಪಾಗುವದೂ ಕಾಲೇಜು ದಿನಗಳಲ್ಲಿ ತಲೆತುಂಬಾ ಗುಂಗುರು ಕೂದಲು ಬೆಳೆಸಿಕೊಂಡು ಕನ್ನಡಕದೊಳಗಿಂದ ಮುಗುಳುನಗುವ ಕೈಗೆ ಸಿಕ್ಕ ಡಬ್ಬಿ ಡೆಸ್ಕುಗಳನ್ನೆಲ್ಲಾ ಡ್ರಮ್ಮನ್ನಾಗಿಸಿಕೊಂಡು ಬಡಿಯುತ್ತಾ ಸಂಗೀತವನ್ನು ಗುನುಗುನಿಸುವ ಅಂದಿನ ಕಾಲೇಜು ದಿನಗಳ ತರುಣನಾಗಿಯೇ. ಒಂದು ಕೈಯಲ್ಲಿ ಪುಸ್ತಕಗಳನ್ನು ಹಿಡಿದು ಲ್ಯಾಬ್ ಮತ್ತು ಕ್ಲಾಸುಗಳಿಗೆ ಓಡಾತ್ತಾ ಮತ್ತೆ ನಮ್ಮಂತಹ ಕಿರಿಯರು ಸಿಕ್ಕಾಗ ನಗುತ್ತಾ ಹರಟುವ ಕಿರಣನಿಗೆ ಮೊದಲಿನ ಗೀಳಿದ್ದದ್ದು ಹಿಂದೀ ಸಂಗೀತ ಮತ್ತು ಡ್ರಮ್ಮರ್ ಗಳು, ಕೃಷ್ಣಮೂರ್ತಿ ಹೆಬ್ಬಾರ ಮತ್ತು ನಾವೆಲ್ಲಾ ಕಾಲೇಜಿನಲ್ಲಿ ಆಡಿದ “ಕಲಿತ ಹುಡುಗಿ” ನಾಟಕಕ್ಕೆ ಹಿನ್ನೆಲೆ ಸಂಗೀತ ಇವರದ್ದೇ ಆಗಿತ್ತು. ಆ ಸಂಗೀತ ನಾಟಕ ಆ ದಿನ ವಿಜೃಂಭಿಸಿದ್ದು ಅದರ ಹಿನ್ನೆಲೆ ಸಂಗೀತದಿಂದಾಗಿಯೇ.
ಕಲಿಯಲು ತುಂಬಾ ಹುಶಾರಿಯಾಗಿರುವ ಕಾರಣ ಅಂದಿನ ಟೆಲಿಫೋನ್ ಇಲಾಖೆಯಲ್ಲಿ ನೇರವಾಗಿ ಜ್ಯೂನಿಯರ್ ಎಂಜಿನಿಯರ್ ಆಗಿ ಆಯ್ಕೆಗೊಂಡು ಕೇರಳ ಮಂಗಳೂರು ಕಡೆ ಇದ್ದರೂ ಆಗೆಲ್ಲಾ ಇವರು ತನ್ನ ನಿರ್ವಚನೆಯಲ್ಲಿ ಚಲನಚಿತ್ರಗಳನ್ನು ಹಿಂದಿಕ್ಕಿ ಆರಿಸಿಕೊಂಡಿದ್ದು ನಾಟಕಗಳನ್ನು. ನಾಟಕವೆಂದರೆ ಎಲ್ಲವನ್ನೂ ಬಿಟ್ಟು ಓಡುತ್ತಿದ್ದ ಕಿರಣ ಆ ನಂತರದಲ್ಲಿ ಸಿರಸಿಗೆ ಬಂದಾಗ ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ನಾಟಕವನ್ನು ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಕಾಲಕ್ರಮೇಣ ಉದ್ಯೋಗದಲ್ಲಿ ಪಡೆದ ಪದೋನ್ನತಿಯ ಕಾರಣದಿಂದ ಕೇರಳಕ್ಕೆ ಹೋದ ಸಂದರ್ಭದಲ್ಲಿ ಕೇರಳದಲ್ಲಿ ಅನುಭವಿಸಿದ ನಾಟಕಗಳು ಅನೇಕ. ಹೀಗೆ ಪಡೆದ ಅನುಭವವವೇ ಪುಸ್ತಕ ರೂಪದಲ್ಲಿ ಹೊರಬಂದ ಕೃತಿ “ರಂಗ ಕೈರಳಿ”.
ಹೊನ್ನಾವರದ ಆರ್. ಆರ್. ಸ್ಟುಡಿಯೋದ ಮಾಧವನ್ ರಿಂದ ಪ್ರಾರಂಭಿಸಿ ಎರಡು ಮೀಟರ್ ಚಾಯ್ ನ ನಾಯರ್, ಉಣ್ಣಿ, ಬಾಬು ಈ ನಡುವೆ ಆಪರೇಷನ್ ಅಜ್ಜಿ ಮನೆಯ ಪಾರ್ವತಿ ಅವರ ಅಣ್ಣ ದಾಮೋದರ ಭಟ್ರು ಹೀಗೆ ಸಾಗುವ ಈ ಪುಸ್ತಕವನ್ನು ಓದಲು ಪ್ರಾರಂಭಿದರೆ ಮುಗಿದಮೇಲೆಯೇ ತಲೆ ಎತ್ತುವದು. ಕನ್ನಡದಲ್ಲಿ ಪ್ರವಾಸ ಕಥನದ ಅನೇಕ ಕೃತಿಗಳು ಬಂದಿವೆ. ಅವುಗಳೆಲ್ಲಲ್ಲಾ ಈ ರೀತಿ ರಂಗಭೂಮಿಯ ಮೂಲಕ ಒಂದು ರಾಜ್ಯದ ಸಾಂಕೃತಿಕ ಲೋಕವನ್ನು ಅನಾವರಣಗೊಳಿಸುವ ಕ್ರಿಯೆ ಹೊಸತು. ಅದನ್ನು ನಾವು ‘ರಂಗ ಕೈರಳಿ’ಯಲ್ಲಿ ಕಾಣಬಹುದಾಗಿದೆ.
ಕೈರಳಿಯ ಜನರ ಜೀವನ ವಿಧಾನವೇ ವಿಶಿಷ್ಟವಾದುದು. ಬಿಳೀ ಪಂಚೆ, ಶ್ವೇತ ಅಂಗಿ ತೊಟ್ಟು ತಲೆಗೆ ತೆಂಗಿನೆಣ್ಣೆ ಪೂಸಿ ಮಿರ ಮಿರನೆ ಮಿಂಚುತ್ತಾ ಜಗತ್ತಿನ ಎಲ್ಲಿಗೆ ಬೇಕಾದರೂ ಹೊರಡುವ; ಓಣಂ ಬಂತೆಂದರೆ ಸಾಕು ಎಲ್ಲಿದ್ದರೂ ಊರಿಗೆ ಬರುವ ಇವರ ಲೋಕದಲ್ಲಿ ಕಲಾ ಬದುಕಿನಷ್ಟು ಪ್ರಭಾವ ಬೀರುವದು ಮತ್ತೆ ಯಾವುದೂ ಅಲ್ಲ. ‘ಓಣಮ್ ಸಾಧ್ಯ’ದ ಊಟಕ್ಕಾಗಿಯೇ ಕಾಂಙಿಂಗಾಡಿನವರೆಗೂ ಓಡಾಡಿದ ನನಗೆ ಈ ಕೈರಳಿ ಮತ್ತೊಮ್ಮೆ ಅದೇ ರೀತಿಯ ಸಾಧ್ಯತೆಯ ಹರವನ್ನು ತಿಳಿಸಿತು.
ಇಲ್ಲಿನ ವಿಷ್ಣುಮೂರ್ತಿ ಕೋಲ, ಕಥಕಳಿ, ಶರಣಂ ಅಯ್ಯಪ್ಪ, ವಿಶಿಷ್ಟ ಆಚರಣೆಯ ದೇವಾಲಯಗಳು, ಅಲ್ಲಿನ ಆನೆ, ರಾಜಕೀಯ ಪಕ್ಷಗಳು ಆಗಾಗ ಕರೆ ಕೊಡುವ ಹರತಾಳ ಇವೆಲ್ಲ ಹೊರಗಿನವರಿಗೆ ಒಂದು ನಮೂನೆಯ ಗೂಢತೆಯನ್ನೂ ಅಲ್ಲಿನವರಿಗೆ ಬದುಕಿನ ಒಂದು ಭಾಗವಾಗಿಯೋ ಇರುವ ಸಂಗತಿ. ನಾಟಕವನ್ನೇ ತನ್ನ ಬದುಕಿನ ಮತ್ತೊಂದು ಜೀವನವನ್ನಾಗಿ ಅಂಗೀಕರಿಸಿದ ಕಿರಣ ಈ ಎಲ್ಲಾ ಕೌತುಕಗಳ ಮಧ್ಯೆಯೇ ಕೇವಲ ಎರಡು ವರುಷಗಳಲ್ಲಿ ನೋಡಿದ ನಾಟಕಗಳ ಸಂಖ್ಯೆ ಬೆರಗುಗೊಳಿಸುತ್ತದೆ. ಆ ಕುರಿತಾದ ವಿವರಣೆ ಓದುವಾಗ ನಮ್ಮನ್ನು ನೇರವಾಗಿ ರಂಗಭೂಮಿಯ ನಡುವೆಯೇ ಕುಳ್ಳಿರಿಸಿಬಿಡುತ್ತಾರೆ.
ಹಗಲು ಬಿಡುವಿಲ್ಲದ ಕಛೇರಿಯ ಕೆಲಸಗಳ ನಡುವೆಯೇ ದಣಿವು ಕಳೆಯಲು ಅವರು ಆಯ್ದುಕೊಂಡಿದ್ದು ನಾಟಕಗಳ ಲೋಕವನ್ನು. ನಾಟಕವೆಂದಕೂಡಲೇ ಭವಭೂತಿಯ ಮಾಲತಿ ಮಾಧವ ನೆನಪಾಗುತ್ತದೆ. ಪಂಡಿತ ಮಾತ್ರರಿಗಾಗಿ ತನ್ನ ನಾಟಕ ಎನ್ನುವ ಭವಭೂತಿಗೆ ತನ್ನೊಳಗಿನ ಕಲಾವಿದ ಕೊನೆಗೊಮ್ಮೆ ಎಚ್ಚರಿಸುತ್ತಾನೆ. ಆಗ ಆತ ತನ್ನ ನಾಟಕ “ಮಾಲತಿ ಮಾಧವ” ವನ್ನು ಮೊದಲು ಜಾತ್ರೆಯಲ್ಲಿ ಆಡಿ ಜನಸಾಮಾನ್ಯರಲ್ಲಿ ಒಂದಾಗಿ ಕುಳಿತು ನೋಡಿ ಆನಂದಿಸುತ್ತಾನೆ. ಇದು ನಾಟಕದ ಶಕ್ತಿ. ಇಲ್ಲಿ ಬರುವ ‘ಚವಿಟ್ಟು ನಾಡಕಂ’ದ ಕುರಿತು ಓದುವಾಗ ಈ ಅನುಭವ ನಮಗಾಗುತ್ತದೆ. ಯುರೋಪಿಯನ್ನಿನ ಪ್ರಭಾವಕ್ಕೊಳಗಾದ ‘ನಾಡಕಂ’ ಅದರಲ್ಲಿ ಬರುವ ಹೆಜ್ಜೆಗಳ ಮತ್ತು ‘ಡ್ರಂ’ನ ಗತ್ತು ಅದರೊಂದಿಗೆ ತಾನೇ ಕ್ಲಿಕ್ಕಿಸಿದ ಕಪ್ಪು ಬಿಳುಪು ಫೋಟೋಗಳೂ, ಧಾರ್ಮಿಕ ವಾತಾವರಣದ ಆವರಣ ಇವೆಲ್ಲ ಹೇಗೆ ಮಿಳಿತಗೊಂಡಿದೆಯೆಂದರೆ ಧಾರ್ಮಿಕ ಬೋಧನೆಯಾಗಬಹುದಾದದ್ದು ರಂಗ ಚಳುವಳಿಯಾದದ್ದರ ಕುರಿತು ವಿವರಿಸುತ್ತಾ ಸಾಗುತ್ತದೆ. ಅಲ್ಲಿಂದ ಶಿವರಾತ್ರಿಯಲ್ಲಿ ನಡೆಯುವ ‘ವೈಶಾಲಿ’ಯೂ ಇದೇ ಪ್ರಕಾರದ್ದು. ಅಲ್ಲಿನ ನಾಟಕ ನೋಡುತ್ತಲೇ ಸಿರಸಿ ಜಾತ್ರೆಯ ಕಂಪನಿ ನಾಟಕದ ನೆನಪಾಗುತ್ತಾ ಇಲ್ಲಿನ ರಂಗಭೂಮಿಯ ಚಟುವಟಿಕೆಗಳಿಗೂ ಅಲ್ಲಿನ ಹರವಿಗೂ ಒಂದು ತೌಲನಿಕ ಅಧ್ಯಯನವನ್ನೇ ನಡೆಸಿಬಿಡುತ್ತಾರೆ.
ಮುಖದ ದಟ್ಟ ವರ್ಣಗಳ ನಡುವೆಯೇ ಈ ಮಾಧ್ಯಮದ ಪದ್ಯದ ಸೂಕ್ಷ್ಮ ಭಾವವನ್ನು ಅಭಿನಯಿಸುವ ಈ ಕಲಾವಿದರ ಅಭಿನಯವಿಸ್ತಾರ ಅನಂತದವರೆಗೂ ಸಾಗುತ್ತದೆ. ಮುಖದ ಪ್ರತಿಯೊಂದು ಭಾಗವೂ ಅಭಿನಯದ ಕ್ಯಾನ್ವಾಸ್ ಆಗುವ ಈ ಪ್ರಕಾರವನ್ನು ನೋಡುವಾಗ ಯಕ್ಷಗಾನದ ಅಭಿನಯವೂ ನೆನಪಿಗೆ ಬರುತ್ತದೆ.
ಇಡೀ ಕೃತಿಯಲ್ಲಿ ಕರ್ನಾಟಕದ ರಂಗಭೂಮಿ ಇವರನ್ನು ಕಾಡುತ್ತಲೇ ಇದೆ. ಕನ್ನಡದ ರಂಗ ನಟರು ಯಾರಿಗೂ ಕಡಿಮೆ ಏನಿಲ್ಲ, ಗುಬ್ಬೀ ವೀರಣ್ಣ, ಏಣಗೀ ಬಾಳಪ್ಪ, ಹಿರಣ್ಣಯ್ಯರಿಂದ ಹಿಡಿದು ಇಂದಿನ ರಂಗಾಯಣ, ನೀನಾಸಂವರೆಗಿನ ಎಲ್ಲಾ ಪ್ರಕಾರಗಳಿದ್ದೂ ಇವು ಸಮಗ್ರವಾಗಿ ಒಂದಕ್ಕೊಂದು ಬೆಸೆದುಕೊಳ್ಳಲು ಯಾವುದೋ ತೊಡಕಿದೆ ಅನಿಸುತ್ತಿದೆ. ಇದಕ್ಕೆ ಕಾರಣ ಕೇರಳದಂತೆ ಕರ್ನಾಟಕದ ಜನಜೀವನದ ಮೇಲೆ ಕನ್ನಡ ಭಾಷೆಯ ಬಂಧ ಸಮಗ್ರವಾಗಿಲ್ಲ. ಅಲ್ಲಿ ಯಾವ ಧರ್ಮ, ಜನಾಂಗವೇ ಇರಲಿ ಅವರ ಮಾತು ಮಾತ್ರ ಮಲೆಯಾಳಂ. ಈ ಏಕತಾನತೆಯೇ ದಕ್ಷಿಣದ ಪುಟ್ಟರಾಜ್ಯವನ್ನು ಸಮನಾಗಿ ಬೆಸೆದಿದೆ.
ಇಲ್ಲಿ ನಂಬೂದ್ರಿಗಳ ಅನಿಷ್ಟ ಪದ್ಧತಿಯ ವಿರುದ್ಧ ಬಂಡೇಳುವ ಭಟ್ಟಾದ್ರಿಪಾಡ್ ರನ್ನು ಕನ್ನಡದ ಮೊದಲ ಪ್ರಕಟಿತ ನಾಟಕ ‘ಇಗ್ಗಪ್ಪ ಹೆಗಡೆಯ ವಿವಾಹ ಪ್ರಸಂಗ’ ದೊಟ್ಟಿಗೆ ಹೋಲಿಸಿ ಇಲ್ಲಿಯ ಸಾಧನೆಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಕೇವಲ ಕೇರಳದ ನಾಟಕದ ವೈಭವ ಇದಲ್ಲ, ನಮ್ಮಲ್ಲೂ ಇಂತಹ ವಸ್ತುಗಳಿವೆ, ಅವು ಜನಸಾಮಾನ್ಯರ ರಂಗಚಳವಳಿಯಾಗಬೇಕು ಎನ್ನುವದನ್ನು ಸೂಚ್ಯವಾಗಿಯೇ ಧ್ವನಿಸುತ್ತಾರೆ.
ಹೆಮ್ಮಿಂಗ್ವೆಯ ‘Old man and the Sea’ ರೂಪಾಂತರ ‘ಕಿಳವನುಂ ಕಡಲುಂ’ ಮತು ‘ಮ್ಯಾಕ್ ಬೆತ್’ ನಂಥ ನಾಟಕಗಳನ್ನು ಅರ್ಧ ಕೋಟಿ ರೂಪಾಯಿಯವರೆಗಿನ ವೆಚ್ಚದಲ್ಲಿ ಮಾಡಿ ಅದನ್ನು ಯಶಸ್ವಿ ಪ್ರಯೋಗವನ್ನಾಗಿಸುವುದರ ವಿವರ ತಿಳಿದಾಗ ಬಾಯಿಬಿಟ್ಟು ನಾವು ಹೆಬ್ಬೇರಿಸಿ ನೋಡಬೇಕಾಗುತ್ತದೆ. ತ್ರಿಶ್ಶೂರಿನ ನಾಟಕದ ಹಬ್ಬ, ನಾಟಕಕ್ಕೆ ಆನೆಗಳನ್ನು ತರುವ ಪರಿ, ಇವನ್ನೆಲ್ಲ ಓದುವಾಗ ನಮ್ಮಲ್ಲಿ ತಂಕಿನ ಯಕ್ಷಗಾನ “ಸಮುದ್ರ ಮಥನ” ಪ್ರಸಂಗದಲ್ಲಿ ಆನೆಯ ಮೇಲೆ ಶಂಕರನಾರಾಯಣ ಸಾಮಗರು ದೇವೇಂದ್ರನಾಗಿ ಬಂದ ಘಟನೆ ನೆನಪಾಗುತ್ತದೆ.
ಹಿಂದಿಯ ಧುವಿದಾ ನಾಟಕ ಮನಸ್ಸನ್ನು ಸೆರೆ ಹಿಡಿಯುತ್ತದೆ. ಈ ನಾಟಕವನ್ನು ನಾವು ಕವಿ ಜಿ.ಎಸ್. ಅವಧಾನಿಯವರ ನಿರ್ದೇಶನದಲ್ಲಿ “ಒಂದು ಲೋಕ ಕಥೆ” ಎಂಬ ಕನ್ನಡ ಅನುವಾದದೊಂದಿಗೆ ಹೊನ್ನಾವರದ ಕಾಲೇಜಿನಲ್ಲಿ ಆಡಿದ್ದೆವು. ಕನ್ನಡದ “ನಾಗಮಂಡಲ” ವನ್ನು ಹೋಲುವ ಈ ನಾಟಕ ಆಡುವದು ಒಂದು ಸವಾಲು ಹೌದು. ಮಣಿಕೌಲ್ ನಿರ್ದೇಶನದಲ್ಲಿ 1973 ರಲ್ಲಿ ಚಲನಚಿತ್ರವಾಗಿಯೂ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ರವಿ ಮೆನನ್ ಮತ್ತು ರೈಸಾ ಪದಮ್ಸೀಯವರ ನಟನೆ ಬಹುಕಾಲ ನೆನಪಿನಲ್ಲುಳಿಯುವಂತಹದ್ದು. 2005 ರಲ್ಲಿ ಮತ್ತೊಮ್ಮೆ ಶಾರುಖ್ ಖಾನ್ ಮತ್ತು ರಾಣಿ ಮುಖರ್ಜಿಯ ಅಭಿನಯದಲ್ಲಿ “ಪಹೇಲಿ” ಎನ್ನುವ ಹೆಸರಿನಲ್ಲಿ ಮತ್ತೆಮ್ಮೆ ಬೆಳ್ಳಿತೆರೆಗೆ ಬಂದಿದೆ. ಜಾನಪದ ಸೊಗಡಿನ ಅದ್ಭುತ ನಾಟಕ ಇದು. ಕಿರಣ ಇದನ್ನು ನಮ್ಮ ಮುಂದೆ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ.
ಕಥಕ್ಕಳಿಯಿಲ್ಲದೇ ಕೇರಳದ ರಂಗಭೂಮಿ ಅಪೂರ್ಣ. ಕಥಕ್ಕಳಿಯ ಕಲಾವಿದರ, ‘ಕಲಾ ಮಂಡಲಂ’ನಲ್ಲಿ ಕಲಾವಿದರನ್ನು ತಯಾರು ಮಾಡುವ ಮತ್ತು ಹತ್ತು ಹದಿನೈದು ವರ್ಷಗಳವರೆಗೆ ಈ ಕಲೆಯನ್ನು ಕಲಿಯುವ ಕಲಾವಿದರ ಅರ್ಪಣಾ ಮನೋಭಾವ ಇವೆಲ್ಲವನ್ನು ವಿವರವಾಗಿ ಬರೆದದ್ದನ್ನು ಓದುವಾಗ ಈ ಕಾಲದಲ್ಲಿಯೂ ಇದು ಸತ್ಯವಾ ಎನಿಸದಿರದು.
ಕಥಕ್ಕಳಿ ನಮ್ಮ ಯಕ್ಷಗಾನವನ್ನು ಹೋಲುತ್ತಿದ್ದರೂ ಇದು ಯಕ್ಷಗಾನದಂತೆ ಒರಟು ಕಲೆಯಲ್ಲ. ಮುಖದ ದಟ್ಟ ವರ್ಣಗಳ ನಡುವೆಯೇ ಈ ಮಾಧ್ಯಮದ ಪದ್ಯದ ಸೂಕ್ಷ್ಮ ಭಾವವನ್ನು ಅಭಿನಯಿಸುವ ಈ ಕಲಾವಿದರ ಅಭಿನಯವಿಸ್ತಾರ ಅನಂತದವರೆಗೂ ಸಾಗುತ್ತದೆ. ಮುಖದ ಪ್ರತಿಯೊಂದು ಭಾಗವೂ ಅಭಿನಯದ ಕ್ಯಾನ್ವಾಸ್ ಆಗುವ ಈ ಪ್ರಕಾರವನ್ನು ನೋಡುವಾಗ ಯಕ್ಷಗಾನದ ಅಭಿನಯವೂ ನೆನಪಿಗೆ ಬರುತ್ತದೆ.
ಯಕ್ಷಗಾನದಲ್ಲಿ ಅದರ ಬಣ್ಣಗಾರಿಕೆಯೇ ಅಲ್ಲಿನ ಸೂಕ್ಷ್ಮ ಅಭಿನಯನ್ನು ತಿಂದು ಹಾಕುತ್ತದೆ ಎನ್ನುವ ಇಲ್ಲಿನ ಕೆಲ ಕಲಾವಿದರು ಮತ್ತು ಅಭಿಮಾನಿಗಳ ಮಾತನ್ನು ಕಥಕ್ಕಳಿಯನ್ನು ಗಮನಿಸಿದವರಿಗೆ ಆ ಅಭಿಪ್ರಾಯ ಸರಿಯಲ್ಲವೆನಿಸುತ್ತದೆ. ಈ ನಡುವೆ ಕೇರಳದಲ್ಲಿ ಕರಳು ಹಿಂಡುವದು ‘ದೇವರ ನಾಡಿನಲ್ಲಿ ಎಲ್ಲವೂ ಸರಿಯಾಗಿ ಇದ್ದರೆ’ ಎನ್ನುವ ಲೇಖನ. ಭೀಕರ ಪ್ರವಾಹ ಕೇರಳದ ಕಲಾ ಬದುಕಿಗೆ ಮಾಡಿದ ಹಾನಿಯನ್ನು ತಿಳಿದು ವಿಷಾದವಾಗುತ್ತದೆ. ಹಾಗೆಯೇ ‘ಆಪರೇಷನ್ ಅಜ್ಜಿ’ ಒಂದು ಎಪ್ಪತ್ತೈದು ವರುಷಗಳ ಹುಡುಕಾಟದ ಸುಖಾಂತ್ಯ. ಪಾರ್ವತೀ ಅಜ್ಜಿಯಂತಹ ಅನೇಕ ಜೀವಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಇದ್ದಾರೆ. ಸುಮಾರು ಐವತ್ತರ ದಶಕದಲ್ಲಿ ಇಲ್ಲಿನ ವಿಧುರರಿಗೆ ಹೆಣ್ಣುಗಳ ಬರವಿತ್ತು. ಆಗೆಲ್ಲಾ ತೆಂಕಿಗೆ (ಕೇರಳ) ಹೋಗಿ ವಧು ದಕ್ಷಿಣೆಯನ್ನು ಕೊಟ್ಟು ಹೆಣ್ಣುಗಳನ್ನು ಮದುವೆಯಾಗಿ ಬರುತ್ತಿದ್ದರು. ಅಲ್ಲಿಂದ ಬಂದಮೇಲೆ ಮತ್ತೆ ಆ ಜೀವಿಗಳಿಗೆ ತವರು ಎನ್ನುವದು ಶಾಶ್ವತವಾಗಿ ನೆನಪೇ. ದಾಂಡೇಲಿಯ ದಟ್ಟಾರಣ್ಯದೊಳಗಿನ ಗುಂದದಿಂದ ಹಿಡಿದು ಕುಮಟಾ ಹೊನ್ನಾವರದ ಹಳ್ಳಿಗಳಲ್ಲೆಲ್ಲ ಪಾರ್ವತಿಯಮ್ಮನಂತವರು ತಮ್ಮ ತವರು ಮನೆಯನ್ನು ನೆನೆದು ನಿಟ್ಟುಸಿರು ಬಿಡುತ್ತಿದ್ದಾರೆ. ಅವರಿಗೆಲ್ಲಾ ಕಿರಣನಂತವರು ಸಿಕ್ಕಿಲ್ಲ ಅಷ್ಟೇ.
ರಂಗಭೂಮಿಯ ಮೂಲಕ ಕೇರಳದ ವೈವಿದ್ಯದ ಪರಿಚಯ ಆಗುವ ಜೊತೆಗೆ ಉತ್ತರಕನ್ನಡ ಇಲ್ಲಿನ ಹಲಸಿನ ಬೇಳೆ, ಮಳೆ, ದೇವರುಗಳೆಲ್ಲ ಇಲ್ಲಿ ಹಾಸುಹೊಕ್ಕುವ ಪರಿ ಅಚ್ಚರಿ ಹುಟ್ಟಿಸುವದು. ಮಕ್ಕಳೊಂದಿಗೆ ಮಕ್ಕಳಾಗಿ ಮಕ್ಕಳ ರಂಗಭೂಮಿಯಲ್ಲಿ ಮೌನವಾಗಿ ತೊಡಗಿಕೊಂಡ ಸಂಕೋಚದ ಮುದ್ದೆಯಾಗಿ ಕಾಣುವ ಕಿರಣ ಇಲ್ಲಿ ಕೇರಳದ ರಂಗಭೂಮಿಯ ಭಾಗವಾಗಿ ಮತ್ತು ಸಾಂಸ್ಕೃತಿಕ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಾರೆ. ನಾಟಕವೆನ್ನುವದು ಜನಪದದ ಭಾಗವೆನ್ನುವ ನಂಬಿಕೆ ಮತ್ತು ಆ ರಂಗಸ್ಥಳದ ಮೂಲಕವೇ ಸಮಗ್ರ ಕೇರಳದ ರಂಗಚಳವಳಿಯ ದೋಣಿ ವಿಹಾರ ನಮಗಾಗುತ್ತದೆ.
ಇಡೀ ಪುಸ್ತಕದಲ್ಲಿ ಕಿರಣ್ ಕ್ಲಿಕ್ಕಿಸಿದ ಕಪ್ಪು ಬಿಳುಪು ಫೋಟೋಗಳು ತನ್ನದೇ ಆದ ವಿವರವನ್ನು ಮುಂದಿಡುತ್ತವೆ. ಕಿರಣ ಮಾಡಾಳುರವರ ಆಕರ್ಷಕ ಮುಖಪುಟ ಮತ್ತು ಅಚ್ಚುಕಟ್ಟಾದ ಮುದ್ರಣದ ಈ ಕೃತಿಯ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ.
ನಾಟಕದ ಟೆಂಟಿನೊಳಗೆ ಬದುಕು ಕತ್ತಲಿನಲ್ಲಿರುತ್ತದೆ, ಕನಸು ಬಣ್ಣದ ರಂಗಿನಲ್ಲಿ ಜಗಮಗಿಸುತ್ತಿರುತ್ತದೆ. ‘ರಂಗ ಕೈರಳಿ’ಯಲ್ಲಿ ಈ ಜಗಮಗಿಸುವ ಬೆಳಕು ಕತ್ತಲಿನಲ್ಲಿ ಕುಳಿತವರನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತದೆ.
(ಪುಸ್ತಕ: ರಂಗ ಕೈರಳಿ (ಇದೊಂದು ವಿಶೇಷ ರಂಗ ಪ್ರವಾಸ ಕಥನ), ಲೇಖಕರು: ಕಿರಣ ಭಟ್, ಪ್ರಕಾಶನ: ಬಹುರೂಪಿ, ಬೆಲೆ: 150, ಪುಟಗಳು: 120)
ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.
ನಾನು, ನಾರಾಯಣ ಯಾಜಿ ಕಾಲೇಜು ಗೆಳೆಯರು. ಒಟ್ಟಿಗೆ ನಾಟ್ಕವಾಡಿದವರು.ನಾನು ರಂಗಭೂಮಿಯ ಕಡೆ ಹೊರಳಿಕೊಂಡರೆ, ಯಕ್ಷಗಾನದ ಬಿಡ್ತಿಗೆಗಳನ್ನೇ ಎದೆಯ ಬಡಿತಗಳನ್ನಾಗಿಸಿಕೊಂಡ ನಾರಾಯಣ ಯಾಜಿ ಯಕ್ಷಗಾನದ ಮಾತುಗಳಿಗೆ ಧ್ವನಿಯಾದರು. ಒಬ್ಬ ಅಗ್ರ ಪಂಕ್ತಿಯ ಅರ್ಥಧಾರಿಯಾದರು.
ನನಗೆ ಮುಂಚಿನಿಂದಲೂ ನನ್ನ ಪುಸ್ತಕದ ಕುರಿತು ಯಾಜಿಯವರ ಅಭಿಪ್ರಾಯ ತಿಳಿಯುವ ಕುತೂಹಲ.
ಪುಸ್ತಕದ ಹಾಳೆಗಳ, ಚಿತ್ರಗಳ ನಡುವೆಯೂ ಓದುತ್ತ ಯಾಜಿಯವರು ತುಂಬ ಪ್ರೀತಿಯಿಂದ ರಂಗಕೈರಳಿ ಯ ಕುರಿತು ಬರೆದಿದ್ದಾರೆ.
ಪ್ರಕಟಿಸಿದ ‘ ಕೆಂಡ ಸಂಪಿಗೆ’ ಗೆ ಧನ್ನವಾದ.
ಥ್ಯಾಂಕ್ಯೂ ಯಾಜಿ