ಉಪ್ಪಿನ ಕೊಳ್ಳದಲ್ಲಿ ಕೇಳಿದ್ದು
ಇಂಗ್ಲಿಷ್ ಮೂಲ: Overheard on a Saltmarsh

ನಿಂಫ್, ನಿಂಫ್, ಏನು ನಿನ್ನಮಣಿಗಳು?

ಪಚ್ಚೆ ಗಾಜು, ಗುಮ್ಮ. ದಿಟ್ಟಿಸ್ತೀ ಯಾಕೆ ಅವನ್ನ?

ಕೊಡು ನನಗೆ ಅವನ್ನ.

ಇಲ್ಲ, ನಾ ಕೊಡಲ್ಲ.

ಹಾಗಿದ್ರೆ ಇರುಳಿಡೀ
ಹುಲ್ಲನೂದಿ ಹುಯ್ಯಲಿಡುವೆ,
ಕೆಸರಲಿ ಬಿದ್ದು ಅತ್ತುಕರೆವೆ
ಆ ನಿನ್ನ ಮಣಿಗಳಿಗೆ.

ಗುಮ್ಮ, ನಿನಗೆ ಅವುಗಳೆಂದರೆ
ಯಾಕೆ ಅಷ್ಟೊಂದಿಷ್ಟ?

ಚಿಕ್ಕೆಗಳಿಗಿಂತಲು ಚಂದ ಅವು, ನೀರ
ಹನಿಗಳಿಗಿಂತಲು ಅಂದ,
ಹಾಡುವ
ದನಿಗಳಿಗಿಂತಲುಮಂದ,
ಯಾವನೇ ಮನುಷ್ಯನ ಮಗಳಿಗಿಂತಲು ಸುಂದರ,
ನಿನ್ನ ಪಚ್ಚೆ ಉಂಗುರ.

ಶ್ಶ್ ಕದ್ದು ತಂದೆ ನಾನವನ್ನ
ಮುದ್ದು ಚಂದ್ರನಿಂದ.

ಕೊಡು ನನಗೆ ಮಣಿಗಳ, ನಿನ್ನ ಕಣ್ ಮಣಿಗಳ.

ಇಲ್ಲ, ನಾ ಕೊಡಲ್ಲ.

ಆಳವಾದ ಹಳ್ಳದಲ್ಲಿ ಹುಯ್ಯಲಿಡುವೆ ನಾನು
ಪಚ್ಚೆ ಗಾಜಿನ ಮಣಿಗಳಿಗಾಗಿ, ಅವುಗಳ ಮೇಲಿನ ಒಲವಿಗಾಗಿ.
ಕೊಡು ನನಗೆ ಅವುಗಳ. ಕೊಟ್ಟುಬಿಡೇ ಅವುಗಳ.

ಇಲ್ಲ, ನಾ ಕೊಡಲ್ಲ.

ಬೆಕ್ಕಿಗಿಷ್ಟು ಹಾಲು
ಇಂಗ್ಲಿಷ್ ಮೂಲ: Milk for the Cat

ಐದು ಗಂಟೆಯ ಚಾ ಬಂದು ಬೆಟ್ಟದಂಥ ಪರದೆಗಳೆಲ್ಲಾ
ಇಳಿಬಿಟ್ಟು ಕುಳಿತಿರುವಾಗ ನಮ್ಮ ಪುಟ್ಟ ಕರಿ ಬೆಕ್ಕು
ಇಷ್ಟರ ವರೆಗೆ ಎಲ್ಲಿತ್ತೊ ಈಗ ಅಲ್ಲಿ ಪ್ರತ್ಯಕ್ಷ
ನೋಡಿರದರ ಕಣ್ಣುಗಳ ರೆಪ್ಪೆಯೇರಿಸಿ ನಿಂತಿವೆ

ಮೊದಲದು ನಟಿಸುವುದು, ಕೆಲಸವಿಲ್ಲದೆ ಸುಮ್ಮನೆ
ಈ ಕಡೆ ಬಂದ ಹಾಗೆ, ಕಟ್ಟೆಗೆ ಬೆನ್ನ ಉಜ್ಜುವುದಕೆ
ಆದರೆ ಚಾ ತಡವಾದರೂ ಅಥವ ಹಾಲು ಒಡೆದಿದ್ದರೂ
ಸಮಯ ತಪ್ಪದು ಅದು

ನೋಡ ನೋಡ್ತ ಅದರ ವಜ್ರಾದಪಿ ಕಣ್ಣುಗಳು
ಮೆತ್ತಗಾಗ್ತವೆ ದೊಡ್ಡದಾಗ್ತವೆ
ಅವಕ್ಕೆ ಹಾಲಿನ ಮಬ್ಬು ಬರ್ತದೆ

ಮತ್ತದರ ಸ್ವತಂತ್ರ ಅನಿರ್ದಿಷ್ಟ ಯಥಾವತ್ ದೃಷ್ಟಿಯೊಂದು
ಕಠಿಣ ಏಕೋಭಾವದ ಬೃಹತ್ ನೆಡುನೋಟ ತಳೆಯುತ್ತದೆ

ಆಮೇಲದು ಉಗುರುಗಳ ಊರುತ್ತದೆ
ಅಥವ ಬಾಲ ಮೇಲೆತ್ತುತ್ತದೆ
ಕದಲಲು ತೊಡಗುತ್ತದೆ
ಎಲ್ಲೀ ತನಕ ಎಂದರೆ
ಅದರ ಮೆತ್ತಗಿನ ಮೈ ಥಟ್ಟನೆ
ಒಂದು ಉಸಿರಾಡುವ ನಡುಗುವ
ರೋಮಾಂಚನ ತಾನಾಗುವ ವರೆಗೆ

ಮಕ್ಕಳು ತಿಂತವೆ ಕೊಸರಾಡುತ್ತವೆ
ನಗ್ತವೆ.
ಇಳಿವಯಸ್ಸಿನ ಮಹಿಳೆಯರಿಬ್ಬರು
ತಮ್ಮ ರೇಶಿಮೆಯುಡುಪನ್ನು
ನೇವರಿಸುತ್ತ ಇದ್ದಾರೆ.
ಆದರೆ ಪುಚ್ಚೆ ಬಯಕೆಯಿಂದ ಬಡಕಲಾಗಿದೆ
ಮತ್ತು ಚಿಕ್ಕದಾಗಿದೆ, ಬದಲಾಗಿದೆ
ಅದು ನಿದ ನಿಧಾನ ನೆತ್ತಿಗೇರುವ ಹಾಲಿನ ವ್ಯಾ-
ಮೋಹವಾಗಿ.

ಕೊನೆಗೂ
ಮೇಲಿನ ಮೇಜಿನ ಮೋಡಗಳಿಂದ
ಕೆಳಗಿಳಿಯುವುದು ಬಿಳಿ ಪಿಂಗಾಣಿ ತಟ್ಟೆ
ಒಂದಾನೊಂದು ಪೂರ್ಣಚಂದ್ರನ ಹಾಗೆ.
ಬೆಕ್ಕು ನಿಡುಸುಯ್ಯುತ್ತದೆ, ಕನವರಿಸುತ್ತದೆ,
ಆನಂದತುಂದಿಲ ಮತ್ತು ಜ್ವಲಂತ,
ಪ್ರೀತಿಯಿಂದ ಸಂಪೂರ್ಣ ರೂಪಾಂತರಗೊಂಡು.

ಹೊಳೆವ ಹಾಲಿನ ಬಳೆಯ ಮುದ್ದಾಡುತ್ತದೆ,
ಕ್ಷೀರ ಸಾಗರದಲ್ಲಿ ಗದ್ದ ಅದ್ದುತ್ತದೆ. ಬಾಲ ಬಲಹೀನವಾಗಿ
ಜೋತು ಬೀಳುತ್ತದೆ. ಬಾಗುವ ಒಂದೊಂದೂ ಮೊಣಕಾಲ ಕೆಳಗೆ
ಪ್ರತಿಯೊಂದು ಪಂಜ ಎರಡಾಗಿದೆ.

ಅಸ್ಪಷ್ಟ ಅತಿ ದೀರ್ಘ ಆನಂದವೊಂದು
ಅದರ ಬದುಕ ಹಿಡಿದು ನಿಂತಿದೆ.
ಲೋಕ ಆಕಾರರಹಿತ ಅನಂತ ಶ್ವೇತ, ಅದರ ನಾಲಿಗೆ
ಕೊನೆಯ ಪವಿತ್ರ ಬಿಂದುವ ಸುರುಳಿ ಸುತ್ತುವ ವರೆಗೆ.
ನಂತರ ಮರಳಿ ಕತ್ತಲಲ್ಲಿ.

ದೈತ್ಯ ಐಶಾರಾಮ ಕುರ್ಚಿಯಲ್ಲಿ ತನ್ನ ನಿದ್ರಾವಿಷ್ಠ ನರಗಳ
ಒಂದೆಡೆ ಒಟ್ಟಿಡಲು
ದೇಹವನೆಳೆದು ಹೂಳುತ್ತದೆ,
ಮಲಗುತ್ತದೆ ಸೋತು ಸಮಾಧಿಗೊಂಡು
ಮೂರೋ ನಾಲ್ಕೋ ಗಂಟೆಗಳ ಕಾಲ
ಪ್ರಜ್ಞಾಹೀನ ಸ್ಥಿತಿಯಲ್ಲಿ ಅಲ್ಲಿ.

(Herold Monro (1879 – 1932)

 

 

 

 

 

 

 

 

(ಕಲೆ: ರೂಪಶ್ರೀ ಕಲ್ಲಿಗನೂರ್)