ಸ್ವಿಟ್ಝರ್ಲೆಂಡಿನಲ್ಲಿ ಯಾವುದೋ ಒಂದು ಘಟ್ಟದಲ್ಲಿ ನಾನು ಶಾಪೆನ್ ಹಾವರನ್ನ ಓದಲು ಸುರುಮಾಡಿದೆ. ಈವತ್ತು ನಾನು ಒಬ್ಬ ತತ್ವಜ್ಞಾನಿಯನ್ನು ಆರಿಸಬೇಕಾದರೆ ಅವನನ್ನು ಆರಿಸುವೆ. ಜಗತ್ತಿನ ಒಗಟನ್ನು ಶಬ್ದಗಳಲ್ಲಿ ಹೇಳಬಹುದಾದರೆ, ನನಗನಿಸುತ್ತದೆ ಅಂಥ ಶಬ್ದಗಳು ಅವನ ಬರಹಗಳಲ್ಲಿ ಇರುತ್ತವೆ ಎಂದು. ನಾನವನನ್ನು ಹಲವು ಬಾರಿ ಓದಿದ್ದೇನೆ, ಜರ್ಮನ್ ನಲ್ಲಿ ಮತ್ತು, ನನ್ನ ತಂದೆ ಹಾಗೂ ತಂದೆಯ ಹತ್ತಿರದ ಮಿತ್ರ ಮ್ಯಾಸಿಡೋನಿಯೋ ಫರ್ನಾಂಡೆಸ್ ಜೊತೆ, ಅನುವಾದದಲ್ಲಿ. ನನಗಿನ್ನೂ ಜರ್ಮನ್ ಒಂದು ಸುಂದರವಾದ ಭಾಷೆಯೆನಿಸುತ್ತದೆ – ಬಹುಶಃ ಅದು ನಿರ್ಮಿಸಿದ ಸಾಹಿತ್ಯಕ್ಕಿಂತಲೂ ಹೆಚ್ಚು ಸುಂದರ.
ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಒಂದು ಪ್ರಬಂಧದ ಎರಡನೆಯ ಕಂತು

 

ಯುರೋಪ್

1914ರಲ್ಲಿ ನಾವು ಯುರೋಪಿಗೆ ಸ್ಥಳ ಬದಲಾಯಿಸಿದೆವು. ನನ್ನ ತಂದೆಯ ದೃಷ್ಟಿ ಕುಂದಲು ಸುರುವಾಗಿತ್ತು, ಅವರು ಹೇಳುವುದು ನೆನಪಾಗುತ್ತದೆ, ‘ನಾನು ಕಾನೂನು ಪತ್ರಗಳಿಗೆ ಸಹಿ ಹಾಕುವುದಾದರೂ ಹೇಗೆ, ನನಗವು ಓದಲು ಕಾಣಿಸದಿದ್ದರೆ?’ ನಿವೃತ್ತಿ ಅನಿವಾರ್ಯವಾದಾಗ ಅವರು ಹತ್ತೇ ದಿನಗಳಲ್ಲಿ ನಮ್ಮ ಪ್ರಯಾಣವನ್ನು ನಿಗದಿಗೊಳಿಸಿದರು. ಲೋಕ ಆಗ ಇಷ್ಟೊಂದು ಗುಮಾನಿಯದಾಗಿರಲಿಲ್ಲ; ಪಾಸ್ಪೋರ್ಟ್ ಇರಲಿಲ್ಲ, ಅಂತೆಯೇ ಇತರ ಅಡೆತಡೆಗಳೂ ಇರಲಿಲ್ಲ. ನಾವು ಮೊದಲು ಕೆಲ ವಾರಗಳನ್ನು ಪ್ಯಾರಿಸಿನಲ್ಲಿ ಕಳೆದೆವು. ಅಂದಾಗಲಿ ನಂತರವಾಗಲಿ ನನ್ನನ್ನು ಪ್ರತ್ಯೇಕವಾಗಿ ಮನ ಸೆಳೆದ ನಗರವಲ್ಲ ಅದು, ಇತರ ಉತ್ತಮ ಅರ್ಜೆಂಟೀನಿಯರ ಮನ ಸೆಳೆಯುವಂತೆ. ಬಹುಶಃ ನನಗರಿವಿಲ್ಲದೆಯೇ ನಾನು ಯಾವತ್ತೂ ಸ್ವಲ್ಪ ಮಟ್ಟಿಗೆ ಬ್ರಿಟಿಷ್ ಆಗಿದ್ದೆನೆಂದು ಕಾಣುತ್ತದೆ.

ನಿಜ ಹೇಳಬೇಕೆಂದರೆ, ನಾನು ಯಾವಾಗಲೂ ವಾಟರ್ಲೂ ಒಂದು ವಿಜಯವೆಂದು ಭಾವಿಸುತ್ತೇನೆ. ಪ್ರಯಾಣದ ವಿಚಾರ ಬಂದುದು ನನ್ನ ತಂಗಿ ಮತ್ತು ನಾನು ಜಿನೇವಾದಲ್ಲಿ ಶಾಲೆಗೆ ಹೋಗುವುದಕ್ಕೆ; ನಾವು ನಮ್ಮ ತಾಯಿ ಕಡೆಯ ಅಜ್ಜಿ ಮನೆಯಲ್ಲಿ ಉಳಿದುಕೊಳ್ಳುವುದಿತ್ತು. ಆ ಅಜ್ಜಿಯೂ ನಮ್ಮ ಜೊತೆಯಲ್ಲಿ ಪ್ರಯಾಣಿಸಿದಳು, ಕೊನೆಗೆ ಅಲ್ಲೇ ತೀರಿಕೊಂಡಳು. ನಮ್ಮ ತಂದೆ ತಾಯಿ ಯುರೋಪ್ ಸುತ್ತುತ್ತಿದ್ದರು. ಅದೇ ಕಾಲಕ್ಕೆ ತಂದೆಯ ಕಣ್ಣುಗಳನ್ನು ಜಿನೇವಾದ ಖ್ಯಾತ ದೃಷ್ಟಿತಜ್ಞರೊಬ್ಬರು ಪರೀಕ್ಷಿಸುವುದಿತ್ತು. ಅಂದಿನ ದಿನಗಳಲ್ಲಿ ಯುರೋಪ್ ಬ್ಯೂನೋಸ್ ಏರಿಸ್ ಗಿಂತ ಅಗ್ಗವಾಗಿತ್ತು, ಹಾಗೂ ಅರ್ಜೆಂಟೀನಿಯನ್ ಹಣಕ್ಕೆ ಆವತ್ತು ಸ್ವಲ್ಪ ಕಿಮ್ಮತ್ತು ಇತ್ತು. ಚರಿತ್ರೆಯ ಕುರಿತು ನಾವು ಎಷ್ಟು ಆಜ್ಞಾನಿಗಳಾಗಿದ್ದೆವೆಂದರೆ, ಮೊದಲನೆಯ ಮಹಾಯುದ್ಧ ಆಗಸ್ಟಿನಲ್ಲಿ ಸ್ಫೋಟಿಸುವುದಿತ್ತು ಎಂಬುದರ ಬಗ್ಗೆ ನಮಗೆ ಯಾವ ಸುಳಿವೂ ಇರಲಿಲ್ಲ. ಅದು ಸಂಭವಿಸಿದಾಗ ನಮ್ಮ ತಂದೆ ಮತ್ತು ತಾಯಿ ಜರ್ಮನಿಯಲ್ಲಿದ್ದರು, ಆದರೆ ಜಿನೇವಾಕ್ಕೆ ಬಂದು ನಮ್ಮನ್ನು ಸೇರುವುದರಲ್ಲಿ ಯಶಸ್ವಿಯಾದರು. ಒಂದು ವರ್ಷದ ನಂತರ, ಯುದ್ಧವಿದ್ದಾಗಲೂ, ನಾವು ಆಲ್ಪ್ಸ್ ದಾಟಿ ಉತ್ತರ ಇಟೆಲಿಗೆ ಪ್ರಯಾಣಿಸುವುದು ಸಾಧ್ಯವಾಯಿತು. ವೆರೋನಾ ಮತ್ತು ವೆನಿಸ್ ನ ಸ್ಪಷ್ಟ ನೆನಪುಗಳಿವೆ ನನಗೆ. ವೆರೋನಾದ ವಿಸ್ತಾರವಾದ ಬಯಲು ರಂಗಭೂಮಿಯಲ್ಲಿ ನಾನು ಅಸ್ಕಸುಬಿಯಿಂದ ಹಲವು ಗೌಚೋ ಕವಿತೆಗಳನ್ನು ಧೈರ್ಯವಾಗಿ, ಗಟ್ಟಿಯಾಗಿ ಕಂಠೋಕ್ತವಾಗಿ ಹೇಳಿದೆ.

ಆ ಮೊದಲ ಶರತ್ಕಾಲದಲ್ಲಿ – 1914 – ಕಾಲೇಜ್ ಆಫ್ ಜಿನೇವಾದಲ್ಲಿ ನಾನು ಶಾಲೆ ಸೇರಿದೆ. ಜಾನ್ ಕಾಲ್ವಿನ್ ಸ್ಥಾಪಿಸಿದ ಸಂಸ್ಥೆ ಅದು. ವಸತಿ ಶಾಲೆಯಾಗಿರಲಿಲ್ಲ. ನನ್ನ ತರಗತಿಯಲ್ಲಿ ನಾವು ಸುಮಾರು ನಲುವತ್ತು ಜನ ಇದ್ದೆವು, ಅರ್ಧಕ್ಕರ್ಧ ವಿದೇಶೀಯರು. ಮುಖ್ಯ ವಿಷಯ ಲ್ಯಾಟಿನ್ ಆಗಿತ್ತು. ಬಹಳ ಬೇಗನೆ ನಾನು ಕಂಡುಕೊಂಡದ್ದೆಂದರೆ ಲ್ಯಾಟಿನ್ ಗಟ್ಟಿಯಿದ್ದರೆ ಉಳಿದ ವಿಷಯಗಳನ್ನು ಸ್ವಲ್ಪ ಸಡಿಲು ಬಿಟ್ಟರೂ ಪರವಾಯಿಲ್ಲ ಎಂದು. ಉಳಿದ ಆ ಎಲ್ಲಾ ವಿಷಯಗಳೂ – ಅಲ್ಜಿಬ್ರ, ಕೆಮಿಸ್ಟ್ರಿ, ಫಿಸಿಕ್ಸ್, ಮಿನರಾಲಜಿ, ಬಾಟೆನಿ, ಝುವಾಲಜಿ – ಫ್ರೆಂಚಿನಲ್ಲಿ ಕಲಿಯಲಾಗುತ್ತಿದ್ದುವು. ಆ ವರ್ಷ ನಾನು ನನ್ನ ಎಲ್ಲಾ ಪರೀಕ್ಷೆಗಳಲ್ಲೂ ಜಯ ಗಳಿಸಿದೆ, ಖುದ್ದು ಫ್ರೆಂಚಿನ ಹೊರತಾಗಿ. ನನ್ನ ತಂದೆಗೆ ಒಂದು ಮಾತೂ ತಿಳಿಸದೆ, ನನ್ನ ಸಹಪಾಠಿಗಳೆಲ್ಲರೂ ಸಹಿ ಹಾಕಿ ಹೆಡ್ ಮಾಸ್ಟರರಿಗೊಂದು ಮನವಿ ಸಲ್ಲಿಸಿದರು. ಅದರಲ್ಲಿ ಅವರು ಹೇಳಿದ್ದು: ನಾನು ಎಲ್ಲಾ ವಿಷಯಗಳನ್ನೂ ಫ್ರೆಂಚಿನಲ್ಲಿ ಕಲಿಯಬೇಕಾಗಿತ್ತು, ಜತೆಗೇ ನಾನು ಆ ಭಾಷೆಯನ್ನೂ ಕಲಿಯಬೇಕಾಗಿತ್ತು. ಈ ಸಂಗತಿಯನ್ನು ಹೆಡ್ ಮಾಸ್ಟರ್ ಪರಿಗಣಿಸಬೇಕು ಎಂದು. ದಯೆ ತೋರಿ, ಹೆಡ್ ಮಾಸ್ಟರ್ ಹಾಗೆ ಮಾಡಿದರು. ಮೊದಲಿಗೆ ಅಧ್ಯಾಪಕರು ಯಾವಾಗ ನನ್ನ ಹೆಸರು ಕರೆಯುತ್ತಾರೆ ಎನ್ನುವುದು ಕೂಡ ನನಗೆ ಗೊತ್ತಾಗುತ್ತಿರಲಿಲ್ಲ, ಯಾಕೆಂದರೆ ಅವರು ನನ್ನ ಹೆಸರನ್ನು ಫ್ರೆಂಚ್ ಮಾದರಿಯಲ್ಲಿ ಉಚ್ಚರಿಸುತ್ತಿದ್ದರು. Borges ಎಂಬ ಎರಡು ಸಿಲೆಬಲ್ ಗಳ ಪದವನ್ನು ಅವರು forge ಎಂಬ ತರ ಒಂದು ಸಿಲೆಬಲ್ ನಲ್ಲಿ ಉಚ್ಚರಿಸುತ್ತಿದ್ದರು. ಅಲ್ಲದೆ ನನ್ನ ಹೆಸರಿನ ‘ಜಿ’ ಅಕ್ಷರವನ್ನು ಬಲವಾದ ಸ್ಕಾಟಿಶ್ ‘ಎಚ್’ನಂತೆ ಹೇಳಬೇಕಾಗಿತ್ತು. ನಾನು ಉತ್ತರ ಕೊಡಬೇಕಾದಾಗಲೆಲ್ಲ ನನ್ನ ಸಹಪಾಠಿಗಳು ನನ್ನ ಪಕ್ಕೆಗೆ ತಿವಿದು ನನ್ನನ್ನು ಎಚ್ಚರಿಸುತ್ತಿದ್ದರು.

ಶಹರದ ದಕ್ಷಿಣ, ಅಥವಾ ಹಳೇ ಭಾಗದ ಫ್ಲ್ಯಾಟ್ ಒಂದರಲ್ಲಿ ನಾವಿದ್ದೆವು. ನನಗೀಗಲೂ ಜಿನೇವಾ ಬ್ಯೂನೋಸ್ ಏರಿಸ್ ಗಿಂತ ಹೆಚ್ಚು ಗೊತ್ತು. ಇದಕ್ಕೆ ಕಾರಣ ಜಿನೇವಾದಲ್ಲಿ ಯಾವುದೇ ಎರಡು ರಸ್ತೆ ಕೊನೆಗಳು ಒಂದರ ಹಾಗೆ ಇನ್ನೊಂದು ಇರದಿದ್ದುದು. ವ್ಯತ್ಯಾಸಗಳು ಬಹು ಬೇಗನೆ ಗೊತ್ತಾಗಿ ಬಿಡುತ್ತವೆ. ಪ್ರತಿ ದಿನವೂ ನಾನು ರ್ಹೋನ್ ಎಂಬ ಆ ಹೆಪ್ಪುಗಟ್ಟಿದ ಹಸಿರು ನದಿಯ ದಂಡೆಗುಂಟ ನಡೆಯುತ್ತಿದ್ದೆ. ನದಿ ನಗರದ ಹೃದಯದ ಮೂಲಕವೆ ಹರಿಯುತ್ತದೆ, ವಿಭಿನ್ನ ರೀತಿಯ ಏಳು ಸೇತುವೆಗಳಿವೆ ಅದಕ್ಕೆ. ಸ್ವಿಸ್ ಜನ ಸ್ವಲ್ಪ ಗರ್ವಿಗಳು ಮತ್ತು ಬಿಗುಮಾನದವರು. ನನ್ನ ಇಬ್ಬರು ಜೀವದ ಗೆಳೆಯರು ಸ್ವಿಸ್-ಯೆಹೂದ್ಯರಾಗಿದ್ದರು – ಸೈಮನ್ ಜಿಕ್ಲಿನ್ಸ್ಕಿ ಮತ್ತು ಮಾರಿಸ್ ಅಬ್ರಮೋವಿಕ್ಝ್. ಒಬ್ಬ ಲಾಯರಾದ, ಇನ್ನೊಬ್ಬ ವೈದ್ಯನಾದ. ನಾನವರಿಗೆ ಟ್ರೂಕೋ ಆಟ ಕಲಿಸಿದೆ (ದಕ್ಷಿಣ ಅಮೇರಿಕದಲ್ಲಿ ಜನಪ್ರಿಯವಾದ ಸದ್ದುಗದ್ದಲದ ಒಂದು ಆಟ), ಅವರದನ್ನು ಎಷ್ಟು ಬೇಗನೆ ಮತ್ತು ಚೆನ್ನಾಗಿ ಕಲಿತರೆಂದರೆ ಮೊದಲ ಪಂದ್ಯದಲ್ಲೇ ಅವರು ನನ್ನನ್ನು ಒಂದು ಕಾಸೂ ಬಿಡದಂತೆ ಸೋಲಿಸಿದರು. ನಾನೊಬ್ಬ ಒಳ್ಳೇ ಲ್ಯಾಟಿನ್ ವಿದ್ವಾಂಸನಾದೆ, ಆದರೆ ನನ್ನ ಹೆಚ್ಚಿನ ಖಾಸಗಿ ಓದು ಇಂಗ್ಲಿಷ್ ನಲ್ಲಿ ಇತ್ತು. ಮನೆಯಲ್ಲಿ ನಾವು ಸ್ಪ್ಯಾನಿಶ್ ಮಾತಾಡುತ್ತಿದ್ದೆವು, ಆದರೆ ತಂಗಿಯ ಫ್ರೆಂಚ್ ಬಹು ಬೇಗನೆ ಎಷ್ಟು ಚೆನ್ನಾಯಿತು ಎಂದರೆ ಅವಳು ಅದರಲ್ಲೇ ಕನಸು ಕಾಣುತ್ತಿದ್ದಳು ಕೂಡ!

ನನಗೆ ನೆನಪಿದೆ, ಒಮ್ಮೆ ತಾಯಿ ಮನೆಗೆ ಮರಳುವ ವೇಳೆ, ನೋರಾ ದಪ್ಪದ ಕೆಂಪು ಪರದೆಯಲ್ಲಿ ಅಡಗಿ ಕುಳಿತು ಭಯದಿಂದ ಕೂಗಿದ್ದು, ‘ಯುನ್ ಮೌಶ್, ಯುನ್ ಮೌಶ್!’ (‘ನೊಣ, ನೊಣ!’) ನೊಣಗಳು ಅಪಾಯಕಾರಿ ಎಂಬ ಫ್ರೆಂಚ್ ಕಲ್ಪನೆಯನ್ನು ಅವಳು ಸ್ವೀಕರಿಸಿದ್ದಳು ಎಂದು ಕಾಣುತ್ತದೆ. ‘ಅಲ್ಲಿಂದ ಹೊರ ಬಾ ನೀನು,’ ಎಂದಳು ತಾಯಿ, ತುಸು ರಾಷ್ಟ್ರಪ್ರೇಮ ರಹಿತವಾಗಿ. ‘ನೀನು ಹುಟ್ಟಿದ್ದು, ಬೆಳೆದದ್ದು ಎಲ್ಲಾ ನೊಣಗಳ ನಡುವೆಯೇ!’ ಎಂದಳು. ಯುದ್ಧದ ಪರಿಣಾಮವಾಗಿ, ಒಮ್ಮೆ ಇಟೆಲಿಗೆ ಹೋದದ್ದು ಮತ್ತು ಸ್ವಿಟ್ಝರ್ಲೆಂಡಿನೊಳಗೇ ತಿರುಗಾಡಿದ್ದುದು ಅಲ್ಲದೆ ನಾವು ಇನ್ನೆಲ್ಲೂ ಹೋಗಲಿಲ್ಲ. ನಂತರ ಜರ್ಮನ್ ಜಲಾಂತರ್ಗಾಮಿಗಳನ್ನು ಎದುರಿಸಿಕೊಂಡು ನಾಲ್ಕೈದು ಇತರ ಪ್ರಯಾಣಿಕರೊಂದಿಗೆ ಸಾಗಿ ನನ್ನ ಇಂಗ್ಲಿಷ್ ಅಜ್ಜಿ ನಮ್ಮನ್ನು ಬಂದು ಸೇರಿದಳು.

ಶಾಲೆಯ ಹೊರಗೆ, ನಾನಾಗಿಯೇ ಜರ್ಮನ್ ಕಲಿಯಲು ಸುರುಮಾಡಿದೆ. ನಾನೀ ಸಾಹಸಕ್ಕೆ ಕೈಹಾಕಿದ್ದು ಕಾರ್ಲೈಲ್ ನ ‘ಸಾರ್ಟರ್ ರಿಸಾರ್ಟಸ್’ (‘ಹೊಲಿಗೆಯವನಿಗೆ ಮರುಹೊಲಿಗೆ’) ಓದಿ, ಅದು ನನ್ನನ್ನು ಅಪ್ರತಿಭನನ್ನಾಗಿಯೂ, ತಬ್ಬಿಬ್ಬಾಗಿಯೂ ಮಾಡಿತು. ಅದರ ನಾಯಕ, ಡಯೊಜೀನಸ್ ಡೆವಿಲ್ಸ್ಡಂಗ್ ಒಬ್ಬ ಆದರ್ಶವಾದದ ಜರ್ಮನ್ ಪ್ರೊಫೆಸರ್. ಜರ್ಮನ್ ಸಾಹಿತ್ಯದಲ್ಲಿ ನಾನು ಏನಾದರೂ ಜರ್ಮಾನಿಕ್ ಅಂಶವನ್ನು ಹುಡುಕುತ್ತಿದ್ದೆ, ಟ್ಯಾಸಿಟಸ್ ನಲ್ಲಿ ಇರುವ ಹಾಗೆ. ಆದರೆ ಇದು ನನಗೆ ಕಾಣಿಸಿದುದು ಆಮೇಲೆ ಹಳೆ ಇಂಗ್ಲಿಷ್ ನಲ್ಲಿ ಮತ್ತು ಹಳೆ ನೋರ್ಸ್ ನಲ್ಲಿ. ಜರ್ಮನ್ ಸಾಹಿತ್ಯವು ರಮ್ಯ ಹಾಗೂ ರೋಗ ಹಿಡಿದಂತೆ ಕಾಣಿಸಿತು. ಮೊದಲಿಗೆ ನಾನು ಕಾಂಟ್ನ ‘ಎ ಕ್ರಿಟಿಕ್ ಆಫ್ ಪ್ಯೂರ್ ರೀಸನ್’ ಪ್ರಯತ್ನಿಸಿದೆ. ಅದರಿಂದ ಪರಾಜಿತನಾದೆ, ಹತ್ತು ಹಲವಾರು ಜನರು ಆದ ಹಾಗೆಯೇ – ಜರ್ಮನರು ಕೂಡ ಸೇರಿ. ನಂತರ ನನಗನಿಸಿತು ಪದ್ಯ ಹೆಚ್ಚು ಸುಲಭವಾದೀತು ಎಂದು.

(ಶಾಪೆನ್ ಹಾವರ್)

ಹೀಗೆ ನಾನು ಹೈನ್ ನ ಆರಂಭದ ಕವಿತೆಗಳ ಸಂಪುಟವೊಂದನ್ನು ಸಂಪಾದಿಸಿಕೊಂಡೆ, ‘ಲಿರಿಶಸ್ ಇಂಟರ್ ಮೆಝೊ’ ಹಾಗೂ ಒಂದು ಜರ್ಮನ್-ಇಂಗ್ಲಿಷ್ ಪದಕೋಶವನ್ನು ಕೂಡ. ಸ್ವಲ್ಪ ಸ್ವಲ್ಪವೇ ಆಗಿ, ಹೈನ್ ನ ಸರಳ ಪದಗಳ ಕಾರಣ, ಪದಕೋಶದ ಸಹಾಯವಿಲ್ಲದೆಯೇ ಓದಲು ಸಾಧ್ಯವಾಯಿತು. ಬೇಗನೆ ನಾನು ಆ ಭಾಷೆಯ ಚೆಲುವಿಗೆ ದಾರಿ ಕಂಡುಕೊಂಡೆ. ಮೆಯರಿಂಕ್ ನ ‘ದೆರ್ ಗೋಲೆಮ್’ ಕಾದಂಬರಿಯನ್ನೂ ಓದಿದೆ. (1969ರಲ್ಲಿ ನಾನು ಇಸ್ರೇಲಿನಲ್ಲಿದ್ದಾಗ ಗೋಲೆಮ್ ನ ಬೊಹೀಮಿಯನ್ ದಂತಕತೆಯ ಕುರಿತಾಗಿ ಗರ್ಷೋಮ್ ಶೋಲೆಮ್ ರ ಜೊತೆ ಮಾತಾಡಿದೆ, ಯೆಹೂದಿ ಅನುಭಾವಿ ಪರಂಪರೆಯ ಮೇಲಿನ ಒಬ್ಬ ಮುಂಚೂಣಿಯ ವಿದ್ವಾಂಸ ಅವರು, ಗೋಲೆಮ್ ನ ಕುರಿತಾದ ನನ್ನ ಒಂದೇ ಒಂದು ಕವಿತೆಯಲ್ಲಿ ಅವರ ಹೆಸರನ್ನು ನಾನು ಪ್ರಾಸಕ್ಕೋಸ್ಕರ ಅನಿವಾರ್ಯ ಶಬ್ದವಾಗಿ ಎರಡು ಸಲ ಬಳಸಿದ್ದೆ.) ಶಾನ್-ಪಾಲ್ ರಿಕ್ಟರ್ ನಲ್ಲಿ ಆಸಕ್ತಿ ಹೊಂದಲು ನಾನು ಪ್ರಯತ್ನಿಸಿದೆ, ಕಾರ್ಲೈಲ್ ಮತ್ತು ಡಿ ಕ್ವಿನ್ಸಿಯವರಿಗೋಸ್ಕರ – ಇದು 1917ರ ಸುಮಾರಿಗೆ – ಆದರೆ ಆ ಓದು ನನಗೆ ಬೇಸರ ತರಿಸುತ್ತದೆ ಎನ್ನುವುದನ್ನು ಬೇಗನೆ ಕಂಡುಕೊಂಡೆ.

ಇಬ್ಬರು ಬ್ರಿಟಿಷ್ ಪ್ರೋತ್ಸಾಹಕರು ಅವನ ಪರವಾಗಿ ಇದ್ದರೂ, ರಿಕ್ಟರ್ ಉದ್ದುದ್ದ ಸುತ್ತಿ ಬಳಸಿ ಬರೆಯುತ್ತಾನೆ, ಪ್ರಾಯಶಃ ಭಾವತೀವ್ರತೆಯೇ ಇಲ್ಲದ ಲೇಖಕ. ಅಂದರೆ ಹೇಗಿದ್ದರೂ, ನಾನು ಜರ್ಮನ್ ಎಕ್ಸ್ಪ್ರೆಶನಿಸಂನಲ್ಲಿ ತುಂಬಾ ಆಸಕ್ತನಾದೆ ಮತ್ತು ಅದು ಇತರ ಸಮಕಾಲೀನ ಪಂಥಗಳಾದ ಇಮೇಜಿಸಂ, ಕ್ಯೂಬಿಸಂ, ಫ್ಯೂಚರಿಸಂ, ಸರ್ರಿಯಲಿಸಂ, ಮುಂತಾದವುಗಳಿಗಿಂತ ಮಿಕ್ಕಿನದು ಎಂದು ಈಗಲೂ ತಿಳಿದಿದ್ದೇನೆ. ಕೆಲವು ವರ್ಷಗಳ ನಂತರ, ಮ್ಯಾಡ್ರಿಡ್ ನಲ್ಲಿ, ನಾನು ಅನೇಕ ಎಕ್ಸ್ಪ್ರೆಶನಿಸ್ಟ್ ಕವಿಗಳ ಅನುವಾದಗಳನ್ನು ಸ್ಪ್ಯಾನಿಶ್ ಗೆ ಮಾಡಬೇಕಾಯಿತು; ಬಹುಶಃ ಈ ದಿಸೆಯಲ್ಲಿ ಇವೇ ಮೊದಲನೆಯವು ಹಾಗೂ ಇವೇ ಏಕಮಾತ್ರವೂ.

ಸ್ವಿಟ್ಝರ್ಲೆಂಡಿನಲ್ಲಿ ಯಾವುದೋ ಒಂದು ಘಟ್ಟದಲ್ಲಿ ನಾನು ಶಾಪೆನ್ ಹಾವರನ್ನ ಓದಲು ಸುರುಮಾಡಿದೆ. ಈವತ್ತು ನಾನು ಒಬ್ಬ ತತ್ವಜ್ಞಾನಿಯನ್ನು ಆರಿಸಬೇಕಾದರೆ ಅವನನ್ನು ಆರಿಸುವೆ. ಜಗತ್ತಿನ ಒಗಟನ್ನು ಶಬ್ದಗಳಲ್ಲಿ ಹೇಳಬಹುದಾದರೆ, ನನಗನಿಸುತ್ತದೆ ಅಂಥ ಶಬ್ದಗಳು ಅವನ ಬರಹಗಳಲ್ಲಿ ಇರುತ್ತವೆ ಎಂದು. ನಾನವನನ್ನು ಹಲವು ಬಾರಿ ಓದಿದ್ದೇನೆ, ಜರ್ಮನ್ ನಲ್ಲಿ ಮತ್ತು, ನನ್ನ ತಂದೆ ಹಾಗೂ ತಂದೆಯ ಹತ್ತಿರದ ಮಿತ್ರ ಮ್ಯಾಸಿಡೋನಿಯೋ ಫರ್ನಾಂಡೆಸ್ ಜೊತೆ, ಅನುವಾದದಲ್ಲಿ. ನನಗಿನ್ನೂ ಜರ್ಮನ್ ಒಂದು ಸುಂದರವಾದ ಭಾಷೆಯೆನಿಸುತ್ತದೆ – ಬಹುಶಃ ಅದು ನಿರ್ಮಿಸಿದ ಸಾಹಿತ್ಯಕ್ಕಿಂತಲೂ ಹೆಚ್ಚು ಸುಂದರ. ವೈರುಧ್ಯವೆನ್ನುವಂತೆ ಫ್ರೆಂಚ್ ನಲ್ಲಿ ಚೆನ್ನಾದ ಸಾಹಿತ್ಯವಿದೆ, ಅದಕ್ಕೆ ಅನೇಕ ಪಂಥಗಳ ಮತ್ತು ಚಳವಳಿಗಳ ಕುರಿತು ಒಲವಿದ್ದರೂ ಸಹಾ, ಆದರೆ ಸ್ವತಃ ಭಾಷೆ ಮಾತ್ರ ಕುರೂಪಿಯೇ ಎಂದು ನನಗನಿಸುತ್ತದೆ.

ಫ್ರೆಂಚಿನಲ್ಲಿ ನುಡಿದಾಗ ವಿಷಯಗಳು ಕ್ಷುಲ್ಲಕವಾಗಿ ತೋರುತ್ತವೆ. ನಿಜ ಹೇಳಬೇಕೆಂದರೆ, ಫ್ರೆಂಚಿಗೆ ಹೋಲಿಸಿದರೆ ಸ್ಪ್ಯಾನಿಶ್ ಲೇಸೆಂದು ನನಗನಿಸುತ್ತದೆ, ಸ್ಪ್ಯಾನಿಶ್ ಪದಗಳು ಬಹಳ ಲಂಬವೂ ತೊಡಕಿನವೂ ಆಗಿದ್ದರೂ ಸಹ. ಒಬ್ಬ ಅರ್ಜೆಂಟೈನ್ ಲೇಖಕನಾಗಿ ನಾನು ಸ್ಪ್ಯಾನಿಶ್ ಜೊತೆ ಸೆಣಸಾಡಬೇಕು, ಆದ್ದರಿಂದ ನನಗದರ ಕೊರತೆಗಳು ಚೆನ್ನಾಗಿ ಗೊತ್ತಿವೆ. ತಾನು ಜಗತ್ತಿನ ಅತ್ಯಂತ ಕೆಟ್ಟ ಭಾಷೆಯೊಂದಿಗೆ ವ್ಯವಹರಿಸಬೇಕಾಗಿದೆ ಎಂದು ಜರ್ಮನ್ ಬಗ್ಗೆ ಗೆಥೆ ಹೇಳಿದ್ದು ನನಗೆ ನೆನಪಿಗೆ ಬರುತ್ತಿದೆ. ತಾವು ಸೆಣಸಾಡಬೇಕಾದ ಭಾಷೆಯ ಕುರಿತು ಹೆಚ್ಚಿನ ಲೇಖಕರೂ ಈ ರೀತಿ ಯೋಚಿಸುತ್ತಾರೆ ಎಂದೆನಿಸುತ್ತದೆ.

ಇನ್ನು ಇಟಾಲಿಯನ್ ಬಗ್ಗೆ ಹೇಳುವುದಾದರೆ ನಾನು ‘ಡಿವೈನ್ ಕಾಮೆಡಿ’ಯನ್ನು ಒಂದು ಡಜನ್ ಬೇರೆ ಬೇರೆ ಆವೃತ್ತಿಗಳಲ್ಲಿ ಮತ್ತೆ ಮತ್ತೆ ಓದಿದ್ದೇನೆ. ಅರಿಯೋಸ್ಟೋ, ಟಾಸ್ಸೋ, ಕ್ರೋಚೆ, ಜೆಂಟೈಲ್ ಕೂಡಾ ನಾನು ಓದಿದ್ದೇನೆ; ಇಟಾಲಿಯನ್ ಮಾತಾಡುವುದಕ್ಕಾಗಲಿ, ಇಟಾಲಿಯನ್ ನಾಟಕವನ್ನು ಅಥವಾ ಸಿನೆಮವನ್ನು ಅನುಸರಿಸುವುದಕ್ಕಾಗಲಿ ನನ್ನಿಂದ ಆಗುವುದಿಲ್ಲ.

ಜಿನೇವಾದಲ್ಲಿಯೇ ನನಗೆ ಮೊದಲು ಪರಿಚಯವಾದ್ದು ವಾಲ್ಟ್ ವ್ಹಿಟ್ಮನ್ ನನ್ನು, ಯೊಹಾನಸ್ ಶ್ಲಾಫ್ ನ ಒಂದು ಜರ್ಮನ್ ಭಾಷಾಂತರದ ಮೂಲಕ (‘ಅಲ್ಸ್ ಇಖ್ ಇನ್ ಅಲಬಾಮಾ ಮೈನನ್ ಮೋರ್ಗನ್ಗಾಂಗ್ ಮಾಖ್ಟ’ – ‘ಅಲಬಾಮಾದಲ್ಲಿ ನಾನು ನನ್ನ ಮುಂಜಾನೆಯ ವಾಯುಸಂಚಾರ ಮಾಡುತ್ತಿದ್ದಂತೆ’. ಒಬ್ಬ ಅಮೇರಿಕನ್ ಕವಿಯನ್ನು ಜರ್ಮನ್ ನಲ್ಲಿ ಓದುವ ಅಸಂಗತ ನನ್ನ ಮನಸ್ಸಿಗೆ ತಟ್ಟಿತು ನಿಜ, ಆದ್ದರಿಂದ ನಾನು ‘ಲೀವ್ಸ್ ಆಫ್ ಗ್ರಾಸ್’ನ ಒಂದು ಪ್ರತಿಯನ್ನು ಲಂಡನ್ನಿಂದ ತರಿಸಿಕೊಂಡೆ. ಅದು ನನಗಿನ್ನೂ ನೆನಪಿದೆ – ಹಸಿರು ಹೊರಕವಚ. ಸ್ವಲ್ಪ ಕಾಲ ನಾನು ಅಂದುಕೊಂಡೆ, ವ್ಹಿಟ್ಮನ್ ಒಬ್ಬ ಶ್ರೇಷ್ಠ ಕವಿಯಷ್ಟೇ ಅಲ್ಲ, ಅವನೊಬ್ಬನೇ ಕವಿ ಎಂದು. ಅಷ್ಟೇ ಅಲ್ಲ, ನನಗನಿಸಿತ್ತು ಇಡೀ ಜಗತ್ತಿನಲ್ಲಿ 1855ರ ತನಕ ಕವಿಗಳೆಲ್ಲಾ ಅವನಲ್ಲಿಗೆ ಒಯ್ಯುವ ಒಂದು ದಾರಿ ಮಾತ್ರವಾಗಿದ್ದರು, ಮತ್ತು ಅವನನ್ನು ಅನುಸರಿಸದೆ ಇರುವುದು ಅಜ್ಞಾನದ ಒಂದು ಲಕ್ಷಣವಾಗಿತ್ತು, ಎಂದು.. ಇವು ನಾನು ಹಾದು ಬಂದ ಘಟ್ಟಗಳಾಗಿದ್ದವು. ನಂತರ ಯಾವನೊಬ್ಬ ಬರಹಗಾರನ ತಡೆಯಲಸಾಧ್ಯವಾದ ಪ್ರಬಲ ಪ್ರಭಾವಕ್ಕೊಳಗಾಗಿ ಇಂಥದೇ ಅನುಭವಗಳ ಮೂಲಕ ನಾನು ಸಾಗಿ ಬರಬೇಕಾಯಿತು.

1919ರ ತನಕ ನಾವು ಸ್ವಿಟ್ಝರ್ಲೆಂಡಿನಲ್ಲಿ ಇದ್ದೆವು. ಜಿನೇವಾದಲ್ಲಿ ಮೂರು ನಾಲ್ಕು ವರ್ಷ ಕಳೆದು ನಾವು ಒಂದು ವರ್ಷ ಲುಗಾನೋದಲ್ಲಿ ನೆಲಸಿದೆವು. ಆ ಹೊತ್ತಿಗೆ ನನಗೆ ನನ್ನ ಬ್ಯಾಚೆಲರ್ಸ್ ಡಿಗ್ರಿ ದೊರಕಿತ್ತು. ನಾನಿನ್ನು ನನ್ನ ಜೀವನವನ್ನು ಬರಹಕ್ಕೆ ಮೀಸಲಿಡಬೇಕು ಎನ್ನುವುದು ಅರಿವಾಗಿತ್ತು. ಹಸ್ತಪ್ರತಿಗಳನ್ನು ತಂದೆಗೆ ತೋರಿಸಬೇಕೆನ್ನುವುದು ನನ್ನ ಮನಸ್ಸಾಗಿತ್ತು, ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ನನ್ನ ದಾರಿಯನ್ನು ನಾನೇ ಸೋಲು ಗೆಲುವಿನ ಮೂಲಕ ಕಂಡುಕೊಳ್ಳಬೇಕೆಂದು ಅವರು ಹೇಳಿದರು. ನಾನು ಇಂಗ್ಲಿಷ್ ಮತ್ತು ಫ್ರೆಂಚಿನಲ್ಲಿ ಸುನೀತಗಳನ್ನು ಬರೆಯುತ್ತಿದ್ದೆ. ಇಂಗ್ಲಿಷ್ ಸುನೀತಗಳು ವರ್ಡ್ಸ್ ವರ್ತ್ ನ ಕೆಟ್ಟ ಅನುಕರಣೆಗಳಾಗಿದ್ದುವು; ಫ್ರೆಂಚ್ ಸುನೀತಗಳು ತಳಿ ನೀರಿನ ಹಾಗಿದ್ದು, ಸಿಂಬಲಿಸ್ಟ್ ಕವಿತೆಗಳ ಅನುಕರಣೆಗಳಾಗಿದ್ದುವು. ನನ್ನ ಫ್ರೆಂಚ್ ಪ್ರಯೋಗದ ಒಂದು ಸಾಲು ನನಗಿನ್ನೂ ನೆನಪಿದೆ: ‘ಪೆತೀತ್ ಬ್ವಾತೆ ನ್ವಾರ್ ಪೂರ್ ಲ ವಿಯಲೊಂ ಕಾಸೆ.’ ಇಡೀ ಕವಿತೆಯ ಹೆಸರು ‘ಪೊಯೆಮ್ ಪೂರ್ ಏತ್ರ್ ರೆಸಿತೆ ಅವೆಕ್ ಅನ್ ಆಕ್ಸೆಂತ್ ರುಸ್ಸ್.’ ನಾನು ವಿದೇಶೀ ಒತ್ತಿನಲ್ಲಿ ಬರೆದಿದ್ದೆ ಎಂದು ನನಗೆ ಗೊತ್ತಿದ್ದ ಕಾರಣ, ಅರ್ಜೆಂಟೈನ್ ಒತ್ತಿಗಿಂತ ರಶ್ಯನ್ ಒತ್ತು ಚೆನ್ನಾಗಿರುತ್ತದೆ ಎಂದು ಯೋಚಿಸಿದೆ. ನನ್ನ ಇಂಗ್ಲಿಷ್ ಪ್ರಯೋಗಗಳಲ್ಲಿ ನಾನು ಕೆಲವು ಹದಿನೆಂಟನೆ ಶತಮಾನದ ಚರ್ಯೆಗಳನ್ನು ನಟಿಸಿದೆ, ಉದಾಹರಣೆಗೆ, over ಗೆ ಬದಲು o’er ಎಂದು ಬರೆಯುವುದು, ಹಾಗೆಯೇ ಛಂದಸ್ಸಿನ ಸೌಲಭ್ಯಕ್ಕೆಂದು sings ಎಂಬುದನ್ನು doth sing ಎಂದು ಹೇಳುವುದು ಇತ್ಯಾದಿ. ಆದರೆ ನನಗೆ ಗೊತ್ತಿತ್ತು ಸ್ಪ್ಯಾನಿಶ್ ನನ್ನ ಅನಿವಾರ್ಯ ವಿಧಿ ಎನ್ನುವುದು.

ನಾನೊಬ್ಬ ಒಳ್ಳೇ ಲ್ಯಾಟಿನ್ ವಿದ್ವಾಂಸನಾದೆ, ಆದರೆ ನನ್ನ ಹೆಚ್ಚಿನ ಖಾಸಗಿ ಓದು ಇಂಗ್ಲಿಷ್ ನಲ್ಲಿ ಇತ್ತು. ಮನೆಯಲ್ಲಿ ನಾವು ಸ್ಪ್ಯಾನಿಶ್ ಮಾತಾಡುತ್ತಿದ್ದೆವು, ಆದರೆ ತಂಗಿಯ ಫ್ರೆಂಚ್ ಬಹು ಬೇಗನೆ ಎಷ್ಟು ಚೆನ್ನಾಯಿತು ಎಂದರೆ ಅವಳು ಅದರಲ್ಲೇ ಕನಸು ಕಾಣುತ್ತಿದ್ದಳು ಕೂಡ!

ನಾವು ಊರಿಗೆ ಹೋಗಲು ತೀರ್ಮಾನಿಸಿದೆವು, ಆದರೆ ಅದಕ್ಕೂ ಮುನ್ನ ಸ್ಪೇನಿನಲ್ಲಿ ಒಂದು ವರ್ಷದಷ್ಟು ಕಳೆಯುವುದು ಎಂದಾಯಿತು. ಅರ್ಜೆಂಟೀನಿಯರು ಆ ಕಾಲದಲ್ಲಿ ನಿದನಿಧಾನವಾಗಿ ಸ್ಪೇನನ್ನು ಕಂಡುಕೊಳ್ಳುತ್ತಿದ್ದರು. ಅಲ್ಲಿ ತನಕ, ಪ್ರಸಿದ್ಧ ಲೇಖಕರಾದ ಲಿಯೋಪೋಲ್ಡೋ ಲುಗೋಸ್ ಮತ್ತು ರಿಕಾರ್ಡೋ ಗಿರಾಲ್ಡಿಸ್ ಕೂಡ ತಮ್ಮ ಯುರೋಪಿಯನ್ ಪ್ರವಾಸಗಳಿಂದ ಸ್ಪೇನನ್ನು ಬೇಕಂತಲೇ ಕೈಬಿಟ್ಟಿದ್ದರು. ಇದೊಂದು ಖಯಾಲಿಯಿಂದ ಆಗಿರಲಿಲ್ಲ; ಬ್ಯೂನೋಸ್ ಏರಿಸ್ ನಲ್ಲಿ ಸ್ಪೇನಿಯಾರ್ಡರು ಯಾವಾಗಲೂ ಕೆಳಸ್ತರದ ಕೈಗೆಲಸ ಮಾಡುವವರಾಗಿದ್ದರು – ಮನೆಗೆಲಸದವರು, ಹೋಟೇಲ್ ಮಾಣಿಗಳು, ಕೂಲಿಗಳು ಮುಂತಾಗಿ – ಇಲ್ಲವೇ ಸಣ್ಣ ಸಣ್ಣ ವ್ಯಾಪಾರಿಗಳು, ಮತ್ತು ನಾವು ಅರ್ಜೆಂಟೈನರು ನಮ್ಮನ್ನೆಂದೂ ಸ್ಪ್ಯಾನಿಶರಾಗಿ ತೆಗೆದುಕೊಂಡಿರಲಿಲ್ಲ.

1816ರಲ್ಲಿ ಸ್ಪೇನಿನಿಂದ ಬಿಡುಗಡೆ ಘೋಷಿಸಿದಾಗ, ನಾವು ಸ್ಪ್ಯಾನಿಯಾರ್ಡ್ಸ್ ಎಂಬುದನ್ನು ನಿಜಕ್ಕೂ ಬಿಟ್ಟು ಬಿಟ್ಟಿದ್ದೆವು. ನಾನು ಹುಡುಗನಾಗಿದ್ದಾಗ, ಪ್ರೆಸ್ಕಾಟ್ ಬರೆದ ‘ಡಿಸ್ಕವರಿ ಆಫ್ ಪೆರು’ ವನ್ನು ಓದಿದ್ದೆ; ಆತ ಈ ಆಕ್ರಮಿಗಳನ್ನು (ಕಾಂಕ್ವಿಸ್ಟಡೋರ್ಸ್) ರಮ್ಯವಾಗಿ ಚಿತ್ರಿಸಿರುವುದನ್ನು ಕಂಡು ನಾನು ಚಕಿತನಾಗಿದ್ದೆ. ಈ ಕೆಲವು ಅಧಿಕಾರಿಗಳಿಂದ ಜನ್ಮಕ್ಕೆ ಬಂದ ನನಗೆ ಅವರದೊಂದು ಸ್ವಾರಸ್ಯಹೀನ ಪಂಗಡವಾಗಿ ಕಾಣಿಸಿತ್ತು. ಆದರೆ ಫ್ರೆಂಚ್ ಕಣ್ಣುಗಳ ಮೂಲಕ, ಲ್ಯಾಟಿನ್ ಅಮೇರಿಕನ್ನರು ಸ್ಪ್ಯಾನಿಯಾರ್ಡರನ್ನು ಚಿತ್ರವತ್ತಾಗಿ ಕಂಡರು, ಗಾರ್ಸಿಯಾ ಲೋರ್ಕಾನ ಸ್ಥಿರ ಸರಕುಗಳಲ್ಲಿ ಯೋಚಿಸಿಕೊಂಡು – ಜಿಪ್ಸಿಗಳು, ಗೂಳಿಕಾಳಗಗಳು, ಮೂರಿಶ್ ವಾಸ್ತುಗಳು ಮುಂತಾಗಿ. ಸ್ಪ್ಯಾನಿಶ್ ನಮ್ಮ ಭಾಷೆಯಾಗಿದ್ದು, ನಾವು ಹೆಚ್ಚಾಗಿ ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ರಕ್ತದಿಂದ ಬಂದವರಾದರೂ, ನಮ್ಮ ಕುಟುಂಬ ಎಂದೂ ನಾವು ಮೂರು ಶತಮಾನಗಳ ಅನುಪಸ್ಥಿತಿಯ ನಂತರ ಸ್ಪೇನಿಗೆ ಮರಳುತ್ತಿದ್ದೇವೆ ಎಂಬ ರೀತಿಯಲ್ಲಿ ಯೋಚಿಸಿರಲಿಲ್ಲ.

ನಾವು ಮಯೋರ್ಕಾಕ್ಕೆ ಹೋದೆವು, ಅದು ಸೋವಿಯಾಗಿತ್ತು, ಸುಂದರವಾಗಿತ್ತು, ಮತ್ತು ನಾವಲ್ಲದೆ ಹೆಚ್ಚು ಪ್ರವಾಸಿಗರೂ ಇರಲಿಲ್ಲ. ಸರಿಸುಮಾರು ಒಂದು ಇಡೀ ವರ್ಷ ನಾವಲ್ಲಿ ಇದ್ದೆವು, ಪಾಲ್ಮಾದಲ್ಲಿ ಮತ್ತು ವಲ್ಡ್ಮೋಸಾದಲ್ಲಿ, ಬೆಟ್ಟದ ಮೇಲಿನ ಅತಿ ಎತ್ತರದ ಒಂದು ಹಳ್ಳಿಯಲ್ಲಿ. ನಾನು ಲ್ಯಾಟಿನ್ ಅಭ್ಯಾಸ ಮಾಡುತ್ತಲೇ ಇದ್ದೆ, ಈ ಸಲ ಒಬ್ಬ ಪಾದರಿಯ ಕೈಕೆಳಗೆ; ತನಗೆ ಸ್ವಾಂತವಾದ್ದು ತನ್ನ ಅಗತ್ಯಗಳಿಗೆ ಸಾಕಾದ ಕಾರಣ ತಾನು ಕಾದಂಬರಿ ಓದುವುದಕ್ಕೆ ಎಂದೂ ಪ್ರಯತ್ನಿಸಲಿಲ್ಲ ಎಂದು ಆತ ನನಗೆ ಹೇಳಿದ. ನಾವು ವರ್ಜಿಲನ್ನ ಓದಿದೆವು; ವರ್ಜಿಲ್ ನ ನಾನು ಈಗಲೂ ಉನ್ನತವಾಗಿ ಪರಿಗಣಿಸುತ್ತೇನೆ. ನನ್ನ ಈಜಿನ ಕುಶಲತೆಯಿಂದ ನಾನು ಊರವರನ್ನು ಚಕಿತಗೊಳಿಸಿದೆ, ಯಾಕೆಂದರೆ ನಾನು ಒಯಿಲಿರುವ ಉರುಗ್ವೆ, ರ್ಹೋನ್ ಮುಂತಾದ ನದಿಗಳಲ್ಲಿ ಕಲಿತಿದ್ದೆ, ಮಯೋರ್ಕನ್ನರಿಗೆ ಅಭ್ಯಾಸವಿದ್ದುದು ತೆರೆಗಳಿಲ್ಲದ ಶಾಂತ ಸಮುದ್ರ.

ನನ್ನ ತಂದೆ ಒಂದು ಕಾದಂಬರಿ ಬರೆಯುತ್ತಿದ್ದರು, ಅದು ಅವರ ಹುಟ್ಟೂರಾದ ಆಂತ್ರೆ ರಿಯೋಸ್ ನಲ್ಲಿ 1870ರಲ್ಲಿ ನಡೆದ ಅಂತರ್ಯುದ್ಧದ ಹಳೆಗಾಲದ ಕುರಿತು ಹಿನ್ನೋಟ ಹರಿಸಿತ್ತು. ತಂದೆಗೆ ನಾನು ಜರ್ಮನ್ ಎಕ್ಸ್ಪ್ರೆಶನಿಸ್ಟರಿಂದ ಕಡ ಪಡೆದ ಕೆಲವು ಕೆಟ್ಟ ರೂಪಕಗಳನ್ನಿತ್ತುದು ನನ್ನ ನೆನಪಿಗೆ ಬರುತ್ತದೆ, ಅವರು ಅವುಗಳನ್ನು ಕೈ ಚೆಲ್ಲಿ ಸ್ವೀಕರಿಸಿಕೊಂಡರು. ಪುಸ್ತಕದ ಐನೂರು ಪ್ರತಿಗಳನ್ನು ಮುದ್ರಿಸಲಾಯಿತು, ಅವುಗಳನ್ನು ಅವರು ತಮ್ಮೊಂದಿಗೆ ಬ್ಯೂನೋಸ್ ಏರಿಸ್ ಗೂ ತಂದರು, ಅಲ್ಲಿ ಪ್ರತಿಗಳನ್ನು ಮಿತ್ರರಿಗೆ ಹಂಚಿದರು. ಪರಾಮಾ ಎಂಬ ಪದ ಹಸ್ತಪ್ರತಿಯಲ್ಲಿ ಬಂದಾಗಲೆಲ್ಲಾ – ಅದು ಅವರು ಜನಿಸಿದ ಪಟ್ಟಣ – ಮುದ್ರಕರು ಅದನ್ನು ‘ಪನಾಮಾ’ ಎಂದು ಬದಲಾಯಿಸುತ್ತಿದ್ದರು, ತಾವು ತಪ್ಪೊಂದನ್ನು ತಿದ್ದುತ್ತಿದ್ದೇವೆ ಎಂದುಕೊಂಡು. ಅವರಿಗೆ ತೊಂದರೆ ಕೊಡಬಾರದು, ಅಲ್ಲದೆ ‘ಪನಾಮಾ’ ಹೆಚ್ಚು ತಮಾಷೆಯಾಗಿರುತ್ತದೆ ಎಂದುಕೊಂಡು ತಂದೆ ಅದರ ಗೊಡವೆಗೆ ಹೋಗಲಿಲ್ಲ. ಈಗ ನನಗೆ ಪಶ್ಚಾತ್ತಾಪವಾಗುತ್ತದೆ, ತಂದೆಯ ಪುಸ್ತಕದಲ್ಲಿ ನಾನು ಮಾಡಿದ ನನ್ನ ಬಾಲಿಶ ಉತ್ಸಾಹದ ಹಸ್ತಕ್ಷೇಪಗಳಿಗಾಗಿ. ಹದಿನೇಳು ವರ್ಷಗಳ ನಂತರ, ಅವರು ಸಾಯುವುದಕ್ಕೆ ಸ್ವಲ್ಪ ಮೊದಲು, ಆ ಕಾದಂಬರಿಯನ್ನು ನೇರ ರೀತಿಯಲ್ಲಿ, ಎಲ್ಲಾ ಚೆಲುವಿನ ಬರಹವನ್ನೂ ಥಳ ಥಳಿಸುವ ಸಾಲುಗಳನ್ನೂ ಕಿತ್ತು ಹಾಕಿ, ನಾನು ಮತ್ತೆ ಬರೆಯಲು ತಾವು ಬಹಳವಾಗಿ ಬಯಸುವುದಾಗಿ ಅವರು ನನಗೆ ಹೇಳಿದರು. ಆ ಕಾಲದಲ್ಲಿ ಸ್ವತಃ ನಾನು ಜನಪದ ದಂತಕತೆಯ ಮಾಯಾರೂಪಿ ತೋಳದ ಬಗ್ಗೆ ಬರೆದು ಮ್ಯಾಡ್ರಿಡ್ ನ ಜನಪ್ರಿಯ ಪತ್ರಿಕೆ ‘ಲಾ ಎಸ್ಫೆರಾ’ಕ್ಕೆ ಕಳಿಸಿದೆ. ಅದರ ಸಂಪಾದಕರು ಬಹಳ ಸರಿಯಾಗಿಯೇ ಅದನ್ನು ಪ್ರಕಟಿಸಲು ನಿರಾಕರಿಸಿದರು.

1919-20ರ ಚಳಿಗಾಲವನ್ನು ನಾವು ಸೆವೀಲ್ನಲ್ಲಿ ಕಳೆದೆವು, ನನ್ನ ಕವಿತೆಯ ಮೊದಲ ಮುದ್ರಣವನ್ನು ನಾನು ಕಂಡುದು ಅಲ್ಲಿಯೇ. ಅದರ ಹೆಸರು ‘ಹಿಮ್ನ್ ಟು ದ ಸೀ’ ಎಂಬುದಾಗಿತ್ತು. ‘ಗ್ರೇಶಿಯಾ’ ಪತ್ರಿಕೆಯ ಡಿಸೆಂಬರ್ 31, 1919ರ ಸಂಚಿಕೆಯಲ್ಲಿ ಅದು ಪ್ರಕಟವಾಯಿತು. ಆ ಕವಿತೆಯಲ್ಲಿ ನಾನು ವಾಲ್ಟ್ ವ್ಹಿಟ್ಮನ್ ಆಗಲು ಸಾಕಷ್ಟು ಶ್ರಮಿಸಿದೆ.

ಓ ಸಮುದ್ರವೇ! ಓ ಪುರಾಣವೇ! ಓ ಸೂರ್ಯನೇ! ಓ ವಿಶಾಲ ವಿಶ್ರಾಂತಿ ಸ್ಥಳವೇ!
ನಿನ್ನನ್ನು ನಾನು ಯಾಕೆ ಪ್ರೀತಿಸುತ್ತೇನೆಂದು ನನಗೆ ಗೊತ್ತಿದೆ, ನಾವಿಬ್ಬರೂ ಹಳಬರನ್ನುವುದು ಗೊತ್ತಿದೆ,
ನಾವು ಪರಸ್ಪರ ಶತಮಾನಗಳಿಂದ ಬಲ್ಲೆವು….
ಓ ಬಹುರೂಪಿ, ನಾನು ನಿನ್ನಿಂದಲೇ ಹುಟ್ಟಿದೆ –
ನಾವಿಬ್ಬರೂ ಸಂಕಲೆಯಲ್ಲಿ ಮತ್ತು ಅಲೆಯುತ್ತ,
ನಾವಿಬ್ಬರೂ ನಕ್ಷತ್ರಗಳ ಬಯಸುತ್ತ,
ನಾವಿಬ್ಬರೂ ಆಸೆಯೊಂದಿಗೆ ಮತ್ತು ಹತಾಶೆಯೊಂದಿಗೆ … !

ಈವತ್ತು ನಾನು ಸಮುದ್ರದ ಕುರಿತು ಯೋಚಿಸುವುದೇ ಅಪರೂಪ, ಅಥವಾ ನನ್ನ ಬಗ್ಗೆ, ಅಥವಾ ನಕ್ಷತ್ರಗಳ ಬಯಸುವುದು. ವರ್ಷಗಳ ನಂತರ ನನಗೆ ಅರ್ನಾಲ್ಡ್ ಬೆನೆಟ್ ನ ಪದಗುಚ್ಛ ‘ಮೂರನೇ ದರ್ಜೆಯ ವಿಜೃಂಭಣೆ’ ಸಿಕ್ಕಿದಾಗ, ಅವನು ಏನು ಉದ್ದೇಶಿಸಿದ್ದನೆನ್ನುವುದು ಥಟ್ಟನೆ ಅರಿವಿಗೆ ಬಂತು. ಆದರೂ ಕೆಲವು ತಿಂಗಳುಗಳ ನಂತರ ನಾನು ಮ್ಯಾಡ್ರಿಡ್ ಗೆ ಬಂದಾಗ, ಇದೇ ನಾನು ಅದು ವರೆಗೆ ಪ್ರಕಟಿಸಿದ ಏಕೈಕ ಕವಿತೆಯಾದ ಕಾರಣ, ಜನ ನನ್ನನ್ನು ಸಮುದ್ರ ಗೀತಕಾರನೆಂದು ತಿಳಿದರು.

ಸೆವಿಲ್ ನಲ್ಲಿ ನಾನು ‘ಗ್ರೇಶಿಯಾ’ದ ಸುತ್ತ ಸೇರಿದ ಸಾಹಿತ್ಯ ಬಳಗಕ್ಕೆ ಶಾಮೀಲಾದೆ. ತಮ್ಮನ್ನು ‘ಅಲ್ಟ್ರಾಯಿಸ್ಟರು’ ಎಂದು ಕರೆದುಕೊಳ್ಳುತ್ತಿದ್ದ ಆ ಬಳಗ ಹೊಸ ಸಾಹಿತ್ಯದ ನವೀಕರಣಕ್ಕೆ ಹೊರಟಿತ್ತು, ಕಲೆಗಳ ಒಂದು ಶಾಖೆಯಾದ ಸಾಹಿತ್ಯವೆಂದರೆ ಏನೆನ್ನುವುದು ಮಾತ್ರ ಅವರಿಗೆ ಕಿಂಚಿತ್ತೂ ಗೊತ್ತಿರಲಿಲ್ಲ. ಅವರಲ್ಲೊಬ್ಬರು ಒಮ್ಮೆ ನನಗಂದರು, ತನ್ನ ಇಡೀ ಓದು ಬೈಬ್ಲ್, ಸರ್ವಾಂಟಿಸ್, ಡರಿಯೋ, ಮತ್ತು ಖ್ಯಾತ ಸಾಹಿತಿ ರಫೇಲ್ ಕಾನ್ಸಿನೋಸ್-ಅಸೆನ್ಸ್ ನ ಒಂದೋ ಎರಡೋ ಕೃತಿಗಳಿಗೆ ಸೀಮಿತ ಎಂಬುದಾಗಿ. ಅವರಿಗೆ ಒಂದು ಚೂರೂ ಫ್ರೆಂಚ್ ಬರುತ್ತಿರಲಿಲ್ಲ, ಇಂಗ್ಲಿಷ್ ಸಾಹಿತ್ಯ ಎಂಬ ಸಂಗತಿಯೊಂದು ಇದೆ ಎನ್ನುವುದರ ಕುರಿತು ಯಾವ ಸುಳಿವೂ ಇರಲಿಲ್ಲ ಎನ್ನುವುದು ನನ್ನ ಅರ್ಜೆಂಟೈನ್ ಮನಸ್ಸನ್ನು ತಬ್ಬಿಬ್ಬುಗೊಳಿಸಿತು. ನನ್ನನ್ನೊಬ್ಬ ಪ್ರತಿಷ್ಠಿತ ವ್ಯಕ್ತಿಗೆ ಪರಿಚಯಮಾಡಿಕೊಡಲಾಯಿತು, ಅವನು ‘ಹ್ಯೂಮನಿಸ್ಟ್’ ಎಂದು ಜನಪ್ರಿಯನಾಗಿದ್ದ, ಆದರೆ ಆತನ ಲ್ಯಾಟಿನ್ ವಿದ್ವತ್ತು ನನಗಿಂತಲು ಕಡಿಮೆ ಎಂಬುದನ್ನು ನಾನು ಬೇಗನೆ ಕಂಡುಕೊಂಡೆ. ಇನ್ನು ‘ಗ್ರೇಶಿಯಾ’ ಕುರಿತು ಹೇಳುವುದಾದರೆ, ಅದರ ಸಂಪಾದಕ ಐಸಾಕ್ ಡೆಲ್ ವಾಂಡೋ ವಿಲ್ಲಾರ್ ನ ಒಟ್ಟು ಕವಿತೆಗಳು ಅವನ ಒಬ್ಬನಲ್ಲದಿದ್ದರೆ ಇನ್ನೊಬ್ಬ ಸಹಾಯಕರಿಂದ ಬರೆಯಲ್ಪಟ್ಟಿದ್ದುವು. ಅವರಲ್ಲೊಬ್ಬ ಒಮ್ಮೆ ಹೇಳುವುದನ್ನು ನಾನು ಕೇಳಿದೆ, ‘ನನಗೆ ಪುರುಸೊತ್ತಿಲ್ಲ, ಐಸಾಕ್ ಒಂದು ಕವಿತೆ ಬರೆಯುತ್ತಿದ್ದಾರೆ.’

(ವಾಲ್ಟ್ ವ್ಹಿಟ್ಮನ್ )

ಮುಂದೆ ನಾವು ಮ್ಯಾಡ್ರಿಡ್ ಗೆ ಹೋದೆವು. ಅಲ್ಲಿ ನನ್ನ ಜೀವನದಲ್ಲಾದ ಮಹತ್ವದ ಘಟನೆಯೆಂದರೆ ರಫೇಲ್ ಕಾನ್ಸಿನೋಸ್-ಅಸೆನ್ಸ್ ನ ಜತೆಗಿನ ಗೆಳೆತನ. ನಾನವನ ಶಿಷ್ಯನೆಂದು ತಿಳಿದುಕೊಳ್ಳಲು ಈಗಲೂ ಬಯಸುತ್ತೇನೆ. ಆತ ಸೆವಿಲ್ ನಿಂದ ಬಂದಿದ್ದ, ಅಲ್ಲಿ ಅವನು ಪಾದರಿಯಾಗಲು ಕಲಿತವನು, ಆದರೆ ಇಂಕ್ವಿಸಿಶನ್ ನ ಆರ್ಕೈವ್ಸ್ ನಲ್ಲಿ ಕಾನ್ಸಿನೋಸ್ ಎಂಬ ಹೆಸರನ್ನ ಕಂಡು, ತಾನೊಬ್ಬ ಯೆಹೂದಿಯೆಂದು ಅವನು ತೀರ್ಮಾನಿಸಿದ. ಇದು ಅವನನ್ನು ಹೀಬ್ರೂ ಕಲಿಯಲು ಹಚ್ಚಿತು, ನಂತರ ಅವನು ಮುಂದೊಗಲು ಖತನವನ್ನೂ (ಸರ್ಕಮ್ಸಿಶನ್) ಮಾಡಿಸಿಕೊಂಡ. ಆಂಡಲೂಸಿಯಾದ ಬರಹಗಾರ ಮಿತ್ರರು ನನ್ನನ್ನು ಅವನ ಭೇಟಿಗೆ ಕರೆದೊಯ್ದರು. ಅವನು ಸಮುದ್ರದ ಬಗ್ಗೆ ಬರೆದ ಕವಿತೆಯೊಂದಕ್ಕೆ ನಾನವನಿಗೆ ಅಳುಕುತ್ತ ಅಭಿನಂದನೆ ಹೇಳಿದೆ. ‘ಹೌದು,’ ಎಂದ ಅವನು, ‘ಅದನ್ನು ನಾನು ಸಾಯುವ ಮೊದಲು ನೋಡಲು ಅದೆಷ್ಟು ಕಾತರಿಸುತ್ತೇನೆ!’ ಅವನೊಬ್ಬ ಎತ್ತರದ ಮನುಷ್ಯನಾಗಿದ್ದ, ಎಲ್ಲಾ ಆಂಡಲೂಸಿಯನರಂತೆ ಅವನಿಗೂ ಕಾಸ್ಟೀಲಿಯನ್ ವಸ್ತುಗಳ ಬಗ್ಗೆ ತಿರಸ್ಕಾರವಿತ್ತು. ಕಾನ್ಸಿನೋಸ್ ನಲ್ಲಿನ ಅತ್ಯಂತ ಗಮನಾರ್ಹ ಸಂಗತಿಯೆಂದರೆ, ಅವನು ಪೂರ್ತಿಯಾಗಿ ಸಾಹಿತ್ಯಕ್ಕಾಗಿ ಜೀವಿಸುತ್ತಿದ್ದ ಎನ್ನುವುದು, ಹಣಕ್ಕಾಗಲಿ ಕೀರ್ತಿಗಾಗಲಿ ತಲೆಕೆಡಿಸಿಕೊಳ್ಳದೆ. ಅವನೊಬ್ಬ ಒಳ್ಳೇ ಕವಿಯಾಗಿದ್ದ, ಪ್ರಾರ್ಥನಾ ಗೀತೆಗಳ (ಸಾಮ್ಸ್) ಪುಸ್ತಕವೊಂದನ್ನು ಬರೆದಿದ್ದ, ಹೆಚ್ಚಿನವೂ ಕಾಮಪ್ರಚೋದಕ. ‘ಎಲ್ ಕಾಂಡಲೆಬ್ರೋ ದ ಲೋಸ್ ಸಿಯತೆ ಬ್ರಾಝೋಸ್’ ಎಂದು ಹೆಸರು. 1915ರಲ್ಲಿ ಪ್ರಕಟಗೊಂಡಿತ್ತು. ಅವನು ಕಾದಂಬರಿಗಳನ್ನು, ಕತೆಗಳನ್ನು ಮತ್ತು ಪ್ರಬಂಧಗಳನ್ನು ಕೂಡ ಬರೆದಿದ್ದ, ಮತ್ತು ನನಗವನ ಪರಿಚಯವಾದಾಗ ಸಾಹಿತ್ಯಿಕ ವರ್ತುಲವೊಂದರ ಅಧ್ಯಕ್ಷತೆ ವಹಿಸಿದ್ದ.

ಪ್ರತಿ ಶನಿವಾರ ನಾನು ಕೆಫೆ ಕೊಲೋನಿಯಲ್ ಗೆ ಹೋಗುತ್ತಿದ್ದೆ. ಅಲ್ಲಿ ನಾವು ಮಧ್ಯರಾತ್ರಿಯ ಸುಮಾರಿಗೆ ಒಟ್ಟು ಸೇರುತ್ತಿದ್ದೆವು, ನಮ್ಮ ಮಾತುಕತೆ ಮರುದಿನ ಮುಂಜಾನೆಯ ತನಕ ಸಾಗುತ್ತಿತ್ತು. ಕೆಲವೊಮ್ಮೆ ಅಲ್ಲಿ ನಾವು ಇಪ್ಪತ್ತು ಮೂವತ್ತರಷ್ಟು ಜನ ಇರುತ್ತಿದ್ದೆವು. ನಮ್ಮ ಗುಂಪು ಎಲ್ಲಾ ಸ್ಪ್ಯಾನಿಶ್ ಸ್ಥಳೀಯ ಬಣ್ಣಗಳನ್ನೂ ದ್ವೇಷಿಸುತ್ತಿತ್ತು – ಕಾಂಟೆ ಹೋಂಡೋ (‘ಆಳ ಸಂಗೀತ’, ಒಂದು ತರದ ಆಂಡಲೂಸಿಯನ್ ಜನಪದ ಶೈಲಿಯ ಸಂಗೀತ) ಮತ್ತು ಗೂಳಿ ಕಾಳಗಗಳನ್ನು. ನಮ್ಮ ಗುಂಪಿನವರು ಅಮೇರಿಕನ್ ಜಾಸ್ಸ್ ಅನ್ನು ಮೆಚ್ಚುತ್ತಿದ್ದರು, ಮತ್ತು ಸ್ಪ್ಯಾನಿಯಾರ್ಡ್ಸ್ ಆಗಿರುವುದಕ್ಕಿಂತ ಯುರೋಪಿಯನ್ಸ್ ಆಗಿರಲು ಹೆಚ್ಚು ಇಷ್ಟಪಡುತ್ತಿದ್ದರು. ಕಾನ್ಸಿನೋಸ್ ಯಾವುದಾದರೊಂದು ವಿಷಯ ಎತ್ತಿಡುತ್ತಿದ್ದ – ರೂಪಕ, ಮುಕ್ತಛಂದ, ಕವಿತೆಯ ಹಳೆ ಮಾದರಿಗಳು, ಕಥನ ಕವನಗಳು, ವಿಶೇಷಣ ಪದ, ಕ್ರಿಯಾಪದ. ಅವನದೇ ಆದ ತಣ್ಣಗಿನ ರೀತಿಯಲ್ಲಿ ಅವನೊಬ್ಬ ಸರ್ವಾಧಿಕಾರಿಯೂ ಆಗಿದ್ದ, ಸಮಕಾಲೀನ ಲೇಖಕರ ಕುರಿತು ಯಾವುದೇ ಅಪ್ರಿಯ ಉಲ್ಲೇಖಗಳನ್ನು ಸಮ್ಮತಿಸದೆ, ಚರ್ಚೆಯನ್ನು ಉನ್ನತ ಮಟ್ಟದಲ್ಲಿ ಇರಗೊಡಿಸಲು ಯತ್ನಿಸುತ್ತ ಇದ್ದ.

ಕಾನ್ಸಿನೋಸ್ ಒಬ್ಬ ವಿಶಾಲ ಓದುಗನಾಗಿದ್ದ. ಅವನು ಡಿ ಕ್ವಿನ್ಸಿಯ ‘ಓಪಿಯಮ್-ಈಟರ್’ನ್ನ, ಗ್ರೀಕಿನಿಂದ ‘ಮೆಡಿಟೇಶನ್ಸ್ ಆಫ್ ಮಾರ್ಕಸ್ ಔರೀಲಿಯಸ್’ನ್ನ, ಬಾರ್ಬೂಸನ ಕಾದಂಬರಿಗಳನ್ನ ಮತ್ತು ಶ್ವೋಬ್ ನ ‘ವಿಯೆಸ್ ಇಮ್ಯಾಜಿನೇರ್ಸ್’ನ್ನ ಅನುವಾದಿಸಿದ್ದ. ಮುಂದೆ ಅವನು ಗೆಥೆ ಮತ್ತು ದೋಸ್ತೊವ್ಸ್ಕಿ ಯನ್ನು ಅನುವಾದಿಸುವವನಿದ್ದ. ಅರೇಬಿಯನ್ ನೈಟ್ಸ್ ನ ಮೊತ್ತ ಮೊದಲ ಸ್ಪ್ಯಾನಿಶ್ ರೂಪವನ್ನು ತಂದವನೂ ಅವನೇ, ಬರ್ಟನ್ ನ ಅಥವಾ ಲೇನ್ ನ ಆವೃತ್ತಿಗಳಿಗೆ ಹೋಲಿಸಿದರೆ ಅದು ಹೆಚ್ಚು ಮುಕ್ತವಾಗಿತ್ತು, ಆದರೆ ಬದಲಿಗೆ ಹೆಚ್ಚು ಓದಿನ ಖುಷಿಯನ್ನು ಕೊಡುತ್ತದೆ ಎಂದು ನನ್ನ ನಂಬಿಕೆ.

ಒಮ್ಮೆ ನಾನವನನ್ನು ನೋಡಲು ಹೋದೆ, ಅವನು ನನ್ನನ್ನು ತನ್ನ ಗ್ರಂಥಾಲಯದೊಳಕ್ಕೆ ಕರೆದೊಯ್ದ, ಅಥವಾ ಅವನ ಇಡೀ ಮನೆಯೇ ಅವನ ಗ್ರಂಥಾಲಯವಾಗಿತ್ತು ಎಂದು ಹೇಳಬೇಕು ನಾನು. ಕಾಡಿನೊಳಗೆ ದಾರಿ ಮಾಡಿಕೊಂಡಂತೆ ಅಲ್ಲಿ ಹೋಗಬೇಕಾಗಿತ್ತು. ಶೆಲ್ಫುಗಳನ್ನು ಕೊಂಡುಕೊಳ್ಳುವುದಕ್ಕೆ ಅವನಲ್ಲಿ ಹಣವಿರಲಿಲ್ಲ. ಪುಸ್ತಕಗಳನ್ನು ಒಂದರ ಮೇಲೆ ಒಂದರಂತೆ ನೆಲದಿಂದ ಮಾಡಿನವರೆಗೆ ಪೇರಿಸಲಾಗಿತ್ತು, ಆ ಲಂಬದ ಕಂಭಗಳ ನಡುವೆ ನೀವು ಸುತ್ತು ಬಳಸಿ ನಡೆಯಬೇಕಿತ್ತಲ್ಲದೆ ಬೇರೆ ಮಾರ್ಗವಿರಲಿಲ್ಲ. ಕಾನ್ಸಿನೋಸ್ ನನಗೆ ಕಾಣಿಸಿದ್ದು ನಾನು ಯಾವ ಯುರೋಪನ್ನು ಹಿಂದಕ್ಕೆ ಬಿಡಬೇಕೆಂದಿದ್ದೆನೋ ಆ ಯುರೋಪ್ ನ ಸಮಗ್ರ ಭೂತವಾಗಿ – ಎಲ್ಲಾ ಸಂಸ್ಕೃತಿಯ, ಪಾಶ್ಚಾತ್ಯ ಮತ್ತು ಪೌರಾತ್ಯದ, ಒಂದು ಸಂಕೇತದಂತೆ. ಆದರೆ ತನ್ನ ಸಮಕಾಲೀನ ಲೇಖಕರ ಜೊತೆ ಸಾಗಲು ಅವನನ್ನು ಅಸಾಧ್ಯಗೊಳಿಸಿದ ಒಂದು ವಿಪರೀತ ಬುದ್ಧಿ ಅವನಲ್ಲಿತ್ತು. ಅದು ಎರಡನೆ ಅಥವಾ ಮೂರನೆ ದರ್ಜೆಯ ಲೇಖಕರ ಮೇಲೆ ಪ್ರಶಂಸೆಯ ಮಳೆಗರೆಯುವ ಪುಸ್ತಕಗಳನ್ನು ಬರೆಯುವುದರಲ್ಲಿತ್ತು. ಆ ಕಾಲದಲ್ಲಿ ಒರ್ಟೆಗಾ ಇ ಗಾಸೆಟ್ ಪ್ರಸಿದ್ಧಿಯ ಉತ್ತುಂಗದಲ್ಲಿದ್ದ ಲೇಖಕ, ಆದರೆ ಕಾನ್ಸಿನೋಸ್ ಅವನನ್ನೊಬ್ಬ ಕೆಟ್ಟ ತತ್ವಜ್ಞಾನಿ ಮತ್ತು ಕೆಟ್ಟ ಲೇಖಕನೆಂದು ಪರಿಗಣಿಸುತ್ತಿದ್ದ. ನನಗವನಿಂದ ನಿಜಕ್ಕೂ ದೊರಕಿದ್ದು ಸಾಹಿತ್ಯ ಸಂವಾದದ ಸಂತೋಷ. ಮಾತ್ರವಲ್ಲ ನಾನವನಿಂದ ದೂರ ದೂರದ ಲೇಖಕರನ್ನು ಓದಲು ಪ್ರೇರಿತನಾದೆ. ಬರಹದಲ್ಲಿ ನಾನವನನ್ನು ಅಣಕಿಸಲು ಸುರುಮಾಡಿದೆ. ಅವನು ಉದ್ದುದ್ದ ಪ್ರವಹಿಸುವ ವಾಕ್ಯಗಳನ್ನು ಬರೆಯುತ್ತಿದ್ದ, ಅವಕ್ಕೊಂದು ಅ-ಸ್ಪ್ಯಾನಿಶ್ ಮತ್ತು ಬಲವಾದ ಹೀಬ್ರೂ ಗುಣವಿತ್ತು.

ವಿಚಿತ್ರವೆಂದರೆ, ಕಾನ್ಸಿನೋಸ್ ನೇ 1919ರಲ್ಲಿ ‘ಅಲ್ಟ್ರಾಯಿಸಂ’ ಎಂಬ ಪದವನ್ನು ಹೊಸೆದುದು. ಸ್ಪ್ಯಾನಿಶ್ ಸಾಹಿತ್ಯ ಯಾವತ್ತೂ ಕಾಲಕ್ಕೆ ಹಿಂದಿನದು ಎನ್ನುವುದು ಅವನ ವಿಚಾರವಾಗಿತ್ತು. ಯುವಾನ್ ಲಾಸ್ ಎಂಬ ಕಾವ್ಯ ನಾಮದಲ್ಲಿ ಅವನು ಕೆಲವು ಸಣ್ಣ ಸಣ್ಣ ಮಿತಭಾಷಿತ ಅಲ್ಟ್ರಾಯಿಸ್ಟ್ ಲೇಖನಗಳನ್ನು ಬರೆದ. ಇಡೀ ಸಂಗತಿ – ನನಗೀವತ್ತು ಕಾಣಿಸುವ ಹಾಗೆ – ಗೇಲಿಯ ಧಾಟಿಯಲ್ಲಿ ಬರೆದುದಾಗಿತ್ತು. ಆದರೆ ಯುವಕರಾದ ನಾವು ಅದನ್ನು ಬಹಳ ಗಂಭೀರವಾಗಿ ತೆಗೆದುಕೊಂಡೆವು. ಪ್ರಾಮಾಣಿಕನಾದ ಇನ್ನೊಬ್ಬ ಅನುಸಾರಿ ಗಿಲೆರ್ಮೋ ದ ತೋರ್ರೆಯಾಗಿದ್ದ, ಅವನನ್ನು ಆ ವಸಂತದಲ್ಲಿ ನಾನು ಮ್ಯಾಡ್ರಿಡ್ ನಲ್ಲಿ ಭೇಟಿಯಾದೆ, ಹಾಗೂ ಒಂಬತ್ತು ವರ್ಷಗಳ ನಂತರ ಅವನು ನನ್ನ ತಂಗಿ ನೋರಾಳನ್ನು ಮದುವೆಯಾದ.

ಇದೇ ವೇಳೆ ಮ್ಯಾಡ್ರಿಡ್ ನಲ್ಲಿ ರೇಮನ್ ಗೋಮೆಝ್ ದ ಲಾ ಸರ್ನಾನ ಸುತ್ತ ಸೇರಿದ ಇನ್ನೊಂದು ಪಂಗಡವಿತ್ತು. ನಾನೊಮ್ಮೆ ಅಲ್ಲಿಗೆ ಹೋದೆ, ಆದರೆ ಅವರ ನಡೆ ನನಗೆ ಹಿಡಿಸಲಿಲ್ಲ. ಅವರಲ್ಲೊಬ್ಬ ಬಫೂನ ಇದ್ದ, ಅವನ ಕೈಗೊಂದು ತೋಳಬಂದಿ, ಅದಕ್ಕೊಂದು ಬುಡುಬುಡಿಕೆ ಹಾವು (ರ್ಯಾಟ್ಲ್ ಸ್ನೇಕ್) ಕಟ್ಟಿತ್ತು. ಜನರ ಕೈಕುಲುಕುವುದು ಅವನ ಕೆಲಸ, ಮತ್ತು ಗೋಮೆಝ್ ದ ಲಾ ಸರ್ನಾ ತಪ್ಪದೆ ಕೇಳುತ್ತಿದ್ದ, ‘ಎಲ್ಲಿದೆ ಹಾವು?’ ಅದು ತಮಾಷೆಯೆಂದು ಲೆಕ್ಕ. ಒಮ್ಮೆ ಅವನು ನನ್ನ ಕಡೆ ತಿರುಗಿ ಗರ್ವದಲ್ಲಿ ಕೇಳಿದ, ‘ಇಂಥದೊಂದು ಸಂಗತಿಯನ್ನು ನೀನು ಬ್ಯೂನೋಸ್ ಏರಿಸ್ ನಲ್ಲಿ ಎಂದೂ ಕಂಡಿಲ್ಲ, ಅಲ್ಲವೇ?’ ಕಂಡಿಲ್ಲವೆಂದು ನಾನು ಒಪ್ಪಿಕೊಂಡೆ, ದೇವರಿಗೆ ಧನ್ಯವಾದ, ನಾನು ಕಂಡಿರದ್ದಕ್ಕೆ.

ಸ್ಪೇನಿನಲ್ಲಿ ನಾನು ಎರಡು ಪುಸ್ತಕಗಳನ್ನು ಬರೆದೆ. ಒಂದು ಪ್ರಬಂಧಗಳ ಸರಣಿ, ಅದನ್ನು, ಯಾಕೆಂದು ಗೊತ್ತಿಲ್ಲ, ‘ಲೋಸ್ ನೈಪಿಸ್ ದೆಲ್ ತಾಹುರ್’ (‘ಜೂಜುಕೋರನ ಎಲೆಗಳು’) ಎಂದು ಕರೆದಿದ್ದೆ. ಅವು ಸಾಹಿತ್ಯಿಕ ಮತ್ತು ರಾಜಕೀಯ ಲೇಖನಗಳಾಗಿದ್ದುವು (ನಾನಿನ್ನೂ ಒಬ್ಬ ಅನಾರ್ಕಿಸ್ಟ್, ಮುಕ್ತ ಚಿಂತಕ ಮತ್ತು ಶಾಂತಿಪ್ರಿಯನಾಗಿದ್ದೆ). ಪಿಯೋ ಬರೋಯಾನ ಪ್ರಭಾವದ ಕೆಳಗೆ ನಾನು ಬರೆದ ಲೇಖನಗಳು ಅವು. ಕಟುವಾಗುವುದು ಮತ್ತು ನಿರ್ದಯವಾಗಿರುವುದು ಅವುಗಳ ಉದ್ದೇಶವಾಗಿದ್ದರೂ ವಾಸ್ತವದಲ್ಲಿ ಅವು ಸಾಕಷ್ಟು ಮಿದುವಾಗಿದ್ದುವು. ‘ಫೂಲ್ಸ್’, ‘ಹಾರ್ಲಟ್ಸ್’, ‘ಲಯರ್ಸ್’ ಮುಂತಾದ ಪದಗಳನ್ನು ನಾನು ಹುಡುಕಿಕೊಂಡು ಹೋದೆ. ಪ್ರಕಾಶಕರು ಸಿಗದೆ ನಾನು ಬ್ಯೂನೋಸ್ ಏರಿಸ್ ಗೆ ಮರಳಿದ ಮೇಲೆ ಹಸ್ತಪ್ರತಿಯನ್ನು ನಾಶಮಾಡಿದೆ.

ಎರಡನೆ ಪುಸ್ತಕದ ಹೆಸರು ‘ದ ರೆಡ್ ಸಾಮ್ಸ್’ ಅಥವಾ ‘ದ ರೆಡ್ ರಿದಮ್ಸ್’ ಎಂದಾಗಿತ್ತು. ಅದೊಂದು ಕವನ ಸಂಕಲನ – ಒಟ್ಟು ಇಪ್ಪತ್ತು ಕವಿತೆಗಳು – ಮುಕ್ತ ಛಂದದಲ್ಲಿ, ರಶ್ಯನ್ ಕ್ರಾಂತಿಯನ್ನು, ಮನುಷ್ಯ ಭ್ರಾತೃತ್ವವನ್ನು, ಶಾಂತಿವಾದವನ್ನು ಹೊಗಳಿ ಬರೆದಂಥವು. ಅವುಗಳಲ್ಲಿ ಮೂರೋ ನಾಲ್ಕೋ ಕವಿತೆಗಳು ಪತ್ರಿಕೆಗಳಲ್ಲಿ ಬೆಳಕು ಕಂಡುವು – ‘ಬೋಲ್ಶೆವಿಕ್ ಎಪಿಕ್’, ‘ಟ್ರೆಂಚಸ್’, ‘ರಶ್ಯ’. ಈ ಪುಸ್ತಕವನ್ನು ನಾನು ಸ್ಪೇನ್ ಬಿಡುವ ಮುನ್ನಾ ದಿನವೇ ನಾಶ ಮಾಡಿದೆ.