ನನ್ನ ಜನ

ಮುಂಗಾರಿನ ಮಳೆ ಬಿದ್ದ
ಮಾರನೇ ದಿನ
ಮಾರೀಗುಡಿಯ ಬಳಿ ಜನರಿಲ್ಲ
ಕಾಲ ಹರಟೆಯೂ ಇಲ್ಲ
ಊರಿಗೆ ಊರೇ ಖಾಲಿಖಾಲಿ
ಹೀಗೊಂದು ಅಪರೂಪದ ವೇಷ ತೊಟ್ಟ ಊರು
ತನ್ನ ಮಕ್ಕಳನ್ನೆಲ್ಲ ಹಸಿಯ ಹೊಲಕ್ಕೆ ಅಟ್ಟುತ್ತದೆ
ಅಸಂಖ್ಯಾತ ಚಿಗುರುಗಳ
ಕನಸುಗಳ
ಕಷ್ಟ ಕಾರ್ಪಣ್ಯಗಳ
ಬಡ್ಡಿ ಸಾಲಗಳ
ಸಾಲು ಸಾಲು ಪ್ರಶ್ನೆಗಳಿಗೆ ಉತ್ತರಿಸಲು

ಊರ ಜನ ಕಾದು ಕೂತಿದ್ದರು
ಅಂದುಕೊಂಡಂತೆ ಮಳೆ
ರಾತ್ರಿ ಊಟವಾಗಿ ಮಗ್ಗಲುಕೊಟ್ಟು
ಅರೆನಿದಿರೆಗೆ ಜಾರುವಾಗ ಧೋ ಎಂದು ಸುರಿದಿದೆ
ಸೋರುವ ಸೂರಿನ ಹನಿಗಳು ತಾಗಿ
‘ನಗೊ’ ಎಂದು ಕಚಗುಳಿ
ಇಟ್ಟಂತಿದೆ

ಊರಿನ ಜನರೆಲ್ಲ ಕಾದು ಕೂತಾಗ ಬಿದ್ದ ಮಳೆಗೆ
ನಿಜವಾದ ಪೂಜೆಯಾಗಬೇಕಿದೆ

ಇಂದು ಬೇಗ ಬೆಳಕಾಗಬೇಕಿದೆ
ನಾವು ಎದ್ದಮೇಲೆ ಕೋಳಿ ಕೂಗಬೇಕಿದೆ
ಚಿನ್ನದಂತಾ ಕೂಲಿಯಾಳುಗಳ
ಹೊಲಕ್ಕೆ ಸ್ವಾಗತಿಸಬೇಕಿದೆ
ರಾತ್ರಿಯ ಮಳೆಗೆ
ತಲೆಯ ಮೇಲೆ ಬೆಳೆದು ನಿಂತ
“ಹೊಗೆ ಗಿಡ”(ತಂಬಾಕಿನ ಸಸಿ) ನಾಟಿ ಮಾಡಬೇಕಿದೆ
ಹಸೀ ಮಣ್ಣ ಸ್ಪರ್ಶವಾಗಿ
ಮಳೆಗೆ ಧನ್ಯ ಹೇಳಬೇಕಿದೆ

ದೀಪದಂತೆ ಹೊಲದ ಬಯಲಲ್ಲೆಲ್ಲ
ಸಸಿಗಳು ಮಿನುಗುತ್ತವೆ
ನೆನ್ನೆಯ ತರಹದ ಮಳೆ
ಇಂದೊಮ್ಮೆ ಬರಬೇಕಿದೆ
ನೆಟ್ಟ ಸಸಿಗಳು ನೆಟ್ಟಗಾಗಲು
ಮಣ್ಣಿನ‌ ಮಕ್ಕಳು ಸಂತಸವಾಗಲು

ಮತ್ತದೇ ರಾತ್ರಿ
ಕೂಡಿಕೊಳ್ಳುವ ಮೋಡ
ಚೂರು ಚೂರು ಗುಡುಗು
ಪಟಪಟ ಹನಿ
ಹೀಗೆ ಹನಿಹನಿ ಬಿದ್ದು
ಒಂದು ಹದ ಮಳೆಯೇ ಬಂದುಬಿಟ್ಟರೆ
ನಾಟಿಯ ಪರೀಕ್ಷೆಯಲ್ಲಿ
ಪ್ರಥಮ ದರ್ಜೆಯಲ್ಲೇ
ಮುಲಾಜಿಲ್ಲದೆ ನನ್ನ ಜನ‌
ಪಾಸಾಗುತ್ತಾರೆ

ಇನ್ನುಳಿದ ಪರೀಕ್ಷೆಗಳ ಕೈಬೀಸಿ ಕರೆಯುತ್ತಾರೆ..

 

ಚಂದ್ರು ಎಂ ಹುಣಸೂರು ಮೈಸೂರು ಜಿಲ್ಲೆಯ ಹುಣಸೂರಿನವರು.
ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ ಎ ಪತ್ರಿಕೋದ್ಯಮ ಪದವೀಧರರಾಗಿದ್ದಾರೆ‌. 
ಸಿರಿ ಸೌಂದರ್ಯ ಮಾಸಪತ್ರಿಕೆ ಮತ್ತು ವಿಶ್ವವಾಣಿ ದೈನಿಕದಲ್ಲಿ ಸಹ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ.
2019ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆಯ್ಕೆಗೊಂಡ ಇವರ “ಎಂಟಾಣೆ ಪೆಪ್ಪರುಮೆಂಟು” ಕವನ ಸಂಕಲನ ಬಿಡುಗಡೆಯ ಹಂತದಲ್ಲಿದೆ.