ಹಾಗೆ ನೋಡಿದರೆ, ನಾವಿರುವ ನಿಸರ್ಗವನ್ನು ನಮ್ಮ ಇರವಿಗೆ, ನಮ್ಮ ಬಾಳ್ವೆಗಾಗಿ ಬಳಸಿ, ನಾವೂ ಸಹ ಅಂತಹುದೇ ಸಂಪನ್ಮೂಲವಾಗುತ್ತ ಜೀವಿಸುವುದೇ ನಿಸರ್ಗ ನಿಯಮ ಎಂದೂ ನಾವು ಅನ್ನಬಹುದು. ಯಾವುದೇ ಸಂಸ್ಕೃತಿ ಸಂಪನ್ಮೂಲವಿಲ್ಲದೇ ಇರಲು ಸಾಧ್ಯವಿಲ್ಲ. ಆದರೆ, ಇದನ್ನೇ ಸರ್ವಸ್ವ ಎಂದು ನಂಬಿದರೆ – ಮನುಷ್ಯರನ್ನೂ ಸಹ ನಾವು ಇದೇ ಬಗೆಯ ಬಳಕೆಯ ವಸ್ತುವಾಗಿಸುವ ಅಪಾಯ ಉದ್ಭವಿಸುತ್ತದೆ. ಮನುಷ್ಯನನ್ನೇ ನಾವೀಗ ಸಂಪನ್ಮೂಲವೆಂದು ಕರೆಯುತ್ತಿರುವುದು ಏನನ್ನು ಸೂಚಿಸುತ್ತದೆ? ಬಳಕೆಯ ಸಾಧನವಾಗಿಸುವ ಕ್ರಮ ಎಂಬ ತತ್ವವನ್ನು ತೀರಾ ನಂಬಿದರೆ ಆಗುವುದೇನೆಂದರೆ, ನೌಕರರನ್ನು ನಾವು ಮಾನವ ಸಂಪನ್ಮೂಲಗಳು ಎಂದುಬಿಡುವ ದಿನ ಬಂದಿರುತ್ತದೆ.
ಕಮಲಾಕರ ಕಡವೆ ಬರೆಯುವ ʼಬೆರಗು ಮತ್ತು ಭೀತಿʼ ಅಂಕಣ-3

 

ಈ ಕಾಲಂನ ಮುನ್ನಿನ ಎರಡು ಬರಹಗಳಲ್ಲಿ ತಂತ್ರ ಜ್ಞಾನದ – ಯಂತ್ರಗಳ – ಕುರಿತು ಮಾನವನಿಗಿರುವ ಭೀತಿ, ಬೆರಗು, ಮೋಹ ಮತ್ತು ದ್ವೇಷಗಳ ವಿಭಿನ್ನ ಚಿತ್ರಣಗಳ ಚರ್ಚೆಯ ಮೂಲಕ ಮಾನವ-ತಂತ್ರಜ್ಞಾನ ಸಂಬಂಧದ ಜಿಜ್ಞಾಸೆಗೆ ತೊಡಗಲು ಪ್ರಯತ್ನಿಸಿದ್ದೆ. ಆದರೆ, ತಂತ್ರಜ್ಞಾನವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸದೇ ಮುಂದುವರಿದರೆ ಇಂತಹ ಚಿತ್ರಣಗಳು ಹಲವುಬಗೆಯ ವಿಷಯ ವಿಭ್ರಮೆಯನ್ನು ಹುಟ್ಟುಹಾಕುತ್ತವೆ. ಉದಾಹರಣೆಗೆ, ಮಾನವ ತಂತ್ರಜ್ಞಾನದ ಬಳಕೆ ಶುರು ಮಾಡಿದ್ದು ಯಾವಾಗ? ತಂತ್ರಜ್ಞಾನದ ಮತ್ತು ಯಂತ್ರಗಳ ಬಳಕೆಯ ನಡುವೆ ಏನು ವ್ಯತ್ಯಾಸ? ಮಾನವ ಸಂಸ್ಕೃತಿಯನ್ನು ತಂತ್ರಜ್ಞಾನ ಯಾವ ಯಾವ ಬಗೆಯಲ್ಲಿ ಆವರಿಸಿಕೊಂಡಿದೆ? ಮುಂದುವರಿದರೆ, ಇನ್ನೂ ಹೆಚ್ಚು ಹೆಚ್ಚು ಗಹನ ಪ್ರಶ್ನೆಗಳು ಎದುರಾಗುತ್ತ ಹೋಗುತ್ತವೆ. ಆದ್ದರಿಂದ, ಈ ವಾರದ ಕಾಲಂನಲ್ಲಿ ತಂತ್ರಜ್ಞಾನ ಎಂದರೆ ಏನು ಎನ್ನುವ ಪ್ರಶ್ನೆಯೊಂದಿಗೆ ಸ್ವಲ್ಪ ಗುದ್ದಾಡೋಣ ಎಂದುಕೊಂಡಿದ್ದೇನೆ. ಈ “ಏನು” ಎನ್ನುವ ಪ್ರಶ್ನೆಯನ್ನು ಬಿಡದೇ ಕೇಳುತ್ತಲಿದ್ದರೆ, ಹಲವಾರು ಗ್ರಹೀತಗಳಿಂದ ಬಿಡಿಸಿಕೊಳ್ಳಬಹುದು.

ಪುರಾತನ ಗ್ರೀಕರು ಬಳಸುವ techne ಎಂಬ ಶಬ್ದದಿಂದಲೇ ಶುರು ಮಾಡೋಣ. ಈ ಶಬ್ದವನ್ನು ಸಾಕ್ರೇಟಿಸ್, ಪ್ಲೇಟೋ ಕೂಡ ಬಳಸಿದ್ದಾರೆ. ಸಧ್ಯ, ತಂತ್ರಜ್ಞಾನದ ಕುರಿತು ಪಾಶ್ಚಾತ್ಯ ಪರಂಪರೆಯಲ್ಲಿ ಇರುವ ಅರ್ಥೈಸುವಿಕೆಯಲ್ಲಿ ಅರಿಸ್ಟಾಟಲನಿಂದ ಮೊದಲಾಗುವ ಅರ್ಥವನ್ನು ಗಮನಿಸೋಣ. ಅರಿಸ್ಟಾಟಲನ ಪ್ರಕಾರ techne (ಕರಕೌಶಲ್ಯ) ಏನನ್ನಾದರೂ ತಯಾರಿಸುವುದಕ್ಕೆ, ಮಾಡುವುದಕ್ಕೆ (craft) ಸಂಬಂಧಿಸಿದ್ದು. ಏನನ್ನೇ ಮಾಡುವುದಕ್ಕೆ ಅದರ ತತ್ವದ ಅರಿವು ಬೇಕಲ್ಲ – ಅದೇ ಕೌಶಲ್ಯ. ಹಾಗಾಗಿ, ಕರಕೌಶಲ್ಯವೂ ಒಂದು ಬಗೆಯ ಜ್ಞಾನ ಎನ್ನುವ ಚರ್ಚೆ ಪುರಾತನ ಗ್ರೀಕ ತತ್ವಜ್ಞಾನದಲ್ಲಿದೆ. ಅರಿಸ್ಟಾಟಲನು techne ಅನ್ನುವುದನ್ನು ಸಲಕರಣೆ ಎಂಬ ಅರ್ಥದಲ್ಲಿಯೂ ಅಥವಾ ಸಲಕರಣೆಗಳನ್ನು ಬಳಸಿ ಮಾನವ ಮಾಡುವ ಚಟುವಟಿಕೆ ಎಂಬರ್ಥದಲ್ಲಿಯೂ ಬಳಸುವುದರಿಂದ, ಪಾಶ್ಚಾತ್ಯರು ಪಾರಂಪಾರಿಕವಾಗಿ ತಂತ್ರಜ್ಞಾನವನ್ನು ಮಾನವ ಬಳಸುವ ಸಾಧನಗಳು ಎಂಬ ಮಾದರಿಯಲ್ಲಿಯೇ ಅರ್ಥೈಸಿಕೊಳ್ಳುವುದು ವಾಡಿಕೆ.

ಇದಕ್ಕೆ ವ್ಯತಿರಿಕ್ತವಾದ ವ್ಯಾಖ್ಯಾನದಲ್ಲಿ ಆಸಕ್ತಿ ತೋರುವ ಜರ್ಮನ್ ತತ್ವಶಾಸ್ತ್ರಜ್ಞಾನನಾದ ಮಾರ್ಟಿನ್ ಹೈಡೆಗರನ ಪ್ರಸಿದ್ಧ ಹೇಳಿಕೆಯೆಂದರೆ, ತಂತ್ರಜ್ಞಾನದ ಮೂಲಸತ್ವವು ಯಾವುದೇ ಬಗೆಯಲ್ಲಿ ತಾಂತ್ರಿಕವಾಗಿರುವುದಿಲ್ಲ (“the essence of technology is by no means anything technological”). ಹೈಡೆಗರನ ಪ್ರಕಾರ, ತಂತ್ರಜ್ಞಾನದ ಮೂಲಸತ್ವ ಎಂದರೆ ತಂತ್ರಜ್ಞಾನದ ಪರಮೋಚ್ಛ ಬಳಕೆಯೋ, ಅಥವಾ ಎಲ್ಲ ಸಲಕರಣೆಗಳನ್ನೂ ವರ್ಣಿಸಬಲ್ಲ ಸಮಗ್ರ ಪರಿಕಲ್ಪನೆಯೋ ಅಲ್ಲ. ತಾಂತ್ರಿಕತೆ ಎನ್ನುವುದು ನಮ್ಮನ್ನೂ ಸೇರಿದಂತೆ ನಮ್ಮ ಸುತ್ತ ಇರುವೆಲ್ಲವನ್ನೂ ವರ್ಗೀಕರಿಸುವ, ವಿಂಗಡಿಸುವ, ನಿಯೋಜಿಸುವ ವಿಶಿಷ್ಟ ಮನೋಭೂಮಿಕೆ. ಹೈಡೆಗರನು ತಂತ್ರಜ್ಞಾನದ ಕುರಿತು ನಡೆಸಿರುವ ಜಿಜ್ಞಾಸೆ ತುಂಬ ವಿಷದವೂ, ಗಹನವೂ ಆಗಿದೆ. ಅದರ ಸ್ಪಷ್ಟ ಮತ್ತು ನಿರ್ದಿಷ್ಟ ಚಿತ್ರಣ ಕೊಡುವ ಪ್ರಯತ್ನ ನನ್ನದಲ್ಲ. ಆದರೆ, ತಂತ್ರಜ್ಞಾನ ಅಂದರೆ ಏನು ಎನ್ನುವ ಪ್ರಶ್ನೆಗೆ ಅವನು ಒದಗಿಸುವ ಹೊಳಹುಗಳನ್ನು ಕಿಂಚಿತ್ ವಿವರಿಸಿ, ತಂತ್ರಜ್ಞಾನದ ಕುರಿತಾದ ಈ ಚರ್ಚೆಯನ್ನು ಮುಂದುವರಿಸುವುದು ಮಾತ್ರ ನನ್ನ ಉದ್ದೇಶ.

ಒಂದು ಕಾರನ್ನು ತಂತ್ರಜ್ಞಾನದ ಉದಾಹರಣೆಯಾಗಿ ನಾವು ತೆಗೆದುಕೊಂಡರೆ, ಆ ಕಾರಿನಲ್ಲಿರುವ ಸಾವಿರಾರು ಬಿಡಿಭಾಗಗಳು, ಪ್ರತಿಯೊಂದರ ಕೆಲಸಗಳು… ಇವುಗಳೆಲ್ಲ ತಂತ್ರಜ್ಞಾನಕ್ಕೆ ಸಂಬಂಧಿಸಿದವೇ, ಆದರೆ ಅವಾವುದೂ ಅದರ ಮೂಲಸತ್ವ – ತಾಂತ್ರಿಕತೆ – ಅಲ್ಲ (ಯಂತ್ರಗಳ ಪ್ರತ್ಯೇಕ ಭಾಗಗಳು, ಅವುಗಳ ಸಂಯುಕ್ತ ಅಸ್ತಿತ್ವಗಳ ಕುರಿತಾದ ಜಿಜ್ಞಾಸೆಗಳನ್ನು ಎತ್ತಿಕೊಳ್ಳುವ ಹಲವು ಚಿಂತಕರಿದ್ದಾರೆ. ಅವರಲ್ಲಿ ಒಬ್ಬರಾದ ಗಿಲ್ಬರ್ಟ್ ಸೈಮನ್ಡನ್ ತಾಂತ್ರಿಕತೆಯ ಕುರಿತು ನಡೆಸಿದ ಚರ್ಚೆಯ ಕಡೆ ಮುಂದಿನ ಕಾಲಂನಲ್ಲಿ ಗಮನಹರಿಸೋಣ). ಈ ಜಗತ್ತು, ಅದರಲ್ಲಿರುವ ಭೂಮಿ, ಅದರಲ್ಲಿರುವ ಖನಿಜ, ಆ ಖನಿಜಗಳ ಪರಿಷ್ಕರಣೆ, ಅದರಿಂದ ಉತ್ಪಾದನೆಯಾದ ಸರಕು, ಆ ಸರಕಿನಿಂದ ಮಾಡಲ್ಪಟ್ಟ ಬಿಡಿಭಾಗಗಳು, ಅವೆಲ್ಲವನ್ನು ಉತ್ಪಾದಿಸುವಲ್ಲಿನ ಕಾರ್ಮಿಕರ ಶ್ರಮ, ಆ ಕಾರ್ಮಿಕರು ಹಾಗೆ ಶ್ರಮಿಸಲು ಬೇಕಾದ ಸವಲತ್ತು ಒದಗಿಸಿದ ಫ್ಯಾಕ್ಟರಿ – ಇವೆಲ್ಲವೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸರಣಿಗಳೇ ಆಗಿದ್ದರೂ ಸಹ, ತಂತ್ರಜ್ಞಾನದ ಮೂಲಸತ್ವ ಇರುವುದು ಇವೆಲ್ಲದರ ಹಿಂದಿನ ಒಂದು ವಿಶಿಷ್ಟ ಮನೋಭಾವ ಅಥವಾ ಅರಿವಿನ ಚೌಕಟ್ಟಿನಲ್ಲಿ. ಈ ಮನೋಭಾವ, ತನ್ನ ಸುತ್ತಲಿನ ವಸ್ತುಗಳ ಸಹಜ ಅಸ್ತಿತ್ವವನ್ನು ಬದಿಗಿರಿಸಿ/ಕಡೆಗಣಿಸಿ (clearing) ಅದರ ಉಪಯುಕ್ತತೆಯನ್ನು ಧ್ಯಾನಿಸುವ ನಿರ್ದಿಷ್ಟ ಅರಿವಿನಾಕಾರ (gestalt/enframing). ಹೈಡೆಗರ್ ಈ ಅರಿವಿನಾಕಾರ ಎಲ್ಲಿಂದ ಮತ್ತು ಯಾಕೆ ಬರುತ್ತದೆ ಎನ್ನುವುದನ್ನೂ ಚರ್ಚಿಸುತ್ತಾನೆ. ಅದನ್ನು ಸಧ್ಯ ʼಬದಿಗಿರಿಸೋಣʼ. ಹೈಡೆಗರನ ಪ್ರಕಾರ, ತಂತ್ರಜ್ಞಾನದ ಮೂಲಸತ್ವವು ಜಗತ್ತಿನ ಕುರಿತು ನಮ್ಮಲ್ಲಿರುವ ಈ ನಿರ್ದಿಷ್ಟ ಅರಿವಿನಾಕಾರ.

ಮೂಲತಃ, ತಾಂತ್ರಿಕತೆಯ ದೃಷ್ಟಿಕೋನವೇ ನಿಸರ್ಗವನ್ನು ಸಂಪನ್ಮೂಲವೆಂಬ ಉಪಯುಕ್ತತೆಯ “ಗಣಿ”ಯಾಗಿ (bestand/resource) ಗ್ರಹಿಸಿ, ಅದರಲ್ಲಿ ಅಡಕವಾಗಿರುವ ಶಕ್ತಿಯನ್ನು ಅನಾವರಣಗೊಳಿಸುವಂತೆ ಕೆಣಕುತ್ತದೆ (challenge). ಅಂಥ ಕೆಣಕುವಿಕೆಯ ಹಿಂದಿನ ಅರಿವಿನಾಕಾರವು ಉಪಯುಕ್ತತೆಯನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಎಲ್ಲವೂ ತಮಗಾಗಿ ತಾವಿಲ್ಲ, ಬದಲಿಗೆ, ನಮ್ಮ ಅಸ್ತಿತ್ವದ ಸಾಧನಗಳಾಗಿವೆ ಎಂಬ ವಿಕೃತ ದೃಷ್ಟಿಯಲ್ಲಿ ಗ್ರಹಿಸುತ್ತದೆ ಎನ್ನುತ್ತಾನೆ ಹೈಡೆಗರ್.

ಉದಾಹರಣೆಗೆ, ಯಾವುದೇ ಜಾಗ “ನನ್ನ” ಉಪಯೋಗಕ್ಕೆಂದೇ ಅಸ್ತಿತ್ವದಲ್ಲಿರುವುದಿಲ್ಲ. ಆದರೆ, ನನಗೆ ಆ ಜಾಗದಲ್ಲಿ ಕಲ್ಲಿದ್ದಲು ಕಂಡಿತು ಅಂದುಕೊಳ್ಳಿ. ಆಗ, ಆ ಜಾಗ ನನಗೆ ಬೆಲೆಯುಳ್ಳದ್ದಾಗಿ ಕಾಣುತ್ತದೆ. ನಾನು ಆ ಜಾಗವನ್ನು ಅದರ ’ವಾಸ್ತವಾಕಾರ’ದಲ್ಲಿ ನೋಡದೇ, ಕಲ್ಲಿದ್ದಲ ಗಣಿಯಾಗಿ ಕಾಣುತ್ತೇನೆ. ಮುಂದೆ, ಅದರಿಂದ ಮೇಲೆತ್ತಿದ ಕಲ್ಲಿದ್ದಲನ್ನು ಕೂಡ ಅದರ ಉಪಯುಕ್ತತೆಯ ಚೌಕಟ್ಟಿನಲ್ಲಿ ಕಾಣುವ ನಾನು, ಅದನ್ನೊಂದು ಉಪಯುಕ್ತತೆಯ “ಗಣಿ”ಯಾಗಿ ಕಾಣುತ್ತೇನೆ. ಮುಂದೆ, ಕಲ್ಲಿದ್ದಲಿನಿಂದ ಶಾಖ, ಶಾಖದಿಂದ ವಿದ್ಯುತ್ತು, ವಿದ್ಯುತ್ತಿನಿಂದ ಯಂತ್ರದ ಚಲನೆಗೆ ಶಕ್ತಿ, ಯಂತ್ರದ ಚಲನೆಯಿಂದ ಇನ್ನಾವುದೋ ಸರಕಿನ ಉತ್ಪಾದನೆ, ಆ ಸರಕು ನನ್ನ ವ್ಯವಹಾರದ ಕೇಂದ್ರ …. ಹೀಗೆ ಉಪಯುಕ್ತತೆಯ ಸರಣಿ ಕೊಂಡಿ ಮುರಿಯದೇ ಸಾಗಿಯೇ ಇರುತ್ತದೆ. ಈ ಸರಣಿಯೇ ಪದಾರ್ಥದ ಅಸ್ತಿತ್ವದ ಜೊತೆ ನಮಗಿರುವ ಉಪಯುಕ್ತತೆಯ ಸಂಬಂಧ. ಹಾಗಾಗಿಯೇ ಹೈಡಗರನಿಗೆ ತಂತ್ರಜ್ಞಾನದ ಮೂಲಸತ್ವವಾದ ತಾಂತ್ರಿಕತೆ (essence of technology) ಒಂದು ಸಾಧನ ಅಥವಾ ಕ್ರಿಯೆಯಾಗಿರದೇ, ಅದು ಮಾನವ ತನ್ನ ಸುತ್ತಲಿನ ಜಗತ್ತಿನ ಜೊತೆ ಹೊಂದಿರುವ ಸಂಬಂಧದ ಕುರಿತಾದದ್ದು.

ನೈಸರ್ಗಿಕವಾಗಿ ಅಸ್ತಿತ್ವದಲ್ಲಿರುವುದು ನಮ್ಮ ಬಳಕೆಗಾಗಿ ಇರುವುದಿಲ್ಲವಷ್ಟೇ. ಉದಾಹರಣೆಗೆ ಒಂದು ಮರದ ದಿಮ್ಮಿ. ಮರವೊಂದು ಬಿದ್ದು, ದಿಮ್ಮಿಯಾಗಿದೆ. ಅಷ್ಟೇ, ಮನುಷ್ಯನ ಬಳಕೆಗೆ ಬೇಕಾದ ಯಾವುದೇ ಗುಣಗಳೂ ಅದರ ಅಸ್ತಿತ್ವದ ಸಹಜ ಗುಣವಲ್ಲ. ನಾವು ಆ ಮರದ ದಿಮ್ಮಿಯ ಈ “ನಿಷ್ಪ್ರಯೋಜಕ” ಅಸ್ತಿತ್ವವನ್ನು ಕೆಣಕಿ, ಅದರ ನೈಸರ್ಗಿಕ ಅಸ್ತಿತ್ವವನ್ನು ಕಡೆಗಣಿಸುತ್ತೇವೆ. ಯಾವುದು ನಿಷ್ಪ್ರಯೋಜಕ ವಸ್ತುವೋ ಅದನ್ನು ಉಪಯುಕ್ತ ಪದಾರ್ಥವನ್ನಾಗಿಸುವ ಸಂಬಂಧವನ್ನು ಅದರ ಜೊತೆ ನಾವು ಸೃಷ್ಟಿಸುತ್ತೇವೆ. ಈಗ, ಮರದ ದಿಮ್ಮಿ ನಮಗೆ ಸೌದೆಯಾಗಿಯೋ, ಸಂಕವಾಗಿಯೋ ಕಾಣುತ್ತದೆ. ಹೈಡೆಗರ್ ಇದನ್ನು ತಂತ್ರಜ್ಞಾನದ ಮೂಲಸತ್ವ ಎಂದು ಕರೆಯುತ್ತಾನೆ – ನಾವದನ್ನು ತಾಂತ್ರಿಕತೆ ಅನ್ನೋಣ (ಪಾಶ್ಚಾತ್ಯ ಚಿಂತಕರು technicity ಎಂಬ ಶಬ್ದವನ್ನು ಬಳಸುತ್ತಾರೆ – ಗಿಲ್ಬರ್ಟ್ ಸೈಮನ್ಡನ್, ಬರ್ನಾರ್ಡ್ ಸ್ಟೀಗ್ಲರ್ ಇವರುಗಳ ಚಿಂತನೆಗಳಲ್ಲಿಯೂ ಈ ಶಬ್ದದ ಬಳಕೆ ಇದೆ, ಅದರ ಚರ್ಚೆ ಮುಂದೆ ಮಾಡೋಣ.)

ಹೈಡೆಗರ್ ಪ್ರಕಾರ ತಂತ್ರಜ್ಞಾನ ಏನೆಂದು ಹೇಳಲು ಅರಿಸ್ಟಾಟಲನಂತೆ ಮಾನವ ಉಪಯೋಗಿಸುವ ಸಲಕರಣೆಗಳು ಅಥವಾ ಮಾನವ ಈ ಸಲಕರಣೆಗಳನ್ನು ಬಳಸಿ ಮಾಡುವ ಚಟುವಟಿಕೆಗಳು, ಎಂದರೆ ಸಾಕಾಗದು. ತಂತ್ರಜ್ಞಾನದ ಮೂಲಸತ್ವ ಏನು ಎಂದು ಚಿಂತಿಸಬೇಕಾಗುತ್ತದೆ. ಅದಕ್ಕೆ ಉತ್ತರವಾಗಿ, ಹೈಡೆಗರ್ ಹೇಳುವುದೆಂದರೆ, ನಮ್ಮ ಅಸ್ತಿತ್ವದ ಸಂಧರ್ಭದಲ್ಲಿ ನಾವು ನಿಸರ್ಗದ ನಿಷ್ಪ್ರಯೋಜಕತೆಯನ್ನು ಬದಿಗಿರಿಸಿ/ಕಡೆಗಣಿಸಿ (clearing) ಅದರ ಉಪಯುಕ್ತತೆಯ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳುವ ಮನೋಭಾವ (attitude) ಹೊಂದಿರುತ್ತೇವೆ.

ನಿಸರ್ಗದ ಶಕ್ತಿ ಮಾನವನ ಬಳಕೆಯ ಸಾಧನವಾಗುವ ಮುನ್ನವೇ ಈ ಕೆಣಕುವಿಕೆಯ ಮನೋಭೂಮಿಕೆ ತಯಾರಾಗಿದ್ದು (ತಾಂತ್ರಿಕತೆಯ ಅರಿವಿನಾಕಾರವೇ ಮಾನವನ ಮೂಲವೆಂದು ಬರ್ನಾರ್ಡ್ ಸ್ಟೀಗ್ಲರ್ ವಾದಿಸುತ್ತಾನೆ. ಆ ಚರ್ಚೆ ಮುಂದಿನ ಕಾಲಂನಲ್ಲಿ ಎತ್ತಿಕೊಳ್ಳೋಣ). ಆದ್ದರಿಂದಲೇ, ಹೈಡೆಗರನ ವಾದದ ಪ್ರಕಾರ ವಿಜ್ಞಾನವೆಂಬ ಜ್ಞಾನಶಾಖೆಗೂ ಮುಂಚೆ ತಾಂತ್ರಿಕತೆಯೆಂಬ ಅರಿವಿನಾಕಾರ ಇರುತ್ತದೆ. “ಆಧುನಿಕ ತಂತ್ರಜ್ಞಾನವು ವೈಜ್ಞಾನಿಕ ಆವಿಷ್ಕಾರಗಳ ಅಳವಡಿಕೆಯಲ್ಲ; ಬದಲಿಗೆ ಆಧುನಿಕ ವಿಜ್ಞಾನವು ತಾಂತ್ರಿಕತೆಯ (ಎಂಬ ಅರಿವಿನಾಕಾರದ) ಅಳವಡಿಕೆ. ಈ ದೃಷ್ಟಿಯಲ್ಲಿ ನಿಸರ್ಗವೆನ್ನುವುದು ತಾಂತ್ರಿಕತೆಯ ಸಂಪನ್ಮೂಲಗಳ “ಗಣಿ”ಯಷ್ಟೇ, ಮತ್ತೇನಲ್ಲ.”

ಹಾಗೆ ನೋಡಿದರೆ, ನಾವಿರುವ ನಿಸರ್ಗವನ್ನು ನಮ್ಮ ಇರವಿಗೆ, ನಮ್ಮ ಬಾಳ್ವೆಗಾಗಿ ಬಳಸಿ, ನಾವೂ ಸಹ ಅಂತಹುದೇ ಸಂಪನ್ಮೂಲವಾಗುತ್ತ ಜೀವಿಸುವುದೇ ನಿಸರ್ಗ ನಿಯಮ ಎಂದೂ ನಾವು ಅನ್ನಬಹುದು. ಯಾವುದೇ ಸಂಸ್ಕೃತಿ ಸಂಪನ್ಮೂಲವಿಲ್ಲದೇ ಇರಲು ಸಾಧ್ಯವಿಲ್ಲ. ಆದರೆ, ಇದನ್ನೇ ಸರ್ವಸ್ವ ಎಂದು ನಂಬಿದರೆ – ಮನುಷ್ಯರನ್ನೂ ಸಹ ನಾವು ಇದೇ ಬಗೆಯ ಬಳಕೆಯ ವಸ್ತುವಾಗಿಸುವ ಅಪಾಯ ಉದ್ಭವಿಸುತ್ತದೆ. ಮನುಷ್ಯನನ್ನೇ ನಾವೀಗ ಸಂಪನ್ಮೂಲವೆಂದು ಕರೆಯುತ್ತಿರುವುದು ಏನನ್ನು ಸೂಚಿಸುತ್ತದೆ? ಬಳಕೆಯ ಸಾಧನವಾಗಿಸುವ ಕ್ರಮ ಎಂಬ ತತ್ವವನ್ನು ತೀರಾ ನಂಬಿದರೆ ಆಗುವುದೇನೆಂದರೆ, ನೌಕರರನ್ನು ನಾವು ಮಾನವ ಸಂಪನ್ಮೂಲಗಳು ಎಂದುಬಿಡುವ ದಿನ ಬಂದಿರುತ್ತದೆ. ಯಂತ್ರದ ನಟ್ಟು ಬೋಲ್ಟುಗಳೋ ಎಂಬಂತೆ.

(ಮಾರ್ಟಿನ್ ಹೈಡೆಗರ್)

ತಾಂತ್ರಿಕತೆ ಎನ್ನುವುದು ನಮ್ಮನ್ನೂ ಸೇರಿದಂತೆ ನಮ್ಮ ಸುತ್ತ ಇರುವೆಲ್ಲವನ್ನೂ ವರ್ಗೀಕರಿಸುವ, ವಿಂಗಡಿಸುವ, ನಿಯೋಜಿಸುವ ವಿಶಿಷ್ಟ ಮನೋಭೂಮಿಕೆ. ಹೈಡೆಗರನು ತಂತ್ರಜ್ಞಾನದ ಕುರಿತು ನಡೆಸಿರುವ ಜಿಜ್ಞಾಸೆ ತುಂಬ ವಿಷದವೂ, ಗಹನವೂ ಆಗಿದೆ.

ಆದ್ದರಿಂದ, ಹೈಡೆಗರ್ ತಂತ್ರಜ್ಞಾನದ ಮೂಲಸತ್ವದ ಮಾತಾಡುವಾಗ, ಅಸ್ತಿತ್ವವನ್ನು ಕೆಣಕುವ (ಅಂದರೆ, ಇರುವುದನ್ನು ಅದಿರುವ ಹಾಗೆ ಗ್ರಹಿಸದೇ, ನಮ್ಮ ಅಗತ್ಯಕ್ಕೆ ತಕ್ಕ ಹಾಗೆ ಗ್ರಹಿಸುವ ಮೂಲಕ ಅದನ್ನು ಕೆಣಕುವುದು) ಈ ಅರಿವಿನಾಕಾರದ ಕುರಿತು ಮಾತಾಡುತ್ತಾನೆ. ಆದರೆ, ಹೈಡೆಗರ್ ಪಾರಂಪರಿಕ ಕರಕುಶಲ ವಸ್ತುಗಳು, ಸಾಧನ-ಸಲಕರಣೆಗಳನ್ನು ಇದರ ವ್ಯಾಪ್ತಿಯಿಂದ ಹೊರಗಿಡುತ್ತಾನೆ. ಅಂದರೆ, ಹೈಡೆಗರ್ ಆಧುನಿಕ ಯಂತ್ರಗಳು ಮತ್ತು ಪಾರಂಪರಿಕ ಸಲಕರಣೆಗಳ ನಡುವೆ ಭಿನ್ನತೆ ಸೂಚಿಸುತ್ತಾನೆ. ಸಂಕ್ಷಿಪ್ತವಾಗಿ ಹೇಳಹೋದರೆ ಹೈಡೆಗರನ ತತ್ವಶಾಸ್ತ್ರಕ್ಕೆ ವ್ಯತಿರಿಕ್ತವಾದ, ರಮ್ಯ ಎನಿಸುವಂಥ ಅರ್ಥವನ್ನು ಇದು ಸೂಚಿಸುವ ಅಪಾಯವಿದೆ. ಹಾಗಾಗಿ ಓದುಗರು ನನ್ನ ಈ ಸೂಚ್ಯ ವರ್ಣನೆಯ ಮಿತಿಯನ್ನು ಮನದಲ್ಲಿರಿಸಿಕೊಂಡು, ಇದು ಹೈಡೆಗರ ಹೇಳುತ್ತಿರುವುದರ ಒಂದು ಚಿಕ್ಕ ಅಂಶ ಮಾತ್ರವೆಂದು ಪರಿಗಣಿಸಬೇಕೆಂದು ಕೇಳಿಕೊಳ್ಳುವೆ.

ಹೈಡೆಗರ ನದಿಯೊಂದರ ಉದಾಹರಣೆಯ ಮೂಲಕ ಈ ಭಿನ್ನತೆಯನ್ನು ವಿವರಿಸುತ್ತಾನೆ. ತುಂಬಾ ಹಿಂದಿನಿಂದ ಜನರು ಸರಳ ಸೇತುವೆ ಮಾಡಿಕೊಂಡು ನದಿ ದಾಟುತ್ತಾ ಬಂದಿದ್ದಾರೆ. ಇದು ಒಂದು ಬಗೆಯಲ್ಲಿ ಮೇಲೆ ಹೇಳಿದಂತೆ, ನದಿಯ ಸಹಜ ಅಸ್ತಿತ್ವವನ್ನು ಚಾಲೆಂಜ್ ಮಾಡುವ ಕ್ರಿಯೆಯಾದ್ದರಿಂದ ಮತ್ತು ತನ್ಮೂಲಕ ಮುಂದುವರಿಯುವ ಅನೇಕ ಉಪಯೋಗಗಳ ಸರಣಿಯಲ್ಲಿ ಒಂದು ಭಾಗವಾಗುವುದರಿಂದ, ಅದನ್ನು ನಾವು ತಂತ್ರಜ್ಞಾನ ಎಂದು ಕರೆಯಬಹುದು. ಆದರೆ, ಹೈಡೆಗರನ ಪ್ರಕಾರ, ಆ ಸೇತುವೆ ನದಿಯ “ನಿಷ್ಪ್ರಯೋಜಕ” ಅಸ್ತಿತ್ವವನ್ನು ಬದಲಿಸಿಲ್ಲ; ನದಿ ತನ್ನ ಆಕಾರ, ಚಲನೆಗಳನ್ನು ಮುನ್ನಿನಂತೆ ಮುಂದುವರಿಸಿದೆಯಾದ್ದರಿಂದ, ಅದರ ಸಹಜ ಅಸ್ತಿತ್ವದ ಮೇಲೆ ಉಪಯುಕ್ತತೆಯ ಮೊಹರು ಬಿದ್ದಿಲ್ಲ.

ಅದೇ ನದಿಯ ಮೇಲೆ ಜಲವಿದ್ಯುತ್ತಿನ ಕೇಂದ್ರಕ್ಕಾಗಿ ಡ್ಯಾಮು ಕಟ್ಟಿದರೆ, ನದಿಯ ಸಹಜ ಆಕಾರ, ಚಲನೆ ಮಾರ್ಪಾಡಾಗಿ ಅದು ಈಗ ತನ್ನ “ನಿಷ್ಪ್ರಯೋಜಕ” ಅಸ್ತಿತ್ವ ಕಳೆದುಕೊಂಡು ಮಾನವನ ಉಪಯುಕ್ತತೆಯ ಸರಣಿಯಲ್ಲಿನ ಒಂದು ಸಂಪನ್ಮೂಲವಾಗಿ ಅಸ್ತಿತ್ವದಲ್ಲಿರುತ್ತದೆ. ತಂತ್ರಜ್ಞಾನ ಯಾವಾಗ ಈ ಮೊಹರನ್ನು ಹಾಕುತ್ತದೆಯೋ ಆಗ ಅದು ಅಪಾಯಕಾರಿಯಾಗುವ ದಾರಿಗೆ ತೊಡಗುತ್ತದೆಯೆನ್ನುವುದು ಅವನ ಇಂಗಿತ. ಪಾರಂಪರಿಕ ಕೃಷಿಯನ್ನೂ ಹೀಗೆಯೇ ನೋಡಬಹುದು. ಅದಕ್ಕೆ ವ್ಯತಿರಿಕ್ತವಾಗಿ, ಆಧುನಿಕ ಕೃಷಿ-ಕೈಗಾರಿಕೆಗಳು ನೆಲದ ಸತ್ವವನ್ನೇ ಬದಲಿಸುವ, ಭೂಮಿಯ ಸ್ಥಳಸ್ವರೂಪವನ್ನೇ ಮಾರ್ಪಡಿಸುವ ಮೂಲಕ ಅಪಾಯಕರ ತಂತ್ರಜ್ಞಾನವಾಗುತ್ತದೆ. ಆದ್ದರಿಂದಲೇ ತಂತ್ರಜ್ಞಾನದ ಕುರಿತಾಗಿ ನಾವು ಹೊಂದುವ ಪರ-ವಿರೋಧ ಅಭಿಪ್ರಾಯಗಳು – ಮೋಹವಾಗಲೀ, ದ್ವೇಷವಾಗಲೀ – ಅಷ್ಟೇನೂ ಗಂಭೀರ ರೀತಿಯಲ್ಲಿ ಭಿನ್ನವಾಗಿಲ್ಲ.

ಇವೆರಡೂ ಒಂದು ದೃಷ್ಟಿಯಲ್ಲಿ ತಾಂತ್ರಿಕತೆಯ ಮನೋಭಾವದಿಂದಲೇ ಹೊಮ್ಮುವ ಅಭಿಪ್ರಾಯಗಳು. ಹಾಗೆಂದೇ, ಹೈಡೆಗರನು ನಡೆಸುವ ಚಿಂತನೆಯ ಸೂಚನೆಯೆಂದರೆ, ಕೆಲವು ತಂತ್ರಜ್ಞಾನಗಳನ್ನು ನಾವು ತಿರಸ್ಕರಿಸುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಯಾಕೆಂದರೆ, ತಂತ್ರಜ್ಞಾನವೆಂದರೆ ಸಾಧನ-ಸಲಕರಣೆಗಳಲ್ಲ; ಯಂತ್ರಗಳೂ ಅಲ್ಲ. ತಂತ್ರಜ್ಞಾನ ನಮ್ಮ ಮೇಲೆ ಆರೋಪಿಸಿರುವ ಅಪಾಯ ಯಂತ್ರಗಳಲ್ಲಾಗಲೀ, ಅವುಗಳ ಬಳಕೆಯಲ್ಲಾಗಲೀ ಇಲ್ಲ. ಬದಲಿಗೆ, ಅದರ ಹಿಂದಿರುವ ಒಂದು ಮನೋಭಾವದಲ್ಲಿದೆ. ಹಾಗಾಗಿಯೇ, ಮಾನವರನ್ನು ಬಳಸುವ ಬಗೆಯೂ “ತಾಂತ್ರಿಕ ಬಳಕೆ” ಆಗಬಹುದು. ಹಾಗೆಂದೇ ಹೈಡೆಗರನ ಪ್ರಕಾರ, ಈ ಅಪಾಯದಿಂದ ಪಾರಾಗಬೇಕೆಂದರೆ, ತಂತ್ರಜ್ಞಾನವನ್ನು ನಾವು ಭಿನ್ನವಾಗಿ ಆವರಿಸಿಕೊಳ್ಳಬೇಕು. (ಈ ಹಿನ್ನೆಲೆಯಲ್ಲಿ ಹೈಡೆಗರ್, techne ಶಬ್ದಕ್ಕೆ ಅರಿಸ್ಟಾಟಲ್ ಕೊಡುವ ಅರ್ಥದ ಎಳೆಹಿಡಿದು, ತಂತ್ರಜ್ಞಾನವನ್ನು ಕಲೆಯ ಜೊತೆ ಸಮೀಕರಿಸುತ್ತಾನೆ. ಮತ್ತು ತಂತ್ರಜ್ಞಾನದ ಬಳಕೆಯ ಅರಿವಿನಾಕರ ಕಲೆಯಲ್ಲಿರುವಂತದ್ದಾದರೆ, ಅದು ಮಾನವ ಕುಲ ಯಂತ್ರಗಳಿಂದ ಎದುರಿಸುತ್ತಿರುವ ಅನೇಕ ಅಪಾಯಗಳಿಗೆ ಪರ್ಯಾಯ ಆಗಬಲ್ಲದು ಎಂದು ಹೈಡೆಗರ್ ಸೂಚಿಸುತ್ತಾನೆ).

ತಂತ್ರಜ್ಞಾನಗಳು ಇದ್ದರೂ, ನಾವು ಅವುಗಳನ್ನು ಬಳಸುತ್ತಿದ್ದರೂ ಸಹ, ನಾವು ನಮ್ಮ ಅಸ್ತಿತ್ವವನ್ನು – ನಮ್ಮ ಬಾಳ್ವೆಯನ್ನು – ಹೇಗೆ ಮಾರ್ಪಡಿಸಿಕೊಳ್ಳಬೇಕೆಂದರೆ, ಜಗತ್ತನ್ನು ಅನುಭವಿಸುವ ನಮ್ಮ ಅರಿವಿನಾಕಾರದಲ್ಲಿ ತಂತ್ರಜ್ಞಾನವೇ ನಮ್ಮ ಏಕೈಕ ಅಥವಾ ಮೂಲಭೂತ ಮನೋಭೂಮಿಕೆಯಾಗಬಾರದು. ನಮ್ಮ ಅರಿವಿನಾಕಾರದ ಸ್ವಾಯತ್ತತೆಯನ್ನು ಉಪಯುಕ್ತತೆಯ ಚೌಕಟ್ಟಿಗೆ ಒಪ್ಪಿಸಿ, ಜಗವೆಲ್ಲವನ್ನು “ಗಣಿ”ಯನ್ನಾಗಿ ಗ್ರಹಿಸುವ ಮನೋಭಾವವನ್ನು ಹೈಡೆಗರ್ ಅಪಾಯಕಾರಿ ಎನ್ನುತ್ತಾನೆ.

ಜಗತ್ತನ್ನು ಅದರ ಸಹಜ ಅಸ್ತಿತ್ವದಲ್ಲಿ, “ವಾಸ್ತವಾಕಾರ”ದಲ್ಲಿ, ನಾವು ಗ್ರಹಿಸುವುದನ್ನು ತಾಂತ್ರಿಕತೆ ಹೇಗೆ ತಡೆಯುವುದೆಂದು ಈಗಾಗಲೇ ಚರ್ಚಿಸಿದ್ದೇವೆ. ಹೈಡೆಗರ್ ಇನ್ನೂ ಮುಂದೆ ಹೋಗಿ, ತಂತ್ರಜ್ಞಾನವೆನ್ನುವುದೇ ಜಗತ್ತಾಗಿದೆ ಈಗ ಎನ್ನುತ್ತಾನೆ. ತಾಂತ್ರಿಕತೆಯೇ ಜಗವನ್ನು ಆಳುತ್ತಿರುವ ಸಂದರ್ಭದಲ್ಲಿ ನಾವು ನಮ್ಮ ಸ್ವಾಯತ್ತತೆಯನ್ನು ಮರೆತು ವಿಸ್ಮೃತಿಗೆ ಒಳಗಾಗಿರುತ್ತೇವೆ – ನಾವೊಂದು ಜಗತ್ತನ್ನು ಕಳೆದುಕೊಂಡಿದ್ದೇವೆ ಎಂಬ ಅರಿವೂ ಸಹ ನಮಗಿರುವುದಿಲ್ಲ. ನಮ್ಮ ಹಿರೀಕರಿಗಿದ್ದ ಅನುಭವದ ಚೌಕಟ್ಟುಗಳು ನಮ್ಮದಲ್ಲ. ಉದಾಹರಣೆಗೆ, “ನಮ್ಮೂರಿನಿಂದ ಆ ಊರು, ಒಂದು ಸೂಡಿ ಉರಿವಷ್ಟು ದೂರ” ಎಂಬ ನುಡಿಗಟ್ಟಿನಲ್ಲಿ ನೋಡಿ ಹೇಗೆ ದೂರವನ್ನು ಒಂದು ಕ್ರಿಯೆಯ ಉಲ್ಲೇಖದ ಮೂಲಕ ಸೂಚಿಸಲಾಗಿದೆ. ಆದರೆ, ನಮ್ಮ ಇಂದಿನ ಭಾಷೆಯಲ್ಲಿ ದೂರ-ಸನಿಹಗಳು ಹೆಚ್ಚು ಹೆಚ್ಚು ನಿಖರ ಕಾಲ-ದೇಶಗಳ ಮಾಪಕಗಳ ಮುಖೇನವೇ ಸಾಧ್ಯ. ಈ

ನಿಖರ ಮಾಪಕಗಳ ಹೊರತಾಗಿ ನಮ್ಮ ನುಡಿಗಟ್ಟುಗಳು ಸೂಚಿಸುವ ಮಾಪಕಗಳೆಲ್ಲ ಈಗ ಕೇವಲ ಕಾವ್ಯಾತ್ಮಕ ರೂಪಕಗಳಾಗಿ ಉಳಿದಿವೆ. ಇದು ಒಂದು ಬಗೆಯಲ್ಲಿ ವಾಸ್ತವವನ್ನು ಅಥವಾ ಸತ್ಯವನ್ನು ಅನುಭವಿಸುವ ಸಾಧ್ಯತೆಯನ್ನೇ ನಮಗೆ ಉಳಿಸುವುದಿಲ್ಲ ಎನ್ನುವುದೇ ಹೈಡೆಗರ ಸೂಚಿಸುವ ಮಹಾ ಅಪಾಯ. ಆ ಆಯಾಮದ ಅಸ್ತಿತ್ವವನ್ನೇ ವಿಸ್ಮೃತಿಗೆ ದೂಡಿಬಿಡುವುದೇ ತಾಂತ್ರಿಕತೆ ನಮಗೆ ಒಡ್ಡುತ್ತಿರುವ ಭೀಕರ ಅಪಾಯವೆಂದು ಹೈಡೆಗರ್ ವಾದಿಸುತ್ತಾನೆ.

ಅವನ ಪ್ರಕಾರ, ಮಾನವನನ್ನೂ ಸೇರಿಸಿದಂತೆ ಪ್ರತಿ ವಸ್ತು/ಜೀವಿಯನ್ನೂ ಅವುಗಳ ಮೂಲ ಸ್ವಭಾವ/ಅಸ್ತಿತ್ವಕ್ಕೆ ವ್ಯತಿರಿಕ್ತವಾದ ಚೌಕಟ್ಟಿನಲ್ಲಿ ಗ್ರಹಿಸುವ ಭೀಕರತೆ ತಾಂತ್ರಿಕತೆಯ ಮನೋಭೂಮಿಕೆಯದು. ಹಾಗಾಗಿಯೇ, ವಾಸ್ತವವನ್ನು ಅನುಭವಿಸುವ ನಮ್ಮ ಕ್ಷಮತೆಗೆ ತಾಂತ್ರಿಕತೆ ತಡೆಯೊಡ್ಡುತ್ತದೆ.

ಹೈಡೆಗರನಂತೂ ತನ್ನ ತತ್ವಶಾಸ್ತ್ರೀಯ ಚಿಂತನೆಯ ಉದ್ದೇಶವೇ ಬಾಳ್ವೆಗೆ ತಾಂತ್ರಿಕತೆ ಒಡ್ಡಿರುವ ಈ ತಡೆಯಿಂದ ಬಿಡುಗಡೆ ಸೂಚಿಸುವುದು ಎಂದು ನಂಬಿದ್ದ.

#tellkamalakar@gmail.com