ಆ ಜಗತ್ತೇ ಬೇರೆ. ಅಲ್ಲಿನ ಮಣ್ಣಿನ ಬಣ್ಣ ಬೇರೆ. ಸರೋವರದ ನೀಲಿ ಬೇರೆ. ಆಕಾಶದ ಶುಭ್ರತೆ ಬೇರೆ. ಕಂದು, ಹಳದಿ, ಬೂದು ಬಣ್ಣ ಬೆಟ್ಟಗಳ ವಿನ್ಯಾಸ ಬೇರೆ. ಕಣಿವೆಗಳಲ್ಲಿ ಅಡ್ಡಾಗಿರುವ ಮೌನದ ಗಾಢತೆಯೂ ಬೇರೆ. ಎಂಥವರನ್ನೂ ಅವಾಕ್ಕಾಗಿಸಿ ಕ್ಷಣದಲ್ಲಿ ಆಳ ಧ್ಯಾನ ಸ್ಥಿತಿಗೆ ಕರೆದೊಯ್ಯುವ ಆ ಹಿಮಾಲಯದ ಮರುಭೂಮಿಯ ಚೆಲುವಿನ ಮೋಡಿಯೇ ಬೇರೆ. ಈ ಲಡಾಖ್ ಎಂಬ ವಿಸ್ಮಯ ಪದಗಳಲ್ಲಿ ವಿವರಣೆಗೆ ಸಿಕ್ಕುವುದಲ್ಲ.
ಸಮುದ್ರ ಮಟ್ಟದಿಂದ ೧೦,೦೦೦ ಅಡಿಗೂ ಹೆಚ್ಚು ಎತ್ತರದಲ್ಲಿರುವ ಲೆಹ್ ನಗರವೋ, ಧೂಳು ತುಂಬಿದ ಕಡಿದಾದ ಓಣಿಗಳ ಒಂದೇ ಬಜಾರು ರಸ್ತೆಯ ಚಿಕ್ಕ ಊರು. ಪುಟ್ಟ ಪುಟ್ಟ ಅಂಗಡಿಗಳಲ್ಲಿ ತೂಗು ಹಾಕಿದ ಬಣ್ಣ ಬಣ್ಣದ ಕೈಕಸೂತಿಯ ಬಟ್ಟೆಗಳು. ಬೀದಿಯುದ್ದಕ್ಕೂ ಕೂತು ನೀಲಮಣಿ, ಹವಳ, ಬೆಳ್ಳಿ ಆಭರಣಗಳನ್ನು ಮಾರುವ ಚೆಲುವೆಯರು. ಒಂದು ಕೈಯ್ಯಲ್ಲಿ ಪ್ರಾರ್ಥನಾ ಚಕ್ರ ತಿರುಗಿಸುತ್ತಲೇ ರಾಶಿ ಹಾಕಿದ ಸಕ್ಕರೆ ಬಾದಾಮಿ, ಅಖ್ರೋಟ್, ಚೆರ್ರಿ ಹಣ್ಣುಗಳನ್ನು ಮಾರುವ ಮುದುಕಿಯರು. ಬೀದಿ ಬದಿಯಲ್ಲಿ ಆರಾಮಾಗಿ ಮಲಗಿರುವ ಜೂಲುನಾಯಿಗಳು. ನಾಲ್ಕು ರಸ್ತೆ ಸೇರುವೆಡೆ ಬೃಹತ್ ಪ್ರಾರ್ಥನಾ ಚಕ್ರ. ನಿಮಿಷ ನಿಮಿಷಕ್ಕೂ ಎದುರಾಗುವ ಸೈನಿಕರ ಗುಂಪುಗಳು.

ಲೋನ್ಲಿ ಪ್ಲಾನೆಟ್ನಲ್ಲಿ ಓದಿ ತಿಳಿದಿದ್ದ ಜರ್ಮನ್ ಬೇಕರಿ ಹುಡುಕುತ್ತಾ ನಾವು ಅಂದು ಆ ಓಣಿಗಳಲ್ಲಿ ತಿರುಗುತ್ತಿದ್ದೆವು.

ಜರ್ಮನಿಯಿಂದ ಲಡಾಖ್‌ಗೆ ಬಂದ ಪ್ರವಾಸಿಯೊಬ್ಬ ಈ ವಾತಾವರಣಕ್ಕೆ ಮರುಳಾಗಿ, ಇಲ್ಲೇ ನೆಲೆಸಿ ಜೀವನೋಪಾಯಕ್ಕಾಗಿ ಬೇಕರಿ ತೆರೆದಿದ್ದ. ಅವನು ತಯಾರಿಸುತ್ತಿದ್ದ ಅಪ್ಪಟ ಜರ್ಮನ್ ಕೇಕ್, ಕುಕ್ಕಿ, ಬ್ರೆಡ್‌ಗಳ ಘಮ ಘಮ ಎಲ್ಲೆಡೆ ಹರಡಿ ಅವನ ಬೇಕರಿ ಹೆಸರುವಾಸಿಯಾಗಿತ್ತು. ಇದನ್ನು ಹುಡುಕುತ್ತಾ ನಡೆಯುತ್ತಿದ್ದಾಗ ಹಿಂದಿನಿಂದ ಓಡಿ ಬಂದವನ ಬೂಟಿನ ಸಪ್ಪಳ ಕೇಳಿ ನಿಂತೆವು. ನಮ್ಮೆದುರಿಗೆ ಯುವ ಬಿಎಸ್‌ಎಫ್ ಯೋಧನೊಬ್ಬ ನಗುತ್ತಾ ನಿಂತಿದ್ದ. ಬಿಸಿಲಲ್ಲಿ ಸುಟ್ಟ ಅವನ ಮುಖದಲ್ಲಿ ಬಿಳೀ ಹಲ್ಲುಗಳು ಫಳಫಳನೆ ಹೊಳೆಯುತ್ತಿದ್ದವು.

ಲಡಾಖಿನಲ್ಲಿ ಕಂಡ ಯಾಕ್ ಗಳು‘ಯಾವೂರಿಂದ ಬಂದೀರ್ರಾ?’ ಎಂದು ಕಳಕಳಿಯಿಂದ ಕೇಳಿದ. ನಾವು ಕನ್ನಡದಲ್ಲಿ ಮಾತಾಡುತ್ತಿದ್ದುದು ಅವನ ಕಿವಿಗೆ ಬಿದ್ದಿತ್ತು. ಅವನ ಪ್ರಶ್ನೆಗೆ ಅಚ್ಚರಿಗೊಂಡು ಬೆಂಗಳೂರು ಎನ್ನುತ್ತಿದ್ದಂತೆಯೇ ಖುಶಿಯಿಂದ ಕೈಚಾಚಿದ.

ನಮ್ಮ ಆಹ್ವಾನದ ಮೇರೆಗೆ ಅಂದು ಸಂಜೆ ನಮ್ಮ ಹೋಟೆಲಿಗೆ ಬಂದು ತೆರೆದ ಅಂಗಳದಲ್ಲಿ ಕೂತು ನಮ್ಮೊಡನೆ ಊಟ ಮಾಡುತ್ತಾ ಹರಟಿದ. ಅಂಗಳದ ತುಂಬಾ ಬೆಳದಿಂಗಳು ಚೆಲ್ಲಿತ್ತು.  ಅವನ ಹೆಸರು ಶರಣಪ್ಪ. ಊರು ಹುಬ್ಬಳ್ಳಿ ಹತ್ತಿರದ ಒಂದು ಹಳ್ಳಿ. ಇದುವರೆಗೂ ಶ್ರೀನಗರದಲ್ಲಿದ್ದ ಅವನಿಗೆ ಇತ್ತೀಚೆಗೆ ಲೆಹ್‌ಗೆ ಪೋಸ್ಟಿಂಗ್ ಆಗಿತ್ತು.

ಶರಣಪ್ಪನ ಮಾತಿನ ಲಹರಿ ಹರಿದಿತ್ತು. ತನ್ನ ಊರು, ತಂಗಿ, ತಮ್ಮಂದಿರ ನೆನಪು, ತನ್ನ ಮದುವೆ ಮಾಡಲು ಹೆಣ್ಣು ನೋಡಿ ಕಾದು ಕುಳಿತಿರುವ ತಂದೆ ತಾಯಿ, ತಮ್ಮೂರಿನ ಕರಿದಂಟಿನ ರುಚಿ, ಶ್ರೀನಗರದಲ್ಲಿ ಕಳೆದ ಒಂದು ವರ್ಷ, ಶೆಲ್‌ದಾಳಿಗೆ ಸಿಕ್ಕಿ ಅಸುನೀಗಿದ ಗೆಳೆಯ ಪರಮೇಶನ ಕೊನೆಯ ಮಾತುಗಳು, ಡ್ರಾಸ್‌ನಲ್ಲಿ ಅಪೂರ್ವ ರೀತಿಯಲ್ಲಿ ಕಾದಾಡಿ ವಿಜಯ ಸಾಧಿಸಿದ ಲಡಾಖಿ ಸ್ಕೌಟ್ಸ್ ರೆಜಿಮೆಂಟಿನ ಶೌರ್ಯ, ಸಿಡಿಮದ್ದಿನ ಮಳೆಗೆ ಸಿಕ್ಕು ಕಪ್ಪು ಬಣ್ಣ ತಿರುಗಿರುವ ಕಾಶ್ಮೀರದ ಬಿಳಿ ಹಿಮದ ಹೊದಿಕೆ ಹೀಗೇ ಏನೇನೋ. ನಾವೆಲ್ಲಾ ಅಲ್ಲಿಂದೆದ್ದು ಮಲಗಲು ಹೊರಟಾಗ ಗಂಟೆ ರಾತ್ರಿ ಒಂದಾಗಿತ್ತು. ಅಪರೂಪಕ್ಕೆ ನಮ್ಮೂರಿನೋರು ಸಿಕ್ಕಿದ್ದು ಛಲೋ ಆತ್ರಿ ಎನ್ನುತ್ತಾ ಖುಶಿಯಿಂದ ವಿದಾಯ ಹೇಳಿದ ಶರಣಪ್ಪ.

ಜಗತ್ತಿನ ಅತಿ ಎತ್ತರದ ರಸ್ತೆಲೇ ನಲ್ಲಿ ಟಿಬೆಟನ್ ಮಾರ್ಕೆಟ್ ತುಂಬಾ ಜನಪ್ರಿಯ ಸ್ಥಳ. ಪ್ರವಾಸಿಗಳು ಮತ್ತು ಲೇ ನಿವಾಸಿಗಳು ಒಂದಲ್ಲಾ ಒಂದು ವ್ಯಾಪಾರಕ್ಕಾಗಿ ಅಲ್ಲಿಗೆ ಬಂದೇ ಬರುತ್ತಾರೆ. ಇಲ್ಲಿರುವ ಹತ್ತಾರು ಅಂಗಡಿಗಳಲ್ಲಿ ಕಾಣಸಿಗುವ ಟಿಬೆಟನ್ ತರುಣ ತರುಣಿಯರಲ್ಲಿ ಹೆಚ್ಚು ಜನ ಭಾರತದಲ್ಲಿ ಹುಟ್ಟಿದವರು. ಆದರೂ ತಮ್ಮ ಭಾಷೆ, ಸಂಸ್ಕೃತಿ ಉಳಿಸಿಕೊಂಡಿರುವವರು. ಇವರ ಅಪ್ಪನೋ, ಅಮ್ಮನೋ, ಅತ್ತೆಯೋ, ಚೀನೀಯರ ಕಿರುಕುಳಕ್ಕೆ ಹೆದರಿ ಇಲ್ಲಿಗೆ ಬಂದು ಭಾರತವನ್ನೇ ತಮ್ಮದಾಗಿಸಿಕೊಂಡ ಜನ. ಇಂದಿಗೂ ವಾರಕ್ಕೊಮ್ಮೆ ಸಂಜೆಯ ಪ್ರಾರ್ಥನೆಯ ನಂತರ ಇವರೆಲ್ಲಾ ಮೋಂಬತ್ತಿ ಹಿಡಿದು ಮೌನ ಮೆರವಣಿಗೆ ಹೊರಡುತ್ತಾರೆ. ಸ್ವತಂತ್ರ ಟಿಬೆಟ್ ತಮ್ಮ ಹಕ್ಕೆಂದು ಈ ಮೂಲಕ ಸಾರುತ್ತಾರೆ.

ಕುಲುಕುಲು ನಗುತ್ತಾ ಸ್ನೇಹದಿಂದ ಮಾತಾಡುವ ಇವರು ವ್ಯಾಪಾರ ಕುದುರಿಸುವಲ್ಲಿ ಪ್ರವೀಣರು. ಕಲಾತ್ಮಕ ಬೆಳ್ಳಿ ಆಭರಣಗಳೂ, ಗಟ್ಟಿಮುಟ್ಟಾದ ಮೌಂಟನ್ ಶೂಗಳು, ಕಸೂತಿ ಹಾಕಿದ ಜ್ಯಾಕೆಟ್ಟು, ಕಾಲುಚೀಲ, ಕೈಚೀಲಗಳು, ಯುವ ಜನಾಂಗಕ್ಕಾಗಿ ಆಕರ್ಷಕ ಟೀ ಶರಟುಗಳು. ಅಲ್ಲಿನ ಕೊರೆಯುವ ಚಳಿಗೆ ಸರಿ ಹೊಂದುವಂಥಾ ಹಕ್ಕಿಯ ರೆಕ್ಕೆಪುಕ್ಕಗಳನ್ನು ತುಂಬಿದ ಭಾರೀ ಕೋಟುಗಳು, ಸ್ಲೀಪಿಂಗ್ ಬ್ಯಾಗುಗಳು, ಟೆಂಟುಗಳು, ಮಕ್ಕಳಿಗಾಗಿ ಬಣ್ಣ ಬಣ್ಣದ ಸ್ಕೂಲ್ ಬ್ಯಾಗುಗಳೂ… ಅಲ್ಲಿ ಸಿಗದ ವಸ್ತುವೇ ಇರಲಿಲ್ಲ. ಎಲ್ಲಾ ಇಂಪೋರ್ಟೆಡ್!

ಅಲ್ಲಿ ತಿರುಗಾಡುತ್ತಾ ಅಂಗಡಿಯೊಂದರಲ್ಲಿ ನೇತಾಡುತ್ತಿದ್ದ ಅಡಿಡಾಸ್ ಜ್ಯಾಕೆಟನ್ನು ಮೆಚ್ಚುತ್ತಿದ್ದಾಗ ಕನ್ನಡದವರೇನ್ರೀ ಎಂಬ ಧ್ವನಿ ಕೇಳಿ ಅತ್ತ ತಿರುಗಿದೆವು. ಸ್ಟೂಲ್ ಮೇಲೆ ನಿಂತು ಏನೋ ತೆಗೆಯುತ್ತಿದ್ದವನು ಅಲ್ಲಿಂದಿಳಿದು ನಮ್ಮೆಡೆಗೆ ನಡೆದು ಬಂದ ಹುಡುಗ ‘ನಾನೂ ಕನ್ನಡದವನ್ರೀ’ ಎಂದ ನಗುತ್ತಾ. ಸುಮಾರು ೨೦-೨೨ ವಯಸ್ಸಿನ, ಹೆಚ್ಚೆಂದರೆ ಐದಡಿ ಎರಡಂಗುಲ ಎತ್ತರವಿರಬಹುದಾದ ಆ ತರುಣನ ಹೆಸರು ಸಿದ್ದು. ಉತ್ತರ ಕರ್ನಾಟಕದ ಹಳ್ಳಿಯೊಂದರಿಂದ ಬಂದವನು. ಊರಲ್ಲಿ ತಂದೆ, ತಾಯಿ, ಅಣ್ಣ, ತಂಗಿ, ಒಂದಷ್ಟು ಜಮೀನು. ಹೆಚ್ಚಾಗಿ ಬಡತನ. ಮೆಟ್ರಿಕ್ ಮುಗಿಸಿ ಮನೆಗೆ ನೆರವಾಗಲು ಕೆಲಸಕ್ಕೆ ಸೇರಬೇಕೆಂದಿದ್ದಾಗ ಹತ್ತಿರವೇ ಇದ್ದ ಮುಂಡುಗೋಡಿನ ಸನ್ಯಾಸಿಯೊಬ್ಬನ ಪರಿಚಯವಾಗಿತ್ತು. ಸ್ನೇಹಕ್ಕೆ ತಿರುಗಿತು. ಅವನ ಒತ್ತಾಯಕ್ಕೆ ಮಣಿದು ಒಮ್ಮೆ ಅವನೂರು ನೋಡಲು ಬಂದ ಸಿದ್ದು ಇಲ್ಲಿಯೇ ಕೆಲಸ ಹಿಡಿದಿದ್ದ. ಒಂದೆರಡು ವರ್ಷ ಬೇರೆ ಯಾರದೋ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನು, ಈಗ ತನ್ನದೇ ಅಂಗಡಿ ಹೊಂದಿದ್ದ. ಬಂದ ಹಣದಲ್ಲಿ ತಂದೆ-ತಾಯಿಗೂ ಕಳಿಸಿ ಅವರ ನೆಮ್ಮದಿ ಹೆಚ್ಚಿಸಿದ.

‘ಇನ್ನೊಂದಷ್ಟು ಜಮೀನೂ ತಗೊಂಡ್ವಿ ಊರಲ್ಲಿ. ತಂಗಿ ಮದ್ವೆ ಆದ್ರೆ ಆಯ್ತು. ಇಲ್ಲಿ ಸಂಪಾದನೆ ಚೆನ್ನಾಗೇ ಆಗುತ್ತೆ. ಒಂದ್ಸಲ ನಮ್ಮ ತಂದೆ ತಾಯೀನ್ನೂ ಇಲ್ಲಿಗೆ ಕರ‍್ಕೊಂಡು ಬಂದಿದ್ದೇರಿ.  ಎಲ್ಲಾ ಇಲ್ಲೇ ಬಂದ್ಬಿಡಿ ಎಂದೆ. ನಮ್ಮೂರೇ ನಮಗೆ ಸರಿ, ಬಿಟ್ಟು ಬರೊಲ್ಲ ಅಂದ್ರು!’ ಎಂದು ಹೇಳಿಕೊಂಡ. ಈಗ ಟಿಬೆಟನ್, ಲಡಾಖಿ, ಹಿಂದಿ, ಇಂಗ್ಲೀಷ್, ಕನ್ನಡ ಎಲ್ಲಾ ನಿರರ್ಗಳವಾಗಿ ಮಾತಾಡುವ ಸಿದ್ದು ಇಲ್ಲಿ ತುಂಬಾ ಫೇಮಸ್!

ಲಡಾಖ್ ನಲ್ಲಿಯೂ ಕನ್ನಡ ಕಂಪು‘ಇಲ್ಲಿ ಜನ ತುಂಬಾ ಒಳ್ಳೇವ್ರೀ. ತುಂಬಾ ಭೋಳೆ. ಊರು ಬಿಟ್ಟು ಬಂದಾಗ ಸ್ವಲ್ಪ ದಿನ ಕಷ್ಟ ಅನ್ನಿಸ್ತು. ಎಲ್ಲಾದ್ರೂ ದುಡಿಬೇಕು ತಾನೆ? ಭಾಷೆ ಕಲಿತೆ, ವ್ಯವಹಾರ ಕಲಿತೆ…. ಸಂಪಾದನೆ ಚೆನ್ನಾಗಿ ಆಗುತ್ತೆ. ಆರ್ಮಿಯೋರೆಲ್ಲಾ ನಮ್ಮ ಗಿರಾಕಿಗಳೇ…’ ಎಂದು ಹೆಮ್ಮೆಯಿಂದ ಹೇಳಿದ ಸಿದ್ದು ನಮಗೆ ಬೇಕಾದ ಸಾಮಾನುಗಳನ್ನು ತಾನೇ ಆರಿಸಿ ಕೊಟ್ಟ. ಬೀಳ್ಕೊಡುತ್ತಾ ‘ಕಾಗದ ಬರೀರಿ.  ಬೆಂಗಳೂರಿಗೆ ಬಂದಾಗ ಬರ‍್ತೀನಿ, ಬೆಂಗಳೂರು ನೋಡಿಲ್ಲ… ತುಂಬಾ ಕೇಳಿದೀನಿ ಅಷ್ಟೇ’ ಎಂದ.  ವಿಳಾಸ ಕೇಳಿದಾಗ, ‘ಸಿದ್ದು, ಟಿಬೆಟನ್ ಮಾರ್ಕೆಟ್, ಲೆಹ್ ಎಂದು ಬರೆದರೆ ಸಾಕು, ನಂಗೇ ಸೀದಾ ತಲುಪಿಬಿಡುತ್ತೆ’ ಎಂದ ಜಂಬದಿಂದ.

ಲಡಾಖ್‌ನಲ್ಲಿ ನೆಲೆಸುವುದೆಂದರೆ ಮುಂಬೈ, ದಿಲ್ಲಿ, ಮದ್ರಾಸುಗಳಲ್ಲಿ ನೆಲೆಸಿದಂತಲ್ಲ, ಅಪರಿಚಿತ ಭಾಷೆ, ಅಪರಿಚಿತ ಸಂಸ್ಕೃತಿ, ಅಪರಿಚಿತ ಅಡುಗೆ ಊಟ, ವೈಪರೀತ್ಯದ ಹವಾಮಾನ… ಅಂತೂ ಈ ದಿಟ್ಟ ಉತ್ತರ ಕರ್ನಾಟಕದ ಹುಡುಗನ ಸಾಹಸಕ್ಕೆ ತಲೆಬಾಗಿದೆವು.

ಲಡಾಖ್‌ನ ಅದ್ಭುತ ಪರ್ವತ ಶ್ರೇಣಿಗಳು, ಪ್ರಖ್ಯಾತ ಪ್ಯಾಂಗಾಂಗ್ ಸರೋವರ, ದಾರಿಯಲ್ಲಿ ಕಾಣಸಿಗುವ ಅಪರೂಪದ ಜೋಡಿ ಡುಬ್ಬದ ಒಂಟೆಗಳನ್ನು ಅರಸಿ ನಾವು ಜೀಪ್ ಸಫಾರಿ ಹೊರಟಿದ್ದೆವು. ನಮ್ಮ ಜೀಪು ಸುಮಾರು ೧೧,೦೦೦ ಅಡಿ ಎತ್ತರದಿಂದ ಇನ್ನೂ ಮೇಲೇರಲು ಪ್ರಾರಂಭ ಮಾಡಿತ್ತು. ದಾರಿಯುದ್ದಕ್ಕೂ ಅಲ್ಲಲ್ಲಿ ಪುಟ್ಟ ಪುಟ್ಟ ಹಳ್ಳಿಗಳು. ಪಟಪಟ ಹಾರುವ ಬೌದ್ಧ ಧ್ವಜಗಳು. ಕೈ ಬೀಸುವ ಕೆಂಪು ಕೆನ್ನೆಯ ಮುದ್ದು ಮಕ್ಕಳು. ಥಟ್ಟನೆ ಎದುರಾಗುವ ಸ್ತೂಪಗಳ ಸಾಲುಗಳು. ಓಂ ಮಣಿ ಪದ್ಮೇ ಹಂ ಎಂದು ಕೆತ್ತಿ ಗುಡ್ಡೆ ಹಾಕಿದ ಪವಿತ್ರ ಗುಂಡುಕಲ್ಲುಗಳ ರಾಶಿಗಳು. ಅಲ್ಲಲ್ಲಿ ತೂಗಾಡುತ್ತಿದ್ದ ಕೀಕಿ ಸೋಸೋ ಲಾಘಾರಿಯೇ ಎಂಬ ಬ್ಯಾನರ್‌ಗಳು. (ಕಾರ್ಗಿಲ್ ಯುದ್ಧದಲ್ಲಿ ಅತಿ ಶೌರ್ಯದಿಂದ ಕಾದಾಡಿ ಗೆದ್ದು ಬಂದ ಲಡಾಖಿ ಸ್ಕೌಟ್ ರೆಜೆಮೆಂಟಿನ ವಿಜಯ ಪತಾಕೆ ಇದು) ಎಲ್ಲೂ ಹಸಿರಿನ ಉಸಿರಿಲ್ಲ. ಪಕ್ಕದಲ್ಲೇ ಹರಿದು ಬರುವ ಸಿಂಧೂ ನದಿ. ಎಷ್ಟೋ ದೂರದ ನಂತರ ದಾರಿಯಲ್ಲೇ ಸಿಗುವ ಪುರಾತನ ಶೇ ಅರಮನೆ ಮತ್ತು ಥಿಕ್ಸೆ ಬುದ್ಧ ವಿಹಾರ. ದೊಡ್ಡ ಗುಡ್ಡಕ್ಕೆ ಅಂಟಿ ನಿಂತಂತಿದ್ದ ಈ ದೇಗುಲ ಸುಂದರ ಮರದ ಕೆತ್ತನೆಯ ಕಟ್ಟಡ. ಆಕರ್ಷಕ ಕೆಂಪು, ನೀಲಿ, ಹಳದಿ ಬಣ್ಣಗಳ ಚಿತ್ತಾರ. ಹತ್ತಲು ಕಡಿದಾದ ಮೆಟ್ಟಿಲುಗಳು. ಶಾಂತ ವಾತಾವರಣದಲ್ಲಿ, ಧೂಪದ ಪರಿಮಳದ ನಡುವೆ ಮೌನದ ನಗೆ ಬೀರುವ ಬುದ್ಧ. ಆ ನಿಶ್ಯಬ್ಧ ಸಾಗರದಲ್ಲಿ ಮೊಳಗಿ ಅನಂತದಲ್ಲಿ ಲೀನವಾಗುವ ಗಂಟೆ, ಕಹಳೆ, ಡಮರುಗಳ ದನಿ. ಅಲ್ಲಾಡದೆ ಉರಿಯುವ ಬೆಣ್ಣೆ ದೀಪಗಳು. ಮಂತ್ರ ಪಠಣ ಮಾಡುತ್ತಿರುವ ಸನ್ಯಾಸಿಗಳು. ಅವರಿಗೆ ಚಹಾ ಹಂಚುತ್ತಿರುವ ಚಿಕ್ಕ ಹುಡುಗರು.

ಸ್ವಲ್ಪ ಹೊತ್ತು ಅಲ್ಲಿದ್ದು ಹೊರಬಂದಾಗ, ಬಾಗಿಲಲ್ಲಿ ಎಣ್ಣೆಗೆಂಪು ವಸ್ತ್ರ ತೊಟ್ಟ ಹದಿಹರೆಯದ ಸನ್ಯಾಸಿ ನಗೆ ಬೀರಿದ. ಚಳಿಗಾಳಿಗೆ ನಡುಗುತ್ತಾ, ಜ್ಯಾಕೆಟ್ ಹುಡ್ ತಲೆಮೇಲೆ ಎಳೆದುಕೊಳ್ಳುತ್ತಿದ್ದ ನನ್ನನ್ನು ನೋಡಿ ‘ತುಂಬಾ ಚಲೀನಾ?’ ಎಂದ.  ನನ್ನ ಗಲಿಬಿಲಿ ಕಂಡು ನಗುತ್ತಾ, ‘ಕನ್ನಡ ಬರತ್ತೆ. ಒಂದು ವರ್ಷ ಕುಶಾಲನಗರದಲ್ಲಿದ್ದೆ’ ಎಂದ!

ಮನಮೋಹಕ ಪ್ಗ್ಯಾಂಗಾಂಗ್ ಸರೋವರಸಮುದ್ರ ಮಟ್ಟದಿಂದ ಸುಮಾರು ೧೪,೦೦೦ ಅಡಿ ಎತ್ತರದಲ್ಲಿರುವ ಪ್ಯಾಂಗಾಂಗ್ ಸರೋವರದ ನಡುವೆ ಭಾರತ-ಚೈನಾ ಅಂತಾರಾಷ್ಟ್ರೀಯ ಗಡಿರೇಖೆ ಹಾದು ಹೋಗುತ್ತದೆ. ಹಾಗಾಗಿ, ಕಂದು, ಹಳದಿ, ಬೂದು ಬಣ್ಣದ ಬೆಟ್ಟಗಳ ಹಿನ್ನೆಲೆ ಹೊಂದಿರುವ ಈ ಮಿಂಚುವ ನೀಲಿ ನೀರಿನ ಮಾಯೆಯನ್ನು ಅನುಭವಿಸುತ್ತಾ ಬೇಕೆಂದಷ್ಟು ಹೊತ್ತು ಅಲ್ಲಿ ಕೂತಿರುವ ಹಾಗಿಲ್ಲ.  ರಕ್ಷಣಾ ಪಡೆಗಳ ಅಪ್ಪಣೆ ಪಡೆದು ಗಂಟೆ ಹೊತ್ತು ಆ ಸೌಂದರ್ಯ ಸವಿದು ಹೊರಟುಬಿಡಬೇಕು. ಈಗ ಪಾರದರ್ಶಕವಾಗಿ ಹೊಳೆಯುತ್ತಿರುವ ನೀಲಿ ಸರೋವರ ಚಳಿಗಾಲದಲ್ಲಿ ಹೇಗೆ ಹೆಪ್ಪುಗಟ್ಟುತ್ತದೆಯಿಂದರೆ ಆರ್ಮಿ ಜನ ತಮ್ಮ ಮೋಟರ್ ಬೈಕುಗಳನ್ನು ಅದರ ಮೇಲೆ ಓಡಿಸುತ್ತಾರೆ ಎಂದು ಅದರ ಇನ್ನೊಂದು ಅವತಾರದ ವರ್ಣನೆ ಕೊಟ್ಟವನು ನಮ್ಮ ಡ್ರೈವರ್ ದೋರ್ಜೆ.

ಇಲ್ಲಿಗೆ ತಲುಪುವ ರಸ್ತೆಯೂ ತುಂಬಾ ಕಠಿಣ. ಒಂದು ಕಡೆ ಪರ್ವತವಾದರೆ, ಇನ್ನೊಂದೆಡೆ ಪ್ರಪಾತ.  ಜೊತೆಗೆ ಕೆಲವು ಕಡೆ ಟಾರು ಕಿತ್ತು ಹೋಗಿ ಕಲ್ಲುಗಳ ಮೇಲೆ ಗಡಗಡ ಹೋಗುವ ಜಿಪ್ಸಿ.
ದಾರಿಯುದ್ದಕ್ಕೂ ಎದುರಾಗುವ ಒಂದೊಂದು ಮೈಲುಗಲ್ಲುಗಳ ಮೇಲೂ ಅಲ್ಲಿ ಹಿಂದಿನ ಯುದ್ಧಗಳಲ್ಲಿ ಹುತಾತ್ಮರಾದ ಯೋಧರ ಹೆಸರುಗಳು. ವಿವರಗಳು. ಇದ್ದಕ್ಕಿದ್ದಂತೆ ಎದುರಿಗೆ ಕಾಣುತ್ತಿದ್ದ ಬೋಳು ಗುಡ್ಡದ ಹಿಂದಿನಿಂದ ಬರುತ್ತಿದ್ದ ಕಪ್ಪು ಹೊಗೆ ನಮ್ಮನ್ನು ಅಚ್ಚರಿಗೊಳಿಸಿತು.

ಜೀಪು ಸುತ್ತಿ ಸುತ್ತಿ ಹೋದಾಗ ಕಂಡಿದ್ದು ಅಲ್ಲಿ ನಿಂತಿದ್ದ ಸೈನ್ಯದ ಬಾರ್ಡರ್ ರೋಡ್ಸ್ ನವರಿಗೆ  ಸೇರಿದ ಟ್ರಕ್ಕುಗಳು. ಕೆಳಗೆ ೫೦-೬೦ ಕೂಲಿಯಾಳುಗಳು ಆ ರಸ್ತೆಗೆ ಟಾರ್ ಹಚ್ಚುವ ಕೆಲಸ ಮಾಡುತ್ತಿದ್ದರು. ಅವರೆಲ್ಲಾ ಕೈ ಬೀಸಿದಾಗ ನಾವು ಜೀಪ್ ನಿಲ್ಲಿಸಿ ಇಳಿದೆವು. ಬಿಹಾರದಿಂದ ಬೇಸಗೆಯಲ್ಲಿ ಹೊಟ್ಟೆಪಾಡಿಗಾಗಿ ಬಂದು ಇಲ್ಲಿನ ಚಳಿ ಕೊರೆತದಲ್ಲಿ ಕೂಲಿ ಮಾಡುತ್ತಿದ್ದ ಜನ ಅವರು. ಅವರಿಗೆ ಆ ಚಳಿಯಲ್ಲಿ ಬೇಕಾಗಿದ್ದುದು ಸಿಗರೇಟು. ಅದರೆ ನಾವು ನಾಲ್ಕು ಜನರಲ್ಲಿ ಸ್ಮೋಕ್ ಮಾಡುವ ಅಭ್ಯಾಸ ಯಾರಿಗೂ ಇರಲಿಲ್ಲ. ನಾವು ದಾರಿಗಾಗಿ ಇಟ್ಟುಕೊಂಡಿದ್ದ ಒಂದಷ್ಟು ಬಿಸ್ಕಟ್ ಪ್ಯಾಕೆಟ್ಟುಗಳನ್ನು ಅವರಿಗೆ ಕೊಟ್ಟಾಗ ನಗುನಗುತ್ತಾ ತೆಗೆದುಕೊಂಡರು. ಆದರೆ ಆ ನಗುವಿನ ಹಿಂದೆ ಸ್ವಲ್ಪ ನಿರಾಸೆಯೂ ಇತ್ತೆನಿಸಿತು!

ಲಡಾಖ್ ಪರ್ವತ ಶ್ರೇಣಿಗಳನ್ನೇರುತ್ತಾ ಸುಮಾರು ೧೮,೦೦೦ ಅಡಿ ಎತ್ತರದಲ್ಲಿರುವ ಖಾರ್ ಡುಂಗ್ಲ ಪಾಸ್ ಮೂಲಕ ಹಾದು ಹೋಗಬೇಕು. ಇದು ಜಗತ್ತಿನಲ್ಲಿ ಅತ್ಯಂತ ಎತ್ತರದಲ್ಲಿರುವ, ವಾಹನಗಳು ಚಲಿಸಬಹುದಾದ ರಸ್ತೆಗಳಲ್ಲಿ ಒಂದು. ಆ ಶಿಖರ ಮುಟ್ಟಿ ಸೇನೆಯ ಚೆಕ್ ಪೋಸ್ಟನಲ್ಲಿಳಿದಾಗ ಎದುರಾದದ್ದು ಕೊರೆಯುವ ಚಳಿಗಾಳಿ, ‘ವೆಲ್ಕಮ್ ಟು ಚಾಂಗ್ಲಾ ಬಾಬಾ’ ಎಂದು ಬೇರೆ ಬೇರೆ ಭಾಷೆಗಳಲ್ಲಿ ಬರೆದಿರುವ ಫಲಕ. ಹಿಂದೆಯೇ ಪುಟ್ಟ ದೇಗುಲ. ಸುತ್ತಲೂ ಅವಾಕ್ಕಾಗಿಸುವ ಹಿಮಶಿಖರಗಳು, ಚುಚ್ಚುವ ಬಿಸಿಲು. ಅಲ್ಲಿ ಒಂದಷ್ಟು ಭಾರತೀಯ ಸೈನಿಕರ ಶೆಡ್ಡುಗಳು, ಒಂದೆರಡು ವಾಹನಗಳು, ಸ್ನೇಹದ ನಗುವಿನಿಂದ ಸ್ವಾಗತಿಸುವ ಸೈನಿಕರು. ಇದರ ನಡುವೆ ಪುಟ್ಟ ಗುಡ್ಡಕ್ಕಂಟಿದಂತೆ ಬಣ್ಣಬಣ್ಣದ ಧ್ವಜಗಳು, ಗಂಟೆಗಳಿಂದ ಅಲಂಕೃತವಾದ ದೇಗುಲ. ರಕ್ಷಣಾ ಪಡೆಯವರು ಶ್ರದ್ಧೆ, ಪ್ರೀತಿಗಳಿಂದ ನಿರ್ಮಿಸಿ ನೋಡಿಕೊಳ್ಳುತ್ತಿರುವ ಪವಿತ್ರ ಸ್ಥಳ. ಈ ದೇವಾಲಯ ಹೊಕ್ಕು ಚಾಂಗ್ಲಾ ಬಾಬಾಗೆ ವಂದಿಸಿ, ಪ್ರದಕ್ಷಿಣೆ ಹಾಕಿದಾಗ ಕಂಡು ಬಂದದ್ದು, ಗೋಡೆ ತುಂಬಾ ಬೇರೆ ಬೇರೆ ಧರ್ಮದ ಚಿತ್ರಗಳು, ಚಿಹ್ನೆಗಳು. ಗುಡಿತುಂಬಾ ಹರಡಿದ್ದ ಸರ್ವಧರ್ಮ ಸಮನ್ವಯದ ಸಾರ.

ಆಗ ಎದುರಾಗಿತ್ತು, ಗುಂಡಾಗಿ ಕನ್ನಡದ ಅಕ್ಷರಗಳಲ್ಲಿ ಬರೆದ ಕಾಯಕವೇ ಕೈಲಾಸ ಫಲಕ! ಕೆಳಗೆ ಉಳ್ಳವರು ಶಿವಾಲಯವ ಮಾಡುವರು… ವಚನ.

ಆ ಮೌನ ಶಿಖರದ ಮೇಲೆ ಕೂಡಲಸಂಗಮನೊಡನೆ ಆದ ಮಿಲನ ನಮ್ಮೆಲ್ಲರ ಕಣ್ಣಂಚಿನಲ್ಲಿ ಸಂತಸದ ಹನಿ ಮೂಡಿಸಿತ್ತು! ನಮ್ಮ ಆ ಪ್ರವಾಸಕ್ಕೊಂದು ಹೊಸ ಆಯಾಮ ಕೊಟ್ಟಿತ್ತು.

[ಚಿತ್ರಗಳು-ಲೇಖಕಿಯವು]