ಈ ಕವಿಯ ನೋಟ ನೆಟ್ಟಿರುವುದು ಯಾವುದರ ಮೇಲೆ? ಮೊದಲ ಓದಿಗೇ ನಮಗೆ ತೋರುವುದು ಈತ ಬಿಟ್ಟ ಕಣ್ಣ ಮುಚ್ಚದ ಹುಡುಗನೆಂದು. ತನ್ನ ಸುತ್ತಲಿನ ಎಲ್ಲ ವಿದ್ಯಮಾನಗಳನ್ನೂ ಗಮನಿಸುತ್ತಲೇ, ತನಗೇನೂ ಆಗಬೇಕಿಲ್ಲವೆಂಬಂತೆ ನಟಿಸುತ್ತಲೇ ಈ ಬಗೆಯ ನಿರ್ಲಿಪ್ತತೆಯು ಆತ್ಮಘಾತುಕವೆಂಬ ಎಚ್ಚರವನ್ನು ಪ್ರಕಟಿಸುತ್ತಲೇ ಇರುವ ಕವಿ ಈತ.
ಗುರುಗಣೇಶ ಭಟ್‌ ಕವನ ಸಂಕಲನ “ಇದುವರೆಗಿನ ಪ್ರಾಯ”ದ ಕುರಿತು ಆರ್.‌ ವಿಜಯರಾಘವನ್‌ ಬರೆದ ಲೇಖನ

 

ಋತು ಬಂದಾಗ ಋತು
ಬಿಟ್ಟರೆ ಹೂವು ಕಾಯಿ ಹಣ್ಣು
ತೆನೆ

ಬೀಸಿದಾಗ ಗಾಳಿ
ಆದಾಗ ತೃಪ್ತಿ.
ಬಂದಾಗಲೇ ಮಳೆ
ಚಳಿ ಜ್ವರ ಡಾಕ್ಟರು.

ಆದರೆ
ಮದುವೆ ಮಕ್ಕಳು
ಹಸಿವು

ಆಗದಿದ್ದರೆ ಶುಂಟಿ ಕಷಾಯ

ನಿರೀಕ್ಷೆ ಸಲ್ಲ –

ಈ ಕವಿತೆಗೆ ಅರ್ಥವೇನು ಎಂದು ನಾನು ಅಂದರೆ ಈ ಕವಿತೆಯ ಓದುಗ ಪ್ರಶ್ನೆ ಹಾಕಿಕೊಂಡರೆ ಏನಾದರೂ ಅರ್ಥ ಹೊಳೆದೀತೇ? ಅಂದರೆ ಕವಿತೆಗೊಂದು ಅರ್ಥ ಬೇಕೆ? ವಿಲಿಯಂ ಕಾರ್ಲೋಸ್ ವಿಲಿಯಂ ಮತ್ತು ಏಕೆ ರಾಮಾನುಜನ್ ಅಂಥವರು ಕವಿತೆಯನ್ನು ಅರ್ಥದ ಹಂಗಿನಿಂದ ಬಿಡುಗಡೆಗೊಳಿಸಲು ಪ್ರಯತ್ನಿಸಿದರೆ?

ಕೆ ವಿ ನಾರಾಯಣ ಅವರು ನನ್ನ ಸಂಕಲನವೊಂದರ ಸಂದರ್ಭದಲ್ಲಿ ಹೇಳಿದ ‘ಕವಿತೆ ಏನನ್ನೂ ಹೇಳುವುದಿಲ್ಲ, ಅದು ಸುಮ್ಮನೆ ಇರುತ್ತದೆ ಅಷ್ಟೇ’ ಎಂಬ ಮಾತನ್ನು ಕೇಳಿಕೊಳ್ಳುವುದೆಂದರೆ ಕಾವ್ಯದ ಎಲ್ಲವನ್ನೂ ಅರಿತಂತೆಯೇ ಅಥವಾ ಅದರ ಒಂದು ಮಗ್ಗುಲನ್ನು ಅರಿತಂತೆ ಆಗುತ್ತದೆಯೇ? ಎಂದು ಮುಂತಾದ ಹಲವಾರು ಪ್ರಶ್ನೆಗಳನ್ನು ಗುರುಗಣೇಶಭಟ್ಟ ಅವರ ‘ಇದುವರೆಗಿನ ಪ್ರಾಯ’ ಎಂಬ ಸಂಕಲನದ ಕವಿತೆಗಳು ಓದುಗನಲ್ಲಿ ಹುಟ್ಟಿಸುತ್ತವೆ. ಪ್ರಾಯಶಃ ಕನ್ನಡ ಯಾವೊಬ್ಬ ಮೊದಲ ಸಂಕಲನದ ಕವಿಯು ಹುಟ್ಟಿಸದಿದ್ದ ಪ್ರಶ್ನೆಗಳು ಇವು. ಇವು ನಿರುದ್ದೇಶದ ಕವಿತೆಗಳೇ? ಮೇಲಿನ ಕವಿತೆಯ ಕೊನೆಯ ಸಾಲಾದ ‘ನಿರೀಕ್ಷೆ ಸಲ್ಲ’ ಎಂಬ ನುಡಿಯು ಈ ಪ್ರಶ್ನೆಗಳನ್ನು ನಿರಾಕರಿಸುತ್ತದೆಯೇ?

ಗುರುಗಣೇಶರ ಮೊದಲನೆಯ ಸಂಕಲನವಿದು. ಭಟ್ಟರು ಸಮೂಹಮಾಧ್ಯಮ ಮತ್ತು ಪತ್ರಿಕೋದ್ಯಮದಲ್ಲಿ ಮೊನ್ನೆಯಷ್ಟೇ ಸ್ನಾತಕೋತ್ತರ ಪದವಿ ಪಡೆದು ಛಾನೆಲ್ ಒಂದರಲ್ಲಿ ಕಂಟೆಂಟ್ ರೈಟರ್ ಆಗಿ ಕೆಲಸಮಾಡುತ್ತಿದ್ದಾರೆ. ಅವರಿಗೆ, ಈ ಹಿನ್ನೆಲೆಯಿಂದ ಸಂವಹನದ ಅನಂತ ಸಾಧ್ಯತೆಗಳ ಅರಿವು ಉಂಟೆಂಬುದು ಸಾಧ್ಯವಾದ ಸಂಶಯ.

ಈ ಸಂಕಲನದಲ್ಲಿ 53 ಕವಿತೆಗಳಿವೆ. ಕೆಲವು ಪುಟ್ಟ ಪದ್ಯಗಳು. ಕೆಲವಂತೂ ಅವರ ಮ್ಯಾನಿಫೆಸ್ಟೋ ಬಗೆಯವು. ಕೊನೆಯ ಕವಿತೆಯನ್ನೇ ನೋಡಿ:

ಮೀನು ಈಜುವ ಮುನ್ನ
ನೀರು
ಎಲೆ ಚಿಗುರುವ ಮುನ್ನ
ಬೇರು
ಭಕ್ತ ಕೈಮುಗಿಯುವ ಮುನ್ನ
ದೇವರು
ಬರೆಯುವ ಮುನ್ನ
ಕವಿತೆ
ಇರುತ್ತದೆ
ಇರಬೇಕು

(ಗುರುಗಣೇಶ ಭಟ್‌)

“ಕವಿಭಾವ ತೀರ ಅಮೂರ್ತವಾದದ್ದು. ಅದಕ್ಕೆ ಭಾಷೆಯ ಹಂಗಿಲ್ಲ, ಅರ್ಥದ ಹಂಗಿಲ್ಲ ಮತ್ತು ಅದು ತೀರ ಕ್ಷಣಭಂಗುರವಾದದ್ದು ಕೂಡ. ಹೇಳಬೇಕೆಂದರೆ, ಕನಸಲ್ಲಿ ಕಂಡ ಯಾವುದೋ ಒಂದು ಬಿಂಬ, ದೃಶ್ಯ ಅಥವಾ ಭಾವನೆಯಂತೆ. ಅದನ್ನು ಅದೇ ಕ್ಷಣ ಬುದ್ಧಿಯಿಂದ ಗ್ರಹಿಸುವುದು ಎಲ್ಲರಿಗೂ ಸಾಧ್ಯವಾಗುವಂಥದ್ದಲ್ಲ. ಸಾಧ್ಯವಾದಾಗಲೂ, ಆ ಕವಿಭಾವಕ್ಕೆ ಭಾಷೆಯ ಬಟ್ಟೆ ತೊಡಿಸುವಾಗ ಆಗುವ ಎಡವಟ್ಟುಗಳಿಂದ ತಪ್ಪಿಸಿಕೊಳ್ಳುವುದು ಕೂಡ ಸುಲಭವಲ್ಲ. ಒಂದೋ ನೀವು ಅದ್ಭುತ ಭಾಷೆಯ ಪ್ರಾವೀಣ್ಯವುಳ್ಳವರಾಗಿದ್ದರೆ, ಭಾಷೆಯ ಮೋಹಕತೆಯಲ್ಲಿ ಮಾಯವಾಗಿ ಬಿಡಬಹುದು; ಅಥವಾ ನಿಮ್ಮ ಭಾಷೆ ಪಳಗಿಲ್ಲವಾದಲ್ಲಿ ಏನೋ ಹೇಳಲು ಹೋಗಿ ಇನ್ನೇನೋ ಹೇಳಿಬಿಡಬಹುದು. ಎರಡೂ ಪ್ರಸಂಗಗಳಲ್ಲಿ ಹೊಗಳುಭಟ್ಟರ ಸೇವೆಯಿಂದ ಬಚಾವಾಗಲು ಸೋತರೆ ಕತೆ ಮುಗಿದಂತೆಯೇ.

ಗುರುಗಣೇಶ ಅವರ ಕೆಲವೇ ಕೆಲವು ಕವಿತೆಗಳನ್ನು ಓದಿದಾಗ ನನಗೆ ಮೊದಲಿಗೆ ಅನಿಸಿದ್ದು ಈ ಹುಡುಗ ಭಾವವನ್ನು ಭಾಷೆಯ ಋಣಕ್ಕೆ ಬೀಳದೆ ವ್ಯಕ್ತಪಡಿಸಲು ತುಡಿಯುತ್ತಿರುವ ಒಂದು ಕವಿಚೇತನ ಎಂದೇ. ಹಾಗಾಗಿ ಇವನು ನನಗೆ ಇಷ್ಟ. ಹಾಗಾಗಿಯೇ ಈ ಕವಿತೆಗಳ ಬಗ್ಗೆ ಮಾತನಾಡುವುದು ತುಂಬ ಕಷ್ಟ ಕೂಡ. ಇದು ಗಾಜಿನಂತೆ ಕಾಣುವ ನೀರಿನ ಹಲಗೆಯ ಮೇಲೆ ಕಾಲಿಟ್ಟು, ನನ್ನ ಮಾತಿನ ಭಾರವನ್ನು ಅದರ ಮೇಲಿಕ್ಕದೇ ನಡೆಯಬೇಕಾದ ಸವಾಲು.” ಎಂದು ಬಹಳ ಸಂಗ್ರಹವಾಗಿ ಇಲ್ಲಿನ ಕವಿತೆಗಳ ಗುಣವಿಶೇಷಗಳ ಬಗ್ಗೆ ನರೇಂದ್ರ ಪೈಗಳು ಬರೆಯುತ್ತಾರೆ. ಈ ಮಾತು ಸತ್ಯಸ್ಯ ಸತ್ಯ.

*****

ಈ ಕವಿಯ ನೋಟ ನೆಟ್ಟಿರುವುದು ಯಾವುದರ ಮೇಲೆ? ಮೊದಲ ಓದಿಗೇ ನಮಗೆ ತೋರುವುದು ಈತ ಬಿಟ್ಟ ಕಣ್ಣ ಮುಚ್ಚದ ಹುಡುಗನೆಂದು. ತನ್ನ ಸುತ್ತಲಿನ ಎಲ್ಲ ವಿದ್ಯಮಾನಗಳನ್ನೂ ಗಮನಿಸುತ್ತಲೇ, ತನಗೇನೂ ಆಗಬೇಕಿಲ್ಲವೆಂಬಂತೆ ನಟಿಸುತ್ತಲೇ ಈ ಬಗೆಯ ನಿರ್ಲಿಪ್ತತೆಯು ಆತ್ಮಘಾತುಕವೆಂಬ ಎಚ್ಚರವನ್ನು ಪ್ರಕಟಿಸುತ್ತಲೇ ಇರುವ ಕವಿ ಈತ.

ಮುಚ್ಚಿದ ಕಿಟಕಿ
ಮುಚ್ಚೇ ಇದೆ,
ಯಾರಿಗೂ
ಪುರುಸೊತ್ತಿಲ್ಲ

ಮುಚ್ಚಿದ ಕಿಟಕಿ ಮುಚ್ಚಿರುವುದು, ಅದರ ಹಿಂದಿನ ನಿಷ್ಕ್ರಿಯತೆ, ಅನಂತರದ ಅನಿವಾರ್ಯತೆ ಎಲ್ಲವನ್ನೂ ಧ್ವನಿಸುವ ನಾಲ್ಕೇ ನಾಲ್ಕು ಸಾಲು ಉಂಟುಮಾಡುವ ಪರಿಣಾಮ ಯಾವುದೇ ನೀಳ ಕವಿತೆಗಿಂತ ಕಡಿಮೆಯಲ್ಲ. ಕವಿಗೆ ಅನಿವಾರ್ಯತೆಯ ಭಯ ಎಷ್ಟಿದೆ ಎಂದರೆ

ತಾಳ್ಮೆ
ಭಯ ಹುಟ್ಟಿಸುವಷ್ಟು
ತಣ್ಣಗಿದೆ – ಎಂದವರು ಭಾವಿಸುತ್ತಾರೆ. ಈ ತಾಳ್ಮೆಯಿಂದ ನಾವು ಇತಿಹಾಸದ ಪುಟಗಳನ್ನು ಕಳೆದುಕೊಳ್ಳುತ್ತಿದ್ದೇವೆ.

ಇತಿಹಾಸದ ಯಾವುದೋ
ಪುಟ
ಕೆಲಸವಿಲ್ಲದೇ
ಹರಿದುಹೋಗಿದೆ.

-ಇಲ್ಲಿ ಹರಿದುಹೋಗಿರುವುದು ಚರಿತ್ರೆಯನ್ನು ಸೃಷ್ಟಿಸಲು ಅಸಮರ್ಥವಾದ ಕಾಲ ಮತ್ತು ವ್ಯಕ್ತಿಗಳು. ನಿರಂತರ ಚಲನೆಯ ಕಾಲದಲ್ಲಿ ಇತಿಹಾಸಗಳನ್ನು ಕಾಲ ಸೃಷ್ಟಿಸುವುದಿಲ್ಲ ನಿಜ. ನಾವು ಅದನ್ನು ಸಾರ್ಥಕವಾಗಿ ಸೃಷ್ಟಿಸಿ, ಮರುಸೃಷ್ಟಿಸಿ ಬದುಕಬೇಕಿದೆ.
ಗುರುಗಣೇಶಭಟ್ಟರ ಕಾವ್ಯದ ಶಕ್ತಿ ಸಾಮಾನ್ಯ ವಿವರಗಳಲ್ಲಿ ಅಸಾಮಾನ್ಯ ಚಿತ್ರಗಳನ್ನು ಸೃಷ್ಟಿಸುವುದರಲ್ಲಿದೆ. ಈ ಸಾಲುಗಳನ್ನು ನೋಡಿ, ಅದೆಷ್ಟು ಸುಂದರವಾಗಿವೆ:

‘ಬುದ್ಧ ಹೇಳಿದ್ದು ಏನೆಂದರೆ…
ಗಾಂಧಿ…ʼ ಕವಿತೆಯೊಂದರ ಸಾಲುಗಳಿವು. ಸಾಲುಗಳ ಕೊನೆಯ ಈ ಚುಕ್ಕೆಗಳ ನಿರ್ವಾತದಲ್ಲಿ ಅರಳುವ ಪ್ರತಿಮೆಗಳು ಅದೆಷ್ಟಿವೆ!! ಆದರೂ ಬಿಡಿಯಾಗಿ ಇದರ ಧ್ವನಿಶಕ್ತಿಯನ್ನು ಗಮನಿಸಿ. ಈ ಅಡಕವೇ ಈ ಕಾವ್ಯದ ಅತಿ ಮಹತ್ವದ ಶಕ್ತಿ. ಕಾವ್ಯದ ಫಂಕ್ಷನಾಲಿಟಿಯನ್ನು ಕುರಿತಂತೆಯೇ ಭಟ್ಟರು ಬರೆಯುತ್ತಾರೆ:

ಕವಿತೆಗೆ ಪ್ರತಿಕ್ರಿಯೆ-
ನಿಮ್ಮ ನೀರ ಕವಿತೆ
ಸದ್ಯ ಬೇಡ
ತಾಳಿ,
ಬೇಸಿಗೆ ಬರಲಿ (ಸ್ನಾನ ಮಾಡುವಾಗ ಹೊಳೆದ ನೀರ ಕವಿತೆ) – ಎಂದೋ ನಮಗೆ ಒದಗಿ ಬರಬೇಕಾದ ಕವಿತೆಯ ಗುಣದ ಬಗ್ಗೆ ಮೆಚ್ಚುಗೆಯನ್ನೂ, ಕಾವ್ಯಾರ್ಥ ಪ್ರಾಪ್ತಿಯ ಅನಿವಾರ್ಯತೆಯನ್ನೂ ಒಟ್ಟಾಗಿ ಬೆರೆಸಿದ ಕವಿತೆಯಿದು.

ಕವಿಭಾವ ತೀರ ಅಮೂರ್ತವಾದದ್ದು. ಅದಕ್ಕೆ ಭಾಷೆಯ ಹಂಗಿಲ್ಲ, ಅರ್ಥದ ಹಂಗಿಲ್ಲ ಮತ್ತು ಅದು ತೀರ ಕ್ಷಣಭಂಗುರವಾದದ್ದು ಕೂಡ. ಹೇಳಬೇಕೆಂದರೆ, ಕನಸಲ್ಲಿ ಕಂಡ ಯಾವುದೋ ಒಂದು ಬಿಂಬ, ದೃಶ್ಯ ಅಥವಾ ಭಾವನೆಯಂತೆ.

ಗಣೇಶಭಟ್ಟರು ತಮ್ಮನ್ನೂ, ತಮ್ಮ ಸುತ್ತಲನ್ನೂ, ತನ್ನೂರಿನ ಸಕಲ ಋತುಮಾನಗಳ ದಿವ್ಯಗಳನ್ನೂ ಒಳಗೊಂಡ ಕಾವ್ಯ ಬರೆಯುತ್ತಾರೆ. ಅಲ್ಲಿ ಎಲ್ಲವೂ ಜೀವ ತಳೆಯುತ್ತವೆ. ನೀಗಿಕೊಂಡ ಶವವನ್ನೂ ಮಾತನಾಡಿಸುವ ತವಕದಲ್ಲಿ ಜೀವಪರ ತುಡಿತವಿದೆ.

ಹೊಳೆಯಲ್ಲಿ‌
ಹರಿವ ನೀರು ಈಜುವ ಮೀನ
ಮಕ್ಕಳು
ಹಾರುವ ಹಕ್ಕಿ ಬೆಳೆಯುವ ಗಿಡ

ಅಟ್ಟದ ಬಿಸಿಲಲ್ಲಿ ಒಣಗುವ ಹಪ್ಪಳ
ಕೊಲ್ಲಾಪುರ ಚಾದರ

ಮರ‌ ಹತ್ತಿ ಕೊಯ್ದ
ಹಿಂಡಿಗೆ ಶೀಯಾಳ

ದಿನಕ್ಕೆರಡು ಸಲ ಸ್ನಾನ
ಒದ್ದೆ ಪಂಜಿಯ ಜಪ

ಎಷ್ಟೆಲ್ಲ ಶೆಕೆ!

ಸ್ವಲ್ಪ ತಾಳಿ, ಎರಡು ಸಮಯ
ಚಿಟ್ಟೆಯ ಮೇಲೆ ಕೂರಿ

ಕುಡಿಯಲು ಮಜ್ಜಿಗೆ ತರುತ್ತೇನೆ – ಆಯಿತಲ್ಲ ಎಲ್ಲಕ್ಕೂ ಸಾಕ್ಷಿಯಾದ ಭಾಷೆ, ಭಾವ ಎಲ್ಲದರ ಸಂಗಮ. ಈ ಬಗೆಯ ಕಾವ್ಯಾಭಿವ್ಯಕ್ತಿಗೆ ಧೈರ್ಯ ಬೇಕು, ಕಸುವು ಬೇಕು, ಸಿದ್ಧತೆ ಬೇಕು, ಜೊತೆಗೆ ಚಾತುರ್ಯವೂ ಬೇಕು. ಇದನ್ನು ನಾವು ರಾಮಾನುಜನ್ ಕವಿತೆಗಳಲ್ಲಿ ಕಂಡಿದ್ದೆವು, ಭಿನ್ನ ಸಾಂಸ್ಕೃತಿಕ ಆಯಾಮದೊಡನೆ.

ನಾನು ಬಹಳ ಇಷ್ಟಪಟ್ಟ ಇನ್ನೊಂದು ಕವಿತೆ –

ಮರದ ಕೊಂಬೆಯಲ್ಲಿ
ಗರಿ

ಕೆಳಗೆ ಬೀಳುವ ಎಲೆ
ಕಾಯಿ ಹಣ್ಣು ಹಾರುವ ಹಕ್ಕಿ
ದೃಷ್ಟಿ ನೆಲದ ಕಡೆ

ಮಧ್ಯೆ
ಮರ, ಆಕಾಶ ನೋಡುತ್ತ

ನೆಲದ ಬಳಿಗೆ ಹಕ್ಕಿ ಹಾರಿ
ರೆಕ್ಕೆ ಬಿಚ್ಚಿ ಹಣ್ಣು ನುಂಗಿದ
ಊದ್ದ ತೇಗು ನನಗೂ ಕೇಳಿಸಿತು

ಪಿಶ್ಶಿ ಅಂಗಿಯ ಮೇಲೆ ಪಿಚ್ಚಕ್ಕ
ಕಲೆ ಒಳ್ಳೆಯದೇ…

ಮತ್ತೊಂದು ದಿನ
ನೆರೆಯವನ ಅಂಗಳದಲ್ಲಿ
ಒಂದು ಗಿಡ ನಕ್ಕಿತು

ಯಾವ ಪತ್ರಿಕೆಯಲ್ಲೂ ವರದಿ ಕಾಣಲಿಲ್ಲ. – ಇಲ್ಲಿ ಎಲ್ಲ ಅವಲಂಬನೆಗಳಿಗೂ, ಕ್ರಿಯೆಗಳಿಗೂ ಮಾತು ಬಂದಿದೆ. ಇದಕ್ಕೆ ಯಾವ ಪ್ರತಿಕ್ರಿಯೆಯ ಅಗತ್ಯವೂ ಇಲ್ಲ. ಅದಕ್ಕೇ ಯಾವ ಪತ್ರಿಕೆಯಲ್ಲೂ ವರದಿ ಕಾಣಲಿಲ್ಲ. ನಾವೂ ಇದನ್ನು ಮತ್ತೆ ಮತ್ತೆ ಓದಿ ಹಕ್ಕಿರೆಕ್ಕೆಯಂತೆ ಹಗುರಾಗಿ, ಮರದಂತೆ ಹಣ್ಣುಟ್ಟು, ಗಿಡದಂತೆ ನಕ್ಕು ಮುಂದೆ ನೋಡಬೇಕು.

ಈ ಕವಿತೆಯ ಬಗ್ಗೆ ಪೈಗಳು ಬಹಳ ಮಾರ್ಮಿಕವಾಗಿ ಮಾತಾಡಿದ್ದಾರೆ: “ಮರದ ಕೊಂಬೆಯಲ್ಲಿ ನೀವು ಕಾಣುತ್ತಿರುವುದು ಗರಿ. ಒಣಗಿದ ಎಲೆಯೋ, ಹಸಿರೆಲೆಯೋ ಅಲ್ಲ. ಅದು ಯಾವುದೋ ಹಕ್ಕಿಯ ಗರಿ ಇರಬಹುದು ಎಂದುಕೊಳ್ಳಿ. ನಂತರ ಅಲ್ಲಿ ಕೆಳಗೆ ಬೀಳುವ ಎಲೆ ಇದೆ. ಅದು ಬೀಳುತ್ತಿದೆ ಎಂದೇನೂ ಕವಿ ಹೇಳುತ್ತಿಲ್ಲ. ಬೀಳುವ ಎಲೆ ಅಷ್ಟೆ. ಅದು ನಿರಂತರವಾಗಿ ಕಳೆದ ಶತಮಾನದಿಂದ ಬೀಳುತ್ತಿದೆ ಮತ್ತು ಮುಂದಿನ ಹಲವಾರು ಶತಮಾನಗಳ ವರೆಗೆ ಹಾಗೆ ಬೀಳುತ್ತಲೇ ಇರುತ್ತದೆ ಎಂದಿಟ್ಟುಕೊಳ್ಳಲು ಇದೇ ಆಧಾರ. ಇದರ ಜೊತೆಗೆ ಸಾಥ್ ಕೊಡಲು ಕಾಯಿ, ಹಣ್ಣು, ನೆಲದ ಕಡೆಗೆ ನೆಟ್ಟ ಹಾರುವ ಹಕ್ಕಿದೃಷ್ಟಿ – ಇದೆ. ಮಧ್ಯೆ ಮರ ಆಕಾಶ ನೋಡುತ್ತ ವೃಕ್ಷದೃಷ್ಟಿಯಿದೆ. ಕೆಳಗೆ ಬೀಳುವ ಎಲೆಗೆ ಎಷ್ಟೊಂದು ಸಾಕ್ಷಿಗಳು ನೋಡಿ! ಹಾರುವ ಹಕ್ಕಿಯ ದೃಷ್ಟಿ ನೆಲದ ಕಡೆಗೆ ಇದ್ದರೆ, ಸ್ಥಾವರವಾದ ಮರದ ದೃಷ್ಟಿ ಆಕಾಶದ ಕಡೆಗಿದೆ. ನಡುವೆ ಬೀಳುವ ಎಲೆ ಇದೆ. ಬಹುಶಃ ಅದಕ್ಕೆ ಗೊತ್ತಿದೆ, ಇವತ್ತಲ್ಲಾ ನಾಳೆ ನಾನು ಬೀಳುವುದೇ ನಿಶ್ಚಯವಾದದ್ದು ಎಂಬ ಸತ್ಯ, ಅಲ್ಲವೆ?.…

ಒಂದು ಗರಿ ಎಂದರೆ ಹಾರಲೆಂದೇ ಹುಟ್ಟಿದ ಹಕ್ಕಿಮೈಯ ಬದುಕು ಹೇಗೋ, ಕವಿಯ ಭಾವಸಾಮ್ರಾಜ್ಯದಲ್ಲಿ ಸದಾ ಪ್ರವಹಿಸುತ್ತಿರುವ ಹಕ್ಕಿಗಾಳಿಯ ಪ್ರತೀಕ ಕೂಡ ಹೌದು. ಈ ಕೆಳಗೆ ಬೀಳುವ ಎಲೆ ಸದ್ಯದ ಕ್ಷಣದಲ್ಲಿ ಬೀಳುತ್ತಿದೆಯೇ, ಬಿದ್ದಿದೆಯೆ, ಇನ್ಯಾವತ್ತೋ ಬೀಳಲಿದೆ ಎನ್ನುತ್ತಿದ್ದಾರೆಯೆ ಎಂಬುದು ಅನೂಹ್ಯವಾಗಿಯೇ ಉಳಿಯುತ್ತದೆ. ಹಾಗಾಗಿಯೇ ಅದು ಹೆಚ್ಚಿನ ಗುರುತ್ವವನ್ನು ಮೈಗೂಡಿಸಿಕೊಂಡು ಸದ್ಯಕ್ಕೆ ಸಾಕ್ಷಿಯಾಗುವ ಗುಣ ಪಡೆದುಕೊಂಡು ಬಿಡುತ್ತದೆ. ನೆಲದ ಬಳಿಗೆ ಹಾರಿ ಬಂದ ಹಕ್ಕಿ, ರೆಕ್ಕೆ ಬಿಚ್ಚಿ ಹಣ್ಣು ನುಂಗಿ ತೇಗಿದ್ದು ಕೇಳಿ. ಆಮೇಲೆ ಅದು ನೆಲದ ಋಣ ಇಟ್ಟುಕೊಳ್ಳುವುದಿಲ್ಲ. ಪಿಶ್ಶಿ ಮತ್ತೆ ನೆಲಕ್ಕೇ, ಪಿಚ್ಚಕ್ಕ. ಕವಿಯ ಅಂಗಿ ಮೇಲೆ ಬಿದ್ದರೆ ಅದು ಕಲೆಯಾಗಿ ಒಳ್ಳೆಯದಾಗುತ್ತದೆ.

ನೆಲಕ್ಕೆ ಬಿದ್ದರೆ ಗೊಬ್ಬರವಾಗುತ್ತದೆ. ಆಕಾಶದ ಕಡೆಗೆ ದೃಷ್ಟಿ ಇಟ್ಟಿರುವ ಮರದ ಕತೆಗೂ ಒಂದು ಸಾರ್ಥಕತೆಯನ್ನು ಕವಿ ಕೊಡುವುದು ಇಲ್ಲಿಯೇ. ಹಕ್ಕಿ ಹಾಕಿದ ಪಿಶ್ಶಿ ಕೂಡ ನೆಲ ಸೇರಿದರೆ ಹೊಸದೊಂದು ಗಿಡವಾಗಿ ಮೊಳಕೆಯೊಡೆಯದೇ, ಅದು ಚಿಗುರಿ ನಳನಳಿಸಿ ನಗಲಾರದೇ? ಹೌದು, ನೆರೆಯವನ ಅಂಗಳದಲ್ಲಿ ಸಂಭವಿಸಿತು ನೋಡಿ! ಗಿಡ ನಕ್ಕಿತು! ಆದರೆ ಅದರ ವರದಿ ನಿಮ್ಮ ಮನಸ್ಸು, ಹೃದಯದಲ್ಲಾಗಬೇಕಿದೆ. ಅಷ್ಟು ಮಾತ್ರ ಬಾಕಿ. ಅದಕ್ಕಾಗಿ ಪತ್ರಿಕೆಯ ಸುದ್ದಿ ಕಾಯಬೇಡಿ, ಮರದ ಕೊಂಬೆಯ ಗರಿಯಂತೆ, ಕಾಯಿ, ಹಣ್ಣಿನಂತೆ ಇದಕ್ಕೆ ಸಾಕ್ಷಿಯಾಗಿ. ಆಗ ನಿಮ್ಮನ್ನು ನೋಡಿ ನೆರೆಯವನ ಅಂಗಳದ ಗಿಡ ನಗುವುದು ಖಾತ್ರಿ!” ನರೇಂದ್ರ ಪೈಗಳ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ. ವಿಸ್ಮಯವಿದೆ. ವಿಸ್ಮಯಗಳನ್ನು ಕಟ್ಟಿಕೊಡುವುದು ಸಹ ಕವಿಗೆ ಮಹತ್ವದ ಕೆಲಸವೇ.

ಅಂದರೆ ಭಟ್ಟರಿಗೆ ಇಲ್ಲಿನ ಕುಟಿಲಗಳ ಕುರಿತು ಅವಜ್ಞೆಯುಂಟೆಂದು ಭಾವಿಸಲಾಗದು:

ಮೊದಲು ನಾನು
ಎಲ್ಲ ಜನರೂ ಅನ್ನ ಸಾರನ್ನೇ ಉಣ್ಣುತ್ತಾರೆ

ಜನಿವಾರ ತೊಡುತ್ತಾರೆ
ಪೂಜೆ ಮಾಡುತ್ತಾರೆ

ಜಗತ್ತಿನ ಎಲ್ಲರೂ ಕೃಷಿ ಮಾಡುತ್ತಾರೆ
ಎಲ್ಲ ಊರುಗಳೂ ನಮ್ಮೂರ ಹಾಗೆಯೆ ಇವೆ

ಎಲ್ಲರಿಗೂ ಎರಡು ಕಾಲು ಎರಡು ಕೈ
ಕಣ್ಣು ಕಿವಿ ಎಲ್ಲವೂ ಇರುವುದು

ಅಂದುಕೊಂಡಿದ್ದೆ.

ಈಗೀಗ ನಾನು ನಾನಲ್ಲ
ಮನುಷ್ಯರ ಹಾಗೆ ಕಾಣುವ ಎಲ್ಲರೂ
ಮನುಷ್ಯರಲ್ಲ…

ನನ್ನ ಖಾಯಂ ಡಾಕ್ಟರರು ಪಿಸುಗುಟ್ಟಿದರು


‘ಹೀಗೆ ಯೋಚಿಸಬಾರದು ಮರೀ’ – ಈ ಖಾಯಂ ಡಾಕ್ಟರು ಒಳಗಿನ ವಿವೇಕವೇ. ಕಣ್ಣ ಮುಗ್ಧತೆಯ ಅಪಾಯಗಳನ್ನು ನಿವಾರಿಸುವುದು ಇದೇ ವಿವೇಕ.
ಇಷ್ಟು ಪುಟ್ಟ ಸಂಕಲನದ ಬಗ್ಗೆ ಎಷ್ಟೆಲ್ಲ ಮಾತಾಡಬಹುದು ಎಂಬುದೇ ಸೋಜಿಗ. ಇವುಗಳಲ್ಲಿ ಹಾಯ್ಕುತನವಿದೆ, ಕಿಲಾಡಿತನವಿದೆ, ಮುಗ್ಧತೆಯಿದೆ, ಮುಗ್ಧ ಪರಿಸರದ ನೋಟವಿದೆ, ಪ್ರಕೃತಿಯಿದೆ, ಪುಣ್ಯ ಪಾಪಗಳು ಸೋಕದ ಪೃಥ್ವೀವಿಲಾಸದ ವಿಸ್ಮಯವಿದೆ, ಜೊತೆಗೆ ಮಕ್ಕಳ ತಣಿಸುವ ಪದಗಳಿವೆ, ಆದರೆ ಇದುವರೆಗಿನ ಪ್ರಾಯ ಸಂದುಹೋದ ಬೇಸರವಿಲ್ಲ. ಇಷ್ಟು ದಿನ ಈ ಲವಲವಿಕೆಯ ಕಾಡುವ ಕವಿತೆಗಳೆಲ್ಲಿದ್ದವೋ, ತಿಳಿಯದು. ಆದರೆ ಇವು ಮಳೆಯಂತೆ ಬಿದ್ದು ಕಾವ್ಯಚೇತನದ ಹೊಳೆಯನ್ನು ಹರಿಸಿವೆ. ಓದಿನ ಕೊನೆಗೊಂದು ಭಾವ ಉಳಿಯುತ್ತದೆ: ಅದೆಂತೆಂದರೆ

ಮಳೆ.
ವಾವ್!
ಅದೆಂತ ತಣ್ಣನೆ
ಪದ? – ಎಂಬಂತೆ.