ಒಂಟಿ ಪಾಲದಲ್ಲಿ, ಒಂಟಿ ಕೈತಾಂಗ ಹಿಡಿದು ದೇವರ ದಯೆಯಿಂದ ಹಳ್ಳ ಪಾಲಾಗದೆ ಇಲ್ಲಿ ತನಕ ಬಂದದ್ದೇ ವಿಶೇಷ ಅಂತ ನೆನೆದುಕೊಳ್ಳುವ ಈ ಹೊತ್ತಿನಲ್ಲಿ ಚೆಂದದ ಸೇತುವೆಯೊಂದು ನಿರ್ಮಾಣ ಆಗಿತ್ತು. ಭಯವಿಲ್ಲದೆಯೇ ಬಗ್ಗಿ ಪ್ರತಿಬಿಂಬ ನೋಡಬಹುದಿತ್ತು. ಆದರೆ ಆ ಪಾಲದ ಆಚೆ ಈಚೆ ಇದ್ದ ದೊಡ್ಡ ದೊಡ್ಡ ಮರಗಳು ಯಾಕೋ ಕಾಣೆಯಾಗಿದ್ದವು. ಆ ಎರಡು ಮರದಲ್ಲಿ ಬಂದು ಕುಳಿತುಕೊಳ್ಳುತ್ತಿದ್ದ ಹಿಂಡು ಗಿಳಿಗಳು, ಚೋರೆ ಹಕ್ಕಿಗಳು ಎಲ್ಲಿಗೆ ಬುರ್ರೆಂದು ಹಾರಿ ಹೋಗಿರಬಹುದೆಂಬ ಯೋಚನೆಗೆ ತಕ್ಷಣ ಮನಸು ತಳಮಳಿಸಿತ್ತು.
ಸ್ಮಿತಾ ಅಮೃತರಾಜ್‌ ಸಂಪಾಜೆ ಬರೆದ ಲೇಖನ

 

ಅಮೂಲ್ಯ ಬಾಲ್ಯದ ಬರೋಬ್ಬರಿ ಹದಿಮೂರು ವರುಷಗಳನ್ನ ನಾನು ಆ ಹಳ್ಳಿಯಲ್ಲಿ ಕಳೆದಿದ್ದೆ. ಯಾವುದೇ ವಿಚಾರ ಯೋಚಿಸಿದರೂ ಅನೇಕ ಸಂಗತಿಗಳು ಅದೇ ಊರಿನೊಂದಿಗೆ ತಳುಕು ಹಾಕಿಕೊಳ್ಳುವುದು ಕಂಡಾಗಲೆಲ್ಲಾ ಕೆಲವೊಮ್ಮೆ ನಿಜಕ್ಕೂ ನನಗೆ ಅಚ್ಚರಿಯಾಗುವುದುಂಟು. ಮರೆತೆನೆಂದರೂ ಅದು ನನ್ನ ಮನಸಿಗಂಟಿಕೊಂಡೇ ಇರುತ್ತದೆ ಅನ್ನುವುದು ನನಗೆ ಸಂದರ್ಭ ಸಿಕ್ಕಾಗಲೆಲ್ಲಾ ವೇದ್ಯವಾಗಿದೆ. ಹಾಗಂತ ನಾನು ಆ ಊರನ್ನು ಆವತ್ತು ಅಷ್ಟಾಗಿಯೇನೂ ಇಷ್ಟ ಪಡುತ್ತಿರಲಿಲ್ಲ. ಅಲ್ಲಿಯ ಕೊರೆವ ಚಳಿ, ಜಡಿಗುಟ್ಟಿ ಸುರಿಯುವ ಮಳೆ, ಸೋಮಾರಿತನಕ್ಕೆ ಜಾಗವೇ ಇಲ್ಲವೆಂಬಂತೆ ಮಾಡಬೇಕಾದ ಅಷ್ಟೂ ಕೆಲಸಗಳು.. ಅಬ್ಭಾಬ್ಬಾ!

ಸಂಜೆ ಹೊತ್ತಿನಲ್ಲಂತೂ ಪಾನಕ ಸೇವೆ ತುಸು ಹೆಚ್ಚಾಗಿ ನಡು ದಾರಿಯಲ್ಲಿಯೇ ಯಾವ ಹಿಮ್ಮೇಳ ಇಲ್ಲದೆಯೇ ಡಿಂಗ್ ಡಾಂಗ್ ಡಾನ್ಸ್ ಶುರುವಾಗಿ ತಾನು ಓರೆಯೋ ದಾರಿ ಓರೆಯೋ ಅಂತ ಗೊತ್ತಾಗದೆ ತಡಬಡಿಸುವ ಮಂದಿ, ಅದೇ ಸ್ಥಿತಿಯಲ್ಲಿ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಂಡು ತಾರಕಕ್ಕೇರುವ ಪರಿಸ್ಥಿತಿ, ಜೊತೆಗೆ ಅಪ್ಪ ಅಮ್ಮನಿಂದ ದೂರ ಉಳಿದು ಓದಿಗಾಗಿಯಷ್ಟೇ ಅಲ್ಲಿ ಬಂದು ವರ್ಷಾನುಗಟ್ಟಲೇ ಅಲ್ಲಿಯೇ ಇರಬೇಕಾದ ಅನಿವಾರ್ಯತೆ ಇದ್ದ ಕಾರಣ ಸಹಜವಾಗಿಯೇ ಆ ವಾತಾವರಣ ಅಷ್ಟೊಂದು ಸಹ್ಯವಾಗುತ್ತಿರಲಿಲ್ಲ. ಇಲ್ಲದಿದ್ದರೆ ಅಜ್ಜಿಮನೆಯನ್ನು ಪ್ರೀತಿಸದವರು ಯಾರಿದ್ದಾರೆ ಹೇಳಿ? ಅದು ಆವತ್ತಿನ ಸಂಗತಿಯಷ್ಟೆ.

ಹಾಗೆ ನೋಡಿದರೆ ನನ್ನ ಇಡೀ ವ್ಯಕ್ತಿತ್ವವೇ ರೂಪುಗೊಂಡದ್ದು ಅಲ್ಲಿ ಅಂತ ಈಗ ಬಲವಾಗಿ ಅನ್ನಿಸುತ್ತಿದೆ. ಬಾಲ್ಯದಲ್ಲಿ ದಕ್ಕಿದ ಆ ಊರಿನ ಪರಿಮಳವೊಂದನ್ನು ಇವತ್ತಿಗೂ ನನಗಂಟಿಕೊಂಡೇ ಬರುತ್ತಿದೆ ಅನ್ನುವುದು ಗೊತ್ತಿಲ್ಲದೇ ನಾನು ಅದರ ಜಾಡು ಹಿಡಿದು ನಡೆಯುತ್ತಿದ್ದೇನೆ.

ಓದು ಮುಗಿದು ಆ ಊರು ಬಿಟ್ಟು ಇತ್ತೀಚೆಗೆ ಸರಿ ಸುಮಾರು ಇಪ್ಪತ್ತು ವರುಷಗಳೇ ಸಂದಿವೆ. ಈ ನಡುವಲ್ಲಿ ಅಲ್ಲಿಗೆ ಹೋದದ್ದು ಅಜ್ಜಿಯ ನೋಡಲೆಂದು ಹೆಚ್ಚೆಂದರೆ ನಾಕೈದು ಬಾರಿ. ನನ್ನ ಇಡೀ ಬಾಲ್ಯವನ್ನು ಪೊರೆದ ನನ್ನಜ್ಜಿಯನ್ನು ನೋಡಲು ಹೋಗಲೂ ಸಮಯ ಸಾಲುತ್ತಿಲ್ಲವೇ? ಕೆಲಸದ ಒತ್ತಡವೇ? ಹೀಗೆ ಪ್ರಶ್ನಿಸಿಕೊಂಡರೆ ಯಾವ ಉತ್ತರಕ್ಕೂ ದಕ್ಕದ ನೂರೆಂಟು ನೆವಗಳಿವೆ. ಈ ಹಿಂದೆ ಆ ಊರು ಬಿಟ್ಟು ಮೊದಲ ಬಾರಿಗೆ ಹೋದಾಗ ಒಂದೇ ಅಂಗಳದಲ್ಲಿರುವ ನಾಕು ಮನೆಗಳಿಗೆ ಒಂದೇ ಸೇದು ಬಾವಿ ಬಂದು ಒಂದೇ ಹಗ್ಗ ಕೊಡಪಾನಕ್ಕೆ ಕಟ್ಟಿ ನೀರೆಳೆಯುವಷ್ಟು ಬಂಧ ಬೆಸೆದಿತ್ತು. ಜೊತೆಗೆ ಮನೆ ತಲುಪಲು ಹಾದು ಬರಬೇಕಿದ್ದ ನದಿಗೆ ಇಲ್ಲಿತನಕ ಒಂದು ಪಾಲ ಕಟ್ಟಲು ಹಿಂದೆ ಮುಂದೆ ನೋಡಿಕೊಂಡು, ನಾನೋ ನೀನೋ ಅಂತ ಒಳಗೊಳಗೆ ಕೈ ಬಾಯಿ ಮಸೆದುಕೊಂಡು, ಅದೇ ಮರದ ದಿಮ್ಮಿಯನ್ನು ಜಾರದಂತೆ ಚೂರು ಪಾರು ಕೆತ್ತಿ ಸಪಾಟು ಮಾಡಿಕೊಂಡು ಅಲ್ಲಿಗೇ ಪತ್ತಂಡೆ ಮಾಡಿಕೊಂಡು ಬದುಕು ಸವೆಸಿದ್ದರು.

ಒಂಟಿ ಪಾಲದಲ್ಲಿ, ಒಂಟಿ ಕೈತಾಂಗ ಹಿಡಿದು ದೇವರ ದಯೆಯಿಂದ ಹಳ್ಳ ಪಾಲಾಗದೆ ಇಲ್ಲಿ ತನಕ ಬಂದದ್ದೇ ವಿಶೇಷ ಅಂತ ನೆನೆದುಕೊಳ್ಳುವ ಈ ಹೊತ್ತಿನಲ್ಲಿ ಚೆಂದದ ಸೇತುವೆಯೊಂದು ನಿರ್ಮಾಣ ಆಗಿತ್ತು. ಭಯವಿಲ್ಲದೆಯೇ ಬಗ್ಗಿ ಪ್ರತಿಬಿಂಬ ನೋಡಬಹುದಿತ್ತು. ಆದರೆ ಆ ಪಾಲದ ಆಚೆ ಈಚೆ ಇದ್ದ ದೊಡ್ಡ ದೊಡ್ಡ ಮರಗಳು ಯಾಕೋ ಕಾಣೆಯಾಗಿದ್ದವು. ಆ ಎರಡು ಮರದಲ್ಲಿ ಬಂದು ಕುಳಿತುಕೊಳ್ಳುತ್ತಿದ್ದ ಹಿಂಡು ಗಿಳಿಗಳು, ಚೋರೆ ಹಕ್ಕಿಗಳು ಎಲ್ಲಿಗೆ ಬುರ್ರೆಂದು ಹಾರಿ ಹೋಗಿರಬಹುದೆಂಬ ಯೋಚನೆಗೆ ತಕ್ಷಣ ಮನಸು ತಳಮಳಿಸಿತ್ತು. ಇನ್ನಾದರೂ ಹೊಸ ಬೆಳವಣಿಗೆಯ ನೆಪದಲ್ಲಿ ಎಲ್ಲರೂ ಒಗ್ಗಟ್ಟಾಗಿ ಮುಂದುವರಿಯುತ್ತಿದ್ದಾರಲ್ಲ ಅಂತ ನೆಮ್ಮದಿಯ ಉಸಿರು ಬಿಟ್ಟುಕೊಂಡು ಅದೇ ಸೇತುವೆ ಮೇಲೆ ನಡೆಯುತ್ತಾ, ಒದ್ದು ಬರುವ ನನ್ನ ಹಳೆಯ ಭಯಗಳನ್ನು ಬಿಟ್ಟು ಈಗಿನ ಮಕ್ಕಳಿಗೆ ಒದಗಿದ ಸೌಭಾಗ್ಯ ನೆನೆದು ನಿರಾತಂಕವಾಗಿ ಸೇತುವೆಗೆ ವಂದಿಸುತ್ತಾ ದಾಟಿ ಬಂದಿದ್ದೆ.

ಎಲ್ಲವನ್ನೂ ಮರೆತಂತೆ ನಮ್ಮ ನಮ್ಮ ದೈನಿಕಗಳಲ್ಲಿ ವ್ಯಸ್ತರಾಗಿರುವಾಗ, ಅಲ್ಲಿಂದ ಬಂದ ಮದುವೆಯ ಕರೆಯೋಲೆಗೆ ಓಗೊಟ್ಟು, ಜತೆಗೆ ಅಜ್ಜಿಯನ್ನು ನೋಡಿದಂತೆ ಆಯಿತು ಅನ್ನುವ ಸಕಾರಣಗಳನ್ನು ಇಟ್ಟುಕೊಂಡು ಅಲ್ಲಿಗೆ ಮತ್ತೆ ಓಡಿದ್ದರೆ, ಇಡೀ ಹಳ್ಳಿಯೇ ಬದಲಾದಂತೆ ತೋರುತ್ತಿತ್ತು. ನದಿಯೊಂದು ಮಾತ್ರ ಗುರುತಿಗೆಂಬಂತೆ ಸದ್ದು ಮಾಡದೆ ಹರಿಯುತ್ತಿತ್ತು. ಸೇತುವೆ ನನ್ನ ಗುರುತು ಹಿಡಿಯುವುದರಲ್ಲಿ ವಿಫಲವಾಗುವುದಕ್ಕೆ ಕಾರಣವೂ ನನಗೆ ಗೊತ್ತಿದೆ.

ಅದು ನಾನು ಆ ಊರು ಬಿಟ್ಟು ಬಂದ ಮೇಲೆ ಹುಟ್ಟಿಕೊಂಡ ಸೇತುವದು. ಇನ್ನು ಸೇತುವೆ ದಾಟಿದರೆ ಸಾಕು ಕಣ್ಣು ಹಾಯುವಷ್ಟು ಗದ್ದೆಯೇ. ಇಡೀ ಊರೇ ಗದ್ದೆಯಿಂದ ಆವೃತವಾಗಿ ಬದಿಯಲ್ಲಿ ತುಸು ಎತ್ತರದಲ್ಲಿ ಕಾಫಿ ತೋಟದ ಎಡೆಯಿಂದ ಕಾಣುವ ಪುಟ್ಟದಾದ ಚೆಂದದ ಸೆಗಣಿ ನೆಲದ ಮನೆಗಳು, ಮನೆಯ ಸೂರಿನಡಿಯ ಮರದ ಬಿಟ್ಟಗಳಿಗೆ ಮಣ್ಣಿನ ಕುಂಡದಲ್ಲಿ ಹೂವಿನ ಗಿಡಗಳನ್ನು ತೂಗಿಸಿಕೊಂಡು ಆ ಗದ್ದೆಗಳಿಗೆ ಕಾವಲು ಕೂತಂತೆ ತೋರುತ್ತಿದ್ದವು. ಈಗ ನೋಡಿದರೆ ನನಗೆ ಸಣ್ಣಗೆ ಅನುಮಾನ. ನದಿ ಬದಿಯ ಗದ್ದೆಗಳಲ್ಲಿ ಕಾಫಿ ತೋಟಗಳಾಗಿವೆ. ನಡು ನಡುವೆ ಖಾಲಿ ಗದ್ದೆಯಲ್ಲಿ ಶುಂಠಿ ಬೆಳೆಯುತ್ತಿದ್ದಾರೆ ಎನ್ನುವುದಕ್ಕೆ ಪುರಾವೆ ಒದಗಿಸಿದಂತೆ ರಾಶಿ ರಾಶಿ ಶುಂಠಿ ಗುಡ್ಡೆ ಹಾಕಿಕೊಂಡಿರುವುದು ಕಣ್ಣಿಗೆ ಕಾಣುತ್ತಿತ್ತು.

(ಫೋಟೋ ಕೃಪೆ: ಬ್ರಿಜೇಶ್‌ ಕಾಂಗೇರಿ)

ನದಿಯೊಂದು ಮಾತ್ರ ಗುರುತಿಗೆಂಬಂತೆ ಸದ್ದು ಮಾಡದೆ ಹರಿಯುತ್ತಿತ್ತು. ಸೇತುವೆ ನನ್ನ ಗುರುತು ಹಿಡಿಯುವುದರಲ್ಲಿ ವಿಫಲವಾಗುವುದಕ್ಕೆ ಕಾರಣವೂ ನನಗೆ ಗೊತ್ತಿದೆ.

ಯಾಕೋ ಭತ್ತದ ಪೈರು ಕಾಣದ ಆ ಊರನ್ನು ನೋಡುವಾಗ ಪೊರೆಯುವ ಯಾವುದೋ ಜೀವ ನಾಡಿಯ ತಂತುವೊಂದು ನಿಧಾನಕ್ಕೆ ಕಡಿದುಕೊಳ್ಳುತ್ತಿರುವ ವಿಪತ್ತಿನ ಸೂಚನೆಯಂತೆ ಭಾಸವಾಗುತ್ತಿತ್ತು. ಇಡೀ ಗದ್ದೆ ಬಯಲು ಪೈರಿನಿಂದ ಕಂಗೊಳಿಸುತ್ತಿರುವ ಹೊತ್ತಿನಲ್ಲಿ ರಾಶಿ ರಾಶಿ ಹಿಂಡು ಹಕ್ಕಿಗಳ ನೋಡಬೇಕು. ಸುಮ್ಮಗೆ ಒಂದು ಕಲ್ಲು ಒಗೆದರೂ ಸಾಕು ಟಪ್ಪನೆ ಒಂದಾದರೂ ಉದುರಿ ಬೀಳುವಷ್ಟು. ಆ ಪುಟ್ಟ ಹಕ್ಕಿಯ ಹೊಟ್ಟೆಗಳಿಗೆ ಅದೆಷ್ಟು ಬೇಕಿತ್ತು ಹೇಳಿ? ಅದಕ್ಕೆ, ಅದರ ಬಂಧು ಬಳಗ ಅಷ್ಟೂ ಗದ್ದೆಯನ್ನ ಸುಪರ್ಧಿಗೆ ತೆಗೆದುಕೊಂಡರೂ ಕಟಾವು ಮಾಡುವಾಗ ಫಸಲಿಗೇನೂ ಖೋತ ಬೀಳುತ್ತಿರಲಿಲ್ಲ.

ಭತ್ತದ ಕಟಾವು ಆದ ನಂತರ ಆ ಗದ್ದೆಗಳ ತುಂಬೆಲ್ಲದನಗಳು, ಪಕ್ಷಿಗಳು. ಕೆಲವು ಗದ್ದೆಗಳಿಗೆ ಬೇಲಿ ಹಾಕಿ ತರಕಾರಿ ಮಾಡುತ್ತಿದ್ದರು. ಅದರೊಳಗೆ ಬೆಳ್ಳಕ್ಕಿಗಳು ಕಾವಲು ಕಾಯುವಂತೆ ಗಸ್ತು ತಿರುಗುತ್ತಿದ್ದವು. ಒಂದು ತುದಿಯಿಂದ ಮತ್ತೊಂದು ತುದಿ ಎಷ್ಟೂ ದೂರದವರೆಗೂ ಕಾಣುವ ಕಾರಣ ನಮ್ಮ ಹೆಣ್ಮಕ್ಕಳಿಗೆ ಒಬ್ಬೊಬ್ಬರೇ ಎಲ್ಲೂ ಹೋಗಲು ಅಡ್ಡಿ ಆತಂಕಗಳಿರಲಿಲ್ಲ. ಶಾಲೆಯಿಂದ ಬರಲು ನಿಗದಿತ ಸಮಯಕ್ಕಿಂತ ತುಸು ತಡವಾದರೆ, ನನ್ನಜ್ಜಿ ಅಲ್ಲಿಯ ಮನೆಯ ಕೈಯಾಲೆಯ ಐಂಬರದ ಮೇಲೆ ಕುಳಿತು, ಗೋದಿಕಂಬಕ್ಕೊರಗಿ ಕಣ್ಣು ಹಾಯಿಸಿದರೆ ಸಾಕು, ನಾವು ದೂರದಲ್ಲೆಲ್ಲೋ ನಡೆದು ಬರುತ್ತಿರುವುದ ಗಮನಿಸಿ ಒಳಗೆ ಸೌದೆ ದೂಡಿ ಒಲೆಮೇಲೆ ಕಾಫಿ ಇಡಲು ತೆರಳುತ್ತಿದ್ದಳು.

ನಾನಂತೂ ಪರೀಕ್ಷೆ ಹತ್ತಿರ ಬಂತೆಂದರೆ ಇಡೀ ಗದ್ದೆ ಬಯಲಿಗೆ ಸುತ್ತು ಹೊಡೆದುಕೊಂಡು ಗಟ್ಟಿಯಾಗಿ ಓದುತ್ತಾ ಹೋಗುತ್ತಿದ್ದೆ. ಓದುವುದು ನೆಪ, ಇಡೀ ಬಯಲನ್ನು ಎದೆಯೊಳಗೆಳೆದುಕೊಳ್ಳುವ ಹಠ. ಸ್ವಚ್ಚ ಹವೆ, ಸಣ್ಣಗೆ ಅಡರುವ ಚಳಿ, ಸುತ್ತ ನೋಡಿದಷ್ಟೂ ಕಣ್ಣು ತುಂಬಿಕೊಳ್ಳುವಷ್ಟು ಆಕಾಶ. ಮುಗಿಲು ತನ್ನ ತೆಕ್ಕೆಯೊಳಗಿಂದ ಪುತಪುತನೇ ಹಕ್ಕಿ ಮರಿಗಳನ್ನು ಹಾರಲು ಬಯಲಿಗೆ ಬಿಡುತ್ತದೆಯೇನೋ ಅನ್ನುವಷ್ಟು ಬಗೆ ಬಗೆಯ ಹಕ್ಕಿಗಳು. ಇಂತಹ ಸ್ವರ್ಗವೊಂದು ಇತ್ತೆಂದು ನನಗೆ ಬಣ್ಣಿಸುವುದಕ್ಕೂ ಈಗ ಸಂಕಟವಾಗುತ್ತಿದೆ.

ತಡೆಯಲಾರದೆ ಅಜ್ಜಿ, ಮಾವಂದಿರ ಜೊತೆ ಯಾಕೆ ಭತ್ತ ಬೆಳೆಯುತ್ತಿಲ್ಲ? ಊಟಕ್ಕೇನು ಮಾಡುತ್ತೀರ? ನೀವೇ ಭತ್ತ ಬೆಳಿಯದಿದ್ದರೆ ಉಳಿದವರಿಗೆ ಹೇಗೆ ಊಟ ಸಿಗುತ್ತದೆ..? ನನ್ನ ಪ್ರಶ್ನೆಗಳನ್ನು ನಡುವಿನಿಂದ ತುಂಡರಿಸಿ, ನೋಡು ಕೂಸೇ, ನೀವು ಕೆಲಸ ಮಾಡಿದ್ರಿ ಅಂತ ಈಗಿನ ಮಕ್ಕಳು ಕೆಲಸ ಮಾಡಲಾರರು. ಇನ್ನು ಕೂಲಿ ನಾಲಿ ಕೊಟ್ಟು ಕೆಲಸ ಮಾಡಿಸಿದರೆ ಆದಾಯಕ್ಕಿಂತ ಖರ್ಚೇ ಜಾಸ್ತಿ ಆಗುತ್ತದೆ. ಹೀಗಿರುವಾಗ ಭತ್ತ ಬೆಳೆಯುವುದನ್ನು ಎಲ್ಲರೂ ನಿಲ್ಲಿಸಿದ್ದಾರೆ. ನಮಗೆ ಅಕ್ಕಿ ಮಾರುಕಟ್ಟೆಯಲ್ಲಿ ತೆಗೆದುಕೊಳ್ಳುವುದೇ ವಾಸಿ, ಹುತ್ತರಿಗೆ ಕದಿರು ಕೊಯ್ಯಲು ಬೇಕಾಗಿ ಅಂಗೈಯಗಲದ ಆ ಕರೆ ಗದ್ದೆಯಲ್ಲಷ್ಟೇ ನಾಟಿ ನೆಡುತ್ತೇವೆ ಅಂತ ಅವರು ಹೇಳುತ್ತಲೇ ಇದ್ದರು. ಅಷ್ಟಕ್ಕೇ ಹಸಿವಿನಿಂದ ಹಕ್ಕಿಗಳು ಆರ್ತವಾಗಿ ಕರೆದಂತೆ ಒಳಗಿವಿಯ ತುಂಬೆಲ್ಲಾ ವ್ಯಾಪಿಸಿಕೊಳ್ಳುತ್ತಿತ್ತು. ನಾನೂ ಹೆಚ್ಚು ಚರ್ಚೆ ಮಾಡಲು ಹೋಗಲಿಲ್ಲ. ತನ್ನ ಇಡೀ ಬದುಕನ್ನ ಬತ್ತ ಕುಟ್ಟುತ್ತಾ, ಅಕ್ಕಿ ಬೀಸುತ್ತಾ, ನೋವು ಆಯಾಸ ಪರಿಹರಿಸಿಕೊಳ್ಳಲು ಸೋಭಾನೆ ಪದ ಹಾಡುತ್ತಾ ಕಳೆದ ಅಜ್ಜಿಯೂ ಈ ವ್ಯವಸ್ಥೆಗೆ ಒಪ್ಪಿಕೊಂಡಂತೆ ಅವರ ಮೊಗದಲ್ಲಿ ಸಂತೃಪ್ತಿ ಇತ್ತು, ಇನ್ನಾದರೂ ಬಿಡುವಿಲ್ಲದ ಈ ಕೆಲಸದಿಂದ ಬಿಡುಗಡೆ ಸಿಕ್ಕಿತ್ತಲ್ಲ ಅನ್ನುವ ನಿರಾಳತೆ ಇತ್ತು. ಅವಳಿಗೆ ತಾನೇ ನಾ ಇನ್ನೇನು ಹೇಳಲು ಸಾಧ್ಯವಿತ್ತು?

ಆ ಊರಿನಲ್ಲಿ ದನ ಮೇಯಿಸಲು ಬಾಣೆ ಅನ್ನುವ ವಿಶಾಲವಾದ ಖಾಲಿ ಜಾಗ ಇತ್ತು. ಅಲ್ಲಿ ಸಿಗುವ ಕಾಡು ಹಣ್ಣಿಗೆ ವಿಶೇಷವಾದ ರುಚಿ ಇತ್ತು. ರಜೆ ಸಿಕ್ಕಾಗ ನಾ ಹೇಳದೆ ಕೇಳದೆ ಹಣ್ಣು ಹುಡುಕಲು ಹೋಗುತ್ತಿದ್ದೆ. ಆ ಹೊತ್ತಿಗೆ ನನಗೆ ಸಿಗುತ್ತಿದ್ದದ್ದೇ ಅವರಿಬ್ಬರು ವೃದ್ಧ ದಂಪತಿಗಳು. ಅವರು ಜೊತೆಯಾಗಿಯೇನೂ ಬರುತ್ತಿರಲಿಲ್ಲ. ಆ ಬಾಣೆ ತುದಿಯಲ್ಲಿ ಕಾಫಿ ತೋಟದ ನಡುವಲ್ಲಿ ಅವರ ಮನೆ ಇತ್ತು. ಅಲ್ಲಿದ್ದ ಆ ಅಜ್ಜ, ಸರೀ ಮಧ್ಯಾಹ್ನದ ಹೊತ್ತಿಗೆ ಬಂದು ತನ್ನಷ್ಟಕ್ಕೇ ಮನಸಿನಲ್ಲೇ ಗುನುಗುತ್ತಾ ಅಷ್ಟೂ ದೂರ ಬಂದು ಕೆಳಗೆ ಯಾರೂ ಇಲ್ಲದ ಜಾಗೆಗೆ ಬಂದು ಕಲ್ಲು ಒಗೆದು ಹೋಗುತ್ತಿದ್ದರು. ಅದಾದ ಬಳಿಕ ಮಣ ಮಣಿಸುತ್ತಾ ಬಂದ ಅಜ್ಜಿಯದ್ದೂ ಇದೇ ಕಾಯಕ. ಇದು ಅವರ ದೈನಂದಿನ ದಿನಚರಿ. ಇದು ಊರಿಡೀ ಗೊತ್ತಿರುವ ಸಂಗತಿಯಾದರೂ ಅದಕ್ಕೆ ಯಾರೂ ತಲೆಕೆಡಿಸಿಕೊಂಡಂತೆ ಇರಲಿಲ್ಲ. ರೆಕ್ಕೆ ಪುಕ್ಕವೂ ಕಟ್ಟಿರಲಿಲ್ಲ. ಅಥವಾ ನನ್ನ ಕಿವಿಗೆ ಬಿದ್ದಿರಲಿಲ್ಲವೋ ಏನೋ? ಆದರೆ ನನ್ನೊಳಗಿನ ಕುತೂಹಲ ಮಾತ್ರ ತಣಿದಿರಲಿಲ್ಲ.

ಎಷ್ಟೋ ಬಾರಿ ಅವರ ಮಾತು ಕೇಳಿಸಿಕೊಳ್ಳಲೆಂದೇ ಹಿಂಬಾಲಿಸಿ ಹೋಗಿದ್ದರೂ ನನಗೆ ಅರ್ಥೈಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅವರೊಳಗಿನ ಮನೋವೈಕಲ್ಯತೆ ಏನಿತ್ತೋ ಗೊತ್ತಿಲ್ಲ. ಖಾಲಿ ಬಯಲಿಗೆ ತಮ್ಮ ಸಂಕಟಗಳನ್ನು ಕಲ್ಲಿಗೆ ಕಟ್ಟಿ ಒಗೆದು ಬರುತ್ತಿದ್ದರೇನೋ ಅಂತ ಈಗ ಅದಕ್ಕೆ ವಿಪರೀತ ಅರ್ಥ ಹುಡುಕಿಕೊಳ್ಳುತ್ತಿದ್ದೇನೆ. ಏಕಾಂತಕ್ಕೆ, ಧ್ಯಾನಕ್ಕೆ, ಹುಡುಕಾಟಕ್ಕೆ ಎಷ್ಟೊಂದು ವಿಚಾರಗಳಿಗೆ ಖಾಲಿ ಬಯಲೊಂದು ಸಾಂತ್ವನದ ಹೆಗಲಾಗಿತ್ತು. ಅಲ್ಲಿ ಬೀಸುವ ಗಾಳಿಯೊಂದು ಹಾಗೆ ನೇವರಿಸುತ್ತಾ ತಾನಿದ್ದೇನೆ ಅನ್ನುವ ಭಾವಕ್ಕೆ ನೆರಳಾಗಿತ್ತು.

ಅಲ್ಲಿಯ ಮನೆಗಳಲ್ಲಿ ಈಗೀಗ ಒಂದೊಂದೇ ಸಮಾರಂಭಗಳು. ಅಲ್ಲಿಯೇ ಬೆಳೆದು ದೊಡ್ಡವಳಾದ ನನ್ನನ್ನು ಕಾರ್ಯಕ್ರಮಕ್ಕೆ ಕರೆಯದಂತೆಯೂ ಇಲ್ಲ, ನಾನೂ ತಪ್ಪಿಸಿಕೊಳ್ಳುವಂತೆಯೂ ಇಲ್ಲ. ಅಷ್ಟೊಂದು ಋಣ ಭಾರ ಆ ಊರಿನ ಮೇಲೆ ನನಗಿದೆ ಅಂತ ಈಗೀಗಷ್ಟೆ ಬಿಡದೇ ಕಾಡುವುದು. ಬಹುಶಃ ವಯಸ್ಸಿನ ಮಾಗುವಿಕೆಯಷ್ಟೆ ಇವುಗಳನ್ನು ಕಟ್ಟಿಕೊಡುವುದು ಅಂತನ್ನಿಸುತ್ತದೆ. ಹಾಗೇ ಈ ಸಲವೂ ಮದುವೆಯ ನಿಮಿತ್ತ ಅಲ್ಲಿಗೆ ಹೋಗಿದ್ದೆ. ಈಗ ನೋಡಿದರೆ ಖಾಲಿ ಇದ್ದ ಶುಂಠಿ ಗದ್ದೆಗಳಲ್ಲೂ ನುಣುಪು ನೆಲದ ಮಹಡಿ ಮನೆಗಳು ಎದ್ದಿವೆ. ತೋಟ ತುಡಿಗೆ ಸಾಕಷ್ಟು ಇದ್ದರೂ ಆಗ ಆರಾಮದಾಯಕ ಜೀವನ ಸಾಗಿಸಲು ಹೆಣಗಾಡುತ್ತಿದ್ದರು. ಈಗ ನೋಡಿದರೆ ಕಡಿಮೆ ಭೂಮಿಯಲ್ಲೂ ಆರಾಮವಾಗಿದ್ದಾರಲ್ಲ! ಅಚ್ಚರಿಯೆನ್ನಿಸಿತು.

ಮನೆಯೊಳಗಿನ ಸೋದರರಿಗೆಲ್ಲಾ ಬೇರೆ ಬೇರೆ ಮನೆಗಳಾಗಿ ಕೃಷಿ, ತೋಟಕ್ಕಿಂತ ಕಟ್ಟಡಗಳೇ ಹೆಚ್ಚು ತಲೆ ಎತ್ತಿವೆ. ಮನೆಗೊಂದರಂತೆ ಅಂಗಳದಲ್ಲಿ ಬಾವಿಗಳೆದ್ದಿವೆ. ಅದರೊಳಗೂ ಮೋಟಾರು ಪಂಪು ಬಂದು ಕೂತಿದೆ. ಅಕ್ಕಪಕ್ಕದ ಎಲ್ಲ ಮನೆಗಳಿಗೂ ಹೋಗಿ ಅಲ್ಲಿಯ ಹಿರಿಯರನ್ನು ಕಾಲು ಮುಟ್ಟಿ ನಮಸ್ಕರಿಸಿ ಬಂದೆ. ಬದಲಾದ ಅಭಿವೃದ್ಧಿ ಬೆಳವಣಿಗೆಯ ಪ್ರತಿಫಲನ ಅವರೆಲ್ಲರ ಮುಖದಲ್ಲಿ ಗೋಚರಿಸುತ್ತಿತ್ತು. ಅಲ್ಲಿಯ ಮಕ್ಕಳೆಲ್ಲರೂ ಕೋಣೆಯೊಳಗೆ ಅಭ್ಯಾಸದಲ್ಲಿ ನಿರತರಾಗಿದ್ದರು. ಒಬ್ಬಳು ಎಮ್.ಕಾಂ, ಮತ್ತೊಬ್ಬಳು ಸಿ.ಎ. ಮತ್ತೊಬ್ಬ ಎಂಜಿನೀಯರ್ ಅಂತ ಅವರೆಲ್ಲರೂ ತಮ್ಮ ಪುಳ್ಳಿಯಂದಿರ ಕುರಿತು ಅಭಿಮಾನದಿಂದ ಹೇಳುತ್ತಲೇ ಪಕ್ಕದ ಮನೆಯ ಅಜ್ಜಿಯೊಬ್ಬರು ನೀ ಏನು ಮಾಡುತ್ತಿರುವೆ ಎಂದರು. ಏನಿಲ್ಲವ್ವ, ಮನೆ, ತೋಟ ಇವಿಷ್ಟೇ ಅಂದೆ. ಹಾಗಾದರೆ ನೀ ಗದ್ದೆಯಿಡೀ ಓಡಿಕೊಂಡು ಓದಿದರೂ ನಿನಗೆ ಕೆಲಸ ಸಿಕ್ಕಿಲ್ವಾ? ಅಂದರು. ನಾನು ಮುಗುಳುನಕ್ಕು ಹೊರಬಂದೆ.

ಮನೆಯ ಹೊಸಿಲಿನಲ್ಲಿ ನಿಂತರೆ ಸಾಕು ಗದ್ದೆ, ಅದರ ತುದಿಯಲ್ಲಿ ಅಂಟಿಕೊಂಡ ನದಿ, ಆ ಪಾಲದಲ್ಲಿ ಹಾದು ಬರುವ ನೆಂಟರು ಎಲ್ಲರನ್ನು ಕಾಣಬಹುದಿತ್ತು. ಈಗ ಒಂದು ಮನೆಯ ಎದುರಿಗೆ ಕಾಂಪೌಂಡು ಗೋಡೆ, ಅದರ ಎದುರಿಗೆ ಮತ್ತೊಂದು ಮನೆ. ನೇರ ನೋಟಕ್ಕೆ ಯಾವುದೂ ದಕ್ಕುತ್ತಿಲ್ಲ. ಮುಗಿಲನ್ನೂ ಕಣ್ತುಂಬಿಕೊಳ್ಳಲು ಆಗಲಿಲ್ಲ. ಹಿಂಡು ಹಕ್ಕಿಗಳು ಎಲ್ಲಿ ಗುಳೇ ಹೋದವೋ, ಹಾದಿ ನಡುವೆ ಬಾಯಾರಿ, ಹಸಿವಿನಿಂದ ಸತ್ತವೊ? ಹಾರುವ ರಭಸದಲ್ಲಿ ಆಕಾಶದ ಬಿಸಿಗೆ ರೆಕ್ಕೆಸುಟ್ಟುಕೊಂಡವೋ? ಎಷ್ಟೆಲ್ಲ ತಳಮಳಗಳು ನನ್ನೊಳಗೆ. ಎಲ್ಲಾ ಬಿಡಿ, ಸಂಕಟ ಬಂದಾಗ ಕಲ್ಲು ಒಗೆಯಲು ತುಸು ಖಾಲಿ ಬಯಲು ಇಲ್ಲವೇ..!

ಒಳ ಹೋಗಿ ಅವ್ವ.. ಸೋಬಾನೆ ಪದ ಹೇಳುವಿಯಾ ರೆಕಾರ್ಡ್ ಮಾಡಿಕೊಳ್ಳುವೆ ಅಂದೆ. ಬೇಸಾಯ ಹೋದ ಮೇಲೆ ಸೋಬಾನೆ, ಸುವ್ವಿ ಪದ ಎಲ್ಲಾ ಮರೆತು ಹೋಗಿದೆ ಅಕ್ಕಯ್ಯಾ.. ಈ ಮಕ್ಕಳಿಗೆ ಪಿಕ್ಚರ್ ಹಾಡು ಬಿಟ್ರೆ ಒಂದೂ ಗೊತ್ತಿಲ್ಲ. ನೀ ಇನ್ನೊಮ್ಮೆ ಬಂದಾಗ ಎಲ್ಲಾ ನೆನಪು ಮಾಡಿ ಇಟ್ಟುಕೊಳ್ಳುವೆ ಅಂದರು. ನಾನು ಆಡಿ ಬೆಳೆದ ಆ ಊರಿನ ಚಿತ್ರಣವೊಂದು ಚಿತ್ರ ಪಟದ ಚೌಕಟ್ಟಿನೊಳಗಷ್ಟೇ ಕೂರುವಂತಾಯಿತಾ..? ಖೇದವಾಯಿತು. ಎಲ್ಲ ಊರುಗಳ ಕತೆಗಳು ಇದುವೆಯಾ? ನನ್ನೊಳಗೆ ನಾನೇ ಪ್ರಶ್ನೆ ಹಾಕಿಕೊಳ್ಳುತ್ತಾ ಮನೆ ಸೇರಿದೆ. ಪ್ರಶ್ನೆ ಕೇಳಲು, ಉತ್ತರ ಕೊಡಲೂ ಪುರುಸೊತ್ತು ಇಲ್ಲದಷ್ಟು ವೇಗವಾಗಿ ಕಾಲ ಓಡುತ್ತಿದೆ ಅನ್ನುವುದಕ್ಕೆ ಸಾಕ್ಷಿಯೆಂಬಂತೆ ಬಿಸಿಗಾಳಿ ಬೀಸಿ ಬೆವರು ಸುರಿಯುತ್ತಿದೆ.

ಚಿತ್ರಗಳು: ಬ್ರಿಜೇಶ್ ಕಾಂಗೀರ