Advertisement
‘ಆಷಾಢ ಕಾವ್ಯೋತ್ಸವದಲ್ಲಿ’ ಮಧುರಾಣಿ ಬರೆದ ಕವಿತೆ: ರೂಪಾಂತರ

‘ಆಷಾಢ ಕಾವ್ಯೋತ್ಸವದಲ್ಲಿ’ ಮಧುರಾಣಿ ಬರೆದ ಕವಿತೆ: ರೂಪಾಂತರ

ರೂಪಾಂತರ

ಏನು ಬರೆಯಲಿ
ಆಷಾಢಕ್ಕೆ ಉಡುಗೊರೆಯಾಗಿ..!?
ಆ ಮೊದಲ ವರುಷದ ಹಸಿ ವಿರಹವು
ಮರೆತೇ ಹೋಗಿ ನಿರುಮ್ಮಳವಾಗಿದ್ದೇನೆ
ಮೂಗಿನ ಮೇಲೆ ಕೂತ ಚಿಟ್ಟೆಯೊಂದು
ಎದೆಗೆ ಬಣ್ಣ ಅಂಟಿಸಿ ಹೋದ ಕಾಲ ಅದು,
ಈಗ ಕಣ್ಣೊಳಗೆ ತೇವವಿಲ್ಲ
ನೀನು ಬರದೇ ಹೋದರೆ..?? ಎಂಬ ಭಯವಿಲ್ಲ
ಬರದಿದ್ದರೆ ಸಾಕು, ನಿದ್ದೆ ಮಾಡಬಹುದೆಂದು
ಯೋಚಿಸಿ ದುಷ್ಟಳೂ ಭ್ರಷ್ಟಳೂ ಆಗುತ್ತೇನೆ
ಈ ಸುದೀರ್ಘ ಹಗಲಿನಲ್ಲಿ ಕಡು ಕಿರಾತಕಿಯಾಗಿ
ಸುಟ್ಟ ಸಿಗರೇಟಿನೊಂದಿಗೆ ಗಹಗಹಿಸುತ್ತೇನೆ
ಒಬ್ಬಳೇ…

*

ಭರ್ರೋ ಎಂದು ಯಮಗಾಳಿ ಬೀಸಿ
ಎಲೆಗಳು ಉದುರಿದರೆ ಅದೇನೋ
ಅವ್ಯಕ್ತ ಕೇಡಿ ಹಿತ!
ಸಂಜೆಗಳೀಗ ಶುಭ್ರ ನಿಸ್ಸಾರ ಶುಷ್ಕ… ಆಹಾ..
ಕಾಫಿ ಕಪ್ಪಿನ ಮೇಲೆ ಮೂಡಿರಬಹುದಾದ
ಲಿಪ್ ಗ್ಲಾಸಿನ ಗುರುತುಗಳು ಒಣಗಿ
ಚರ್ಮ ಕಿತ್ತು ಗಾಯವಾದ ಬಯಕೆಗಳಂತೆ ಮ್ಲಾನ…
ಪ್ರೇಮಕಾವ್ಯದ ಆಯಸ್ಸು ಕಡಿಮೆ
ಈಗ ಆಷಾಢಕ್ಕಾಗಿ ಪದ ಹೆಕ್ಕುವಾಗ ಖುಷಿ!
ಒಣಗುವುದೂ, ಅಂಡಲೆಯುವುದೂ
ಮಾಗಿದ ಸಂಕೇತವೆಂದು ಅವನು
ಕೂಡಿದಾಗಲೆಲ್ಲಾ ಹೇಳುತ್ತಲೇ ಇದ್ದ.
ಜಂಗಮವೇ ಶಾಶ್ವತ,
ಗಾಳಿಗೆ ತೂರುವ ಎಲೆಯ ಹಾಗೆ…
ನಿರ್ಭಯದಿಂದ ವಿನೀತ ಮಗುವಿನಂತೆ
ಈ ಎಳೆ ಮಾಗಿಯ ಗಾಳಿಗೆ ಮೈಯೊಡ್ಡುತ್ತೇನೆ..
ಜಾರುತ್ತಿರುವ ಸೌಂದರ್ಯಕ್ಕೆ ಈಗ ನಾನು ಹೆದರುವುದಿಲ್ಲ.

*
ತುಟಿಯ ಚರ್ಮದಿಂದ ಹಿಮ್ಮಡಿಯವರೆಗೂ ಒಡೆದ ರಾತ್ರಿಗಳಲ್ಲಿ
ಉಸಿರುಗಟ್ಟಿಸುವ ವಿದ್ರೋಹಿ ಹೃದಯ
ಬರೀ ಕಳೆಯುವುದನ್ನೇ ಪದೇಪದೇ ಲೆಕ್ಕ ಮಾಡಿ
‘ಕಳೆದದ್ದೇ ನಿನ್ನದು..!’ ಖಚಿತ ತೀರ್ಪಿತ್ತು,
ಇದೇ ಗಾಳಿಯಲ್ಲಿ, ಹೊಸ ಸಖಿಯೊಂದಿಗೆ
ತೂರಿ ಹೋದ ಅರೆ-ನೆರೆತ ಎಲೆಯಂತಹ ನಿನ್ನನ್ನು
ನನ್ನವನೆಂದೇ ಮಾರ್ಪಡಿಸುತ್ತದೆ.
ನಾನು ಒಪ್ಪದೇ
ನಿನ್ನಿಂದ ಬೇರ್ಪಡುವ ಧಾವಂತದಲ್ಲಿ, ಬಟ್ಟೆ ಕಳಚಿ
ಗಾಳಿಗೆ ಸಿಲುಕಿ, ಚರ್ಮ ಸಿಡಿಯಲೆಂದೇ
ಧಪಧಪನೆ ಓಡುತ್ತಾ…
ಮುಂಬರುವ ಶ್ರಾವಣವನ್ನು ಧಿಕ್ಕರಿಸುತ್ತಾ…
ತಬ್ಬಿ ಮುದ್ದಾಡುವ ಹೊಸಾ ಪ್ರೇಮಿಗಳಿಗೆ
“ಹುಚ್ಚಪ್ಪಗಳಿರಾ.. ಇದು ನಶ್ವರ!
ಮಾಗಿಯ ತೆಕ್ಕೆಗೆ ಬನ್ನಿ” ರೆಂದು ಕೂಗುತ್ತಾ…
ತರಗೆಲೆಗಳ ಜೊತೆ ಶಾಪ ವಿಮೋಚಿತಳಾಗಿ
ಮೊಲೆ ತೊಟ್ಟುಗಳ ಕತ್ತರಿಸಿ ಎಸೆದು
ಇಹ ಬಂಧನಗಳ‌ ತೊರೆದು
ಒಡೆದ ಚರ್ಮ ಸುಲಿದುಕೊಂಡು
ಚಿಟ್ಟೆಯಾಗಿ ಮಾರ್ಪಟ್ಟು ಹಾರುತ್ತೇನೆ…

About The Author

ಮಧುರಾಣಿ

ಕವಯಿತ್ರಿ, ಕಥೆಗಾರ್ತಿ ಮತ್ತು ಇಂಗ್ಲಿಷ್ ಅಧ್ಯಾಪಕಿ. ‘ನವಿಲುಗರಿಯ ಬೇಲಿ’ ಇವರ ಕವನ ಸಂಕಲನ.

3 Comments

  1. Jampanna Ashihal

    ಅಬ್ಬಾ , ರೂಪಾಂತರ ಎಷ್ಟು ಅನಿವಾರ್ಯವಾಗಿಬಿಡುತ್ತದೆ ಕೆಲವು ಸಲ !
    ಆತನ ದಾರಿ ಕಾದು ಸುಸ್ತಾಗಿ ಬದುಕು ದುಸ್ತರ ಮಾಡಿಕೊಳ್ಳುವುದು ,
    ‘ಕಳೆದದ್ದೇ ನಿನ್ನದು’ ಎಂಬ ಠರಾವು ಹೊರಡಿಸುವ ಕಾಲದಲ್ಲಿ ಬಟ್ಟೆ ಕಳಚಿ ಚಿಟ್ಟೆಯಾಗಿ ತಂಪಾದ ಗಾಳಿಯಲ್ಲಿ ಹೂಎಲೆಗಳ ಅರಸುತ್ತಾ ಸ್ವಚ್ಛಂದವಾಗಿ ಹಾರಾಡುವುದು ಎಷ್ಟೋ ವಾಸಿ ಅನಿಸಿಬಿಡುತ್ತದೆ.
    ಸೌಂದರ್ಯ ಜಾರಿದರೂ ಮನಸ್ಸಿಗೆ ಆಹ್ಲಾದಕರವೆನಿಸುತ್ತದೆ ಎನ್ನುವುದಾದರೆ ರೂಪಾಂತರಕ್ಕೆ ಸ್ವಾಗತವಿದೆ.
    ತಂಪಾದ ಗಾಳಿಯಂತೆ ಮೈಮನಕ್ಕೆ ತಾಕಿದ ಕವಿತೆ

    Reply
  2. Jaidev Mohan

    ಕಂಬಳಿ ಕಳೆದು ಚಿಟ್ಟೆಯಾಗುತ್ತಿರುವ ಪರಿ ಅನನ್ಯ ?

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ