ಬಾಲ್ಯದಲ್ಲಿ ನಮ್ಮ ಜೊತೆ ಆಟವಾಡುತ್ತಿದ್ದ ಅನೇಕರ ಹೆಸರು ಈಗಲೂ ನೆನಪಿಗೆ ಬಂದಾಗ, ಪ್ರತಿಯೊಬ್ಬರು ಆಗ ಮಾಡಿದ ಕೆಲವು ವಿಶೇಷ ಕಾರ್ಯಗಳನ್ನು ನೆನೆಸಿಕೊಂಡರೆ ನಗು ಕೂಡ ಬರುತ್ತಾ ಇರುತ್ತದೆ.. ಹೆಸರು ಮನಸ್ಸಿನ ಮೇಲೆ ಅಚ್ಚಾಗಿ ನಿಂತಿದ್ದರೂ, ಅವರು ಈಗ ಹೇಗಿರುತ್ತಾರೆ ಎಂದು ಗೊತ್ತಿರುವುದಿಲ್ಲ.ಹಾಗಾಗಿ ಕೆಲವೊಮ್ಮೆ ಅವರು ಬಂದು ನಮ್ಮ ಮುಂದೆ ನಿಂತರೂ ಅವರು ಯಾರು ಎಂಬುದು ತಿಳಿಯುವುದು ಅನೇಕ ಸರ್ತಿ ಕಷ್ಟಸಾಧ್ಯ.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’

 

ಅನೇಕ ಮಳೆಗಾಲವನ್ನು, ದೀಪಾವಳಿ, ಕ್ರಿಸ್ಮಸ್, ರಂಜಾನ್‌ಗಳನ್ನು ನೋಡಿದ ನನಗೆ ಜೀವನದಲ್ಲಿ ಅನೇಕ ಸಹಪಾಠಿಗಳು ಇದ್ದರು.. ಪ್ರಾಥಮಿಕ ಶಾಲೆಯಿಂದ ಹಿಡಿದು, ಹೈಸ್ಕೂಲು, ಕಾಲೇಜು, ಮೆಡಿಕಲ್ ಕಾಲೇಜುಗಳಲ್ಲಿ ಅನೇಕ ಮಂದಿ ನನ್ನ ತರಗತಿಯಲ್ಲಿ ಇದ್ದರು. ಆದರೆ ಅವರೆಲ್ಲರನ್ನು ನೆನೆಸಿಕೊಳ್ಳುವುದು ಬಹಳ ಕಷ್ಟ. ಆದರೆ ಕೆಲವರು ಯಾವುದೋ ಒಂದು ಕಾರಣದಿಂದ ನಮ್ಮ ಮನಸ್ಸಿನ ಯಾವುದೋ ಮೂಲೆಯಲ್ಲಿ ನಿಂತು ಬಿಟ್ಟಿದ್ದಾರೆ ಅಥವಾ ಎಲ್ಲಿಯಾದರೂ, ಯಾವಾಗಲಾದರೂ ಭೇಟಿಯಾಗುತ್ತಿದ್ದರೆ ಅವರ ನೆನಪುಗಳು ಚೆನ್ನಾಗಿ ಇರುತ್ತದೆ. ಕೆಲವರಂತೂ ಯಾವುದಾದರೂ ಒಂದು ವಿಶೇಷ ಕಾರಣಕ್ಕಾಗಿ ನಮ್ಮ ಜೀವನದಲ್ಲಿ ಎಂದಿಗೂ ಮರೆಯಲಾರದೇ ಇರುತ್ತಾರೆ.. ಕೆಲವು ಬಾರಿ ಆತ್ಮೀಯ ಮಿತ್ರರ ಮುಖ ನಮಗೆ ನೆನಪು ಬರುವುದು ಕಷ್ಟ.

ಬಾಲ್ಯದಲ್ಲಿ ನಮ್ಮ ಜೊತೆ ಆಟವಾಡುತ್ತಿದ್ದ ಅನೇಕರ ಹೆಸರು ಈಗಲೂ ನೆನಪಿಗೆ ಬಂದಾಗ, ಪ್ರತಿಯೊಬ್ಬರು ಆಗ ಮಾಡಿದ ಕೆಲವು ವಿಶೇಷ ಕಾರ್ಯಗಳನ್ನು ನೆನೆಸಿಕೊಂಡರೆ ನಗು ಕೂಡ ಬರುತ್ತಾ ಇರುತ್ತದೆ. ಹೆಸರು ಮನಸ್ಸಿನ ಮೇಲೆ ಅಚ್ಚಾಗಿ ನಿಂತಿದ್ದರೂ, ಅವರು ಈಗ ಹೇಗಿರುತ್ತಾರೆ ಎಂದು ಗೊತ್ತಿರುವುದಿಲ್ಲ. ಹಾಗಾಗಿ ಕೆಲವೊಮ್ಮೆ ಅವರು ಬಂದು ನಮ್ಮ ಮುಂದೆ ನಿಂತರೂ ಅವರು ಯಾರು ಎಂಬುದು ತಿಳಿಯುವುದು ಅನೇಕ ಸರ್ತಿ ಕಷ್ಟಸಾಧ್ಯ.

ಈಗ ನಾನು ನಿಮಗೆ ಹೇಳಲು ಇಷ್ಟಪಡುವುದು ನಾನು ವೈದ್ಯನಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ನಡೆದ ಒಂದು ಘಟನೆ. ಆ ದಿನ ನಾನು ಕ್ಷಕಿರಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಅಂದು ತೆಗೆದ ಕೆಲವು ಎಕ್ಸರೇ ಗಳ ಬಗ್ಗೆ ವಿವರಗಳನ್ನು ಬರೆಯುತ್ತಾ ನನ್ನ ಕೋಣೆಯಲ್ಲಿ ನಾನು ಕುಳಿತಿದ್ದೆ.. ಆಗ ಎದುರಿಗೆ ಬಂದ ಒಬ್ಬ ವ್ಯಕ್ತಿ.

ಏನಯ್ಯಾ ಸೂರ್ಯ, ಹೇಗಿದ್ದೀಯಾ ಎಂದ.

ತಲೆಯೆತ್ತಿ ನೋಡಿದರೆ ಅವನು ಯಾರು ಎಂಬುದು ನನಗೆ ಗೊತ್ತಾಗುತ್ತಿಲ್ಲ.

… ನಾನು ಚೆನ್ನಾಗಿದ್ದೇನೆ… ನೀವು ಯಾರು, ನಿಮ್ಮನ್ನು ಗೊತ್ತಾಗುತ್ತಿಲ್ಲ ಅಂದೆ.

ಜೋರಾಗಿ ನನ್ನ ಬೆನ್ನಿನ ಮೇಲೆ ಡಬಕ್ಕನೆ ಒಂದು ಏಟು ಹೊಡೆದು, ನಾನು ಮಾರಾಯ ಗೋವಿಂದ ಅಂದ

ಗೋವಿಂದನಾ? ಯಾವ ಗೋವಿಂದ?

ಈ ರೀತಿಯ ಸಲಿಗೆಯಲ್ಲಿ ಇರುವಂತಹ ಯಾವುದೇ ನನ್ನ ರೋಗಿಗಳು ನೆನಪಿಗೆ ಬರಲಿಲ್ಲ. ಈ ಹೆಸರಿನ ಕೆಲವು ವ್ಯಕ್ತಿಗಳನ್ನು ನಾನು ಅಲ್ಲಿ ಇಲ್ಲಿ ನೋಡಿರಬಹುದು. ಆದರೂ ನನ್ನ ಬೆನ್ನಿಗೆ ಬಂದು ತಟ್ಟುವಷ್ಟು ಸಲಿಗೆ ಇದ್ದದ್ದು ಖಂಡಿತ ನೆನಪಿಗೆ ಬರುತ್ತಿಲ್ಲ.

ಗೋವಿಂದ ಎಂದು ನನ್ನ ಜೊತೆಯಲ್ಲಿ ಇದ್ದದ್ದು ಮೆಡಿಕಲ್ ಕಾಲೇಜಿನಲ್ಲಿ ಮಾತ್ರ. ಆದರೆ ಅವರನ್ನು ನಾನು ಇತ್ತೀಚೆಗೆ ನೋಡಿದೆ. ಇವರು ಅವರಲ್ಲ.

‘ನೀವು ಯಾವ ಗೋವಿಂದ ‘

” ಅಯ್ಯೋ ಅಷ್ಟು ನೆನಪಾಗ್ತಾ ಇಲ್ವಾ ನಿನಗೆ.. ನಾನು ನಿನ್ನ ಕ್ಲಾಸ್ಮೇಟ್”

“ನನ್ನ ಕ್ಲಾಸ್ಮೇಟ್? ಎಲ್ಲೀ? ಸ್ವಲ್ಪ ವಿವರವಾಗಿ ಹೇಳಿ”

ಕೆಲವರು ಯಾವುದೋ ಒಂದು ಕಾರಣದಿಂದ ನಮ್ಮ ಮನಸ್ಸಿನ ಯಾವುದೋ ಮೂಲೆಯಲ್ಲಿ ನಿಂತು ಬಿಟ್ಟಿದ್ದಾರೆ ಅಥವಾ ಎಲ್ಲಿಯಾದರೂ, ಯಾವಾಗಲಾದರೂ ಭೇಟಿಯಾಗುತ್ತಿದ್ದರೆ ಅವರ ನೆನಪುಗಳು ಚೆನ್ನಾಗಿ ಇರುತ್ತದೆ.

“ನಾವಿಬ್ಬರೂ ಭಾಗಮಂಡಲದಲ್ಲಿ ಜೊತೆಗಿದ್ದೆವು. ಅಷ್ಟು ಬೇಗ ಮರೆತು ಬಿಟ್ಟಿದ್ದೀಯ” ಎಂದ..

“ಭಾಗಮಂಡಲದಲ್ಲಿ ನಾನು ಎರಡನೇ ತರಗತಿಯವರೆಗೆ ಮಾತ್ರ ಓದಿದ್ದು ಹಾಗಾಗಿ ನನಗೆ ಎಲ್ಲರ ನೆನಪು ಇಲ್ಲ. ದಯವಿಟ್ಟು ಕ್ಷಮಿಸಿರಿ. ಕುಳಿತುಕೊಳ್ಳಿ” ಎಂದೆ.

ಎದುರಿಗೆ ಕುಳಿತಿದ್ದ ವ್ಯಕ್ತಿ ಲೋಕಾಭಿರಾಮವಾಗಿ ಅದು-ಇದು ಮಾತನಾಡಲು ತೊಡಗಿದರು. ಈಗ ಹುಣಸೂರಿನಲ್ಲಿ ಇರುವುದು ಎಂದು ಅವರ ಬಗ್ಗೆ ಕೆಲವು ವಿವರಗಳನ್ನು ಹೇಳಿದರು.

ಸ್ವಲ್ಪ ಹೊತ್ತಿನಲ್ಲಿ ನಾನು, “ಹಾಗಾದರೆ ನಿಮಗೆ ನನ್ನ ತಾಯಿಯ ನೆನಪು ಇರಬಹುದದಲ್ಲವೇ” ಎಂದು ಕೇಳಿದೆ. ಯಾಕೆಂದರೆ ನನ್ನ ತಾಯಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಇದ್ದವರು. ಇದನ್ನು ಕೇಳಿದ ಗೋವಿಂದ ಸ್ವಲ್ಪ ಗಲಿಬಿಲಿಗೊಂಡಂತೆ ಕಂಡ.

‘ಇಲ್ಲವಲ್ಲ. ನಿಮ್ಮ ತಾಯಿ ನನಗೆ ಮುಖ್ಯೋಪಾಧ್ಯಾಯಿನಿ ಆಗಿರಲಿಲ್ಲ. ಆಗ ವೆಂಕಟರಾಯರು ಇದ್ದದ್ದು.’

ಅಲ್ಲಿಗೆ ಮತ್ತೆ ಕನ್ಫ್ಯೂಷನ್..

ವೆಂಕಟರಾಯರು ಅಲ್ಲಿ ಇದ್ದದ್ದು ನನಗೆ ಗೊತ್ತಿತ್ತು. ಆದರೆ ನಮ್ಮ ತಾಯಿಗೆ ವರ್ಗವಾಗಿ ನಾವು ಆ ಊರು ಬಿಟ್ಟ ನಂತರ, ಅವರ ಸ್ಥಾನಕ್ಕೆ ಬಂದವರು ವೆಂಕಟರಾಯರು.

ಆಗ ಅವರು ಕೇಳಿದ ಪ್ರಶ್ನೆ
“ಜಯಂತ ನಿಮ್ಮ ಕ್ಲಾಸ್ಮೆಂಟ್ ಅಲ್ವಾ?”

“ನಿಜ, ಆತ ನನ್ನ ಒಂದನೇ ಮತ್ತು ಎರಡನೇ ತರಗತಿಯ ಕ್ಲಾಸ್ಮೇಟ್” ಎಂದೆ.

“ಎರಡನೇ ಕ್ಲಾಸ್ ಮಾತ್ರವಾ? ಅವರು ನನ್ನ ಐದನೇ ಕ್ಲಾಸಿನಲ್ಲಿ ಕ್ಲಾಸ್ಮೇಟ್” ಎಂದ ಗೋವಿಂದ…

“ಇರಬಹುದು . ನಾನು ಅಲ್ಲಿ ಎರಡು ವರ್ಷ ಇದ್ದು, ನಂತರ ಬೇರೆ ಊರಿಗೆ ಹೋದೆ” ಎಂದೆ.

ಬೆವರು ಒರೆಸಿಕೊಂಡ ಗೋವಿಂದ ಅಲ್ಲಿ ಹೇಳಿದ್ದಿಷ್ಟು.
“ನಾನು ಐದನೇ ಕ್ಲಾಸ್ ಗೆ ಆ ಊರಿಗೆ ಬಂದದ್ದು. ನಾಲ್ಕರವರೆಗೆ ನಾನು ಬೇರೆ ಊರಿನಲ್ಲಿ ಓದಿದ್ದು.”
ಈಗ ಏನು ನಡೆದಿರಬಹುದು ಎಂಬುದು ನನ್ನ ಮನಸ್ಸಿಗೆ ನಿಚ್ಚಳವಾಯಿತು.

ಇತ್ತೀಚೆಗೆ ಯಾವಾಗಲೋ ಮಾತನಾಡುವಾಗ ಜಯಂತ ನಾನು ಅವನ ಕ್ಲಾಸ್ಮೇಟ್ ಅಂದಿದ್ದಾನೆ. ಐದನೇ ಕ್ಲಾಸಿಗೆ ಆ ಊರಿಗೆ ಬಂದಿದ್ದ ಗೋವಿಂದ, ನನ್ನ ಜ್ಞಾಪಕ ಇಲ್ಲದಿದ್ದರೂ, ಎರಡಕ್ಕೆ ಎರಡು ಸೇರಿಸಿದರೆ ನಾಲ್ಕು ಎಂಬಂತೆ, ಆ ಲೆಕ್ಕದಲ್ಲಿ, ಒಬ್ಬನ ಕ್ಲಾಸ್ಮೇಟ್ ಆದರೆ, ಅದೇ ತರಗತಿಯ ಇನ್ನೊಬ್ಬನ ಸಹಪಾಠಿ ಆಗಲೇಬೇಕೆಂದು ನಿಶ್ಚಯಿಸಿ ಬಿಟ್ಟಿದ್ದ.

ಮಡಿಕೇರಿಯ ಆಸ್ಪತ್ರೆಯಲ್ಲಿ ಅವನಿಗೆ ಯಾವುದೋ ಕೆಲಸಕ್ಕೆ ನನ್ನ ಸಹಾಯ ಬೇಕಾಗಿತ್ತು. ಆಗ ನೆನಪಾದದ್ದು, ಈ ಕ್ಲಾಸ್ಮೇಟ್.

ಅಲ್ಲಿಗೆ ಗೋವಿಂದ..ಗೋವಿಂದಾ..!