ಕರೀಂ ಖಾನ್ ಮತ್ತು ಮಕ್ಕಳು ಬಳಸುವ ಸಿತಾರ್‌ನಲ್ಲಿ ೧೯ ಪರ್ದಾಗಳೇ ಇವೆ. ಯಾಕೆ ಇವರು ಇನ್ನೂ ಆಧುನಿಕತೆಯನ್ನು ಒಪ್ಪಿಕೊಂಡಿಲ್ಲ ಎಂದು ಎಲ್ಲರೂ ಕೇಳತೊಡಗಿದ್ದರು. ಕರೀಂ ಖಾನರಿಗೆ ಈ ಪ್ರಶ್ನೆ ಇಷ್ಟವಾಗುತ್ತಿರಲಿಲ್ಲ. ಆದರೆ ರಫೀಕ್ ಮತ್ತು ಶಫೀಕ್ ಈ ಕುರಿತು ಬಹಳಷ್ಟು ಚರ್ಚೆ, ಅಧ್ಯಯನ, ಪ್ರಯೋಗಗಳನ್ನು ಮಾಡಿದರು. ಹೊಸವಿಧಾನವನ್ನು ಒಪ್ಪಿಕೊಳ್ಳುವುದು ಸರಳವಾದ ವಿಚಾರ ಆಗಿರಲಿಲ್ಲ.
ಶೇಣಿ ಮುರಳಿ ಬರೆದ ರಫೀಕ್ ಖಾನ್ ಜೀವನ ಚರಿತ್ರೆ ‘ಖಾನ್ ಕಾಂಪೌಂಡ್’ ಕೃತಿಯ ಒಂದು ಅಧ್ಯಾಯ
ರಫೀಕ್-ಶಫೀಕರ ಮನಸ್ಸು ಮನೋಧರ್ಮದ ಜೋಕಾಲಿಯಾಡುತ್ತಿದ್ದ ದಿನಗಳವು. ಎಳೆಯ ವಯಸ್ಸು ಅದನ್ನು ಆಸ್ವಾದಿಸುತ್ತಲೂ ಇತ್ತು.
ಮೀರಜ್‌ನ ಉರುಸ್‌ನಲ್ಲಿ ಕಾರ್ಯಕ್ರಮ ನೀಡುವುದನ್ನು ಹಲವು ಕಲಾವಿದರು ಭಾಗ್ಯ ಎಂದೇ ಭಾವಿಸುತ್ತಿದ್ದುದರಿಂದ ರಫೀಕ್-ಶಫೀಕ್ ಕೂಡ ಅಲ್ಲಿಗೆ ಹೋಗಿದ್ದರು. ಹೋಟೆಲ್‌ನಲ್ಲಿ ವಸತಿ. ಸಿತಾರ್ ನುಡಿಸುವ ರೀತಿಯಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳುವ ಬಗೆಗೆ ಚಿಂತನೆಯ ಮೊಳಕೆ ಒಡೆಯುವ ಒಂದು ಘಟನೆ ಮುಂದಿನ ಕೆಲವೇ ಕ್ಷಣಗಳಲ್ಲಿ ನಡೆಯಲಿತ್ತು. ಸಂಜೆ ಕಛೇರಿ ಇದ್ದ ಕಾರಣ, ಬೆಳಗ್ಗೆ ತಮ್ಮ ಕೊಠಡಿಯಲ್ಲಿ ರಫೀಕ್-ಶಫೀಕ್ ಸಿತಾರ್ ಅಭ್ಯಾಸ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಹೊರಗಿನಿಂದ ಕದ ತಟ್ಟಿದ ಸದ್ದು ಕೇಳಿಸಿತು. ಸಿತಾರ್ ಕೆಳಗಿಟ್ಟು, ಬಾಗಿಲು ತೆರೆದರೆ ಎದುರು ಖ್ಯಾತ ಸಿತಾರ್ ವಾದಕ ಶಾಹಿದ್ ಪರ್ವೇಜ್ ನಿಂತಿದ್ದರು!
ತಾವು ಪೂಜ್ಯಭಾವದಿಂದ ನೋಡುತ್ತಿದ್ದ ಶಾಹಿದ್ ಪರ್ವೇಜ್ ಅದೇ ಹೋಟೆಲ್‌ನಲ್ಲಿ ತಂಗಿದ್ದ ವಿಷಯ ಈ ಸೋದರರಿಗೆ ಗೊತ್ತಿರಲಿಲ್ಲ. ಇವರ ಕೊಠಡಿಯ ಮುಂದೆ ಹಾದುಹೋಗುತ್ತಿದ್ದ ಶಾಹಿದ್ ಪರ್ವೇಜ್, ಅಚಾನಕ್ ಆಗಿ ಸಿತಾರ್ ಧ್ವನಿ ಕೇಳಿಸಿ, ಕುತೂಹಲದಿಂದ ಕೊಠಡಿಯ ಬಾಗಿಲು ತಟ್ಟಿದ್ದರು. ಮೀರಜ್‌ನ ಕಾರ್ಯಕ್ರಮಗಳು ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ನಿಗದಿಯಾಗುತ್ತವೆ. ಹಾಗಾಗಿ ಪ್ರತಿ ವರ್ಷ ಇದೇ ದಿನ ನಡೆಯುತ್ತದೆ ಎನ್ನುವಂತಿಲ್ಲ. ಹೆಸರಾಂತ ಕಲಾವಿದರು ಅಲ್ಲಿಗೆ ಬರುತ್ತಿದ್ದರು, ಹಾಗೆ ಆ ವರ್ಷ ಶಾಹಿದ್ ಪರ್ವೇಜ್ ಮತ್ತು ತಬಲಾ ವಾದಕ ವಿಜಯ ಘಾಟೆ ಬಂದಿದ್ದರು. ಜನಪ್ರಿಯ ಕಲಾವಿದರು ಪ್ರೇಕ್ಷಕರ ಸಾಲಲ್ಲಿ ಕುಳಿತು ಉದಯೋನ್ಮುಖ ಕಲಾವಿದರ ಪ್ರದರ್ಶನವನ್ನು ಗಮನಿಸುತ್ತಿದ್ದರು. ಹೀಗಾಗಿ ಕಿರಿಯ ಕಲಾವಿದರು ಕಛೇರಿಯನ್ನು ಗಂಭೀರವಾಗಿಯೇ ಪರಿಗಣಿಸಬೇಕಿತ್ತು.
ಶಾಹಿದ್ ಅವರ ಪರಿಚಯ ರಫೀಕ್-ಶಫೀಕ್ ಅವರಿಗೆ ಮೊದಲೇ ಇತ್ತು. ಕೊಠಡಿ ಒಳಗೆ ಬಂದ ಶಾಹಿದ್ ಪರ್ವೇಜ್, ‘ತುಮ್ಹಾರೆ ಸಿತಾರ್ ಮೆ ಕೋಮಲ್ ಗಾಂಧಾರ್ ಕಾ ಪರ್ದಾ ಕ್ಯೂಂ ನಹೀ ಹೈ?’ (ನಿಮ್ಮ ಸಿತಾರ್‌ನಲ್ಲಿ ಕೋಮಲ ಗಾಂಧಾರ ಸ್ವರಕ್ಕೆ ಬಳಸುವ ಪರ್ದಾ ಯಾಕಿಲ್ಲ?) ಎಂದು ಕೇಳಿದರು.
ಏನು ಉತ್ತರಿಸಬೇಕೆಂದೇ ತೋಚದೆ, ‘ನಮ್ಮ ಮನೆಯಲ್ಲಿ ಎಲ್ಲರೂ ಹೀಗೆಯೇ ನುಡಿಸುತ್ತಾರೆ’ ಎಂದರು ರಫೀಕ್-ಶಫೀಕ್. (ಪರ್ದಾ ಎಂಬ ಪದವನ್ನು ಇಂಗ್ಲಿಷ್‌ನಲ್ಲಿ ಫ್ರೆಟ್ ಎಂದು ಕರೆಯಲಾಗಿದೆ. ತಂತಿವಾದ್ಯಗಳಲ್ಲಿ ಕಲಾವಿದರು ಬೆರಳಾಡಿಸುವ ಭಾಗದ ಮೆಟ್ಟು, ಮೆಟ್ಟಿಲು ಅಥವಾ ಸಾರಿಕೆ ಎಂಬುದು ಈ ಪದದ ಅರ್ಥ).
ಶಾಹಿದ್ ಎರಡನೇ ಪ್ರಶ್ನೆ ಮುಂದಿಟ್ಟರು.
‘ಪರ್ದಾ ಇಲ್ಲದೆ, ಕೋಮಲ ಗಾಂಧಾರ ಮತ್ತು ಶುದ್ಧ ಗಾಂಧಾರ ರಾಗವನ್ನು ಪರಿಣಾಮಕಾರಿಯಾಗಿ ಹೇಗೆ ನುಡಿಸುತ್ತೀರಿ?’
ಈ ಬಗ್ಗೆ ಕೊಂಚವೂ ತಿಳುವಳಿಕೆ ಇಲ್ಲದ ರಫೀಕ್-ಶಫೀಕ್ ಪರಸ್ಪರ ಮುಖನೋಡಿಕೊಂಡರು.
‘ಸರಿ, ಸಂಜೆ ಕಛೇರಿಯಲ್ಲಿ ಚೆನ್ನಾಗಿ ನುಡಿಸಿ’ ಎಂದಷ್ಟೇ ಹೇಳಿ ಶಾಹಿದ್ ನಿರ್ಗಮಿಸಿದರು.
ಪ್ರಶ್ನೆಗಳನ್ನು ಕೇಳಿದವರು ಅಗ್ರಮಾನ್ಯ ಕಲಾವಿದರಾದ್ದರಿಂದ ನಿರ್ಲಕ್ಷಿಸುವಂತಿರಲಿಲ್ಲ. ಸಂಜೆ ಕಛೇರಿಗೆ ಶ್ರೋತೃಗಳ ಸಾಲಿನಲ್ಲಿ ಶಾಹಿದ್ ಪರ್ವೇಜ್ ಇರುವುದು ಖಚಿತ. ಹಿರಿಯ ಕಲಾವಿದರಾದ ಗಂಗೂಬಾಯಿ ಹಾನಗಲ್, ಶ್ರೀಕಾಂತ್ ದೇಶಪಾಂಡೆ, ಉಲ್ಲಾಸ್ ಬಾಪಟ್, ಪಂಡಿತ್ ಜಿತೇಂದ್ರ ಅಭಿಷೇಕಿ ಮೊದಲಾದ ಕಲಾವಿದರು ಅಂದು ಅದೇ ವೇದಿಕೆಯಲ್ಲಿ ಈ ಯುವ ಕಲಾವಿದರ ಅನಂತರ ಪ್ರದರ್ಶನ ನೀಡಲಿದ್ದರು. ಹಾಗಾಗಿ ಅವರೆಲ್ಲ ಮೊದಲ ಸಾಲಿನಲ್ಲೇ ಕುಳಿತಿದ್ದರು. ಖಾನ್ ಸಹೋದರರು ಆ ಸಂಜೆ ೪೦ ನಿಮಿಷ ಯಮನ್ ರಾಗದಲ್ಲಿ ಸಿತಾರ್ ಮೀಟಿದರು.
ಕಚೇರಿ ಮುಕ್ತಾಯದ ಹಂತಕ್ಕೆ ಬಂದಾಗಲೇ ಗಂಗೂಬಾಯಿ ಹಾನಗಲ್ ವೇದಿಕೆಯ ಹಿಂದೆ ಬಂದು ನಿಂತರು. ರಫೀಕ್-ಶಫೀಕ್ ವೇದಿಕೆ ಇಳಿದು ಬಂದಾಗ ಇಬ್ಬರನ್ನೂ ನೋಡಿ, ನನ್ಹಾ -ಮುನ್ಹಾ ತುಂಬ ಚೆನ್ನಾಗಿ ನುಡಿಸಿದಿರಿ. ಖುಷಿ ಆಯಿತು ಎಂದು ಬೆನ್ನು ತಟ್ಟಿದ್ದರು. ಅಲ್ಲೇ ಇದ್ದ ಗಾಯಕ ಪಂಡಿತ್ ಜಿತೇಂದ್ರ ಅಭಿಷೇಕಿ ಕೂಡ ರಫೀಕ್- ಶಫೀಕರ ಕೆನ್ನೆಯನ್ನು ಚಿವುಟಿ, ‘ಆಪ್ ದೋನೋ ನೆ ಮೇರಾ ಗಾನಾ ಮುಷ್ಕಿಲ್ ಕರ್ ದಿಯಾ’ ಎಂದರು. ನಂತರ ಅವರ ಕಛೇರಿ ಇತ್ತು. ‘ನೀವಿಷ್ಟು ಚೆನ್ನಾಗಿ ನುಡಿಸಿದಿರಿ. ಇದಕ್ಕಿಂತ ಚೆನ್ನಾಗಿ ನಾನು ಹೇಗೆ ಹಾಡಲಿ’ ಎಂದು ಅವರು ಹಿಂದಿಯಲ್ಲಿ ಹೇಳಿದ್ದರು. ತುಂಬ ಪ್ರೌಢ ಮತ್ತು ಪರಿಣಾಮಕಾರಿ ಪ್ರಸ್ತುತಿ ನೀಡಿದ್ದೀರಿ ಎನ್ನುತ್ತ ಪ್ರೋತ್ಸಾಹಿಸಿದ್ದರು. ಆದರೆ, ಅವರ ನುಡಿಸುವಿಕೆ ಅಷ್ಟು ಪಕ್ವವಾಗಿರಲಿಲ್ಲ ಆ ಕಾಲಕ್ಕೆ. ಆದರೂ, ಉದಯೋನ್ಮುಖ ಕಲಾವಿದರನ್ನು ಹಿರಿಯ ಕಲಾವಿದರು ಪ್ರಶಂಸಿಸಿದ್ದರು. ಹೊಗಳಿಕೆಯಿಂದ ಸೋದರರ ಮನಸ್ಸು ಒಂದಷ್ಟು ಉಲ್ಲಸಿತವಾದುದು ನಿಜವಾದರೂ, ಶಾಹಿದ್ ಪರ್ವೇಜ್ ಅವರ ಪ್ರಶ್ನೆ ಕೆಲವು ದಿನಗಳ ಮಟ್ಟಿಗೆ ನಿದ್ದೆಗೆಡಿಸಿತು. ಅವರು ಹಚ್ಚಿದ್ದ ಬೆಂಕಿಯ ಕಿಡಿ ಆರಿರಲಿಲ್ಲ.
‘ನಮ್ಮ ಸಿತಾರ್‌ನಲ್ಲಿ ಕೋಮಲ ಗಾಂಧಾರದ ಪರ್ದಾ ಯಾಕಿಲ್ಲ?
ಊರಿಗೆ ವಾಪಸಾಗಿ, ಮನೆಗೆ ಬಂದೊಡನೆಯೇ ಬಬ್ಬನಲ್ಲಿ ರಫೀಕ್ ಕೇಳಿದ ಪ್ರಶ್ನೆಯಿದು.
ಕರೀಂ ಖಾನ್ ಅದನ್ನು ಗಂಭೀರವಾಗಿ ಪರಿಗಣಿಸದೆ, ‘ಅದು ಯಾಕೆ ನಮಗೆ, ನಮ್ಮದು ಬೀನ್‌ಕಾರ್ ಶೈಲಿ, ಅಲ್ಲಿ ಅದಕ್ಕೆ ಸ್ಥಾನವಿಲ್ಲ ಎಂದು ಕಡ್ಡಿಮುರಿದಂತೆ ಉತ್ತರಿಸಿದರು. ರಫೀಕ್-ಶಫೀಕ್‌ಗೆ ಈ ಉತ್ತರದಿಂದ ಸಮಾಧಾನವಾಗಲಿಲ್ಲ.
‘ಹಾಗಾದರೆ ನಮ್ಮ ಶೈಲಿಯಲ್ಲಿ ನಾವು ಕೋಮಲ ಗಾಂಧಾರ ಸ್ವರವನ್ನು ನುಡಿಸುವುದೇ ಇಲ್ಲವೇ?’
ತಂದೆಯವರಿಗೆ ಇದು ಎರಡನೇ ಪ್ರಶ್ನೆ.
ಈ ಬಾರಿ ಕೊಂಚ ವಿಚಲಿತರಾದ ಕರೀಂ ಖಾನ್, ಸಿತಾರ್ ಕೈಗೆತ್ತಿಕೊಂಡು, ಅದರಲ್ಲಿ ಕೋಮಲ ಗಾಂಧಾರದ ಸ್ವರಗಳನ್ನು ಪೀಲು ರಾಗದಲ್ಲಿ ಬೀನ್‌ಕಾರ್ ಶೈಲಿಯಲ್ಲೇ ನುಡಿಸಿ ತೋರಿಸಿದರು. ತಂದೆಯವರ ಪರಿಣಾಮಕಾರಿ ನುಡಿಸುವಿಕೆ ಕೇಳಿದಾಗ ರಫೀಕ್-ಶಫೀಕ್ ಮುಖ ಮುಖ ನೋಡಿಕೊಂಡರು.
‘ನೋಡಿ, ನಮ್ಮದು ಬೀನ್‌ಕಾರ್ ಶೈಲಿ, ನಮ್ಮತನವನ್ನು ಬಿಡಬಾರದು. ಬೇರೆಯವರ ಶೈಲಿ ನಮಗ್ಯಾಕೆ? ಅದರ ಬಗ್ಗೆ ಚಿಂತೆ ಬಿಡಿ’ ಎಂದು ಕರೀಂ ಖಾನ್ ಗುರುವಾಗಿಯೂ, ತಂದೆಯಾಗಿಯೂ ಮಕ್ಕಳಿಗೆ ಕಿವಿಮಾತು ಹೇಳಿದರು. ಶಾಹಿದ್ ಪರ್ವೇಜ್ ಅವರ ಪ್ರಶ್ನೆಗಳು ಮತ್ತು ತಂದೆಯವರ ಪ್ರಾಯೋಗಿಕ ಸಮರ್ಥನೆಯ ನಡುವೆ ರಫೀಕ್-ಶಫೀಕ್ ಕೆಲವೇ ದಿನಗಳಲ್ಲಿ ತಮ್ಮದೇ ಆದ ಉತ್ತರವನ್ನೂ ಕಂಡುಕೊಂಡರು. ತಾನ್(ತ್ವರಿತಗತಿಯ ನುಡಿಸುವಿಕೆ) ವಿಷಯದಲ್ಲಿ ಶಾಹಿದ್ ಪರ್ವೇಜ್ ಹೇಳಿಕೆ ಸರಿ. ಆಲಾಪ್ (ನಿಧಾನ ನುಡಿಸುವಿಕೆ)ನಲ್ಲಿ ಬಬ್ಬನ ನಿಲುವು ಸರಿ ಎಂಬ ನಿರ್ಧಾರಕ್ಕೆ ಬಂದರು! ಕೋಮಲ ಗಾಂಧಾರದ ಪರ್ದಾ ಆಗ ಮನೆಯ ಯಾವ ಸಿತಾರ್‌ನಲ್ಲಿಯೂ ಇಲ್ಲದ ಕಾರಣ, ಪ್ರಾಯೋಗಿಕ ಮನನ ಸಾಧ್ಯವಿರಲಿಲ್ಲ.
ಅಷ್ಟರಲ್ಲೇ ಹೊಸ ಗಾಳಿ ಬೀಸಲಾರಂಭಿಸಿತ್ತು. ಬೀನ್‌ಕಾರ್ ಶೈಲಿ ತುಂಬ ಹಳತು ಎಂಬ ಮಾತು ಕೇಳಿಬರುತ್ತಿತ್ತು. ಮುಂಬೈ ಚಲನಚಿತ್ರ ರಂಗದಲ್ಲಿ ಸಿತಾರ್‌ವಾದಕರಾಗಿ ಗುರುತಿಸಿಕೊಂಡಿದ್ದ ದಸ್ತಗೀರ್ ಖಾನ್ ಒಮ್ಮೆ ಖಾನ್ ಕಾಂಪೌಂಡ್‌ಗೆ ಬಂದಿದ್ದವರು, ಈಗ ಎಲ್ಲರೂ ೨೦ ಪರ್ದಾಗಳಿರುವ ಸಿತಾರ್ ಬಳಸುತ್ತಾರೆ ಎಂದು ಹೇಳಿದ್ದರು. ಕರೀಂ ಖಾನ್ ಮತ್ತು ಮಕ್ಕಳು ಬಳಸುವ ಸಿತಾರ್‌ನಲ್ಲಿ ೧೯ ಪರ್ದಾಗಳೇ ಇವೆ. ಯಾಕೆ ಇವರು ಇನ್ನೂ ಆಧುನಿಕತೆಯನ್ನು ಒಪ್ಪಿಕೊಂಡಿಲ್ಲ ಎಂದು ಎಲ್ಲರೂ ಕೇಳತೊಡಗಿದ್ದರು. ಕರೀಂ ಖಾನರಿಗೆ ಈ ಪ್ರಶ್ನೆ ಇಷ್ಟವಾಗುತ್ತಿರಲಿಲ್ಲ. ಒಂದು ಹೆಚ್ಚುವರಿ ಪರ್ದಾಕ್ಕೆ ಸಿತಾರ್‌ನಲ್ಲಿ ಔಚಿತ್ಯವೇ ಇಲ್ಲ ಎನ್ನುವ ನಿಲುವು ಅವರದು. ಆ ಬಗ್ಗೆ ಯಾರಾದರೂ, ಮನೆಯಲ್ಲಿ ಮಾತನಾಡಿದರೆ ಅವರು ಸಹಿಸುತ್ತಲೂ ಇರಲಿಲ್ಲ. ಒಮ್ಮೆ ಅವರು ತಮ್ಮ ತಂದೆ ರಹಿಮತರ ಬಗ್ಗೆಯೂ ರೇಗಾಡಿದ್ದರು.
‘ನೀವಿಷ್ಟು ಚೆನ್ನಾಗಿ ನುಡಿಸಿದಿರಿ. ಇದಕ್ಕಿಂತ ಚೆನ್ನಾಗಿ ನಾನು ಹೇಗೆ ಹಾಡಲಿ’ ಎಂದು ಅವರು ಹಿಂದಿಯಲ್ಲಿ ಹೇಳಿದ್ದರು. ತುಂಬ ಪ್ರೌಢ ಮತ್ತು ಪರಿಣಾಮಕಾರಿ ಪ್ರಸ್ತುತಿ ನೀಡಿದ್ದೀರಿ ಎನ್ನುತ್ತ ಪ್ರೋತ್ಸಾಹಿಸಿದ್ದರು.
ಖಾನ್ ಕಾಂಪೌಂಡ್‌ನಲ್ಲಿ ರಹಿಮತ್ ಖಾನ್ ಸಿತಾರ್ ನುಡಿಸುತ್ತಿದ್ದ ಹಳೆಯ ಫೋಟೋವಿತ್ತು. ಅದರಲ್ಲಿ ಅವರು ನುಡಿಸುತ್ತಿದ್ದ ಸಿತಾರಿಗೆ ೧೯ ಪರ್ದಾಗಳಿದ್ದವು. ಆದರೆ, ರಹಿಮತ್ ಖಾನರ ಕೊನೆಯ ದಿನಗಳಲ್ಲಿ ೨೦ ಪರ್ದಾಗಳ ಬಳಕೆ ಚಾಲ್ತಿಗೆ ಬಂದು ಜನಪ್ರಿಯವಾಗುವ ಹಂತದಲ್ಲಿತ್ತು. ಆದರೆ ದಸ್ತಗೀರ್ ಖಾನ್ ಈ ಫೋಟೋದಲ್ಲಿದ್ದ ಸಿತಾರ್‌ಗೆ ಒಂದು ಹೆಚ್ಚುವರಿ ಪರ್ದಾ ಇದ್ದಂತೆ ಪೆನ್ಸಿಲ್‌ನಲ್ಲಿ ಗೆರೆ ಎಳೆದು, ತಂದೆಯವರು ಕೂಡ ೨೦ ಪರ್ದಾಗಳಿದ್ದ ಸಿತಾರ್ ನುಡಿಸುತ್ತಿದ್ದರು ಎಂಬಂತೆ ಬಿಂಬಿಸಿದ್ದರು. ತಂದೆಯವರ ನಿಧನದ ಕೆಲ ವರ್ಷಗಳ ನಂತರ ಈ ಫೋಟೋವನ್ನು ಗಮನಿಸಿದ ಕರೀಂ ಖಾನ್ ಚಿಕ್ಕಪ್ಪನಿಗೆ ‘ಈ ಅಧಿಕ ಪ್ರಸಂಗ ಬೇಕಿತ್ತೇ’ ಎಂದು ಪ್ರಶ್ನಿಸಿದ್ದರು. ನಮ್ಮದಲ್ಲದ ಕ್ರಮವನ್ನು ಒಪ್ಪಿಕೊಳ್ಳಲು ಮಾನಸಿಕರಾಗಿ ಅವರು ಸಿದ್ಧರಿರಲಿಲ್ಲ. ರಹಿಮತ್ ಖಾನ್ ಅವರು ಎಂದೂ ೨೦ ಪರ್ದಾಗಳಿರುವ ಸಿತಾರ್ ನುಡಿಸಿರಲಿಲ್ಲ. ಅದು ಕರೀಂ ಖಾನರಿಗೆ ಸಮಾಧಾನ ಕೊಡುತ್ತಿದ್ದ ವಿಚಾರವಾಗಿತ್ತು. ಸಿತಾರ್ ರತ್ನ ಬಿರುದು ಪಡೆದಿದ್ದ ರಹಿಮತ್ ಖಾನರು ಆಧುನಿಕತೆಯನ್ನು ಮೈಗೂಡಿಸಿಕೊಂಡಿದ್ದರು ಎನ್ನುವುದನ್ನು ದಾಖಲಿಸಲು ದಸ್ತಗೀರ್ ಖಾನ್ ಹೀಗೆ ಮಾಡಿದರೇ? ಸಿತಾರ್ ನುಡಿಸುವಿಕೆಯನ್ನು ಕೂಡ ಧ್ವನಿಮುದ್ರಣ ಮಾಡಲು ಒಪ್ಪದ ಮನಸ್ಥಿತಿಯ ರಹಿಮತ್ ಖಾನರ ಫೋಟೋದಲ್ಲಿ ದಸ್ತಗೀರ್ ಈ ಬದಲಾವಣೆಯನ್ನು ಯಾಕಾದರೂ ಮಾಡಿದರೋ?
ಒಮ್ಮೆ ಎಚ್‌ಎಂವಿ ಕಂಪನಿ ರಹಿಮತ್ ಖಾನರ ನುಡಿಸುವಿಕೆಯನ್ನು ರೆಕಾರ್ಡ್ ಮಾಡಲೇಬೇಕು ಎಂದು ನಿರ್ಧರಿಸಿತ್ತು. ಆ ಧ್ವನಿಮುದ್ರಣದ ಔಚಿತ್ಯವನ್ನು ಕರೀಂ ಖಾನರಿಗೆ ಮನದಟ್ಟು ಮಾಡಲಾಯಿತಾದರೂ, ರಹಿಮತ್ ಖಾನರು ಧ್ವನಿ ಮುದ್ರಣಕ್ಕೆ ಒಪ್ಪಲಿಲ್ಲ. ಕರೀಂ ಖಾನ್ ತಂದೆಯವರ ಅರಿವಿಗೆ ಬಾರದಂತೆ ಮನೆಯಲ್ಲೇ ರೆಕಾರ್ಡಿಂಗ್ ವ್ಯವಸ್ಥೆ ಮಾಡಿಸಿದ್ದರು. ರಹಿಮತ್ ಖಾನರು ಮನೆಯಲ್ಲೇ ಸಿತಾರ್ ನುಡಿಸುತ್ತಿದ್ದಾಗ, ಅವರ ಅರಿವಿಗೆ ಬಾರದಂತೆ ಧ್ವನಿಮುದ್ರಣ ಮಾಡಿಕೊಳ್ಳಲಾಗಿತ್ತು. ಎಚ್‌ಎಂವಿ ಮತ್ತು ಕರೀಂ ಖಾನರು ಈ ತಂತ್ರಪ್ರಯೋಗ ಮಾಡದಿರುತ್ತಿದ್ದರೆ, ನಾವಿಂದು ರಹಿಮತ್ ಖಾನರ ಸಿತಾರ್ ಧ್ವನಿಯನ್ನು ಕೇಳುವ ಅವಕಾಶದಿಂದ ವಂಚಿತರಾಗುತ್ತಿದ್ದೆವು. ಈ ಅಪರೂಪದ ಸಿತಾರ್ ವಾದನವನ್ನು ಯೂಟ್ಯೂಬ್ ಮೂಲಕ ಆಸ್ವಾದಿಸಬಹುದು. ಪ್ರಚಾರ ಬಯಸದ, ಆಧುನಿಕತೆಯಿಂದ ದೂರವೇ ಇರಲು ಬಯಸಿದ್ದ ತಂದೆಯವರು ಫೋಟೋದ ಮೇಲೆ ಹೆಚ್ಚುವರಿ ಪರ್ದಾವನ್ನು ಬರೆಯಬೇಕಿರಲಿಲ್ಲ ಎಂದು ಕರೀಂ ಖಾನ್ ತಮ್ಮ ಕೊನೆಯ ದಿನಗಳವರೆಗೂ ಬೇಸರಪಟ್ಟುಕೊಂಡರು. ಹಳೆ ತಲೆಮಾರಿನ ಕಲಾವಿದರು ತಮ್ಮ ಘರಾನಾ ಮತ್ತು ಶೈಲಿಯನ್ನು ಬಹುವಾಗಿ ಪ್ರೀತಿಸಿ, ಅದರಿಂದ ಹೊರತಾದ ಶೈಲಿಗೂ ತಮಗೂ ಸಂಬಂಧವಿಲ್ಲ ಎಂಬ ಮನಸ್ಥಿತಿ ಹೊಂದಿದ್ದರು. ಕೋಮಲ ಗಾಂಧಾರದ ಪರ್ದಾ ಇಲ್ಲದೆಯೂ ಪೀಲು ರಾಗವನ್ನು ಅವರು ತಮ್ಮದೇ ಶೈಲಿಯಿಂದ ನಿರೂಪಿಸಿ ತೋರಿಸಿದ ಬಗೆ, ಕರೀಂ ಖಾನರ ಶ್ರೇಷ್ಠತೆಗೆ ಸಾಕ್ಷಿ.
ಮಕ್ಕಳು ತಮ್ಮ ಶೈಲಿಯನ್ನೇ ಮುಂದುವರಿಸಿಕೊಂಡು ಹೋಗಬೇಕು ಎನ್ನುವ ಆಸೆ ಅವರಲ್ಲಿತ್ತು.
ಮುಂದಿನ ದಿನಗಳಲ್ಲಿ ಅದು ಈಡೇರಿತೇ?
*****
ಕರ್ನಾಟಕಿ ಪ್ರಸ್ತುತಿಗೆ ಸಿತಾರ್ ಬೆಸುಗೆ:
ನೌಕರಿ ಗುಂಗಿನಲ್ಲೇ ಮುಳುಗಿಬಿಡಬಾರದು!
ತಂದೆಯವರ ಮರೆಯಲಾಗದ ಮಾತಿದು. ಅವರು ಸರ್ಕಾರಿ ನೌಕರಿಯಲ್ಲೇ ಇದ್ದವರು. ಜೀವನದ ಕಷ್ಟ ಸುಖ, ಕಲಾವಿದರ ಜೀವನಶೈಲಿ, ಇವೆರಡನ್ನೂ ಅವರು ಚೆನ್ನಾಗಿ ಬಲ್ಲರು. ಆದ್ದರಿಂದ ಅವರ ಮಾತನ್ನು ರಫೀಕ್ ಗಂಭೀರವಾಗಿಯೇ ಪರಿಗಣಿಸಿದ್ದರು. ನೌಕರಿಯಲ್ಲಿ ದುಡ್ಡು ಬರುತ್ತದೆ ಎಂಬ ಕಾರಣಕ್ಕೆ ಸಾಧನೆಯನ್ನು ಮರೆತರೆ, ಕಲಾ ಸರಸ್ವತಿ ಮುನಿಸಿಕೊಳ್ಳುತ್ತಾಳೆಂಬ ಪರಿಜ್ಞಾನ ಕಲಾವಿದರಿಗೆ ಇರಬೇಕಾಗುತ್ತದೆ ಎಂಬುದು ತಂದೆಯವರ ಮಾತಿನ ಮರ್ಮವಾಗಿತ್ತು. ಕಲಾವಿದನಾಗಿ ಬೆಳವಣಿಗೆಯ ತುಡಿತ ಒಂದೆಡೆ, ಹೊಸತನಕ್ಕೆ ಒತ್ತುಕೊಡಬೇಕೇ, ಬೇಡವೇ ಎಂಬ ಗೊಂದಲ ಮತ್ತೊಂದೆಡೆ. ಶಾಹೀದ್ ಪರ್ವೇಜ್ ಹಾಗೂ ಸುರೇಶ್ ತಲ್ವಾಲ್ಕರ್ ಅವರ ಮಾತುಗಳು ಚಿಂತನೆಗೆ ಹಚ್ಚಿದವು.
ಸಿತಾರ್ ನುಡಿಸುವಿಕೆಯಲ್ಲಿ ಬಳಸಲಾಗುವ ಮೀಂಡ್, ಛಪ್ಕಾ, ಖಟ್ಕಾ, ಘಸೀಟ್, ಜಮ್‌ಜಮಾ, ಮುರ್ಕಿಗಳನ್ನೆಲ್ಲ ರಫೀಕ್ ಕಠಿಣ ಸಾಧನೆಯ ಮೂಲಕ ಕರಗತ ಮಾಡಿಕೊಂಡಿದ್ದರು. ಮಿಜ್‌ರಾಫ್ (ತಂತಿ ಮೀಟುವ ಬಲಗೈ ತೋಳುಬೆರಳ ತುದಿಗೆ ತೊಡುವ ಸಾಧನ) ಬೋಲ್‌ಗಳೂ ಹೊಂದಿಕೊಂಡಿದ್ದವು. ಇನ್ನೂ ಕರಗತ ಮಾಡಿಕೊಳ್ಳಲು ಸಾಕಷ್ಟು ಬಾಕಿ ಇದೆ ಎಂಬುದನ್ನು ರಫೀಕ್ ತಿಳಿದಿದ್ದರು. ಮುಖ್ಯವಾಗಿ ತಾಳಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಿತ್ತು. ಮಂಗಳೂರಿಗೆ ಬಂದಾಗ ಈ ತುಡಿತದ ರೆಕ್ಕೆಗಳು ಹಾರಲು ಹವಣಿಸುತ್ತಿದ್ದವು. ಕಲಿಸಲು ಗುರು ಇರಲಿಲ್ಲ. ಆಗ ನೆರವಾದದ್ದು ಖಾನ್ ಕುಟುಂಬಕ್ಕೆ ಆಪ್ತರೇ ಆಗಿದ್ದ ಕಲಾವಿದ ವೆಂಕಟೇಶ ಗೋಡ್ಖಿಂಡಿ. ಮಂಗಳೂರು ಆಕಾಶವಾಣಿಗೆ ಸಹಾಯಕ ನಿಲಯ ನಿರ್ದೇಶಕರಾಗಿ ಅವರು ನೇಮಕಗೊಂಡ ಸಮಯವದು.
ರಫೀಕ್ ಅವರನ್ನೊಮ್ಮೆ ತಮ್ಮ ಕೊಠಡಿಗೆ ಕರೆಸಿದ ಗೋಡ್ಖಿಂಡಿ, ‘ಮಂಗಳೂರಿನಲ್ಲಿ ಕರ್ನಾಟಕಿ ಶೈಲಿಯೇ ಜನಪ್ರಿಯ. ನಮ್ಮ ಆಕಾಶವಾಣಿಯಲ್ಲೇ ಉತ್ತಮ ಮೃದಂಗ, ಘಟಂ ಕಲಾವಿದರಿದ್ದಾರೆ. ಅವರ ಬಳಿ ಕರ್ನಾಟಕಿ ಶೈಲಿಯ ನುಡಿಸುವಿಕೆಗೆ ಹಿಂದುಸ್ತಾನಿ ಶೈಲಿಯ ಸಿತಾರನ್ನು ಹೇಗೆ ಹೊಂದಾಣಿಕೆ ಮಾಡಬಹುದು ಎಂಬುದನ್ನು ಕಲಿಯಿರಿ. ಇದು ಒಳ್ಳೆಯ ಅವಕಾಶ. ಭವಿಷ್ಯದಲ್ಲಿ ಉಪಕಾರವಾದೀತು’ ಎಂದರು. ಗೋಡ್ಖಿಂಡಿಯವರ ತೂಕದ ಮಾತು ರಫೀಕ್‌ಗೆ ಅರ್ಥವಾಗಿತ್ತು. ಕಛೇರಿಯಲ್ಲಿ ಕರ್ನಾಟಕಿ ಶೈಲಿಯ ‘ಮುಕ್ತಾಯ’ವನ್ನು ಹಿಂದುಸ್ತಾನಿಗೆ ಹೊಂದಿಸುವುದು ಹೇಗೆ ಎಂಬ ಗೊಂದಲದಲ್ಲಿದ್ದ ರಫೀಕ್‌ಗೆ ಎಷ್ಟು ಯೋಚಿಸಿದರೂ, ಉತ್ತರ ಹೊಳೆಯುತ್ತಿರಲಿಲ್ಲ. ಆಕಾಶವಾಣಿಯಲ್ಲಿದ್ದ ಹಿರಿಯ ಕಲಾವಿದರಾದ ಟಿ.ಎಚ್.ಸುಬ್ರಹ್ಮಣ್ಯಂ, ಬಾಲಕೃಷ್ಣ ತಂತ್ರಿ, ತ್ರಿಚ್ಚಿ ಕುಮಾರ್ ನೆರವಾದರು. ಇಂತಹ ಗಂಭೀರ ವಿಷಯಗಳ ಬಗ್ಗೆ ಅವರೆಲ್ಲ ಆಕಾಶವಾಣಿ ಸ್ಟುಡಿಯೋದಲ್ಲಿ ಚರ್ಚೆ ಮಾಡುತ್ತಿದ್ದರು. ತಾಳ ಹಾಕಿ ತೋರಿಸುತ್ತಿದ್ದರು. ಅವರೆಲ್ಲ ಮಾತನಾಡುತ್ತಿದ್ದುದನ್ನು ಸೂಕ್ಷ್ಮವಾಗಿ ಗಮನಿಸಿ ಗ್ರಹಿಸಿದರೂ, ಅದರ ಪ್ರಾಯೋಗಿಕತೆ ಬಗ್ಗೆ ರಫೀಕರ ಮನದಲ್ಲಿ ಅನುಮಾನಗಳಿದ್ದವು.
‘ಹಿಂದುಸ್ತಾನಿಯ ರೂಪಕ ತಾಳವನ್ನು ಕರ್ನಾಟಕಿ ಶೈಲಿಯಲ್ಲಿ ನುಡಿಸುವ ವಿನ್ಯಾಸ ಹೇಗೆ? ಎಂಬ ಪ್ರಶ್ನೆಯೊಂದಿಗೆ ರಫೀಕ್ ನೇರ ಹೊರಟದ್ದು ಘಟಂ ಕಲಾವಿದ ತ್ರಿಚ್ಚಿ ಕೆ.ಆರ್. ಕುಮಾರ್ ಬಳಿಗೆ. (ರೂಪಕ ತಾಳ ಕರ್ನಾಟಕಿ ಶೈಲಿಯಲ್ಲಿ ಮಿಶ್ರಛಾಪು) ಕುಮಾರ್ ಥಟ್ಟನೆ ತಾಳ ಹಾಕಿ ವಿವರಿಸಿದ್ದನ್ನು ರಫೀಕ್ ರೆಕಾರ್ಡ್ ಮಾಡಿಕೊಂಡರು. ತ್ರಿಚ್ಚಿ ಕುಮಾರ್ ನೀಡಿದ ಇಂತಹ ಸಾಕಷ್ಟು ಉಪಯುಕ್ತ ಮಾಹಿತಿಗಳನ್ನು ರಫೀಕ್ ದಾಖಲಿಸಿಕೊಂಡರು. ಆಕಾಶವಾಣಿ ಕಚೇರಿ ಮತ್ತು ಮನೆಯಲ್ಲಿ ತುಂಬ ದಿನಗಳ ಕಾಲ ಅಭ್ಯಾಸ ಮಾಡಿ, ಅದರ ನುಡಿಸುವಿಕೆಯ ಮೇಲೆ ಹಿಡಿತ ಸಾಧಿಸಿದರು. ಹೀಗೆ ಕರ್ನಾಟಕಿ ಶೈಲಿಗೆ ಹಿಂದುಸ್ತಾನಿ ವಾದನದ ಹೊಂದಿಸುವಿಕೆಯನ್ನು ಕಲಿತ ರಫೀಕ್ ಖಾನ್, ಅದರಲ್ಲಿ ಸಾಕಷ್ಟು ಅಧ್ಯಯನ ಮಾಡಿ, ತಮ್ಮದೇ ಆದ ಶೈಲಿಯನ್ನೇ ಹುಟ್ಟುಹಾಕಿದರು. ಈ ನುಡಿಸುವಿಕೆ ಕಛೇರಿಗಳಲ್ಲಿ ತಬಲಾ ಕಲಾವಿದರಿಗೆ ಸವಾಲೊಡ್ಡುತ್ತಿತ್ತು. ರವೀಂದ್ರ ಯಾವಗಲ್, ಉದಯರಾಜ್ ಕರ್ಪೂರ್, ರಾಜೇಂದ್ರ ನಾಕೋಡ್ ಮೊದಲಾದ ತಬಲಾ ಕಲಾವಿದರು ರಫೀಕ್ ಖಾನರ ಈ ಶೈಲಿಯ ನುಡಿಸುವಿಕೆಯನ್ನು ಮೆಚ್ಚುತ್ತಾರೆ. ರಫೀಕ್ ಖಾನರ ಸಿತಾರ್ ಕಛೇರಿಯಲ್ಲಿ ನಾವು ಬಹಳ ಎಚ್ಚರಿಕೆಯಿಂದ ನುಡಿಸಬೇಕಾಗುತ್ತದೆ ಎನ್ನುತ್ತಾರೆ ತಬಲಾ ಕಲಾವಿದ ಪರಿಮಳ್ ಚಕ್ರವರ್ತಿ. ಸಿತಾರ್ ಕ್ಷೇತ್ರಕ್ಕೆ ರಫೀಕ್ ಖಾನರ ಕೊಡುಗೆಯಿದು.
ರಫೀಕ್ ಖಾನ್ ಈ ವಿಷಯವನ್ನು ವಿವರಿಸುವುದು ಹೀಗೆ: ‘ ಬಾಲ್ಯದಲ್ಲಿ ನಾನು ಮತ್ತು ಶಫೀಕ್ ದೊಡ್ಡ ದೊಡ್ಡ ಕಲಾವಿದರ ಕಛೇರಿ ಕೇಳಿದ್ದೆವು. ನುಡಿಸುವಿಕೆಯಲ್ಲಿ ಅವರೆಲ್ಲ ಮಾಡುತ್ತಿದ್ದ ಚಮತ್ಕಾರಗಳನ್ನು ಅರಗಿಸಿಕೊಳ್ಳಲು ಅಂದು ಸಾಧ್ಯವಾಗುತ್ತಿರಲಿಲ್ಲ. ಈಗ ಅರ್ಥವಾಗುತ್ತಿದೆ. ನುಡಿಸುವಿಕೆಯಲ್ಲಿ ಲೆಕ್ಕಾಚಾರಗಳು, ತಂತ್ರಗಾರಿಕೆ, ತಾಳದ ವಿನ್ಯಾಸದೊಂದಿಗೆ ವೇಗ, ತಿಹಾಯಿ(ಮುಕ್ತಾಯ)ಮುಖ್ಯ. ಈ ಎಲ್ಲದರ ಸಮಪಾಕವನ್ನು ಪ್ರೇಕ್ಷಕರಿಗೆ ಉಣಬಡಿಸುವವನೇ ನಿಜ ಕಲಾವಿದ. ಶಾಹಿದ್ ಪರ್ವೇಜ್ ಈ ಮಾದರಿಯ ಒಳ್ಳೆಯ ಕಲಾವಿದರು. ಸಿತಾರ್ ಕ್ಷೇತ್ರದ ಶ್ರೇಷ್ಠ ಕಲಾವಿದ ಪಂಡಿತ್ ರವಿಶಂಕರ್ ನುಡಿಸುವಾಗ ತಂತ್ರಗಾರಿಕೆ ಮತ್ತು ಲೆಕ್ಕಾಚಾರದ ನುಡಿಸುವಿಕೆಯನ್ನೇ ಇಷ್ಟಪಟ್ಟರು. ಅವರ ಜನಪ್ರಿಯತೆಗೆ ಇದು ಅಡ್ಡಿಯಾಗಲಿಲ್ಲ. ಹಾಗಾಗಿ ಅವರು ಹಾಡುಗಾರಿಕೆಯ ಶೈಲಿಯಲ್ಲಿ ನುಡಿಸುವ ವಿಧಾನವನ್ನು (ಗಾಯಕಿ ಅಂಗ್) ಅಲಕ್ಷಿಸಿದರು’ .
ದಿನ ಕಳೆದಂತೆ, ಕರ್ನಾಟಕಿ ಶೈಲಿಯ ಹೆಸರಾಂತ ಕಲಾವಿದರೊಂದಿಗೆ ರಫೀಕ್ ಜುಗಲ್‌ಬಂದಿ ನೀಡಲಾರಂಭಿಸಿದರು. ಕಲಿತದ್ದೆಲ್ಲ ಈ ಸಂದರ್ಭಕ್ಕೆ ನೆರವಾಗುತ್ತಿದ್ದವು. ಕರ್ನಾಟಕಿ ಶೈಲಿಯ ಕಲಾವಿದರೊಂದಿಗೂ ಸಿತಾರ್ ಜುಗಲ್‌ಬಂದಿ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿತು. ವರ್ಷಗಳ ನಂತರ (೨೦೧೩) ಮುಂಬೈಯಲ್ಲಿ ರಫೀಕ್ ಖಾನ್ ಕಛೇರಿಗೆ ಸುರೇಶ್ ತಲ್ವಾಲ್ಕರ್ ಪ್ರೇಕ್ಷಕರಾಗಿದ್ದರು. ಪೂರ್ಣ ಕಛೇರಿ ಆಲಿಸಿದ ಸುರೇಶ್ ತಲ್ವಾಲ್ಕರ್ ವೇದಿಕೆ ಮೇಲೆ ಬಂದು, ‘ರಫೀಕ್ ಇದನ್ನೇ ನಾನು ವರ್ಷಗಳ ಹಿಂದೆ ನಿಮಗೆ ಹೇಳಿದ್ದು. ಕಾಲದ ಬೇಡಿಕೆಯಿದು. ತುಂಬ ಚೆನ್ನಾಗಿ ಪಕ್ವತೆಯಿಂದ ನುಡಿಸಿದ್ದೀರಿ’ ಎನ್ನುತ್ತ ಬೆನ್ನುತಟ್ಟಿದರು. ಕಲಿಕೆ ಹಂತದಲ್ಲಿ ಗುರು ಎಷ್ಟೇ ಚೆನ್ನಾಗಿ ಕಲಿಸಿದರೂ, ಕಲಾವಿದರು ಪ್ರೌಢ ಹಂತಕ್ಕೆ ಬರಬೇಕಾದರೆ, ಒಂದಷ್ಟು ವರ್ಷಗಳು ಬೇಕಾಗುತ್ತವೆ.
ಶಾಹಿದ್ ಪರ್ವೇಜ್ ಕೂಡ ರಫೀಕ್ ಕಾಲಾಂತರದಲ್ಲಿ ಹೊಸತನ ರೂಢಿಸಿಕೊಂಡದ್ದನ್ನು ಗಮನಿಸಿದ್ದಾರೆ. ಧಾರವಾಡದಲ್ಲಿ ಒಮ್ಮೆ ಪಂಡಿತ್ ವಿಶ್ವಮೋಹನ ಭಟ್ ಅವರ ಜತೆ ರಫೀಕ್ ಖಾನ್ ಜುಗಲ್‌ಬಂದಿ ಕಛೇರಿ ನೀಡಿದ್ದರು. ಅದನ್ನು ಶಾಹಿದ್ ಯೂಟ್ಯೂಬ್‌ನಲ್ಲಿ ನೋಡಿದ್ದರು. ಸಮಕಾಲೀನರು, ಉದಯೋನ್ಮುಖ ಕಲಾವಿದರು ತಮ್ಮ ಕ್ಷೇತ್ರದಲ್ಲಿ ಏನು ಮಾಡುತ್ತಿರುತ್ತಾರೆ ಎಂಬುದನ್ನೆಲ್ಲ ಅವರು ಗಮನಿಸುತ್ತಲೇ ಇರುತ್ತಾರೆ. ಮುಂದೊಂದು ದಿನ ಸ್ಪಿಕ್‌ಮೆಕೆ ಸಂಘಟನೆ ಉಡುಪಿಯಲ್ಲಿ ಶಾಹಿದ್ ಅವರ ಕಛೇರಿ ಆಯೋಜಿಸಿತ್ತು(೨೦೧೬). ಪ್ರೇಕ್ಷಕರಾಗಿ ಬಂದಿದ್ದ ರಫೀಕ್ ಖಾನ್ ಅವರನ್ನು ತಮ್ಮ ಪತ್ನಿಗೆ ಪರಿಚಯಿಸುತ್ತ, ‘ಇವರು ತುಂಬ ಚೆನ್ನಾಗಿ ಸಿತಾರ್ ನುಡಿಸುತ್ತಾರೆ’ ಎಂದು ಹೇಳಿದ್ದರು. ಅಂತರಂಗದಲ್ಲಿ ಉತ್ತಮ ಕಲಾವಿದರನ್ನು ಮೆಚ್ಚುವ ಶಾಹಿದ್, ಸಾಮಾನ್ಯವಾಗಿ ಯಾರನ್ನೂ ಬಹಿರಂಗವಾಗಿ ಪ್ರಶಂಸಿಸುವ ಜಾಯಮಾನದವರಲ್ಲ.
ಪತ್ರಕರ್ತರಾಗಿರುವ ಶೇಣಿ ಮುರಳಿ ಅವರು, ಕಲಾವಲಯದ ಕಡೆಗೆ ಹೆಚ್ಚು ಆಸಕ್ತಿ ಹೊಂದಿದವರು. ಕಪ್ಪು ಬಿಳುಪು ಛಾಯಾಗ್ರಹಣದಲ್ಲಿ ಆಸಕ್ತಿ. ಮೂರು ಕಲಾತ್ಮಕ ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಇರುವ ಅವರು, ಗಾಯನ ಮಾತ್ರವಲ್ಲದೆ ಮೃದಂಗ ಮತ್ತು ಮದ್ದಳೆ ವಾದನದಲ್ಲಿಯೂ ನಿಪುಣರು.