ಶಿವೇಶ್ವರ ದೊಡ್ಡಮನಿಯವರು(1925-1950) ಮೂಲತಃ ಧಾರವಾಡದ ನವಲೂರಿನವರು.  ಪ್ರೌಢಶಾಲೆ ಓದಿದ್ದು ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿ. ಕಡು ಬಡತನದಿಂದ ಆರ್ಥಿಕ ನೆರವಿಲ್ಲದೆ ವಿದ್ಯೆಯನ್ನು ಮುಂದುವರಿಸಲಾಗದೆ ಉದ್ಯೋಗಕ್ಕೆ ಸೇರಿದರು.  ಮೊದಲು ಉದ್ಯೋಗಕ್ಕೆ ಸೇರಿದ್ದು ಧಾರವಾಡದ ಮುನಿಸಿಪಲ್ ಬೋರ್ಡ್ ಸ್ಕೂಲಿನಲ್ಲಿ ಕಾರಕೂನರಾಗಿ. ನಂತರ ಹುಬ್ಬಳ್ಳಿಯ ಆಂಗ್ಲೋ-ಉರ್ದು ಶಾಲೆಯಲ್ಲಿ ಗುಮಾಸ್ತರಾಗಿ, ಧಾರವಾಡದ ಸರಕಾರದ ರೇಷನಿಂಗ್ ಇಲಾಖೆಯಲ್ಲಿ ಎನ್ಯುಮರೇಟರಾಗಿ- ಹೀಗೆ ಹಲವಾರು ಕಡೆಯಲ್ಲಿ  ಕಾರ್ಯ ನಿರ್ವಹಿಸಿದರು. ನಿರಂಜನರು ಪ್ರಾರಂಭಿಸಿದ್ದ ‘ಜನಶಕ್ತಿ’ ಪತ್ರಿಕೆಯ ಉಪಸಂಪಾದಕರಾಗಿ ಕೆಲಸ ಮಾಡಿದರು. ಅವರದ್ದು ಹೋರಾಟದ ಸ್ವಭಾವವಾಗಿತ್ತು. ಕನ್ನಡದಲ್ಲಿ ಅವರು ಸಾನೆಟ್ಟುಗಳನ್ನು ಹಾಗೂ ಸಣ್ಣಕತೆಗಳನ್ನು ಬರೆದಿದ್ದಾರೆ. 

ಕನ್ನಡ ಕಾವ್ಯಮಾಲೆಯ ಕಾಣದ ಕುಸುಮಗಳು ಸರಣಿಯಲ್ಲಿ ಅವರು ಬರೆದ ಕವಿತೆ ‘ಕುರುಡು ಬೆಳಕಿಗೆ-1’ ಇಂದಿನ ಓದಿಗಾಗಿ. 

 

ಕುರುಡು ಬೆಳಕಿಗೆ -1

ಏಟು ಏಟು ಎದೆಬೆನ್ನಿಗೇಟು , ವಿಧಿ ಮಾಟಗೈಯ ಏಟು
ಕುರುಡು ಪೆಟ್ಟು ತಲೆಯೊಡೆದು ಹೋಳು ಸೀಳಾಗಲೆಂದು ಕೆಟ್ಟು;
ತಲೆಮಾರ ಪಯಣ ಗುಣದಂಥತನದ ಋಣ ಡೊಂಬರಾಟ ಹೂಡಿ-
ಮನದಟ್ಟ ಮುರಿಯಿತೋ ಬಗೆಬೆಟ್ಟ ಅದುರಿತೊ ಹಾಳು ಹೃದಯ ಮೋಡಿ,
ಏನೇನೋ ಭಿಕ್ಷೆ ಬೇಡ,

2

ಇಳೆಯೆದೆಯ ಮೇಲೆ ತಿಳಿಜೊನ್ನಲೀಲೆ  ಕಣ‍್ಣಿಲ್ಲ ಕಾಣಲೊಲ್ಲೆ
ಬಹುಸನಿಹ ತೀರ ಸೌಂದರ್ಯಸಾರ ನಾನೆಂತು ನೋಡಬಲ್ಲೆ ?
ಇದು ಯಾವ ದೀಕ್ಷೆ, ಇದು ಎಂಥ ಶಿಕ್ಷೆ , ಇದು ಯಾವ ಪೀಡೆ ಪಿಡುಗು
ಅಲ್ಲೊಂದು ಶಕ್ತಿ – ಇದು ಅದರ ಸೂಕ್ತಿ, ನಿನಗಿಲ್ಲ ಬಾಳು ಬೆಡಗು
ಕಡೆಗು ಕಡೆಗು ಕಡೆಗೂ

3

ಕಿರುಗಾಳಿಯೊಡನೆ ಬರಿಧೂಳಿಯೊಡನೆ ಹಿರಿ ಕಾಳು ಬಾಳಿನೊಡನೆ
ಮಿಡುಮಿಡುಕಿ ದುಡುಕಿ ಹುರುಳಿಲ್ಲದಂಥ ಹಿರಿಬೆಳಕನೊಂದ ಹುಡುಕಿ
ಬಾಯಿಬಿಡುವ ಬವಣೆ;
ಈ ನೋವಿನುರಿಯ ನಾಲಿಗೆಗೆ ಸಿಲುಕಿ ಕರಿಕಾಗಲೆಲ್ಲ ಕೊರತೆ
ಬಚ್ಚ ಬಯಲ ಸೆಣಸಿನಲಿ ತುಂಬಿ ಹರಿಸಿತ್ತು ತಮದ ಒರತೆ
ಅದಕನಂತ ಚರಿತೆ.