ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು…
(‘Because I am a Girl I must study’ : Kamala Bhasin)
ಅಪ್ಪ ಮಗಳಿಗೆ ಕೇಳಿದ –
ಓದ್ಬೇಕು ? ನೀ ಯಾಕ ಓದ್ತಿ ?
ಹುಡುಗಿ !
ಓದೊಕಂತಾನ ಭಾಳ
ಗಂಡಮಕ್ಕಳದಾರ ನನಗ
ನೀ ಯಾಕ ಓದ್ತಿ ?
ಮಗಳು ಅಪ್ಪನಿಗೆ ಹೇಳಿದಳು –
ನೀ ಇಷ್ಟು ಕೇಳ್ತಿಯಂದ್ರ ಹೇಳ್ತಿನಿ ಕೇಳು,
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು.
ಭಾಳ ಹಿಂದಿನಿಂದ ಹೊಸಕಿ ಹೂತಿರೊ ಅವಕಾಶಗಳಿಗಾಗಿ, ನಾ ಓದ್ಬೇಕು.
ನನ್ನ ಕನಸುಗಳಿಗೆ ರೆಕ್ಕೆ ಕಟ್ಟಿ
ಹಾರಿ ಬಿಡಾಕ,ನಾ ಓದ್ಬೇಕು.
ಅರಿವು ಹೊಸ ಬೆಳಕಿನ ಸೆಲೆ,
ಅದು ಪಡಿಬೇಕಂದ್ರನಾ ಓದ್ಬೇಕು.
ನಾ ಎದುರಿಸಬೆಕಾದ ಯುದ್ಧಗಳಿಗಾಗಿ
ನಾ ಓದ್ಲೇ ಬೇಕು.
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು.
ಬಡತನ ಕಳಚಾಕ, ನಾ ಓದ್ಬೇಕು.
ಸ್ವಾತಂತ್ರ್ಯ ಗೆಲ್ಲಾಕ, ನಾ ಓದ್ಬೇಕು.
ಒತ್ತಡ ಮೆಟ್ಟಿ ನಿಲ್ಲಾಕ, ನಾ ಓದ್ಬೇಕು.
ಪ್ರೇರಣೆಗಳನ್ನ ಹುಡುಕಾಕ, ನಾ ಓದ್ಬೇಕು
ಹಿಂಸೆಗಳನ್ನ ತುಳಿಯಾಕ, ನಾ ಓದ್ಬೇಕು
ನನ್ನ ಮೌನ ಮುರಿಯಾಕ, ನಾ ಓದ್ಬೇಕು.
ಪುರುಷ ಪ್ರಧಾನತೆ ಮುಂದ ನಿಲ್ಲಾಕ, ನಾ ಓದ್ಬೇಕು.
ಮೇಲು ಕೀಳುಗಳ ಗೆರೆ ಅಳಸಾಕ, ನಾ ಓದ್ಬೇಕು.
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು
ಹೆಸರಿಗಷ್ಟೆ ಇರುವ ‘ನ್ಯಾಯ’ಗಳನ್ನ
ಮತ್ತೆ ರೂಪಿಸಾಕ ನಾ ಓದ್ಬೇಕು.
ನಾ ನಂಬುವಂತ ನಂಬಿಕೆಗಳ
ಅಚ್ಚೊತ್ತಿಸಾಕ, ನಾ ಓದ್ಬೇಕು
ಶತಮಾನಗಳಿಂದ ಹಿಡಿದಿರುವ
ಧೂಳನ್ನ ಗೂಡಿಸಾಕ,ನಾ ಓದ್ಬೇಕು
ಸವಾಲುಗಳನ್ನ ಎದುರುಗೊಳ್ಳಾಕ, ನಾ ಓದ್ಬೇಕು
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದ್ಬೇಕು.
ತಪ್ಪುಗಳಿಂದ ಸರಿಗಳನ್ನ ತಿಳಿಯಾಕ, ನಾ ಓದ್ಬೇಕು.
ಗಟ್ಟಿಯಾಗಿ ನಿಲ್ಲುವ ಧ್ವನಿಗಳನ್ನ ಹುಡುಕಾಕ,
ನಾ ಓದ್ಬೇಕು.
ಸ್ತ್ರೀಯರ ಹಾಡುಗಳನ್ನ ಬರಿಯಾಕ, ನಾ ಓದ್ಬೇಕು.
ಹುಡುಗಿಯರಿಗೇ ಇರುವ ಲೋಕವನ್ನ ಕಟ್ಟಾಕ,
ನಾ ಓದ್ಬೇಕು.
ಯಾಕಂದ್ರ ನಾ ‘ಹುಡುಗಿ’ ಅದಕಾ ನಾ ಓದಲೇ ಬೇಕು.
ಸುವರ್ಣ ಚೆಳ್ಳೂರು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕಿನ ಚೆಳ್ಳೂರು ಗ್ರಾಮದವರು. ಪ್ರಸ್ತುತ ‘ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯದ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವಿದ್ಯಾರ್ಥಿ.
ಹೆಣ್ಣು ಯಾಕ ಸಾಲಿ ಕಲಿಬೇಕು ಅಂತ ಅವರಪ್ಪನ ಮುಂದೆ ವಾದಿಸೊ ಪದ್ಯ ಬಾಳ ಇಷ್ಟ ಆತು.ಅಭಿನಂದನೆಗಳು ಬರೆದವರಿಗೆ
ಅಕ್ಕಾ ನಿಮ್ಮ ಮಾತುಗಳು ಇಂದಿನ ಹೆಣ್ಣುಮಕ್ಕಳಿಗೆ ಪ್ರೇರಣೆ ನೀಡಲಿ ಎಲ್ಲಾ ಹೆಣ್ಣು ಮಕ್ಕಳು ಓದಿ ಒಳ್ಳೆ ವಿದ್ಯಾವಂತರಾಗಿ ಸ್ವಂತ ದುಡಿಮೆಯ ಸ್ವಾತಂತ್ರ ನಡೆಸಲಿ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತುಗಳು ನಿಜವಾಗಲಿ
ಇಂದು ಅನೇಕ ಹೆಣ್ಣು ಮಕ್ಕಳಿಗೆ ಓದಬೇಕು ಅನ್ನುವ ಆಸೆ ಇದೆ ಆದರೆ ಹಲವು ಕಾರಣದಿಂದ ಸಮಾಜದ ಒತ್ತಡದಿಂದ ಶಿಕ್ಷಣ ದೊರೆಯುತ್ತಿಲ್ಲ. ಪ್ರತಿಯೊಬ್ಬ ಹೆಣ್ಣು ಮಗಳು ಈ ಕವಿತೆಯನ್ನು ಓದುವುದರ ಮೂಲಕ ಕುಟುಂಬ ಮತ್ತು ಸಮಾಜ ಕೇಳುವ ಪ್ರಶ್ನೆಗೆ ದಿಟ್ಟ ಉತ್ತರವನ್ನು ಕೊಡಬಲ್ಲಳು…….. ಧನ್ಯವಾದಗಳು ಸುವರ್ಣ
ನಿಜಕ್ಕೂ ಒಂದು ಹೆಣ್ಣು ತನ್ನ ಅಂತಸ್ಸತ್ತ್ವ ಉಳಿಸಿಕೊಳ್ಳಲು ಈ ಸಮಾಜದ ಕೆಲ ಮೂಢ ಜನರಿಗೆ ಉತ್ತರಿಸಲೇಬೆಕಾದ ಸಾಲುಗಳು…..thank u suvarnakka… for style of sharing twist of complexity of a girl…..