ರಾಘವೇಂದ್ರಾಯ ನಮಃ ಪತ್ರಿಕೆಯಲ್ಲಿ ಬರೆಯಲು ಆರಂಭಿಸಿದ್ದ ನಮಗೆ ಒಂದಿಷ್ಟು ನಯ ವಿನಯ ಪ್ಯಾಂಟಸಿ ರಮ್ಯತೆ ಇತ್ತು. ನಾವಾಗಿ ನಾವು ‘ದಲಿತ’ ರೂಪಿಸಿದಾಗ ಅಗ್ನಿ ಪರ್ವತದಂತೆ ಮನದೊಳಗೆ ಲಾವಾ ಕುದಿಯುತ್ತಿತ್ತು. ಆ ಮಳವಳ್ಳಿ ಪೈಲ್ವಾನನೂ ಬ್ಲೇಡೇಟಿನ ಚಿಕ್ಕಣ್ಣನೂ ನಮ್ಮ ಬೆನ್ನು ತಟ್ಟಿದ್ದರು. ಬೋರ್ಡಿಗೆ ಹಚ್ಚಿದ ಸಾಯಂಕಾಲದ ಒಳಗೆ ತರಾವರಿ ಕೀಳು ಬಯ್ಗಳಗಳು ಅದೇ ದಲಿತ ಪತ್ರಿಕೆಯ ಮೂಲೆಗಳಲ್ಲೆಲ್ಲ ದಾಖಲಾಗುತ್ತಿದ್ದವು. ಅವನ್ನೆಲ್ಲ ಇಲ್ಲಿ ದಾಖಲಿಸಲಾಗದು. ಟಾಯ್ಲೆಟ್ ರೂಮಿನ ನೀಲಿ ಚಿತ್ರಗಳು ಬಯ್ಗಳಗಳು ಧಾರಾಳವಾಗಿ ನಮೂದಾಗುತ್ತಿದ್ದವು. ಗುರುಗಳಾದ ರಾಮದಾಸರಿಗೆ ಹೇಳಿದೆ. ಹೀಗೆ ಒಂದು ಗೋಡೆ ಪತ್ರಿಕೆ ತರುವ ಆಲೋಚನೆಯನ್ನು ಮೊದಲಿಗೆ ಅವರ ಬಳಿಯೇ ಚರ್ಚಿಸಿದ್ದೆ.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿ
ನನ್ನ ನೆರಳು ನನ್ನ ವಿಷಾದದಂತೆ ಹಿಂಬಾಲಿಸುತ್ತಿತ್ತು. ಎಲ್ಲಿಗೆ ಹೋಗಲಿ… ಹೊಳೆ ಎಲ್ಲಿ ತನಕ ಕರೆದೊಯ್ಯುತ್ತದೊ ಅಲ್ಲಿ ತನಕ ಹೋಗು ಎಂದಿತು ಒಳ ಮನಸ್ಸು. ಅದೇ ಬಾಲ್ಯ ಕಾಲದ ತೋಟ ತುಡಿಕೆಯ ದಾರಿ. ಅಲ್ಲಿ ನಡೆಯುವುದೇ ಒಂದು ಸುಖ. ನನಗರಿವಿಲ್ಲದೆ ದೂರ ಬಂದಿದ್ದೆ. ಹೊಳೆ ದಾರಿಗೆ ಸಾಗಿದ್ದೆ. ಒಂದು ಕಾಲಕ್ಕೆ ಆ ಪುಟ್ಟ ಕಾಲು ದಾರಿಯೇ ಸ್ವರ್ಗದ ಮಾರ್ಗವಾಗಿತ್ತು. ತಾಯಿ ಕೈ ಹಿಡಿದು ತನ್ನ ತವರೂರಿಗೆ ಕರೆದೊಯ್ಯುತ್ತಿದ್ದಳು. ಎತ್ತ ನೋಡಿದರೂ ತೆಂಗು ಅಡಿಕೆ ಮಾವು ಬಾಳೇ ಎಲೆ ತೋಟಗಳು. ಎಲ್ಲೆಲ್ಲು ನೆರಳೇ; ಅಲ್ಲಲ್ಲಿ ಚಿಲುಮೆ. ಅತ್ತ ನೋಡಿದರೆ ಹೊಳೆ ಸಾಲು… ದಾರಿ ಹೋದದ್ದೆ ತಿಳಿಯುತ್ತಿರಲಿಲ್ಲ. ಮುಂದೆ ಬಂದೆ. ಅಲ್ಲೆಲ್ಲ ಭತ್ತ ರಾಗಿ ಕಬ್ಬು ಕಡಲೆ ಹೊಲಗದ್ದೆಗಳು. ಹಸಿರೊ ಹಸಿರು. ಅಲ್ಲಿ ಆ ಕೆರೆಯ ಏರಿಗೆ ಬಂದೆ. ಕೆರೆ ತುಂಬಿತ್ತು. ಆ ಮೊದಲು ಕೆರೆ ತುಂಬ ಗೊಬ್ಬಳಿ ಮರಗಿಡಗಳು ಮುತ್ತಿಗೆ ಹಾಕಿದಂತೆ ಬೆಳೆದು ಬಿಟ್ಟಿದ್ದವು. ಏರಿ ಮೇಲೆ ಹಳೆ ಕಾಲದ ಮರಗಳು ಚಾಚಿದ್ದವು. ಕೂತುಕೊಂಡೆ. ನೀರಕ್ಕಿಗಳು ತಿಳಿನೀರಲ್ಲಿ ಆಟವಾಡುತ್ತಿದ್ದವು. ಕೆರೆ ತುಂಬ ಹಬ್ಬಿದ್ದ ಕಳೆಯನ್ನೆಲ್ಲ ಕಿತ್ತುಬಿಸಾಡಿ ಹೂಳು ತೆಗೆಸಿದ್ದರು. ಪ್ರಶಾಂತವಾಗಿತ್ತು ಕೆರೆ. ಈಗದು ವಿಶಾಲವಾಗಿತ್ತು. ಅದೇ ಕೆರೆಯಲ್ಲಿ ಮಂಗಾಡಳ್ಳಿಯ ಆ ಪಾತಕಿಯನ್ನು ಕೊಂದಿದ್ದು. ಈಗಲ್ಲಿ ಅಂತಹ ಒಂದು ಕೃತ್ಯ ಸಾಮೂಹಿಕವಾಗಿ ಉನ್ಮಾದದಲ್ಲಿ ನಡೆದಿತ್ತು ಎಂಬ ಯಾವ ಚಹರೆಗಳು ಇರಲಿಲ್ಲ. ಕಾಲ ಹೇಗೆ ಮರೆಸುತ್ತದೆ; ನೆನಪಿಸುತ್ತದೆ; ಮರುಕಳಿಸುತ್ತದೆ ಎಂಬುದನ್ನು ಊಹೆ ಮಾಡಲಾಗದು. ಆ ಪಾತಕಿ ನನ್ನ ಜೇಬಿಗೆ ಹತ್ತು ರೂಪಾಯಿಗಳ ನೋಟುಗಳ ತುರುಕಿ; ಏನಾದರೂ ತಿನ್ನಲು ತಂದುಕೊಡು… ನಿಮ್ಮಪ್ಪನ ಕರೆದುಕೊಂಡು ಬಾ… ಜೀವ ಭಯದಲ್ಲಿ ಇಲ್ಲಿದ್ದಾನೆಂದು ಹೇಳು ಎಂದು ಆ ಪಾತಕಿ ಎಷ್ಟು ದೈನ್ಯವಾಗಿ ಕೋರಿದ್ದನಲ್ಲಾ… ಅವನಿದ್ದ ತಾವ ಅಪ್ಪನಿಗೆ ಹೇಳಬಾರದಿತ್ತು ಎಂದೆನಿಸಿದ್ದು ಅಪ್ಪನೇ ಅವನನ್ನು ಮುಗಿಸಲು ದಾರಿ ತೋರಿದಾಗ… ಅವನನ್ನು ಕೊಂದದ್ದರಲ್ಲಿ ನನ್ನ ಪಾಲೂ ಇದೆಯೇ… ಆ ಚಿಕ್ಕಮ್ಮ ಮಾದೇವಿಯನ್ನು ಅಪ್ಪ ಮುಗಿಸುವಾಗ ನಾನೇ ತಾನೆ ಜಗಳಕ್ಕೆ ನೆಪ ಆಗಿದ್ದವನೂ… ಚಿಕ್ಕಮ್ಮನ ಸಾವಿನಲ್ಲೂ ನನ್ನ ಸೂತಕದ ಬೆರಳ ಗುರುತುಗಳೂ ಅಂಟಿಕೊಂಡಿರಬಹುದೇ… ಇನ್ನು ನನ್ನ ತಾಯ ಕೊಲೆಯಲ್ಲಾದ ಆ ಘಟನೆ… ನೆನೆದರೆ ಎದೆ ಬಿರಿದಂತಾಗುತ್ತದೆ.
ಆ ಕೆರೆಯಲ್ಲಿ ತಾವರೆ ಹೂಗಳು ಬಗೆ ಬಗೆಯ ಬಣ್ಣದಲ್ಲಿ ಅರಳಿದ್ದವು. ಅಲ್ಲಿಂದ ಎದ್ದು ಮುಂದೆ ಬಂದೆ. ಆ ಊರೆ ಮಂಗಾಡಳ್ಳಿ. ಊರೂರ ಬೀದಿಗಳಲ್ಲಿ ವಿನಾಕಾರಣ ಅಪರಿಚಿತನಾಗಿ ಸತ್ತುವುದೆಂದರೆ ನನಗೇನೂ ಮಜಾ. ಸುತ್ತಾಡಿದೆ. ಯಾರದೊ ಮನೆಯ ನೀರು ಯಾಕೆ… ಆ ಪಾತಕಿಯ ಮನೆಯ ಹುಡುಕಿದೆ. ಬಾಗಿಲು ಹಾಕಿತ್ತು.. ಮುರುಕಲು ಬಾಗಿಲು. ಅವನು ಹಾಗೆ ಹತನಾದ ಮೇಲೆ ಅವನ ಸಂಬಂಧಿಗಳು ಊರು ಬಿಟ್ಟಿದ್ದರು. ಮನೆ ಪಾಳು ಬಿದ್ದಿತ್ತು. ಬಹಳ ಖಡಕ್ಕಾದ ಊರು. ಆ ಊರಿನ ವಿಷಯಗಳಲ್ಲಿ ಯಾರೂ ಮೂಗು ತೂರಿಸುತ್ತಿರಲಿಲ್ಲ. ‘ನೀನ್ಯಾರು’ ಎಂದು ಕೇಳಿದರು. ನನ್ನ ಅಜ್ಜಿಯ ಊರು ಯಲಿಯೂರು ಅಲ್ಲೆ ಹತ್ತಿರದಲ್ಲಿತ್ತು. ಇತ್ತ ಹುಣಸನಳ್ಳಿ ಜಾತ್ರೆ, ಸಂತೆಗಳು ನಡೆಯುತ್ತಿದ್ದವು. ಆ ಊರಿನ ಮುಂದಿನ ಊರೇ ಆ ಸುತ್ತೇಳು ಹಳ್ಳಿಗಳಿಗೆ ದೊಡ್ಡ ಊರು. ಅದು ಕೊಡಂಬಳ್ಳಿ; ಅಲ್ಲೆ ಮುಸ್ಲಿಂರು ಹೆಚ್ಚಿದ್ದದ್ದು. ಪುಟ್ಟ ಪೇಟೆಯು ಇತ್ತು. ಆ ಕಾಲಕ್ಕೆ ನನಗೆ ಬಹಳ ಕುತೂಹಲ ಇದ್ದದ್ದು ಟೈಲರ್ಗಳ ಬಗ್ಗೆ; ಹೇರ್ಕಟಿಂಗ್ ಮಾಡೋರ ಬಗ್ಗೆ. ಆ ಅಂಗಡಿಗಳ ಮುಂದೆ ಸುಮ್ಮನೆ ನಿಂತಿರುತ್ತಿದ್ದೆ. ಆಚೀಚೆ ಕೂತು ಗಮನಿಸುತ್ತಿದ್ದೆ. ಮಾಯಾಲೋಕ ಎನಿಸಿದ್ದು ಅದೊಂದು ಪುಟ್ಟ ಪೇಟೆಯ ಸೆಲೂನ್ಗಳ ಬಗ್ಗೆ ಅಷ್ಟೊಂದು ಅಲಂಕಾರ ಮಾಡಿರುತ್ತಿದ್ದರು ಒಂದು ಪುಟ್ಟ ಪೆಟ್ಟಿಗೆ ಗೂಡಿನಂತಹ ಶೇವಿಂಗ್ ಶಾಪನ್ನು! ಅಲಂಕಾರ ಮಾಡಿರುತ್ತಿದ್ದರು. ಒಂದು ಪೆಟ್ಟಿಗೆ ಗೂಡು ಪ್ರಪಂಚವನ್ನೆ ಅಂಟಿಸಿಕೊಂಡಿತ್ತು. ಅಂತಂತಹ ಪೋಸ್ಟರ್ಗಳು. ತಲೆ ಮೇಲೆ ವಿಮಾನ ಹಾರಾಡುತ್ತಿರುವಂತೆ ಮೇಲೆ ವಿಶಾಲ ಆಕಾಶವೇ ತೂಗಾಡುತ್ತಿರುವಂತೆ ಪೋಸ್ಟರ್ಗಳು ರಾರಾಜಿಸುತ್ತಿದ್ದವು. ಪ್ಯಾರಿಸ್ ನ್ಯೂಯಾರ್ಕ್ ಮಾಸ್ಕೋ ಲಂಡನ್ ನಗರಗಳ ಆ ಚಿತ್ರಗಳನ್ನು ಅದೆಲ್ಲಿಂದ ತಂದು ಅಂಟಿಸಿದ್ದರೊ ಗೊತ್ತಿರಲಿಲ್ಲ. ಆ ದೊಡ್ಡ ಕನ್ನಡಿಗಳು ಭಯದ ಜೊತೆಗೆ ವಿಸ್ಮಯವನ್ನು ತರುತ್ತಿದ್ದವು.
ನಮ್ಮ ಅಜ್ಜಿಯ ಊರಿಗೆ ಆ ಕೋಡಂಬಳ್ಳಿ ಹತ್ತಿರವಿತ್ತು. ಕೂದಲು ಕತ್ತರಿಸಿಕೊಂಡು ಟ್ರಿಮ್ಮಾಗಿ ಬರುವುದು ಅನುಕೂಲಸ್ತರ ಮಕ್ಕಳು ಮಾತ್ರ ಎಂಬಂತಿತ್ತು. ಅಜ್ಜಿ ಆ ಶಾಪಿಗೆ ಕರೆತಂದು ಹೊರಗೆ ಕೂತು ನೋಡುತ್ತಿದ್ದಳು. ಹಿಂದೆ ಮುಂದೆ ಅತ್ತ ಇತ್ತ ಕನ್ನಡಿಗಳು ಮಾಯಾಲೋಕವನ್ನೆ ತೆರೆಯುತ್ತಿದ್ದವು. ಕತ್ತರಿ ಹಿಡಿದು ಕೈಚಳಕದಲ್ಲಿ ಕೂದಲು ಕತ್ತರಿಸಿ ಬಾಚಣಿಗೆಗೆ ಆಗಾಗ ಕುಟ್ಟಿ ತನಗೆ ಬೇಕಾದಂತೆ ತಲೆಯ ಅತ್ತಿತ್ತ ತಿರುವಿ ಚಮತ್ಕಾರ ಮಾಡುತ್ತಿದ್ದ ಪರಿಯನ್ನು ಮತ್ತೆ ನೋಡಿದೆ. ತಾನೀಗ ಇಲ್ಲಿ ಯಾಕೆ ತಲೆ ಕೂದಲ ಕಟ್ ಮಾಡಿಸಿಕೊಳ್ಳಬಾರದು ಎಂಬ ಆಸೆ ಆಯಿತು. ಏನೊ ಅಳುಕೂ ಹಿಂಜರಿಕೆ ಬಂತು. ಬನ್ನಿ; ಒಳ ಬನ್ನಿ ಎಂದು ಕರೆದ. ಒಂದು ತಿಂಗಳ ಹಿಂದಿನಿಂದಲೂ ಇದ್ದ ದಿನ ಪತ್ರಿಕೆಗಳ ಮುಂದಿಟ್ಟ. ಜನ ಸುಮ್ಮನೆ ಆ ಹಳೆಯ ಪತ್ರಿಕೆಗಳ ತಿರುವಿ ಹಾಕಿ ಸವೆಸಿದ್ದರು. ಕೆಲವು ಹರಿದಿದ್ದವು. ಈ ಹಳೆಯ ಸುದ್ದಿಗಳ ಇಲ್ಲಿಗೆ ಬಂದವರು ಕಾಲ ದೂಡಲು ಒದುತ್ತಾರೆಯೇ ಎಂದು ಕೇಲಿಕೊಂಡೆ. ಇಲ್ಲ! ಗತ ಸುದ್ದಿಗಳಲ್ಲಿ ಜನಕ್ಕೆ ಏನೊ ಸಿಗುತ್ತದೆ. ದಿನದ ಆ ಸುದ್ದಿ ಹಳತಾದಂತೆಲ್ಲ ಒಂದು ಕಾಲಮಾನವಾಗಿ ಪರಿವರ್ತನೆಗೊಂಡಿರುತ್ತದೆ.
ಆಕಳಿಸುತ್ತಲೇ ತಲೆ ಕೆರೆದುಕೊಳ್ಳುತ್ತಲೇ ಗತವಾದ ಒಂದು ಸಂಗತಿಯಲ್ಲಿ ಸಾಂಗತ್ಯಗೊಳ್ಳುತ್ತಾರೆ. ಎಷ್ಟೋ ಸಲ ಅಂತಹ ಸೆಲೂನುಗಳಲ್ಲಿ ವಿಚಿತ್ರವಾದ ವಿಚಾರಗಳು ನನಗೆ ಮೂಡಿಬಂದಿವೆ. ಸುತ್ತುವ ಕುರ್ಚಿಯಲ್ಲಿ ಎತ್ತರದ ಮಟ್ಟದಲ್ಲಿ ಕೂತಾಗಲೇ ನಮ್ಮ ತಲೆ ನಮ್ಮದಾಗಿರುವುದಿಲ್ಲ. ನೀರು ಚುಮಿಕಿಸಿ ಬಾಚಿ ಆತ ಕತ್ತರಿ ಆಡಿಸಿದಂತೆಯೆ ಎಲ್ಲ ಗರ್ವಗಳೂ ತಲೆ ತಗ್ಗಿಸಿರುತ್ತವೆ. ಅದಾಗಲೇ ನನ್ನ ತಲೆಯ ಕೂದಲು ಉದುರಲು ಆರಂಭವಾಗಿದ್ದವು. ನೆತ್ತಿಯಲ್ಲಿ ಖಾಲಿ ಜಾಗವಿತ್ತು. ಬೋಳಾಗುವೆ; ಬೇಗ ಎಚ್ಚೆತ್ತುಕೊ ಎಂದು ವೆಂಕಟೇಶ ಯಾವುದೊ ತೈಲ ತಂದು ಕೊಟ್ಟಿದ್ದ. ಒಬ್ಬಾಕೆಯಂತೂ; ಕಾಳಜಿ ಮಾಡಿ ಬಿಳಿದಾಸವಾಳದ ಹೂವಿನ ಲೇಹ್ಯ ಹಚ್ಚಿದರೆ ಕೂದಲು ಬರುತ್ತವೆ ಎಂದು ಭರವಸೆ ನೀಡಿದ್ದಳು. ಬೇಕಾದರೆ ನಾನೇ ತಂದುಕೊಡುವೆ… ನಮ್ಮಜ್ಜಿ ಔಷಧ ಮಾಡುತ್ತಾರೆ ಎಂದಿದ್ದಳು. ಪಕ್ಕದ ಯುವರಾಜ ಕಾಲೇಜಿನಲ್ಲಿ ಆಕೆ ಓದುತ್ತಿದ್ದಳು. ಸಾಹಿತ್ಯದಲ್ಲಿ ಅವಳಿಗೆ ಆಸಕ್ತಿ ಇತ್ತು. ಚೆಂದವಿದ್ದಳು. ಆ ಕಾಲಕ್ಕೆ ಹಲ್ಲಿಗೆ ತಂತಿಹಾಕಿಸಿಕೊಂಡಿದ್ದಳು. ಹೋಗೋದನ್ನಾಗಲಿ ಬರೋದನ್ನಾಗಲಿ ಯಾರೂ ತಡೆಯಲಾರರು. ಸುಮ್ಮನೆ ಅವೆರಡನ್ನೂ ತಲೆಗೆ ಹಚ್ಚಿಕೊಳ್ಳದೆ ಬಿಟ್ಟುಬಿಡಬೇಕು ಎಂದು ಸನ್ಯಾಸತ್ವವನ್ನು ಭಾವಿಸಿ ಬೇಡ ಎಂದಿದ್ದೆ. ಆ ಮೇಲೆ ಒಂದು ದಿನ ಅವಳು ಯಾವನೊ ಹುಡುಗನ ಜೊತೆ ಕುಕ್ಕರಹಳ್ಳಿ ಕೆರೆಯ ಏರಿಯ ಕಲ್ಲು ಕಟ್ಟೆಯ ಮರೆಯಲ್ಲಿ ಕೂತಿದ್ದನ್ನು ಕಂಡಿದ್ದೆ. ಅವಳು ನಿರ್ಭಾವುಕಳಾಗಿದ್ದಳು. ಆ ಸೆಲೂನಿನವನು ತನ್ನ ಬಳಿ ಶಾಶ್ವತ ಔಷಧ ಇದೆ ಹಚ್ಚಿಕೊ; ಬಹಳ ಕಡಿಮೆ ಬೆಲೆಗೆ ಸಿಗುತ್ತದೆ ಎಂದಿದ್ದ. ನನ್ನ ತಲೆ ಕೂದಲು ಉದುರುವಿಕೆ ನನಗೆ ಸಮಸ್ಯೆಯೇ ಆಗಿರಲಿಲ್ಲ. ಹೇರ್ ಕಟ್ ಮಾಡಿ ಸಾಕು ಎಂದಿದ್ದೆ. ವಿರಾಮ ಇದ್ದಾಗ ಸೆಲೂನಿನವರು ಆ ವ್ಯಕ್ತಿ ಯಾರೇ ಆಗಿರಲಿ; ಅವರ ಕುಲಗೋತ್ರಗಳನ್ನೆಲ್ಲ ಕೇಳಿ ಪ್ರಪಂಚವನ್ನೆ ಬಾಯಲ್ಲಿ ಉದುರಿಸಿ ಕೆಲಸ ಮುಗಿಸಿರುತ್ತಾರೆ. ಅವನ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಆದರೆ ಅವನ ಸೆಲೂನಿನ ಅಲಂಕಾರವೊ; ಯಾವುದೊ ಒಂದು ಅರಮನೆಯ ಕೊಠಡಿಯನ್ನು ಸಿಂಗರಿಸಿದಂತಿತ್ತು. ನನ್ನ ತಲೆಗೂ ಏನೊ ಅಲಂಕಾರ ಮಾಡಿದ್ದ. ದುಡ್ಡು ಕೊಟ್ಟು ಹೊರ ಬಂದೆ. ಈಗ ಎಲ್ಲಿಗೆ ಹೋಗುವುದೂ… ಅವನನ್ನೆ ಕೇಳಿದೆ; ಈ ರೂಟಲ್ಲಿ ಚನ್ನಪಟ್ಟಣಕ್ಕೆ ಯಾವ ಬಸ್ಸಿವೆ ಎಂದು. ಈಗ ಯಾವ್ದೂ ಇಲ್ಲ. ಸಾಯಂಕಾಲ ಒಂದಿದೆ. ಗ್ಯಾರಂಟಿ ಇಲ್ಲ. ತಪ್ಪಿದರೆ ನಾಳೆ ಬೆಳಿಗ್ಗೆಗೆ ಎರಡು ಬಸ್ಸಿವೆ’ ಎಂದ. ನಾನು ಮೈಸೂರಿಗೆ ಆ ದಿನವೆ ಹಿಂತಿರುಗಲು ಸಾಧ್ಯವಿರಲಿಲ್ಲ. ಒಳ್ಳೆದೇ ಆಯ್ತು ಬಿಡೂ… ನಾನೀಗಲೇ ಮೈಸೂರರಮನೆಗೆ ಹೋಗಿ ಅಲ್ಲೇನು ರಾಜ್ಯಬಾರ ಮಾಡಬೇಕಿತ್ತೇ… ಎಂದುಕೊಂಡು ಅಲ್ಲೇ ಇದ್ದ ಮುಸ್ಲಿಮರ ಬೀದಿಗೆ ಬಂದೆ.
ರೈತರ ಮನೆಗಳಂತಿರಲಿಲ್ಲ. ಅವರ ಬೀದಿ. ಯಾವ ಪಶು ಪಾಲಕ ಚಹರೆಗಳೂ ಕಾಣಲಿಲ್ಲ. ಹೆಂಗಸರು ಮಕ್ಕಳು ಕೆಲಸಗಳಲ್ಲಿ ಮುಳುಗಿದ್ದರು. ಇವರು ಭಿನ್ನವಾಗಿದ್ದಾರೆ ಎಂಬುದು ಸ್ಪಷ್ಟವಿತ್ತು. ಚೆಲುವೆಯರ ಕಾಡಿಗೆಯ ಬಟ್ಟಲುಗಣ್ಣುಗಳು ಸೆಳೆದವು. ಅಪರಿಚಿತರು ಸುಮ್ಮನೆ ಅವರ ಕೇರಿಗಳಿಗೆ ಹೋಗುವಂತಿರಲಿಲ್ಲ. ಭಂಡತನವಿತ್ತು. ಅವರೂ ನಮ್ಮವರೇ ಎನಿಸಿತ್ತು. ಅಷ್ಟು ಸುಲಭವಾಗಿ ಅವರು ಹೊರಗಿನವರನ್ನು ಸ್ವೀಕರಿಸುತ್ತಿರಲಿಲ್ಲ. ಎಲ್ಲ ಜಾತಿಯವರ ಬೀದಿಗಳಲ್ಲು ಅಡ್ಡಾಡಿದ್ದ ನನಗೆ ಆ ಮುಸ್ಲಿಮರ ಬೀದಿಯೂ ಅನ್ಯ ಎನಿಸಿತು. ಬಾಲ್ಯದಲ್ಲಿ ಅದೆಲ್ಲ ಗೊತ್ತಾಗುತ್ತಿರಲಿಲ್ಲ. ದೊಡ್ಡವರಾಗುತ್ತಿದ್ದಂತೆಯೆ ದೊಡ್ಡವರೆಲ್ಲರ ದೌರ್ಬಲ್ಯಗಳು ಢಾಳಾಗಿ ಕಾಣುವುದು. ಮುಗ್ಧ ಕಣ್ಣುಗಳಲ್ಲಿ ಕೊಲ್ಲುವವರು ಕೂಡ ಕರುಣಾಮಯಿಗಳಂತೆ ಕಂಡಿರುತ್ತಾರೆ. ಮಧ್ಯಾನ್ಹ ಮೀರಿತ್ತು. ಅಲ್ಲೊಂದು ಹಳ್ಳಿ ಹೋಟೆಲಿತ್ತು. ಅನ್ನ ಸಾಂಬಾರ್ ಬೋಂಡ ತಿಂದೆ. ಅಹಾ! ಎಂತಹ ರುಚಿ! ಮಜ್ಜಿಗೆ ಕೊಟ್ಟರು. ಹೊಟ್ಟೆ ತುಂಬಿತ್ತು. ಯಾವೂರು ಎಂದು ವಿಚಾರಿಸಿದ್ದರು. ಸುಳ್ಳು ಹೇಳಿದ್ದೆ. ಆ ಊರಲ್ಲಿದ್ದವರೆಲ್ಲ ಗೌಡರು. ಜಾತಿಯಿಂದ ಬಚ್ಚಿಟ್ಟುಕೊಳ್ಳಬೇಕಿತ್ತು. ಮುಂದೆ ಮುಂದೆ ಹೋದಂತೆಲ್ಲ ನನ್ನ ತಾಯೂರು ಹತ್ತಿರವಾಗುತ್ತಿತ್ತು. ಅದೊಂದು ವಿಚಿತ್ರ ಹೆಸರಿನ ಊರು. ‘ಬಾಣ್ತಳ್ಳಿ’ ಎಂದು ಕರೆಯುತ್ತಿದ್ದರು. ಕಾಲ್ನಡಿಗೆಯಲ್ಲಿ ತಾಯಿ ಕರೆದೊಯ್ಯುತ್ತಿದ್ದಾಗ ಆ ಊರ ಹೆಸರ ಉಚ್ಚರಿಸಲಾಗದೆ ಕಷ್ಟ ಪಡುತ್ತಿದ್ದುದು ನೆನಪಾಯಿತು. ಈಗಲೂ ಅದರ ಹೆಸರಿನ ಮೂಲ ಗೊತ್ತಿಲ್ಲ. ಬಾಣಂತಿಯ ಹಳ್ಳಿಯೊ; ಯಾಕೆ ಆ ಹೆಸರು ಬಂತೊ ಏನೊ… ಯಾವತ್ತಿನಿಂದಲೂ ಆ ಹಳ್ಳಿಯ ಹೆಸರು ನನ್ನ ತಲೆಯ ಮೂಲೆಯಲ್ಲಿ ಆಗಾಗ ಬಂದು ಹೋಗುತ್ತಿರುತ್ತದೆ. ಈ ಹಳ್ಳಿದಾರಿಯ ಮತ್ತೆ ನೋಡಲು ಯಾಕೆ ಬಂದೆ ಎಂದು ಆ ಊರ ದಾರಿಯ ಬಯಲ ಅರಳಿ ಮರದ ಕೆಳಗೆ ಕೂತು ಕೇಳಿಕೊಂಡೆ. ಮನಸ್ಸೂ ಕೂಡ ಕೂತಲ್ಲೆ ಅಲೆಯುತ್ತಿರುತ್ತದೆ. ಯತಿಗಳು, ಜ್ಞಾನಿಗಳು ಮೂರು ಲೋಕಗಳ ತಾವಿದ್ದಲ್ಲೆ ಸಂಚರಿಸಿಕಂಡು ಬರುತ್ತಾರಂತೆ. ನನಗದೆಲ್ಲ ಗೊತ್ತಿಲ್ಲ. ಆದರೆ ಬೆಳೆದು ಬಂದ ದಾರಿಗಳ ಮತ್ತೆ ಮತ್ತೆ ಮರಳಿ ನೋಡುವುದರಿಂದ ನನಗೆ ನನ್ನ ನಾಳೆಯ ದಾರಿಯ ಹೆಜ್ಜೆ ಗುರುತುಗಳು ಮೂಡುತ್ತದೆ.
ಬಾಣ್ತಳ್ಳಿ ಪುಟ್ಟೂರು. ಊರ ಹೊರಗೆ ದಾರಿ ಇತ್ತು. ಮುಂದೆ ಬಂದೆ. ಅಲ್ಲೊಂದು ಕೆನ್ನಿರಕಟ್ಟೆ. ನಡೆದು ಬಂದು ಬಾಯಾರಿದ್ದಾಗ ನಮಗೆ ಆ ನೀರೇ ಅಮೃತವಾಗುತ್ತಿತ್ತು. ಆ ಕಟ್ಟೆಯಲ್ಲೀಗ ನೀರಿರಲಿಲ್ಲ. ಬಿಕೊ ಎನ್ನುವ ಬಟಾ ಬಯಲು. ಅಷ್ಟೊಂದು ಮರಗಳಿದ್ದವಲ್ಲ ಹೊಲದ ಬದುಕುಗಳಲ್ಲಿ… ಯಾರು ಕಡಿದುಕೊಂಡು ಹೋದರೊ… ಬೋಳೂ ಬೋಳು ಬಯಲು… ಬಿತ್ತಿಲ್ಲ ಬೆಳೆದಿಲ್ಲ ಮಳೆ ಇಲ್ಲ. ಜನರ ಓಡಾಟವೇ ಇಲ್ಲ! ಎಲ್ಲಿ ಹೋದರು ಅವರೆಲ್ಲ? ಪೇಟೆಗಳಿಗೆ ಹೋದರೇ… ಸಂಜೆಗೆ ಹಿಂತಿರುಗುವರೇ; ಹೊತ್ತು ಮೀರಿ ಹೊಟ್ಟೆ ಪಾಡು ಮುಗಿಸಿ ಬರುವರೇ; ಕಲರವಗೊಳ್ಳುತ್ತಿದ್ದ ಹಳ್ಳಿಗಳು ಯಾಕೀಗ ಮೌನವಾಗಿವೆ… ಹೆಪ್ಪುಗಟ್ಟಿದ ದುಃಖದಂತಿವೆ… ನನ್ನ ಅಜ್ಜಿಯ ಊರಿಗೆ ಹೋಗಿ ಈ ರಾತ್ರಿ ಅಲ್ಲಿ ತಂಗಿದ್ದು ಹಿಂತಿರುಗಲೇ… ತೊಯ್ದಾಡುತ್ತಿದ್ದೆ. ಎತ್ತಿನ ಬಂಡಿಯೊಂದು ಬಂತು; ಬಾರಪ್ಪಾ… ಯಾಕೆ ನಡ್ಕಂಡೋಗ್ತಿದ್ದೀಯೇ’ ಎಂದು ಬಂಡಿಗ ಕರೆದ. ಒಂಟಿಯಾಗಿ ನಡೆಯುವುದೇ ಸರಿ ಎನಿಸಿತು. ಗಾಡಿ ಹೊರಟು ಹೋಯಿತು. ಅಲ್ಲೊಂದು ಮೋರಿ ಸಿಕ್ಕಿತು. ಕೂತು ಹತ್ತು ಸಲಾ ಯೋಚಿಸಿದೆ. ಹಳೆಯದೆಲ್ಲ ಎದುರು ಬಂತು. ಆಗ; ಆಗೊಮ್ಮೆ ಅಪ್ಪನು ಅರೆ ಜೀವ ಮಾಡಿದ್ದಾಗ ಅವನಿಂದ ತಪ್ಪಿಸಿಕೊಂಡು ಇದೇ ಅಜ್ಜಿಯ ಮುಂದೆ ಸಂತೆಯಲ್ಲಿ ಕಂಡು ಅವಳ ಮರುಕಕ್ಕಾಗಿ ಹಾತೊರೆದಿದ್ದೆ ಅಲ್ಲವೇ… ಸಂತೆಯಾದ ಸಂತೆಯ ಜನರೇ ಅಜ್ಜಿಯ ಮುಂದೆ ಬರುವಂತೆ ಜೋರಾಗಿ ಕೂಗಿ ಕೂಗಿ ಜಾಹೀರು ಮಾಡಿದ್ದೆ ಅಲ್ಲವೇ… ಆ ಸಂತೆಯಲ್ಲಿ ಕುರಿಗಳ ವ್ಯಾಪಾರಿ ನನ್ನ ಕಪೋಲವ ಮುಟ್ಟಿ; ಯಾರೊ ಹೀಗೆ ಹೊಡೆದವರೂ… ಬರ್ತಿ ಏನೊ ಎಂದು ಆ ಸಾಬಿ ಕೇಳಿದ್ದ ಅಲ್ಲವೇ… ಆ ಸಂತೆಯ ಮೊಕ್ಕತ್ಲ ವೇಳೆಯಲ್ಲಿ ಏನೆಲ್ಲ ತಿನಿಸು ಕೊಡಿಸಿ ಅತ್ತ ದಾರಿ ಮರೆಗೆ ಕರೆತಂದು ಇದೇ ಅಜ್ಜಿ ನನ್ನ ಕತ್ತ ಮುರಿಯಲು ಮುಂದಾಗಿದ್ದಾಗ… ನಿನ್ನ ಕೈಯ್ಯಾರೆಯೇ ಸಾಯುವೆ ಎಂದು ಗೋಣು ಮುರಿಸಿಕೊಳ್ಳಲು ಸಿದ್ಧನಾಗಿದ್ದೆ ಅಲ್ಲವೇ… ಯಾರೊ ಒಬ್ಬ ಅತ್ತಲಿಂದ ಬಂಡಿಯಲ್ಲಿ ಬಂದವನು ಬಿಡಿಸಿದ್ದ ಅಲ್ಲವೇ… ನನ್ನ ಮಗಳ ಸಾವಿಗೆ ಕಾರಣನಾದ ನೀನು ಇನ್ನೆಂದು ನನ್ನ ಕಣ್ಣಿಗೆ ಕಾಣಬಾರದು ಎಂದು ಅಜ್ಜಿ ರಾಕ್ಷಸಿ ಆಗಿದ್ದಳಲ್ಲವೇ… ಈಗ ಅವಳ ಮುಂದೆ ಹೋಗಿ ಹೇಗೆ ನಿಲ್ಲಲಿ? ಮನಸ್ಸು ಕಸಿವಿಸಿಯಾಯಿತು.
ಆ ಊರಿಂದ ಮುಂದೆ ಹೋದರೆ ಎಲೆತೋಟದಹಳ್ಳಿ. ಅಲ್ಲಿಂದ ಒಂದಿಷ್ಟು ದೂರ ನಡೆದರೆ ಅಜ್ಜಿಯ ಮನೆಯ ಮುಂದೆಯೆ ನಿಲ್ಲಬಹುದಿತ್ತು. ಅಲ್ಲಿಯೂ ನನಗೆ ಬಾಗಿಲು ತೆಗೆಯುವವರು ಯಾರೂ ಇರಲಿಲ್ಲ. ಆದರೆ ತಾಯ ಹಂಬಲ ನನ್ನನ್ನು ಅಲ್ಲಿ ತನಕ ಕರೆತದಿತ್ತು. ತಾಯಿ ಹುಟ್ಟಿ ಬೆಳೆದಿದ್ದ ಆ ಊರು ಕೇರಿ ಮನೆಗಳನ್ನೆಲ್ಲ ಕಣ್ತುಂಬಿಕೊಳ್ಳಬೇಕೆಂಬ ಆಸೆಯಾಗಿತ್ತು. ಅಷ್ಟನ್ನು ಬಿಟ್ಟರೆ ಅಲ್ಲಿ ನನಗೆ ಇಷ್ಟವಾದದ್ದು ಏನು ತಾನೆ ಇತ್ತು. ಅಲ್ಲೆಲ್ಲ ಕುಂತು ನಿಂತು ಅಡ್ಡಾಡಿದರೆ ತಾಯನ್ನು ಕಂಡಂತಾಗುತ್ತಿತ್ತಲ್ಲವೇ… ಈಗದು ಬೇಡ ಎನಿಸಿತ್ತು. ಸೂರ್ಯ ಮುಳುಗುತ್ತಿದ್ದ. ಅದೇ ದಾರಿ ಬೇರೆಯಾಗಿ ಕಾಣುತಿತ್ತು. ಎಷ್ಟು ದೂರ ಸಾಧ್ಯವೊ ಅಷ್ಟು ದೂರ ಒಬ್ಬನೇ ನಡೆಯುವ ಎಂದು ಹಿಂತಿರುಗಿದೆ. ಆ ಒಂದೊಂದೂ ಊರುಗಳ ದಾಟುತ್ತಿದ್ದಂತೆಲ್ಲ ಎದೆಯ ಭಾರ ಕಡಿಮೆ ಆಗುತ್ತಿತ್ತು. ನಡೆದು ಬಂದ ದಾರಿ ನಡೆದವರಿಗೇ ಗೊತ್ತು. ಹಾಗೆ ಇರುಳಲ್ಲಿ ಸಾಗುವುದರಲ್ಲಿ ಏನೊ ಮಾಂತ್ರಿಕತೆ ಇದೆ. ಬೆಳಕು ತೋರಲಾಗದ್ದನ್ನು ಕತ್ತಲು ಬಿಂಬಿಸುತ್ತದೆ. ರಾತ್ರಿಗಳನ್ನು ಆರಾಧಿಸುವುದರಲ್ಲಿ ನಾನು ಯಾವತ್ತೂ ಮುಂದು. ಆ ದಿನ ನಡೆದಂತೆಲ್ಲ ದಣಿವಿಗೆ ಬದಲು ಉತ್ಸಾಹವೇ ಹೆಚ್ಚಾಗುತ್ತಿತ್ತು. ಕತ್ತಲಿಗೂ ವಿಮೋಚನೆಯ ದಾರಿಗೊತ್ತು. ಆ ಹಳ್ಳಿಯಿಂದ ಚನ್ನಪಟ್ಟಣಕ್ಕೆ ಹದಿನೇಳು ಮೈಲಿಗಳು. ನನ್ನ ದೃಢ ಚಿತ್ತಕ್ಕೆ ಅದು ಸವಾಲೇ ಆಗಿರಲಿಲ್ಲ. ಸಾಗಿ ಬಂದಿದ್ದಾಗ ರಾತ್ರಿ ಒಂದು ಗಂಟೆ ಆಗಿತ್ತು. ಪೇಟೆಯಿಂದ ಮೈಸೂರಿಗೆ ಆ ವೇಳೆಯಲ್ಲಿ ಆಗ ಬಸ್ಸುಗಳಿರಲಿಲ್ಲ. ಬಸ್ ನಿಲ್ದಾಣದಲ್ಲೆ ತೂಕಡಿಸುತ್ತ ಕಂಬ ಒಂದನ್ನು ಒರಗಿ ನಿದ್ದೆ ಕಳೆದುಕೊಂಡಿದ್ದೆ. ಮುಂಜಾವಿಗೇ ಬಸ್ಸಿತ್ತು. ಹೊರಟು ಬಂದು ನನ್ನ ನೆಲೆ ತಲುಪಿದ್ದೆ.
ಕೊಳೆಯಾಗಿದ್ದೆ. ಭರ್ಜರಿ ಸ್ನಾನ ಮಾಡಿದ್ದೆ. ಗಾಢವಾದ ನಿದ್ದೆ ಬಂದಿತ್ತು. ಏನೊ ತಪ್ಪಿತಸ್ಥ ಭಾವನೆ. ಅರ್ಥವಾಗುತ್ತಿರಲಿಲ್ಲ ಮರುದಿನ ಲೈಬ್ರರಿಯಲ್ಲಿ ಕದ್ದು ಮುಚ್ಚಿ ಇಂಗ್ಲೀಷಿನ ಸಾಹಿತ್ಯದ ಪುಸ್ತಕಗಳ ಹುಡುಕುತ್ತಿದ್ದೆ. ವೋಲೆ ಸೋಯಿಂಕನ ಹೆಸರು ಕಿವಿ ಮೇಲೆ ಬಿದ್ದಿತ್ತು. ರಶೀದ ಒಮ್ಮೆ ಹೇಳಿದ್ದ ಹಾಗು ‘ಬ್ಲಾಕ್ ಪೊಯಿಟ್ರಿ’ ಎಂಬ ಸಂಪಾದಿತ ಕವನ ಸಂಗ್ರಹವ ತೋರಿದ್ದ. ಅದು ಎಷ್ಟು ಮಹತ್ವದ್ದು ಎಂದು ಹೇಳುತ್ತಿದ್ದಂತೆಯೆ ರೋಮಾಂಚಿತನಾಗಿದ್ದೆ, ಆಫ್ರಿಕನ್ ಕವಿಗಳ ಮುಖ್ಯ ಕವಿತೆಗಳನ್ನು ಸೋಯಿಂಕಾ ಸಂಗ್ರಹಿಸಿದ್ದರು. ಓದಲು ಕಷ್ಟ; ಆದರೆ ಆ ಕಪ್ಪು ಕಾವ್ಯವನ್ನು ಪ್ರಜ್ಞೆಗೆ ತಂದುಕೊಳ್ಳಲೇಬೇಕೆಂದು ಹಠ ಮಾಡಿದೆ. ಪದಗಳ ಜೋಡಣೆಯೇ ಕಠಿಣವಾಗಿತ್ತು. ಆದರೆ ‘ಅಪಾರ್ಥೀಡ್’ ನ ವರ್ಣಬೇಧ ಸಂಕಟ ಮನಸ್ಸಿಗೆ ತಟ್ಟುತ್ತಿತ್ತು. ರಶೀದ್ ಇಂಗ್ಲೀಷ್ ಸಾಹಿತ್ಯವನ್ನು ಮೇಜರ್ ಆಗಿ ಓದುತ್ತಿದ್ದ. ಅವನ ವ್ಯಕ್ತಿತ್ವ ಓದು ಎಲ್ಲರಿಗಿಂತಲು ವಿಶೇಷವಾಗಿತ್ತು. ಮಾತಿಗೆ ಬದಲು ತನ್ನ ಇಡೀ ವ್ಯಕ್ತಿತ್ವವನ್ನು ಬಾಲ್ಯಕಾಲವನ್ನು ಬರಹದಲ್ಲಿ ಮಾಂತ್ರಿಕಗೊಳಿಸಿ ಬರೆಯುತ್ತಿದ್ದ. ಸಹಜವಾಗಿಯೇ ಸ್ನೇಹಿತನಾಗಿಬಿಟ್ಟಿದ್ದ.
ನಮ್ಮ ಹಾಸ್ಟೆಲಿನ ರಸ್ತೆಯ ಸರಸ್ವತಿಪುರಂನ ತಿರುವಿನಲ್ಲೆ ಮುಸ್ಲಿಂ ವಿದ್ಯಾರ್ಥಿಗಳ ಹಾಸ್ಟೆಲಿತ್ತು. ಅಂತಹ ಒಂದು ಹಾಸ್ಟೆಲಿನ ಕಲ್ಪನೆಯೆ ನನಗಿರಲಿಲ್ಲ. ರಶೀದ್ ರೂಂಗೆ ಹೋಗುವುದೆ ಒಂದು ಖುಷಿ. ಅವನ ಜೊತೆ ಯಾವ ರಾಗದ್ವೇಷಗಳೂ ಇರಲಿಲ್ಲ. ಅದಾಗಲೆ ಅವನ ಹಾಸ್ಟೆಲಿನ ರೂಮಿಗೆ ಹೋರಾಟಗಾರರು ಬರುತ್ತಿದ್ದರು. ಸಾಹಿತಿಗಳ ನಡುವೆ ಆಪ್ತನಾಗಿದ್ದೆ. ಅವನಿದ್ದ ಹಾಸ್ಟೆಲಿನ ಮರಗಳ ಕೆಳಗೆ ಕೂತು ತನ್ನ ಕೊಡಗಿನ ಬ್ಯಾರಿ ಪ್ರಪಂಚದ ಅದೇ ಉಮ್ಮಾ, ಬಾಪ್ಪಾರ ಕಥೆಗಳನ್ನು ಅದ್ಭುತವಾಗಿ ಬರೆದು ವಾಚಿಸುತ್ತಿದ್ದ. ಅವನ ‘ಮೊಸಾ ಮೊಯಿಲಿ ಯಾರರ ಮುದ್ದಿನ ಮಗಳು ಹಾಗು ಹೆಲಿಪೆಟ್ಟರ್ ಎಂಬ ದುಷ್ಟ ಜಂತುವೂ’ ಎಂಬ ಉದ್ದ ಶೀರ್ಷಿಕೆಯ ಕಥೆಯು ನನ್ನನ್ನು ಮೂಕನನ್ನಾಗಿಸಿತ್ತು. ಆಗ ನಾನೇನನ್ನೂ ಬರೆದಿರಲಿಲ್ಲ. ಬರೆಯಲು ಹಿಂಜರಿಕೆ; ಏನೊ ಅಪರಾಧ ಭಾವನೆ… ನನ್ನ ಊರಿನ ಆ ಎಲ್ಲ ಕಥೆಗಳ ಯಾಕಾಗಿ ಬರೆದು ಬಯಲು ಮಾಡಬೇಕು ಎಂಬ ಕೀಳರಿಮೆ. ಹಾಗಾಗಿ ಬರೆಯಲು ಉತ್ಸಾಹವೆ ಬರುತ್ತಿರಲಿಲ್ಲ. ಅದೇ ವೇಳೆಗೆ ಕುರುಚಲು ಗಡ್ಡದ ಎಣ್ಣೆಗೆಂಪಿನ ಚೂಪು ಮೂಗಿನ ತೀಕ್ಷಕಣ್ಣಿನ ಅಪಾರ ತಾಳ್ಮೆ ವಿಶ್ವಾಸಗಳ ಎತ್ತರದ ವ್ಯಕ್ತಿ ಒಬ್ಬರು ನಮ್ಮ ನಡುವೆ ದುತ್ತೆಂದು ಪ್ರತ್ಯಕ್ಷವಾಗಿದ್ದರು. ಮೊದಲಿಗೆ ಆ ವ್ಯಕ್ತಿಯನ್ನು ನಾನು ಕಂಡದ್ದು ರಶೀದನ ಜೊತೆಯಲ್ಲೇ… ಅವನ ಹೆಸರು ಸಾಕೇತ್ ರಾಜನ್. ಆಗ ತಾನೆ ದೆಹಲಿಯ ಜೆ.ಎನ್ಯು. ನಲ್ಲಿ ಜರ್ನಲಿಸಂ ಮುಗಿಸಿ ಬಂದಿದ್ದ. ಕ್ಷಣ ಮಾತ್ರದಲ್ಲಿ ಸೆರೆ ಹಿಡಿಯುವಂತಹ ಜೀನಿಯಸ್… ಅವನ ಬಗ್ಗೆ ಅಂತಹ ಹತ್ತಾರು ಅಭಿಪ್ರಾಯಗಳ ಕಲ್ಪಿಸಿಕೊಂಡಿದ್ದೆ. ತಾಯ್ತನದ ಹೃದಯವಂತ ಎನಿಸಿತ್ತು. ಅದರಾಚೆಗೆ ಏನೂ ಗೊತ್ತಿರಲಿಲ್ಲ. ನಿಧಾನಕ್ಕೆ ಅವನ ನಿಗೂಢ ಲೋಕ ಗೊತ್ತಾಯಿತು. ಮೈಸೂರಿಗೆ ಬಂದ ಕೂಡಲೆ ಊರಿನ ಸಂಬಂಧಗಳೆಲ್ಲ ಶಾಪಗ್ರಸ್ಥ ಮರೆವಿಗೆ ಸರಿಯುತ್ತಿದ್ದವು. ನಾವು ಏನಾದರೂ ಒಂದು ಜಾಗೃತಿ ಉಂಟು ಮಾಡಬೇಕು ಎಂದ ರಶೀದ್. ಆಯ್ತು ಎಂದೆ. ನನ್ನ ಗೆಳೆಯ ಮೆಳೆಕಲ್ಲಳ್ಳಿಯೂ ಬಿರಿಸಾಗಿಯೇ ಮುನ್ನುಡಿ ಇಟ್ಟು ಮಾಡೋಣ ಎಂದಿದ್ದ.
ಆಗ ಮಹರಾಜ ಕಾಲೇಜಿನ ಪ್ರಿನ್ಸಿಪಾಲರು ಶಂಕರಲಿಂಗೇಗೌಡ. ಒಳ್ಳೆಯ ಆಡಳಿತಗಾರ ಎನ್ನುತ್ತಿದ್ದರು. ಪತ್ರಿಕೋದ್ಯಮ ಓದುತ್ತಿದ್ದ ಕೆಲವು ಹುಡುಗರಿದ್ದರು. ಅವರೆಲ್ಲ ಒಂದೇ ಜಾತಿಗೆ ಸೇರಿದ್ದರು. ಅವರ ಗುರುಗಳ ಸಲಹೆ ಮೇರೆಗೆ ‘ಧ್ವನಿ’ ಎಂಬ ಗೋಡೆ ಪತ್ರಿಕೆನ್ನು ತರುತ್ತಿದ್ದರು. ಅದು ಅವರ ಧ್ವನಿಯಾಗಿತ್ತು. ಎಲ್ಲ ನಯನಾಜೂಕಿನ ಅಗ್ರಹಾರದ ಜಾಣ್ಮೆಯ ಬರಹ. ಅಗಲವಾದ ಡ್ರಾಯಿಂಗ್ ಶೀಟುಗಳಲ್ಲಿ ಲೇಔಟ್ ಮಾಡಿ ಪುಟ್ಟ ಪುಟ್ಟ ಬರಹಗಳ ಸ್ಕೆಚ್ ಪೆನ್ನುಗಳಲ್ಲಿ ಅಲಂಕಾರ ಮಾಡಿ ಬರೆಯುತ್ತಿದ್ದರು. ರಶೀದ್ ‘ಅರಿವು’ ಎಂಬ ಪತ್ರಿಕೆ ತರುತ್ತಿದ್ದು ನನ್ನನ್ನೂ ಮೆಳೇಕಲ್ಲಳ್ಳಿ ಉದಯನನ್ನೂ ಒಳಗು ಮಾಡಿಕೊಂಡಿದ್ದ. ಐದಾರು ಸಂಚಿಕೆ ತಂದೆವು. ಒಂದು ದೊಡ್ಡ ಬೋರ್ಡಿನ ಮೇಲೆ ಈ ಎರಡೂ ಪತ್ರಿಕೆಗಳ ಅಂಟಿಸಲಾಗುತ್ತಿತ್ತು. ವಿದ್ಯಾರ್ಥಿಗಳು ಓದುತ್ತಿದ್ದರು. ನಮ್ಮಿಬ್ಬರ ತಲೆಯಲ್ಲೂ ಏನೊ ಒಳ್ಳೆಯದೊ ಕೆಟ್ಟದ್ದೊ ಯೋಚನೆ ಬಂತು. ನಾನೂ ಮೆಳೇಕಲ್ಲಳ್ಳಿಯೂ ರಾತ್ರೋ ರಾತ್ರಿ ರಶೀದನಿಗೆ ಕೈಕೊಟ್ಟು ‘ದಲಿತ’ ಎಂಬ ಗೋಡೆ ಪತ್ರಿಕೆಯನ್ನು ಹುಟ್ಟುಹಾಕಿ ತಂದು ಬೋರ್ಡಿಗೆ ತಗುಲಿ ಹಾಕಿದೆವು. ರಶೀದ್ ಬೇಸರವಾಗಿತ್ತು. ತೋರಿಸಿಕೊಂಡಿರಲಿಲ್ಲ. ಮೃದುವಾಗಿ ಮುನಿಸಿಕೊಂಡಿದ್ದ. ನಾವು ಏನೊ ಸಾಧಿಸಿಬಿಟ್ಟೆವು ಎಂದು ಬೀಗಿದ್ದೆವು. ಆ ಸಡಗರ ಕಿಡಿಗೇಡಿಗಳಿಂದ ಬಹಳ ಬೇಗನೆ ದ್ವಂಸವಾಗಿತ್ತು. ನಾವು ದಲಿತ ಹೆಸರಿನ ಪತ್ರಿಕೆ ಮೂಲಕ ಏನು ವಿಶ್ವ ಮಾನವತೆಯನ್ನು ಸಾರಬಹುದಿತ್ತೇ… ಸಾರಿದರೂ ಮಾನ್ಯವಾಗುತ್ತಿತ್ತೇ… ಅದೇ ಜಾತಿಯ ಹಿಂಸೆಯ ಕುರಿತು ಒರಟಾಗಿ ಬರೆದಿದ್ದೆವು. ಸಾಮ್ರಾಜ್ಯಗಳನ್ನು ಅಣಕಿಸಿದ್ದೆವು. ಬ್ರಾಹ್ಮಣ್ಯವನ್ನು ಟೀಕಿಸಿ ಮನುಧರ್ಮ ಶಾಸ್ತ್ರವನ್ನು ಬೆತ್ತಲೆಗೊಳಿಸಿದ್ದೆವು.
ವ್ಯಂಗ್ಯವಿಡಂಬನೆ ಪ್ರತಿಭಟನೆ ಧಾರಾಳವಾಗಿ ವ್ಯಕ್ತವಾಗಿದ್ದವು. ಅನೇಕರು ನಮ್ಮ ಪತ್ರಿಕೆಯ ಮೇಲೆ ರೆಡ್ಇಂಕನ್ನು ಚಿಮ್ಮಿಸಿ ಉಗಿದು ಹರಿದು ಹೋಗಿರುತ್ತಿದ್ದರು. ಮತ್ತೆ ಕೆಲವರು ಚಪ್ಪಲಿ, ಶೂಗಳ ಮುದ್ರೆ ಒತ್ತಿ ಹೋಗುತ್ತಿದ್ದರು. ಕೆಲವರಂತು ‘ಸೂಳೇ ಮಕ್ಕಳ ಬಾಯಿಗೆ ಹಂದಿ ಲಡ್ಡು ತುರುಕುತ್ತೇವೆ’ಎಂದು ಪತ್ರಿಕೆಯ ಮೇಲೇ ದಪ್ಪ ಅಕ್ಷರಗಳಲ್ಲಿ ಬರೆದು ಕಿಡಿಕಾರುತ್ತಿದ್ದರು. ಅದೇ ಧ್ವನಿ ಪತ್ರಿಕೆಯು ಪರಿಶುದ್ಧವಾಗಿರುತ್ತಿತ್ತು. ಅದನ್ನು ಮೆಚ್ಚಿ ಓದುವುದರಲ್ಲಿ ಬಹುಪಾಲು ವಿದ್ಯಾರ್ಥಿಗಳು ಮುಂದಾಗುತ್ತಿದ್ದರು. ಅದರ ಒಂದು ಮೂಲೆಯಲ್ಲೂ ಚಕಾರವಿರುತ್ತಿರಲಿಲ್ಲ.
ಆ ರಾಘವೇಂದ್ರಾಯ ನಮಃ ಪತ್ರಿಕೆಯಲ್ಲಿ ಬರೆಯಲು ಆರಂಭಿಸಿದ್ದ ನಮಗೆ ಒಂದಿಷ್ಟು ನಯ ವಿನಯ ಪ್ಯಾಂಟಸಿ ರಮ್ಯತೆ ಇತ್ತು. ನಾವಾಗಿ ನಾವು ‘ದಲಿತ’ ರೂಪಿಸಿದಾಗ ಅಗ್ನಿ ಪರ್ವತದಂತೆ ಮನದೊಳಗೆ ಲಾವಾ ಕುದಿಯುತ್ತಿತ್ತು. ಆ ಮಳವಳ್ಳಿ ಪೈಲ್ವಾನನೂ ಬ್ಲೇಡೇಟಿನ ಚಿಕ್ಕಣ್ಣನೂ ನಮ್ಮ ಬೆನ್ನು ತಟ್ಟಿದ್ದರು. ಬೋರ್ಡಿಗೆ ಹಚ್ಚಿದ ಸಾಯಂಕಾಲದ ಒಳಗೆ ತರಾವರಿ ಕೀಳು ಬಯ್ಗಳಗಳು ಅದೇ ದಲಿತ ಪತ್ರಿಕೆಯ ಮೂಲೆಗಳಲ್ಲೆಲ್ಲ ದಾಖಲಾಗುತ್ತಿದ್ದವು. ಅವನ್ನೆಲ್ಲ ಇಲ್ಲಿ ದಾಖಲಿಸಲಾಗದು. ಟಾಯ್ಲೆಟ್ ರೂಮಿನ ನೀಲಿ ಚಿತ್ರಗಳು ಬಯ್ಗಳಗಳು ಧಾರಾಳವಾಗಿ ನಮೂದಾಗುತ್ತಿದ್ದವು. ಗುರುಗಳಾದ ರಾಮದಾಸರಿಗೆ ಹೇಳಿದೆ. ಹೀಗೆ ಒಂದು ಗೋಡೆ ಪತ್ರಿಕೆ ತರುವ ಆಲೋಚನೆಯನ್ನು ಮೊದಲಿಗೆ ಅವರ ಬಳಿಯೇ ಚರ್ಚಿಸಿದ್ದೆ. ಅಲ್ಲಿದ್ದ ಜವಾನನ ಕರೆದು ಈ ನೀಚ ಕೆಲಸ ಯಾರು ಮಾಡುವರು ಎಂದು ಪತ್ತೆ ಮಾಡಲು ಗೂಢಾಚಾರನನ್ನು ನೇಮಿಸಿದರು. ಅಯ್ಯೋ ಅವೇ ಸಾರ್ ಆ ತರ್ಲೆಗಳು ಎಂದ. ಗೊತ್ತಾಗಿತ್ತು. ಗೂಂಡಾವರ್ತನೆಯ ಮೇಲ್ಜಾತಿಯ ಪುಂಡ ವಿದ್ಯಾರ್ಥಿಗಳಾಗಿದ್ದರು ಅವರು. ಸಾಯಂಕಾಲ ಮನೆಗೆ ಬನ್ನಿ ಎಂದು ಸಾರ್ ತರಗತಿಗೆ ಹೊರಟರು. ಇತಿಹಾಸ ಪಾಠ ಕೇಳಲು ಸೀನಿಯರ್ ಬಿ.ಎ. ಹಾಲ್ನಲ್ಲಿ ಕೂತಿದ್ದೆ ಮುಂದಿನ ಸಾಲಿನಲ್ಲೆ. ನಾಲ್ಕು ಸೆಕ್ಷನ್ನ ಕನ್ನಡ ಮಾಧ್ಯಮದ ಎಲ್ಲ ಇತಿಹಾಸ ವಿದ್ಯಾರ್ಥಿಗಳಿಗೂ ಆ ದೊಡ್ಡ ಹಾಲ್ನಲ್ಲಿ ಪಾಠ ಮಾಡುತ್ತಿದ್ದರು. ಮನಸ್ಸು ಖಿನ್ನವಾಗಿತ್ತು. ನಾವು ಬರೆದು ಅಂಟಿಸಿದ್ದನ್ನೆಲ್ಲ ಹೀಗೆ ಅಪಮಾನಿಸಿ ಹರಿದು ಬಿಡುವರಲ್ಲಾ… ಇದಕ್ಕೆ ಪರಿಹಾರ ಬೇರೆ ಏನಿದೆ ಎಂದು ಪಾಠದತ್ತ ಅನ್ಯನಾಗಿದ್ದೆ. ಆ ಲೆಕ್ಚರರ್ ಆಗತಾನೆ ಅಪಾಯಿಂಟ್ ಆಗಿದ್ದರು. ಹೊಸಬರು. ಏನೋ ನಿರ್ಲಕ್ಷ್ಯ ವೈಟ್ ಅಂಡ್ ವೈಟ್ ಡ್ರೆಸ್. ಪಕ್ಕಾ ನಮ್ಮ ಹಳ್ಳಿಗಾಡಿನ ಪ್ರತಿಭೆ. ಪಾಣಿಪತ್ ಕದನವನ್ನು ವಿಡಂಬನೆಯ ಲಹರಿಯಲ್ಲಿ ಅಭಿನಯಿಸಿ ಪಾಠ ಮಾಡುತ್ತಿದ್ದರು. ಯಾವ ಮುಲಾಜೂ ಇರಲಿಲ್ಲ. ಹಳ್ಳಿ ಮಾತಲ್ಲಿ ಇತಿಹಾಸ ಭೋದಿಸುವುದೆಂದರೆ… ನಿಜಕ್ಕೂ ಹೊಸತನ ಹಾಗು ಕಷ್ಟ. ವೆರಿ ಫ್ರೆಂಡ್ಲಿ ಲೆಕ್ಚರರ್ ಎನಿಸಿಕೊಂಡಿದ್ದರು.
‘ಯೆಂಗಾಯ್ತು ಗೊತ್ತುರ್ಲಾ ಪಾಣಿ ಪಟ್ಕದ್ನಾ… ಲೇ ನಮ್ಮೊವ್ಕೆ ಯುದ್ದ ಅಂದ್ರೆ ಯೆಂಗ್ಮಾಡ್ಬೇಕು ಅನ್ನುದೇ ಗೊತ್ತಿರ್ಲಿಲ್ಲ ಕನ್ರೋ… ಅದ್ಯಾನಪಾ… ಕತ್ತಿವರ್ಸೆಯಂತೆ ದೊಣ್ಣೆ ವರ್ಸೆಯಂತೆ ಜಟ್ಟಿ ಕಾಳುಗುವಂತೇ… ಇದೇನೆಂದುರ್ಲಾ ಯುದ್ದಾ… ರಣರಂಗುದೆಲಿ ಇವೆಲ್ಲ ನಡ್ದವುರ್ಲಾ… ಕಚ್ಚೆಯ ಬಿಗ್ದಿ ಕಟ್ಕಂದು ತೋಳು ತೊಡಿಯ ಟಪ್ಟಪ್ಪಂತ ಬಡ್ಕಂಡು ಹಾ ಓ ಅಂತಾ ಸದ್ದ ಮಾಡ್ಕಂದು ಹಲ್ಲಕಿರ್ಕಂದು ಕಾಕ ವಡ್ಕಂದು ಜೈ ವೀರಾಂಜುಣೇಯಾ ಜೈ ಜೈ ಭದ್ರಕಾಳಿ ಅನ್ಕಂದು ಎದುರಾಳಿಯ ಮುಖವಾ ಮಿಕ ಮಿಕಾ ಅಂತ ನೋಡ್ಕಂದು ಕುಸ್ತಿಗೆ ಕರೀತಿದ್ರು ಕನ್ರೋ ನಮ್ಮ ಸೈನಿಕ್ರು… ಅಬ್ಬಬ್ಬಾ ಎಂತಾ ರಣ ವಿದ್ಯೆಯೊ… ಇವ್ರು ಯುದ್ದ ಭೂಮಿಲಿ ಅದೆಂಗೆ ಹೋರಾಡಿದ್ರೊ ಏನೊ ಅಪ್ಪಾ… ಅವ್ರೂ ಸುಮ್ಮಸುಮ್ಮನೆ ಪ್ರಾಣವ ರಾಜ್ನೆಸ್ರೆಲಿ ಬಿಟ್ರು ಕನ್ರೋ… ಆ ಪಾಣಿಪಟ್ ಯುದ್ದ ಆಯ್ತಲ್ಲಾ… ಒಂದಲ್ಲಾ ಎರಡಲ್ಲಾ ಮೂರು ಪಾಣಿಪಟ್ ಯುದ್ದುದೆಲೂ ನಮ್ಮವುರು ಮಣ್ಣ್ಮುಕ್ಕುದ್ರು ಕಂದುರ್ಲಾ… ಅಹಹಾ! ಇವ್ಕೆ ಒಂದು ಯುದ್ದೋಪಕರಣ ಗೊತ್ತಿರ್ಲಿಲ್ಲ. ಅದೇ ಮಚ್ಚು, ಚಾಕು ಕುಡ್ಲು ಬರ್ಜಿ ಕೊಡ್ಲಿ ಇವೇ ಕಂದುರ್ಲಾ ಇವ್ರ ಹತಾರಗೊಳು. ಇವಿಡ್ಕಂದು ಅದ್ಯಾವ್ ಪಾಣಿ ಮಟ್ಟು ಗೆಲ್ಲೋದೂ… ಲೇ; ತಿಳ್ಕಳೀ ಕಿಸೀ ಬ್ಯಾಡಿಹಲ್ಲಾ; ಅವ್ನು ಬಂದಿದ್ನಲ್ಲಾ ಬಾಬರ್ರೂ ಸದುರ್ವೇನ್ಲಾ ಅವುನೂ; ಇಸ್ತಾಂಬುಲ್ನಿಂದ ಪೆಶಾವರ್ದ ದಾರಿ ಯಿಡ್ಕಂದು ಉತ್ತರ ಪ್ರದೇಶುಕ್ಕೆ ಮರುಬೂಮಿ ದಾಟ್ಕ ಬಂದಿದ್ದ ಕಂದುರ್ಲಾ… ಪಾಣಿ ಪಟ್ಟು ಎಲ್ಲದೆ ಅಂತಾ ಗೊತ್ತುರ್ಲಾ; ಅದೊಂದು ಚಿಕ್ಕೂರು ಕನ್ರೋ… ಹೇಮು ಅಂತಾ ಹಿಂದೂ ದೊರೆ ಅಲ್ಲಿದ್ದ. ಅವ್ನೆಂತಾ ಸೈನ್ಯ ಮಡ್ಗಿದ್ದ ಗೊತ್ತುರ್ಲಾ… ಅಬ್ಬಬ್ಬಬ್ಬಾ ಎಲ್ರು ಜೆಟ್ಟಿಗಳೆ ಕಂದುರ್ಲಾ… ಪಟ್ಟಾಕ್ದ ಅಂದ್ರೆ ಅವುನ್ ಕಚ್ಚೆನೆ ಪಟ್ಟಂತ ಬಿಟ್ಟೋಯ್ತಿತ್ತು ಕಲಾ… ಅಂಗಾದ್ಮೇಲೆ ಅದ್ಯಾವ್ ಯುದ್ದನ್ಲಾ ಮಾಡುದೂ… ತಿಕಾ ಮುಚ್ಕಂದು ಯುದ್ದ ಬಿಟ್ಟು ಮರೆಗೆ ವೋಡೋಗ್ಬೇಕು ಅಷ್ಟೇ… ಎಲ್ಲ ರಣ ಕಿಂಕರ ಮಲ್ಲರೇ. ಅಂಗೆ ಮೇಯ್ಸಿ ಕೊಬ್ಸಿದ್ದ ರಾಜ. ಅವುನ್ಗೆ ತಾನೆ ಯೇನ್ಕೆಲ್ಸ ಯಿತ್ತೂ… ರಾಣಿತಕೋಗುದು ಬರುದು ಕುಸ್ತಿ ನೋಡುದು ಕಂಠೀಹಾರವ ಗೆದ್ದೋರಿಗೆ ಕೊಡೋದು; ಕಪ್ಪ ಕಾಣಿಕೆಗಳ ತುಬ್ಕಂದು ಮಜವಾಗಿರೋದು… ಅಷ್ಟೇ ಏನ್ದ್ರುಲಾ ರಾಜುರ್ಕೆಲ್ಸಾ… ಅಂಗಿರುವಾಗ ರಾಜುನ್ಗೆ ಯೇನ್ಲ ಯೆದುರ್ಕೇ… ‘ಸಾರ್ ಪಾಣಿ ಪಟ್ ಬಗ್ಗೆ ಯೇಳಿ’ ಲೇ ಗಮಾರ್ಗೊಳಾ ಅದ್ನಿಯಾ ನಾನೇಳ್ತಿರುದೂ. ಇಂತಾ ಇಸ್ಪಿಲಿ ಇಂತಿಂತೆವುರ್ಗೆ ಯುದ್ದ ಆಯ್ತು ಅನ್ನುದು ಚರಿತ್ರೆ ಅಲ್ಲಕಲಾ… ತಾಳ್ಕಂದು ಕೇಳ್ಕಲಾ… ಅವ್ನು ಬಾಬರ್ರು ಬಂದ್ನಲ್ಲಾ… ಎಷ್ಟಾನೆ ಕುದ್ರೆ ಕಾಲ್ದಳವ ಕರ್ಕಬಂದಿದ್ದುನ್ಲಾ… ಯೇಳ್ಳಾ… ಲೇ ಮಂಗಾ ಕೇಳಿಸ್ಕೋ ಅವುನು ಮರ್ಬೂಮಿಯಿಂದ ನಡ್ಕಂದು ಅನ್ನ ನೀರಿಲ್ದೆ ಐದಾರು ಒಂಟೆಗಳ ಜೊತೆ ಬೆರಳೆಣಿಕೆ ಸೈನಿಕರ ಜೊತ್ಗೆ ಬಂದಿದ್ದ ಕನ್ರೋ… ಅಕ್ಷೋಹಿಣಿ ಸೈನ್ಯನೇನು ಕರ್ತಂದಿರ್ಲಿಲ್ಲ.
ಆ ಒಂದೊಂದೂ ಊರುಗಳ ದಾಟುತ್ತಿದ್ದಂತೆಲ್ಲ ಎದೆಯ ಭಾರ ಕಡಿಮೆ ಆಗುತ್ತಿತ್ತು. ನಡೆದು ಬಂದ ದಾರಿ ನಡೆದವರಿಗೇ ಗೊತ್ತು. ಹಾಗೆ ಇರುಳಲ್ಲಿ ಸಾಗುವುದರಲ್ಲಿ ಏನೊ ಮಾಂತ್ರಿಕತೆ ಇದೆ. ಬೆಳಕು ತೋರಲಾಗದ್ದನ್ನು ಕತ್ತಲು ಬಿಂಬಿಸುತ್ತದೆ.
ಮರ್ಬುಮಿಲಿ ಏನೂ ಇರ್ಲಿಲ್ಲ… ಜನಾನೇ ಇರೋದಿಲ್ಲಾ. ಇನ್ನು ಸೈನ್ಯನೆಂಗೆ ಕಟ್ಕಬಂದಾನ್ಲಾ… ಲೇ ತಿಳ್ಕಳೀ ಒಂದು ಸಾಮ್ರಾಜ್ಯ ಕಟ್ಟೋದು ಅಂದ್ರೆ ಹುಡ್ಗಾಟ್ಕೆ ಅಲ್ಲ ಎಲ್ಲಿಂದ ಎಲ್ಲಿಗೆ ಬಂದಿದ್ದಾನ್ಲ ಅವನೂ… ರಾಮ ಜನ್ಮ ಬೂಮಿಲಿ ಬಂದಿದ್ದ ಕನ್ರೋ… ಅದಷ್ಟು ಸುಲಬ ಏನ್ರೋ… ಯಾವ ಶಕ್ತಿನೊ ಅಂಗೆ ಕರ್ಕಂದು ಬಂದಿದ್ದೂ… ಸನಾತನ ಹಿಂದೂ ಧರ್ಮದ ಸಾಮ್ರಾಜ್ಯವ ಅದೆಂಗೆ ಬೀಳ್ಸಿದ್ದಾ… ಅರ್ಥ ಮಾಡ್ಕೊಳ್ರೋ ಲೇ ದಡ್ಡ ಮಡ್ಡಿವಾ! ಯಂಗುರ್ಲಾ ನಮ್ಮೋರು ಯುದ್ದ ಮಾಡ್ತಿದ್ದುದೂ… ಅಮಾಯಕ ಹಳ್ಳಿ ಜನುರಾ ಮನೆಗೊಬ್ಬೊಬ್ಬ ಗಂಡ್ಸು ಬನ್ನಿ ಅಂತಾ ಕರಿಸ್ಬುಟ್ಟು ರಣರಂಗುದ ಮುಂದೆ ನಿಲ್ಲಿಸ್ತಿದ್ರು ಕಲಾ… ಅದ್ಯಾಕೆ ವೀರಾದಿ ವೀರರು ಮುಂದ್ನಿಕ್ಕತಿರ್ಲಿಲ್ಲಾ… ಬಾಣ ಬಿಟ್ರೆ ಮೊದಲು ಯೀ ಹಳ್ಳಿ ಬಡ್ಡೆತ್ತವು ಸಾಯ್ಲಿ ಅಂತಾ ಅಂಗೆ ಮುಂದೆ ಬನ್ನಿ ಅಂತಾ ನಿಲುಸ್ತಿದ್ರೂ. ಯೀ ದಡ್ಬಡ್ಡತ್ತವ್ಕು ಗೊತ್ತಾಯ್ತಿರ್ಲಿಲ್ಲ. ನಮ್ಮರಾಜ ನಮ್ಮುನ್ನೆ ನಂಬಿ ಮುಂದೆ ಬಿಟ್ಟವ್ನೆ ಅಂತಾ ಯುದ್ದ ತಿಳೀದೆ ಯೆದ್ರಾಳಿ ಮುಂದೆ ಪಟ್ಟಂತ ಪರಾಣ ಬಿಡ್ತಿದ್ರು. ಇದು ಯುದ್ದನೇಂದ್ರುಲಾ? ಅವ್ರೆಲ್ಲ ಯಾರಾಗಿದ್ರು. ಯೋಚ್ನೆ ಮಾಡಿದ್ದಿರ್ಲಾ? ಅದೇ ಬ್ಯಾಡ್ರು ಮಾದ್ರು ವಲೇರು ರೈತ್ರು ಅಂತಾ ಇಂತಾ ಕೆಳ ಜಾತಿಯೋರು ಕಂದ್ರಲೇ. ಚರಿತ್ರೆನಾ ಸರ್ಯಾಗಿ ತಿಳ್ಕಳ್ರೊ. ಯೀ ರಾಜುರ್ರು, ಪಾಳೆಗಾರ್ರು ಯಾಕ್ರೊ ಅಂತಾ ಕೋಟೆಗಳ ಕಟ್ಕತಿದ್ರು? ಯುದ್ದ ಮಾಡುಕಾಗ್ದೆ ಕೋಟೆ ಕೊತ್ತಲಲ್ಲಿ ಅವುಸ್ಕತಿದ್ರು. ಆಗ ನಮ್ಮ ಸೈನಿಕ್ರು ಯೇನ್ಮಾಡ್ತಿದ್ರು? ಕೋಟೆ ಮ್ಯಾಲತ್ತಿ ಕಲ್ಲೆಸಿತಿದ್ರು ಎಣ್ಣೆ ಕಾಯ್ಸಿ ಸುರೀತಿದ್ರು ಬರ್ಜಿ ಎಸೀತಿದ್ರು! ಇದೇನೇಂದ್ರುಲಾ ಸಾಮ್ರಾಜ್ಯ ಕಟ್ಟೋರಾ ಯೇಗ್ತೀ… ಯುದ್ದ ಮಾಡುಕಾಗ್ದೆಯಿರೋರು ರಣರಂಗ ಡೊಂಕು ಅಂತಿದ್ರಂತೇ… ಕತ್ಲಾಯ್ತು ಅಂತಾ ಉಣ್ಣುಕೆ ವೋಯ್ತಿದ್ರಂತೆ! ಬಾಳ ಬೇಜಾರಾಯ್ತುದೆ; ದುಃಖ ಅವಮಾನ ಆಯ್ತದೆ. ಸಾಮ್ರಾಜ್ಯ ಕಟ್ಟೊ ರೀತಿನೇ ಇದೂ! ದಾಳಿ ಮಾಡ್ಕಂದು ಕಿತ್ಕಂದೋರ ಪರ ಇಲ್ಲ ಕನ್ರೋ. ಕಿತ್ಕೋ ಅಂತಾ ಸುಮನೆ ನಿಂತಿದ್ದೋರು ಚರಿತ್ರೆಲಿ ಯೆಸ್ಟು ಜನರೋ. ಆ ರಾಜ ಸೋಲ್ಲಿ ಅಂತಾ ಯೀ ರಾಜಾ; ಇವನ್ ಕೊಲ್ಲೀ ಅಂತಾ ಅವ್ನು ಇವ್ನು… ಹಿಂಗೇ ಒಗ್ಗಟ್ಟಿಲ್ದೆ ಸೋತೋದ್ರಲ್ಲಾ; ಇದ್ರ ಮರ್ಮ ಏಂದ್ರುಲಾ… ಯಾರೆಲು ಒಗ್ಗಟ್ಟಿರ್ಲಿಲ್ಲಾ. ದೇಶಾ ಅನ್ನೊ ಪ್ರಜ್ಞೆನೇ ಇರ್ಲಿಲ್ಲಾ. ಅಂತದ್ಮೇಲೆ ಅದ್ಯಾವ್ದಪ್ಪ ರಾಷ್ಟ್ರಪ್ರೇಮಾ… ಅವ್ನು ಬಾಬರ್ರು ಹಿಂದೂಸ್ತಾನನೆಲ್ಲ ವಡ್ಕಬೇಕು ಅಂತಾ ಪಾಣಿಪಟ್ಗೆ ಬರ್ಲಿಲ್ಲಾ. ಏನೊ ಒಂದಿಷ್ಟು ಜಾಗ ಮಾಡ್ಕಮಾ ಅಂತಾ ದೇವ್ರೆಸ್ರೇಳ್ಕ ಬಂದ! ಬರುವಾಗ ನಾಕೊಂಟೆ, ನಾಕಾಳು ಒಂದೇ ಒಂದು ಪಿರಂಗಿ ತಂದಿದ್ದಾ. ಪಿರಂಗಿ ಪಿರಂಗಿ ತಂದಿದ್ದ ಕಂಡ್ರುಲಾ! ಯೆಂತಾ ಪಿರಂಗಿ ಅದೂ ? ಅಲ್ಲಿಗಂಟ ಇಂತೆದೊಂದು ಆಯ್ದ ಅದೆ ಅನ್ನುದೆ ನಮ್ಮೊವ್ಕೆ ಗೊತ್ತಿರ್ಲಿಲ್ಲ ಕಂಡ್ರುಲಾ… ಅವುನ್ಮುಂದೆ ಆನೆ ಸಾಲು ಕುದ್ರೆ ಸಾಲು ಯೇನಾದುವ್ರಲಾ… ಎಲ್ಲ ಕಿತ್ಕಂದು ದಿಕ್ಕಾಪಾಲಾಗಿ ರಣಹೇಡಿಗಳಂತೆ ಬಿದ್ದೋಡೋದೊ! ಅವು ಅವುರ್ದೇ ಕಾಲಾಳುಗಳ ತುಳ್ದು ಸಾಯಿಸ್ದೋ ಅವುನ್ಯಾರೊ ಒಬ್ಬ ಬುದ್ದುವಂತ ಬರೀತಾನೇ… ಒಂದೇ ಒಂದು ಬಾಬರನ ಪಿರಂಗಿ ಎಂಟುನೂರು ವರ್ಷಗಳ ಕಾಲ ಭರತ ಖಂಡವನ್ನು ನಿರಾಯಾಸವಾಗಿ ಆತು ಎಂದು. ಸಾಕಲುವೇಂದ್ರುಲಾ ಬಹುಮಾನಾ! ಜುಜುಬಿ ಬಿತ್ರಿ ಬಿಕಾರಿಗಳು ಏನ್ಮಾಡ್ತರೆ ಅಂತಾ ಎದುರ್ನೋಡ್ತಾ ಇದ್ರು ನಮ್ಮೋರು. ಬಾಬರ್ ಪಿರಂಗಿ ಹಾರಿಸಿದ್ದ. ಭಯಂಕರ ಸದ್ದಿನಿಂದ ಬೆಂಕಿಯ ಗುಂಡುಗಳು ಆನೆ ಕುದುರೆ ಸೈನಿಕರ ಮೇಲೆ ಬಿದ್ದಿದ್ದವು. ಚಿತ್ತಂಚಿರಿಯಾಗ್ಬುಡ್ತು ಪಾಣಿಪಟ್ಟು. ಕ್ಷಣ ಮಾತ್ರದಲ್ಲಿ ಸೋಲೊಪ್ಪಿಕೊಂಡರು. ನಮ್ಮು ರಾಜರ ಕತೆ ಇಷ್ಟೆ ಕಂದ್ರೋ. ಆ ಪೋರ್ಚ್ಗೀಸ್ರು ಡಚ್ಚರು ಬ್ರೀಟೀಷರು ಬಂದಾಗಲೂ ಯಿದೇ ಪಾಡಾಯ್ತು. ಬಾಬರ್ರೂ ಪಿರಂಗಿ ತಂದಿದ್ದ. ಬ್ರಿಟೀಷರು ಹಡಗಿನಿಂದ ಬಂದು ವ್ಯಾಪರ ಮಾಡ್ತಿವಿ ಅಂತಾ ಬಂದು ಬಾಬರ್ನಂತ ಬಾಬರ್ನ ಜನುಕ್ಕೆ ಪಿರಂಗಿ ಬದ್ಲಾಗಿ ಬಂದೂಕು ಪಿಸ್ತೂಲು ಗನ್ನು ಸಿಡಿಮದ್ದುಗಳ ಸಿಡಿಸಿದರು. ಮೋಘಲರು ಸೋತಿದ್ದರು. ನಮ್ಮವರು ಆಗ ಏನ್ರಪ್ಪ ಮಾಡ್ತಿದ್ರು.. ಯೇಳ್ರೊ ಹಲ್ಲ ಕಿಸೀಬ್ಯಾಡಿ… ಯಿವತ್ತಾದ್ರೂ ನಾವು ಯುದ್ದ ಗೆಲ್ಲುವಂಗಿದ್ದೇವೆನ್ರೋ… ಆ ಬಂದೂಕ ಹೆಗುಲ್ಗೆ ಹಾಕಂದು ಬ್ರಿಟೀಸ್ನೋನು ನಿಂತಿದ್ರೇ ದೊಣ್ಣೆವರ್ಸೆಲಿ ನಿನ್ನ ಹ್ಯಾಟು ಎಗುರೋಗಿ ಬುಂಡೆ ಬಿಚ್ಚೋಗುವಂಗೆ ವಡೀತಿನಿ ಬಾಲ ಪರಂಗಿಯೋನೇ ಅಂತಾ ನೆಗೆದಾಡ್ಕಂದು ವೋದ್ರೆ ಆ ಕಂಪನಿ ಸೈನಿಕನಿಗೆ ಅದೊಂದು ಲೆಕ್ಕವೇ… ಇವುನ್ಗೇನು ಹುಚ್ಚಿಡೀತೇ ಅನ್ಕಂಡು ಬಂದೂಕ ಹೆಗಲಿಗೇರಿಸಿ ಗುರಿಮಾಡುವಾಗ ಆ ಬಂದೂಕ್ನ ತುದಿಗೆ ಇವ್ನು ಲಾಟಿನೊ ದೊಣ್ಣೆನೊ ಅಡ್ಡ ಇಡ್ಕಂಡು ಕೆಕ್ಕರ್ಸಿ ನೋಡುದ್ರೆ ಅವ್ನು ಏನನ್ಕಬೋದುರ್ಲಾ… ಯೀ ಉಳಾನ ಎಗುರ್ಸೋಣ ಅಂತನ್ಸುದಿಲ್ಲುವೇ… ಡಮಾರ್ ಎಂದು ಗುಂಡು ಹಾರಿಸಿದ ಕ್ಷಣ ಮಾತ್ರದಲ್ಲಿ ಆ ಶೂರ ಸತ್ತು ಬೀಳ್ತಿದ್ನಲ್ಲಾ… ಯೆಂಗ್ರಪ್ಪ ಯುದ್ದ ಗೆಲ್ಲುದೂ! ಅದೇ ಕತೆ; ಗುಲಾಮಗಿರಿನೇ ನಮ್ಮ ದಿಗ್ವಿಜಯ… ನಾಳಕೆ ತಿರ್ಗ ಬತ್ತಿನಿ; ಮುಂದುವರಿಸ್ತೀನಿ’ ಎಂದು ಹೇಳಿ ಆ ಲೆಕ್ಚರರ್ ಹೊರಟು ಹೋಗುತ್ತಿದ್ದರು.
ಏನೊ ಎಚ್ಚರವಾಯಿತು ಅವರ ಪಾಠದಿಂದ. ಸುಶೀಕ್ಷಿತ ಭಾಷೆಯಲ್ಲಿ ಇತಿಹಾಸವನ್ನು ಕಂಠಪಾಠ ಮಾಡಿದಂತೆ ಹೇಳುವ ಅದ್ಯಾಪಕರಿದ್ದರು. ಬೋರು ಹೊಡೆಸುತ್ತಿದ್ದರು. ‘ದಲಿತ’ ಪತ್ರಿಕೆಗೆ ಉಗಿದು ಎಕ್ಕಡದಲ್ಲಿ ಬಡಿದು ಹೋಗುವವರೂ ಇತಿಹಾಸದಲ್ಲಿ ಲಯವಾದ ಅಂತಹ ಮಂದಿಯೇ ಎನಿಸಿತು. ನಾವು ಪಿರಂಗಿ ಬಂದೂಕುಗಳನ್ನೆ ಪೆನ್ನಿನ ಮೂಲಕ ಬಳಸುತ್ತಿದೇವೆ ಎನಿಸಿ ಹೆಮ್ಮೆ ಬಂತು. ಹಾಸ್ಟೆಲಿಗೆ ಬಂದು ಅಧ್ಯಾಪಕರ ಪಾಠವನ್ನು ಅನುಕರಿಸಿ, ಶ್ರೀಧರನಿಗೆ ಹೇಳಿದೆ. ಬಿದ್ದು ಬಿದ್ದು ನಗಾಡಿದ. ‘ಲೇ ನೀನೊಬ್ಬ ಒಳ್ಳೆಯ ನಟ ಕಣೊ… ಯಾವ್ದಾದ್ರೂ ನಾಟ್ಕದಲ್ಲಿ ರೋಲ್ಮಾಡೊ’ ಎಂದ. ಆಗಲ್ಲ ಎಂದೆ. ಸಂಜೆಗೆ ಬಾ ಎಂದಿದ್ದರಲ್ಲವೆ ಸಾರ್… ಹೋಗೋಣ ಎಂದು ಆಗ ತಾನೆ ಬೆಳೆಯುತ್ತಿದ್ದ ಕುವೆಂಪು ನಗರಕ್ಕೆ ಹೋದೆ. ಚಾರ್ಮ್ಸ್ ಸಿಗರೇಟು ಸೇದುತ್ತ ಹಾಲ್ನಲ್ಲಿ ಕೂತಿದ್ದರು. ಗಡಸುದನಿ. ಕೂರಿಸಿಕೊಂಡು ಹೇಳಿದರು. ‘ಒಬ್ಬ ಹೋರಾಟಗಾರ ಅಭಿಮಾನಿಗಳನ್ನು ಸಂಪಾದಿಸುವುದಲ್ಲ; ಆತ ಈ ದುಷ್ಟ ಸಮಾಜದಲ್ಲಿ ಮೊದಲು ಗಳಿಸುವುದು ಅಪಮಾನ ನಿಂದನೆ ನಿರಾಕರಣೆಗಳನ್ನೆ. ಅವೇ ಅವನ ಮೆಟ್ಟಿಲಾಗಬೇಕು. ಅವನಿಗೆ ಬಂದ ಪದಕಗಳೆಂದು ತಿಳಿಯಬೇಕು. ಯಾವನೊ ಒಬ್ಬ ಸಿನಿಮಾ ನಟ ತೆರೆ ಮೇಲೆ ಕಾಣಿಸಿಕೊಂಡು ಉದಾತ್ತನಾಗಿ ಅಭಿಮಾನಿಗಳನ್ನು ಗಿಟ್ಟಿಸಿಕೊಂಡು ದೊಡ್ಡ ಹೀರೊ ಆಗೋದೆ ಒಂದು ಕಾಮಿಡಿ, ಟ್ರಾಜಿಡಿ, ವಿಪರ್ಯಾಸ. ತೆರೆಯ ಮೇಲಿನ ನ್ಯಾಯಕ್ಕೆ ಮಿಡಿವ ಪ್ರೇಕ್ಷಕರು ಸಿನಿಮಾ ಥಿಯೇಟರನಿಂದ ಹೊರ ಬಂದ ಕೂಡಲೆ ಈ ವ್ಯವಸ್ಥೆಯ ವ್ಯಾಘ್ರರಾಗಿಬಿಟ್ಟಿರುತ್ತಾರೆ. ಅಂತಹ ಕ್ರೂರ ವ್ಯವಸ್ಥೆಯ ಮುಂದೆ ನಾವು ಹೇಗಿರಬೇಕು… ಯಾವ ನುಡಿಗಟ್ಟುಳಲ್ಲಿ ತುಕ್ಕು ಹಿಡಿದ ಅವರ ಮನಸ್ಸಿನ ಬೀಗಗಳನ್ನು ಕಳಚಬೇಕು? ಬಹಳ ಕಷ್ಟ. ಇಷ್ಟು ದೀರ್ಘಕಾಲದ ನನ್ನ ಏಕಾಂಗಿ ಹೋರಾಟದಲ್ಲಿ ಈ ಪ್ರಶ್ನೆಗೆ ಉತ್ತರ ಹುಡುಕುತ್ತಲೆ ಇರುವೆ. ಎಲ್ಲೊ ಮಿಂಚಿದಂತಾಗುತ್ತದೆ. ಗುಡುಗಿ ಮಳೆ ಬಂತಾಗಿ ಗಾಳಿ ತೇಲಿಸಿಕೊಂಡು ಹೋಗಿ ಬಿಡುತ್ತದೆ. ಮತ್ತೆ ಮತ್ತೆ ಎದುರಾಗುತ್ತಲೆ ಇರಬೇಕು.
ಒಂದು ವಿನಂತಿಗೆ ಒಂದು ದಂಗೆಗೆ ಬಗ್ಗುವುದಿಲ್ಲ ಈ ಸಮಾಜಗಳು. ಒಂದು ಸಮಾಜವನ್ನು ಎದುರುಹಾಕಿಕೊಳ್ಳುವುದು ಕಷ್ಟ ಅಲ್ಲ; ನಿಭಾಯಿಸಬಹುದು. ಈ ದೇಶದಲ್ಲಿ ಎಷ್ಟು ಜಾತಿಗಳಿವೆಯೊ ಅಷ್ಟೇ ಸಮಾಜಗಳಿವೆ ಅವುಗಳಲ್ಲೆ ಒಡಕಿವೆ. ಒಟ್ಟಿಗೇ ಅಷ್ಟೂ ಸಮಾಜಗಳ ಕೋಪಕ್ಕೆ ದ್ವೇಷಕ್ಕೆ ಒಳಪಡಬೇಕಾಗುತ್ತದೆ ನಮ್ಮಂತವರು. ಇನ್ನು ಆ ಅಂಬೇಡ್ಕರ್ ಎಷ್ಟು ತರಹದಲ್ಲಿ ಈ ಧೂರ್ತ ಸಮಾಜಗಳ ತಿರಸ್ಕಾರಕ್ಕೆ ಒಳಪಟ್ಟಿರಬೇಕೂ… ಯಾರಿದ್ದರು ಅವರ ಬೆನ್ನ ಹಿಂದೆ? ಗಾಂಧಿಯ ಹಿಂಬಾಲಿಸಿ ಸ್ವಾತಂತ್ರ್ಯ ಬೇಕೆಂದು ಇಡೀ ದೆಶದ ಸಮಾಜಗಳೇ ಒಂದಾಗಿ ಕೂಗಿದ್ದವು. ಆಗ ಅಂಬೇಡ್ಕರ್ ಹಿಂದೆ ಯಾವ ಸಮಾಜಗಳಿದ್ದವು.? ಅವರ ಆಯ್ಕೆ ಯಾವುದಾಗಿತ್ತು. ‘ಬಹಿಷ್ಕೃತ ಭಾರತೀಯರು; ‘ಮೂಕನಾಯಕ’ ಪತ್ರಿಕೆಗಳನ್ನು ತಂದರು. ಯಾರು ಓದುತ್ತಿದ್ದರು. ಅದನ್ನು ? ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂದು ಚಳುವಳಿ ಮಾಡುತ್ತಿದ್ದಾಗ ಅಂಬೇಡ್ಕರ್ ಗಾಂಧಿಗೆ ಏನೆಂದು ಪತ್ರ ಬರೆದರು… ‘ನೀವು ಒಂದು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ಮುಂದೆ ಹೋರಾಡುತ್ತಿದ್ದೀರಿ ಮಿಸ್ಟರ್ ಗಾಂಧೀ… ನಾವು… ದೇಶ ಭ್ರಷ್ಟರು… ದೇಶವೇ ಇಲ್ಲದೆ ಬಹಿಷ್ಕಾರಕ್ಕೆ ಒಳಪಟ್ಟವರು ಯಾವ ಬಗೆಯ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಳ್ಳಬೇಕೂ… ನೀವು ಪಡೆವ ಸ್ವಾತಂತ್ರ್ಯವು ನಮ್ಮ ಅಸ್ಪೃಷ್ಯರ ಕೇರಿಯ ಬಾಗಿಲ ತನಕ ಬರುವುದುಂಟೇ’ ಎಂದು ಕೇಳಿದ್ದು ಚಾರಿತ್ರಿಕ ಸತ್ಯ. ಅದಕ್ಕೆ ಉತ್ತರ ಕೊಡಲು ಇವತ್ತಿಗೂ ಯಾವ ಸಮಾಜಗಳಿಗೂ ನೈತಿಕ ನಾಲಿಗೆ ಇಲ್ಲಾ. ನಮ್ಮ ಅಭಿವ್ಯಕ್ತಿಗೆ ಯಾರ ಒತ್ತಾಸೆಯೂ ಬೇಕಾಗಿಲ್ಲ. ಅಂಬೇಡ್ಕರ್ ಜಗತ್ತು ತನ್ನತ್ತ ನೋಡುವಂತೆ ಬರೆದರಲ್ಲವೇ. ನಿಷ್ಠೂರವಾಗಿಯೇ ಬದುಕಬೇಕು ಬರೆಯಬೇಕು.
ಯಾರ ಮೆಚ್ಚುಗೆಗಾಗಿ ಕಾಯಬೇಕಾಗಿಲ್ಲ. ಅವರ ಮನಸ್ಸಿನ ಕೊಳಕನ್ನು ಕದಲಿಸಿದ್ದೀಯೆ ಎಂದೇ ತಿಳಿ. ಒಂದಲ್ಲ ಒಂದು ದಿನ ಆ ಕೊಳಕು ಕಳೆದು ತಿಳಿಯಾಗುತ್ತದೆ ಮನ. ನಾವು ಭಯ ಪಡಬೇಕಾದದ್ದು ನಮ್ಮ ನಡೆಯ ಬಗ್ಗೆಯೇ! ಹಾಗಾಗಿ ನಿನ್ನ ದಲಿತತನವನ್ನು ಬಿಟ್ಟುಕೊಡಬೇಡ. ನಮ್ಮನ್ನು ನಿಂದಿಸಿ ನಿರಾಕರಿಸುವಂತೆ ಒಂದು ದಿನ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ. ಆ ವಿಶ್ವಾಸ ಯಾವತ್ತೂ ಇರಬೇಕು. ನಿಮ್ಮ ಬರಹ ಅಷ್ಟಾದರೂ ಅವರನ್ನು ಕೆಣಕಿದೆಯಲ್ಲಾ! ಅನೂಚಾನವಾಗಿ ಕೂಪದ ಒಡೆತನದಲ್ಲಿಯೆ ನಿದ್ರಿಸುತ್ತಿದ್ದವರ ನಿದ್ದೆಯನ್ನು ನಮ್ಮ ಒಂದೇ ಒಂದು ಪ್ರಶ್ನೆ ಕೆಡಿಸಬಲ್ಲದು. ಎಬ್ಬಿಸಿ ತೊಳೇರಿಸುವಂತೆ ಮಾಡಿಬಿಡುತ್ತದೆ. ಕಾಯಬೇಕಾದ್ದಿಲ್ಲ. ಅದು ನಮ್ಮ ಎದಿರೇ ಘಟಿಸುತ್ತಿರುತ್ತದೆ. ನಾವದನ್ನು ಸರಿಯಾಗಿ ನಿಭಾಯಿಸಬೇಕು ಎಂದು ಧೈರ್ಯ ತುಂಬಿದರು. ಚಹಾ ಎರಡು ಬಾರಿ ಕುಡಿಸಿದ್ದರು. ಧನ್ಯತೆಯಿಂದ ಎದ್ದು ಬಂದಿದ್ದೆ.
ಎಲ್ಲಿಯ ಆ ಕೊಡಂಬಳ್ಳಿ ತಾಯ ಊರು ಆ ಸಂತೆ ಬೀದಿ ನನ್ನೂರ ಆ ನರಕ ಎಂದು ಯೋಚಿಸುತ್ತ ಹಾಸ್ಟೆಲಿಗೆ ಬರುವಷ್ಟರಲ್ಲಿ ಕತ್ತಲಾಗಿತ್ತು. ಶ್ರೀಧರನ ಜೊತೆ ಮೆಸ್ ಹಾಲ್ಗೆ ಬಂದೆ. ಮಹರಾಜ ಕಾಲೇಜು ಹಾಸ್ಟೆಲಿನ ಊಟದ ವೈಭವವನ್ನು ವರ್ಣಿಸಲಾಗದು. ಹಳಸಿದ್ದ ರಾಗಿ ಮುದ್ದೆಯ ತೊಳೆದುಕೊಂಡು ತಿನ್ನುತ್ತಿದ್ದ ಆ ನಾನೆಲ್ಲಿ ಈಗ ಇಲ್ಲಿ ಈ ನಾನೆಲ್ಲಿ… ಊಟದ ಸಡಗರದ ತಟ್ಟೆಯ ಮುಂದೆಯೂ ಶ್ರೀಧರ ತಮಾಷೆ ಬಿಡುತ್ತಿರಲಿಲ್ಲ. ಶಿವರಾಮ ಎಂಬ ಕರಾಟೆ ಪಟು ಯಾವಾಗಲು ನಮ್ಮ ಜೊತೆಯೆ ಊಟಕ್ಕೆ ಬರುತ್ತಿದ್ದ. ನಾನೂ ಅವರಿವರನ್ನು ಮಿಮಿಕ್ ಮಾಡುವುದರಲ್ಲಿ ಪಳಗಿದ್ದೆ. ಉದ್ದನೆಯ ಎರಡು ಬೆಂಚು ಟೇಬಲಿನ ಸಾಲುಗಳಿದ್ದವು. ಕೆಲವರು ನಮ್ಮ ಮುಂದೆ ಕೂರುತ್ತಿರಲಿಲ್ಲ. ಅಂತವರು ಕೊನೆಯ ಮರೆಗೆ ಸರಿಯುತ್ತಿದ್ದರು. ಆ ಪರಿ ರೈಸ್ ಬಾಂಡ್ ಅವರಾಗಿರುತ್ತಿದ್ದರು. ನಾವಂತು ಒಂದಿಷ್ಟು ಕೋಳಿ ತಿಂದಂತೆ ಕೈ ತೊಳೆಯುತ್ತಿದ್ದೆವು.
ಆ ದೊಡ್ಡ ಸ್ಟೀಲ್ ತಟ್ಟೆ ತುಂಬ ಅನ್ನ ಬಡಿಸಿಕೊಂಡು ಉಣ್ಣುವ ಪರಿ ನಮಗೆ ಮಜಾ ನೀಡುತ್ತಿತ್ತು. ಅವನು ತಿನ್ನುವ ಪರಿಯನ್ನು ನಾನು ಅಣಕಿಸುತ್ತಿದ್ದೆ. ಪರೋಕ್ಷವಾಗಿ ಡೈಲಾಗ್ ಹೊಡೆಯುತ್ತಿದ್ದೆ. ‘ಕ್ರೊಕಡೈಲ್ ಸ್ಟಮಕ್; ಪುಲ್ ಮೀಲ್ ಫಿನಿಸ್’ ಎಂದು ರಾಗವಾಗಿ ಹೇಳುತ್ತಿದ್ದಂತೆಯೆ ಶ್ರೀಧರ ಕೆಮ್ಮಿಕೊಂಡು ನೆತ್ತಿಗೇರಿ ನಗಾಡಲು ಆಗದೆ ಆಚೆ ಹೋಗಿ ಕೈ ತೊಳೆದುಕೊಳ್ಳುತ್ತಿದ್ದ. ‘ಇನ್ನೊಂದ್ಸಲಾ ಆ ಡೈಲಾಗ್ ಹೊಡಿಯೊ’ ಎಂದು ತಡ ರಾತ್ರಿ ತನಕ ನಗುತ್ತಿದ್ದ. ಆ ತರದ ಕೀಟಲೆಗೆ ಹೆದರಿ ಆ ಕೆಲವರು ನಾವು ಊಟ ಮುಗಿಸಿ ಎದ್ದು ಹೋದ ನಂತರವೇ ಊಟಕ್ಕೆ ಧೈರ್ಯವಾಗಿ ಹೋಗುತ್ತಿದ್ದುದು. ಅವನ ಬಾಯಿ ಅಗಲವಾಗಿತ್ತು. ಕಣ್ಣರಳಿಸಿ ಒಂದೇ ಸಲಕ್ಕೆ ಅಷ್ಟಗಲ ಕೈ ತುಂಬ ಅನ್ನ ಕಲೆಸಿ ಬಯಿಗೆ ಇಟ್ಟುಕೊಳ್ಳುವಾಗ ಅವನ ಬಾಯಿ ವಿಶಾಲವಾಗಿ ಮೊಸಳೆ ಬಾಯಂತೆ ತೆರೆದುಕೊಳ್ಳುತ್ತಿತ್ತು. ಅವನ ಹಲ್ಲುಗಳೂ ಕೂಡ ಓರೆ ಕೋರೆಯಾಗಿದ್ದವು. ಹಾಗೆ ಉಪಮೆಗಳ ಮೂಲಕ ಅನೇಕರಿಗೆ ವಿಚಿತ್ರವಾದ ನಾಮಕರಣಗಳ ಮಾಡಿದ್ದೆ. ತಮಟೆ ನಗಾರಿ ವಾಲಗ ಇತ್ಯಾದಿ ಪರಿಕರಗಳನ್ನು ಅವರವರ ವ್ಯಕ್ತಿತ್ವಕ್ಕೆ ಒಗ್ಗುವಂತೆ ಅನ್ವಯಿಸಿ ಅವರ ಮೂಲ ಹೆಸರೇ ಬಿಟ್ಟುಹೋಗುವಂತೆ ಕಿತಾಪತಿಯನ್ನೂ ಮಾಡುತ್ತಿದ್ದೆ. ‘ಹೇ ಅವನೆಲ್ಲೊ ವಾಲ್ಗಾ… ಬರ್ಲಿಲ್ವೇನೊ ಅವನು ನಗಾರಿ… ಪಿಕಾಸಿ… ಮಚ್ಚು… ಬ್ಲೇಡೂ’ ಎಂದು ಗೆಳೆಯರು ಸಲೀಸಾಗಿ ಕರೆಯುತ್ತಿದ್ದರು. ಅದರಿಂದ ಅನೇಕರಿಗೆ ಇರಿಸು ಮುರಿಸಾಗುತ್ತಿತ್ತು. ‘ಯಾವನೊ ಅಂಗೆ ಅಡ್ಡೆಸರು ಕಟ್ಟಿದ್ದು’ ಎಂದು ಪರಿಶೀಲಿಸುತ್ತಿದ್ದರು. ಅಮಾಯಕನಂತೆ ಗೊತ್ತಿಲ್ಲ ಎನ್ನುತ್ತಿದ್ದೆ. ಹೇ,. ಅದೆಂಗೊ ನೀನು; ಅಲ್ ನೋಡುದ್ರೆ ಅಲ್ಲಂಗಿರ್ತಿಯೇ, ಇಲ್ಲನೋಡುದ್ರೆ ಇಲ್ಲಂಗಿರ್ತಿಯೇ…ಯಾವ್ದೋ ನಿನ್ನ ಒರಿಜಿನಾಲಿಟಿ ಎಂದು ಕರಾಟೆ ಪಟು ಶಿವರಾಮು ಕುತೂಹಲದಿಂದ ಕೇಳುತ್ತಿದ್ದ. ಇಲ್ಲಣ್ಣಾ; ನಾನು ವರ್ಜಿನಲ್ ಅಲ್ಲ ಅಂತಾ ನಮ್ಮಪ್ಪನೇ ಚಿಕ್ಕಪ್ಪ-ದೊಡ್ಡಪ್ಪಂದೀರೇ ಡೂಪ್ಲಿಕೇಟ್ ಅಂತಾರೆ’ ಎಂದಾಗ ‘ತಪ್ಪು ತಿಳಿ ಬ್ಯಾಡೋ ವಾಟ್ ಎಕ್ಸಾಟ್ಲಿ ಯೂ ಆರ್’ ಎಂದು ಬಿಡಿಸಿ ಕೇಳುತ್ತಿದ್ದ. ‘ಅಲ್ಲಿ ನೋಡಿದ್ರೆ ಕ್ರಾಂತಿಕಾರಿ ಇಲ್ಲಿ ನೋಡಿದ್ರೆ ಜೋಕರ್…. ಇದೇನೋ ಇದು’ ಎನ್ನುತ್ತ ಚಾರ್ಲಿ ಚಾಪ್ಲಿನ್ ತರ ಕಣ್ಣು ಮಿಣುಗುಟ್ಟಿಸುತ್ತಿದ್ದ. ಆ ಶಿವರಾಮನೊ ಸಕಲಕಲಾವಲ್ಲಭನಾಗಿ ನನಗೆ ಅಂತಹ ಪ್ರಶ್ನೆ ಕೇಳುವುದೇ ತಮಾಷೆಯಾಗಿತ್ತು.
ಶಿವರಾಮನೇ ನಮಗೆ ಮನರಂಜನೆಯ ಕಲಾವಿದನಾಗಿದ್ದ. ಎಲ್ಲವೂ ಗೊತ್ತು ಗೊತ್ತು ಎನ್ನುತ್ತಿದ್ದ. ‘ಅಣ್ಣಾ ಹೆರಿಗೆ ನೋವು ಅಂತಾರಲ್ಲ ಅಂಗಂದ್ರೆನಣ್ಣಾ’ ಎಂದು ಮುಗ್ಧನಾಗಿ ಕೇಳಿದ್ದೆ. ಸಾತ್ ಕೊಡುವುದರಲ್ಲಿ ಸದಾ ಸಿದ್ಧನಾಗಿರುತ್ತಿದ್ದ ಶ್ರೀಧರ. ಶಿವರಾಮು ನಮಗೆ ಸೀನಿಯರ್. ‘ಹೇಯ್ ಅದೇನ್ ಗೊತ್ತಿಲ್ವೇನೋ ಮಕ್ಕಳು ಹುಟ್ಟುತವಲ್ಲ ಅದರದ್ದು ಪೇಯ್ನ್ ಕಣೋ’ ಎನ್ನುತ್ತಿದ್ದ. ‘ಅದೆಂಗಣ್ಣಾ ಪೇಯ್ನು…. ನಾವು ಕಂಡೇ ಇಲ್ವಲ್ಲಾ’ ಓ ಹೋ ನೀವಿಷ್ಟು ದಡ್ಡರಾದ್ರೆ ಬಿ.ಎ. ಮುಗಿಸೋಕೆ ನಿಮ್ಮ ಕೈಲಾಗುವುದಿಲ್ಲ ಬಿಡೀ.. ಅದೆಂಗಪ್ಪಾ ಅಂದ್ರೆ ಪೇನ್ ಇಂಗೇ ಎಂದು ಕೊಠಡಿಯ ಮೂಲೆಗೆ ಮುಖ ಹಾಕಿ ಕಾಲಗಲಿಸಿ ಕೂತು; ಕಂಬಳಿ ಮರೆಮಾಡಿಕೊಂಡು ಥೇಟ್ ಹೆರಿಗೆ ಬೇನೆಯ ಹೆಂಗಸರಂತೆಯೇ ನರಳಾಡುತ್ತಾ ಹೊಟ್ಟೆ ಸವರಿಕೊಳ್ಳುತ್ತಾ… ಅಂದರೆ ತಲೆದಿಂಬ ಬನಿಯನ್ ಒಳಗೆ ಹಾಕಿಕೊಂಡು ಮಗು ಹೊರಗೆ ಬಂದೇ ಬಿಟ್ಟಿತು ಎಂಬಂತೆ ದಿಂಬನ್ನು ತೆಗೆದು ತೊಡೆ ಮೇಲೆ ಮಲಗಿಸಿಕೊಂಡಂತೆ ಕಂಬಳಿಯ ಹೊದ್ದಿಸಿ ಳ್ಳುಳ್ಳುಳ್ಳು ಯೀ ಎಂದು ಆಗಲೇ ಹಾಲುಡಿಸುವ ತಾಯಾಗಿ ನಟಿಸಿ ಆ ನೋವು ನಲಿವನ್ನು ಅನುಭವಿಸಿ ಬಾಣಂತಿಯಂತೆ ತೋರುತ್ತಿದ್ದ. ನಗಲು ಕಷ್ಟವಾಗುತ್ತಿತ್ತು ಅವನ ಎದಿರೇ! ಆತ ಹೋದ ಕೊಡಲೆ ಪುರಪುರನೆ ಹೂಸಿಕೊಂಡು ತಡೆದಿದ್ದ ನಗುವೆಲ್ಲ ನವರಂದ್ರಗಳಿಂದ ಕಿತ್ತುಕೊಂಡು ಬರುವಂತೆ ಶ್ರೀಧರ ಹಾಸಿಗೆ ಮೇಲೆ ಬಿದ್ದುಕೊಂಡು ನಗಾಡುತ್ತಿದ್ದ. ಇಂತಹ ಘಟನೆಗಳು ಅದೆಷ್ಟೋ.. ಅವೆಲ್ಲವೂ ನನ್ನೊಳಗೆ ವಿಲೀನವಾಗುತ್ತಿದ್ದವು. ಆ ದುಃಖ ಆ ನಗು ಆ ವಿಚಾರ ಆ ಅಪಮಾನ ಕಿಚ್ಚು ಸಂಕಟ ಬೇರೆಬೇರೆ ಅನಿಸುತ್ತಿರಲಿಲ್ಲ. ಲೋಕದ ಎಲ್ಲ ಒಳಿತು ಕೆಡುಕಿನ ಸಂಗತಿಗಳೂ ಮನುಷ್ಯರ ಸಾಧ್ಯತೆ ಮತ್ತು ದೌರ್ಬಲ್ಯಗಳು. ನಾವು ಅವುಗಳ ಮೂಲಕ ಹೇಗೆ ಎಲ್ಲಿಗೆ ಹೋಗಿ ತಲುಪುತ್ತೇವೆ ಎಂಬುದು ಮುಖ್ಯ. ಜಗತ್ತಿನ ಹಿಂಸೆಯ ಚಕ್ರಾಧಿಪತಿಯಂತಿದ್ದ ಹಿಟ್ಲರನ ಕಾಲದಲ್ಲೇ ವಿಶ್ವಶಾಂತಿಯ ಸಂತನಂತೆ ಗಾಂಧೀಜಿ ಇದ್ದ. ಒಂದೇ ಕಾಲದಲ್ಲಿ ಎಷ್ಟೋಂದು ಮಾನವ ರೂಪ ವಿರೂಪಗಳು… ನಗುನಗುತ್ತಲೇ ಅತ್ತು ಬಿಡುತ್ತಿದ್ದೆ. ಅಳುತ್ತಳುತ್ತಲೇ ನಕ್ಕುಬಿಡುತ್ತಿದ್ದೆ. ಶಿವರಾಮ ಜೊತೆಗಿದ್ದಾನೆ ಎಂದರೆ ಏನಾದರೊಂದು ಗೇಲಿ ತಂತಾನೇ ಸೃಷ್ಟಿಯಾಗುತ್ತಿತ್ತು.
ನಮಗೆ ಎರಡನೇ ವರ್ಷದಲ್ಲಿ ಓಥೆಲೋ ನಾಟಕವನ್ನು ನಾನ್ ಡೀಟೈಲ್ ಸಬ್ಜೆಕ್ಟ್ ಆಗಿ ಪಠ್ಯ ಮಾಡಿದ್ದರು. ನಮ್ಮ ಗ್ರಾಮೀಣ ಪ್ರತಿಭೆಗೆ ಅದು ಕಠಿಣ ಸವಾಲು ಒಡ್ಡಿತು. ತರಗತಿಯಲ್ಲಿ ಮುಖ್ಯ ಭಾಗಗಳ ಪರಿಚಯಿಸಿ ಕೈತೊಳೆದುಕೊಳ್ಳುತ್ತಿದ್ದರು. ಅದಾಗಲೇ ಓಥೆಲೋ ನಾಟಕ ಕನ್ನಡಕ್ಕೆ ಅನುವಾದ ಆಗಿತ್ತು. ನಾನದ ಓದಿದ್ದೆ. ಒಂದು ದಿನ ಶಿವರಾಮ ಬಂದ ಪರೀಕ್ಷೆಯ ಜ್ವರದ ಕಾಲ. ಈ ಇಂಗ್ಲಿಷ್ ಒಂದನ್ನು ಪಾಸು ಮಾಡಿಕೊಂಡರೆ ಸಾಕಪ್ಪ ಎಂದು ವದ್ದಾಡಿ ಉರು ಹೊಡೆಯುತ್ತಿದ್ದೆವು. ಶಿವರಾಮ ನಮ್ಮ ಪಾಡಿಗೆ ಮುರುಗಿದ್ದ. ಹೇಯ್ ಬನ್ರೋ ನಾನು ಸುಲಭವಾಗಿ ಓಥೆಲೋ ಪಾಠ ಮಾಡುವೆ ಎಂದು ಒತ್ತಾಯ ಮಾಡಿ ಹಾಸ್ಟೆಲಿನ ಪಾರ್ಕಿನ ಆಲದ ಮರದ ಕೆಳಗೆ ಕೂರಿಸಿಕೊಂಡ. ಹೊರೆಯಿಂದ ಹಗುರಾದರೆ ಸಾಕು ಎಂದು ಅವನ ಮುಂದೆ ವಿನಮ್ರವಾಗಿ ಕೂತೆವು. ಶ್ರೀಧರ ನನ್ನ ಮುಖ ನೋಡಿದ. ಬಂಜಗೆರೆಯೂ ಬೇವಿನಕಟ್ಟೆಯೂ ಜೊತೆಗಿದ್ದರು. ಆರಂಭವಾಯಿತು ಅವನ ಒಥೆಲೋ ನಟನೆ. ಪ್ರಾಧ್ಯಾಪಕರೊಬ್ಬರ ಅನುಕರಿಸುವಂತೆ ಇತ್ತು ಅವನ ಪಾಠ. ಗತ್ತ್ತು ಗೈರತ್ತು ಗಾಂಭೀರ್ಯ ಘನವಾಗಿತ್ತು. ಅಲಲೆಲೇ.. ಎಂತಾ ಪ್ರತಿಭಾವಂತ ಎನಿಸಿತ್ತು. ಶ್ರೀಧರ ಸುಮ್ಮನಿರದೆ ಸಾರ್ ನಿಮಗೆ ಎಷ್ಟು ನಂಬರ್ ಬಂದಿದ್ದವು ಸರ್… ಅಪ್ರಾಕ್ಸಿಮೆಟ್ಲಿ ಎಂಬತ್ತು’ ಎಂದು ಕೇಳಿದ. ‘ಮೊದಲು ಪಾಠ ಕೇಳ್ರಿ ಪಾಸ್ಮಾಡ್ಕೊಳೊ ದಾರಿ ಕಂಡ್ಕಳೀ’….. ಎಂದು ಶಿವರಾಮ ರೇಗಿದ. ಒಥೆಲೋನ ತಲೆಯಲ್ಲಿ ಡೆಸ್ಟಿಮೋನಳ ಬಗ್ಗೆ ಅನುಮಾನದ ಹುತ್ತ ಅವನ ತಲೆ ಒಳಗೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇರುತ್ತದೆ. ಒಥೆಲೋ ಒಬ್ಬ ಕಂದುಬಣ್ಣದ ವ್ಯಕ್ತಿ. ಅವನಿಗೆ ಡೆಸ್ಟಿ ಮೋನಳ ಮೇಲೆ ಅಪಾರವಾದ ಪ್ರೇಮ. ಅವನ ನೆತ್ತಿಯಲ್ಲಿ ಡೆಸ್ಟಿಮೋನಳು ಶೀಲವಂತೆಯೊ ಇಲ್ಲವೋ ಎಂಬ ವಿಪರೀತ ತಳಮಳ ಕುದಿಯುತ್ತಿರುತ್ತದೆ. ತನ್ನ ಅಮರ ಪ್ರೇಮಕ್ಕೆ ಮೋಸವಾಗುತ್ತಿದೆಯೇ ಎಂದು ತೊಳಲಾಡುತ್ತಿರುತ್ತಾನೆ. ಡಿಸ್ಟಿ ಮೋನಾ ಪರಿಶುದ್ಧ ಪ್ರೇಯಸಿ ಅವಳ ಕರ್ಚೀಪು ಎಲ್ಲೋ ಬಿದ್ದು ಕಳೆದುಹೋಗಿ ಮತ್ತಾರದೋ ಕೈಯಲ್ಲಿ ಕಂಡಾಗ ಒಥೆಲೋನ ಹೃದಯ ಬಿರುಕು ಬಿಟ್ಟಿರುತ್ತದೆ. ಈ ಪ್ರಸಂಗಗಳನ್ನು ಕನ್ನಡದಲ್ಲಿ ಶಿವರಾಂ ಒಥೆಲೋನಲ್ಲಿ ಪರಕಾಯ ಪ್ರವೇಶ ಆವೇಶಗೊಂಡು ವಿವರಿಸುವಾಗ ಇವನೊಬ್ಬ ನಿಜವಾದ ನಟ ಎನಿಸುತ್ತಿತ್ತು. ನಾವು ನಗಲು ಅವಕಾಶವೇ ಇರಲಿಲ್ಲ. ಡೆಸ್ಟಿಮೋನ ಗಾಢವಾದ ನಿದ್ರೆಯಲ್ಲಿ ಇರುತ್ತಾಳೆ. ಆಗ ಅಲ್ಲಿಗೆ ಬಂದ ಒಥೆಲೋ ಅವಳನ್ನು ದಿಟ್ಟಿಸುತ್ತಾನೆ. ಅವಳ ಹಾಸಿಗೆಯ ಪಕ್ಕದಲ್ಲೆ ದೀಪ ಉರಿಯುತ್ತಿರುತ್ತದೆ…. ‘ಈ ದೀಪವನ್ನು ಉರಿಯಲ್ಲಿ ಹೀಗೆ ಬಿಡಲೋ ಇಲ್ಲವೇ ಆರಿಸಿ ಬಿಡಲೋ’ ಎಂಬ ತುಮುಲದಲ್ಲಿ ಓಥೆಲೋ ತತ್ತರಿಸುತ್ತಾನೆ. ಕನ್ನಡ ಅನುವಾದದ ಮೂಲಕ ನಾನು ಆ ನಾಟಕವನ್ನು ಗಾಢವಾಗಿ ಭಾವಿಸಿದ್ದೆ. ಶಿವರಾಮ ಆ ಪ್ರಸಿದ್ಧ ಸಂದರ್ಭವನ್ನು ಅಕ್ಷರಶಃ ಓಥೆಲೋ ಆಗಿಯೇ ನಟಿಸಿ ಪಾಠ ಮಾಡಿದ್ದ. ಈ ಮಾತನ್ನು ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಹೇಳಿದರು ಎಂದು ಪ್ರಶ್ನೆ ಬಂದರೆ ಅದಕ್ಕೆ ಹೀಗೆ ಉತ್ತರಿಸಬೇಕು ಎಂದು ವಿವರಿಸುತ್ತಿದ್ದ. ‘ಸರೀ ಸರ್. ನೀವು ಎಲ್ಲಾನೂ ಕನ್ನಡದಲ್ಲಿ ಹೇಳಿ ಕೊಡುತ್ತಿದ್ದೀರಿ.. ಅದನ್ನು ಇಂಗ್ಲಿಷ್ನಲ್ಲಿ ಹೇಗೆ ಬರೆಯಬೇಕು ಎಂದು ಕಲಿಸುತ್ತಿಲ್ಲವಲ್ಲಾ ಎಂದು ಅಡ್ಡ ಪ್ರಶ್ನೆಹಾಕಿದೆ. ‘ಇದ್ನೇ ನೋಡು ಯೇತಿ ಅಂದ್ರೆ ಪ್ರೇತಿ ಅನ್ನೋದು… ನಾ ನಾಟಕವ ಓದ್ಕಂದು ತಿಳ್ಕಂದು ಕನ್ನಡದ್ದೆಲೀ ಯೇಳ್ಕೊಡ್ತೀನಿ… ನಿಮಗೆ ಬರೊ ಇಂಗ್ಲಿಷ್ನಲ್ಲಿ ನೀವದಾ ಬರೀರಿ…. ನನ್ಬಂದು ಕೈ ಇಡ್ಸಿ ಬರ್ಸುಕಾದದೇ? ನೀವಿನ್ನೂ ಸ್ಲೇಟು ಬಳಪ ಇಡ್ಕಂಡಿದ್ದೀರಾ ಎಂದು ಬಾಯಿ ಮುಚ್ಚಿಸಿದ. ಶಿವರಾಮನ ಆಸಕ್ತಿಗಳು ಒಂದೆರಡಲ್ಲಾ…. ಗುಪ್ತ ಕವಿ ಕೂಡ. ಬ್ರೂಸ್ಲೀಯ ಪರಮ ಅಭಿಮಾನಿ ಹೇಗೋ ಹಾಗೆಯೇ ಚಾಪ್ಲಿನ್ ಬಗ್ಗೆಯೂ ಅಂತದೇ ಗೌರವ. ಇಬ್ಬರನ್ನೂ ಅಭಿನಯಿಸಿ ತೋರುತ್ತಿದ್ದ. ಸಕತ್ ಬಾಡಿಲಾಂಗ್ವೇಜ್ ಇತ್ತು. ಅದೆಲ್ಲಿ ಕುಂಗ್ಪೂ ಕರಾಟೆ ಕಲಿತಿದ್ದನೊ ಏನು… ಅಂತೂ ಒಂದಿಷ್ಟು ಸಾಹಸ ಮಾಡಿ ತೋರುತ್ತಿದ್ದ. ಒಟ್ಟಿನಲ್ಲಿ ನಾವು ಅವನ ಅಭಿಮಾನಿಗಳಾಗಿ ಅಣ್ಣಾ ಎನ್ನಬೇಕಿತ್ತು ಅμÉ್ಟೀ.. ಅವನಿಗೆ ನಿರಾಶೆ ಮಾಡಬಾರದು ಎಂದು ಪೂರಕವಾಗಿಯೇ ಇದ್ದೆವು. ‘ಸಾಕು ಬಿಡೀ ಸಾರ್ ನಿಮ್ಮ ಪಾಠ. ಅತ್ತಗೆ ಕನ್ನಡಾನು ಬರದೆ ಇತ್ತಾಗೆ ಇಂಗ್ಲೀಷೂ ಬರದೆ ಡುಮ್ಕಿ ವಡ್ಕಂದ್ರೆÀ್ರ ಕಷ್ಟ ಆಯ್ತದೆ’ ಎಂದಿದ್ದ ಶ್ರೀಧರ. ಬಾಳೆಹಣ್ಣ ಸುಲ್ದು ಕೊಟ್ರು ಬ್ಯಾಡ ಅಂತೀರಲ್ಲೋ… ಹೋಗೋಗಿ ಫೇಲಾಗಿ ಹಳ್ಳಿಗೋಗಿ’ ಎಂದು ಶಾಪ ಹಾಕಿದಂತೆ ಬಥಯ್ದು ಹೊರಟುಹೋಗಿದ್ದ. ಪರೀಕ್ಷೆ ಬಂದಿತ್ತು. ಕೊಠಡಿಯಲ್ಲಿ ಟೆನ್ಷನ್ನಲ್ಲಿ ಯಾವ ಪ್ರಶ್ನೆ ಬರ್ತಾವೊ ಎಂದು ಬೆವರುತ್ತದೆ ಎಲ್ಲೊ ವಿಶ್ ಮಾಡಲು ಬಂದಿದ್ದಾನೆ ಎಂದರೆ ಅವನೂ ಪರೀಕ್ಷೆ ಬರೆಯಲು ಬಂದಿದ್ದ. ಆ ಮೊದಲೇ ಎರಡು ಬಾರಿ ಫೇಲಾಗಿದ್ದ. ಆಗುಟ್ಟನ್ನೆ ನಮಗೆ ಆತ ಹೇಳಿರಲಿಲ್ಲ ಎಲಾ ಇವನು ತಾನೇ ಫೇಲಾಗಿ ನಮಗೇ ಪಾಠ ಮಾಡೋಕೆ ಬರ್ತಿದ್ನಲ್ಲಾ. ಇರ್ಲಿ ಇರ್ಲಿ ಪರೀಕ್ಷೆ ಮುಗೀಲಿ ಎಂದು ನಗು ಬಂದರೂ ತಡೆದುಕೊಂಡೆ.
ಬರೆದಾಯಿತು; ಹೊರಗೆ ಬಂದೆವು. ‘ಏನ್ಸಾರ್ ಹೆಂಗೆ ಬರೆದ್ರಿ’ ಅವನಿಗಾಗಿ ಕಾದಿದ್ದು. ‘ಬಾಳ ಟಪ್ ಕಂಣ್ರಿ. ಪ್ರತಿಸಲಾನೂ ಟ್ರಬಲ್ಲಾಗ್ತಿದೆ ಎಂದು ಸಪ್ಪೆ ಮೋರೆ ಹಾಕಿದ. ನಗುವುದೂ ತರವಲ್ಲ ಎನಿಸಿತು. ಸೋತವರ ಛಾಯೇ ಅವನ ಹಣೆ ಮೇಲೆ ಕಾಣುತ್ತಿತ್ತು. ‘ಪಾಸಾಗ್ತದೆ ಬನ್ನಿ ಸಾರ್’ ಎಂದೇ. ನೀವು ಹೋಗಿ; ಆಮೇಲೆ ರಾತ್ರಿ ಸಿಕ್ತೀನಿ ಎಂದು ಅದೆತ್ತಲೋ ಶಿವರಾಂ ಹೊರಟುಹೋದ. ನಾನು ಗೆಳೆಯರು ಗೆದ್ದೊ ಎಂಬ ಭಾವದಲ್ಲಿ ಚಹಾ ಸೇವಿಸಿ ಹಗುರಾದೇವು. ಆದರೂ ಹಾಗೆ ಶಿವರಾಂ ಒಬ್ಬನೇ ಹಾಗೆ ಹೋದದ್ದು ನೋವೆನಿಸಿತು. ಒಂದು ವಾರದ ನಂತರ ಬಂದಿದ್ದ. ಅವನ ಮನೆಯದು ಏನೇನೋ ಗೋಳು. ಹೆಚ್ಚುಕಡಿಮೆ ನನ್ನಂತದೇ ಸಮಸ್ಯೆ. ಗೆಲುವಾಗಿದ್ದ ಪರೀಕ್ಷೆ ಮುಗಿಸಿದ್ದೆವು. ವಿರಾಮವೊ ಹರಾಮು… ಶಿವರಾಮ ಬಂದ. ‘ನೀವು ಫೇಲ್ ಆಗಿದ್ದು ಯಾಕೆ ಹೇಳಿರ್ಲಿಲ್ಲಾ. ಎಂದೆವು. ಅದಾ ಅತ್ತಾಗಿ ಬಿಡಪ್ಪ… ನಿಮ್ಮ ಮೂಲಕ ಪ್ರಾಕ್ಟಿಸ್ ಮಾಡ್ಕೋತ್ತಿದ್ದೆ… ಎಂದ. ಅಭಿನಯದ ಉತ್ಸಾಹದಲ್ಲಿದ್ದ. ಆಗ ರಜನಿಕಾಂತ್ ಅಲೆ ಎದ್ದಿತ್ತು. ಆ ನಟನ ಅನುಕರಿಸಿ ಬಾಯಿಗೆ ಸಿಗರೇಟು ಎಸೆದು ಕಚ್ಚಿಕೊಂಡು ಸೇದಿದಂತೆ ಹೋಗೆಬಿಟ್ಟು ತಮಿಳು ಡೈಲಾಗ್ ಹೊಡೆಯುತ್ತಿದ್ದ. ಆ ಸಿಗರೇಟನ್ನು ಆ ಸ್ಟಂಟ್ ತೋರಿಸಲು ಹಾಗೇ ಅಂಗಿ ಜೇಬಲ್ಲಿ ಪೇಪರ್ ಸುತ್ತಿ ಜೋಪಾನ ಮಾಡಿಕೊಂಡಿದ್ದ. ಇವನಿಗೆ ಏನೆಂದು ಹೆಸರಿಡಬೇಕು ಎಂದು ಬಹಳ ಯೋಚಿಸಿ ಸೋತಿದ್ದೆ. ಒಂದು ರೂಪಕಕ್ಕೆ ಆತ ಸಿಗುತ್ತಿರಲಿಲ್ಲ. ನಮ್ಮನ್ನು ಬಹಳ ಅಂಡರ್ಎಸ್ಟಿಮೇಟ್ ಮಾಡಿದ್ದ ಎಂದು ಗೆಳೆಯರಿಗೆ ಸಿಟ್ಟಿತ್ತು. ಮಾತುಗಳು ಎಲ್ಲೆಲ್ಲಿಗೋ ಹಾರಿದವು. ಕುಹಕ ವ್ಯಂಗ್ಯ ವಿನೋದಗಳನ್ನು ನಮ್ಮ ದಾಳಿಗೆ ಶಿವರಾಮ್ ಕೋಪಾವಿಷ್ಟನಾಗಿ ಚೇರನ್ನು ಅತ್ತ ನೂಕಿ; ನಾಳೆ ಬಂದು ತಕ್ಕ ಉತ್ತರ ಕೊಡುವೆ ಎಂದು ತನ್ನ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡು. ನಮಗೆ ಏನೂ ಅನಿಸಲಿಲ್ಲ. ನಮ್ಮ ಪಾಡಿಗೆ ನಾವು ನಮ್ಮ ಕೆಲಸಗಳಲ್ಲಿ ತೊಡಗಿದ್ದೆವು. ನಾವೆಲ್ಲ ಹರಟೆ ಹೊಡೆಯುತ್ತಿದ್ದೇವೆ ಎಂದು ತಿಳಿದು ಅದೇ ಪಾರ್ಕಿಗೆ ಬಂದ. ಬಂದ ರೀತಿಯೇ ವಿಶ್ವಮಿತ್ರನ ಆಗಮನದಂತಿತ್ತು. ಕ್ಷಣ ಮೌನವಾದೆವು. ಅವನ ಜೊತೆ ಫೈಟಿಂಗ್ ಮಾಡುವ ಉಮೇದು ನಮ್ಮಲ್ಲಿ ಯಾರಿಗೂ ಇರಲಿಲ್ಲ. ಮೃಥಾ ಕಲಹ ತರವಿರಲಿಲ್ಲ. ಕುಹಕವಾಗಿ ನಕ್ಕು ‘ನೆನ್ನೆ ನೀವೆಲ್ಲ ನನ್ಗೆ ಗೇಲಿ ಮಾಡಿದ್ರಲ್ಲ… ನಾನು ಯಾರು ನನ್ ತಾಕತ್ತೇನು ಅನ್ನೋದು ನಿಮ್ಗೆ ಮನ್ವರ್ಕೆ ಮಾಡ್ಕೋಡ್ಬೇಕದೇ’ ಎಂದೂ ಬರೆದು ತಂದಿದ್ದ ಕವಿತೆಯನ್ನು ಓದತೊಡಗಿದ. ಆ ಕವಿತೆ ಕೆಳಗಿನಂತಿತ್ತು.
ನಾನು ಅನಾದಿ ನಾಯಿ; ಭೂಮಿ ಸುತ್ತುವ ನಾಯಿ
ನಿಮಗಿಂತ ಮೊದಲೇ ಹುಟ್ಟಿ ಬಂದವನು ನಾನು
ನಾನೊ ಬೊಗಳಿದರೆ ಬಿಳಿ ನಾಯಿ ಕಚ್ಚಿದರೆ ಕರಿನಾಯಿ
ಕೆಣಕಿ ಕಲ್ಲೆಸೆದಿರೋ ನಾನಾಗುವೆ ಹುಚ್ಚುನಾಯಿ
ಕಾದು ಕಾದು ಬೊಗಳಿ ಬೊಗಳಿ ಸಾಕಾಗಿದೆ
ಕಳ್ಳಕಾಕರನ್ನೆಲ್ಲ ಕಚ್ಚಿ ಕಚ್ಚಿ ಕಳ್ಳು ಪಚ್ಚಿಯ ಅಗಿಯುವೆ.
ಕಂಡಿರುವೆ ನಿಮ್ಮ ಕುಹಕ ಕೀಚಕ ನಗೆಯ
ವಕ್ರ ವಿತಂಡ ಬುದ್ಧಿಯ ಜಾಣತನದ ನರಿಯ ಮಾತ
ಸಿಟ್ಟೇರಿಸಬೇಡಿ ನಿಯತ್ತಿನ ಅನಾದಿ ನಾಯಿ ನಾನು
ನಾನು ಕೂಡ ಕಾದಿರುವೆ ಈ ಊರು-ಕೇರಿ ದೇಶವ ಹಂಗಿಸಬೇಡಿ ತೊತ್ತಿನ ನಾಯಲ್ಲ ನಾನು
ನಾಯಿ ಬೊಗಳಿದರೆ ಭೂಲೋಕ ಹಾಳಾಯಿತೇ
ಎನ್ನುವಿರಾ ತುತ್ತು ಕೂಳಿಗೂ ಪ್ರಾಣ ಕೊಡಬಲ್ಲೆ
ಎಚ್ಚರಾ ಎಚ್ಚರಾ ತಲೆಕೆಟ್ಟರೆ ನಾನು ಗತಿ ಕಾಣಿಸುವೆ ನಿಮಗೆ.
ಶಿವರಾಂ ಕವಿತೆ ಯೋಚಿಸುತ್ತಿದ್ದಂತೆಯೇ ಅವನ ಕವಿತೆಗೆ ಸವಾಲು ಹಾಕುವಂತೆ ನಮ್ಮೊಳಗೆ ನಗು ಉಕ್ಕಿ ಬರುತ್ತಿತ್ತು. ನಕ್ಕು ನಕ್ಕು ಸುಸ್ತಾದೆವು. ಲೆಕ್ಕಿಸಲಿಲ್ಲ ಶಿವರಾಂ ಅವನು ರವಾನಿಸಿದ ಎಚ್ಚರವೂ ನಗೆಯ ಅಲೆ ಎಬ್ಬಿಸಿತು. ‘ಯು ಆರ್ ಗ್ರೇಟ್ ಪೊಯೆಟ್ ಸರ್’ ಎಂದ ಶ್ರೀಧರ. ‘ಕುತ್ಕಳ್ರಿ ಕಂಡಿವಿನಿ ನಿಮ್ಮಾತ… ಕಿಸಿತಾ ಮಾತಾಡೋರಾ ಒಳ್ಗೆ ಮನ್ಸು ಎಣಗಿರ್ತದೆ ಅಣತಾ ನನ್ಗೆ ಗೊತ್ತಾಗೊಲ್ತಾ… ಯೀ ಜನ್ಮುದೆಲಿ ನೀವು ಉದ್ದಾರ ಆಗುದಿಲ್ಲಾ..’ ನನ್ನಂತ ನನ್ನಂತೆವುನ್ಗೆ ಪಾಸ್ಮಾಡುಕಾಗ್ಲಿಲ್ಲಾ… ನೀವ್ಯಾವ ಜುಜುಬೀರಿ’ ಎಂದು ಕಣ್ಣು ಮಳ್ಳಿಸಿದ. ವಿಕೋಪಕ್ಕೆ ಹೋಗುತ್ತದೆಂದು ಮೆತ್ತಗಾದೆವು. ಬೈದುಕೊಂಡು ಹೊರ ನಡೆದ. ಅವನು ಹೋದ ನಂತರ ಜೆಪಿ ಸೂಕ್ಷ್ಮವಾಗಿ ಹೇಳಿದ… ‘ಹೇ, ನಾವು ಅವನ ಮನಸ್ಸನ್ನು ನೋಯಿಸಿದ್ದೇವೆ. ಅನುಕಂಪದ ಬದಲು ಅಪಹಾಸ್ಯ ಮಾಡಿದ್ದೇವೆ. ನಾಳೆ ಸಿಕ್ಕಾಗ ಸಾರಿ ಕೇಳಬೇಕು ಎಂದ. ನಿಜವಿತ್ತು. ಹುಡುಕಿದೆವು ಅವನ ಕವಿತೆಗೆ ಧ್ವನಿಶಕ್ತಿ ಇತ್ತು. ಹೀಗೆ ಕವಿತೆಯ ಮೂಲಕ ಪ್ರತಿಭಟಿಸುತ್ತಾನೆಂದು ನಾವು ಯಾರೂ ಊಹಿಸಿರಲಿಲ್ಲ. ಆ ಮಹರಾಜ ಕಾಲೇಜಿನ ಆವರಣದಲ್ಲಿ ಎಂತೆಂತವರೆಲ್ಲ ಇದ್ದಾರಲ್ಲ… ಕಾಲ ಈಗ ಅವರನ್ನೆಲ್ಲ ಎಲ್ಲೆಲ್ಲಿ ಬಿಸಾಡಿ ಮುಂದೆ ಹೋಗಿದೆಯೋ…
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.