ಒಂದು ಪ್ರಸಂಗದಲ್ಲಿ ಭೀಷ್ಮ, ಸತ್ಯವತಿಯನ್ನು ತುಂಬಾ ವರ್ಣನೆ ಮಾಡಿದ್ದನ್ನುಸರೋಜಕ್ಕ ನೋಡಿದರು. ತಂದೆ ಇಷ್ಟ ಪಟ್ಟ ಹೆಣ್ಣನ್ನು ತಾಯಿ ಅಂತನೇ ನೋಡಬೇಕಿತ್ತು. ಹಾಗೆಲ್ಲಾ ತುಂಬಾ ವರ್ಣನೆ ಮಾಡಿದ್ದು ಆಭಾಸವಾಯಿತು ಅಂದರು. ಕರ್ಣಪರ್ವದಲ್ಲಿ ಕರ್ಣ ಪಾಪ, ಪಾಂಡವರಾಗಿ ಹುಟ್ಟಿದರೂ ಏನು ಇಲ್ಲ. ತಾಯಿ ಇದಾರೆ, ತಮ್ಮಂದಿರಿದಾರೆ. ಆದರೂ ಯಾರೂ ಇಲ್ಲ. ಇಡೀ ಮಹಾಭಾರತದಲ್ಲಿ ಕರ್ಣ ಅಂದ್ರೆ ಬಹಳ ಪ್ರೀತಿ. ಕುಂತಿ ನೋಡಿದ್ರೆ ಸಿಟ್ಟು ಬರತ್ತೆ ಒಂದೊಂದ್ಸಲ. ಆದರೆ ಕೀಲಿ ಕೈ ಇರೋದು ಕೃಷ್ಣನ ಹತ್ರನೇ. ಕಪಟ ನಾಟಕ ಅಂತನೇ ಇದೆಯಲ್ಲ. ಒಂದು ದೃಷ್ಟಿಲಿ ನೋಡಿದ್ರೆ ಐದು ಮಕ್ಕಳನ್ನ ಉಳಿಸಕ್ಕೆ ಏನೊ ಮಾಡಬೇಕಾಗಿತ್ತು
ಕೃತಿ. ಆರ್. ಪುರಪ್ಪೇಮನೆ ಅವರು ಯಕ್ಷಾರ್ಥ ಚಿಂತಾಮಣಿ ಸರಣಿಯ ಬರಹ
“ನನಗೆ ಸಣ್ಣಕಿದ್ದಾಗಿಂದ್ಲೂ ಚಿಟ್ಟಾಣಿ ಅಂದ್ರೆ ಆತು, ಮೇಳ ಗೀಳ ಸಂಬಂಧ ಇಲ್ಲೆ. ಚಿಟ್ಟಾಣಿ ಇದ್ದ ಅಂದ್ರೆ ಅಪ್ಪನ ಜೊತೆಗೆ ನಾ ಹೊಂಟೆ ಅಂತ್ಲೇ. ಆ ಮ್ಯಾಳದವರೆಲ್ರೂ ನಮ್ಮನಿಗೆ ಬತ್ತಿದ್ದ. ನಾವೆಲ್ಲ ಅವಾಗ ಟಿಕೇಟ್ ತಗಂಡು ಆಟಕ್ಕೆ ಹೊದವ್ರೇ ಅಲ್ಲ. ಎಂತಕ್ಕಂದ್ರೆ ಇಡೀ ಮ್ಯಾಳವೇ ನಮ್ಮನೆಲಿ ಇರ್ತಿತ್ತು. ಬೆಳಗಿನ ಜಾವ ಬಂದು ತಿಂಡಿ ತಿಂದು ಮಲಗ್ತಿದ್ದ. ಒಬ್ಬ ಕಲಾವಿದರು(ಈಗ ಪ್ರಸಿದ್ಧರಾದವರು) ಸಣ್ಣವರಾಗಿದ್ರು, ಅವ ಮೆತ್ತತ್ತಿ ಮಲಗಿಬಿಡ್ತಿದ್ದ, ಕೆಳಗೆಲ್ಲ ಮಲಗವನೇ ಅಲ್ಲ. ಮ್ಯಾಳದ ಭಾಗವತರು ಭಂಗಿ ಸೇದೊರು, ಮತ್ತೊಬ್ರು ಎಣ್ಣೆ ಕುಡಿಯೋರು, ಅವರೆಲ್ಲ ಕೆಳಗೆ ಕತ್ಲೆ ಕೋಣೆಲಿ ಮಲಗೋರು, ನಾ ಇಲ್ಲಿ ಮಲಗ್ತ್ನಿಲ್ಲೆ ಅಂತ ಮೆತ್ತಿಗೆ ಹೋಗಿ ಮಲಗ್ತಿದ್ದ. ರಾಶಿ ಜನ ಬತ್ತಿದ್ದ ಕಲಾವಿದರು, ಆಗ ನಾನು ಸಣ್ಣಕಿದ್ನಲ, ಹೆಸರೆಲ್ಲ ಗೊತ್ತಾಗ್ತಿರ್ಲೆ.”
ಇದು ಒಬ್ಬ ಪ್ರೇಕ್ಷಕಿ (ಸವಿತ-ಎಂದಿಟ್ಟುಕೊಳ್ಳೊಣ, ಎಲ್ಲಾ ಹೆಸರು ಬದಲಿಸಿದೆ) ತಾನು ಏಳೆಂಟು ವರ್ಷದವಳಾಗಿದ್ದಾಗಿನ ಯಕ್ಷಗಾನದ ನೆನಪುಗಳನ್ನು ಹಂಚಿಕೊಂಡಿದ್ದು. ಅವರ ಒಟ್ಟು ಕುಟುಂಬದ ಮನೆ ಯಕ್ಷಗಾನವನ್ನು ಪ್ರೋತ್ಸಾಹಿಸುವ, ಕಲಾವಿದರಿಗೆ ಆಶ್ರಯ ಕೊಡುವ ತಾಣವಾಗಿತ್ತು. ಮುಂದೆ ಸವಿತನಿಗೆ ಮದುವೆಯಾಗಿ, ಅವರ ಹೊಸ ಮನೆಯ ವಾತಾವರಣವನ್ನೂ ಯಕ್ಷಗಾನದ ಸ್ನೇಹಿತರು, ಕಲಾವಿದರಿಗೆ ತೆರೆದುಕೊಳ್ಳುವಂತೆ ಮಾಡಿಕೊಂಡಿದ್ದರು. ಅವರಿದ್ದ ಊರಿಗೆ ಹೋಗಿದ್ದಾಗ ಇತರ ಸ್ನೇಹಿತರೊಡನೆ ಅವರ ಮನೆಯಲ್ಲಿ ಊಟ ಮಾಡಿ ಅವತ್ತಿನ ಆಟಕ್ಕೆ ಹೋಗಿದ್ದೆವು. ಪ್ರೇಕ್ಷಕರ ಈ ನೆಟ್‌ವರ್ಕಿಂಗ್ ಬೇರೆ ಬೇರೆ ಊರಲ್ಲಿ ಆಟಕ್ಕೆ ಹೋಗುವಾಗ ಬಹಳ ಮುಖ್ಯ. ಅದರಲ್ಲೂ ಹೆಂಗಸರಿಗೆ. ಸವಿತ ಮತ್ತು ಅವರಂತೆ ಹಲವು ಪ್ರೇಕ್ಷಕಿಯರ ಸಂದರ್ಶನವು ಅವರು ಹೆಂಗಸರಾಗಿದ್ದಕ್ಕೇ ಬಹಳ ಮುಖ್ಯವಾಗಿರುವುದು. ಗಂಡು ಕಲೆಯ ಹೆಣ್ಣು ಪ್ರೇಕ್ಷಕರ ಕತೆಗಳು ಈಗ ಕೇಳುವುದಕ್ಕೆ ಸ್ವಾರಸ್ಯಕರವಾಗಿಯೂ, ತಮಾಷೆಯಾಗಿಯೂ ಕಂಡೀತು. ಆದರೆ ‘ಆಟದ ಹುಚ್ಚು’ ಇರುವ ಹೆಂಗಸರ ಸಮಸ್ಯೆಗಳು ತರಾವರಿ. ಮನೆಯವರಿಗೆ ಆಸಕ್ತಿ ಇದ್ದರೆ ಸಮಸ್ಯೆಗಳಿಲ್ಲ. ಇಲ್ಲದಿದ್ದರೆ ಮನೆಯವರನ್ನು ಒಪ್ಪಿಸುವುದೂ ಹರಸಾಹಸದ ಕೆಲಸ. ಹಾಗೆ ಒಪ್ಪಿ ಕಳಿಸುವ ಮನೆಯವರಿದ್ದರೂ ಯಕ್ಷಗಾನದಲ್ಲಿ ಹೆಂಗಸರಿಗೇ ವಿಶಿಷ್ಟವಾದ ಸಮಸ್ಯೆಗಳು ಎದುರಾಗುತ್ತವೆ.
ಮನೆಯ ಜಗಲಿಯಲ್ಲಿ, ಪ್ರಸಂಗ, ಇಷ್ಟದ ಕಲಾವಿದರು, ಮೇಳಗಳ ಮಾತುಕತೆಯಾದರೆ, ಅಡಿಗೆ ಮನೆಯಲ್ಲಿ ಕೆಲಸ ಮಾಡುತ್ತಾ ಆಡುವ ಲೋಕಾಭಿರಾಮದ ಮಾತು, ಬೇರೆ ಲೋಕವನ್ನೇ ತೆರೆದಿಟ್ಟಿತು. ಪ್ರೇಕ್ಷಕರ, ಕಲಾವಿದರ ಮಾತುಗಳು ಹಿಂದಿನ ಲೇಖನಗಳಿಗೆ ಆಕರಗಳಾಗಿದ್ದರೆ, ಇಲ್ಲಿ ಹೆಣ್ಣು ಪ್ರೇಕ್ಷಕರಿಗೇ ವಿಶಿಷ್ಟವಾದ ಅನುಭವಗಳಿಗೆ ಪ್ರತ್ಯೇಕವಾದ ಜಾಗವೇ ಬೇಕೆನಿಸಿತು. ಇದನ್ನು ವಿವರಿಸಿ ವಿಸ್ತರಿಸಬೇಕಿಲ್ಲ. ಈ ಕೆಳಗಿನ ಅವರ ನೇರ ಮಾತುಗಳೇ ಬೇಕಾದಷ್ಟು ಹೇಳುತ್ತವೆ.
ಕರ್ಣನನ್ನು ಕಂಡರೆ ಪಶ್ಚಾತ್ತಾಪ
ಮುಖ್ಯವಾಗಿ ಕತೆ, ಪ್ರಸಂಗದ ಜೊತೆಗೆ ಅವರ ಭಾವನಾತ್ಮಕ ಸಂಬಂಧ. ತಮ್ಮ ತಾರುಣ್ಯದಲ್ಲಿ ಬಹಳ ಆಟವನ್ನು ನೋಡಿದ್ದ ಸರೋಜಕ್ಕನಿಗೆ ಅವರ ಮಾವನ ಮನೆಯು ಯಕ್ಷಗಾನವನ್ನು ಪ್ರೋತ್ಸಾಹಿಸುವ ಕುಟುಂಬವಾಗಿತ್ತು. ಗಣಪತಿ ಪೂಜೆ ಶುರುವಾದ ಮೇಲೆ ಮುಗಿಯುವ ತನಕ ಯಾರಾದ್ರು ಬಂದು ಒಂದು ಟೀ ಮಾಡಿಕೊಡು ಅಂದ್ರೂ ಏಳುತ್ತಿರಲಿಲ್ಲವಂತೆ. ಅವರಿಗೆ ಕತೆ ಬಿಟ್ಟು ಹೊರಗೆ ಹೋಗಿ ಮಾತಾಡುವ ಕಲಾವಿದರು ಅಷ್ಟಕಷ್ಟೆ. ಅವತ್ತೊಂದು ದಿನ ನೋಡಿದ ಭೀಷ್ಮ, ಸತ್ಯವತಿಯನ್ನು ತುಂಬಾ ವರ್ಣನೆ ಮಾಡಿದರು. ತಂದೆ ಇಷ್ಟ ಪಟ್ಟ ಹೆಣ್ಣನ್ನು ತಾಯಿ ಅಂತನೇ ನೋಡಬೇಕಿತ್ತು. ಹಾಗೆಲ್ಲಾ ತುಂಬಾ ವರ್ಣನೆ ಮಾಡಿದ್ದು ಆಭಾಸವಾಯಿತು ಅಂದರು. ಕರ್ಣಪರ್ವದಲ್ಲಿ ಕರ್ಣ ಪಾಪ, ಪಾಂಡವರಾಗಿ ಹುಟ್ಟಿದರೂ ಏನು ಇಲ್ಲ. ತಾಯಿ ಇದಾರೆ, ತಮ್ಮಂದಿರಿದಾರೆ. ಆದರೂ ಯಾರೂ ಇಲ್ಲ. ಇಡೀ ಮಹಾಭಾರತದಲ್ಲಿ ಕರ್ಣ ಅಂದ್ರೆ ಬಹಳ ಪ್ರೀತಿ. ಕುಂತಿ ನೋಡಿದ್ರೆ ಸಿಟ್ಟು ಬರತ್ತೆ ಒಂದೊಂದ್ಸಲ. ಆದರೆ ಕೀಲಿ ಕೈ ಇರೋದು ಕೃಷ್ಣನ ಹತ್ರನೇ. ಕಪಟ ನಾಟಕ ಅಂತನೇ ಇದೀಯಲ್ಲ. ಒಂದು ದೃಷ್ಟಿಲಿ ನೋಡಿದ್ರೆ ಐದು ಮಕ್ಕಳನ್ನ ಉಳಿಸಕ್ಕೆ ಏನೊ ಮಾಡಬೇಕಾಗಿತ್ತು. ಒಂದ್ಸಲ ಅಂತೂ ಹರಿಶ್ಚಂದ್ರನನ್ನು ನೋಡಿ ಅತ್ತು ಅತ್ತು ತಲೆನೋವೆಲ್ಲ ಬಂದಿತ್ತಂತೆ. ಅವರ ಮಗನ ಸಾವು, ನಂತರ ಸಣ್ಣ ಮಗುವನ್ನು ಬಿಟ್ಟು ತೀರಿದ ಮಗಳು, ಗಂಡನ ಸಾವು ಹೀಗೆ ಕಷ್ಟಗಳನ್ನು ಅನುಭವಿಸಿ ಅವರ ಶರೀರ ಮನಸ್ಸು ಬೇಗ ಮುಪ್ಪಾಗಿದೆ. ಯಾವಾಗಲೂ ಚಿಂತೆ. ಯಕ್ಷಗಾನದಲ್ಲಿ ಅದಕ್ಕೇ ಅವರಿಗೆ ದುಃಖದ ಸನ್ನಿವೇಶಗಳು ಹತ್ತಿರವಾಗಿರಬಹುದು.
ಹೆಣ್ಣು ಅನ್ನುವುದನ್ನು ಮರೆತು
ಸವಿತಾ ಅವರು ಆಟಕ್ಕೆ ಒಬ್ಬರೇ ಹೋಗುವುದು. ಅಕ್ಕ ಪಕ್ಕ ನೋಡೋದು ಇಲ್ಲ. ‘ಮಾತಾಡಿಸ್ತಾ ಇರೋರು ಪಕ್ಕದಲ್ಲಿದ್ರೆ ಸಿಟ್ಟೆ ಬರತ್ತೆ. ಅಲ್ಲಿ ಕೂತಾಗ ಹೆಣ್ಣು ಅಂತನೇ ಮರೆತು ಹೋಗತ್ತೆ. ಚಪ್ಪಾಳೆ, ಸೀಟಿ ಹೋ ಅಂತ ಕೂಗೋದು ಎಲ್ಲ ಇದೆ ನಂದು. ಕುಣಿತ ಅಂದ್ರೆ ಕುಶಿ. ಮರುದಿನ ಅದೇ ಗುಂಗಲ್ಲಿ ಇರ್ತೀನಿ. ಆಟದಲ್ಲಿ ಮಾತು ಅಗತ್ಯಕ್ಕೆ ಬೇಕಾದಷ್ಟೆ ಇರಬೇಕು. ಇತ್ತೀಚೆಗೆ ತಾಳಮದ್ದಲೆಯ ಮಳ್ಳು ಹಿಡಿದಿದೆ. ಮನೆ ಕೆಲಸ ಮಾಡುವಾಗ ತಾಳಮದ್ದಲೆ ಫೋನಲ್ಲಿ ಹಾಕಿಕೊಂಡೇ ಇರೋದು. ಅದೊಂತರ ಹುಚ್ಚು. ನಮ್ಮನೆಯವರಂತು ನೀನು ಅರ್ಥ ಹೇಳೊಕೇ ಕೂರ್ತೀಯ ಒಂದಿನ ಅಂತಾರೆ. ಬೇರೆ ಬೇರೆ ಊರಲ್ಲಿ ಸ್ನೇಹಿತೆಯರಿದಾರೆ. ಅಲ್ಲಿ ತಾಳಮದ್ದಲೆ ಇದ್ದರೆ ಅವರಲ್ಲಿ ಉಳಿದು ನೋಡಿ ಬರೋದು’. ಅವರಿಗೆ ಇತ್ತೀಚೆಗೆ ತಾಳಮದ್ದಲೆ ಎಷ್ಟು ಇಷ್ಟ ಅಂದರೆ ದೂರದ ಊರಲ್ಲಿ ತಾಳಮದ್ದಲೆ ಸಪ್ತಾಹಕ್ಕೆ ಹೋಗಿ ಉಳಿಯೋಕೆ ಯಾರು ಜೊತೆ ಇಲ್ಲ ಅನ್ನುವ ಕೊರತೆ ಅವರನ್ನು ಕಾಡುತ್ತದೆ.
ಮೂರೊತ್ತೂ ಮನೆ ಮನೆ, ಕೆಲಸ ಕೆಲಸ
ಒಂದು ಮನೆಯಲ್ಲಿ ಆಟ ನೋಡುವ ಇಬ್ಬರು ವಾರಗಿತ್ತಿಯರು, ‘ಮನೆ- ಮನೆ, ಕೆಲಸ -ಕೆಲಸ ಅಂತ ಮೂರೊತ್ತು ಇದ್ದಿದ್ದೇ, ಆಟಕ್ಕೆ ಹೋಗುವುದು ಅರಾಮಾಗುತ್ತದೆ. ಸಿನಿಮಾ, ಟೀವಿ ಎಲ್ಲಾ ಜಾಸ್ತಿ ಹೊತ್ತು ನೋಡೊಕಾಗಲ್ಲ. ಮನೆಯಿಂದ ಹೊರಗೆ ಹೋಗೋದು ಮನಸ್ಸು ದೇಹದ ಆರಾಮಿಗೆ ಮುಖ್ಯ. ಭಾವನಾತ್ಮಕವಾಗಿ, ನಮ್ಮ ಬದುಕಿಗೆ ಯಕ್ಷಗಾನನೇ ಹೆಚ್ಚು ಹೊಂದಿಕೆಯಾಗುತ್ತೆ. ಸೀರಿಯಲ್ ಒಂದಿನ ಬಿಟ್ರೆ ಹೋಗ್ಲಿ ಬಿಡು ಅನ್ನಿಸ್ತದೆ. ಯಕ್ಷಗಾನ ಅಂದ್ರೆ ಅಯ್ಯೊ ಬಿಟ್ಟೊಯ್ತಲ ಅನ್ಸತ್ತೆ’ ಅನ್ನುವರು. ಅಕ್ಕನಿಗೆ ಕುಣಿತ, ಭಾಗವತಿಕೆ ಮತ್ತು ಅತ್ಯಂತ ಭಾವನಾತ್ಮಕ ದೃಶ್ಯಗಳು ಇಷ್ಟವಾದರೆ ತಂಗಿಗೆ ಮಾತು ಗಂಭೀರತೆ ಇಷ್ಟವಂತೆ.
ನಮ್ಮನೆಯವರಿಗೆ ಅದೆಲ್ಲಾ ಇಷ್ಟ ಆಗೊಲ್ಲ
ಭಾಗವತಿಕೆ ವಿದ್ಯಾಳಿಗೆ ತುಂಬಾ ಇಷ್ಟ. ‘ಭಾಗವತಿಕೆ ಚೆನ್ನಾಗಿದ್ದರೆ ಇನ್ನೂ ಒಂದು ಗಂಟೆ ಹೆಚ್ಚು ನೋಡಬಹುದು. ನಮಗೆ ಮಾಡೋಕಂತೂ ಏನು ಆಗಲ್ಲ. ನೋಡೊಕಾದ್ರು ಹೋಗೊದು. ಪೌರಾಣಿಕ ಯಕ್ಷಗಾನ ಇಷ್ಟ. ಕುಣಿತ ಮತ್ತು ಟ್ರಾಜಿಡಿ ಇಷ್ಟ ಆಗತ್ತೆ. ಕರ್ಣಪರ್ವ, ಸತ್ಯ ಹರಿಶ್ಚಂದ್ರ, ಶನಿ ಮಹಾತ್ಮೆ ಎಲ್ಲ ಇಷ್ಟ. ಹೈಸ್ಕೂಲಲ್ಲಿ ಯಕ್ಷಗಾನ ಮಾಡ್ತಿದ್ದೆ. ಸುಧನ್ವಾರ್ಜುನ ಎಲ್ಲಾ ಮಾಡ್ತಿದ್ದೆ. ಮದುವೆಯಾದ ಮೇಲೆ ಬಿಟ್ಟೋಯ್ತು. ನಮ್ಮನೆಯವರಿಗೆ ಅದೆಲ್ಲ ಇಷ್ಟ ಇಲ್ಲ. ನೋಡೋಕೆ ಕಳಿಸ್ತಾರೆ. ಮಗನನ್ನು ಕರ್ಕೊಂಡು ಅಷ್ಟು ಹೋಗ್ತಿರಲಿಲ್ಲ. ಆಟಕ್ಕೆ ಹೋಗುವಾಗ ನಮ್ಮ ಮಾವನವರು ಅವನನ್ನ ಬಿಟ್ಕೊತಿದ್ದರು. ಹಾಗಾಗಿ ಅವನಿಗೆ ಆಸಕ್ತಿ ಬೆಳೀಲಿಲ್ಲ. ಆದರೆ ನನಗೆ ಯಾವುದರಲ್ಲೂ ಅಡಿಕ್ಷನ್ ಅಂತ ಇಲ್ಲ. ನಾಳೆ ನೋಡೋಕೂ ಕಳಿಸಲ್ಲ ಅಂದ್ರೆ ಅದಕ್ಕೂ ಅಡ್ಜಸ್ಟ್ ಆಗ್ತೇನೆ. ಹರಿಶ್ಚಂದ್ರ ಹಾಗೆ ಮಾಡ್ಬೇಕು ಹೀಗೆ ಮಾಡ್ಬೇಕು ಅಂತ ನಡೆ ಬಗ್ಗೆ ಹೇಳ್ತಾರಲ್ಲ, ನನಗೇನು ಹಾಗೆ ಅನ್ನಿಸಲ್ಲ. ಹೇಗೆ ಮಾಡಿದರೂ ಭಾವನೆ ಅಲ್ಲಿ ಬಂದ್ರೆ ಆಯ್ತು’.
ಗಂಡು ಕಲೆಯ ಹೆಣ್ಣು ಪ್ರೇಕ್ಷಕರ ಕತೆಗಳು ಈಗ ಕೇಳುವುದಕ್ಕೆ ಸ್ವಾರಸ್ಯಕರವಾಗಿಯೂ, ತಮಾಷೆಯಾಗಿಯೂ ಕಂಡೀತು. ಆದರೆ ‘ಆಟದ ಹುಚ್ಚು’ ಇರುವ ಹೆಂಗಸರ ಸಮಸ್ಯೆಗಳು ತರಾವರಿ. ಮನೆಯವರಿಗೆ ಆಸಕ್ತಿ ಇದ್ದರೆ ಸಮಸ್ಯೆಗಳಿಲ್ಲ. ಇಲ್ಲದಿದ್ದರೆ ಮನೆಯವರನ್ನು ಒಪ್ಪಿಸುವುದೂ ಹರಸಾಹಸದ ಕೆಲಸ.
ಓಡಾಡುವ ಕಷ್ಟ
ಒಂದು ತಾಳಮದ್ದಲೆ ಪ್ರಸಂಗವನ್ನು ದಿನಾ ಒಂದು ಸಲವೂ ಕೇಳದೇ ಇದ್ದರೆ ನಿದ್ದೆ ಬರೊಲ್ಲ ಅನ್ನುವ ಅಪರ್ಣ ಅವರಿಗೂ, ತಾಳಮದ್ದಲೆ ಸಪ್ತಾಹಗಳಿಗೆ ಹೋಗಬೇಕೆಂಬ ಇಚ್ಚೆ. ಆದರೆ ಅದಕ್ಕೆ ಅನುಕೂಲ ಇಲ್ಲ. ತೀರಾ ದೂರ ಹೋಗೋಕೆ ಆಗೊಲ್ಲ, ಎಲ್ಲದಕ್ಕೂ ಅವರಿವರ ಹತ್ರ ಅಲ್ಲಿಗೆ ಬಿಡಿ, ಇಲ್ಲಿಗೆ ಬಸ್ಸು ಹತ್ತಿಸಿ ಅನ್ನಬೇಕು. ಹೆಂಗಸರಿಗೆ ಕರೆದುಕೊಂಡು ಹೋಗುವವರಿಲ್ಲದಿದ್ದರೆ ಓಡಾಡುವುದು ಕಷ್ಟ ಎನ್ನುವುದು ಅವರ ಅಳಲು.
ಖುಷಿಯ ಹೋಲಿಕೆ ಯಾವುದರ ಜೊತೆಗೆ? ಅಡುಗೆ, ಮಕ್ಕಳು…?
ಯಕ್ಷಗಾನದಲ್ಲಿ ಸಿಗೋ ಖುಷಿಯನ್ನು ಹೇಗೆ ವರ್ಣಿಸೋದು ಎನ್ನುವ ಮಾತು ಒಮ್ಮೆ ಹೀಗೆ ಅಡುಗೆ ಮನೆಯ ಧ್ಯಾನದಂತ ಕೆಲಸದ ಮಧ್ಯೆ ಒಬ್ಬರ ಹತ್ತಿರ ಮಾತಾಡುವಾಗ ಬಂತು. ಊಟದ ಖುಷಿಯ ಹಾಗೋ ಎನ್ನುವ ಮಾತೂ ಬಂತು. ‘ಹಾಗಂತೂ ಅಲ್ಲವೇ ಅಲ್ಲ. ಅದು ಮನಸ್ಸಿನ ಖುಷಿ. ಮಕ್ಕಳು ದೊಡ್ಡವರಾಗಿ ಏನೊ ಸಾಧಿಸಿದರು ಅನ್ನುವಾಗಿನ ಖುಷಿಗೂ ಹೋಲಿಸೋಕಾಗಲ್ಲ. ಹೋಗಬೇಕು ಅನ್ನುವ ತುಡಿತ ಇರುತ್ತೆ, ಮನೆಯಲ್ಲಿ ಸಿಗದ ಖುಷಿ ಅಲ್ಲಿ ಸಿಗತ್ತೆ’.
ವೆಹಿಕಲ್ ಕಲಿಯೋದು ಕಷ್ಟ
ಇನ್ನೊಬ್ಬರು ಕೂಡ ಹೈಸ್ಕೂಲಿನಲ್ಲಿ ಒಂದು ಯಕ್ಷಗಾನ ಪ್ರಯೋಗದಲ್ಲಿ ಭಾಗವಹಿಸಿದರು. ಅವರಿಗೆ ಮದುವೆ ಮುಂಚೆ ಮತ್ತು ಮದುವೆಯಾದ ನಂತರ ಯಕ್ಷಗಾನ ನೋಡೋದ್ರಲ್ಲಿ ಅಷ್ಟೇನು ವ್ಯತ್ಯಾಸವಾಗಿಲ್ಲ. ‘ಯಕ್ಷಗಾನ ಮಾಡೋಕೆ ಇಷ್ಟ ಇತ್ತು. ಆದರೆ ಅದಕ್ಕೆ ವೆಹಿಕಲ್ ಕಲೀಬೇಕು ಅಂದ್ರು. ದಿನಾ ಪ್ರಾಕ್ಟೀಸ್‌ಗೆ ಹೋಗೊಕೆ ಬೇಕಲ್ಲ. ಅದು ಕಷ್ಟ ಆಯ್ತು. ಅದಕ್ಕೆ ಅನುಕೂಲ ಆಗ್ಲಿಲ್ಲ. ಸಾಹಿತ್ಯ, ಕುಣಿತ, ಅಭಿನಯ ಎಲ್ಲದೂ ಸಮ ಸಮ ಇರೋರು ಇಷ್ಟ. ಬರೀ ಕುಣಿತ ನೋಡೊದಾದ್ರೆ ಕ್ವಿಕ್‌ನೆಸ್ ಇರಬೇಕು. ಯಕ್ಷಗಾನದಲ್ಲಿ ಜೋಶ್ ಮುಖ್ಯ. ತುಂಬಾ ಮಾತು, ಬರೀ ದುಃಖ ಇರೋದು ಅಷ್ಟು ಇಷ್ಟ ಆಗಲ್ಲ. ಯಕ್ಷಗಾನದಲ್ಲಿ ಕಲಿಯೋದಿದೆ. ಟಿ ವಿ ಸೀರಿಯಲ್‌ನಲ್ಲಿ ಅಂಥದೇನೂ ಇರಲ್ಲ. ಟೈಮ್ ಪಾಸ್. ಸ್ಟೇಜ್‌ನಲ್ಲಿ ನೋಡೋದು, ಆ ಕ್ಷಣದಲ್ಲಿ ರಂಗಸ್ಥಳದಲ್ಲಿ ಆಗೋದು ಅದೆಲ್ಲ ಬಹಳ ಮುಖ್ಯ ಆಗತ್ತೆ. ಹೊಸ ಪ್ರಸಂಗ ನೋಡೇ ಇಲ್ಲ. ಫಾಸ್ಟ್ ಪ್ರಸಂಗನೇ ಜಾಸ್ತಿ ಇಷ್ಟ.’
ವಿಮರ್ಶೆ ಮಾಡೋಕೆ ಬರೊಲ್ಲ
‘ನನಗೆ ವಿಮರ್ಶೆ ಮಾಡಕ್ಕೆ ಬರಲ್ಲ, ನೋಡಿದ ಮೇಲೆ ನಾಲ್ಕೈದು ದಿನ ಅದೇ ಗುಂಗಲ್ಲಿ ಇರ್ತೀನಿ. ಹಳೇ ಹಾಡು ಹೇಳೊದು, ಯಕ್ಷಗಾನ ನೋಡೊದು ಇಷ್ಟೇ ನನ್ನ ಜೀವನದಲ್ಲಿ ಖುಷಿ ಇರೋದು’. ಹಾಡಿಗೆ ಪಟ್ಟಿ ಪೆನ್ನು ಬೇಡ. ಅವರ ಸುತ್ತ ಮುತ್ತು ಕೂತವರು ಸರಸ್ವತಿ ಹಾಡು ಹೇಳಿ ಅಂದ್ರೆ ಅದ್ಯಾವ ಸರಸ್ವತಿನಾ ಅಂತಾನೆ, ಹೊ ಇದಾ ಅಂತ ‘ಜ್ಞಾನ ಮಾರ್ಗವ ತೋರಮ್ಮ ರಾಜೇಶ್ವರಿ’ ಹಾಡು ಹೇಳಿದರು. ಸ್ಪಷ್ಟವಾಗಿ, ಶೃತಿ, ಧಾಟಿ ಪ್ರಿಂಟ್ ಆಗಿದೆ ಅನ್ನೊ ಹಾಗೆ ‘ರಂಗ ನಾಯಕ’ ವನ್ನು ಯಾವ ಭಾಗವತರಿಗೆ ಕಡಿಮೆ ಇಲ್ಲದಂತೆ ಹೇಳಿದ ಅವರಿಗೆ ಯಕ್ಷಗಾನ ನೋಡುವಾಗ “ನಾನೇ ಇಲ್ಲಿ ಇರೊಲ್ಲ” ಅನ್ನಿಸೊದಂತೆ.
ತೀರಾ ಅಭಿನಯ ಆಗೊಲ್ಲ
‘ಅಂಬೆ ಹಲ್ಲು ಕಟ ಕಟ ಗುಡಿಸೋದು, ತೀರಾ ಅಳೋದು ಎಲ್ಲ ಜಾಸ್ತಿ ಆಗತ್ತೆ. ಕೆಲವು ಭಾಗವತರಿಗೆ ಗ್ರಿಪ್ ಇರೊಲ್ಲ. ಚೆಂದ ಹಾಡು ಮಾತ್ರ ಹೇಳುತ್ತಾರೆ. ಇಡೀ ಆಟ ಚೆನ್ನಾಗಾಯ್ತು ಅಂದ್ರೆ ಅದ್ರಲ್ಲಿ ಭಾಗವತರದ್ದೇ ಇರೋದು. ಹೊಸ ಪ್ರಸಂಗಾನೂ ತುಂಬಾ ಇಷ್ಟ. ನೋಡುವಾಗ ಖುಷಿಯಾಗತ್ತೆ ಆದರೆ ವರ್ಷಗಟ್ಟಲೇ ನೆನಪಿರಲ್ಲ. ಅದನ್ನ ಮತ್ತೆ ಮತ್ತೆ ಮಾಡಿದ್ರೆ ನೆನಪಿರತ್ತೆ. ಎಲ್ಲಾ ಅದಕ್ಕೆ ಬೈತಾರೆ, ಸರ್ಕಸ್ ಮಾಡ್ತಾರೆ, ಹಾಗೆ ಮಾಡ್ತಾರೆ ಹೀಗೆ ಮಾಡ್ತಾರೆ ಅಂತಾರೆ. ನನಗೆ ಖುಷಿ ಆಗತ್ತೆ. ಅದರಲ್ಲಿ ಏನು ತಪ್ಪು? ಪಾತ್ರದ ಕುಲ ಕಸುಬು ಅಂತ ಅದನ್ನು ತೋರಿಸಿದ್ರೆ ಅದರಲ್ಲಿ ತಪ್ಪು ಹೇಗೆ ಆಗುತ್ತೆ. ಹಿಂದಿಂದಲೂ ಅಂತದ್ದೆಲ್ಲ ಮಾಡಿದ್ದೆ’.
ರಾತ್ರಿ ನಂಬರ್ ಒನ್‌ಗೆ ಹೋಗೋ ಪ್ರಾಬ್ಲಮ್.
‘ಒಬ್ಬರೇ ಇದ್ದರೆ, ಅದೇ ಸಾಲಲ್ಲಿ ಯಾರಾದರೂ ಮಹಿಳೆಯರಿದ್ದರೆ ಅವರು ಎದ್ದ ಕೂಡಲೇ ಅವರೊಟ್ಟಿಗೇ ಹೋಗೋದು. ಆ ಸಾಲಲ್ಲಿ ಯಾರೂ ಮಹಿಳೆಯರಿಲ್ಲ ಅಂದ್ರೆ ಹಿಂದೆ ಎದ್ದು ಹೋಗೋ ಮಹಿಳೆಯರು ನಮಗೆ ಕಾಣಿಸಿರಲ್ಲ. ಆಗ ಹಿಂದೆ ತಿರುಗಿ ಅವರ ಮುಖ ನೋಡಿದ ಕೂಡಲೇ ಅವರಿಗೂ ಗೊತ್ತಾಗತ್ತೆ. ಅವರು ಸಂಕೇತ ರವಾನಿಸ್ತಾರೆ. ಇನ್ನೈದು ನಿಮಿಷ ಅಂತನೊ ಹತ್ತು ನಿಮಿಷನೊ ಅಂತ. ಅವರು ಎದ್ದು ಹೋಗುವಾಗ ಬಾಗಿಲಿನಿಂದ ನಮ್ಮನ್ನ ನೋಡ್ತಾರೆ, ನಮಗೆ ಒಬ್ಬರೇ ಹೋಗೋಕಾಗಲ್ಲ ಅಂತಲ್ಲ, ಕತ್ತಲೆ ಜಾಗಕ್ಕೆ ಹೋಗುವಾಗ, ಇನ್ಯಾರಾದ್ರೂ ಬಂದ್ರೆ ಸೂಚನೆ ಕೊಡೋಕೆ ದೂರದಲ್ಲಿ ಒಬ್ಬರನ್ನು ನಿಲ್ಲಿಸಿಕೊಂಡರೆ ನಮಗೆ ಧೈರ್ಯ. ನಮಗೆ ಆಟಕ್ಕೆ ಹೋಗಿ ಹೋಗಿ ಕೆಲವೊಂದು ಮೇಳ ಮನೆ ತರ ಆಗಿರತ್ತೆ, ಭಾಗವತರಿಂದ ಹಿಡಿದು ಪುಂಡು ವೇಷದ ಹುಡುಗರ ತನಕ ಎಲ್ಲರ ಪರಿಚಯ ಇರತ್ತೆ. ಅಂತಹ ಮೇಳದ ಆಟಕ್ಕೆ ಒಬ್ಬರೇ ಹೋಗೊಕೆ ಹೆದರಿಕೆ ಇಲ್ಲ. ಪ್ರೇಕ್ಷಕರಲ್ಲಿ ಯಾರೂ ಸಿಗದಿದ್ದರೆ, ಚೌಕಿ ಮನೆಗೆ ಹೋದರೆ ಅಲ್ಲಿ ಅವರಿಗೆ ನಾವು ಬಂದು ನಿಂತುಕೊಡ್ಲೆ ಗೊತ್ತಾಗತ್ತೆ, ತಡೀ ಅಕ್ಕ ಅಂತ ಅವರು ಮಾಡುತಿದ್ದ ಕೆಲಸ ಬಿಟ್ಟು ಬಂದು ನಮ್ಮನ್ನು ಕರ್ಕೊಂಡು ಹೋಗಿ ದೂರದಲ್ಲಿ ನಿಂತು ರಕ್ಷಣೆ ಕೊಡ್ತಾರೆ, ಅದರ ಬಗ್ಗೆ ಎಲ್ಲ ನಾಚಿಕೆ ಬಿಡದಿದ್ದರೆ ಆಟ ನೋಡೊಕೆ ಆಗೊಲ್ಲ. ಎಲ್ಲರಿಗೂ ಅದು ಬರೊದೆ ಅಲ್ವಾ’.
ಮೇಳದ ಪ್ರಧಾನ ಭಾಗವತರು ಪ್ರೇಕ್ಷಕರ ಮಾತು ಕೇಳ್ತಾರೆ
‘ಪುಂಡು ವೇಶ ಮಾಡ್ತಾ ಇರೋರು ಅದನ್ನೇ ಮಾಡ್ತಾ ಇದ್ದರೆ, ಅವರು ಬೆಳಿಯೋದು ಯಾವಾಗ, ಒಮ್ಮೆ ಹೋಗಿ ಭಾಗವತರಿಗೆ ಹೇಳಿದ್ದೆ. ಅವರಿಗೆಲ್ಲ ನಿಧಾನವಾಗಿ ಬೇರೆ ಬೇರೆ ಪಾತ್ರ ಕೊಡಿ ಅಂತ. ಒಂದು ಮೇಳದ ಎಲ್ಲಾ ಆಟ ನೋಡುವಾಗ ನಮಗೂ ಗೊತ್ತಾಗತ್ತೆ. ಪಾತ್ರದ ವೈವಿಧ್ಯತೆ ಇಲ್ಲದೆ ಬರೀ ಕುಣಿದರೆ ಹುಡುಗರು ಬೆಳಿಯೊಲ್ಲ ಅಂತ. ಆಮೇಲೆ ಕಿರೀಟ ವೇಷ ಮಾಡೊದಕ್ಕೆ ಮುಂದಿನ ತಲೆಮಾರು ಬೇಕಲ್ಲ. ಅವರು ಒಮ್ಮೆ ಫೋನ್ ಮಾಡಿ ಹೇಳಿದರು ನೋಡಿ, ನಿಮ್ಮ ಮಗನಿಗೆ ಇವತ್ತು ಈ ಪಾತ್ರ ಕೊಟ್ಟಿದ್ದೇನೆ ಅಂತ. ಅವರ ಬಗ್ಗೆ ಕಾಳಜಿ ವಹಿಸೋದು ನೋಡಿ ಹುಡುಗರಿಗೆ ನಿಮ್ಮ ಅಮ್ಮ ನೋಡಿ ತಾಕೀತು ಮಾಡ್ತಾರೆ ಅಂತ ಹೇಳ್ತಾ ಇದ್ದರು. ಆದರೆ ಭಾಗವತರು ನಮ್ಮ ಮಾತಿಗೆ ಬೆಲೆ ಕೊಟ್ಟರಲ್ಲ. ನಮ್ಮ ಮಾತಿಗೆ ಕೆಲವೊಂದು ಜಾಗದಲ್ಲಾದರು ಬೆಲೆ ಇರತ್ತೆ’.
ಗಂಡನಿಗೆ ಹೇಳದೇ ಒಳ್ಳೇ ಮೊಬೈಲ್ ಕೊಂಡಿದ್ದು
‘ತಾಳಮದ್ದಲೆ ಡೌನ್ ಲೋಡ್ ಮಾಡ್ಕೊಳೋಕೆ, ಮೆಮೊರಿ ಜಾಸ್ತಿ ಇರಬೇಕು, ಯೂಟ್ಯೂಬ್‌ನಲ್ಲಿ ಲೈವ್ ನೋಡೋಕೂ ಒಳ್ಳೇ ಮೊಬೈಲ್ ಬೇಕು. ಮನೆಲಿ ಕೇಳಿದ್ರೆ ಅದೆಲ್ಲ ಯಾಕೆ, ಅಷ್ಟು ದುಡ್ಡಿಂದು ಯಾಕೆ ಅಂತಾರೆ. ಮನೆ ಖರ್ಚು ವೆಚ್ಚ ಎಲ್ಲಾ ನಾನೇ ಲೆಕ್ಕ ಇಡೋದು. ಬ್ಯಾಂಕ್, ಇನ್ಷುರೆನ್ಸ್, ಉಳಿದ ಖರ್ಚು ಎಲ್ಲದೂ ಮ್ಯಾನೇಜ್ ಮಾಡೋದು. ನಾನು ಟೀವಿ ನೋಡಲ್ಲ, ರೇಶ್ಮೆ ಸೀರೆ ತಗೊಳಲ್ಲ, ಒಳ್ಳೇ ಮೊಬೈಲ್ ತಗೊಳದು ನನಗೆ ಅಗತ್ಯದ ಖರ್ಚು, ನನಗಾಗಿ ಮಾಡಿಕೊಂಡದ್ದು ಇದೊಂದೆ. ಬೇಡ ಅನ್ನೊದಿಲ್ಲ. ಆದರೂ ಇಷ್ಟು ದುಡ್ಡು ಅಂತ ನಿಧಾನಕ್ಕೆ ಹೇಳಿದ್ರೆ ಒಳ್ಳೇದು ಅಂತ ಮೊಬೈಲ್ ತಗೊಂಡು ತಿಂಗಳ ಗಟ್ಲೆ ಅವರಿಗೆ ಗೊತ್ತಿರಲಿಲ್ಲ. ಅವರು ಕೆಲಸಕ್ಕೆ ಹೋದ ಮೇಲೆ ಪದ್ಯ, ಮಾತು ಕೇಳ್ತ ಮನೆಕೆಲಸ ಮಾಡೋದು. ಆಮೇಲೆ ನಿಧಾನವಾಗಿ ಗೊತ್ತಾಯ್ತು’.
ಕೃತಿ ಹೊಸನಗರ ತಾಲ್ಲೂಕಿನ ಪುರಪ್ಪೇಮನೆ ಗ್ರಾಮದವರು. ಕೃಷಿಕರು. ಬಿಡುವಿನಲ್ಲಿ ಮಹಿಳಾ ತಾಳಮದ್ದಲೆ ತಂಡ, ಭಾಗವತಿಕೆ, ಬರವಣಿಗೆ ಹಾಗೂ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.