ನಾನೂ ನನ್ನ ತಾಯಿಯೂ ಅಪ್ಪನ ಆದೇಶಗಳಿಗೆ ಸದಾ ಸಿದ್ಧವಾಗಿರಲೇಬೇಕಿತ್ತು. ಆಗಿನ್ನೂ ಆತ ಪೇಟೆಯ ಎಂಡದ ದಾಸನಾಗಿರಲಿಲ್ಲಾ. ಖಡಕ್ ಆದ ಮನುಷ್ಯ. ಅತ್ಯುಗ್ರ ಸ್ವಾಭಿಮಾನಿ. ಆ ಕ್ಷಣವೇ ಅಲ್ಲೇ ಮರಣವಾದರೂ ಚಿಂತೆ ಇಲ್ಲಾ ಎಂದು ಅನ್ಯಾಯದ ವಿರುದ್ಧ ಪ್ರತಿಭಟಿಸಿ ಇಡೀ ಊರಿಗೆ ಊರನ್ನೇ ಎದುರು ಹಾಕಿಕೊಂಡು ದಂಗೆ ಏಳುತ್ತಿದ್ದ. ಅವನ ರೇಷಿಮೆಯ ಮನಸ್ಸೇ ತಿಳಿಯುತ್ತಿರಲಿಲ್ಲ. ಅತ್ತ ತಾತ ತನ್ನ ಹೋಟೆಲ್ ಕಾಯಕದಲ್ಲಿ ಮುಳುಗಿರುತ್ತಿದ್ದ. ಎಷ್ಟೋ ಬಡವರಿಗೆ ಸುಮ್ಮನೆ ಸಾಲದ ಲೆಕ್ಕದಲ್ಲಿ ಅನ್ನಹಾಕುತಿದ್ದ- ಎಂದೂ ಸಾಲ ಕೇಳಿರಲಿಲ್ಲ ಯಾರನ್ನೂ ತಾತ.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಹನ್ನೆರಡನೆಯ ಕಂತು

 

ಅವತ್ತಿನ ಆ ಜನರ ಜೀವನ ಕ್ರಮಗಳು ಎಷ್ಟು ತರತರದಲ್ಲಿ ವರ್ಷವಿಡೀ ವಿಸ್ತರಿಸಿಕೊಂಡಿದ್ದವು ಎಂದರೆ ಋತು ಚಕ್ರಗಳಂತೆಯೆ ಅವರ ಕೆಲಸ ಕಾರ್ಯಗಳು ಹಂಚಿ ಹೋಗಿರುತ್ತಿದ್ದವು. ನನ್ನಪ್ಪ ಸತ್ತು ಇಂದಿಗೆ ಇಪ್ಪತ್ತು ವರ್ಷಗಳೇ ಮೀರಿವೆ. ಅವನ ಮೇಲಿನ ಸಿಟ್ಟು ತಗ್ಗಿಲ್ಲ. ಆಗಾಗ ಕನಸಿಗೆ ಬಂದು ಈಗಲೂ ಬಡಿಯುತ್ತಾನೆ. ಹೆದರಿಸುತ್ತಾನೆ. ಬೆಳಿಗ್ಗೆ ಎದ್ದಾಗ ಯಾರಿಗೆ ಆ ಕನಸ ಹೇಳಲಿ? ಯಾರಿಗೂ ಹೇಳುವುದಿಲ್ಲ… ಅಗತ್ಯವೇನಿದೆ? ಆದರೆ ಮನಸ್ಸು ಪ್ರಕ್ಷುಬ್ದಗೊಂಡಿರುತ್ತದೆ. ‘ಛೇ; ಇವನು ಸತ್ತರೂ ನನ್ನ ಕನಸುಗಳಲ್ಲಿ ಎದ್ದು ಬರುತ್ತಾನಲ್ಲಾ’ ಎಂದು ಬೇಸರವಾಗುತ್ತದೆ. ಏನು ಮಾಡಲೀ; ಒಳಗುದಿಯ ಹಾಗೇ ನುಂಗಿಕೊಳ್ಳುವೆ.

ಅವನ್ನೆಲ್ಲ ಮರೆತು ಬಿಡೂ ಎಂದು ಹಿರಿಯರು ಸಂತೈಸುವರು. ಮರೆಯಲು ಯತ್ನಿಸಿದಂತೆಲ್ಲ ಯಾವ ಕಹಿಯೊ, ಅದೇ ಸಂಗತಿಗಳು ಮತ್ತೆ ಮತ್ತೆ ಹೊರಳಿ ಬರುತ್ತವೆ. ನಿಮ್ಮಪ್ಪನ ಬಗ್ಗೆ ಒಂದಿಷ್ಟಾದರೂ ನಿನಗೆ ಋಣ ಇಲ್ಲವಲ್ಲೊ ಎಂದು ಕೇಳುತ್ತಾರೆ. ನಿರ್ದಾಕ್ಷಿಣ್ಯವಾಗಿ ‘ಇಲ್ಲಾ’ ಎನ್ನುವೆ. ‘ನಿಮ್ಮಪ್ಪ ಇಲ್ಲದೆ ನೀನು ಹುಟ್ಟಿಬಿಟ್ಟೆಯಾ’ ಎಂದು ಸ್ವತಃ ನನ್ನಕ್ಕನೇ ಸವಾಲು ಎಸೆವಳು. ‘ಹೌದು… ಅವನಿಲ್ಲದಿದ್ದರೂ ನಾನು ಹುಟ್ಟಿಯೇ ಹುಟ್ಟಿ ಬರುತ್ತಿದ್ದೆ. ಬಂದಿದ್ದೀನಲ್ಲಾ…’ ‘ಹಾಗಾದ್ರೆ ಯಾರಿಗೆ ಹುಟ್ಟಿದೆಯೊ’ ಎಂದು ಕುಡುಕ ಚಿಕ್ಕಪ್ಪ ರಗಳೆ ತೆಗೆದಿದ್ದ. ತಣ್ಣಗೆ ಹೇಳಿದ್ದೆ; ‘ಸತ್ಯವಾಗಲೂ ನನ್ನ ತಾಯಿಗೆ ನಾನು ಹುಟ್ಟಿರುವೆ!.’ ‘ಅಂಗಾದ್ರೆ ನಿಪ್ಪುನ್ಗೆ ನೀನು ಉಡ್ಲಿಲ್ಲವೇ’. ‘ಗೊತ್ತಿಲ್ಲ… ನನಗೆ ಗೊತ್ತು ನನ್ನ ತಾಯಿ ಮಾತ್ರ . ಅವಳ ಗರ್ಭ. ಆಕೆಯ ಬೇನೆ ಸಂಕಟ ಅಸುಖ… ಸದಾ ಹೆಪ್ಪುಗಟ್ಟಿರುತ್ತಿದ್ದ ಅವಳ ದುಃಖ. ನನ್ನ ತಾಯಿ ನನಗೆ ಹೊಕ್ಕಳು ಗುರುತು ಕೊಟ್ಟು ಹೋಗಿದ್ದಾಳೆ. ದಿನಕ್ಕೆ ಐದಾರು ಬಾರಿಯಾದರೂ ಅದನ್ನು ಮುಟ್ಟಿ ನೋಡಿಕೊಂಡು ಇದು ನನ್ನ ತಾಯಿ ನನ್ನ ಜೀವಿತಾವಧಿಯ ಕಾಲಕ್ಕೂ ಕೊರೆಸಿ ಹೋಗಿರುವ ಶಾಸನ ಎಂದು ಹೆಮ್ಮೆಪಡುವೆ; ಎಂದು ಹೇಳಿ ಹೇಳಿ ಸಾಕಾಗಿದೆ. ಅಪ್ಪನ ಹೆಮ್ಮೆ ಏನಿದೆ? ಅವನ ತೆವಲಿಗೆ ಅವನು ನನ್ನ ತಾಯ ಕೆಡವಿಕೊಂಡಿದ್ದ… ಅಕಸ್ಮಾತ್ ಹುಟ್ಟಿದ್ದೆ ಅಷ್ಟೇ… ಅದರಲ್ಲೇನಿದೆ ಮಹಾ ಸುಖಾ… ಯಾವ ಮೃಗವಾದರೂ ಹಾಗೆ ಹುಟ್ಟಿಗೊಂದು ಕಾರಣವಾಗಿರಬಹುದು! ನೆಪ ಮಾತ್ರಕ್ಕೆ ಹುಟ್ಟಿದರೇ ಮನುಷ್ಯರೂ? ಹೆತ್ತು ಹೊತ್ತು ಎದೆ ಹಾಲ ಕುಡಿಸಿ ಬೆಳೆಸಿದ್ದು ಬೇರಾಗಲಿಲ್ಲ. ಅದರ ರೆಂಬೆ ಕೊಂಬೆಗಳು ರಾರಾಜಿಸುತ್ತವೆ, ಕಾಣುತ್ತವೆ. ಅಂದ ಚೆಂದ ಗೋಚರ. ಅಗೋಚರ ಬೇರುಗಳು ಎಲ್ಲಿಂದ ನೀರು ಕುಡಿದವೊ, ಗಾಳಿ ಬೆಳಕಿನಿಂದ ಉಸಿರಾಡಿದವೊ.

ಯಾವುದು ಪುರುಷಾರ್ಥ, ತಾಯಾರ್ಥ! ಹೆತ್ತವಳಿಗೆ ಅದು ಕರ್ಮವಂತೆ! ಹುಟ್ಟಿಸಿದವನಿಗೆ ಧರ್ಮವಂತೆ! ಇಲ್ಲ ಇಲ್ಲಾ… ನನಗೆ ಹೆತ್ತ ತಾಯಾರ್ಥವೇ ಶ್ರೇಷ್ಠವಾದದ್ದು. ಅವಳೇ ಧರ್ಮ; ಆದರೆ ಅವಳೇ ಇಲ್ಲವಲ್ಲಾ… ಈ ವಿಚಾರಗಳು ಹಾಗೆ ಹೀಗೇ ಇರಲೀ… ಬೆರೆಸುವೆ, ತುಳುಕಿಸುವೆ, ಆಕ್ರಂದದಿ ಒಡಲನೂಲ ನೇಯುವೆ. ನಾದದ ನದಿಯೊಂದು ಹರಿದು ಕರಗಿದಂತೆ.

ಅಪ್ಪನ ರೇಷಿಮೆಯ ಹುಳುಗಳ ಸಾಕಾಣಿಕೆಯೇ ಒಂದು ಸಂತೈಕೆ; ಹಾಗೇ ವಿಷಾದ ವಿದಾಯವಾಗಿತ್ತು. ನನ್ನಪ್ಪ ಈ ಹುಳುಗಳ ಬಗ್ಗೆ ಇಷ್ಟೊಂದು ಹಗಲಿರುಳು ತಲೆಕೆಡಿಸಿಕೊಂಡು ಸಾಕಿ ಬೆಳೆಸಿ ರೇಷಿಮೆಯ ಗೂಡಾಗುವ ತನಕ ಬಹಳ ನಿಷ್ಠನಾಗಿದ್ದನಲ್ಲಾ… ಅವನಲ್ಲಿದ್ದ ಅಂತಹ ಚೈತನ್ಯ ಸುಖ ಏನಿತ್ತು ಎಂದು ಎಷ್ಟೋ ಸಲ ಕೇಳಿಕೊಂಡಿರುವೆ. ಕೆಲವೊಮ್ಮೆ ವಿವರ, ಸಾಕ್ಷಿ ಉತ್ತರ ಇತ್ಯಾದಿಗಳ ಒಳ ಸಂಬಂಧಗಳೆಲ್ಲ ನಿರುತ್ತರವಾಗಿರುತ್ತವೆ.

ಅಪ್ಪ ಎಷ್ಟೊಂದು ಕುಶಲಿ ರೇಷ್ಮೆ ಹುಳು ಕಾಸಾಣಿಕೆಯವನು ಎಂದು ಹೇಳುವ ಹೆಮ್ಮೆ ಇಲ್ಲ. ಹಿಂಸಕರ ಆಯ್ಕೆಯ ಸುಖಗಳ ನಿಗೂಢಗಳೇ ಗೊತ್ತಾಗುವುದಿಲ್ಲ. ರೇಷಿಮೆಯ ಹುಳುಗಳಿಗೆ ಉಪ್ಪು ನೇರಳೆ ಸೊಪ್ಪೇ ಮೇವು. ಅದು ಬಿಟ್ಟು ಬೇರೆ ಮೇವಿಲ್ಲಾ. ಆರಂಭದ ಸಾಕಾಣಿಕೆ ಸುಲಭ. ಅದಕ್ಕೆಂದೇ ಒಂದು ಪ್ರತ್ಯೇಕ ವ್ಯವಸ್ಥೆ ಇತ್ತು. ಆ ದೊಡ್ಡ ಮನೆಯಲ್ಲಿ ಒಂದು ಕೊಠಡಿಯ ಅದಕ್ಕೆಂದೇ ಅಪ್ಪ ಮೀಸಲಿರಿಸಿದ್ದ. ಹುರುಳಿ ಎಳ್ಳು ಎರಚಿ ಒಂದು ಬೆಳೆ ತೆಗೆದುಕೊಳ್ಳುವಂತದ್ದಲ್ಲಾ. ಸಕತ್ ಕಟ್ಟೆಚ್ಚರ ಶಿಸ್ತು ಬೇಕಿತ್ತು. ಅಪ್ಪ ಸಾಧಿಸಿದ್ದ ಅದನೆಲ್ಲ ಒಂದು ಕಾಲಕ್ಕೆ ರೇಷಿಮೆಯ ಹುಳುಗಳು ಬಹಳ ಸೂಕ್ಷ್ಮ ಜೀವಿಗಳು. ಎಚ್ಚರ ತಪ್ಪಿದರೆ ಇಡೀ ಎಲ್ಲ ತಟ್ಟೆಯ ಹುಳುಗಳು ರೋಗ ಹಿಡಿದು ಸತ್ತು ಹೋಗುತ್ತಿದ್ದವು. ತಟ್ಟೆಗಳು ಎಂದರೆ ಅಗಲವಾದ ಬಿದಿರಿನ ತಟ್ಟೆಗಳು. ಅಂತಹ ಹನ್ನೆರಡು ತಟ್ಟೆಗಳು ಒಂದು ದಡೇವಿನಲ್ಲಿದ್ದವು. ದಡೇವಿನ ಅರ್ಥ ಗೊತ್ತಿಲ್ಲ. ಎಲ್ಲವೂ ಬಿದಿರಿನಿಂದ ಮಾಡಿದ್ದ ರೇಷಿಮೆ ಹುಳುಗಳ ಮನೆ ಅದು. ಅವುಗಳ ಮನೆ ಯಾವತ್ತೂ ವಪ್ಪಾಚಾರವಿರಬೇಕಿತ್ತು. ಅಪ್ಪ ಎಷ್ಟು ನಿಷ್ಠೆಯಲ್ಲಿ ನಿರ್ವಹಿಸುತ್ತಿದ್ದ ಎಂದರೆ ಅವನು ಇವನೇನಾ ಎನಿಸುತ್ತಿತ್ತು. ಅಷ್ಟು ದೊಡ್ಡ ಬಿದಿರಿನ ಹನ್ನೆರಡು ತಟ್ಟೆಗಳಿಗೆ ರೇಷ್ಮೆ ಸೊಪ್ಪು ಹಾಕುವುದು ಅಷ್ಟು ಸಲೀಸಾಗಿರಲಿಲ್ಲ. ಬಿದಿರಿನ ಗಳುಗಳ ಹಾಸಿನಲ್ಲಿ ಒಂದೊಂದು ದೊಡ್ಡ ತಟ್ಟೆಯ ಕೂರಿಸುತ್ತಿದ್ದರು. ಎಳೆದು ಸೊಪ್ಪು ಹಾಕಿ ಎತ್ತಿ ಆ ತಟ್ಟೆಗಳ ಸ್ವಸ್ಥಾನಕ್ಕೆ ತಳ್ಳಿ ಕೆಲಸ ಮುಗಿಸುವಷ್ಟರಲ್ಲಿ ಸಾಕಾಗಿ ಹೋಗುತ್ತಿತ್ತು. ಎತ್ತಿ ಇಳುಕಿ ಆಳುಗಳು ಸಾಕಪ್ಪ ಎಂದು ನಿಟ್ಟುಸಿರು ಬಿಡುತ್ತಿದ್ದರು.

ಆ ರೇಷಿಮೆಯ ಚಿಟ್ಟೆಗಳ ಮೂಲಕ ಮೊಟ್ಟೆ ಇಡಿಸಿ ಒಂದು ಗಟ್ಟಿ ಕಾಗದದ ಮೇಲೆ ಅವನ್ನು ಸಕಾಲಕ್ಕೆ ಮಾರುತ್ತಿದ್ದರು. ಆ ಪುಟಾಣಿ ಚಿಟ್ಟೆಗಳೂ ಬೆಳ್ಳಗೆ ಅತಿ ಸಣ್ಣ ಮೊಟ್ಟೆಗಳ ಇಟ್ಟಿರುತ್ತಿದ್ದವು. ಅದೊಂದು ಉದ್ಯಮವಾಗಿತ್ತು. ಆ ಕಾಲದಲ್ಲಿ ಇಡೀ ದೇಶದಲ್ಲೇ ರೇಷ್ಮೆಯ ನಾಡಾಗಿತ್ತು ನಮ್ಮೂರು. ನಮ್ಮಪ್ಪನ ಹೆಜ್ಜೆಗಳೂ ಆ ದಾರಿಯಲ್ಲಿದ್ದವು. ಮೊಟ್ಟೆಗಳೆಂದರೆ ಪತಂಗಗಳ ಮೊಟ್ಟೆ ಗೊತ್ತಲ್ಲಾ… ಕಾಣುವುದೇ ಇಲ್ಲಾ. ಅವು ಮಾಗಿ ಮರಿಯಾಗಿ ಹೊರ ಬರುವಾಗ ಮೊಟ್ಟೆಗಳು ಕಪ್ಪಾಗುತ್ತಿದ್ದವು. ಅಂದರೆ ಭ್ರೂಣ ತುಂಬಿ ಬೆಳೆದು ಆಚೆ ಬರುವ ಸಮಯ ಎಂದರ್ಥ. ಅಪ್ಪ ರಾತ್ರಿ ಎಷ್ಟು ಸಲ ಎದ್ದು ಗಮನಿಸುತ್ತಿದ್ದನೊ! ವಿಚಿತ್ರ ಚಡಪಡಿಕೆ ಅವನಿಗೆ. ಅಪ್ಪ ಎಚ್ಚರವಿದ್ದಾನೆ ಎಂದಾಗಲೆಲ್ಲ ನನಗೆ ಭಯದ ಎಚ್ಚರವಾಗಿ ನಟಿಸುತ್ತ ಗಮನಿಸುತ್ತಿದ್ದೆ. ಮೊಟ್ಟೆಯಿಂದ ಹೊರ ಬಂದ ಮರಿ ಹುಳುಗಳು ದಟ್ಟ ಕಪ್ಪು ಕೂದಲಂತೆ ಕಾಣುತ್ತಿದ್ದವು. ತಕ್ಷಣವೆ ಅವಕ್ಕೆ ಮೇವು ಕೊಡಬೇಕಿತ್ತು. ಅಪ್ಪನ ಸಡಗರಕ್ಕೆ ಮಿತಿಯೇ ಇರುತ್ತಿರಲಿಲ್ಲ. ಹೆರಿಗೆ ಮಾಡಿಸುವ ಮಡಕೂಸಮ್ಮನಂತೆ ಪತರುಗುಟ್ಟುತ್ತಿದ್ದ. ಅಷ್ಟು ಸಣ್ಣ ರೇಷಿಮೆ ಹುಳುಗಳ ಬೆರಳಿಂದಲೂ ಸೋಕಿಸುವಂತಿರಲಿಲ್ಲ. ಅಪ್ಪ ಎಲ್ಲ ಮರಿ ಹುಳುಗಳ ಜೋಪಾನ ಮಾಡುತ್ತಿದ್ದ ಏಕಾಗ್ರತೆಯೇ ಬೇರೆ. ದೊಡ್ಡ ಹದ್ದುಗಳ ರೆಕ್ಕೆಯ ಗರಿಯಿಂದ ಹುಳುಗಳ ಒಂದೆಡೆ ಸವರಿ ಕೂಡಿಸಿ ಅವುಗಳಿಗೆ ರೇಷಿಮೆ ಸೊಪ್ಪಿನ ಕುಡಿಗಳ ಎಲೆಗಳ ಅತ್ಯಂತ ಸೂಕ್ಷ್ಮವಾದ ಕೂದಲು ಸೀಳಿದಂತೆ ಹರಿತವಾದ ಉದ್ದನೆಯ ಚಾಕುವಿನಿಂದ ಕತ್ತರಿಸಿ ಆ ಮರಿ ಹುಳುಗಳ ಮೇಲೆ ಉದಿರುಸುತ್ತಿದ್ದ. ಅವು ರಾಕ್ಷಸ ಮರಿಗಳೇ! ಅಲ್ಲೆ ತಿಂದು ಹಿಕ್ಕೆ ಹಾಕಿ ವಾರ ವಪ್ಪತ್ತಿನಲ್ಲೆ ದೊಡ್ಡವಾಗಿ ಬಿಡುತ್ತಿದ್ದವು! ಹಾಗೆ ಅಂತಹ ಮರಿಗಳ ಸಾಕುವುದೂ ಒಂದು ಬಗೆಯಲ್ಲಿ ಬಾಣಂತನವಿದ್ದಂತೆ ಜೋಪಾನ ಮಾಡಬೇಕಿತ್ತು. ತಂದೆ ತಾಯಿ ಇಲ್ಲದ ಆ ಮರಿಗಳ ಸಾಕಿ ಸಲಹಿ ರೇಷಿಮೆಯ ತೆಗೆಯುವುದು ಕಠಿಣ ಕೆಲಸ. ಕಟೆಚ್ಚರವಹಿಸಬೇಕಿತ್ತು. ಹುಳುಗಳು ದಿನದಿನ ಬೆಳೆದಂತೆಲ್ಲ ಅವನ್ನು ಬೇರೆ ಬೇರೆ ದೊಡ್ಡ ಬಿದಿರು ತಟ್ಟೆಗಳಿಗೆ ಬಿಟ್ಟು ದಿನಕ್ಕೆ ಆರು ಸಲ ಮೇವು ಕೊಡಬೇಕಿತ್ತು. ಹನ್ನೆರಡು ದೊಡ್ಡ ತಟ್ಟೆಗಳ ದಡೇವು ನಮ್ಮ ಮನೆಯಲ್ಲಿತ್ತು. ದಿನಕ್ಕೆ ಎಷ್ಟು ಸೊಪ್ಪು ಹಾಕಬೇಕಿತ್ತೂ… ಅವು ಬೆಳೆದಂತೆಲ್ಲ ಅಪ್ಪ ದಪ್ಪ ಗಾತ್ರದಲ್ಲಿ ರೇಷಿಮೆ ಎಲೆಗಳ ಕತ್ತರಿಸಿ ತಟ್ಟೆಗಳಿಗೆ ಹಾಕಿಸುತ್ತಿದ್ದ. ನನಗೋ ಆ ಕೆಲಸ ಮಾಡಿ ಮಾಡಿ ಸಕಾಗಿ ಹೋಗುತ್ತಿತ್ತು. ಅವು ನಾಲ್ಕು ಹಂತಗಳಲ್ಲಿ ಬೆಳೆದು ಗೂಡುಕಟ್ಟಲು ಹಣ್ಣುಳುವಾಗುತ್ತಿದ್ದವು.

ಗೂಡೆಂದರೆ ಗೀಜಗನ ಗೂಡಲ್ಲಾ… ರೇಷಿಮೆ ಗೂಡು. ನಾಲ್ಕು ಹಂತಗಳನ್ನು ಅಪ್ಪ ಒಂದನೆ ಎರಡನೇ ಜ್ವರ ಎಂದು ಎಣಿಸಿ ಅದಕ್ಕೆ ತಕ್ಕಂತೆ ಆಹಾರ ನೀಡಬೇಕಿತ್ತು. ಮಧ್ಯ ರಾತ್ರಿಗೊಮ್ಮೆ ಮುಂಗೋಳಿಗೆ ಮತ್ತೊಮ್ಮೆ ಮೇವು ಹಾಕಬೇಕಿತ್ತು. ನಾನೂ ನನ್ನ ತಾಯಿಯೂ ಅಪ್ಪನ ಆದೇಶಗಳಿಗೆ ಸದಾ ಸಿದ್ಧವಾಗಿರಲೇಬೇಕಿತ್ತು. ಆಗಿನ್ನೂ ಆತ ಪೇಟೆಯ ಎಂಡದ ದಾಸನಾಗಿರಲಿಲ್ಲಾ. ಖಡಕ್ ಆದ ಮನುಷ್ಯ. ಅತ್ಯುಗ್ರ ಸ್ವಾಭಿಮಾನಿ. ಆ ಕ್ಷಣವೇ ಅಲ್ಲೇ ಮರಣವಾದರೂ ಚಿಂತೆ ಇಲ್ಲಾ ಎಂದು ಅನ್ಯಾಯದ ವಿರುದ್ಧ ಪ್ರತಿಭಟಿಸಿ ಇಡೀ ಊರಿಗೆ ಊರನ್ನೇ ಎದುರು ಹಾಕಿಕೊಂಡು ದಂಗೆ ಏಳುತ್ತಿದ್ದ. ಅವನ ರೇಷಿಮೆಯ ಮನಸ್ಸೇ ತಿಳಿಯುತ್ತಿರಲಿಲ್ಲ. ಅತ್ತ ತಾತ ತನ್ನ ಹೋಟೆಲ್ ಕಾಯಕದಲ್ಲಿ ಮುಳುಗಿರುತ್ತಿದ್ದ. ಎಷ್ಟೋ ಬಡವರಿಗೆ ಸುಮ್ಮನೆ ಸಾಲದ ಲೆಕ್ಕದಲ್ಲಿ ಅನ್ನಹಾಕುತಿದ್ದ ಎಂದೂ ಸಾಲ ಕೇಳಿರಲಿಲ್ಲ ಯಾರನ್ನೂ ತಾತ. ‘ತಿಂದಿದ್ದೀ; ದುಡ್ಡು ಮಡಗೊ’ ಎಂಬ ಭಾಷೆಯೆ ಅವನಿಗೆ ಗೊತ್ತಿರಲಿಲ್ಲ. ಧರ್ಮ ಎಂದು ಬಿಟ್ಟು ಬಿಡುತ್ತಿದ್ದ. ಅಪ್ಪನ ಲೆಕ್ಕವೇ ಬೇರೆ. ಅವನಿಗೆ ಲೆಕ್ಕವೇ ಗೊತ್ತಿರಲಿಲ್ಲ! ವೆಚ್ಚ ಮಾಡುವುದರಲ್ಲಿ ಬಹಳ ಧಾರಾಳನಾಗಿದ್ದ. ಅಂತವನಿಗೆ ರೇಷಿಮೆಯ ಹುಚ್ಚು. ಆಗತಾನೆ ಮೂಡುತಿದ್ದ ಹೆಂಗಸರ ಹುಚ್ಚು. ಅವೆರಡರಲ್ಲಿ ಅವನನ್ನು ಅಪಹರಿಸಿತ್ತು ಹೆಣ್ಣುಗಳ ಹುಚ್ಚು. ಅಷ್ಟೆಲ್ಲ ಕಷ್ಟ ಯಾಕೆ? ರೇಷಿಮೆಯ ಬೇಸಾಯದಿಂದ ನಾನೇನು ಕಿಸಿದೆ ಎಂದು ತನ್ನ ಅತ್ಯಾಪ್ತ ಕಾಯಕದ ಬಗ್ಗೆ ತಾನೇ ತುಚ್ಚುವಾಗಿ ಮಾತಾಡುತ್ತಿದ್ದ. ಅವನತಿಗೆ ಕಾರಣಗಳು ಎಲ್ಲೆಲ್ಲಿಂದ ಹುಟ್ಟಿ ಬರುತ್ತವೊ! ಮಾನವ ವಿಧಿ ಎನ್ನಲೇ? ಸ್ವಯಂ ಅಪರಾಧ ಎಂದು ಹೇಳಲೇ?

ಇರಲಿ; ಈ ವಿಷಯ ಅತ್ತ ಆ ಮೇಲೆ ಯೋಚಿಸುವೆ. ಆ ನಾಲ್ಕನೆ ಜ್ವರಕ್ಕೆ ಬಿದ್ದ ಹಣ್ಣುಳುಗಳ ಸೌಂದರ್ಯವೇ ಬೇರೆ. ಆ ಹುಳುಗಳೆಲ್ಲ ಬೆದೆಗೆ ಬಂದ ಹುಡುಗಿಯರಾಗಿ ಬಿಡುತ್ತಿದ್ದವು. ಅಂತಹ ಚೆಂದದ ಹಣ್ಣುಳುಗಳು ಹಲಸಿನ ತೊಳೆಯಂತಾಗುತ್ತಿದ್ದವು. ಗೂಡು ಕಟ್ಟಲು ನೂಲು ಬಿಚ್ಚಿ ತಲೆ ಆಡಿಸುತ್ತಿದ್ದವು. ಅಯ್ಯೋ; ಅವನ್ನು ಮುಟ್ಟುವುದೇ ದೊಡ್ಡ ಸುಖ. ಹಣ್ಣುಳುಗಳ ಆಯ್ದು ಚಂದ್ರಿಕೆಗೆ ಕೂರಿಸಿ ಅಪ್ಪ ಅವುಗಳಿಂದ ಗೂಡು ಕಟ್ಟಿಸುತ್ತಿದ್ದ. ಅವೆಲ್ಲ ಕೆಲಸ ಶಿಸ್ತಾಗಿ ಸಕಾಲಕ್ಕೆ ಆಗಬೇಕು. ಇಲ್ಲವಾದರೆ ಎಲ್ಲ ನಷ್ಟ. ಇಡೀ ಹನ್ನೆರಡು ತಟ್ಟೆಯ ಹುಳುಗಳನ್ನು ತಿಪ್ಪೆಗೆ ಸುರಿಯಬೇಕಾಗುತ್ತಿತ್ತು. ಎಂತಹ ಸಾಮೂಹಿಕ ದುರಂತ! ಕಾರಣವೆ ತಿಳಿಯುತ್ತಿರಲಿಲ್ಲ. ಒಂದು ದಿನದ ಆರು ಹೊತ್ತಿನ ಸೊಪ್ಪು ತಿಂದು ಹಾಕಿದ ಇಕ್ಕೆಯ ಹಾಸಿಗೆಯ ಆಗಾಗ ಬದಲಿಸುತ್ತಲೆ ಇರಬೇಕಿತ್ತು. ಏನೂ ರೋಗ ಬರದಿರಲಿ ಎಂದು! ಅಷ್ಟೂ ಕಸವ ನಾನೂ ನನ್ನ ತಾಯಿಯೂ ತಿಪ್ಪೆಗೆ ಸುರಿಯುತ್ತಿದ್ದೆವು. ಆ ಕೆಲಸ ನನಗೇನೂ ಬೇಸರ ಎನಿಸುತ್ತಿರಲಿಲ್ಲ. ಮಾಡುತ್ತಿದ್ದೆ. ಹುಳುಗಳಿಗೆ ಏನೋ ರೋಗ ಬಡಿಯಿತು ಎಂದರೆ ಅವನಿಗೂ ಎಂತದೊ ಹತಾಶೆಯ ರೋಗ ಗಟಿಸುತ್ತಿತ್ತು. ಆ ನಿಟ್ಟಿನಲ್ಲಿ ನಮ್ಮಪ್ಪ ನಮಗೆ ಎಷ್ಟು ಬಡಿದಿದ್ದಾನೊ.. ಹೇಳಿ ಏನು ಲೋಕ ಕಲ್ಯಾಣ? ನಾನು ಒಂದು ಹುಳುವಾಗಿದ್ದೆ. ನನ್ನ ಬಗ್ಗೆ ಅಸಹ್ಯ ಸಿಟ್ಟು ಅವನಿಗೆ. ನನ್ನ ತಾಯಿ ಕಣ್ಣ ಭಾಷೆಯನ್ನು ನಾನು ಬಹಳ ಚೆನ್ನಾಗಿ ಆಕೆಯ ಎದೆ ಹಾಲ ಕುಡಿದಾಗಿಂದಲೂ ಕಲಿತಿದ್ದೇ. ಪರರಿಗೆ ಗೊತ್ತಾಗದ ಕರುಳ ಕಣ್ಣ ಭಾಷೆ, ಭಾವನೆಗಳ ದುಃಖ ತಪ್ತ ಭಾಷೆಯದು. ಹರುಷದ ಕಣ್ಣ ಕಂಬನಿಯ ಭಾಷೆಗೆ ಸಂತೋಷದ ಎಷ್ಟು ಮಾತ್ರದ ಮಾತುಗಳು ಗೊತ್ತು.. ಎಲ್ಲಾ ಸುಖಕ್ಕೂ ಒಂದೇ ಕಾರಣ, ವಿವರ ಕ್ಷಣಿಕ ಉತ್ತರ! ಆದರೆ ದುಃಖಕ್ಕೆ ಎಷ್ಟೊಂದು ಮೌನ.. ಎಷ್ಟು ಕಾಲದ ತಾಳಿಕೆ ನೋವಿಗಿರುವಷ್ಟು ಶಕ್ತಿ ಸುಖಕ್ಕೆ ಇಲ್ಲ!

ಅವಳ ಗರ್ಭ. ಆಕೆಯ ಬೇನೆ ಸಂಕಟ ಅಸುಖ… ಸದಾ ಹೆಪ್ಪುಗಟ್ಟಿರುತ್ತಿದ್ದ ಅವಳ ದುಃಖ. ನನ್ನ ತಾಯಿ ನನಗೆ ಹೊಕ್ಕಳು ಗುರುತು ಕೊಟ್ಟು ಹೋಗಿದ್ದಾಳೆ. ದಿನಕ್ಕೆ ಐದಾರು ಬಾರಿಯಾದರೂ ಅದನ್ನು ಮುಟ್ಟಿ ನೋಡಿಕೊಂಡು ಇದು ನನ್ನ ತಾಯಿ ನನ್ನ ಜೀವಿತಾವಧಿಯ ಕಾಲಕ್ಕೂ ಕೊರೆಸಿ ಹೋಗಿರುವ ಶಾಸನ ಎಂದು ಹೆಮ್ಮೆಪಡುವೆ;

ಅಪ್ಪ ಕ್ಷಣಿಕ ಸುಖದ ದಾರಿಗೆ ಜಾರಿದ್ದ. ಹಾಗೇ ಇತ್ತು ಅವನ ತಾತಂದಿರ ಕಾಲದಿಂದಲೂ ಮನೆತನ. ಹಾಗಾಗಿಯೇ ಅದೀಗ ಕರಗಿ ಸೊರಗಿ ಬಡವಾಗಿತ್ತು. ಇರಲಿ ಇರಲಿ. ಬಡತನವಿರಲಿಲ್ಲ. ಪ್ರೀತಿ ಕಾರುಣ್ಯದ ಭಯಂಕರ ಬರಗಾಲದಲ್ಲಿ ತಾಯಿಯ ಜೊತೆ ನಾನು ನರಳುತ್ತಿದ್ದೆ. ಯಾರಿಗೂ ನರಳಿಕೆಯ ಭಾಷೆಯೇ ಗೊತ್ತಿಲ್ಲಾ. ದೆವ್ವ ಮೆಟ್ಟಿಕೊಂಡಿತ್ತೆ ನಿನಗೆ ನಿದ್ದೆಯಲ್ಲಿ.. ಆ ಪರಿ ವಿಕಾರವಾಗಿ ಏನೇನೊ ಮಾತಾಡುತ್ತಿದ್ದೆಯಲ್ಲಾ.. ಯಾವ ದೆವ್ವ ಮಿಂಡನ ಜೊತೆ ಹರಟುತ್ತಿದ್ದೆ ಎಂದು ವಿನಾಕಾರಣ ಅಜ್ಜಿ ಬೆಳ ಬೆಳ್ಳಗ್ಗೆ ಜಗಳ ತೆಗೆಯುತ್ತಿದ್ದಳು. ತಾಯಿಗೆ ಏನು ತಪ್ಪು ಮಾಡಿದೆ ಎಂಬುದೆ ತಿಳಿಯುತ್ತಿರಲಿಲ್ಲ. ಅಮಾಯಕ ತಾಯಿ! ಅಜ್ಜಿ ಹಾಗೆಲ್ಲ ಕೆಟ್ಟದಾಗಿ ಬಯ್ಯುವಾಗ ಅವಳಿಗೆ ತಕ್ಕ ಉತ್ತರ ಕೊಡಬಾರದೇ ಎಂದು ಕೆನ್ನೆ ತುದಿ ಹಿಡಿದು ಕೇಳುತಿದ್ದೆ. ಸುಮ್ಮನೆ ಕಣ್ಣೀರು ಉದುರುತ್ತಿದ್ದವು. ಲೋಕಕ್ಕೆ ವಿದಾಯ ಹೇಳುವಂತೆ. ನನ್ನ ಕಣ್ಣಲ್ಲೂ ನೀರು ತುಂಬಿಕೊಳ್ಳುತ್ತಿದ್ದವು. ತನ್ನ ಸೆರಗಲ್ಲಿ ಒರೆಸಿ ಏನಾದರೊಂದು ನಗೆಯ ಸಂದರ್ಭವ ವಿವರಿಸುತ್ತಿದ್ದಳು. ಅಪ್ಪ ಕಾಲು ಜಾರಿ ಹೆಂಗಸರ ಚಟಕ್ಕೆ ಬಿದ್ದಾಗ ತಾಯಿ ವಿರೋಧಿಸಲು ಬಾಯಿ ಎಲ್ಲಿತ್ತು. ಮೌನ ಅವಳ ಬಾಯಾಗಿತ್ತು. ಯಾವತ್ತೂ ಬೀಗ ಜಡಿದಂತಿತ್ತು. ಆ ರೇಷಿಮೆಯ ಹುಳುಗಳ ಸಾಕಾಣಿಕೆಯಲ್ಲಿದ್ದ ರವಷ್ಟಾದರೂ ಸೆಳೆತ ತಾಯಿ ಮೇಲೆ ತಂದೆಗೆ ಇರಲಿಲ್ಲ. ಅಕಸ್ಮಾತ್ ಸಂಬಂಧಗಳಲ್ಲಿ ಮದುವೆ ಆಗಿ ಹೋಗಿತ್ತು. ಅಲ್ಲಿ ಆ ಊರಲ್ಲಿ ನನ್ನ ತಾಯಿ ತಂದೆಗೆ ಕಂಡಿದ್ದಳು. ಹಿತ್ತಿಲ ಹುಲ್ಲು ಮೆದೆಯ ಮರೆಯಲ್ಲಿ ಮಲಗಿಸಿಕೊಂಡಿದ್ದ. ತಾಯಿಗೂ ಆ ವಯಸ್ಸಿಗೆ ಅದೆಲ್ಲ ಗೊತ್ತಿರಲಿಲ್ಲಾ.. ತಾಯಿಯೇ ಒಂದು ರೇಷಿಮೆಯ ಹುಳುವಾಗಿದ್ದಳೇನೋ. ಗರ್ಭ ಕಟ್ಟಿತ್ತು. ಹಿಡಿದು ಮದುವೆ ಮಾಡಿದ್ದರು. ಒಂದೊಪ್ಪತ್ತಿಗೆ ಮಲಗಿ ಸುಖಿಸಲು ಸಾಕಾಗಿದ್ದಳೇನೋ ನನ್ನಪ್ಪನಿಗೆ ನನ್ನ ತಾಯಿ! ಜೀವದಂತೆ ಅಪ್ಪನಿಗೆ ಅಂಟಿಕೊಂಡಿದ್ದಳು ತಾಯಿ. ಅವಳು ಅನಕ್ಷರಸ್ಥೆ; ಆದರೆ ಆಕಾಶದ ನಕ್ಷತ್ರಗಳ  ಜೋಡಿಸಿ ಬಹುದೊಡ್ಡ ರಂಗೋಲಿಗಳ ಶ್ರದ್ಧೆಯಿಂದ ಬಿಡಿಸುತ್ತಿದ್ದಳು.

‘ಸೀರೆ ಸೆರಗ ಹಾಸ್ದಂಗೆ ಬಿಟ್ಟವಳೆ ರಂಗೋಲಿಯಾ?ʼ ಎಂದು ಹಂಗಿಸುತ್ತಿದ್ದಳು ಅಜ್ಜಿ. ಅವಳ ಯಾವ ಮಾತಿಗೂ ತಾಯಿ ಒಂದು ಮೂಕ ರೇಷಿಮೆ ಹುಳದಂತೆ ಸುಮ್ಮನಿದ್ದು ಬಿಡುತ್ತಿದ್ದಳು. ಆ ರೇಷಿಮೆಯ ಹುಳುಗಳ ಆರೈಕೆಯಲ್ಲಿ ಸದಾ ಮಗ್ನಳಾಗಿರುತ್ತಿದ್ದಳು. ಎಷ್ಟೋ ಬಾರಿ ಹಣ್ಣಾದ ರೇಷಿಮೆ ಹುಳದಂತೆಯೆ ನನ್ನ ತಾಯಿ ನನಗೆ ಕಾಣುತ್ತಿದ್ದಳು. ಅಪ್ಪಿಕೊಂಡು ಕಚ್ಚಿಬಿಡುತ್ತಿದ್ದೆ. ಸ್ಸೋಯ್ ಎಂದು ಉಸಿರೆಳೆದುಕೊಂಡು ಅತ್ತ ತಳ್ಳುತ್ತಿದ್ದಳು. ಮತ್ತೆ ಕರೆದು ಎಳೆದು ಆಲಂಗಿಸಿ ಅಪ್ಪಿಕೊಳ್ಳುತ್ತಿದ್ದಳು. ಆಹಾ! ದೇವರೇ, ಅರಿವಿಲ್ಲದ ಕಾಲದಲ್ಲಿ ತಾಯ ಪ್ರೀತಿಯ ಬೆಲೆಯೇ ಗೊತ್ತಿರುವುದಿಲ್ಲವಲ್ಲಾ.. ಎಂತಹ ಮೋಸ! ನಾವು ಮುದುಕರಾದಾಗ ತಾಯ ಆ ಕಾಲದ ತಾರುಣ್ಯವ ನೆನೆಯಬೇಕೇ?

ಇರಲಿ ಇರಲಿ, ಮತ್ತದೇ ಸಂಗತಿಗಳಿಗೆ ಮರುಳುವೆ. ಅಪ್ಪ ಭಾಗಶಃ ಜೀವನದಲ್ಲಿ ರೋಸಿ ಹೋದದ್ದು ರೇಷಿಮೆ ಸಾಗಾಣಿಕೆಯಿಂದಲೇ! ಆ ಕಾಲಕ್ಕೆ ಹೂಜಿ ನೊಣಗಳ ಕಾಟವಿತ್ತು. ಹೊಸಬಗೆಯ ಹೇಸಿಗೆ ನೊಣಗಳು. ಅವು ಹೇಗೆ ಬಂದವೋ ಗೊತ್ತಿರಲಿಲ್ಲ. ಅವು ಬಂದು ಒಂದು ರೇಷಿಮೆ ಹುಳ ಇನ್ನೇನು ಪ್ರಾಯಕ್ಕೆ ಬಂತು ಎಂದಾಗ ಬಂದು ಅವುಗಳ ಮೇಲೆ ಕೂತು ತನ್ನ ಮೊಟ್ಟೆಯ ಇಟ್ಟು ಹಾರಿ ಹೋಗುತ್ತಿದ್ದವು. ಇದು ಗೊತ್ತಾಗಿ ಅಪ್ಪ ಇಡೀ ದಡೇವಿಗೇ ಆ ಕಾಲಕ್ಕೆ ಸೊಳ್ಳೆ ಪರದೆ ಕಟ್ಟುತ್ತಿದ್ದ ನೊಣಗಳ ತಡೆಯಲು. ಇದ್ದಕ್ಕಿದ್ದಂತೆ ಇಡೀ ತಟ್ಟೆಗಳ ಹುಳುಗಳು ಯಾವ ಮಾಯದ ರೋಗದಿಂದಲೋ ಏನೋ ಸತ್ತು ಹೋಗುತ್ತಿದ್ದವು. ಅದಂತೂ ಹೇಯ ನರಮೇಧದ ರೀತಿಯಂತಿತ್ತು. ಎಲ್ಲವನ್ನೂ ತುಂಬಿ ತುಂಬಿ ತಿಪ್ಪೆಗೆ ಸುರಿಯುತ್ತಿದ್ದೆವು. ಪರಿಹಾರವೆ ಗೊತ್ತಾಗುತ್ತಿರಲಿಲ್ಲ. ಹೊಸ ತಳಿಯ ಹುಳುಗಳ ಮೊಟ್ಟೆ ಕೊಟ್ಟು ಕೆಡಿಸುತ್ತಿದ್ದರು. ಅಷ್ಟು ಲಾಭ, ಇಷ್ಟು ಲಾಭ ಎಂದು ಅವತ್ತೂ ಇತ್ತು ಮಾರು ಕಟ್ಟೆಯ ಮೋಸ. ಅಪ್ಪನಿಗೆ ಲಾಭದ ಆಸೆ ಇರಲಿಲ್ಲ. ಪೂರ್ವಿಕರ ಸ್ವತ್ತೇ ಬಹಳ ಇತ್ತು. ಅದನ್ನೆಲ್ಲ ತನ್ನ ಶೋಕಿಗಾಗಿ ಮಾರಿಕೊಳ್ಳುತ್ತಿದ್ದ. ಅದೋ ಮಾಯದಲ್ಲಿ ಆವಿಯಾಗುತ್ತಿತ್ತು. ಯಾರಿಗೂ ತಿಳಿಯುತ್ತಿರಲಿಲ್ಲ. ಅಪ್ಪ ಬಹಳ ಕಳೆದುಕೊಂಡಿದ್ದ. ಹೆಣ್ಣಿನ ಹುಚ್ಚಿಗೆ ಪರವಶನಾಗಿದ್ದ. ಒಂದು ದಿನ ಈ ಹೂಜಿ ನೊಣಗಳ ಕಾಟವೇ ಬೇಡ ಎಂದು ದಡೇವು ತಟ್ಟೆಗಳ ಕಿತ್ತು ಹಿತ್ತಿಲಿಗೆ ಬಿಸಾಡಿದ್ದ. ಒಂದು ದಿನ ಎಂಡದ ಅಮಲಿನಲ್ಲಿ ಅವನ್ನೆಲ್ಲ ಗುಡ್ಡೆಹಾಕಿ ಸುಟ್ಟಿದ್ದ.

ಅಲ್ಲಿಗೆ ಅಪ್ಪನ ರೇಷಿಮೆಯ ಕನಸು ಮುಗಿದಿತ್ತು. ಅವನ ಹಿಂಸೆಯ ರೂಪಗಳು ಬಲಿತ್ತಿದ್ದವು. ಮೋಜಿನಲ್ಲಿ ಮಾತ್ರ ಆತ ಸುಖವಾಗಿದ್ದ. ಸಂಸಾರ ಎಂದರೆ ವಾಕರಿಸುತ್ತಿದ್ದ. ತನಗೆ ತಾನೇ ಗೂಡು ಕಟ್ಟಿಕೊಂಡು ಚಿಟ್ಟೆಯಾಗುವುದನ್ನು ಕಾಯುತ್ತಿದ್ದೆ. ಅದಕೆಂದೇ ಕೆಲವು ಗೂಡುಗಳ ಬಚ್ಚಿಟ್ಟು ನೋಡುತ್ತಿದ್ದೆ. ಸಾಧಾರಣ ಚಿಟ್ಟೆಗಳು. ಕೂಡಿದ ನಂತರ ಮೊಟ್ಟೆ ಇಡುತ್ತಿದ್ದವು. ಮರು ರಾತ್ರಿಗೆ ನೋಡಿದರೆ ಅವು ಸತ್ತು ಹೋಗಿರುತ್ತಿದ್ದವು. ಆರಂಭದಿಂದ ಅವನ್ನು ನೋಡಿರುತ್ತಿದ್ದ ನನಗೆ ಸಂಕಟವಾಗುತ್ತಿತ್ತು. ಜೀವನವೂ ಒಂದು ರೇಷಿಮೆಯ ನೂಲೇ.. ಅಪ್ಪ ಕಟ್ಟುತ್ತಿದ್ದ ಜೇಡರ ಬಲೆಯೇ! ಯಾವುದು ಬದುಕು? ನನಗೇನು ಗೊತ್ತಿತ್ತು ಆಗ! ಸುಮ್ಮನೇ ತತ್ವಪದಕಾರರ ಹಾಡು ಕೇಳುತ್ತಿದ್ದೆ. ಅವರ ಹಿಂದೆಯೇ ಹೊರಟು ಹೋಗಬೇಕು ಎಂದು ಹಿಂಬಾಲಿಸುತ್ತಿದ್ದೆ. ತಾಯಿ ಬೆನ್ನ ಮೇಲೆ ಮೆಲ್ಲಗೆ ಹೊಡೆದು ಕೈ ಹಿಡಿದೆಳೆದು ತನ್ನ ಕರುಳ ಗಂಟಕ್ಕೆ ಕಟ್ಟಿಕೊಳ್ಳುತ್ತಿದ್ದಳು. ತಾಯ ಆದೇಶ ಮೀರುತ್ತಿರಲಿಲ್ಲಾ…

ತಿಪ್ಪೆಗೆ ರಾಶಿ ರಾಶಿ ರೇಷಿಮೆ ಹುಳುಗಳ ಸುರಿದು ಅಪ್ಪ ವ್ಯಗ್ರನಾಗಿರುತ್ತಿದ್ದ. ಪೇಂಟೆಯ ಹೆಂಗಸರ ಮಡಿಲಿಗೆ ಹಾರಿ ಹೋಗುತ್ತಿದ್ದ. ಅವನಿಗೆ ಭಾಷೆಯೇ ಗೊತ್ತಿರಲಿಲ್ಲ. ತಮಿಳು ಹೆಂಗಸರು ಅವನಿಗೆ ಮಿಡಿಯುತ್ತಿದ್ದರು. ಅವನ ಸ್ಥಾನ ಹಾಗಿತ್ತು. ರೇಷಿಮೆಯ ನಷ್ಟದ ಬಾಬತ್ತಿಗೆ ತಾನೇ ಬೆಂಕಿ ಇಕ್ಕಿದ್ದ. ರೇಷ್ಮೆ ಬೆಳೆಗಾರ ಎಂಬ ಅವತ್ತಿನ ಕೋಡನ್ನು ತಿಪ್ಪೆಗೆಸೆದಿದ್ದ. ‘ಯೀ ಹುಳುಗಳ ಗೂಡೆಲ್ಲ ಯಂಗೆ ರೇಷ್ಮೆ ಸೀರೆ ಆಯ್ತವೆ ಎಂದು ತಾತನ ಪದೇ ಪದೇ ಪೀಡಿಸಿ ಕೇಳಿದ್ದೆ. ಅವನಿಗೆ ಗೊತ್ತಿತ್ತು ಅದೆಲ್ಲಾ. ಇಷ್ಟವಿರಲಿಲ್ಲ ತೋರಲು. ನಾನು ಹಠ ಬಿಟ್ಟಿರಲಿಲ್ಲ. ಬಾ ಎಂದು ಕರೆದೊಯ್ದಿದ್ದ. ಗೂಡುಗಳ ಕುದಿಸುತಿದ್ದರು. ನೂಲಿನೆಳೆಯ ಹಿಡಿದು ಮೆಷಿನ್ಗೆ ತೊಡಿಸುತ್ತಿದ್ದರು. ಗೂಡು ಕಟ್ಟಿದ್ದ ಹುಳು ಹೊರ ಬರಬಾರದು ರೇಷಿಮೆಯ ಆ ಉದ್ಯಮದಲ್ಲಿ ನೂಲು ತುಂಡಾಗುತ್ತವೆ. ಸಕಾಲದಲ್ಲಿ ಗೂಡುಗಳ ಬೇಯಿಸಿ ನೂಲು ತೆಗಿಯಬೇಕಿತ್ತು. ಚಿಟ್ಟೆಯಾಗುವ ಮುನ್ನವೇ ಅವನ್ನು ಕೊಲ್ಲಬೇಕಿತ್ತು. ಹಾಗೇ ಆಗುತ್ತಿತ್ತು. ಹುಳು ಸಾಕಿ ಬೆಳೆಸಿದವರದೇ ಬೇರೆ ಲೋಕ! ಅವುಗಳ ರೇಷಿಮೆಯ ನೂಲು ಬಿಡಿಸಿ ರೇಷಿಮೆಯ ಸೀರೆ ಮಾಡುವವರದೇ ಇನ್ನೊಂದು ಲೋಕ. ಎಷ್ಟೋ ಸಲ ಚಂದದ ರೇಶಿಮೆಯ ಸೀರೆ ಧರಿಸಿ ವಯ್ಯಾರದಲ್ಲಿ ನಲಿವ ಮದುವೆ ಮನೆಯ ಹೆಂಗಸರು ನನಗೆ ರೇಷಿಮೆಯ ಹಣ್ಣುಳುಗಳಂತೆಯೆ ಕಂಡಿದ್ದಾರೆ! ಕೆಲವೊಮ್ಮೆ ಹೋಲಿಕೆಗಳು ಭಾವನಾತ್ಮಕ. ಸೌಂದರ್ಯದ ವಿಕಲ್ಪ ಅಲ್ಲ. ಎಷ್ಟು ಚಂದದ ರೇಷಿಮೆ ಸೀರೆಯೊ; ಅದಕ್ಕಿಂತಲೂ ಚೆಂದ ಚೆಲುವತಿಯರು ಸಾಧಾರಣ ಹತ್ತಿಯ ಸೀರೆಯನುಟ್ಟರೂ… ನನ್ನ ತಾಯಿ ಯಾವತ್ತೂ ಒಂದು ಚೆಂದದ ರೇಷಿಮೆ ಸೀರೆಯ ತೊಟ್ಟಿದ್ದನ್ನೆ ನಾನು ಕಂಡಿರಲಿಲ್ಲಾ… ಒಂದು ಕೆಟ್ಟ ದಿನ ನನ್ನ ತಾಯಿಯೂ ಆ ನಿರಪರಾಧಿ ರೇಷಿಮೆಯ ಹುಳದಂತೆಯೇ ಸತ್ತು ಹೋದಳು. ಯಾರಿಗೂ ದುಃಖವೇ ಆಗಿರಲಿಲ್ಲ! ಅದೆಲ್ಲವೂ ಒಂದು ಬೀಭತ್ಸ್ಯ ಕಾಲ. ಬಿಡಿಸಿ ಹೇಳಲು ಸಮಯ ಕೊಡಿ.

ಸಾಯುವ ಮುನ್ನ ಹೇಳಲೇ ಬೇಕಲ್ಲ ಕೆಲವೇ ಸಂಗತಿಗಳನ್ನಾದರೂ… ಹೇಳುವೆ… ಕೆಲವು ಮಾತುಗಳು ಗೊತ್ತಿಲ್ಲದೆ ಬಂದು ಬಿಡುತ್ತವಂತೇ! ಅದು ಬೇರೆ. ನನ್ನ ಜೀವಿತ ಬೇರೆ. ಕೆಟ್ಟು ಸತ್ತ ರೇಶಿಮೆಯ ಹುಳುಗಳ ತಿಪ್ಪೆಯ ಗುಂಡಿಯ ಕೆದಕಿ ಕೆರೆದು ಗಾಡಿಗೆ ಗೊಬ್ಬರವಾಗಿ ತುಂಬುವಾಗ ನಾನಲ್ಲೆ ನಿಂತಿರುತ್ತಿದ್ದೆ. ಅದೇ ತೋಟ ಗದ್ದೆ ಹೊಲಗಳಿಗೆ ಸುರಿಯುತ್ತಿದ್ದರು. ಆ ಹಸಿರು ಸಿರಿಯನೆಲ್ಲ. ನೋಡುವಾಗ ನನಗೆ ಅದೇನೊ ನೆನಪಾಗುತ್ತಿರಲಿಲ್ಲ. ಲೋಕವೇ ಹಾಗೆ. ಮರೆಸಿಯೇ ಮರುಕಳಿಸಿ ಬದುಕಬೇಕು. ಅಪ್ಪ ರೇಷಿಮೆಯ ಹುಳುಗಳ ತಿಪ್ಪೆಗೆ ಸುರಿ ಸುರಿದು ಸುಸ್ತಾಗಿದ್ದ. ಅದರಿಂದ ಸಲೀಸಾಗಿ ಬಿಡಿಸಿಕೊಂಡಿದ್ದ.

ಕೊರಗುವ ಜಾಯಮಾನವೇ ಅವನದಲ್ಲ. ಹುಳುವೊಂದು ರೇಷಿಮೆಯ ಸೀರೆಯಾಗಿ ಹೆಣ್ಣ ಸಿಂಗಾರ ಆಗುವ ಬಗೆಯೇ ಒಂದು ಮಾಯಾಲೋಕ. ಹೇಗೆ ವಿವರಿಸುವುದು? ವಿವರ ಕಾರಣಗಳು ಕಾಲಗರ್ಭದಲ್ಲಿ ಅರ್ಥಹೀನವಾಗುತ್ತವೆ. ಅವುಗಳ ಸಹವಾಸ ಇಲ್ಲ ನನಗೆ. ಸದ್ಯ ಈ ರೇಷಿಮೆಯ ಉರುಳು ತಪ್ಪಿತಲ್ಲಾ ಎಂದು ತಾಯಿ ನಿಟ್ಟುಸಿರು ಬಿಟ್ಟಂತೆಲ್ಲ ಅಪ್ಪನ ಅವತಾರಗಳು ಬೇರೆ ಆಗುತ್ತಿದ್ದವು.